Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ; ತೀರ್ಥಹಳ್ಳಿ: ಸಮಾಜವಾದಿ-ಗಾಂಧಿವಾದಿ-ವಿಶ್ವಮಾನವರ ಕರ್ಮಭೂಮಿಯಲ್ಲಿ ಸಂಕುಚಿತ ರಾಜಕೀಯ!

ಕರ್ನಾಟಕ ವಿಧಾನಸಭಾ ಕ್ಷೇತ್ರ; ತೀರ್ಥಹಳ್ಳಿ: ಸಮಾಜವಾದಿ-ಗಾಂಧಿವಾದಿ-ವಿಶ್ವಮಾನವರ ಕರ್ಮಭೂಮಿಯಲ್ಲಿ ಸಂಕುಚಿತ ರಾಜಕೀಯ!

- Advertisement -
- Advertisement -

ಸಂಪೂರ್ಣವಾಗಿ ಮಲೆನಾಡಿನ ಮಡಿಲಲ್ಲಿರುವ ತೀರ್ಥಹಳ್ಳಿ ಸುಂದರ ಸ್ವಪ್ನ ಲೋಕ! ಸಹ್ಯಾದ್ರಿಯ ಜೀವ ವೈವಿಧ್ಯದ ದಟ್ಟ ನಿತ್ಯ ಹರಿದ್ವರ್ಣ ಕಾಡು, ಜೀವನದಿ ತುಂಗೆ, ಗಿರಿ-ಶಿಖರ, ತೊರೆ-ಝರಿ-ಜಲಪಾತ, ಗಗನಚುಂಬಿಮರಗಳ ನಡುವೆ ತೇಲಾಡುವ ಬೆಳ್ಳಿಮೋಡಗಳ ತೀರ್ಥಹಳ್ಳಿ ಪ್ರಕೃತಿ ಸೊಬಗಿನ ರಮ್ಯ ತಾಣ. ಶಿವಮೊಗ್ಗ ಜಿಲ್ಲೆಯ ನೈರುತ್ಯ ತುದಿಯಲ್ಲಿರುವ ತೀರ್ಥಹಳ್ಳಿ ದಕ್ಷಿಣ ಏಷಿಯಾದಲ್ಲೇ ಅತಿಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದೆನಿಸಿದೆ. ಬಿಟ್ಟೂಬಿಡದೆ ವಿಪರೀತ ಮಳೆ ಸುರಿಯುವ ತೀರ್ಥಹಳ್ಳಿಯ ಆಗುಂಬೆ ಕರ್ನಾಟಕದ ಚಿರಾಪುಂಜಿ ಎಂದು ಹೆಸರುವಾಸಿಯಾಗಿದೆ. ತೀರ್ಥಹಳ್ಳಿಯ ಕಾಡು ಕಾಳಿಂಗ ಸರ್ಪಗಳ ರಾಜಧಾನಿ!

ಪ್ರಜ್ಞಾವಂತರ-ಪ್ರತಿಭಾವಂತರ ತವರೂರಾದ ತೀರ್ಥಹಳ್ಳಿ ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಜನ್ಮಭೂಮಿ; ಜನಪರ ತುಡಿತದ ಸಮಾಜವಾದಿ ಶಾಂತವೇರಿ ಗೋಪಾಲ ಗೌಡ, ಗಾಂಧೀವಾದಿ ಮಾಜಿ ಮುಖ್ಯಮಂತ್ರಿ ಕಡಿದಾಳ ಮಂಜಪ್ಪರ ಕರ್ಮಭೂಮಿ. ’ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು’ ತತ್ವಾದರ್ಶದ ತೀರ್ಥಹಳ್ಳಿ ಈಗ ಅಸಹಿಷ್ಣುತೆ-ಅನ್ಯಾಯಗಳ ರಹಸ್ಯ ಅಜೆಂಡಾದ ಸಂಘ ಸೂತ್ರಧಾರರ ಆಡೊಂಬೊಲದಂತಾಗಿರುವುದು ಆತಂಕಕಾರಿಯಾಗಿದೆ ಎಂಬ ಕಳವಳದ ಮಾತುಗಳು ತೀರ್ಥಹಳ್ಳಿಯಲ್ಲಿ ಕೇಳಿಬರುತ್ತದೆ.

ಕಡಿದಾಳ ಮಂಜಪ್ಪ

ಕಳೆದ ಅಸೆಂಬ್ಲಿ ಚುನಾವಣೆಗೆ ಸ್ವಲ್ಪ ಮೊದಲು ನಂದಿತಾ ಎಂಬ ಆಗತಾನೆ ಹೈಸ್ಕೂಲು ಮೆಟ್ಟಿಲೇರಿದ್ದ ಹೆಣ್ಣುಮಗಳ ಆತ್ಮಹತ್ಯೆ ಪ್ರಕರಣವನ್ನು ಕೇಸರಿ ಪಡೆ ಹಿಂದುತ್ವದ ಮೈಲೇಜು ಪಡೆಯಲು ಬಳಸಿಕೊಂಡಿದ್ದಕ್ಕೆ
ತೀರ್ಥಹಳ್ಳಿಯಲ್ಲಿ ಹಿಂದೆಂದೂ ಕಂಡುಕೇಳರಿಯದ ಕೋಮುಗಲಭೆ ಸಾಧ್ಯವಾಗಿತ್ತು. ಆ ಧರ್ಮಕಾರಣದ ಅಂಡರ್‌ಕರೆಂಟ್ ಈಗಲೂ ತಾಲೂಕಿನಲ್ಲಿ ಹರಿದಾಡುತ್ತಿದೆ ಎಂದು ಜೀವಪರ ಆಂದೋಲನದ ಮುಂಚೂಣಿಯಲ್ಲಿರುವ ಆಕ್ಟಿವಿಸ್ಟ್ ಒಬ್ಬರು ’ನ್ಯಾಯ ಪಥ’ಕ್ಕೆ ತಿಳಿಸಿದರು.

ಸಮಾಜ-ಸಂಸ್ಕೃತಿ

ಒಕ್ಕಲಿಗರ ಪ್ರಾಬಲ್ಯದ ತೀರ್ಥಹಳ್ಳಿಯಲ್ಲಿ ಈಡಿಗರು (ಸ್ಥಳೀಯ ದೀವರು ಮತ್ತು ಕರಾವಳಿ ಮೂಲದ ಬಿಲ್ಲವರು) ಮತ್ತು ಬ್ರಾಹ್ಮಣರು (ಸ್ಥಳೀಯ ಹವ್ಯಕರು ಹಾಗು ಕರಾವಳಿ ಕಡೆಯ ವಲಸಿಗ ಮಾಧ್ವರು) ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇಲ್ಲಿಯ ಒಕ್ಕಲಿಗ ಸಮುದಾಯ ಮಂಡ್ಯ-ಮೈಸೂರು ಭಾಗದ ಒಕ್ಕಲಿಗರಿಗಿಂತ ಕೊಂಚ ವಿಭಿನ್ನ ಎನ್ನಲಾಗುತ್ತಿದೆ. ಹಿಂದೆ ಈ ಎರಡು ಬಗೆಯ ಒಕ್ಕಲಿಗ ಸಮುದಾಯಗಳ ನಡುವೆ ವೈವಾಹಿಕ ಸಂಬಂಧ ಕೂಡ ಏರ್ಪಡುತ್ತಿರಲಿಲ್ಲ. ಬಹುಶಃ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತೀರ್ಥಹಳ್ಳಿಯ ಅಳಿಯನಾಗಿದ್ದೆ ಹಳೆ ಮೈಸೂರು ಮತ್ತು ಶೃಂಗೇರಿ-ತೀರ್ಥಹಳ್ಳಿ ಸೀಮೆಯ ಮೊದಮೊದಲ ವೈವಾಹಿಕ ಸಂಬಂಧ ಎನ್ನಲಾಗುತ್ತಿದೆ. ಎರಡು ವರ್ಗಗಳನ್ನು ಒಕ್ಕಲಿಗರ ಆದಿಚುಂಚನಗಿರಿ ಮಠದಡಿ ಒಂದು ಮಾಡುವ ಪ್ರಯತ್ನ ನಡೆದ ನಂತರ ಮದುವೆ ಮತ್ತಿತರ ಒಡನಾಟ ಏರ್‍ಪಟ್ಟಿದೆ.

ಘಟ್ಟದ ಕೆಳಗಿಂದ (ಕರಾವಳಿಯಿಂದ) ಹೋಟೆಲ್ ಮತ್ತಿತರ ಉದ್ಯಮ-ಉದ್ಯೋಗಕ್ಕೆಂದು ಬಂದಿರುವ ತುಳು ಭಾಷಿಕ ಬಂಟರು ಮತ್ತು ಮೊಗವೀರರು ತೀರ್ಥಹಳ್ಳಿಯಲ್ಲಿದ್ದಾರೆ; ಬಂಡೆ ಒಡೆಯುವ ಕೆಲಸದ ತಮಿಳು ಜನಸಮೂಹವಿದೆ. ಶಿವಳ್ಳಿ ಬ್ರಾಹ್ಮಣರೂ ತುಳು ಮಾತಾಡುತ್ತಾರೆ. ಹವ್ಯಕರ ರಾಮಚಂದ್ರಾಪುರ ಮಠ ಹಾಗು ಶಿವಳ್ಳಿಗಳ ಪುತ್ತಿಗೆಮಠದ ಶಾಖಾ ಮಠಗಳು ಇಲ್ಲಿವೆ. ಶೃಂಗೇರಿ ಮಠದ ಅನುಯಾಯಿಗಳಾದ ಬ್ರಾಹ್ಮಣರೂ ಇಲ್ಲಿದ್ದಾರೆ. ಹಿಂದುತ್ವದ ಪ್ರಯೋಗ ಶಾಲೆಯ (ಅವಿಭಜಿತ ದಕ್ಷಿಣಕನ್ನಡ) ಗಡಿಯಲ್ಲಿರುವುದರಿಂದ ತೀರ್ಥಹಳ್ಳಿಯಲ್ಲಿ ಕೌ ಬ್ರಿಗೇಡ್ ಮತ್ತು ಮಾರಲ್ ಪೊಲೀಸಿಂಗ್ ಸೋಂಕು ಸಣ್ಣ ಪ್ರಮಾಣದಲ್ಲಿ ಪಸರಿಸಿದೆ; ನಂದಿತಾ ಆತ್ಮಹತ್ಯೆ ಮತ್ತು ಹರ್ಷ ಮರ್ಡರ್ ಸಂದರ್ಭದಲ್ಲಿ ದಕ್ಷಿಣ ಕನ್ನಡದ ಹಿಂದುತ್ವದ ಸೈನಿಕರು ಬಂದು ಕೆರಳಿಸುವ ಕರಾಮತ್ತು ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳುತ್ತಾರೆ. ಸ್ಥಳೀಯ ಆರ್‌ಎಸ್‌ಎಸ್‌ನ ಯಜಮಾನರಾದ ಬ್ರಾಹ್ಮಣ ಮುಖಂಡರ ಮನೆಗಳಲ್ಲಿ ಧರ್ಮಕಾರಣದ ರಹಸ್ಯ ಬೈಠಕ್‌ಗಳು ನಡೆಯುತ್ತಿದ್ದು, ಅಲ್ಲಿ ಆದ ಠರಾವನ್ನು ಸ್ಥಳೀಯ ಶಾಸಕ, ಗೃಹಮಂತ್ರಿ ಅರಗ ಜ್ಞಾನೇಂದ್ರ ಜಾರಿಗೆ ತರಲು ಪ್ರಯತ್ನಿಸುತ್ತಾರೆಂಬ ಬಲವಾದ ಆರೋಪ ಕೇಳಿಬರುತ್ತಿದೆ.

ಸೊನಗಾರರು (ಅಕ್ಕಸಾಲಿಗರು) ಇರುವ ತೀರ್ಥಹಳ್ಳಿ ಬೆಳ್ಳಿ ವಸ್ತು ತಯಾರಿಕೆಗೆ ಹೆಸರುವಾಸಿ. ಮಲೆನಾಡಿನ ಸಂಸ್ಕೃತಿಯ ತೀರ್ಥಹಳ್ಳಿಯ ರಾಮೇಶ್ವರ ಜಾತ್ರೆಯಲ್ಲಿ (5 ದಿನಗಳ ವೈಭವದ ಉತ್ಸವ) ಜರುಗುವ ದನಗಳ ವ್ಯಾಪಾರ ಸುತ್ತಮುತ್ತಲ ಭಾಗದಲ್ಲಿ ಪ್ರಸಿದ್ಧವಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ಹೆಚ್ಚು ನಡೆಯುವ ಜಿಲ್ಲೆಯ ಮೂರು ತಾಲೂಕುಗಳಲ್ಲಿ ತೀರ್ಥಹಳ್ಳಿ ಒಂದು. ಕರಾವಳಿಗೆ ಹೊಂದಿಕೊಂಡಿರುವ ಈ ತಾಲೂಕಲ್ಲಿ ಯಕ್ಷಗಾನದ ಪ್ರಭಾವವಿದೆ. ದೀಪಾವಳಿ ಸಂದರ್ಭದ ಅಂಟಿಗೆಪಿಂಟಿಗೆ (ಹಬ್ಬಾಡೋದು) ಒಂದು ವಿಶಿಷ್ಟ ಆಚರಣೆಯಾಗಿದೆ. ಇಲ್ಲಿ ಅಂಟಿಗೆಪಿಂಟಿಗೆ, ಭರತನಾಟ್ಯ, ಯಕ್ಷಗಾನದ ಜನಪ್ರಿಯ ಕಲಾವಿದರಿದ್ದಾರೆ. ತುಳುನಾಡಿನ ಮೂಲದ ಮಂದಿ ತೌಳವ ಸಂಸ್ಕೃತಿಯ ರೀತಿ-ರಿವಾಜು ಅನುಸರಿಸುತ್ತಾರೆ. ತೆಲುಗು ಮಾತಾಡುವ ಕ್ಷೌರಿಕ ಸಮುದಾಯವೂ ತೀರ್ಥಹಳ್ಳಿಯಲ್ಲಿ ಗಣನೀಯವಾಗಿದೆ.

ಶಾಂತವೇರಿ ಗೋಪಾಲ ಗೌಡ

ತೀರ್ಥಹಳ್ಳಿಗೆ ಆ ಹೆಸರು ಬರಲು ಕಾರಣವೆನ್ನಲಾದ ಎರಡು ದಂತ ಕಥೆಗಳಿವೆ. ಪೌರಾಣಿಕ ಹಿನ್ನೆಲೆಯ ಪರಶುರಾಮ ತೀರ್ಥ ಮತ್ತು ರಾಮಾಯಣದ ರಾಮತೀರ್ಥ ಇಲ್ಲಿರುವುದರಿಂದ ತೀರ್ಥಹಳ್ಳಿ ಎಂಬ ಹೆಸರು ರೂಢಿಗೆ ಬಂತೆನ್ನಲಾಗುತ್ತಿದೆ. ಭಾಷಾ ಶಾಸ್ತ್ರದ ಪ್ರಕಾರ ಹತ್ತಾರು ಝರಿ, ತೊರೆ, ಜಲಧಾರೆಗಳು ಇರುವುದರಿಂದ ತೀರ್ಥಹಳ್ಳಿ ನಾಮಕರಣ ಆಗಿರುವ ಸಾಧ್ಯತೆ ಹೆಚ್ಚಿದೆಯಂತೆ. ತೀರ್ಥಹಳ್ಳಿಯ ಮೃಗವಧೆ, ಬಿಚ್ಚಲಗುಡ್ಡೆ, ಕುಂದಾದ್ರಿ, ಕವಲೆದುರ್ಗ ಮುಂತಾದ ಪ್ರಾಕೃತಿಕ-ಐತಿಹಾಸಿಕ ಸ್ಥಳಗಳಿಗೆ ಅವುಗಳದೆ ಆದ ಸ್ಥಳನಾಮ ಪುರಾಣಗಳಿವೆ. ಕನ್ನಡ ತೀರ್ಥಹಳ್ಳಿಯ ಪ್ರಮುಖ ಬಾಷೆ; ವಿವಿಧ ಸಮುದಾಯಗಳ ತುಳು, ಹವ್ಯಕ ಕನ್ನಡ, ತಮಿಳು, ತೆಲಗು, ಕೊಂಕಣಿ, ಉರ್ದು ಕೂಟ ಕೇಳಿಬರುತ್ತವೆ.

ಕನ್ನಡದ ಖ್ಯಾತ ಸಾಹಿತಿಗಳಾದ ಕುವೆಂಪು (ಕೆ.ವಿ.ಪುಟ್ಟಪ್ಪ) ಹುಟ್ಟೂರು ತೀರ್ಥಹಳ್ಳಿ. ಸಾಹಿತಿ ಯು.ಆರ್.ಅನಂತಮುರ್ತಿ, ಸಾಹಿತಿ- ಪರಿಸರವಾದಿ ಪೂರ್ಣಚಂದ್ರ ತೇಜಸ್ವಿ, ಕವಿ ಎಸ್.ವಿ. ಪರಮೇಶ್ವರ ಭಟ್, ಕಾದಂಬರಿಕಾರ್ತಿ ಅನುಪಮಾ ನಿರಂಜನ, ಸಿನಿಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಸಾಹಿತಿ ಹಾ.ಮಾ.ನಾಯಕ್, ಸಿನಿಮಾ ಸಾಹಿತಿ ಕವಿರಾಜ್, ಸಿನಿಮಾ ನಿರ್ದೇಶಕ ಕೂಡ್ಲು ರಾಮಕೃಷ್ಣ, ಹೆಸರಾಂತ ಸಮಾಜವಾದಿ ದಾರ್ಶನಿಕ ಶಾಂತವೇರಿ ಗೋಪಾಲ ಗೌಡ, ತೀರಾ ತಳ ಸಮುದಾಯದಿಂದ (ಬೋವಿ) ಬಂದ ಸಮಾಜವಾದಿ ತತ್ವಾದರ್ಶದ-ಮಾಜಿ ಶಾಸಕ ಕೋಣಂದೂರು ಲಿಂಗಪ್ಪ, ಸ್ವಾತಂತ್ರ್ಯ-ರೈತ ಹೋರಾಟಗಾರ-ಕಾದಂಬರಿಕಾರ-ರಾಜ್ಯದ ಮೂರನೇ ಮುಖ್ಯಮಂತ್ರಿ ಕಡಿದಾಳ ಮಂಜಪ್ಪ, ಕೃಷಿ ಋಷಿಗಳಾದ ದೇವಂಗಿ ಪ್ರಫುಲ್ ಚಂದ್ರ ಮತ್ತು ಪುರುಷೋತ್ತಮ ರಾವ್ ತೀರ್ಥಹಳ್ಳಿಯಲ್ಲಿ ಹುಟ್ಟಿ ತಮ್ಮ ಕ್ಷೇತ್ರಗಳಲ್ಲಿ ಪ್ರಸಿದ್ಧರಾದ ಪ್ರತಿಭೆಗಳು!

ಎಂ. ವಿಶ್ವೇಶ್ವರಯ್ಯ 1962ರಲ್ಲಿ ಕಟ್ಟಿಸಿದ ತುಂಗಾ ಸೇತುವೆ ತೀರ್ಥಹಳ್ಳಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಕೆಳದಿ ಅರಸರ ಆಧೀನದಲ್ಲಿದ್ದ ಕವಲೆದುರ್ಗದಲ್ಲಿ 9ನೇ ಶತಮಾನದ ಮೂರು ಸುತ್ತಿನ ಕೋಟೆಯಿದೆ. ಜೈನರ ಪವಿತ್ರ ಯಾತ್ರಾಸ್ಥಳ ಕುಂದಾದ್ರಿಯಲ್ಲಿ ಪಾರ್ಶ್ವನಾಥ ಚೈತ್ಯಾಲಯವಿದೆ. ಇದು ಚಾರಣಿಗರಿಗೆ ಹೇಳಿಮಾಡಿಸಿದ ಗುಡ್ಡ. ಕುವೆಂಪು ಜನ್ಮಸ್ಥಳ ಕುಪ್ಪಳ್ಳಿ ಪ್ರಕೃತಿ ಸೌಂದರ್ಯದ ಹಳ್ಳಿ; ಕುವೆಂಪುರ ಮನೆಯನ್ನು ಮ್ಯೂಸಿಯಂ ಮಾಡಲಾಗಿದ್ದು, ಈ ಮನೆ ಮಲೆನಾಡಿನ ವಾಸ್ತುಶಿಲ್ಪಕ್ಕೆ ಅದ್ಭತ ಉದಾಹರಣೆಯಾಗಿದೆ. ವಸ್ತು ಸಂಗ್ರಾಹಲಯದ ಬಳಿ ಕವಿಶೈಲ ಎಂಬ ಬೆಟ್ಟವಿದೆ.

ತೀರ್ಥಹಳ್ಳಿಯ ನೈರುತ್ಯಕ್ಕೆ ಅದ್ವಿತೀಯ ಪ್ರಕೃತಿ ಸೌಂರ್ಯದ ಆಗುಂಬೆ ಘಟ್ಟವಿದೆ. ಸೂರ್ಯಾಸ್ತ ಮತ್ತು ಚಂದ್ರೋದಯದ ಸೊಬಗು ನೋಡಲು ಆಗುಂಬೆ ಗುಡ್ಡಕ್ಕೆ ಪ್ರವಾಸಿಗಳು ತಂಡೋಪತಂಡವಾಗಿ ಬರುತ್ತಾರೆ. ತೀರ್ಥಹಳ್ಳಿ ಬಳಿಯ ಬರ್ಕಣ ಜಲಪಾತ ಅತಿ ಎತ್ತರದಿಂದ ಧುಮುಕುವ ಜಲಪಾತಗಳಲ್ಲಿ ಒಂದಾಗಿದೆ. 850 ಅಡಿ ಎತ್ತರದಿಂದ ಬೀಳುವ ಸೀತಾ ನದಿಯ ಜಲಪಾತ ಇಲ್ಲಿ ಸೃಷ್ಟಿಯಾಗಿದೆ.

ಅಂಬುತೀರ್ಥದಲ್ಲಿ ಶರಾವತಿ ನದಿಯ ಉಗಮಸ್ಥಾನವಿದೆ. ತುಂಗಾ ನದಿ ತಟದಲ್ಲಿರುವ ಬಿಚ್ಚಲಗುಡ್ಡೆ ಜನಾಕರ್ಷಕ ಪ್ರದೇಶವಾಗಿದೆ. ಪ್ರಸಿದ್ಧ ಪಕ್ಷಿಧಾಮವಿರುವ ಮಂಡಗದ್ದೆಯಲ್ಲಿ ಸಯ್ಯದ್ ಸಾದತ್ ದರ್ಗಾ ಇದೆ.

ಬದುಕು ಮತ್ತು ಆರ್ಥಿಕತೆ

ತೀರ್ಥಹಳ್ಳಿ ಕೃಷಿ ಪ್ರಧಾನ ಸೀಮೆ; ಉಳ್ಳವರು ಭೂಹೀನರಿಂದ ದುಡಿಸಿಕೊಳ್ಳುತ್ತಾರೆ. ಹೀಗಾಗಿ ತೀರ್ಥಹಳ್ಳಿಯಲ್ಲಿ ದೊಡ್ಡ ಕೃಷಿ ಕಾರ್ಮಿಕ ಸಮೂಹವೆ ಇದೆ. ಇಲ್ಲಿಯ ಹೊಲ-ತೋಟದ ಹಸಿರು ಪಶ್ಚಿಮಘಟ್ಟದ ಬೆಟ್ಟದ ಹಸಿರಿನೊಂದಿಗೆ ಪೈಪೋಟಿಗಿಳಿದಂತೆ ಭಾಸವಾಗುತ್ತದೆ. ಇಡೀ ತೀರ್ಥಹಳ್ಳಿ ಹಚ್ಚ ಹಸುರಿನ ಖನಿ! ಭತ್ತ, ಅಡಿಕೆ, ಕಾಫಿ ಮುಖ್ಯ ಬೆಳೆಗಳು; ಅಡಿಕೆ ತೋಟದಲ್ಲಿ ಸಾಂಬಾರ ಬೆಳೆಗಳಾದ ಏಲಕ್ಕಿ, ಕಾಳು ಮೆಣಸು, ಬಾಳೆ ಕೃಷಿಯಿದೆ. ನೀರಾವರಿ ಸೌಲಭ್ಯಕ್ಕೆ ತಕ್ಕಂತೆ ರಾಗಿ, ಜೋಳ, ತೊಗರಿ, ಕಬ್ಬು ಬೆಳೆಯಲಾಗುತ್ತಿದೆ. ಈಗಿತ್ತಲಾಗಿ ಪುಷ್ಪ ಕೃಷಿ ನಡೆದಿದೆ. ಹೈನುಗಾರಿಕೆ ಮತ್ತು ಜೇನು ಸಾಕಾಣಿಕೆಯಿಂದ ಒಂದಿಷ್ಟು ಕುಟುಂಬಗಳು ಆದಾಯ ಕಂಡುಕೊಂಡಿವೆ. ತೀರ್ಥಹಳ್ಳಿಯ ಆರ್ಥಿಕತೆ ವಾಣಿಜ್ಯ ಬೆಳೆಗಳಾದ ಅಡಿಕೆ-ಕಾಳು ಮೆಣಸು ಫಸಲಿನ ವಹಿವಾಟಿನ ಮೇಲೆ ಅವಲಂಬಿಸಿದೆ. ಅಡಿಕೆ ಬೆಲೆ ತೇಜಿಯಾಗಿರುವುದರಿಂದ ಪ್ರಮುಖ ಅಡಿಕೆ ವ್ಯಾಪಾರ ಕೇಂದ್ರವಾದ ತೀರ್ಥಹಳ್ಳಿಯಲ್ಲಿ ಲವಲವಿಕೆಯಿದೆ; ತೋಟಿಗರು ಮತ್ತು ತೋಟದ ಕಾರ್ಮಿಕರಲ್ಲಿ ಕೊಂಚ ಸಮಾಧಾನ ಮೂಡಿದೆ. ಗಾಂಜಾ, ಅಕ್ರಮ ಮರಳುಗಾರಿಕೆ ಮತ್ತು ಶಿಲೆ ಕಲ್ಲು ವಹಿವಾಟಿನಿಂದ ಪೇಟೆಯಲ್ಲಿ ಹಣದ ಹರಿದಾಟ ಹೆಚ್ಚಿದೆಯೆಂಬ ಮಾತುಗಳೂ ಕೇಳಿಬರುತ್ತದೆ.

ಬಿ. ವೈ. ರಾಘವೇಂದ್ರ

ದುಡಿವ ಕೈಗಳಿಗೆ ಕೆಲಸ ಕೊಡುವಂಥ ಕೈಗಾರಿಕೆ ಉದ್ಯಮ ತೀರ್ಥಹಳ್ಳಿಯಲ್ಲಿಲ್ಲ; ಯುವಕರು ಉದ್ಯೋಗ ಅರಸಿ ದೊಡ್ಡ ನಗರಗಳತ್ತ ಹೋಗುತ್ತಿದ್ದಾರೆ. ಮಿನರಲ್ ವಾಟರ್ ತಯಾರಿಕಾ ಘಟಕಗಳು, ಜೆಸಿಬಿ ಬಿಡಿ ಭಾಗ ಮತ್ತು ಅಡಿಕೆ ಸುಲಿಯುವ ಯಂತ್ರ ತಯಾರಿಸುವ ಘಟಕಗಳು, ಗೇರು ಸಂಸ್ಕರಣಾ ಫ್ಯಾಕ್ಟರಿಗಳು ಇವೆಯಾದರೂ ಅಲ್ಲಿ ದೊಡ್ಡಮಟ್ಟದ ಉದ್ಯೋಗಾವಕಾಶವಿಲ್ಲ. ಹಪ್ಪಳ-ಸಂಡಿಗೆ-ಅಡಿಕೆ ಹಾಳೆ ಪ್ಲೇಟು-ಲೋಟ ತಯಾರಿಕೆಯಂಥ ಸಣ್ಣ ಪ್ರಮಾಣದ ಗೃಹ ಕೈಗಾರಿಕೆಗಳಿವೆ. ಕೊಂಕಣಿಗಳು(ಜಿಎಸ್‌ಬಿ), ಬಂಟರು, ಬ್ರಾಹ್ಮಣರು ಮತ್ತು ಮುಸ್ಲಿಮರು
ತೀರ್ಥಹಳ್ಳಿಯ ಪೇಟೆಯಲ್ಲಿ ವ್ಯಾಪಾರ-ವಹಿವಾಟು ನಡೆಸಿಕೊಂಡಿದ್ದಾರೆ. ವ್ಯಾಪಾರಿ ಮತ್ತು ಶೈಕ್ಷಣಿಕ ಕೇಂದ್ರವಾದ ತೀರ್ಥಹಳ್ಳಿಯಲ್ಲಿ ಸಾಕ್ಷರತಾ ಪ್ರಮಾಣವೂ ಹಚ್ಚಿದೆ. ಆದರೆ ಮಡಿ-ಮೈಲಿಗೆ, ಮೇಲು-ಕೀಳು, ಶೂದ್ರ-ಬ್ರಾಹ್ಮಣ ತಾರತಮ್ಯ ನಾಜೂಕಾಗಿ ನಡೆದುಕೊಂಡಿದೆ.

ವ್ಯಾಪಾರಿ ಚಾಕಚಕ್ಯತೆಗೆ ಕರಗತವಾಗಿರುವ ಕೊಂಕಣಿಗರ ಹಿಡಿತ ಮಾರುಕಟ್ಟೆಯ ಮೇಲಿದೆ ಎನ್ನಲಾಗುತ್ತಿದೆ. ತಾಲೂಕಿನಾದ್ಯಂತ ಹಲವು ಆಕರ್ಷಕವಾದ ಪ್ರಾಕೃತಿಕ ಮತ್ತು ಐತಿಹಾಸಿಕ ತಾಣಗಳಿದ್ದರೂ ಅಧಿಕಾರಸ್ಥರು ಸರಣಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಯೋಚನೆ ಮಾಡುತ್ತಿಲ್ಲ; ಇಂಥ ಪ್ರವಾಸೋದ್ಯಮ ಯೋಜನೆಯಿಂದ ಒಂದಿಷ್ಟು ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಗುತ್ತಿತ್ತೆಂದು ಜನರು ಬೇಸರದಿಂದ ಹೇಳುತ್ತಾರೆ. ನಿರುದ್ಯೋಗಿಗಳಿಗೆ ಸ್ಥಳೀಯವಾಗಿ ಬದುಕುಕಟ್ಟಿಕೊಳ್ಳಲು ಅನುಕೂಲ ಕಲ್ಪಿಸುವಂಥಹ ಆರ್ಥಿಕ-ಔದ್ಯೋಗಿಕ ಯೋಜನೆ-ಯೋಚನೆ ಶಾಸಕ ಅರಗ ಜ್ಞಾನೇಂದ್ರ ಅಥವಾ ಸಂಸದ ರಾಘವೇಂದ್ರರಲ್ಲಿಲ್ಲ ಎಂಬ ಕೊರಗು ಕ್ಷೇತ್ರದಲ್ಲಿದೆ!

ಶಾಂತವೇರಿ ಮತ್ತು ಕಡಿದಾಳ ಕಾಲಕೀರ್ದಿ!

ಒಕ್ಕಲಿಗರ ರಾಜಕೀಯ ಆಡೊಂಬೊಲದಂತಾಗಿರುವ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ರಾಜ್ಯದ ಭೌಗೋಳಿಕ ವಿಸ್ತಾರದ ಕ್ಷೇತ್ರಗಳಲ್ಲಿ ಒಂದು. ಸಂಪೂರ್ಣ ತೀರ್ಥಹಳ್ಳಿ ತಾಲೂಕು, ಹೊಸನಗರ ತಾಲೂಕಿನ ಹುಂಚ ಹಾಗೂ ನಗರ ಹೋಬಳಿ ಮತ್ತು ಶಿವಮೊಗ್ಗದ ನಿದಿಗೆ-2ನೇ ಹೋಬಳಿ ಈ ಕ್ಷೇತ್ರದಲ್ಲಿದೆ. ಶಿವಮೊಗ್ಗ ಕ್ಷೇತ್ರದ ವ್ಯಾಪ್ತಿ ದೊಡ್ಡದಾದರೂ ಮತದಾರರು ಮಾತ್ರ ಜಿಲ್ಲೆಯ ಉಳಿದೆಲ್ಲ ಕ್ಷೇತ್ರಕ್ಕಿಂತ ಕಮ್ಮಿ. ಜನಪರ ನೀತಿ-ನಿಲುವಿನ ಅತ್ಯುತ್ತಮ ನಾಯಕರನ್ನು ಹಲವು ಬಾರಿಗೆ ಆರಿಸಿ ಶಾಸಕನಾಗಿ ಮಾಡಿದ ಕ್ಷೇತ್ರವಿದು. ಅಪ್ಪಟ ಗಾಂಧಿವಾದಿ-ರೈತ ಹೋರಾಟಗಾರ ಕಡಿದಾಳ್ ಮಂಜಪ್ಪ, ಸಮಾಜವಾದಿ-ಗೇಣಿ ರೈತ ಚಳವಳಿಗಾರ ಶಾಂತವೇರಿ ಗೋಪಾಲ ಗೌಡ ಮತ್ತು ಗೋಪಾಲ ಗೌಡರ ಶಿಷ್ಯ-ದಲಿತ ಸಮುದಾಯದ ಕೋಣಂದೂರು ಲಿಂಗಪ್ಪರಂಥ ತೀರಾ ಸಾಮಾನ್ಯರನ್ನು ಗೆಲ್ಲಿಸಿದ ಮಹಿಮೆ ತೀರ್ಥಹಳ್ಳಿ ಕೇತ್ರದ್ದು. ಬಾಬರಿ ಮಸೀದಿ ಧ್ವಂಸದ ಬಳಿಕ ಧರ್ಮಕಾರಣದ ಸುಳಿಗೆ ಸಿಲುಕಿದ ತೀರ್ಥಹಳ್ಳಿ ಕ್ಷೇತ್ರ ಸಮಾಜವಾದಿ-ಗಾಂಧಿವಾದಿ ತತ್ವಾದರ್ಶಕ್ಕೆ ತದ್ವಿರುದ್ಧವಾದ ಗೊಲ್ವಾಳ್ಕರ್-ಸಾವರ್ಕರ್ ಸಿದ್ಧಾಂತಿಗಳ ಸುಪರ್ದಿಗೆ ಒಳಪಟ್ಟಿರುವುದು ವಿಪರ್‍ಯಾಸವೆಂದು ವ್ಯಾಖ್ಯಾನಿಸಲಾಗುತ್ತಿದೆ!

ಹುಟ್ಟಿನಿಂದ ಒಕ್ಕಲಿಗರಾದರೂ ಜಾತ್ಯತೀತರಾಗಿದ್ದ ಕಡಿದಾಳ ಮಂಜಪ್ಪ ತೀರ್ಥಹಳ್ಳಿಯ ಮೊಟ್ಟಮೊದಲ ಶಾಸಕರು. 1952ರಲ್ಲಿ ಮಂಜಪ್ಪನವರು ಶಾಸನಸಭೆ ಪ್ರವೇಶಿಸಿದಾಗ 26 ವರ್ಷದ ಯುವ ಮುಂದಾಳು. ಕಾನೂನು ವಿದ್ಯಾಭ್ಯಾಸ ಮಾಡಿದ್ದ ಮಂಜಪ್ಪ ಕೆಂಗಲ್ ಹನುಮಂತಯ್ಯರ ಸರಕಾರದಲ್ಲಿ ಕಂದಾಯ-ಲೋಕೋಪಯೋಗಿ ಮಂತ್ರಿಯಾಗಿದ್ದರು. 78 ದಿನ ಮುಖ್ಯಮಂತ್ರಿಯೂ ಆಗಿದ್ದ ಮಂಜಪ್ಪ 32 ವರ್ಷ ರಾಜ್ಯ-ದೇಶದ ವಿವಿಧ ಅಧಿಕಾರ ಸ್ಥಾನದಲ್ಲಿದ್ದರು; ತಮ್ಮ ರಾಜಕೀಯ ಅಧಿಕಾರದುದ್ದಕ್ಕೂ ತತ್ವನಿಷ್ಠ-ಭ್ರಷ್ಟಾಚಾರತೀತರೆಂಬ ಪಾವಿತ್ರ್ಯ ಉಳಿಸಿಕೊಂಡಿದ್ದರು. ಗೇಣಿ ರೈತರ ಕಷ್ಟ ಅತಿ ಹತ್ತಿರದಿಂದ ಕಂಡಿದ್ದ ಮಂಜಪ್ಪ ಕಂದಾಯ ಮಂತ್ರಿಯಾಗಿದ್ದಾಗ ಗೇಣಿ ಶಾಸನ-ಇನಾಮ್ ರದ್ದತಿ ಮತ್ತು 1961ರಲ್ಲಿ ಭೂಸುಧಾರಣಾ ಕಾಯ್ದೆ ಜಾರಿಗೆ ತಂದಿದ್ದರು. ಸಾಹಿತಿಯೂ ಆಗಿದ್ದ ಮಂಜಪ್ಪ ಸ್ವಾತಂತ್ರ್ಯ ಹೋರಾಟ-ರೈತ ಚಳವಳಿ ವಸ್ತುವಿರುವ ಕಾದಂಬರಿ ಬರೆದಿದ್ದಾರೆ. ಅವರ ಮಡದಿ ಲಕ್ಷ್ಮೀದೇವಿಯೂ ಲೇಖಕಿಯಾಗಿದ್ದರು.

1957ರ ಚುನಾವಣೆಯಲ್ಲಿ ಮಂಜಪ್ಪನವರು ತೀರ್ಥಹಳ್ಳಿಯಿಂದ ಸ್ಪರ್ಧಿಸಲಿಲ್ಲ; ಪಕ್ಕದ ಶೃಂಗೇರಿ ಕ್ಷೇತ್ರದಲ್ಲಿ ಅವಿರೋಧ ಆಯ್ಕೆಯಾಗಿದ್ದರು. 1957ರ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದ ಬ್ರಾಹ್ಮಣ ಸಮುದಾಯದ ಎ.ಆರ್.ಬದರಿನಾರಾಯಣ 23,131 ಮತಪಡೆದು ಶಾಸಕನಾಗಿದ್ದರು. ಕಾಗೋಡು ಸತ್ಯಾಗ್ರಹದ ಮುಂಚೂಣಿಯಲ್ಲಿದ್ದ ಶಾಂತವೇರಿ ಗೋಪಾಲ ಗೌಡರು ಸಮಾಜವಾದಿ ಪಕ್ಷದ ಹುರಿಯಾಳಾಗಿ 1962ರ ಚುನಾವನಾ ಅಖಾಡಕ್ಕೆ ಇಳಿಯುತ್ತಾರೆ. 18,649 ಮತ ಪಡೆದ ಗೋಪಾಲ ಗೌಡರು ಕಾಂಗ್ರೆಸ್‌ನ ಕೆ.ಟಿ.ದಾನಮ್ಮರನ್ನು (6,085) ದೊಡ್ಡ ಅಂತರದಲ್ಲಿ ಪರಾಭವಗೊಳಿಸಿ ಎರಡನೆ ಬಾರಿ (ಮೊದಲ ಸಲ ಸಾಗರದ ಶಾಸಕರು) ಶಾಸನಸಭೆಗೆ ಹೋಗುತ್ತಾರೆ. 1967ರಲ್ಲಿ ಸಂಘಟಿತ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ ಗೋಪಾಲಗೌಡರು (21,963) ಕಾಂಗ್ರೆಸ್ ಎದುರಾಳಿ ಬಿ.ಎಸ್.ವಿಶ್ವನಾಥ್‌ರನ್ನು (16,262) ಸೋಲಿಸುತ್ತಾರೆ. 1972ರ ಚುನಾವಣೆ ಎದುರಾದಾಗ ಅನಾರೋಗ್ಯದಿಂದಾಗಿ ಗೋಪಾಲ ಗೌಡರಿಗೆ  ಸ್ಪರ್ಧೆಗಿಳಿಯಲು ಸಾಧ್ಯವಾಗುವುದಿಲ್ಲ. ಆ ಸಂದರ್ಭದಲ್ಲಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಾರ್ಟಿ ತೀರ್ಥಹಳ್ಳಿಯಲ್ಲಿ ಪ್ರಬಲವಾಗಿ ಬೆಳೆದಿರುತ್ತದೆ. ಗೋಪಾಲ ಗೌಡರ ಗರಡಿಯಲ್ಲಿ ಪಳಗಿದ್ದ ಬೋವಿ (ದಲಿತ) ಜನಾಂಗದ ಕಾನೂನು ಪದವೀಧರ ಕೋಣಂದೂರು ಲಿಂಗಪ್ಪ ತೀರ್ಥಹಳ್ಳಿಯಲ್ಲಿ ಬಲಾಢ್ಯರೆನಿಸಿದ್ದ ಹಲವು ಮುಖಂಡರನ್ನು ಸಂಧಿಸಿ ಚುನಾವಣೆಗೆ ನಿಲ್ಲುವಂತೆ ಕೇಳಿಕೊಳ್ಳುತ್ತಾರೆ. ಆದರೆ ಕಮ್ಯುನಿಸ್ಟ್ ಹಾಗು ಕಾಂಗ್ರೆಸ್ ಭಯದಿಂದ ಯಾರೂ ಒಪ್ಪುವುದಿಲ್ಲ.

ಕೋಣಂದೂರು ಲಿಂಗಪ್ಪ

ಅನಿವಾರ್ಯವಾಗಿ ಲಿಂಗಪ್ಪನವರೆ ಸ್ಪರ್ದೆಗೆ ಸಿದ್ಧವಾಗುತ್ತಾರೆ. ಆದರೆ ತೀರ್ಥಹಳ್ಳಿ ಬಸ್ ಸ್ಟ್ಯಾಂಡಿನಲ್ಲಿ ಹಮಾಲಿ ವೃತ್ತಿ ಮಾಡುತ್ತಿದ್ದವರ ಮಗ ಲಿಂಗಪ್ಪರಲ್ಲಿ ಠೇವಣಿ ಕಟ್ಟಲಿಕ್ಕೂ ಕಾಸು ಇರವುದಿಲ್ಲ. ಸಮಾಜವಾದಿ ಪಾರ್ಟಿಯ ಹಿತೈಷಿಯೊಬ್ಬರು ಠೇವಣಿ ಮೊತ್ತ ಕೊಡುತ್ತಾರೆ. ಸಂಯುಕ್ತ ಸಮಾಜವಾದಿ ಪಕ್ಷದ ಅಭ್ಯರ್ಥಿ ಕೋಣಂದೂರು ಲಿಂಗಪ್ಪ (15,425), ಕಾಂಗ್ರೆಸ್‌ನ ಕೆ.ಟಿ.ದಾನಮ್ಮ (12,859) ಮತ್ತು ಸಿಪಿಎಂ ಪಕ್ಷದ ಅಣ್ಣಪ್ಪ ಹೆಗಡೆ (12,242) ಮಧ್ಯೆ ಕತ್ತು-ಕತ್ತಿನ ಹೋರಾಟವಾಯಿತು. ಗೋಪಾಲ ಗೌಡರು ಕ್ಷೇತ್ರದಲ್ಲಿ ಮೂಡಿಸಿದ್ದ ಸಮಾಜವಾದಿ ಪ್ರಜ್ಞೆಯಿಂದ ಲಿಂಗಪ್ಪ ಶಾಸಕರಾಗಿ ಆಯ್ಕೆಯಾದರು! ಶಾಸನಸಭೆಯಲ್ಲಿ ಲಿಂಗಪ್ಪ ತಮ್ಮ ಸೋಷಲಿಸ್ಟ್ ಒಡನಾಡಿಗಳಾದ ಬಂಗಾರಪ್ಪ, ಕಾಗೋಡು ತಿಮ್ಮಪ್ಪರ ಜತೆ ಸೇರಿಕೊಂಡು ಅಂದಿನ ಪ್ರಬಲ ಸಿಎಂ ದೇವರಾಜ ಅರಸರಿಗೆ ಪ್ರತಿರೋಧ ಒಡ್ಡುತ್ತಿದ್ದರು.

ಬದಲಾದ ಚಿತ್ರಣ

1978ರ ಚುನಾವಣೆ ಹೊತ್ತಲ್ಲಿ ಸಮಾಜವಾದಿ ಪಾರ್ಟಿಯ ಕಾಗೋಡು ಮತ್ತು ಕೋಣಂದೂರು ಜನತಾ ಪರಿವಾರ ಸೇರಿದರೆ, ಬಂಗಾರಪ್ಪ ಕಾಂಗ್ರೆಸ್‌ಗೆ ಹೋದರು. ಆ ಸಂದರ್ಭದಲ್ಲಿ ತೀರ್ಥಹಳ್ಳಿಯ ರಾಜಕೀಯ ಚಿತ್ರಣವು ಬದಲಾಯಿತೆಂದು ಅಂದಿನ ರಾಜಕಾರಣ ಬಲ್ಲ ಹಿರಿಯರು ಹೇಳುತ್ತಾರೆ. ಶಾಸಕ ಕೋಣಂದೂರು 1978ರಲ್ಲಿ ಜನತಾ ಪಕ್ಷ ಕ್ಯಾಂಡಿಡೇಟಾದರು. ಪ್ರಬಲ ಒಕ್ಕಲಿಗ ಜಾತಿಯ ಕಡಿದಾಳ ದಿವಾಕರ್ ಕಾಂಗ್ರೆಸ್ ಹುರಿಯಾಳು. ಇಂದಿರಾ ಗಾಂಧಿ ಅಲೆ ಮತ್ತು ಸ್ಥಳೀಯ ಬಲಾಢ್ಯ ಒಕ್ಕಲಿಗ ಜಾತಿರಾಜಕಾರಣವನ್ನು ದಲಿತ ಸಮುದಾಯದ ಲಿಂಗಪ್ಪನವರಿಗೆ ಎದುರಿಸುವುದು ಕಷ್ಟವಾಯಿತು ಎನ್ನಲಾಗುತ್ತಿದೆ. ಕಡಿದಾಳ ದಿವಾಕರ್ 17,860 ಮತಗಳ ಅಂತರದಿಂದ ಲಿಂಗಪ್ಪರನ್ನು ಸೋಲಿಸಿದರು. ಬಂಗಾರಪ್ಪ ಕಾಂಗ್ರೆಸ್ ತೊರೆದಾಗ ಕಾಗೋಡು ಕಾಂಗ್ರೆಸ್ ಸೇರಿದರು. ಸಾಹಿತ್ಯ ರಚನೆ, ಕನ್ನಡ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಲಿಂಗಪ್ಪ ಮಾತ್ರ ನಿಷ್ಟೆಯಿಂದ ಜನತಾ ಪಕ್ಷದಲ್ಲೆ ಉಳಿದುಕೊಂಡರು.

ಆ ಬಳಿಕ ರಾಜಕೀಯದ ನೇಪಥ್ಯಕ್ಕೆ ಸರಿದ ಲಿಂಗಪ್ಪರಿಗೆ 1983ರಲ್ಲಿ ಜನತಾರಂಗದ ಟಿಕೆಟ್ ಸಿಗಲಿಲ್ಲ. ಜನತಾರಂಗದ ಆಯಕಟ್ಟಿನ ಸ್ಥಾನದಲ್ಲಿದ್ದ ಬಂಗಾರಪ್ಪ ಮತ್ತು ಲಿಂಗಪ್ಪರ ಸಂಬಂಧವೂ ಸರಿಯಿರಲಿಲ್ಲ. 1983ರಲ್ಲಿ ಮೂಡಿಗೆರೆ ಮೂಲದ-ಸಮಾಜವಾದಿ ಹಿನ್ನೆಲೆಯ ಡಿ.ಬಿ.ಚಂದ್ರೇಗೌಡ ಜನತಾ ಪಕ್ಷ(ರಂಗ)ದ ಅಭ್ಯರ್ಥಿಯಾದರು. ದೇವರಾಜ ಅರಸುರಿಗೆ ಆಪ್ತರಾಗಿದ್ದ ಕ್ರಾಂತಿರಂಗದ ಅಧ್ಯಕ್ಷ ಚಂದ್ರೇಗೌಡ ಮತ್ತು ಕಾಂಗ್ರೆಸ್‌ನ ಕಡಿದಾಳ ದಿವಾಕರ್ ನಡುವೆ ಹಣಾಹಣಿ ಏರ್‍ಪಟ್ಟಿತ್ತು. ಒಕ್ಕಲಿಗರ ಈ ಕಾಳಗದಲ್ಲಿ ಚಂದ್ರೇಗೌಡ 2,371 ಮತಗಳ ಸಣ್ಣ ಅಂತರದಲ್ಲಿ ದಡ ಸೇರಿದರು. ರಾಮಕೃಷ್ಣ ಹೆಗಡೆ ನೇತೃತ್ವದ ಜನತಾರಂಗ ಸರಕಾರ ರಚನೆಯಾದಾಗ ಚಂದ್ರೇಗೌಡರನ್ನು ವಿಧಾನಸಭೆಯ ಸ್ಪೀಕರ್ ಮಾಡಲಾಯಿತು.

ಚಂದ್ರೇಗೌಡರಿಗೆ 1985ರ ನಡುಗಾಲ ಚುನಾವಣೆಯಲ್ಲಿ ಸ್ಥಳೀಯ ಒಕ್ಕಲಿಗ ಸಮುದಾಯದ ಪಟಮಕ್ಕಿ ರತ್ನಾಕರ್‌ರನ್ನು ಎದುರಿಸುವುದು ಕಷ್ಟವಾಯಿತು. ಈ ಕತ್ತು-ಕತ್ತಿನ ಕದನ ಕುತೂಹಲದಲ್ಲಿ ಪಟಮಕ್ಕಿ ರತ್ನಾಕರ್ ಕೇವಲ 74 ಮತದಿಂದ ಚಂದ್ರೇಗೌಡರನ್ನು (29,248) ಮಣಿಸಿ ಶಾಸಕನಾದರು! ಜನತಾ ದಳದಲ್ಲಿ ಪ್ರಮುಖ ನಾಯಕನಾಗಿ ಗುರುತಿಸಲ್ಪಟ್ಟಿದ್ದ ಚಂದ್ರೇಗೌಡರು 1986ರಲ್ಲಿ ರಾಜ್ಯಸಭೆಯ ಸದಸ್ಯರಾದರು. 1989ರ ಚುನಾವಣೆ ಹೊತ್ತಲ್ಲಿ ರಾಜ್ಯಸಭೆಯ ಸದಸ್ಯರಾಗಿದ್ದೂ ಚಂದ್ರೇಗೌಡ ತೀರ್ಥಹಳ್ಳಿ ಆಖಾಡಕ್ಕಿಳಿದಿದ್ದರು. 1983ರಲ್ಲಿ ಚಂದ್ರೇಗೌಡರೆದುರು ಸೊಲನುಭವಿಸಿದ್ದ ಕಡಿದಾಳ ದಿವಾಕರ್ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿದರು. 3,145 ಮತದಂತರದಿಂದ ಗೆಲುವು ಸಾಧಿಸಿದ ಚಂದ್ರೇಗೌಡರು ಕಾಂಗ್ರೆಸ್‌ನ ವೀರೇಂದ್ರ ಪಾಟೀಲ್ ಸರಕಾದ ಎದುರು ವಿರೋಧ ಪಕ್ಷದ ನಾಯಕನಾದರು. ಆ ನಂತರ ಕಾಂಗ್ರೆಸ್, ಬಿಜೆಪಿ ಎಂದು ಅಧಿಕಾರ ಗದ್ದುಗೆ ಸುತ್ತ ಗಿರಕಿಹೊಡೆದ ಚಂದ್ರೇಗೌಡರು ಎಲ್ಲೂ ಸಲ್ಲದವರಾಗಿದ್ದಾರೆಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

ಕೇಸರಿ ಚಹರೆ

ಬಾಬರಿ ಮಸೀದಿ ಧ್ವಂಸ, ಪಕ್ಕದ ಕರಾವಳಿಯ ಹಿಂದುತ್ವದ ಪ್ರಭಾವ ಮತ್ತು ಸ್ಥಳೀಯ ಆರ್‌ಎಸ್‌ಎಸ್ ಲೀಡರ್‌ಗಳ ಗುಪ್ತಗಾಮಿ ಕಾರ್ಯಾಚರಣೆಯಿಂದ 1994ರ ಅಸೆಂಬ್ಲಿ ಇಲೆಕ್ಷನ್ ನಡೆಯುವ ವೇಳೆಗೆ ತೀರ್ಥಹಳ್ಳಿ ನಿಧಾನಕ್ಕೆ ಕೇಸರಿ ಚಹರೆ ಪಡೆದುಕೊಂಡಿತು ಎನ್ನಲಾಗುತ್ತಿದೆ. 1983ರಲ್ಲಿ ಆರಂಭವಾದ ಜನತಾ ಪಕ್ಷ-ದಳ-ಜೆಡಿಎಸ್ ಪ್ರಭಾವ ಇವತ್ತಿಗೂ ಕ್ಷೇತ್ರದಲ್ಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಯ ಸೋಲು-ಗೆಲುವು ನಿರ್ಧರಿಸುವಷ್ಟು ನಿರ್ಣಾಯಕ ಮತ ಜನತಾ ದಳ ಪಡೆಯುತ್ತಿದೆ ಎಂಬ ಲೆಕ್ಕಾಚಾರವಿದೆ. ಒಟ್ಟು 1,84,189 ಮತದಾರರಿರುವ ತೀರ್ಥಹಳ್ಳಿಯಲ್ಲಿ ಒಕ್ಕಲಿಗರು 45 ಸಾವಿರ, ಈಡಿಗರು (ದೀವರು ಮತ್ತು ಬಿಲ್ಲವರು) 40 ಸಾವಿರ, ದಲಿತರು 26 ಸಾವಿರ, ಮುಸ್ಲಿಮರು 20 ಸಾವಿರ, ಮೊಗವೀರರು, ಬ್ರಾಹ್ಮಣರು ಮತ್ತು ಬಂಟರು ತಲಾ 10 ಸಾವಿರ, ವಿಶ್ವಕರ್ಮ 8 ಸಾವಿರ ಮತ್ತು ಲಿಂಗಾಯತರು 3 ಸಾವಿರ ಇರಬಹುದೆಂದು ಅಂದಾಜಿಸಲಾಗಿದೆ.

ಆರೆಸ್ಸೆಸ್ ಶಾಖಾ ಮಾಸ್ತರ್, ಎಬಿವಿಪಿ ಕೇಡರ್‌ನ ಇಂದಿನ ಗೃಹಮಂತ್ರಿ ಅರಗ ಜ್ಞಾನೇಂದ್ರ 1994ರ ಬಾಬರಿ ಮಸೀದಿ ಧ್ವಂಸದ ಹವಾದಲ್ಲಿ ತೇಲಿ ಅಸೆಂಬ್ಲಿ ತಲುಪಿದರೆಂಬ ಮಾತು ಕ್ಷೇತ್ರದಲ್ಲಿ ಜನಜನಿತವಾಗಿದೆ. 1983ರಿಂದ ನಿರಂತರವಾಗಿ ಮೂರು ಬಾರಿ ಬಿಜೆಪಿ ಉಮೇದುವಾರನಾಗಿ ಅಖಾಡಕ್ಕಿಳಿದು ಹೀನಾಯವಾಗಿ ಸೋಲನುಭವಿಸಿದ್ದ ಅರಗ ಜ್ಞಾನೇಂದ್ರ 1986ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದರು. 1994ರಲ್ಲಿ ಶಾಸಕರಾಗಿದ್ದ ಜನತಾ ದಳದ ಚಂದ್ರೇಗೌಡ, ಬಿಜೆಪಿಯ ಅರಗ ಜ್ಞಾನೇಂದ್ರ ಮತ್ತು ಕಾಂಗ್ರೆಸ್ ಮಧ್ಯೆ ತ್ರಿಕೋನ ಹಣಾಹಣಿ ಏರ್‍ಪಟ್ಟಿತ್ತು. ಚಂದ್ರೇಗೌಡರನ್ನು(28,488) ಅರಗ ಜ್ಞಾನೇಂದ್ರ 2,952 ಮತದಿಂದ ಸೋಲಿಸಿದರು. 1999ರ ಚುನಾವಣೆ ಬರುವಾಗ ಚಂದ್ರೇಗೌಡ ಜನತಾ ದಳದಿಂದ ಕಾಂಗ್ರೆಸ್‌ಗೆ ಹೋಗಿದ್ದರು. ಶೃಂಗೇರಿಯಿಂದ ಕಾಂಗ್ರೆಸ್ ಹುರಿಯಾಳಾಗಿ ಗೆದ್ದುಬಂದ ಚಂದ್ರೇಗೌಡರಿಗೆ ಎಸ್.ಎಂ.ಕೃಷ್ಣ ಮಂತ್ರಿ ಮಾಡಿದರು. ಇತ್ತ ತೀರ್ಥಹಳ್ಳಿಯಲ್ಲಿ ಬಿಜೆಪಿಯ ಅರಗ ಜ್ಞಾನೇಂದ್ರ ಮತ್ತು ಜೆಡಿಎಸ್‌ನ ಕಿಮ್ಮನೆ ರತ್ನಾಕರ್ ನಡುವೆ ಸಮಬಲದ ಹೋರಾಟ ನಡೆಯಿತು. ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟ ಆ ಇಲೆಕ್ಷನ್‌ನಲ್ಲಿ ಬಿಜೆಪಿಯ ಜ್ಞಾನೇಂದ್ರ 4,102 ಓಟುಗಳಿಂದ ಗೆಲುವು ಕಂಡರು.

2004ರಲ್ಲಿ ಬಿಜೆಪಿಯ ಜ್ಞಾನೇಂದ್ರ ಹ್ಯಾಟ್ರಿಕ್ ವಿಜಯ ದಾಖಲಿಸಿದರಾದರೂ ಗೆಲ್ಲಲು ಅಕ್ಷರಶಃ ತಿಣುಕಾಡಬೇಕಾಯಿತು. ಜೆಡಿಎಸ್‌ನಿಂದ ಗೆಲುವು ಕಷ್ಟವೆಂದು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕಿಮ್ಮನೆ ರತ್ನಾಕರ್ ಪ್ರಬಲ ಹೋರಾಟ ಕೊಟ್ಟು 46,468 ಮತ ಗಳಿಸಿದರು. ಸರಳ-ಸಜ್ಜನ-ಜಾತ್ಯತೀತ ಮತ್ತು ಕ್ಷೇತ್ರದ ಬೇಕು-ಬೇಡದ ಅರಿವಿನ ಅಭ್ಯರ್ಥಿ ಎಂಬ ಇಮೇಜಿನ ರತ್ನಾಕರ್ ಗೆಲುವಿನ ಬಾಗಿಲಿಗೆ ಬಂದು ತೀರಾ ಸಣ್ಣ ಅಂತರದಲ್ಲಿ (1,366) ಎಡವಿದರು. 2008ರಲ್ಲಿ ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ್ (57,932) ಬಿಜೆಪಿಯ ಅರಗ ಜ್ಞಾನೇಂದ್ರರನ್ನು (54,1063) ಮಣಿಸಿದರು! 2013ರಲ್ಲಿ ಕಾಂಗ್ರೆಸ್‌ನ ಕಿಮ್ಮನೆ, ಬಿಜೆಪಿಯ ಅರಗ ಮತ್ತು ಯಡಿಯೂರಪ್ಪರ ಕೆಜೆಪಿಯ ಮಂಜುನಾಥ ಗೌಡರಲ್ಲಿ ತೀವ್ರ ಪೈಪೋಟಿ ಏರ್‍ಪಟ್ಟಿತು! ಕಿಮ್ಮನೆ (37,160) ನಿಕಟ ಪ್ರತಿಸ್ಪರ್ಧಿ ಮಂಜುನಾಥ ಗೌಡರನ್ನು (35,817) ಸೋಲಿಸಿ ಎರಡನೇ ಬಾರಿ ಶಾಸಕರಾದರೆ, ಬಿಜೆಪಿಯ ಅರಗ ಮೂರನೆ ಸ್ಥಾನಕ್ಕೆ ತಲುಪಿದ್ದರು! ಕಿಮ್ಮನೆಯವರನ್ನು ಸಿದ್ದರಾಮಯ್ಯ ತಮ್ಮ ಸರಕಾರದಲ್ಲಿ ಪ್ರೌಢ ಶಿಕ್ಷಣ ಖಾತೆಯ ರಾಜ್ಯ ಮಂತ್ರಿ ಮಾಡಿದರು.

2018ರ ಇಲೆಕ್ಷನ್ ಹತ್ತಿರ ಬಂದಾಗ ನಡೆದ ವಿದ್ಯಾರ್ಥಿನಿ ನಂದಿತಾ ಆತ್ಮಹತ್ಯೆ ಪ್ರಕರಣಕ್ಕೆ ಮುಸ್ಲಿಮರು ಕಾರಣವೆಂದು ಬಿಂಬಿಸಿ ಭೀಭತ್ಸ ಕೋಮು ಗಲಭೆ ಭುಗಿಲೇಳುವಂತೆ ಮಾಡಲಾಯಿತು; ಶಾಸಕ ಕಿಮ್ಮನೆ ಅರೋಪಿಗಳಿಗೆ ರಕ್ಷಿಸುತ್ತಾರೆಂದು ಹುಸಿ ಹುಯಿಲು ಎಬ್ಬಿಸಲಾಯಿತು. ಇದರೊಂದಿಗೆ ಪಕ್ಕದ ಕರಾವಳಿಯಲ್ಲಾದ ಕೋಮು ಧ್ರುವೀಕರಣದ ಅಡ್ಡಪರಿಣಾಮ ತೀರ್ಥಹಳ್ಳಿಯಲ್ಲಾಗಿತ್ತು. ಈ ವಿಭಜಕ ಧರ್ಮಕಾರಣ ಸತತ ಮೂರು ಬಾರಿ ಗೆದ್ದು ಸತತ ಎರಡು ಸಲ ಸೋತಿದ್ದ ಬಿಜೆಪಿಯ ಜ್ಞಾನೇಂದ್ರರಿಗೆ ನಾಲ್ಕನೆ ಗೆಲುವಿಗೆ ಅವಕಾಶ ಕಲ್ಪಿಸಿತೆಂದು ವಿಶ್ಲೇಷಿಸಲಾಗುತ್ತಿದೆ. ಆ ಚುನಾವಣೆಯಲ್ಲಿ ಜೆಡಿಎಸ್‌ನ ಮಂಜುನಾಥ ಗೌಡ ’ಹಣಾ’ಹಣಿ ನಡೆಸಿ ಕಾಂಗ್ರೆಸ್ ಮತದ ಬುಟ್ಟಿಗೆ ಕೈಹಾಕಿ 40,127 ಮತ ಪಡೆದದ್ದು ಕಿಮ್ಮನೆಗೆ (45,572) ದೊಡ್ಡ ಅಂತರದ (21,955) ಸೋಲಾಗಲು ಕಾರಣವಾಯಿತೆಂದು ಹೇಳಲಾಗುತ್ತಿದೆ.

ಕ್ಷೇತ್ರದ ಹಾಡು-ಪಾಡು!

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಉದ್ದಗಲಕ್ಕ ಕಣ್ಣು ಹಾಯಿಸಿದರೆ ಈ ನಾಲ್ಕೂವರೆ ವರ್ಷದಲ್ಲಿ ಯಾರೇ ಎಮ್ಮೆಲ್ಲೆಯಾದರೂ ಆಗುವಂಥ ಮಾಮೂಲಿ ಬಜೆಟ್ ಕಾಮಗಾರಿಗಳನ್ನು ಹೊರತುಪಡಿಸಿ ರೈತರಿಗೆ-ನಿರುದ್ಯೋಗಿಗಳಿಗೆ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂತ ಯೋಜನೆ-ಉದ್ಯಮ ಬಂದಿಲ್ಲವೆಂದು ಜನರು ವಿಷಾದದಿಂದ ಹೇಳುತ್ತಾರೆ. ಶಾಸಕ ಕಮ್ ಮಂತ್ರಿ ಅರಗ ಜ್ಞಾನೇಂದ್ರ ಧರ್ಮಕಾರಣದ ಲೆಕ್ಕಾಚಾರಹಾಕಿ ಅಭಿವೃದ್ಧಿ ಕಾಮಗಾರಿ ಮಾಡಿಸುವುದು, ದ್ವೇಷದ ಮತ್ತು ಮತೀಯ ರಾಜಕಾರಣಕ್ಕೆ ಪೊಲೀಸರನ್ನು ಬಳಸಿಕೊಳ್ಳುತ್ತಿರುವುದು ಕ್ಷೇತ್ರಕ್ಕೆ ಹಿಂಸೆಯಾಗಿದೆ; ಸಂಘಿ ಸರದಾರರ ಕಣ್ಮಣಿಯಾಗಿರುವ ಜ್ಞಾನೇಂದ್ರ ಅಮಾಯಕ ಮುಸ್ಲಿಮ್ ಹುಡುಗರ ಭವಿಷ್ಯವನ್ನೇ ಬರ್ಬಾದ್ ಮಾಡುವಂಥ ಕ್ರಿಮಿನಲ್ ಕೇಸುಗಳನ್ನು ಹಾಕಿಸುತ್ತಿದ್ದಾರೆ; ಕೋಮು ಗಲಭೆ ಹುಟ್ಟುಹಾಕಿ ಮತ್ತೆ ಗೆಲ್ಲುವ ಹುನ್ನಾರದಲ್ಲಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ಸಾಮಾಜಿಕ ಕಾರ್ಯಕರ್ತರೊಬ್ಬರು ’ನ್ಯಾಯ ಪಥ’ಕ್ಕೆ ತಿಳಿಸಿದರು.

ಕ್ಷೇತ್ರದಲ್ಲಿ ವಿಫಲ ಶಾಸಕ ಎನಿಸಿರುವ ಜ್ಞಾನೇಂದ್ರ ರಾಜ್ಯದಲ್ಲೂ ಅಸಮರ್ಥ ಗೃಹ ಸಚಿವನೆಂಬ ಅಭಿಪ್ರಾಯ ಸಾಮಾನ್ಯವಾಗಿದೆ. ಜ್ಞಾನೇಂದ್ರ ಹೆಸರಿಗಷ್ಟೇ ಗೃಹಮಂತ್ರಿ. ನೀತಿ-ನಿರೂಪಣೆ ಸಂಘದ ಬೈಠಕ್‌ನಲ್ಲಾಗುತ್ತದೆ ಎಂಬ ಮಾತಗಳು ಎಲ್ಲೆಡೆ ಕೇಳಿಬರುತ್ತದೆ. ಜ್ಞಾನೇಂದ್ರ ಗೃಹಮಂತ್ರಿಯಾಗಿದ್ದುಕೊಂಡು ಪೊಲೀಸರ ನೈತಿಕ ಸ್ಥೈರ್ಯ ಉಡುಗುವಂತೆ ಮೂದಲಿಸಿದ್ದು, ಮೈಸೂರಲ್ಲಿ ಅತ್ಯಾಚಾರವಾದಾಗ ಆ ವಿದ್ಯಾರ್ಥಿನಿ ಸಂಜೆ ಮನೆಯಿಂದ ಹೊರಹೋದದ್ದೇ ತಪ್ಪೆಂದಿದ್ದು ಆಕ್ಷೇಪಕ್ಕೆ ಕಾರಣವಾಗಿತ್ತು.

ಪಿಎಸ್‌ಐ ನೇಮಕಾತಿ ಹಗರಣ, ಹಿಜಾಬ್ ಪ್ರಕರಣ, ದಕ್ಷಿಣ ಕನ್ನಡದಲ್ಲಿ ಆಗುತ್ತಿರುವ ಕೋಮು ಕ್ರೌರ್ಯದ ಕೊಲೆ-ದೊಂಬಿ, ಮುಂತಾದ ಕಾನೂನು ಸುವ್ಯಸ್ಥೆಯ ಸಮಸ್ಯೆಯಾದಾಗ ಜ್ಞಾನೇಂದ್ರ ಪ್ರದರ್ಶಿಸಿದ ’ಸ್ಥಿತಪ್ರಜ್ಞೆ’ ಅವರು ನಾಮ್‌ಕೆ ವಾಸ್ತೆ ಗೃಹಮಂತ್ರಿ ಎಂಬ ತರ್ಕಕ್ಕೆಡೆಮಾಡಿದೆ ಎನ್ನಲಾಗುತ್ತಿದೆ.

ಅತ್ತ ದಕ್ಕಿಣ ಕನ್ನಡದಲ್ಲಿ ರಕ್ತದ ಓಕುಳಿ ಆಗುತ್ತಿದ್ದರೆ ಇತ್ತ ಜ್ಞಾನೇಂದ್ರ ಅದು ತನಗೆ ಸಂಬಂಧಿಸಿದ್ದಲ್ಲ ಎಂಬಂತೆ ತೀರ್ಥಹಳ್ಳಿಯಲ್ಲಿ ಕೆಡಿಪಿ ಮೀಟಿಂಗ್ ತೆಗೆದುಕೊಂಡು ನಿಶ್ಚಿಂತೆಯಲ್ಲಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳುತ್ತಾರೆ.

ಶಾಸಕ ಜ್ಞಾನೇಂದ್ರ ಕ್ಷೇತ್ರದಲ್ಲಿ ಏನು ಕೆಲಸ-ಕಾರ್ಯ ಮಾಡಿದ್ದಾರೆಂದು ಜನರಿಗೆ ಕೇಳಿದರೆ, “ಅವರೇನು ಮಾಡಿಲ್ಲ. ಕಿಮ್ಮನೆ ರತ್ನಾಕರ್ ಶಾಸಕರಾಗಿದ್ದಾಗ ಮಂಜೂರಿ ಮಾಡಿಸಿಕೊಂಡು ಬಂದಿದ್ದ ಕಾಮಗಾರಿಗಳನ್ನೇ ಮುಂದಿವರಿಸಿ, ಕಿಮೀಗೊಂದು ಪ್ಲೆಕ್ಸ್-ಬ್ಯಾನರ್ ಹಾಕಿಸಿ ತಮ್ಮದೆ ಸಾಧನೆಯೆಂದು ಪ್ರಚಾರ ಪಡೆದಿದ್ದಾರೆ” ಎಂಬ ಉತ್ತರ ಪಕ್ಷ-ಪಂಗಡದ ಗೊಡವೆಯಿಲ್ಲದೆ ಬರುತ್ತದೆ. ’ಆಡಳಿತ ಪಕ್ಷದ ಶಾಸಕನಾಗಿ ಕನಿಷ್ಟ 2-3 ಸಾವಿರ ಕೋಟಿಯ ಕಾಮಗಾರಿ ತರಬೇಕಿತ್ತು; ರಾಷ್ಟ್ರೀಯ ಹೆದ್ದಾರಿಯಂತ ದೊಡ್ಡ ಕೆಲಸ ತನ್ನ ಅವಧಿಯಲ್ಲಾಗಿದೆ; ಸ್ಥಳೀಯ ಸಂಸ್ಥೆಗಳನ್ನು ಕಡೆಗಣಿಸಿ ಕೆಲವು ಕಾಮಗಾರಿಗಳನ್ನು ರಾಜ್ಯಮಟ್ಟದ ಟೆಂಡರ್‌ನಿಂದ ತರಲಾಗಿದೆ; ಇದರಲ್ಲಿ ಕಿಕ್‌ಬ್ಯಾಕ್ ಹೊಡೆಯಲಾಗಿದೆ’ ಎಂದು ಮಾಜಿ ಶಾಸಕ ಕಿಮ್ಮನೆ ನೇರವಾಗಿ ಆರೋಪಿಸುತ್ತಾರೆ.

ಜನಸಾಮಾನ್ಯರಲ್ಲಷ್ಟೆ ಅಲ್ಲ, ಕಟ್ಟರ್ ಬಿಜೆಪಿಗರಲ್ಲೂ ಜ್ಞಾನೇಂದ್ರರ ಬಗ್ಗೆ ಅಸಮಧಾನವಿದೆ ಎನ್ನಲಾಗುತ್ತಿದೆ. ಪಿಡ್ಲ್ಯೂಡಿ ಕಂಟ್ರಾಕ್ಟರ್ ಕೃಷ್ಣಮೂರ್ತಿ ಮತ್ತು ಪಟ್ಟಣ ಪಂಚಾಯತ್ ಸದಸ್ಯ ಸಂದೇಶ್ ಹೇಳಿದಂತೆ ಕೇಳುತ್ತ ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂಬ ಆಕ್ರೋಶ ಬಿಜೆಪಿಗರಲ್ಲಿ ಮಡುಗಟ್ಟಿದೆ ಎನ್ನಲಾಗುತ್ತಿದೆ.

ತೀರ್ಥಹಳ್ಳಿಯಲ್ಲಿರುವ ರೈತರಲ್ಲಿ ಶೇ.60ರಷ್ಟು ಬಗರ್ ಹುಕುಮ್‌ದಾರರು. ಅರಣ್ಯ ಭೂಮಿಯಲ್ಲಿ ಸಾಗುವಳಿಮಾಡಿ ಜೀವಿಸುತ್ತಿರುವ ಈ ಕುಟುಂಬಗಳಿಗೆ ಅರಣ್ಯ ಇಲಾಖೆಯ ಗೊಂದಲದ ನೀತಿಯಿಂದ ಹಕ್ಕುಪತ್ರ ಕೊಡಲಾಗುತ್ತಿಲ್ಲ. ಹಾಗೆಯೆ ಸರಕಾರಿ ಜಾಗದಲ್ಲಿ ಸೂರು ಕಟ್ಟಿಕೊಂಡಿರುವವರಿಗೆ 94ಸಿ ನಿಯಮದಂತೆ ಪಟ್ಟಾ ಹಂಚಿಕೆಯೂ ಆಗುತ್ತಿಲ್ಲ. ಇದು ತಾಲೂಕಿನ ಬಹುದೊಡ್ಡ ಸಮಸ್ಯೆಯಾದರೂ ಶಾಸಕರು ಪರಿಹರಿಸಲು ಮುಂದಾಗುತ್ತಿಲ್ಲ ಎಂದು ಬಗರ್‌ಹುಕುಮ್ ರೈತರು ಆತಂಕ-ಆಕ್ರೋಶ ವ್ಯಕ್ತಪಡಿಸುತ್ತಾರೆ. ಇದೆಲ್ಲಕ್ಕಿಂತ ಆತಂಕದ ಸಂಕಟವೆಂದರೆ, ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮನುಷ್ಯ ಸಂಬಂಧಗಳನ್ನು ಕೆಡಿಸಿ ತೀರ್ಥಹಳ್ಳಿಯನ್ನು ಮತೋನ್ಮತ್ತಗೊಳಿಸುವ ಸಂಚೊಂದು ನಾಜೂಕಾಗಿ ನಡೆಯುತ್ತಿದೆ ಎಂದು ಜೀವಪರ ಮಂದಿ ಕಳವಳಿಸುತ್ತಾರೆ!

ಹದಗೊಳ್ಳುತ್ತಿರುವ ಅಖಾಡ!

ಏಳೆಂಟು ತಿಂಗಳಲ್ಲಿ ಎದುರಾಗಲಿರುವ ಅಸೆಂಬ್ಲಿ ಚುನಾವಣೆಗೆ ತೀರ್ಥಹಳ್ಳಿ ಅಖಾಡ ನಿಧಾನಕ್ಕೆ ಸಜ್ಜುಗೊಳ್ಳುತ್ತಿದೆ; ಎಮ್ಮೆಲ್ಲೆ ಆಕಾಂಕ್ಷಿಗಳು ರಂಗತಾಲೀಮು ಶುರುಹಚ್ಚಿಕೊಂಡಿದ್ದಾರೆ. ಬಿಜೆಪಿ-ಸಂಘದ ದೊಡ್ಡವರ ಕೃಪಾಶೀರ್ವಾದ ಪಡೆದಿರುವ ಹಾಲಿ ಶಾಸಕ ಅರಗ ಜ್ಞಾನೇಂದ್ರರಿಗೆ ಸ್ಥಳೀಯ ಬಿಜೆಪಿಯ ಒಂದು ವರ್ಗ ವಿರುದ್ಧವಾಗಿದೆ ಎಂಬ ಸುದ್ದಿಹಬ್ಬಿದೆ. ಸತತ 9 ಬಾರಿ ಜ್ಞಾನೇಂದ್ರರಿಗೆ ಟಿಕೆಟ್ ಕೊಡಲಾಗಿದೆ; ನಾಲ್ಕು ಬಾರಿ ಎಮ್ಮೆಲ್ಲೆ ಆಗಿದ್ದಾರೆ; ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನ, ನಿಗಮ, ಹಾಲು ಒಕ್ಕೂಟದ ಅಧ್ಯಕ್ಷತೆ, ಕ್ಯಾಬಿನೆಟ್ ಮಂತ್ರಿ ಹುದ್ದೆ ಕೊಡಲಾಗಿದೆ. ಈಗವರಿಗೆ 70ರ ಗಡಿಯೂ ದಾಟಿದೆ. ಈ ಬಾರಿ ಹೊಸಬರಿಗೆ ಅವಕಾಶ ಕೊಡಿಯೆಂಬ ಕ್ಷೀಣ ಒತ್ತಾಯ ಕೇಳಿಬರುತ್ತಿದೆ ಎನ್ನಲಾಗುತ್ತಿದೆ. ಕಳೆದ ಬಾರಿಯೆ ಈಡಿಗರು ಟಿಕೆಟ್ ಬೇಡಿಕೆ ಇಟ್ಟಿದ್ದರು. ಬೇಗಳ್ಳಿ ಸತೀಶ್ ಮತ್ತು ಹೆದ್ದೂರು ನವೀನ್ ಹೆಸರು ತೇಲಾಡಿತ್ತು.

ಬಿಜೆಪಿ ಪಡಸಾಲೆಯಲ್ಲಿನ ಮಾತುಕತೆ ಪ್ರಕಾರ ಜ್ಞಾನೇಂದ್ರರಿಗೆ ಕೊನೆಯ ಅವಕಾಶ ಕೊಡಲು ಸಂಘ ತೀರ್ಮಾನಿಸಿದೆಯಂತೆ; ಈ ಹಿನ್ನೆಲೆಯಲ್ಲಿ ಜ್ಞಾನೇಂದ್ರ ಗೃಹಮಂತ್ರಿ ಬಲ ತೀರ್ಥಹಳ್ಳಿಗೆ ಸೀಮಿತಗೊಳಿಸಿಕೊಂಡು ಚುನಾವಣಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ತೀರ್ಥಹಳ್ಳಿಯಲ್ಲಿ ಜ್ಞಾನೇಂದ್ರರಿಗಿಂತ ಮಾಜಿ ಸಚಿವ ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ್ ಬೆಟರ್ ಎಂಬ ಭಾವನೆಯಿದೆ. ಜನಪರ ಕೆಲಸಗಾರ ಮತ್ತು ಸೆಕ್ಯುಲರ್ ಇಮೇಜಿನ ಕಿಮ್ಮನೆ ಕಳೆದ ಚುನಾವಣೆ ವೇಳೆ ನಂದಿತಾ ಆತ್ಮಹತ್ಯೆ ಪ್ರಕರಣವನ್ನು ಸಂಘಪರಿವಾರ ಕೋಮು ಧ್ರುವೀಕರಣಕ್ಕೆ ಬಳಸಿಕೊಂಡದ್ದರಿಂದ ಸೋತರೆಂದು ವಿಶ್ಲೇಷಿಸಲಾಗುತ್ತಿದೆ. ಸಿದ್ದರಾಮಯ್ಯ ಬಣದ ಕಿಮ್ಮನೆ ಟಿಕೆಟ್ ಭರವಸೆಯಿಂದ ಅಖಾಡಕ್ಕೆ ಇಳಿದಿದ್ದಾರೆ. ಇನ್ನೊಂದೆಡೆ ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಆರ್.ಎಂ.ಮಂಜುನಾಥ ಗೌಡ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕ್ಯಾಂಪಿನಲ್ಲಿ ಗುರುತಿಸಿಕೊಂಡು ಟಿಕೆಟ್‌ಗೆ ಪ್ರಯತ್ನ ನಡೆಸಿದ್ದರೆನ್ನಲಾಗುತ್ತಿದೆ. ಜೆಡಿಎಸ್‌ನಿಂದ ಎಡೂರು ರಾಜಾರಾಮ್ ಕಣಕ್ಕಿಳಿವ ಸಾಧ್ಯತೆ ಇದೆ.

ತೀರ್ಥಹಳ್ಳಿಯ ಸದ್ಯದ ರಾಜಕೀಯ ರಾಸಾಯನಿಕ ಸೂತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಬಿಜೆಪಿಯ ಅರಗ ಜ್ಞಾನೇಂದ್ರ ಮತ್ತು ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ್ ನಡುವೆ ನಿಕಟ ಹೋರಾಟ ಏರ್‍ಪಡುವ ಸಕಲ ಸಾಧ್ಯತೆ ಸ್ಪಷ್ಟವಾಗುತ್ತದೆ. ಕ್ಷೇತ್ರದಲ್ಲಿ ಕಿಮ್ಮನೆ ಬಗ್ಗೆ ಒಲವಿದೆಯಾದರೂ ಚುನಾವಣೆ ಹತ್ತಿರ ಬಂದಾಗ ಸಂಘಪರಿವಾರ ಗಲಭೆ ಹುಟ್ಟುಹಾಕಿ ಕೋಮು ಧ್ರುವೀಕರಣ ಸಾಧಿಸಿ ಗೆಲ್ಲಲು ಪ್ರಯತ್ನಿಸುವ ಆತಂಕವೂ ಇದೆ.


ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶಿಕಾರಿಪುರ: ಯಡಿಯೂರಪ್ಪ ಸಂಸ್ಥಾನದಲ್ಲಿ ಬಿಜೆಪಿಯೇ ಕಾಣೆ!!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...