Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಭದ್ರಾವತಿ: ಬಿಜೆಪಿಗೆ ಖಾತೆ ತೆರೆಯಲಾಗದ ವ್ಯಕ್ತಿ ಪ್ರತಿಷ್ಠೆಯ ಅಖಾಡದಲ್ಲಿ ಹೊಸ...

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಭದ್ರಾವತಿ: ಬಿಜೆಪಿಗೆ ಖಾತೆ ತೆರೆಯಲಾಗದ ವ್ಯಕ್ತಿ ಪ್ರತಿಷ್ಠೆಯ ಅಖಾಡದಲ್ಲಿ ಹೊಸ ಮುಖಗಳ ಹೋರಾಟ?

- Advertisement -
- Advertisement -

ಶಿವಮೊಗ್ಗ ನಗರದಿಂದ ಕೂಗಳತೆ ದೂರದಲ್ಲಿರುವ ಭದ್ರಾವತಿ ತಾಲೂಕು ಕರ್ನಾಟಕದ ನಟ್ಟನಡುವಿನ ಅರೆಮಲೆನಾಡು ಪ್ರದೇಶ. ಭಾರತದ ಖ್ಯಾತ ಕೈಗಾರಿಕಾ ಪ್ರದೇಶವಾಗಿದ್ದ ಭದ್ರಾವತಿಯ ಒಂದೊಂದೇ ಕಾರ್ಖಾನೆಗಳು ಇತ್ತೀಚಿನ ದಶಕದಲ್ಲಿ ಅವಸಾನವಗುತ್ತಿದ್ದು, ಈಗ ಆ ಪ್ರದೇಶ ಯುದ್ಧದ ನಂತರ ಭಗ್ನಗೊಂಡು ಹಾಳು ಸುರಿಯುತ್ತಿರುವ ಊರಿನಂತೆ ಭಾಸವಾಗುತ್ತದೆ. ಕಾರ್ಮಿಕ ಸಂಘಟನೆಗಳ ಪ್ರಭಾವದ, ಶ್ರಮಸಂಸ್ಕೃತಿಯ ಭದ್ರಾವತಿಯಲ್ಲಿ ಸಂಘಪರಿವಾರ ಅದೆಷ್ಟೇ ಹಿಂದುತ್ವದ ಹಿಡನ್ ಅಸ್ತ್ರಗಳನ್ನು ಪ್ರಯೋಗಿಸಿದರೂ ಕೇಸರಿ ಬಾವುಟ ಹಾರಿಸಲಾಗುತ್ತಿಲ್ಲ ಎನ್ನಲಾಗುತ್ತಿದೆ.

ಕೇವಲ ಇಪ್ಪತ್ತು ಕಿ.ಮೀ. ದೂರದಲ್ಲಿರುವ ಶಿವಮೊಗ್ಗದಲ್ಲಿ ಬಿಟ್ಟೂಬಿಡದೆ ಕೋಮು ಕೆಂಜ್ವಾಲೆ ಹೊತ್ತಿ ಉರಿಯುತ್ತಿದ್ದರೂ ಭದ್ರಾವತಿಗೆ ಅದರ ಕಾವು ಬಾಧಿಸದಂತೆ ಇಲ್ಲಿಯ ಪ್ರಜ್ಞಾವಂತ ಜನರು ಎಚ್ಚರ ವಹಿಸಿದ್ದಾರೆಂಬ ಮೆಚ್ಚುಗೆಯ ಮಾತು ಸಾಮಾಜಿಕ-ರಾಜಕೀಯ ವಲಯದಲ್ಲಿದೆ. ಅವಿಭಜಿತ ದಕ್ಷಿಣ ಕನ್ನಡದ ಬಳಿಕ ಸಂಘಪರಿವಾರದ ಪ್ರಬಲ ಶಕ್ತಿ ಕೇಂದ್ರವೆನಿಸಿರುವ ಶಿವಮೊಗ್ಗದ ಅಷ್ಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಕೇಸರಿ ಪತಾಕೆ ಮುಗಿಲೆತ್ತರಕ್ಕೆ ಹಾರುತ್ತಿದ್ದರೂ ಭದ್ರಾವತಿಯಲ್ಲಿ ಮಾತ್ರ ಒಂದು ಬಾರಿಯೂ ಕಮಲವನ್ನು ಅರಳಿಸಲಾಗಿಲ್ಲ!

ಇತಿಹಾಸ-ಸಮಾಜ

ಲಿಂಗಾಯತರು-ಒಕ್ಕಲಿಗರು ಹಾಗು ಮುಸ್ಲಿಮರು ಹೆಚ್ಚು ಕಡಿಮೆ ಸಮತೂಕದಲ್ಲಿರುವ ಭದ್ರಾವತಿ ಅಪ್ಪಟ ಮಲೆನಾಡಿನ ಸಂಸ್ಕೃತಿ-ಸಂಪ್ರದಾಯದ ತಾಲೂಕು. ಕೈಗಾರಿಕಾ ವಲಯವಾಗಿದ್ದರಿಂದ ತಮಿಳು ಮತ್ತು ತೆಲುಗು ಭಾಷಿಕ ಮಂದಿ ಗಣನೀಯವಾಗಿ ವಲಸೆ ಬಂದಿದ್ದು, ಅವರಿಗೆ ಅವರದೇ ರೀತಿ-ರಿವಾಜುಗಳಿವೆ; ಸೂಫಿ ಸಂಪ್ರದಾಯದ ಮುಸ್ಲಿಮರು ಮತ್ತು ಏಸುವನ್ನು ನಂಬುವ ಕ್ರಿಶ್ಚಿಯನ್ನರು ಹಿಂದು ಧರ್ಮದ ಮೇಲ್ವರ್ಗ-ಕೆಳವರ್ಗದ ಜತೆ ಸಾಮರಸ್ಯದಿಂದ ಬದುಕು ಸಾಗಿಸುತ್ತಿದ್ದಾರೆ. ಭದ್ರಾವತಿ ಪಟ್ಟಣದಲ್ಲಿ ಮಾರ್ವಾಡಿಗಳಿದ್ದಾರೆ. ನೆಲೆಯಿಲ್ಲದ ಕಾರ್ಮಿಕರ ಕೊಳಚೆ ಪ್ರದೇಶ ನಿರ್ಮಾಣವಾಗಿದೆ. ಕನ್ನಡ ಭದ್ರಾವತಿಯ ಪ್ರಮುಖ ಭಾಷೆಯಾದರೂ ಕೊಂಕಣಿ, ಉರ್ದು, ತೆಲುಗು, ತಮಿಳು ಮುಂತಾದ ಭಾಷೆಗಳು ಕೇಳಿಬರುತ್ತದೆ.

ಭದ್ರಾವತಿ ಹೆಸರು ವ್ಯುತ್ಪತ್ತಿಗೆ ಕಾರಣವೆನ್ನಲಾಗುವ ಹಲವು ಪ್ರತೀತಿ ಮತ್ತು ಭಾಷಾಶಾಸ್ತ್ರದ ತರ್ಕಗಳಿವೆ. ಭದ್ರಾವತಿ ಮೂಲಕ ಹಾದುಹೋಗುವ ಭದ್ರಾ ನದಿಯಿಂದ ಆ ಹೆಸರು ಬಂದಿದೆ ಎನ್ನುತ್ತದೆ ಒಂದು ವಾದ. ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಬಳಿಯ ಸಹ್ಯಾದ್ರಿ ಒಡಲಲ್ಲಿ ಹುಟ್ಟುವ ಭದ್ರಾ ನದಿ ಉತ್ತರಾಭಿಮುಖವಾಗಿ ಹರಿದು ಭದ್ರಾವತಿ ನಗರವನ್ನು ದಕ್ಷಿಣದಿಂದ ಪ್ರವೇಶಿಸುತ್ತದೆ. ಈ ನದಿ ತಿರುವು (ವೆಂಕಿ-ಸಂಸ್ಕೃತ) ಜಾಗದಲ್ಲಿರುವ ಊರಿಗೆ ’ವೆಂಕಿಪುರ’ವೆಂದು ಕರೆಯಲಾಯಿತಂತೆ. ಮತ್ತೊಂದು ಪ್ರತೀತಿಯಂತೆ ವಂಕಿ ಮಹರ್ಷಿ ಇಲ್ಲಿ ತಪಸ್ಸು ಮಾಡಿದ್ದರಿಂದ ’ವಂಕಿಪುರ’ ಎಂಬ ಹೆಸರು ಬಂತೆನ್ನಲಾಗುತ್ತಿದೆ.

14ನೆ ಶತಮಾನದಲ್ಲಿ ಎರೆಲಕ್ಕ ನಾಯಕ ದುಮ್ಮ ಮತ್ತು ಬಾಣೂರು ಎಂಬೆರಡು ನಗರಗಳನ್ನು ಆಳುತ್ತಿದ್ದನು. ಆತ ಕಾಡು ತೆರವುಗೊಳಿಸಿ ಲಕ್ಷ್ಮೀಪುರ ಮತ್ತು ನರಸಿಂಹಪುರ ಎಂಬ ಇನ್ನೆರಡು ನಗರಗಳನ್ನು ನಿರ್ಮಿಸಿದ್ದನಂತೆ. ಕಾಲಕ್ರಮೇಣ ಈ ಎರಡೂ ನಗರಗಳು ಸೇರಿ ’ವೆಂಕಿಪುರ’ ಎಂದಾಯಿತು; ಮುಂದೆ ಅಪಭ್ರಂಶವಾಗಿ ’ಬೆಂಕಿಪುರ’ ಆಯಿತು ಎಂದು ತರ್ಕಿಸಲಾಗುತ್ತದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ, ಅಂದು 20ನೇ ಶತಮಾನದ ಆದಿಯಲ್ಲಿ ದಿವಾನರಾಗಿದ್ದ ವಿಶ್ವೇಶ್ವರಯ್ಯ ಬೆಂಕಿಪುರದಲ್ಲಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸ್ಥಾಪಿಸಿದ ಬಳಿಕ ’ಭದ್ರಾವತಿ’ ಎಂದು ಮರುನಾಮಕರಣ ಮಾಡಲಾಯಿತು ಎಂಬ ಬಗ್ಗೆ ಪುರಾವೆಗಳಿವೆ ಎನ್ನಲಾಗುತ್ತಿದೆ.

ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆಯ ಗಡಿಯಲ್ಲಿರುವ ಭದ್ರಾವತಿಯ ಸುತ್ತಲಿನಲ್ಲಿ ಹಲವು ಪ್ರವಾಸಿ ಆಕರ್ಷಣೆಗಳಿವೆ. 13ನೆಯ ಶತಮಾನದ ಹೊಯ್ಸಳ ವಾಸ್ತುಶಿಲ್ಪದ ಲಕ್ಷ್ಮೀನರಸಿಂಹ ದೇವಾಲಯ ಹಳೆ ನಗರದ ನಡುವೆಯಿದೆ; ಭದ್ರಾವತಿ ನಗರದಿಂದ 20 ಕಿ.ಮೀ ದೂರದಲ್ಲಿ ಭದ್ರಾ ನದಿಗೆ ಅಡ್ಡಲಾಗಿ 147 ಕಿಮೀ ವ್ಯಾಪ್ತಿಯಲ್ಲಿ ಬೃಹತ್ ಆಣೆಕಟ್ಟು ಕಟ್ಟಲಾಗಿದೆ. ಹಲವು ಆಕರ್ಷಕ ನಡುಗಡ್ಡೆಗಳಿರುವ ಈ ಜಲಾಶಯದ ನೀರು ಕೃಷಿ, ವಿದ್ಯುತ್ ಉತ್ಪಾದನೆ ಮತ್ತು ಕುಡಿಯುವ ನೀರು ಯೋಜನೆಗೆ ಬಳಕೆಯಾಗುತ್ತಿದೆ. ಭದ್ರಾ ವನ್ಯಜೀವಿ ಅಭಯಾರಣ್ಯ ಹುಲಿ ಸಂರಕ್ಷಿತ (ಪ್ರಾಜೆಕ್ಟ್ ಟೈಗರ್) ಪ್ರದೇಶವಾಗಿದೆ. ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಗೊಂಡಿ ದೇವಸಾನ್ಥ, ಗುಹೆ ಹಾಗು ಚೆಕ್ ಡ್ಯಾಮ್‌ಗಳ ನಯನ ಮನೋಹರ ತಾಣ. ಸಹ್ಯಾದ್ರಿ ತಪ್ಪಲಲ್ಲಿರುವ ಕೆಮ್ಮಣ್ಣು ಗುಡ್ಡ ಮತ್ತು ಗಂಗೂರ್ ಗಿಧಾಮಗಳು ಮುಂಗಾರಿನಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. 25 ಸಾವಿರ ಪ್ರೇಕ್ಷಕರ ಆಸನ ಸಾಮರ್ಥ್ಯದ ಕ್ರೀಡಾಂಗಣವಿದೆ. ಭದ್ರಾವತಿಯ ಹಜರತ್ ಸಯ್ಯದ್ ಸಾದತ್ ದರ್ಗಾ ಜಿಲ್ಲೆಯ ಪ್ರಸಿದ್ಧ ದರ್ಗಾಗಳಲ್ಲಿ ಒಂದಾಗಿದೆ.

ಸ್ವಾತಂತ್ರ್ಯ ಹೋರಾಟಗಾರರು, ಕ್ರೀಡೆ, ಸಿನಿಮಾ, ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭಾನ್ವಿತರ ಜನ್ಮಭೂಮಿ ಭದ್ರಾವತಿ. ಪೌಲಿನ್ ಲೂಸಿ ಅರಾಕಲ್ ಭದ್ರಾವತಿಯ ಕೆಚ್ಚೆದೆಯ ಸ್ವಾತಂತ್ರ್ಯ ಚಳವಳಿಗಾರ್ತಿ. 1970ರ ದಶಕದ ಪ್ರಖ್ಯಾತ ಬ್ಯಾಟ್ಸ್‌ಮನ್ ಜಿ.ಆರ್.ವಿಶ್ವನಾಥ್, ಚಲನಚಿತ್ರರಂಗದ ಹೆಸರಾಂತ ನಟ-ನಟಿಯರಾದ ದೊಡ್ಡಣ್ಣ, ಭಾರತಿ ವಿಷ್ಣುವರ್ಧನ್, ಸಿನಿಮಾ ನಿರ್ದೇಶಕ ಎಸ್.ನಾರಾಯಣ್, ಸಿನಿಮಾ ಸಂಗೀತ ಸಂಯೋಜಕ-ಗಾಯಕ ಅಜನೀಶ್ ಲೋಕನಾಥ್ ಮತ್ತು ಗಾಯಕಿ ಅರ್ಪಿತಾ ವೇಣು ಭದ್ರಾವತಿ ಮೂಲದವರು.

ಕೃಷಿ-ಕೈಗಾರಿಕೆ-ಆರ್ಥಿಕತೆ

ಇಪ್ಪತ್ತನೆಯ ಶತಮಾನದ ಆದಿಯಿಂದಲೂ ಭದ್ರಾವತಿಯ ಜೀವ-ಜೀವಾಳ ಕೈಗಾರಿಕೆಗಳು; ಭದ್ರಾವತಿ ಪಟ್ಟಣದಲ್ಲಿ ವಿವಿಧ ಕಾರ್ಖಾನೆಗಳಿದ್ದರೆ, ಅವುಗಳಿಂದ ಸೃಷ್ಟಿಯಾಗಿದ್ದ ಆರ್ಥಿಕ ವಲಯದ ಪ್ರಭಾವದಲ್ಲಿ ಗ್ರಾಮೀಣ ಭಾಗಗಳು ಇದ್ದವು. ಕರ್ನಾಟಕದ ಕೈಗಾರಿಕಾ ಪಟ್ಟಣ, ಉಕ್ಕಿನ ನಗರ ಎಂದೆಲ್ಲ ಹೆಸರುವಾಸಿಯಾಗಿರುವ ಭದ್ರಾವತಿಯಲ್ಲಿ 1918ರಲ್ಲಿ ಸ್ಥಾಪಿತವಾಗಿದ್ದ ಮೈಸೂರು ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ಎಮ್‌ಎಸ್‌ಐಎಲ್) ಜಗತ್ಪ್ರಸಿದ್ಧವಾಗಿತ್ತು. ಜಾಗತಿಕ ಯುದ್ಧದ ಸಾಮಗ್ರಿಗಳ ತಯಾರಿಕೆಗೆ ಇಲ್ಲಿಯ ಉತ್ಕೃಷ್ಟ ದರ್ಜೆಯ ಕಬ್ಬಿಣ ಬಳಕೆಯಾಗುತ್ತಿತ್ತು! ಕೆಮ್ಮಣ್ಣು ಗುಡ್ಡದ ಕಬ್ಬಿಣದ ಅದಿರು ಮತ್ತು ಭದ್ರಾ ನದಿಯ ನೀರು ಬಳಸಿ ಕಾರ್ಖಾನೆ ನಡೆಸಲಾಗುತ್ತಿತ್ತು. ಹೀಗಾಗಿ ಭದ್ರಾ ಜಲಾಶಯವನ್ನೂ ಕಟ್ಟಲಾಯಿತು. ಇದರಿಂದ ವಿದ್ಯುತ್ ಉತ್ಪಾದನೆಯ ಜತೆಗೆ ಭದ್ರಾ ಅಚ್ಚುಕಟ್ಟು ಪ್ರದೇಶವು ರಚನೆಯಾಗಿ ಕೃಷಿ ಸಮೃದ್ಧಿಗೆ ಮೂಲವಾಯಿತು. ದುಡಿಯುವ ಕೈಗಳಿಗೆ ಕೃಷಿ ಹಾಗು ಉದ್ಯಮ ವಲಯದಲ್ಲಿ ಉದ್ಯೋಗ ದೊರಕಿತು.

1936ರಲ್ಲಿ ಮೈಸೂರು ಪೇಪರ್ ಮಿಲ್ (ಕಾಗದ ಕಾರ್ಖಾನೆ) ಸ್ಥಾಪಿಸಿದಾಗ ಭದ್ರಾವತಿಗೆ ’ರಾಜ್ಯದ ಕೈಗಾರಿಕಾ ನಗರ’ಎಂಬ ಖ್ಯಾತಿ ಬಂತು. ಇದಕ್ಕೆ ಹೊಂದಿಕೊಂಡಂತೆ ಸಕ್ಕರೆ ಕಾರ್ಖಾನೆಯನ್ನೂ ಶುರುಮಾಡಲಾಯಿತು. ಈ ಕಾಗದ ಮತ್ತು ಸಕ್ಕರೆ ಉತ್ಪಾದನಾ ಘಟಕ ಏಷ್ಯಾದ ಮೊಟ್ಟ ಮೊದಲ ಸರ್ಕಾರಿ ಸ್ವಾಮ್ಯದ ಕೈಗಾರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಹತ್ತಿರದ ಕಾರೆಹಳ್ಳಿಯಲ್ಲಿದ್ದ ಸಕ್ಕರೆ ಫ್ಯಾಕ್ಟರಿಯು 100 ಎಕರೆ ಜಮೀನಿನಲ್ಲಿ ರೈತರಿಂದ ಕಬ್ಬು ಬೆಳೆಸಿ ಖರೀದಿಸುತ್ತಿತ್ತು. ಆ ನಂತರ ಬೆಂಕಿ ಪೆಟ್ಟಿಗೆ ತಯಾರಿಕಾ ಕಾರ್ಖಾನೆ ಸೇರಿದಂತೆ ಮುಂತಾದ ಕೈಗಾರಿಕೆಗಳು ತಲೆಯೆತ್ತಿದವು. ನಗರದ ಬಹುತೇಕ ಭಾಗ ಕೈಗಾರಿಕೆಗಳಿಂದ ಆವೃತ್ತವಾಗಿತ್ತು. ದುರಂತವೆಂದರೆ, ಅಧಿಕಾರಸ್ಥರ ಹೊಣೆಗೇಡಿತನದಿಂದ ಈ ಕೈಗಾರಿಕೆಗಳು ಸಾಲುಸಾಲಾಗಿ ಮುಳುಗಿ ಈಗ ಭದ್ರಾವತಿ ’ಕಾರ್ಖಾನೆಗಳ ಅವಶೇಷಗಳ ನಗರ’ ಎಂಬಂತಾಗಿದೆ ಎಂದು ಕಾರ್ಮಿಕರು ನೋವಿನಿಂದ ಹೇಳುತ್ತಾರೆ.

ಕಾರ್ಖಾನೆಗಳಲ್ಲಿ ದುಡಿತ ನಂಬಿ ಬದುಕಿದ್ದ ಸಾಕಷ್ಟು ಕಾರ್ಮಿಕರು ಬೀದಿಪಾಲಾಗಿದ್ದಾರೆ; ಭದ್ರಾವತಿ ನಿರಾಶ್ರಿತ ಕಾರ್ಮಿಕರ ಶಿಬಿರದಂತಾಗಿದೆ; ಕೆಲಸ ನಷ್ಟವಾದ ಒಂದಿಷ್ಟ ಕಾರ್ಮಿಕ ಕುಟುಂಬಗಳು ಗುಳೆಹೋಗಿವೆ. ಇಡೀ ಭದ್ರಾವತಿಯ ಆರ್ಥಿಕತೆ ಕುಸಿದು ಕಳೆ ಕಳೆದುಕೊಂಡಿದೆ! ವಿಎಸ್‌ಐಎಲ್ ಪುನಶ್ಚೇತನಕ್ಕೆ ಕಾರ್ಮಿಕ ಸಂಘಟನೆಗಳು ಒತ್ತಾಯಿಸುತ್ತಿವೆಯಾದರೂ ಆಳುವವರ ಇಚ್ಛಾಶಕ್ತಿಯ ಕೊರತೆಯಿಂದ ಈ ಕೆಲಸ ಆಗುತ್ತಿಲ್ಲ ಎನ್ನಲಾಗಿದೆ; ವಿಶೇಷವಾಗಿ ಸಂಸದ ರಾಘವೇಂದ್ರ ಕೈಗಾರಿಕೆಗಳ ಪುನರಾರಂಭಕ್ಕೆ ದಿಲ್ಲಿ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿಲ್ಲ ಎಂಬ ಅಸಮಾಧಾನ ಭದ್ರಾವತಿಯಲ್ಲಿ ಮಡುಗಟ್ಟಿದೆ. ಈಗಿನ ಗೃಹ ಮಂತ್ರಿ ಅರಗ ಜ್ಞಾನೇಂದ್ರ 2009ರಲ್ಲಿ ಪೇಪರ್ ಮಿಲ್ ಅಧ್ಯಕ್ಷರಾಗಿದ್ದಾಗ ನಡೆದ ಅವ್ಯವಹಾರದಿಂದ ಆ ಉದ್ಯಮ ಹಾನಿಗೀಡಾಗಿ ಮುಚ್ಚಬೇಕಾಯಿತೆಂಬ ಸಿಟ್ಟು ಕಾರ್ಮಿಕರಲ್ಲಿದೆ. ನೆಲೆ ಕಳೆದುಕೊಂಡಿರುವ ಕಾರ್ಮಿಕರ ಆಕ್ರೋಶಕ್ಕೆ ತುತ್ತಾಗಿರುವ ಅರಗ ಜ್ಞಾನೇಂದ್ರ ಭದ್ರಾವತಿಯಲ್ಲಿ ಕಾರ್ಯಕ್ರಮ ಹಾಕಿಕೊಳ್ಳಲು ಅಂಜುತ್ತಾರೆಂಬ ಮಾತು ಜಿಲ್ಲೆಯಲ್ಲಿ ಕೇಳಿಬರುತ್ತದೆ.

ಕೈಗಾರಿಕೆಗಳ ಮೂಲಕ ಆಗುತ್ತಿದ್ದ ವ್ಯಾಪಾರ-ವಹಿವಾಟಿನ ಮೇಲೆ ಭದ್ರಾವತಿಯ ಆರ್ಥಿಕತೆ ಅವಲಂಬಿತವಾಗಿತ್ತು. ಕಾರ್ಖಾನೆಗಳು ಬಾಗಿಲು ಎಳೆದುಕೊಂಡಿರುವುದರಿಂದ ಪಟ್ಟಣದಲ್ಲಷ್ಟೆ ಅಲ್ಲ, ಹಳ್ಳಿಗಳಲ್ಲೂ ಆರ್ಥಿಕ ಚಟುವಟಿಕೆ ತೀರಾ ಕಡಿಮೆಯಾಗಿದೆಯೆಂದು ವ್ಯಾಪಾರಿಗಳು ಹೇಳುತ್ತಾರೆ. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗ-ಭದ್ರಾವತಿ ಮಹಾನಗರ ಪಾಲಿಕೆ ಮಾಡಿದ್ದರು. ಆದರೆ ಯಡಿಯೂರಪ್ಪರ ಕಾಲದಲ್ಲಿ ಕಾರ್ಪೊರೇಷನ್ ರದ್ದುಮಾಡಲಾಯಿತು. ಕಾರ್ಪೊರೇಷನ್ ಆಗಿದ್ದರೆ ಭದ್ರಾವತಿ ಭಾಗ ವಾಣಿಜ್ಯವಾಗಿ ಚೇತರಿಸಿಕೊಳ್ಳುತ್ತಿತ್ತೆಂದು ಉದ್ಯಮ ವಲಯದ ನಾಡಿಮಿಡಿತ ಬಲ್ಲವರು ಅಭಿಪ್ರಾಯಪಡುತ್ತಾರೆ.

ಯುವ ಸಮೂಹ ಉದ್ಯೋಗ ಅರಸುತ್ತ ಮಾಯಾನಗರಿ ಬೆಂಗಳೂರಿಗೆ ವಲಸೆ ಹೋಗುತ್ತಿದೆ. ಈಗ ಭದ್ರಾವತಿಯ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಕೃಷಿ-ಕೃಷಿ ಕೂಲಿಯನ್ನು ಅವಲಂಬಿಸಿದೆ. ಭತ್ತ, ಕಬ್ಬು ಮತ್ತು ಅಡಿಕೆ ಪ್ರಮುಖ ಬೆಳೆ. ಭದ್ರಾ ರೈತರ ಜೀವ ನದಿ. ಹೆಕ್ಟೇರ್‌ಗಟ್ಟಲೆ ತೋಟ-ಗದ್ದೆಗಳನ್ನು ಹೊಂದಿರುವ ಲಿಂಗಾಯತ ಮತ್ತು ಒಕ್ಕಲಿಗ ಭೂಮಾಲಿಕರಿರುವ ಭದ್ರಾವತಿಯಲ್ಲಿ ಅಂಗೈ ಅಗಲದ ಜಾಗವೂ ಇಲ್ಲದ ಕೂಲಿಗಳ ಕುಟುಂಬಗಳೂ ಇದೆ. ಭದ್ರಾವತಿ ಪೇಟೆಯಲ್ಲಿ ಮುಸ್ಲಿಮ್ ಮತ್ತು ಮಾರ್ವಾಡಿಗಳು ವ್ಯಾಪಾರ-ವಹಿವಾಟಿನ ಮೇಲೆ ಏಕಸ್ವಾಮ್ಯ ಸಾಧಿಸಿದ್ದಾರೆ; ವ್ಯಾಪಾರಿ ಲಿಂಗಾಯತ ಕುಟುಂಬಗಳು ಹಾಗು ಪ್ರಬಲ ಒಕ್ಕಲಿಗರು ಲಾಗಾಯ್ತಿನಿಂದ ವಾಣಿಜ್ಯ ವಲಯದ ಆಯಕಟ್ಟಿನ ಜಾಗದಲ್ಲಿದ್ದಾರೆ ಎನ್ನಲಾಗುತ್ತಿದೆ.

ಕ್ಷೇತ್ರ ಸೂತ್ರ

ಸ್ವಾತಂತ್ರ್ಯಾನಂತರದ ಪ್ರಥಮ ಅಸೆಂಬ್ಲಿ ಚುನಾವಣೆಗೂ ಮೊದಲೇ ಭದ್ರಾವತಿ ಕಾರ್ಮಿಕ ಬಾಹುಳ್ಯದ ತಾಲೂಕು; ಸಹಜವಾಗಿ ಬೆವರಿನ ಸಮೂಹದ ನಡುವೆ ಮಾರ್ಕ್ಸ್ ಸಿದ್ಧಾಂತದ ಪ್ರಜ್ಞೆ ಮೂಡಿತ್ತು. ವಿಧಾನಸಭಾ ಕ್ಷೇತ್ರ ರಚನೆಯ ನಂತರದ ಒಕ್ಕಲಿಗ-ಲಿಂಗಾಯತರ ಪರಂಪರಾಗತ ಮೇಲಾಟದಲ್ಲಿ ಪ್ರಥಮ ಬಹುಸಂಖ್ಯಾತರಾದ ಮುಸ್ಲಿಮರು ನಿರ್ಣಾಯಕರಾಗಿದ್ದರು. ಈ ಮಾರ್ಕ್ಸ್ ಸಿದ್ಧಾಂತದ ಬದ್ಧತೆ ಹಾಗು ಜಾತಿ ರಾಜಕಾಣದ ರಾಸಾಯನಿಕ ಶಾಸ್ತ್ರ ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಸಂಘಕಾರಣಕ್ಕೆ ಆಸ್ಪದ ಕೊಡಲಿಲ್ಲ; ಹೀಗಾಗಿ 1957ರಿಂದ 2018ರ ತನಕ ನಡೆದಿರುವ 14 ಅಸೆಂಬ್ಲಿ ಇಲೆಕ್ಷನ್‌ನಲ್ಲಿ ಒಂದೇ ಒಂದು ಬಾರಿ ಸಂಘ ಪರಿವಾರಕ್ಕೆ ಗೆಲುವು ಕಾಣಲು ಆಗಲಿಲ್ಲವೆಂಬ ತರ್ಕ ರಾಜಕೀಯ ಪಡಸಾಲೆಯಲ್ಲಿದೆ.

ಕಾಂಗ್ರೆಸ್-ಸಮಾಜವಾದಿ ಪಾರ್ಟಿ ಮತ್ತು ಜನತಾ ಪರಿವಾರ ಪೈಪೋಟಿ ನೆಡೆಸುತ್ತ-ಗೆಲ್ಲುತ್ತ-ಸೋಲುತ್ತ ಬಂದಿದ್ದ ಭದ್ರಾವತಿ 1994ರ ಅಸೆಂಬ್ಲಿ ಚುನಾವಣೆ ಸಂದರ್ಭದಿಂದ ವ್ಯಕ್ತಿ ಮತ್ತು ಜಾತಿ ಪ್ರತಿಷ್ಠೆಯ ಅಖಾಡವಾಗಿ ಮಾರ್‍ಪಟ್ಟಿದೆ; ಕಳೆದ ಎರಡೂವರೆ ದಶಕದಿಂದ ಲಿಂಗಾಯತ ಸಮುದಾಯದ ಶಾಸಕ ಬಿ.ಕೆ.ಸಂಗಮೇಶ್ ಮತ್ತು ಒಕ್ಕಲಿಗ ವರ್ಗದ ಮಾಜಿ ಶಾಸಕ-ದಿವಂಗತ ಎಂ.ಜೆ.ಅಪ್ಪಾಜಿ ಪರಿವಾರದ ಜಿದ್ದಾಜಿದ್ದಿನ ಆಡೊಂಬೊಲವಾಗಿದೆ ಎಂಬುದು ಕ್ಷೇತ್ರದಲ್ಲಿ ಓಡಾಡಿದರೆ ಸ್ಪಷ್ಟವಾಗುತ್ತದೆ. ಒಟ್ಟ್ಟು 2,07,749 ಮತದಾರರಿರುವ ಭದ್ರಾವತಿ ಕ್ಷೇತ್ರದಲ್ಲಿ ಮುಸ್ಲಿಮರು 45-50 ಸಾವಿರ, ಲಿಂಗಾಯತರು 40-45 ಸಾವಿರ, ಒಕ್ಕಲಿಗರು 35-40 ಸಾವಿರ, ಕುರುಬರು 15-20 ಸಾವಿರ, ಕ್ರಿಶ್ಚಿಯನ್ನರು 10-12 ಸಾವಿರ ಮತ್ತು ಎಸ್‌ಸಿ-ಎಸ್‌ಟಿ 15-20 ಸಾವಿರ ಇದ್ದಾರೆಂದು ಅಂದಾಜಿಸಲಾಗಿದೆ.

1957ರಲ್ಲಿ ಜರುಗಿದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಡಿ.ಬಿ.ಸೀತಾರಾಮ್ ರಾವ್ ಮತ್ತು ಪ್ರಜಾ ಸೋಷಲಿಸ್ಟ್ ಪಾರ್ಟಿಯ ಎಂ.ಪಿ.ಈಶ್ವರಪ್ಪ ನಡುವೆ ಹೋರಾಟವಾಗಿತ್ತು. ಈ ಸಂದರ್ಭದಲ್ಲಿ 5,946 ಮತದಂತರದಿಂದ ಕಾಂಗ್ರೆಸ್ ಹುರಿಯಾಳು ಜಯಗಳಿಸಿದರು. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಬಲವಾಗಿದ್ದ ಸಮಾಜವಾದಿ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ಬ್ರಾಹ್ಮಣ ಸಮುದಾಯದ ಬಿ.ಕೃಷ್ಣ ಭಟ್ 1962ರಲ್ಲಿ ಪ್ರಜಾ ಸೋಷಲಿಸ್ಟ್ ಪಕ್ಷದಿಂದ ಕಣಕ್ಕಿಳಿದರು. ಅವರ ಎದುರು ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದ ಟಿ.ಡಿ.ದೇವೇಂದ್ರಪ್ಪ 4,348 ಮತಗಳ ಅಂತರದಿಂದ ಗೆದ್ದು ಶಾಸಕರಾದರು. ಮೊದಲೆರಡು ಚುನಾವಣೆಯಲ್ಲಿ ಪ್ರಬಲ ಹೋರಾಟ ಕೊಟ್ಟರೂ ಗೆಲ್ಲಲಾಗದ ಸೋಷಲಿಸ್ಟ ಪಾರ್ಟಿ 1967ರಲ್ಲಿ ಜಯ ಕಂಡಿತು. ಪಿಎಸ್‌ಪಿಯ ಎ.ಕೆ.ಅನ್ವರ್ ಸಣ್ಣ ಅಂತರದಿಂದ (482) ಕಾಂಗ್ರೆಸ್‌ನ ಗುರುಶಾಂತಪ್ಪರನ್ನು ಪರಾಭವಗೊಳಿಸಿ ಶಾಸಕರಾದರು.

ಶಾಸಕ ಅಬ್ದುಲ್ ಅನ್ವರ್ 1972ರ ಚುನಾವಣೆ ಎದುರಾದಾಗ ಹಲವು ಸೋಷಲಿಸ್ಟರೊಂದಿಗೆ ಇಂದಿರಾ ಕಾಂಗ್ರೆಸ್ ಸೇರಿದರು. ದೇವರಾಜ ಅರಸು ಅನ್ವರ್‌ಗೆ ಕಾಂಗ್ರೆಸ್ ಟಿಕೆಟ್ ಕೊಟ್ಟರು. ಸಂಸ್ಥಾ ಕಾಂಗ್ರೆಸ್‌ನಿಂದ ಒಕ್ಕಲಿಗ ವರ್ಗದ ಕೆ.ಎಂ.ಜವರಯ್ಯ ಹುರಿಯಾಳಾಗಿದ್ದರು. 23,527 ಓಟು ಪಡೆದಿದ್ದ ಅನ್ವರ್, ಜವರಯ್ಯರನ್ನು (21,987) ಸೋಲಿಸಿ ಎರಡನೇ ಬಾರಿಗೆ ಶಾಸನಸಭೆ ಸದಸ್ಯರಾದರು. 1978ರ ಚುನಾವಣೆ ಹೊತ್ತಲ್ಲಿ ಸಂಸ್ಥಾ ಕಾಂಗ್ರೆಸ್ ಇಂದಿರಾ ಗಾಂಧಿಯ ಸರ್ವಾಧಿಕಾರದ ವಿರುದ್ಧ ಜನ್ಮ ತಳೆದಿದ್ದ ಜನತಾ ಪರಿವಾರದಲ್ಲಿ ವಿಲೀನವಾಗಿದ್ದರಿಂದ ಜವರಯ್ಯ ಆ ಪಕ್ಷದ ಹುರಿಯಾಳಾದರು. ಕಾಂಗ್ರೆಸ್ ಕುರುಬ ಜನಾಂಗದ ಹೊಸ ಮುಖ ಪರಿಚಯಿಸಿತ್ತು. 32,573 ಮತ ಪಡೆದ ಕಾಂಗೈನ ಜಿ.ರಾಜಶೇಖರ್ 3,474 ಮತಗಳ ಅಂತರದಿಂದ ಗೆದ್ದು ಆಯ್ಕೆಯಾದರು.

1983ರ ಅಸೆಂಬ್ಲಿ ಇಲೆಕ್ಷನ್ ಮೊದಲು ಭದ್ರಾವತಿಯಲ್ಲಿ ಕೋಮು ಗಲಭೆಯಾಗಿತ್ತು; ಆಗ ಗುಂಡೂರಾವ್ ಸರಕಾರದಲ್ಲಿ ಭದ್ರಾವತಿಯ ಸಿ.ಎಂ.ಇಬ್ರಾಹಿಂ (ಈಗಿನ ಜೆಡಿಎಸ್ ರಾಜ್ಯಾಧ್ಯಕ್ಷ) ವಿವಾದಾತ್ಮಕ ಪ್ರಭಾವಿ ಮಂತ್ರಿಯಾಗಿದ್ದರು; ಅವರ ತಮ್ಮಂದಿರ ಮೇಲೆ ಅತ್ಯಾಚಾರ ಆರೋಪ ಬಂದು ದೊಡ್ಡ ಕೋಲಾಹಲವೇ ಆಯಿತು. ಮುಸ್ಲಿಮರಾದಿಯಾಗಿ ವಿವಿಧ ವರ್ಗದ ಜನರು ಕಾಂಗ್ರೆಸ್ ಮೇಲೆ ಸಿಟ್ಟಾಗಿದ್ದರು. ಜಿಲ್ಲೆಯಲ್ಲಿ ಪ್ರಭಾವಿ ಮುಖಂಡರಾಗಿದ್ದ ಬಂಗಾರಪ್ಪ ಜನತಾರಂಗದ ನಾಯಕಾಗ್ರೇಸರಾಗಿದ್ದರು. ಇದೆಲ್ಲ ಇಲೆಕ್ಷನ್ ರಣಾಂಗಣದಲ್ಲಿ ವರ್ಕ್‌ಔಟ್ ಆಯಿತು. ಜನತಾರಂಗದ (ಜನತಾಪಕ್ಷ+ಕ್ರಾಂತಿರಂಗ) ಅಭ್ಯರ್ಥಿಯಾಗಿದ್ದ ಕ್ಷೇತ್ರದ ದ್ವಿತೀಯ ಬಹುಸಂಖ್ಯಾತ ಲಿಂಗಾಯತ ಕೋಮಿನ ಸಾಲೇರ್ ಸಿದ್ಧಪ್ಪ (34,576) ಕಾಂಗ್ರೆಸ್‌ನ ಮಂಜಪ್ಪರನ್ನು (26,343) ಸುಲಭವಾಗಿ ಮಣಿಸಿದರು.

1985ರ ನಡುಗಾಲ ಚುನಾವಣೆಯಲ್ಲಿ ಸಾಲೇರ್ ಸಿದ್ಧಪ್ಪರಿಗೆ ಜನತಾ ಪಕ್ಷದ ಟಿಕೆಟ್ ಸಿಗಲಿಲ್ಲ. ಪಕ್ಷೇತರರಾಗಿ ಸಾಲೇರ್ ಸಿದ್ಧಪ್ಪ ಸೆಡ್ಡುಹೊಡೆದರು. ಕಾಂಗ್ರೆಸ್ ಕ್ಷೇತ್ರದ ಪ್ರಥಮ ಬಹುಸಂಖ್ಯಾತ ಮುಸ್ಲಿಮ್ ಸಮುದಾಯದ ಎಸ್.ಇಸಾಮಿಯಾರನ್ನು ಆಖಾಡಕ್ಕಿಳಿಸಿತು. ಸಾಲೇರ್ ಸಿದ್ಧಪ್ಪ (31,540) ಮತ್ತು ಇಸಾಮಿಯಾ (29,450) ಮಧ್ಯೆ ಕತ್ತುಕತ್ತಿನ ಸ್ಪರ್ಧೆ ನಡೆಯಿತು. 2,090 ಮತಗಳ ಅಂತರದಿಂದ ಗೆದ್ದು ಸಾಲೇರ್ ಸಿದ್ಧಪ್ಪ ಮತ್ತೆ ಶಾಸಕನಾದರು. 1989ರ ಭದ್ರಾವತಿ ಆಖಾಡದಲ್ಲಿ ಕದನ ಕುತೂಹಲ ಏರ್‍ಪಟ್ಟಿತ್ತು. ಹಿಂದಿನ ಬಾರಿ ಸಣ್ಣ ಅಂತರದಲ್ಲಿ ಪರಾಭವಗೊಂಡಿದ್ದ ಮುಸ್ಲಿಮ್ ಸಮುದಾಯದ ಇಸಾಮಿಯಾರನ್ನು ಕಾಂಗ್ರಸ್ ಕ್ಯಾಂಡಿಡೇಟ್ ಮಾಡಿತ್ತು.

ಭದ್ರಾವತಿ ಕಬ್ಬಿಣ-ಉಕ್ಕು ಕಾರ್ಖಾನೆ (ವಿಎಸ್‌ಐಎಲ್) ನಾಲ್ಕನೆ ದರ್ಜೆ ನೌಕರ-ಕಾರ್ಮಿಕರ ಪವರ್‌ಫುಲ್ ಮುಂದಾಳು ಎಂ.ಜೆ.ಅಪ್ಪಾಜಿ ಗೌಡ, ದೇವೇಗೌಡರ ಜನತಾ ಪಕ್ಷದ (ಜೆಪಿ) ಉಮೇದುದಾರನಾಗಿದ್ದರು. ಅಂದಿನ ಲಿಂಗಾಯತರ ಬಲಾಢ್ಯ ನಾಯಕ-ಕೆಪಿಸಿಸಿ ಅಧ್ಯಕ್ಷ ವೀರೇಂದ್ರ ಪಾಟೀಲ್ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರು. ಇದು ಭದ್ರಾವತಿಯ ಲಿಂಗಾಯತ ಸಮುದಾಯದ ಮೇಲೆ ಪ್ರಭಾವ ಬೀರಿತ್ತು. ಮುಸ್ಲಿಮ್+ಲಿಂಗಾಯತ ’ಡೆಡ್ಲಿ ಕಾಂಬಿನೇಷನ್’ ಮುಂದೆ ಕ್ಷೇತ್ರದ ಮೂರನೇ ಬಹುಸಂಖ್ಯಾತ ಒಕ್ಕಲಿಗರ ಅಪ್ಪಾಜಿ ತೀರಾ ದುರ್ಬಲ ಎನಿಸಿದ್ದರೆಂದು ಅಂದಿನ ಜಿದ್ದಾಜಿದ್ದಿ ಕಂಡವರು ಹೇಳುತ್ತಾರೆ. ಕಾಂಗ್ರೆಸ್‌ನ ಇಸಾಮಿಯಾ (36,487) ಭರ್ಜರಿ ಅಂತರದ (10,668) ಗೆಲುವು ಪಡೆದರು.

ಅಪ್ಪಾಜಿ ಆಟ!

ಮಂಡ್ಯದ ನಾಗಮಂಗಲ ತಾಲೂಕಿನ ಮುತ್ತಿಗೆರೆ ಗ್ರಾಮದ ಒಕ್ಕಲಿಗರ ಹುಡುಗ ಎಂ.ಜೆ.ಅಪ್ಪಾಜಿ 1971ರಲ್ಲಿ ಪಿಯುಸಿ ಮುಗಿಸಿಕೊಂಡು ಭದ್ರಾವತಿಯ ವಿಎಸ್‌ಐಎಲ್ ಕಾರ್ಖಾನೆಗೆ ಎಟಿಎಸ್ ತರಬೇತಿಗೆ ಸೇರಿಕೊಂಡಿದ್ದರು. ಹೊಟ್ಟೆಪಾಡಿಗೆ ಭದ್ರಾವತಿಗೆ ವಲಸೆ ಬಂದಿದ್ದ ಅಪ್ಪಾಜಿಗೆ ಅಲ್ಲಿದ್ದ ತಂದೆಯ ತಂಗಿಯ ಮಗಳು-ಶ್ರೀಮಂತ ಜಮೀನ್ದಾರಿ ಒಕ್ಕಲಿಗ ಮನೆತನದ ಸೊಸೆ (ಅಪ್ಪಾಜಿ ಹೆಂಡತಿ ಅಕ್ಕ) ಸಾಕುತ್ತಾರೆ. 1974ರಲ್ಲಿ ಫ್ಯಾಕ್ಟರಿಯಲ್ಲಿ ’ಡಿ’ ದರ್ಜೆ ನೌಕರಿ ಸಿಗುತ್ತದೆ. ಕಾರ್ಮಿಕ ಸಂಘಟನೆಗಳ ಹಲವು ಚುನಾವಣೆಯಲ್ಲಿ ಗೆದ್ದು ನಾಯಕನಾಗುವ ಅಪ್ಪಾಜಿ 1989ರಲ್ಲಿ ಭದ್ರಾವತಿಯ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಳ್ಳುತ್ತಾರೆ. ಎಮ್ಮೆಲ್ಲೆಯಾಗುವ ಮೊದಲ ಪ್ರಯತ್ನದಲ್ಲಿ ವಿಫಲರಾದ ಅಪ್ಪಾಜಿ ಕಾರ್ಮಿಕರ ಪ್ರಭಾವದ ಭದ್ರಾವತಿಯಲ್ಲಿ ಜನತಾದಳ ಅಥವಾ ಬಿಜೆಪಿಯಿಂದ ಸ್ಪರ್ಧೆಗಿಳಿದರೆ ಗೆಲ್ಲುವುದು ಕಷ್ಟವೆಂದು ಲೆಕ್ಕಾಚಾರಹಾಕಿ 1994ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗುತ್ತಾರೆ. ಈ ತಂತ್ರಗಾರಿಕೆಯಲ್ಲಿ ಯಶಸ್ವಿಯಾದ ಅಪ್ಪಾಜಿ (41,660) ಸಮೀಪದ ಪ್ರತಿಸ್ಪರ್ಧಿ ಜನತಾದಳದ ಶಿವಕುಮಾರ್‌ರನ್ನು (20,412) ಪರಾಭವಗೊಳಿಸಿ ವಿಧಾನಸಭೆಗೆ ಪ್ರವೇಶ ಪಡೆದರು.

ಎಂ.ಜೆ.ಅಪ್ಪಾಜಿ

ದೇವೇಗೌಡರ ಸರಕಾರ 1994ರಲ್ಲಿ ಅಸ್ತಿತ್ವಕ್ಕೆ ಬಂದಿದ್ದರಿಂದ ಸಹಜವಾಗಿಯೇ ಶಾಸಕ ಅಪ್ಪಾಜಿ ಒಡನಾಟ ಆಡಳಿತ ಪಕ್ಷದಲ್ಲಿತ್ತು. ಆದರೆ, 1999ರ ಚುನಾವಣೆಯ ಹೊತ್ತಿಗೆ ಹೆಗಡೆ-ದೇವೇಗೌಡರ ಕಚ್ಚಾಟದಿಂದ ದುರ್ಬಲವಾಗಿದ್ದ ಜೆಡಿಎಸ್ ಪಾರ್ಟಿಯ ಹುರಿಯಾಳಾಗುವ ದುಸ್ಸಾಹಸವನ್ನು ಅವರು ಮಾಡಲಿಲ್ಲ ಎಂಬ ಮಾತು ಕೇಳಿಬರುತ್ತದೆ. 1999ರ ಚುನಾವಣೆಯಲ್ಲಿ ಮತ್ತೆ ಪಕ್ಷೇತರ ಅಭ್ಯರ್ಥಿಯಾದ ಅಪ್ಪಾಜಿಗೆ ಆ ಬಾರಿ ಹಿಂದಿನಷ್ಟು ಸುಭಲವಾಗಿ ಗೆಲ್ಲಲಾಗಲಿಲ್ಲ. ಪ್ರಬಲ ವ್ಯಾಪಾರಿ ಲಿಂಗಾಯತ ವರ್ಗದ ಬಿ.ಕೆ.ಸಂಗಮೇಶ್ವರ್‌ರನ್ನು ಕಾಂಗ್ರೆಸ್ ಆಖಾಡಕ್ಕೆ ಇಳಿಸಿತ್ತು. ಅಪ್ಪಾಜಿ(43,923) ಮತ್ತು ಸಂಗಮೇಶ್ವರ್ (36,537) ನಡುವೆ ರಣರೋಚಕ ಕದನ ನಡೆಯಿತು. ಅಪ್ಪಾಜಿ 7,386 ಮತಗಳ ಅಂತರದಿಂದ ಗೆದ್ದು ಎರಡನೆ ಸಲ ಶಾಸಕರಾದರು.

2004ರಲ್ಲಿ ಸಂಗಮೇಶ್ವರ್ ಕಾಂಗ್ರೆಸ್‌ಗಿಂತ ಪಕ್ಷೇತರನಾಗಿ ಸ್ಪರ್ಧಿಸಿದರೆ ಗೆಲುವು ಸುಲಭವೆಂದು ಎಣಿಕೆ ಹಾಕಿದರು. ಅಪ್ಪಾಜಿ ಗೌಡರೂ ಸ್ವತಂತ್ರವಾಗಿಯೇ ಆಖಾಡಕ್ಕೆ ಧುಮುಕಿದರು. ಮುಸ್ಲಿಮ್ ಸಮುದಾಯದ ಓಟು ಹೆಚ್ಚು ಗಿಟ್ಟಿಸಿದ ಸಂಗಮೇಶ್ವರ್ (52,572) ಅಪ್ಪಾಜಿಯವರನ್ನು (35,141), 17,431 ಮತಗಳ ದೊಡ್ಡ ಅಂತರದಿಂದ ಮಣಿಸಿ ಮೊದಲ ಬಾರಿಗೆ ಎಮ್ಮೆಲ್ಲೆಯಾದರು. ಪಕ್ಷೇತರರಾಗಿ ವೈಯಕ್ತಿಕ ತಾಕತ್ತಿನಿಂದ ಜಿದ್ದಾಜಿದ್ದಿ ಹೋರಾಟ ನಡೆಸುತ್ತಿದ್ದ ಸಂಗಮೇಶ್ವರ್ ಮತ್ತು ಅಪ್ಪಾಜಿ 2008ರಲ್ಲಿ ಪಕ್ಷಗಳ ಚಿಹ್ನೆಯಡಿ ಕಾಳಗಕ್ಕಿಳಿದರು. ಕಾಂಗ್ರೆಸ್‌ನ ಸಂಗಮೇಶ್ವರ್ 53,257 ಮತ ಪಡೆದರೆ ಜೆಡಿಎಸ್‌ನ ಅಪ್ಪಾಜಿಗೆ 52,770 ಓಟು ಸೆಳೆಯಲಷ್ಟೆ ಸಾಧ್ಯವಾಯಿತು. ಅಧಿಕಾರಕ್ಕಾಗಿ ಕಾಂಗ್ರೆಸ್ಸಿಗೊಂದು ಪ್ರದಕ್ಷಿಣೆ ಹಾಕಿಬಂದ ಸಂಘಪರಿವಾರಿ ಎನ್ನಲಾದ ಆಯನೂರು ಮಂಜುನಾಥ್ ಲಿಂಗಾಯತ ಸಮುದಾಯದ 13,374 ಮತ ಪಡೆದಿದ್ದರಿಂದ ಸಂಗಮೇಶ್ವರ್‌ಗೆ ಹಾನಿಯಾಗಿ ತೀರಾ ಸಣ್ಣ ಅಂತರದಲ್ಲಿ ಬಚಾವಾದರೆಂದು ವಿಶ್ಲೇಷಣೆ ಭದ್ರಾವತಿಯ ರಾಜಕೀಯಾಸಕ್ತರ ಮಧ್ಯೆ ಇದೆ.

ಇಬ್ರಾಹಿಮ್‌ರ ನಂಬದ ಭದ್ರಾವತಿ!

ಶಾಸಕ ಸಂಗಮೇಶ್ವರ್ 2013ರಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟಾಗಿ ಗೆಲ್ಲುವ ಸಕಲ ಸಾಧ್ಯತೆ ಇತ್ತೆನ್ನಲಾಗುತ್ತಿದೆ. ಆದರೆ ತವರು ಕ್ಷೇತ್ರದ ಟಿಕೆಟ್ ಹಠ ಹಿಡಿದು ಸಿ.ಎಂ.ಇಬ್ರಾಹಿಮ್ ಕಾಂಗ್ರೆಸ್ ಅಭ್ಯರ್ಥಿಯಾದರು. ಕೆರಳಿದ ಸಂಗಮೇಶ್ವರ್ ಪಕ್ಷೇತರನಾಗಿ ಸ್ಪರ್ಧೆಗಿಳಿದರು. ಮುಸ್ಲಿಮರ ಮತ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಅಪ್ಪಾಜಿ ಗೌಡರಲ್ಲಿ ಹಂಚಿಹೋಯಿತು. ಸ್ವಸಮುದಾಯದ ಮುಸ್ಲಿಮರ ವಿಶ್ವಾಸವನ್ನೇ ಗಳಿಸಲಾಗದ ಇಬ್ರಾಹಿಂ ಮತ್ತವರ ಸೋದರರ ಬಗ್ಗೆ 1980ರ ದಶಕಾರಂಭದಲ್ಲಿ ಭದ್ರಾವತಿಯಲ್ಲಿ ಮೂಡಿದ್ದ ಅಸಮಾಧಾನ-ಆಕ್ರೋಶ 2013ರ ಇಲೆಕ್ಷನ್‌ನಲ್ಲಿ ಪ್ರತಿಫಲಿಸಿತ್ತು ಎಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ.

ಸಿ.ಎಂ.ಇಬ್ರಾಹಿಂ

ಜೆಡಿಎಸ್‌ನ ಅಪ್ಪಾಜಿ (78,370) ಮತ್ತು ಪಕ್ಷೇತರ ಸಂಗಮೇಶ್ವರ್(34,271) ಸಂಘರ್ಷದಲ್ಲಿ ಕಾಂಗ್ರೆಸ್‌ನ ಇಬ್ರಾಹಿಂ ಠೇವಣಿಯನ್ನೂ ಉಳಿಸಿಕೊಳ್ಳಲಾಗಲಿಲ್ಲ. ಅಪ್ಪಾಜಿ ಗೌಡ 44,099 ಮತಗಳಿಂದ ಜಯಭೇರಿ ಬಾರಿಸಿದರು! 2018ರ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್‌ನಲ್ಲಿದ್ದ ಸಂಗಮೇಶ್ವರ್ ತಮ್ಮ ಸಾಂಪ್ರದಾಯಿಕ ಎದುರಾಳಿ ಜೆಡಿಎಸ್‌ನ ಅಪ್ಪಾಜಿ ಗೌಡರಿಗೆ ಮುಖಾಮುಖಿಯಾದರು. ಮುಸ್ಲಿಮರ ಮತ ಬಾಚಿದ ಸಂಗಮೇಶ್ವರ್ 11,567 ಮತದಿಂದ ಅಪ್ಪಾಜಿ ಗೌಡರನ್ನು (64,155) ಸೋಲಿಸಿ ಮೂರನೆ ಸಲ ಶಾಸಕನಾದರು. 8,974 ಮತಕ್ಕೆ ಸೀಮಿತವಾದ ಬಿಜೆಪಿ ಠೇವಣಿಯನ್ನೂ ಕಳೆದುಕೊಂಡಿತು.

ಕ್ಷೇತ್ರದ ಸ್ಥಿತಿ-ಗತಿ

ಭದ್ರಾವತಿ ತಾಲೂಕಿನಲ್ಲಿ ಒಂದು ಸುತ್ತುಹೊಡೆದರೆ ಅಲ್ಲಲ್ಲಿ ಮಾಮೂಲಿ ಬಜೆಟ್ ಕಾಮಗಾರಿ ಆಗಿರುವುದು ಕಾಣಿಸುತ್ತದೆಯೇ ಹೊರತು ಸ್ಥಳೀಯವಾಗಿ ಬದುಕುಕಟ್ಟಿಕೊಳ್ಳುವಂತೆ ಜನರಿಗೆ ಅನುಕೂಲ ಮಾಡಿಕೊಡುವ ದೂರದರ್ಶಿತ್ವದ ಒಂದೇಒಂದು ಯೋಜನೆ ಬಂದಿರುವುದು ಕಣ್ಣಿಗೆ ಬೀಳದು. ಜನರಿಗೆ ಅನ್ನ ಕೊಡುತ್ತಿದ್ದ ಕೈಗಾರಿಕೆಗಳು ಸಾಲಾಗಿ ಪತನವಾಗುತ್ತಿದ್ದರೂ ಶಾಸಕ ಸಂಗಮೇಶ್ವರ್ ಅಥವಾ ಸಂಸದ ರಾಘವೇಂದ್ರರಿಗೆ ಅದನ್ನು ತಡೆಯುವ ರಾಜಕೀಯ ಇಚ್ಛಶಕ್ತಿ ಇಲ್ಲದಾಯಿತೆಂದು ಕ್ಷೇತ್ರದ ಮಂದಿ ಹತಾಶರಾಗಿ ಹೇಳುತ್ತಾರೆ. ಒಂದು ದಶಕದ ಹಿಂದಿನವರೆಗೂ ಹೊರಗಿನವರು ವಲಸೆಬಂದು ಹೊಟ್ಟೆ ತುಂಬಿಕೊಳ್ಳಲು ಅನುಕೂಲ ಕಲ್ಪಿಸುವ ಅಕ್ಷಯ ಪಾತ್ರೆಯಂತಿದ್ದ ಭದ್ರಾವತಿಯ ಮಂದಿಯೇ ಇವತ್ತು ಹಸಿವಿನಿಂದ ಪಾರಾಗಲು ಗುಳೆ ಹೋಗುತ್ತಿದ್ದಾರೆ. ಇಡೀ ಭದ್ರಾವತಿಯನ್ನು ಸಂಕಷ್ಟಕ್ಕೀಡು ಮಾಡಿರುವ ಈ ಸಮಸ್ಯೆಯನ್ನು ಇಂದಿನ-ಹಿಂದಿನ ಶಾಸಕರು, ಸಂಸದರಾಗಲೀ ಮತ್ತು ಜಿಲ್ಲೆಯ ಅತಿ ದೊಡ್ಡ ರಾಜಕಾರಣಿ ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದಾಗಲೂ ಗಂಭೀರವಾಗಿ ಪೆರಿಗಣಿಸಲಿಲ್ಲ ಎಂಬ ಕೊರಗು ಕ್ಷೇತ್ರದಲ್ಲಿದೆ.

ಭದ್ರಾವತಿ ತಾಲೂಕಲ್ಲಿ ಕುಡಿಯುವ ನೀರು, ರಸ್ತೆ, ಆರೋಗ್ಯ ಕೇಂದ್ರದಂಥ ಮೂಲ ಸೌಕರ್ಯಗಳಿಲ್ಲದ ಹಳ್ಳಿಗಳೂ ಇವೆ! ಶಾಸಕ ಸಂಗಮೇಶ್ವರ್ ಕಳಪೆ ಕಂಟ್ರಾಕ್ಟರ್‍ಸ್ ಬಳಗ ಬೆಳೆಸಿಕೊಂಡಿದ್ದಾರೆ; ಅವರ ಸಹೋದರ-ಕೌನ್ಸಿಲರ್ ಮೋಹನ್ ಮತ್ತು ಮಗ ಗಣೇಶ್ ಭದ್ರಾವತಿಯ ದೈನಂದಿನ ಆಡಳಿತದ ಕೇಂದ್ರವಾಗಿದ್ದಾರೆಂಬ ಆರೋಪ ಸಾಮಾನ್ಯವಾಗಿದೆ. ಎರಡೂವರೆ ದಶಕದಿಂದ ಸರತಿಯಲ್ಲಿ ಶಾಸಕರಾದ ಅಪ್ಪಾಜಿ ಗೌಡ ಮತ್ತು ಸಂಗಮೇಶ್ವರ್ ಕ್ಷೇತ್ರದ ಒಟ್ಟಾರೆ ಅಭಿವೃದ್ಧಿಯ ನೀಲಿನಕ್ಷೆ ಸಿದ್ದಪಡಿಸಿಕೊಂಡು ಮತ್ತೆಮತ್ತೆ ಗೆಲ್ಲಿಸಿದ ಕ್ಷೇತ್ರವಾಸಿಗಳ ಋಣ ತೀರಿಸುವ ಕರ್ತವ್ಯ ನಿಭಾಯಿಸಲಿಲ್ಲ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.

ಬಗರ್ ಹುಕುಮ್ ರೈತರಿಗೆ ಹಕ್ಕು ಪತ್ರ ವಿತರಣೆ, ಸರಕಾರಿ ಜಾಗದಲ್ಲಿ ಸೂರು ಕಟ್ಟಿ ಕೊಂಡವರಿಗೆ 94ಸಿ ಕಾಯ್ದೆಯಂತೆ ಪಟ್ಟಾ ಹಂಚಿಕೆಯಂಥ ಜರೂರ್ ಕೇಸ್‌ಗಳು ನಿಧಾನಗೊಂಡಿದೆ. ಮುಚ್ಚಿರುವ ಕೈಗಾರಿಕೆಗಳು ಪುನರಾರಂಭಗೊಂಡರೆ ಮಾತ್ರ ಕಳೆ ಕಳೆದುಕೊಂಡಿರುವ ಭದ್ರಾವತಿಗೆ ಚೈತನ್ಯ ಬರಲು ಸಾಧ್ಯ ಎಂಬ ಮಾತು ತಾಲೂಕಿನಾದ್ಯಂತ ಮಾರ್ದನಿಸುತ್ತಿದೆ.

ಬದಲಾಗಲಿದೆ ಅಖಾಡ!

ಭದ್ರಾವತಿ ವಿಧಾನಸಭಾ ಚುನಾವಣಾ ರಣರಂಗದ ಸಿದ್ಧ ಸೂತ್ರ-ಸಮೀಕರಣ 2023ರ ಕಾಳಗದಲ್ಲಿ ಬದಲಾಗಬಹುದಾ? ಇಂಥ ಚರ್ಚೆಗಳೀಗ ಕ್ಷೇತ್ರದಾದ್ಯಂತ ಶುರುವಾಗಿದೆ. 1989ರಿಂದ 2018ರ ತನಕದ ಏಳು ಇಲೆಕ್ಷನ್‌ಗಳಲ್ಲಿ ಸ್ಪರ್ಧಿಸಿ ಮೂರು ಸಲ ಶಾಸಕನಾಗಿದ್ದ ಎಂ.ಜೆ.ಅಪ್ಪಾಜಿ ಗೌಡ 2020ರ ಸೆಪ್ಟೆಂಬರ್‌ನಲ್ಲಿ ಕೋವಿಡ್‌ನಿಂದ ನಿಧನರಾಗಿರುವುದರಿಂದ ಅಖಾಡದ ಚಿತ್ರಣವೆ ಬದಲಾಗಿದೆ ಎನ್ನಲಾಗುತ್ತಿದೆ. ಅಪ್ಪಾಜಿ ಗೌಡರ ಗರಡಿಯಲ್ಲಿ ಪಳಗಿರುವ ಅವರ ಮಡದಿ ಶಾರದಾ ಚುನಾವಣಾ ಹಣಾಹಣಿಗೆ ರಂಗತಾಲೀಮು ಆರಂಭಿಸಿದ್ದಾರೆ. ಅಪ್ಪಾಜಿ ಗೌಡರ ಪ್ರಥಮ ತಿಥಿಗೆ ಬಂದಿದ್ದ ಕುಮಾರಸ್ವಾಮಿ 2023ರ ಚುನಾವಣೆಗೆ ಶಾರದಾ ಗೌಡ ಜೆಡಿಎಸ್ ಹುರಿಯಾಳೆಂದು ಘೋಷಿಸಿ ಹೋಗಿದ್ದಾರೆ. ಜನತಾ ಜಲಧಾರೆ ಹೆಸರಲ್ಲಿ ಭದ್ರಾವತಿಯಲ್ಲಿ ಶೋ ನಡೆಸಿರುವ ಅಪ್ಪಾಜಿ ಅಭಿಮಾನಿ ಬಳಗ ಇಲೆಕ್ಷನ್ ತಂತ್ರಗಾರಿಕೆ ಮಾಡತೊಡಗಿದೆ.

ಶಾರದ

ಭದ್ರಾವತಿಯಲ್ಲಿ ಎಂದೂ ಗೆಲ್ಲದ ಬಿಜೆಪಿ-ಸಂಘಿ ಸಂಘಟನೆಯ ಸೂತ್ರಧಾರರು ಶಾರದಾ ಗೌಡರನ್ನು ಬಿಜೆಪಿಗೆ ಸೆಳೆದು ಅಭ್ಯರ್ಥಿ ಮಾಡುವ ರಹಸ್ಯ ಕಾರ್ಯಾಚರಣೆಗೆ ಇಳಿದಿದ್ದಾರೆ ಎಂಬ ಮಾತು ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಆದರೆ ಮುಸ್ಲಿಮರ ಮತವಿಲ್ಲದೆ ಭದ್ರಾವತಿಯಲ್ಲಿ ಗೆಲ್ಲುವುದು ಸಾಧ್ಯವಿಲ್ಲವಾದ್ದರಿಂದ ಶಾರದಾ ಗೌಡ ಹಾಗು ಕೌನ್ಸಿಲರ್ ಆಗಿರುವ ಅಪ್ಪಾಜಿ ಮಗ ಬಿಜೆಪಿ ಆಫರ್ ಒಪ್ಪಿಕೊಳ್ಳುತ್ತಿಲ್ಲವಾದರೂ ಬಿಜೆಪಿ ಮುಖಂಡರು ಮಾತ್ರ ಮರಳಿಮರಳಿ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಪತಿಯ ಸಾವಿನ ಸಿಂಪಥಿಯ ಅನುಕೂಲ ಶಾರದಾ ಗೌಡರಿಗೆ ಇರುವುದರಿಂದ ಬಿಜೆಪಿಗೆ ಲಾಭವಾಗುತ್ತದೆ ಎಂಬ ಎಣಿಕೆ ಸಂಘಿಗಳದು ಎನ್ನಲಾಗುತ್ತಿದೆ.

ಸಂಘಪರಿವಾರ ಮಾಜಿ ಎಮ್ಮೆಲ್ಲೆ ಅಪ್ಪಾಜಿ ಗೌಡ ಹಾಗು ಹಾಲಿ ಶಾಸಕ ಸಂಗಮೇಶ್ವರ್ ಸಂಘರ್ಷ ಬಳಸಿಕೊಂಡು ಕೇತ್ರದಲ್ಲಿ ಕೇಸರಿ ಪತಾಕೆ ಹಾರಿಸಲು ಹವಣಿಸುತ್ತಲೇ ಇದೆ; ಈ ಹಿನ್ನಲೆಯಲ್ಲೇ ಶಾಸಕ ಸಂಗಮೇಶ್ವರ್, ಮಗ ಗಣೇಶ ಮತ್ತು ತಮ್ಮ ಮೋಹನ್ ಮೇಲೆ ದಲಿತ ದೌರ್ಜನ್ಯ ಕೇಸು ಬಿದ್ದಿತ್ತು ಎಂದು ರಾಜಕೀಯ ಆಸಕ್ತರು ವ್ಯಾಖ್ಯಾನಿಸುತ್ತಾರೆ. ತನ್ನ ಹಾಗು ತನ್ನ ಕುಟುಂಬದ ಮೇಲೆ ಅಟ್ರಾಸಿಟಿ ಕೇಸು ದಾಖಲಾಗಲು ಸಂಸದ ರಾಘವೇಂದ್ರ ಮತ್ತು ಅಂದಿನ ಸಿಎಂ ಯಡಿಯೂರಪ್ಪನವರ ಚಿತಾವಣೆಯೇ ಕಾರಣವೆಂದು ಸಂಗಮೇಶ್ವರ್ ಸದನದಲ್ಲಿ ಅಂಗಿ ಕಳಚಿ ಪ್ರತಿಭಟನೆ ಮಾಡಿದ್ದು ದೊಡ್ಡ ಸುದ್ದಿಯೂ ಆಗಿತ್ತು.

ಮುಸ್ಲಿಮರು ಹೆಚ್ಚಾಗಿರುವ ಭದ್ರಾವತಿಯನ್ನು ಕಬ್ಜಾ ಮಾಡಿಕೊಳ್ಳಲು ಸಂಘ ಪರಿವಾರ ಅದೆಷ್ಟೇ ಪ್ರಯತ್ನಿಸಿದರೂ ಸಾಧ್ಯವಗುತ್ತಿಲ್ಲ; ಮುಂದಿನ ಚನಾವಣೆಯಲ್ಲೂ ಬಿಜೆಪಿಯ ಆಸೆ ಈಡೇರುವ ಲಕ್ಷಣಗಳಿಲ್ಲ ಎಂದು ರಾಜಕೀಯ ವಿಶ್ಲೇಷಕರೊಬ್ಬರು ’ನ್ಯಾಯ ಪಥ’ಕ್ಕೆ ವಿವರಿಸಿದರು. ಸಾದರ ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಬಿಜೆಪಿ 10-12 ಸಾವಿರ ಓಟು ಪಡೆಯುತ್ತ ಬಂದಿದೆ.

ಈ ಬಾರಿ ಯಡಿಯೂರಪ್ಪ ನಾಯಕತ್ವ ಬಿಜೆಪಿಗೆ ಇಲ್ಲದಿರುವುದರಿಂದ ಆ ಮತಗಳು ದಕ್ಕುವುದೂ ಅನುಮಾನ; ಶಾರದಾ ಗೌಡರನ್ನು ಜೆಡಿಎಸ್‌ನಿಂದ ತರಲಾಗದಿದ್ದರೆ ತಮಿಳು ಲಿಂಗಾಯತರು ಎನ್ನಲಾಗುತ್ತಿರುವ ಗೌಂಡರ್ ಸಮುದಾಯದ ವಲಸಿಗನೊಬ್ಬನಿಗೆ ಚುನಾವಣೆಗೆ ನಿಲ್ಲಿಸುವ ಯೋಚನೆಯಲ್ಲಿ ಬಿಜೆಪಿ ಭೂಪರಿದ್ದಾರೆ ಎಂಬ ಸುದ್ದಿಗಳು ಹಾರಾಡುತ್ತಿದೆ.

ಈ ಬಾರಿ ಭದ್ರಾವತಿಯ ಲಿಂಗಾಯತರ ಮತ ಬ್ಯಾಂಕ್ ಇಡಿಯಾಗಿ ಕಾಂಗ್ರೆಸ್ ಪಾಲಾಗುವ ಸಂಭವ ಜಾಸ್ತಿ ಎನ್ನಲಾಗುತ್ತಿದೆ. ಇದಕ್ಕೆರಡು ಕಾರಣಗಳು ರಾಜಕೀಯ ವಲಯದಲ್ಲಿ ಚಾಲ್ತಿಯಲ್ಲಿವೆ. ಒಂದು, ಸ್ಥಳೀಯ ಲಿಂಗಾಯತರಲ್ಲಿ ಪ್ರಭಾವಿಯಾಗಿರುವ ಶಾಸಕ ಸಂಗಮೇಶ್ವರ್ ಅಥವಾ ಅವರ ಕುಟುಂಬದವರು ಕಾಂಗ್ರೆಸ್ ಕ್ಯಾಂಡಿಡೇಟ್ ಆಗುತ್ತಾರೆ. ಎರಡು, ಸಿದ್ದರಾಮಯ್ಯ ತಮ್ಮ ಪರವಾಗಿದ್ದಾರೆಂಬ ಸಂದೇಶ ರಾಜ್ಯದ ಲಿಂಗಾಯತರಿಗೆ ರವಾನೆ ಆಗುತ್ತಿರುವುದು. ಜನಬಳಕೆಯ ಮಾಜಿ ಶಾಸಕ ಅಪ್ಪಾಜಿ ಗೌಡರ ಸಾವಿನ ನಂತರ ಹಾಲಿ ಎಮ್ಮೆಲ್ಲೆ ಸಂಗಮೇಶ್ವರ್ ಕೈ ಮೇಲಾಗಿದೆ ಎನ್ನಲಾಗುತ್ತಿತ್ತು. ಆದರೆ ಈಗ ಶಾಸಕ ಸಂಗಮೇಶ್ವರ್ ಆರೋಗ್ಯ ಹದಗೆಟ್ಟಿರುವುದರಿಂದ ಅವರು ಚುನಾವಣೆಗೆ ಇಳಿಯಲಾಗುತ್ತಿಲ್ಲ; ಸಂಗಮೇಶ್ವರ್ ಸೋದರ ಕೌನ್ಸಿಲರ್ ಮೋಹನ್ ಅಥವಾ ಮಗ ಗಣೇಶ್ ಕಾಂಗ್ರೆಸ್ ಅಭ್ಯರ್ಥಿ ಆಗಬಹುದೆಂಬ ಲೆಕ್ಕಾಚಾರದ ಮಾತುಗಳು ಕ್ಷೇತ್ರದಲ್ಲಿದೆ.

ಸಂಗಮೇಶ್ವರ್ ಇಲ್ಲವೆ ಅವರ ಕುಟುಂಬದವರು ಕಾಂಗ್ರೆಸ್ ಕ್ಯಾಂಡಿಡೇಟಾದರೆ ಚುನಾವಣೆಯಲ್ಲಿ ಆಗಬಹುದಾದ ಪರಿಣಾಮಗಳ ಕುರಿತು ಕುತೂಹಲಕರ ಚರ್ಚೆ ಭದ್ರಾವತಿಯಲ್ಲಿ ಆಗುತ್ತಿದೆ. ಸಂಗಮೇಶ್ವರ್ ನಿಂತರೆ ಗೆಲುವು ಗ್ಯಾರಂಟಿ; ಪ್ರತಿ ಇಲೆಕ್ಷನ್‌ನಲ್ಲಿ ಅಣ್ಣನ ಗೆಲುವಿನ ತಂತ್ರಗಾರನಾದ ಸಂಗಮೇಶ್ವರ್ ತಮ್ಮ ಮೋಹನ್ ಅಭ್ಯರ್ಥಿಯಾದರೆ ಕತ್ತುಕತ್ತಿನ ಕದನ ಏರ್‍ಪಡಲಿದೆ; ಮಗ ಗಣೇಶ್ ಸ್ಪರ್ಧಿಸಿದರೆ ಎದುರಾಳಿಗೆ ಅನುಕೂಲ ಎನ್ನಲಾಗುತ್ತಿದೆ. ಸಂಗಮೇಶ್ವರ್ ಅಖಾಡಕ್ಕೆ ಇಳಿಯಲಾಗದಿದ್ದರೆ ಕುಟುಂಬದಲ್ಲಿ ವೈಮನಸ್ಸು ಮೂಡಲಿದ್ದು, ಅದರ ಲಾಭ ಅನುಕಂಪದ ಅಲೆಯಲ್ಲಿರುವ ಜೆಡಿಎಸ್‌ನ ಶಾರದಾ ಗೌಡರಿಗೆ ಆಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಯಾರು ಏನೆ ಗಣಿತದ ಲೆಕ್ಕಾಚಾರ ಹಾಕಿದರೂ ಕ್ಷೇತ್ರದ ಮುಸ್ಲಿಮರ ಮತಗಳು ನಿರ್ಣಾಯಕ; ಭದ್ರಾವತಿಯ ಮುಸ್ಲಿಮರಿಗೆ ತಮ್ಮೂರಿನ ಕುಲಬಾಂಧವ ಸಿ.ಎಂ.ಇಬ್ರಾಹಿಮ್‌ಗಿಂತ ಮಾಜಿ ಸಿಎಂ ಸಿದ್ದರಾಮಯ್ಯರತ್ತಲೆ ಒಲವು ಹೆಚ್ಚು. ಹೀಗಾಗಿ ಕಾಂಗ್ರೆಸ್‌ಗೆ ಗೆಲ್ಲುವ ಚಾನ್ಸ್ ಇದೆಯೆನ್ನುತ್ತದೆ ಮತ್ತೊಂದು ತರ್ಕ.

ಕಾರ್ಮಿಕರ ಕ್ಷೇತ್ರವಾಗಿದ್ದ ಭದ್ರಾವತಿಯಲ್ಲೀಗ ಕಾರ್ಮಿಕರಿಲ್ಲ; ಕಾರ್ಮಿಕ ಯೂನಿಯನ್ ಲೀಡರ್ ಆಗಿ ನಂತರ ಕ್ಷೇತ್ರದ ಲೀಡರ್ (ಶಾಸಕ) ಆಗಿದ್ದ ಅಪ್ಪಾಜಿ ಗೌಡರೂ ಇಲ್ಲ. ಹೀಗಾಗಿ 2023ರ ಭದ್ರಾವತಿ ಅಖಾಡದಲ್ಲಿ ಸಾಂಪ್ರದಾಯಿಕ ಸಂಘರ್ಷದ ಬದಲು ವಿಭಿನ್ನ ವರಸೆಗಳ ಪ್ರಯೋಗ ಆಗಲಿದೆ; ಅನುಕಂಪದ ಅಸ್ತ್ರ ಹಿಡಿದ ಪ್ರಬಲ ಸಮುದಾಯದ ಮಹಿಳೆ ರಣರಂಗದಲ್ಲಿ ಇರುವುದು ಎದುರಾಳಿಗಳ ಬೆವರಿಳಿಸಲಿದೆ ಎಂಬುದು ಕ್ಷೇತ್ರದ ಉದ್ದಗಲದಲ್ಲಿರುವ ಸಾಮಾನ್ಯ ಅನಿಸಿಕೆ!


ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ; ತೀರ್ಥಹಳ್ಳಿ: ಸಮಾಜವಾದಿ-ಗಾಂಧಿವಾದಿ-ವಿಶ್ವಮಾನವರ ಕರ್ಮಭೂಮಿಯಲ್ಲಿ ಸಂಕುಚಿತ ರಾಜಕೀಯ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾರರ ಹೆಸರು ಕೈಬಿಟ್ಟ ಹಗರಣ; ಬಿಜೆಪಿ ಪಕ್ಷದ ಕೈವಾಡದ ಆರೋಪ

0
ಭಾರತದ ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸತ್‌ವರೆಗೆ ಹಲವು ಹಂತಗಳ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಜನಪ್ರತಿನಿಧಿಗಳನ್ನು ಮತದಾರರು ಆರಿಸುವುದಲ್ಲದೆ, ಆಳುವ ಸರ್ಕಾರಗಳನ್ನು ನಿರ್ಧರಿಸುತ್ತಾರೆ. ಈ ಚುನಾವಣಾ ವ್ಯವಸ್ಥೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕಾದದ್ದು...