Homeಚಳವಳಿಇಂದಿಗೂ ಪ್ರಸ್ತುತ ಎನಿಸುವ ಕ್ವಿಟ್ ಇಂಡಿಯಾ ಚಳವಳಿಯ ಐತಿಹಾಸಿಕ ನಿರ್ಣಯಗಳು

ಇಂದಿಗೂ ಪ್ರಸ್ತುತ ಎನಿಸುವ ಕ್ವಿಟ್ ಇಂಡಿಯಾ ಚಳವಳಿಯ ಐತಿಹಾಸಿಕ ನಿರ್ಣಯಗಳು

ಎಲ್ಲ ಅಧಿಕಾರವೂ ಹೊಲಗದ್ದೆಗಳಲ್ಲಿ, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕೆಲಸಗಾರರಿಗೇ ಸೇರಿರುವ ಕಾರಣ ಅವರ ಯೋಗಕ್ಷೇಮ ಮತ್ತು ಉನ್ನತಿಗೆ ಪ್ರೋತ್ಸಾಹ ನೀಡಬೇಕೆಂದು ನಿರ್ಣಯ ಕೈಗೊಳ್ಳಲಾಗಿತ್ತು.

- Advertisement -
- Advertisement -

ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ)ಯ ಸಭೆಯೊಂದು ಮುಂಬೈನಲ್ಲಿ 1942ರ ಆಗಸ್ಟ್ 7 ಮತ್ತು 8ರಂದು ನಡೆಯಿತು. ಕಾರ್ಯಕಾರಿ ಸಮಿತಿಯು ಶಿಫಾರಸು ಮಾಡಿದ ಈ ಮುಂದೆ ತಿಳಿಸಿರುವ ನಿರ್ಣಯವನ್ನು ಸಭೆಯು ಪ್ರಚಂಡ ಬಹುಮತದೊಂದಿಗೆ ಅಂಗೀಕರಿಸಿತು. ಕೇವಲ 13 ಸದಸ್ಯರು ಮಾತ್ರ ನಿರ್ಣಯವನ್ನು ವಿರೋಧಿಸಿದರು.

ಕ್ವಿಟ್ ಇಂಡಿಯಾ ನಿರ್ಣಯ ಪೂರ್ಣಪಾಠ

ಕಾರ್ಯಕಾರಿ ಸಮಿತಿಯು 1942ರ ಜುಲೈ 14 ರಂದು ಅಂಗೀಕರಿಸಿದ ನಿರ್ಣಯವನ್ನು ತನ್ನ ಪರ್ಯಾಲೋಚನೆಗೆಂದು ಅಖಿಲ ಭಾರತ ಕಾಂಗ್ರೆಸ್‌ ಸಮಿತಿಗೆ ಕಳಿಸಿತ್ತು. ಅದನ್ನು ಸಮಿತಿಯು ಬಹು ಎಚ್ಚರದಿಂದ ಪರಿಶೀಲಿಸಿದೆ. ಇಷ್ಟೇ ಅಲ್ಲದೆ ಯುದ್ಧ ಪರಿಸ್ಥಿತಿಯ ಬೆಳವಣಿಗೆ, ಬ್ರಿಟಿಷ್ ಸರ್ಕಾರದ ಜವಾಬ್ದಾರಿಯುತ ವಕ್ತಾರರು ನೀಡಿರುವ ಹೇಳಿಕೆಗಳು ಮತ್ತು ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ಪ್ರಕಟವಾಗಿರುವ ಟೀಕೆಗಳು ಮತ್ತು ವ್ಯಾಖ್ಯಾನಗಳು ಈ ಮುಂತಾದವೂ ಸೇರಿದಂತೆ ನಿರ್ಣಯ ಅಂಗೀಕಾರದ ತದನಂತರದ ಘಟನೆಗಳನ್ನು ಪರಿಶೀಲಿಸಿದೆ.

ಸಮಿತಿಯು ನಿರ್ಣಯವನ್ನು ಅಂಗೀಕರಿಸುತ್ತದೆಯಲ್ಲದೆ ಅದನ್ನು ಅನುಮೋದಿಸುತ್ತದೆ. ಅಲ್ಲದೆ ಈ ನಿರ್ಣಯದ ತದನಂತರದ ಘಟನೆಗಳು ಭಾರತದ ಹಿತಕ್ಕೋಸ್ಕರ ಹಾಗೂ ಸಂಯುಕ್ತ ರಾಷ್ಟ್ರಗಳ ಯಶಸ್ಸಿಗೋಸ್ಕರ ಈ ತಕ್ಷಣವೇ ಬ್ರಿಟಿಷರು ಭಾರತದಲ್ಲಿ ತಮ್ಮ ಆಳ್ವಿಕೆಯನ್ನು ಅಂತ್ಯಗೊಳಿಸುವುದು ತುರ್ತಿನ ಅಗತ್ಯ ಎಂಬುದನ್ನು ಸಮರ್ಥಿಸುತ್ತದೆ; ಸ್ಪಷ್ಟಪಡಿಸುತ್ತದೆ. ಅಂತಹ ಆಳ್ವಿಕೆಯನ್ನು ಮುಂದುವರಿಸಿಕೊಂಡು ಬರುವುದರಲ್ಲಿ ಭಾರತವನ್ನು ಹೀನ ದರ್ಜೆಗೆ ಇಳಿಸುವುದು, ಅದನ್ನು ದುರ್ಬಲಗೊಳಿಸುವುದು ಆ ಆಳ್ವಿಕೆಯ ಉದ್ದೇಶ ಎಂಬುದನ್ನು ಸ್ಪಷ್ಟಪಡುತ್ತದೆ. ಅಲ್ಲದೆ ಆ ಮೂಲಕ ಭಾರತವು ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರದಷ್ಟು ಅಶಕ್ತವಾಗುತ್ತದೆ ಹಾಗೂ ವಿಶ್ವ ಸ್ವಾತಂತ್ರ್ಯದ ಸಾಧನೆಯಲ್ಲಿ ಭಾರತದ ಪಾತ್ರವೂ ಕ್ಷೀಣಿಸುತ್ತದೆ.

ಸಮಿತಿಯು ರಷ್ಯನ್ ಹಾಗೂ ಚೀನಿ ರಣರಂಗಗಳಲ್ಲಿ ಪರಿಸ್ಥಿತಿ ಹದಗೆಟ್ಟಿರುವುದನ್ನು ನಿರುತ್ಸಾಹದಿಂದ ಪರಿಶೀಲಿಸಿ, ತಮ್ಮ ತಮ್ಮ ಸ್ವಾತಂತ್ರ್ಯ ರಕ್ಷಣೆಯಲ್ಲಿ ರಷ್ಯನ್ ಹಾಗೂ ಚೀನಿ ಜನರು ತೋರಿಸಿದ ಶೌರ್ಯ, ಪರಾಕ್ರಮಗಳ ಬಗ್ಗೆ ತನ್ನ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ. ಈ ಹೆಚ್ಚುತ್ತಿರುವ ಗಂಡಾಂತರವು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಹಾಗೂ ದುರಾಕ್ರಮಣಕ್ಕೆ ಒಳಗಾಗಿರುವ ಜನರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುತ್ತಿರುವ ಎಲ್ಲರಿಗೂ ಪದೇ ಪದೇ ವೈಫಲ್ಯಗಳನ್ನೇ ಅನುಭವಿಸಿರುವ ಮಿತ್ರ ರಾಷ್ಟ್ರಗಳು ಅನುಸರಿಸುತ್ತಿರುವ ಕಾರ್ಯನೀತಿಯ ಮೂಲಾಂಶಗಳನ್ನು, ತಳಹದಿಗಳನ್ನು ಪರಿಶೀಲಿಸುವುದು ಆವಶ್ಯಕವೆಂದು ತಿಳಿಸುತ್ತದೆ. ಅಂತಹ ಗುರಿಗಳು ಮತ್ತು ಕಾರ್ಯನೀತಿಗಳು ಮತ್ತು ವಿಧಾನಗಳಿಗೆ ಅಂಟಿಕೊಂಡಿರುವುದರಿಂದ ಮಾತ್ರವೇ ವೈಫಲ್ಯವನ್ನು, ಸೋಲನ್ನು ಯಶಸ್ಸಿಗೆ ಮಾರ್ಪಡಿಸಬಹುದೆಂದು ಹೇಳಲಿಕ್ಕಾಗದು, ಏಕೆಂದರ ಹಿಂದಿನ ಅನುಭವದ ಪ್ರಕಾರ, ವೈಫಲ್ಯವು ಅವುಗಳಲ್ಲಿ ಅಂತರ್ಗತವಾಗಿದೆ. ಈ ಕಾರ್ಯನೀತಿಗಳು ಸ್ವಾತಂತ್ರ್ಯವನ್ನು ಆಧರಿಸಿಲ್ಲ. ಆದು ವಸಾಹತುಗಳ ಮೇಲಣ ದಬ್ಬಾಳಿಕೆ, ಸಾಮ್ರಾಜ್ಯಷಾಹಿ ಪರಂಪರೆಗಳು ಮತ್ತು ವಿಧಾನಗಳನ್ನು ಆಧರಿಸಿವೆ. ಸಾಮ್ರಾಜ್ಯವು ಆಡಳಿತ ಶಕ್ತಿಯನ್ನು ಬಲಪಡಿಸುವುದಿರಲಿ; ಆದೊಂದು ಹೊರೆಯಾಗಿಯೇ ಪರಿಣಮಿಸಿದೆ. ಅದೊಂದು ಶಾಪವಾಗಿ ಪರಿಣಮಿಸಿದೆ. ಆಧುನಿಕ ಸಾಮ್ರಾಜ್ಯಷಾಹಿಯ ಭೂಮಿಯಾಗಿರುವ ಭಾರತವು ಪ್ರಶ್ನೆಯ ಮೂಲಾಂಶವಾಗಿ ಪರಿಣಮಿಸಿದೆ. ಏಕೆಂದರೆ ಭಾರತದ ಸ್ವಾತಂತ್ರ್ಯದೊಂದಿಗೆ ಬ್ರಿಟನ್ ಮತ್ತು ಸಂಯುಕ್ತ ರಾಷ್ಟ್ರಗಳ ಕ್ರಮವನ್ನು ತೀರ್ಮಾನಿಸಲಾಗುತ್ತದೆ. ಏಷಿಯಾ ಮತ್ತು ಆಫ್ರಿಕಾದ ಜನರಲ್ಲಿ ಆಶೆ ಅಂಕುರಿಸುತ್ತದೆ; ಅವರಲ್ಲಿ ಉತ್ಸಾಹ ಮೂಡುತ್ತದೆ. ನಮ್ಮೀ ದೇಶದಲ್ಲಿ ಬ್ರಿಟಿಷ್ ಆಳ್ವಿಕೆಯ ಅಂತ್ಯವು ಅತಿಮುಖ್ಯ ಹಾಗೂ ತಕ್ಷಣದ ವಿಚಾರವಾಗಿದೆ. ಇದರ ಮೇಲೆ ಯುದ್ಧದ ಭವಿಷ್ಯ, ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ಯಶಸ್ಸು ಅವಲಂಬಿಸಿದೆ. ಸ್ವತಂತ್ರ ಭಾರತವು ಸ್ವಾತಂತ್ರ್ಯ ಹೋರಾಟದಲ್ಲಿ ನಾಜಿಇಸಂ, ಫ್ಯಾಸಿಸಂ ಮತ್ತು ಸಾಮ್ರಾಜ್ಯಷಾಹಿ ಇವುಗಳ ಆಕ್ರಮಣದ ವಿರುದ್ಧದ ಹೋರಾಟದಲ್ಲಿ ತನ್ನ ಎಲ್ಲ ಸಾಧನ ಸಂಪತ್ತುಗಳನ್ನು ಬಳಸುವುದು. ಈ ಕ್ರಮದಿಂದ ಯುದ್ಧದ ಭವಿಷ್ಯವು ಬದಲಾಗುವುದು ಮಾತ್ರವೇ ಅಲ್ಲ ದಮನಕ್ಕೆ ಒಳಗಾಗಿರುವ ಮಾನವಕೊಟಿಯು ಸಂಯುಕ್ತ ರಾಷ್ಟ್ರಗಳ ಪರವಾಗಿ ಬರುವುದಲ್ಲದ ಈ ರಾಷ್ಟ್ರಗಳಿಗೆ ಭಾರತವು ಮಿತ್ರನಾಗಿದ್ದು ಜಗತ್ತಿನ ನೈತಿಕ ಹಾಗೂ ಪಾರಮಾರ್ಥಿಕ ನಾಯಕತ್ವವನ್ನು ವಹಿಸಿಕೊಳ್ಳುವುದು, ಗುಲಾಮಗಿರಿಯಲ್ಲಿರುವ ಭಾರತವು ಬ್ರಿಟಿಷ್ ಸಾಮ್ರಾಜ್ಯಷಾಹಿಯ ಸಂಕೇತವಾಗಿ ಮುಂದುವರಿಯುತ್ತದೆ ಅಲ್ಲದೆ ಎಲ್ಲ ಸಾಮ್ರಾಜ್ಯಷಾಹಿಯ ಆ ಕಳಂಕವು ಎಲ್ಲ ಸಂಯುಕ್ತ ರಾಷ್ಟ್ರಗಳ ಭವಿಷ್ಯಕ್ಕೂ ಧಕ್ಕೆಯನ್ನುಂಟು ಮಾಡುತ್ತದೆ.

ಆದ್ದರಿಂದ ಇಂದಿನ ಗಂಡಾಂತರ, ವಿಪತ್ತು ಭಾರತದ ಸ್ವಾತಂತ್ರ್ಯದ ಅಗತ್ಯವನ್ನು ಬ್ರಿಟಿಷ್ ದಬ್ಬಾಳಿಕೆಯ ಅಂತ್ಯವನ್ನು ಆಗ್ರಹಪಡಿಸುತ್ತದೆ. ಭವಿಷ್ಯತ್ತಿನ ಭರವಸೆಗಳು ಅಥವಾ ಗ್ಯಾರಂಟಿಗಳು ಇಂದಿನ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಲಾರವು ಇಲ್ಲವೆ ಗಂಡಾಂತರವನ್ನು ಎದುರಿಸಲಾರವು. ಜನಸಾಮಾನ್ಯರ ಮನಸ್ಸಿನ ಮೇಲೆ ಅವು ಯಾವುದೇ ಮಾನಸಿಕ ಪರಿಣಾಮವನ್ನು ಉಂಟುಮಾಡಲಾರವು ಸ್ವಾತಂತ್ರ್ಯದ ಬೆಳಕು ಯುದ್ಧದ ಸ್ವರೂಪವನ್ನೇ ತಕ್ಷಣವೇ ಬದಲಾಯಿಸಬಲ್ಲ ಕೋಟ್ಯಂತರ ಜನರ ಶಕ್ತಿ ಮತ್ತು ಉತ್ಸಾಹಗಳನ್ನು ಬಿಡುಗಡೆಮಾಡಬಲ್ಲದು.

ಆದ್ದರಿಂದ ಎಐಸಿಸಿ ಬ್ರಿಟಿಷ್ ಅಧಿಕಾರವು ಭಾರತದಿಂದ ವಾಪಸ್ಸಾಗುವಂತ ಆಗ್ರಹಪಡಿಸುತ್ತದೆ. ಭಾರತದ ಸ್ವಾತಂತ್ರ್ಯದ ಘೋಷಣೆಯೊಂದಿಗೇ ತಾತ್ಕಾಲಿಕ ಸರ್ಕಾರವೊಂದು ರೂಪುಗೊಳ್ಳುತ್ತದೆ ಮತ್ತು ಸ್ವತಂತ್ರ ಭಾರತವು ಸಂಯುಕ್ತ ರಾಷ್ಟ್ರಗಳ ಮಿತ್ರರಾಷ್ಟ್ರವಾಗಿ ಅವುಗಳೊಂದಿಗೆ ಸ್ವಾತಂತ್ರ್ಯ ಹೋರಾಟದ ಸಂಯುಕ್ತ ಉದ್ಯಮದ ಕ್ಲೇಶಗಳು, ಸಂಕಟ, ಯಾತನೆಗಳಲ್ಲಿ ಪಾಲುಗೊಳ್ಳುತ್ತದೆ. ತಾತ್ಕಾಲಿಕ ಸರ್ಕಾರವನ್ನು ದೇಶದಲ್ಲಿನ ಮುಖ್ಯವಾದ ಪಕ್ಷಗಳು ಮತ್ತು ವರ್ಗಗಳು ಸಹಕಾರದೊಂದಿಗೆ ಮಾತ್ರವೇ ರೂಪಿಸಬಹುದು. ಇದೊಂದು ಸಂಘಟಿತ ಸರ್ಕಾರವಾಗಿರುತ್ತದೆ. ಇದರಲ್ಲಿ ಭಾರತದ ಎಲ್ಲ ಪ್ರಮುಖ ಜನವರ್ಗಗಳ ಪ್ರತಿನಿಧಿಗಳೂ ಇರುತ್ತಾರೆ. ಇದರ ಮುಖ್ಯ ಕೆಲಸಗಳೆಂದರೆ ಭಾರತವನ್ನು ರಕ್ಷಿಸುವುದು; ತನ್ನ ಅಧೀನದಲ್ಲಿರುವ ಎಲ್ಲ ಸಶಸ್ತ್ರ ಸೇನೆಗಳು ಮತ್ತು ಅಹಿಂಸಾತ್ಮಕ ಶಕ್ತಿಗಳೊಂದಿಗೆ ಹಾಗೂ ಮಿತ್ರ ಶಕ್ತಿಗಳ ಸೇನೆಗಳ ನೆರವಿನೊಂದಿಗೆ ದುರಾಕ್ರಮಣವನ್ನು ಎದುರಿಸುವುದು, ಮುಖ್ಯವಾಗಿ ಎಲ್ಲ ಅಧಿಕಾರವೂ ಹೊಲಗದ್ದೆಗಳಲ್ಲಿ, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕೆಲಸಗಾರರಿಗೇ ಸೇರಿರುವ ಕಾರಣ ಅವರ ಯೋಗಕ್ಷೇಮ ಮತ್ತು ಉನ್ನತಿಗೆ ಪ್ರೋತ್ಸಾಹ ನೀಡುವುದು – ಇವೇ ಆಗಿವೆ. ತಾತ್ಕಾಲಿಕ ಸರ್ಕಾರವು ಭಾರತ ಸರ್ಕಾರದ ಪರವಾಗಿ ಎಲ್ಲ ಜನವರ್ಗಗಳಿಗೂ ಸ್ವೀಕಾರಾರ್ಹವಾಗುವ ಸಂವಿಧಾನವೊಂದನ್ನು ಸಿದ್ಧಗೊಳಿಸುವುದಕ್ಕಾಗಿ ರಾಜ್ಯಾಂಗ ಸಭೆಯೊಂದನ್ನು ರಚಿಸುವ ಕಾರ್ಯ ಯೋಜನೆಯನ್ನು ರೂಪಿಸುವುದು, ಈ ಸಂವಿಧಾನವು ಕಾಂಗ್ರೆಸ್‌ ದೃಷ್ಟಿಯಿಂದ ಸಂಯುಕ್ತ ರಾಷ್ಟ್ರ (ಫೆಡರಲ್) ಸ್ವರೂಪದ್ದಾಗಿರುವುದು, ಫೆಡರಲ್ ಘಟಕಗಳಿಗೆ ಅತಿ ಹೆಚ್ಚಿನ ಸ್ವಯಮಾಡಳಿತ ಅಧಿಕಾರಗಳನ್ನು ಕೊಡಲಾಗುವುದು, ಉಳಿಕೆಯ ಅಧಿಕಾರಿಗಳು ಈ ಘಟಕಗಳಲ್ಲಿಯೇ ಇರುತ್ತವೆ. ಭಾರತ ಹಾಗೂ ಮಿತ್ರ ರಾಷ್ಟ್ರಗಳ ನಡುವಣ ಭವಿಷ್ಯತ್ತಿನ ಸಂಬಂಧಗಳನ್ನು ಈ ಸ್ವತಂತ್ರ ರಾಷ್ಟ್ರಗಳ ಪ್ರತಿನಿಧಿಗಳು ನಿರ್ಧರಿಸುವರು, ಇವು ತಮ್ಮ ಪರಸ್ಪರ ಅನುಕೂಲಕ್ಕಾಗಿ ಹಾಗೂ ದುರಾಕ್ರಮಣವನ್ನು ವಿರೋಧಿಸುವ ಒಂದು ಸಾಮಾನ್ಯ ಕಾರ್ಯದಲ್ಲಿ ಪರಸ್ಪರ ಸಹಕರಿಸುತ್ತವೆ. ಸ್ವಾತಂತ್ರ್ಯ ಪಡೆದ ಭಾರತವು ಐಕ್ಯಗೊಂಡ ಜನರ ದೃಢ ಸಂಕಲ್ಪ ಹಾಗೂ ಬಲದೊಂದಿಗೆ ದುರಾಕ್ರಮಣವನ್ನು ಎದುರಿಸುತ್ತದೆ.

ಭಾರತದ ಸ್ವಾತಂತ್ರ್ಯವು ವಿದೇಶೀ ದಬ್ಬಾಳಿಕೆಗೆ ಒಳಗಾಗಿರುವ ಇತರ ಎಲ್ಲ ಏಷಿಯನ್ ರಾಷ್ಟ್ರಗಳ ಸ್ವಾತಂತ್ರ್ಯದ ಪ್ರತೀಕವಾಗಿರುತ್ತದೆ ಹಾಗೂ ಮುನ್ಸೂಚನೆಯಾಗಿರುತ್ತದೆ. ಬರ್ಮಾ, ಮಲಯಾ, ಇಂಡೋ-ಚೀಣಾ, ಡಚ್ ಇಂಡೀಸ್, ಇರಾನ್ ಮತ್ತು ಇರಾಕ್‌ಗಳು ಸಹ ತಮ್ಮ ಸಂಪೂರ್ಣ ಸ್ವಾತಂತ್ರವನ್ನು ಪಡೆಯಬೇಕು. ಈಗ ಜಪಾನಿನ ಅಧೀನದಲ್ಲಿರುವಂತಹ ದೇಶಗಳನ್ನು ಮುಂದೆ ಬೇರಾವುದೇ ನೆಲಸುನಾಡು (ಕಾಲೊನಿ) ಶಕ್ತಿಯ ಆಳ್ವಿಕೆಗೆ ಅಥವಾ ಹತೋಟಿಗೆ ಒಳಪಡಿಸಬಾರದು.

ಎಐಸಿಸಿಯು ಮುಖ್ಯವಾಗಿ ಈ ಆಪತ್ತಿನ ಸಮಯದಲ್ಲಿ ಭಾರತದ ಸ್ವಾತಂತ್ರ್ಯ ಹಾಗೂ ರಕ್ಷಣೆ ಇವುಗಳ ಬಗ್ಗೆ ಆಸಕ್ತಿ ವಹಿಸಿರುವುದಾದಾಗ್ಯೂ ಜಗತ್ತಿನ ಭವಿಷ್ಯತ್ತಿನ ಶಾಂತಿ ಸುರಕ್ಷತೆ ಹಾಗೂ ಸುವ್ಯವಸ್ಥಿತ ರೀತಿಯ ಪ್ರಗತಿಗಳ ಸಾಧನೆಗಾಗಿ ಸ್ವತಂತ್ರ ರಾಷ್ಟ್ರಗಳ ವಿಶ್ವ ಫೆಡರೇಷನ್ ಅಗತ್ಯವೆಂದೂ ಬೇರಾವ ಆಧಾರದ ಮೇಲೆ ಆಧುನಿಕ ಜಗತ್ತಿನ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲವೆಂದೂ ಅಭಿಪ್ರಾಯ ಪಟ್ಟಿದೆ. ಅಂತಹ ವಿಶ್ವ ಫೆಡರೇಷನ್ ತನ್ನ ಸಂಘಟಿತ ಸದಸ್ಯ ರಾಷ್ಟ್ರಗಳ ಸ್ವಾತಂತ್ರ್ಯ, ಒಂದು ರಾಷ್ಟ್ರವು ಇನ್ನೊಂದು ರಾಷ್ಟ್ರದ ಮೇಲೆ ದುರಾಕ್ರಮಣ ನಡೆಸುವುದು, ಒಂದು ರಾಷ್ಟ್ರವು ಇನ್ನೊಂದು ರಾಷ್ಟ್ರದ ಶೋಷಣೆ ನಡೆಸುವುದು ಇವನ್ನು ತಪ್ಪಿಸುವುದು, ರಾಷ್ಟ್ರೀಯ ಅಲ್ಪಸಂಖ್ಯಾತರ ರಕ್ಷಣೆ, ಎಲ್ಲ ಹಿಂದುಳಿದ ಪ್ರದೇಶಗಳು ಮತ್ತು ಜನರ ಏಳಿಗೆಗಾಗಿ ಕ್ರಮ ಕೈಗೊಳ್ಳುವುದು ಮತ್ತು ಎಲ್ಲರ ಒಳಿತಿಗಾಗಿ ಜಗತ್ತಿನ ಸಂಪನ್ಮೂಲಗಳನ್ನೂ ಸಂಗ್ರಹಿಸಿಡುವುದು ಇವನ್ನೆಲ್ಲಾ ಖಚಿತಗೊಳಿಸುವುದು. ಅಂತಹ ವಿಶ್ವ ಫೆಡರೇಷನ್‌ನ ಸ್ಥಾಪನೆಯಿಂದ ಎಲ್ಲ ದೇಶಗಳಲ್ಲಿಯೂ ನಿಶ್ಯಸ್ತ್ರೀಕರಣವು ಕಾರ್ಯಸಾಧ್ಯವಾಗುತ್ತದೆಯಲ್ಲದೆ ರಾಷ್ಟ್ರೀಯ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಗಳು ಇನ್ನು ಮುಂದೆ ಆವಶ್ಯಕವಾಗುವುದೇ ಇಲ್ಲ. ವಿಶ್ವ ರಕ್ಷಣಾ ದಳವೊಂದು ಜಗತ್ತಿನಲ್ಲಿ ಶಾಂತಿ ನೆಲೆಸಿರುವಂತೆ ಮಾಡುತ್ತದೆ ಹಾಗೂ ದುರಾಕ್ರಮಣಗಳನ್ನು ತಡೆಗಟ್ಟುತ್ತದೆ.

ಸ್ವತಂತ್ರ ಭಾರತವು ಅಂತಹ ವಿಶ್ವ ಫೆಡರೇಷನ್ ಅನ್ನು ಸಂತೋಷದಿಂದ ಸೇರುತ್ತದೆ. ಅಂತರರಾಷ್ಟ್ರೀಯ ಸಮಸ್ಯೆಗಳ ಪರಿಹಾರದಲ್ಲಿ ಉಳಿದ ರಾಷ್ಟ್ರಗಳೊಂದಿಗೆ ಸಮಾನ ಆಧಾರದ ಮೇಲೆ ಸಹಕರಿಸುತ್ತದೆ.

ಅಂತಹ ಫೆಡರೇಷನ್‌ ಮೂಲಭೂತ ತತ್ವಗಳಿಗೆ ಒಪ್ಪಿಗೆ ನೀಡುವಂತಹ ಎಲ್ಲ ರಾಷ್ಟ್ರಗಳು ಫೆಡರೇಷನ್‌ ಅನ್ನು ಸೇರಲು ಅವಕಾಶವಿರಬೇಕು. ಯುದ್ಧವು ನಡೆಯುತ್ತಿರುವ ಕಾರಣ ಮೊದಲು ಫೆಡರೇಷನ್ ಸಂಯುಕ್ತ ರಾಷ್ಟ್ರಗಳಿಗೆ ಸೀಮಿತ ಗೊಂಡಿರಬೇಕು. ಈಗ ಅಂತಹ ಕ್ರಮ ಕೈಗೊಂಡರೆ, ಅದು ಯುದ್ಧದ ಮೇಲೆ, ಶತ್ರು ರಾಷ್ಟ್ರಗಳು ಜನರ ಮೇಲೆ ಹಾಗೂ ಮುಂದೆ ನಲೆಸಲಿರುವ ಶಾಂತಿಯ ಮೇಲೆ ಅತ್ಯಂತ ಪ್ರಬಲವಾದ ಪರಿಣಾಮವನ್ನು ಬೀರುತ್ತದೆ.

ಯುದ್ಧದ ದುರಂತಮಯ ಹಾಗೂ ತಡೆಯಲಸಾಧ್ಯವಾದ ಪಾಠಗಳು ಎದುರಿಗೇ ಸ್ಪಷ್ಟವಾಗಿ ಕಾಣಿಸುತ್ತಿದ್ದಾಗ್ಯೂ, ಜಗತ್ತಿನ ಮೇಲೆ ವಿಪತ್ತುಗಳು ಚಾಚಿರುವುದನ್ನು ಕಂಡಿದ್ದಾಗ್ಯೂ ಕೆಲವು ದೇಶಗಳ ಸರ್ಕಾರಗಳು ವಿಶ್ವ ಫೆಡರೇಷನ್ ಸ್ಥಾಪನೆಯ ಈ ಅನಿವಾರ್ಯ ಕ್ರಮ ಕೈಗೊಳ್ಳಲು ಇನ್ನೂ ತಯಾರಿಲ್ಲ ಎಂದು ಸಮಿತಿಯು ವಿಷಾದಿಸಿದೆ. ಇಂದು ಬಂದೋದಗಿರುವ ವಿಪತ್ತನ್ನು ಎದುರಿಸಲು ಹಾಗೂ ಭಾರತವು ತನ್ನನ್ನು ರಕ್ಷಿಸಿಕೊಳ್ಳಲು ಹಾಗೂ ಚೀಣಾ ಮತ್ತು ರಷ್ಯಗಳಿಗೆ ಅವುಗಳ ಈ ಆಪತ್ತಿನ ಸಮಯದಲ್ಲಿ ನೆರವಾಗಲು ಭಾರತಕ್ಕೆ ಸ್ವಾತಂತ್ರ ಬೇಕೇಬೇಕೆಂದು ಸ್ಪಷ್ಟಪಡಿಸಿದ್ದಾಗ, ಬ್ರಿಟಿಷ್ ಸರ್ಕಾರದ ಪ್ರತಿಕ್ರಿಯೆ ಹಾಗೂ ವಿದೇಶಿ ಪತ್ರಿಕೆಗಳ ತಿಳಿಗೇಡಿತನದ ಟೀಕೆಗಳು ಭಾರತದ ಸ್ವಾತಂತ್ರ್ಯ ಸಂಬಂಧವಾದ ಬೇಡಿಕೆಯನ್ನು ವಿರೋಧಿಸಿವೆ. ಚೀಣಾ ಹಾಗೂ ರಷ್ಯಾದ ಸ್ವಾತಂತ್ರ ಅಮೂಲ್ಯವಾದದ್ದು. ಹಾಗೂ ಅದನ್ನು ರಕ್ಷಿಸಿಕೊಂಡು ಬರಲೇಬೇಕು. ಈ ಕಾರಣದಿಂದ ಚೀನಾ ಅಥವಾ ರಷ್ಯದಾ ರಕ್ಷಣೆಯನ್ನು ಯಾವುದೇ ಪೇಚಾಟಕ್ಕೆ ಸಿಕ್ಕಿಸಬಾರದೆಂದು ಅಥವಾ ಸಂಯುಕ್ತ ರಾಷ್ಟ್ರಗಳ ರಕ್ಷಣಾ ಸಾಮರ್ಥ್ಯವನ್ನು ತೊಡಕಿಗೆ ಸಿಕ್ಕಿಸದಂತೆ ಮಾಡಲು ಸಮಿತಿಯು ಕಾತರವಾಗಿದೆ. ಆದರೆ ಭಾರತಕ್ಕೂ ಈ ರಾಜ್ಯಗಳಿಗೂ ಸಂಬಂಧಪಟ್ಟಂತ ವಿಪತ್ತು ಸಹ ಬೆಳೆಯುತ್ತಲೇ ಇದೆ. ಈ ಘಟ್ಟದಲ್ಲಿ ನಿಷ್ಕ್ರಿಯ ಹಾಗೂ ವಿದೇಶೀ ಸರ್ಕಾರವೊಂದಕ್ಕೆ ಶರಣಾಗತಿ, ಇವುಗಳಿಂದಾಗಿ ಭಾರತವನ್ನು ಹೀನಮಟ್ಟಕ್ಕೆ ಇಳಸಿದಂತಾಗುತ್ತದೆ. ಅಲ್ಲದೆ ಭಾರತವು ತನ್ನನ್ನು ತಾನೇ ರಕ್ಷಿಸಿಕೊಳ್ಳುವ ಹಾಗೂ ಆಕ್ರಮಣವನ್ನು ವಿರೋಧಿಸುವ ಸಾಮರ್ಥ್ಯವನ್ನು ಕುಗ್ಗಿಸಿದಂತಾಗುತ್ತದೆ. ಅಲ್ಲದೆ ನಿಷ್ಕ್ರಿಯ ಹಾಗೂ ಶರಣಾಗತಿಯು ಆ ವೃದ್ಧಿಸುತ್ತಿರುವ ಆಪತ್ತಿಗೆ ಉತ್ತರವೇನಲ್ಲ. ಅಲ್ಲದೆ ಸಂಯುಕ್ತ ರಾಷ್ಟ್ರಗಳ ಜನತೆಗಳಿಗೆ ಸೇವೆ ಸಲ್ಲಿಸಿದಂತೂ ಆಗುವುದಿಲ್ಲ. ಕಾರ್ಯಕಾರಿ ಸಮಿತಿಯು ಬ್ರಿಟನ್ ಹಾಗೂ ಸಂಯುಕ್ತ ರಾಷ್ಟ್ರಗಳಿಗೆ ಮಾಡಿಕೊಂಡ ಶ್ರದ್ಧಾಪೂರ್ವಕ ಮನವಿಗೆ ಇಲ್ಲಿಯವರೆಗೆ ಉತ್ತರ ಬಂದಿಲ್ಲ. ಅನೇಕ ವಿದೇಶಿ ವಲಯಗಳಲ್ಲಿ ಮಾಡಿರುವ ಟೀಕೆಗಳು ಭಾರತದ ಹಾಗೂ ಜಗತ್ತಿನ ಅಗತ್ಯದ ಅಜ್ಞಾನವನ್ನು ಎಷ್ಟೋ ವೇಳೆ ಭಾರತದ ಸ್ವಾತಂತ್ರ್ಯದ ಬಗ್ಗೆ ಹಗೆತನವೂ ಸಹ ತೋರಿಸುತ್ತದೆ. ಇದು ದಬ್ಬಾಳಿಕೆಯ ಮನೋಭಾವ ಜನಾಂಗದ ಸರ್ವಶ್ರೇಷ್ಟತೆಯ ಲಕ್ಷಣವೇ ಸರಿ. ಇದನ್ನು ತಮ್ಮ ಶಕ್ತಿ ಹಾಗೂ ನ್ಯಾಯ ತತ್ಪರತೆಯ ಬಗ್ಗೆ ಹೆಮ್ಮೆಪಡುವಂತಹ ಜನರು ಸಹಿಸಲಾರರು.

ಎಐಸಿಸಿ ವಿಶ್ವ ಸ್ವಾತಂತ್ರ್ಯದ ಹಿತದೃಷ್ಟಿಯಿಂದ ಈ ಕೊನೆಯ ಕ್ಷಣದಲ್ಲಿ ಬ್ರಿಟನ್ ಮತ್ತು ಸಂಯುಕ್ತ ರಾಷ್ಟ್ರಗಳಿಗೆ ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತಿದೆ. ರಾಷ್ಟ್ರವು ತನ್ನದೇ ಅದ ಹಿತದೃಷ್ಟಿಯಿಂದ ಹಾಗೂ ಮಾನವಕೋಟಿಯ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸಲು ಅಡಚಣೆಯನ್ನುಂಟು ಮಾಡುವಂತಹ ಹಾಗೂ ತನ್ನ ಮೇಲೆ ದಬ್ಬಾಳಿಕೆ ನಡೆಸುವಂತಹ ಸಾಮ್ರಾಜ್ಯಷಾಹಿ ಹಾಗೂ ಸರ್ವಾಧಿಕಾರಿ ಸರ್ಕಾರದ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಸಂಪಾದಿಸುವ ದೃಢ ಸಂಕಲ್ಪವನ್ನು ಕೈಗೂಡಿಸುವ ಪ್ರಯತ್ನವನ್ನು ಹತ್ತಿಕ್ಕಲು ಆ ಸರ್ಕಾರಕ್ಕೆ ಯಾವ ಸಮರ್ಥನೆಯೂ ಇಲ್ಲವೆಂದು ಸಮಿತಿಯು ಅಭಿಪ್ರಾಯಪಟ್ಟಿದೆ. ಆದ್ದರಿಂದ ಭಾರತವು ಸ್ವಾತಂತ್ರ್ಯ ಪಡೆಯುವ ತನ್ನ ಮೂಲಭೂತ ಹಕ್ಕನ್ನು ಸಮಿತಿಯು ಸಮರ್ಥಿಸುತ್ತದೆ. ಕಳೆದ ಇಪ್ಪತ್ತೆರಡು ವರ್ಷಗಳ ಶಾಂತಿಯುತ ಹೋರಾಟದ ಸಮಯದಲ್ಲಿ ಸಂಗ್ರಹಿಸಿದ ಎಲ್ಲ ಅಹಿಂಸಾತ್ಮಕ ಮಾರ್ಗಗಳಲ್ಲಿ ಸಮೂಹ ಹೋರಾಟವನ್ನು ಪ್ರಾರಂಭಿಸಬೇಕೆಂದು ಸಮಿತಿಯು ನಿರ್ಣಯಿಸಿದೆ. ಅಂತಹ ಹೋರಾಟವು ಗಾಂಧೀಜಿಯವರ ನಾಯಕತ್ವದಲ್ಲಿಯೇ ಆರಂಭವಾಗುವುದು ಅನಿವಾರ್ಯ, ಸಹಜ. ಅವರು ಹೋರಾಟದ ನಾಯಕತ್ವವನ್ನು ವಹಿಸಿಕೊಂಡು ರಾಷ್ಟ್ರಕ್ಕೆ ಮಾರ್ಗದರ್ಶನ ನೀಡಬೇಕೆಂದು ಸಮಿತಿಯು ಕೋರುತ್ತದೆ.

ಭಾರತದ ಜನರು ಅಪಾಯಗಳು ಮತ್ತು ತೊಂದರೆಗಳನ್ನು ಧೈರ್ಯ ಮತ್ತು ಸಹನೆಯಿಂದ ಎದುರಿಸಬೇಕೆಂದು ಸಮಿತಿಯು ಅವರಲ್ಲಿ ಮನವಿ ಮಾಡುತ್ತದೆ. ಅವರೆಲ್ಲರೂ ಗಾಂಧೀಜಿಯವರ ಮಾರ್ಗದರ್ಶನದಲ್ಲಿ ಒಗ್ಗಟ್ಟಿನಿಂದ ಕೂಡಿರಬೇಕೆಂದೂ, ಅವರು ನೀಡುವ ಸೂಚನೆಗಳನ್ನು ಭಾರತೀಯ ಸ್ವಾತಂತ್ರ್ಯದ ಶಿಸ್ತಿನ ಸಿಪಾಯಿಗಳಂತ ಪರಿಪಾಲಿಸಬೇಕೆಂದೂ ಮನವಿ ಮಾಡಿಕೊಳ್ಳುತ್ತದೆ. ಅಹಿಂಸೆಯು ಈ ಚಳವಳಿಯ ಆಧಾರವೆಂಬ ಅಂಶವನ್ನು ಅವರು ನನಪಿನಲ್ಲಿಡಬೇಕು. ನಮ್ಮ ಜನರಿಗೆ ಸೂಚನೆಗಳನ್ನು ನೀಡಲು ಸಾಧ್ಯವಾಗದೇ ಇರುವಂತಹ ಅಥವಾ ಸೂಚನೆಗಳು ಅವರನ್ನು ಮುಟ್ಟದೇ ಇರುವಂತಹ, ಅಲ್ಲದೆ ಯಾವ ಕಾಂಗ್ರೆಸ್‌ ಸಮಿತಿಯೂ ಕಾರ್ಯ ನಿರ್ವಹಿಸಲು ಸಾಧ್ಯವಾಗದೇ ಇರುವಂತಹ ಸಮಯವೊಂದು ಬರಬಹುದು. ಅದೇನು ಸಂಭವಿಸಿದ್ದಲ್ಲಿ, ಆಗ ಈ ಚಳವಳಿಯಲ್ಲಿ ಭಾಗವಹಿಸುತ್ತಿರುವ ಪ್ರತಿಯೊಬ್ಬ ಪುರುಷನೂ ಮಹಿಳೆಯೂ ಈಗಾಗಲೇ ನೀಡಿರುವ ಸಾಮಾನ್ಯ ಸೂಚನೆಗಳ ಚೌಕಟ್ಟಿನಲ್ಲಿ ಅವನಾಗಲಿ ಅವಳಾಗಲಿ ಕಾರ್ಯ ನಿರ್ವಹಿಸಬೇಕು. ಸ್ವಾತಂತ್ರವನ್ನು ಅಪೇಕ್ಷಿಸುವಂತಹ ಪ್ರತಿಯೊಬ್ಬ ಭಾರತೀಯನೂ ಅದಕ್ಕಾಗಿ ಶ್ರಮಿಸುವವನೂ ತನಗೆ ತಾನೇ ಮಾರ್ಗದರ್ಶಿಯಾಗಬೇಕು, ತಾನು ತುಳಿಯಬೇಕಾದ್ದು ಕಷ್ಟಸಾಧ್ಯವಾದ ಮಾರ್ಗ, ಆ ಮಾರ್ಗದಲ್ಲಿ ವಿಶ್ರಾಂತಿಗೆಂದು ತಂಗುವುದಕ್ಕೆ ಜಾಗವೇ ಇಲ್ಲದಿರುವುದು, ಅದು ಕೊನೆಗೆ ಭಾರತದ ಸ್ವಾತಂತ್ರ್ಯಕ್ಕೆ ಹಾಗೂ ವಿಮೋಚನೆಗೆ ಒಯ್ಯುವುದು ಎಂಬುದನ್ನು ಅವನು ಅರಿತಿರಬೇಕು.

ಕೊನೆಯದಾಗಿ, ಎಐಸಿಸಿಯು ಸ್ವತಂತ್ರ ಭಾರತದಲ್ಲಿ ಭವಿಷ್ಯತ್ತಿನ ಸರ್ಕಾರದ ಬಗ್ಗೆ ತನ್ನದೇ ಆದ ಅಭಿಪ್ರಾಯವನ್ನು ತಿಳಿಸಿದೆಯಾದಾಗ್ಯೂ, ಸಮೂಹ ಹೋರಾಟವನ್ನು ಪ್ರಾರಂಭಿಸಿರುವುದರಿಂದ ಅದು ಕಾಂಗ್ರೆಸ್‌ಗಾಗಿ ಅಧಿಕಾರವನ್ನು ಗ್ರಹಿಸುವ ಉದ್ದೇಶವಿಲ್ಲವೆಂಬ ಅಂಶವನ್ನು ಸ್ಪಷ್ಟಪಡಿಸುತ್ತಿದೆ ಅಧಿಕಾರವು, ಅದು ಬಂದಾಗ, ಭಾರತದ ಇಡೀ ಜನತೆಗೆ ಸೇರುತ್ತದೆ.

ಇದನ್ನೂ ಓದಿ: ನಾನೇನು ಮಾಡಬೇಕು ಎಂಬ ಅಧಿಕಾರ ಜನ ನೀಡಿದ್ದಾರೆ, ಮೋದಿ ಮಾತು ಯಾಕೆ ಕೇಳಬೇಕು: ತಮಿಳುನಾಡು ಹಣಕಾಸು ಸಚಿವ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...