Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶಿಕಾರಿಪುರ: ಯಡಿಯೂರಪ್ಪ ಸಂಸ್ಥಾನದಲ್ಲಿ ಬಿಜೆಪಿಯೇ ಕಾಣೆ!!

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶಿಕಾರಿಪುರ: ಯಡಿಯೂರಪ್ಪ ಸಂಸ್ಥಾನದಲ್ಲಿ ಬಿಜೆಪಿಯೇ ಕಾಣೆ!!

- Advertisement -
- Advertisement -

ಅರೆ ಮಲೆನಾಡು ಗುಣಲಕ್ಷಣದ ಶಿಕಾರಿಪುರ ತಾಲೂಕು ಭತ್ತದ ಕಣಜವೆಂದೆ ಹೆಸರುವಾಸಿ. ಮಲೆನಾಡು ಮತ್ತು ಮೈದಾನ ಪ್ರದೇಶದ ನಡುವೆ ಹರಿಯುವ ಕುಮುದ್ವತಿ ನದಿಯ ಬಲದಂಡೆಯಲ್ಲಿರುವ ಶಿಕಾರಿಪುರ ತಾಲೂಕಿನ ಪಶ್ಚಿಮಕ್ಕೆ ದಟ್ಟ ಅರಣ್ಯವಿದ್ದು, ಪೂರ್ವದಲ್ಲಿ ತೆಳುವಾದ ಕುರುಚಲು ಕಾಡು ಹರಡಿದೆ. ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಹಲವು ಪ್ರಥಮಗಳ ಕೊಡುಗೆ ಕೊಟ್ಟಿರುವ ಶಿಕಾರಿಪುರದ ’ಈಸೂರು’ ಸ್ವಾತಂತ್ರ್ಯ ಚಳವಳಿಯು ಚರಿತ್ರೆಯ ಪುಟಗಳಲ್ಲಿ ಮೈಸೂರಿನ ’ಜಲಿಯನ್‌ವಾಲಾ ಬಾಗ್’, ಕರ್ನಾಟಕದ ’ಚೌರಿಚೌರಾ’ ಎಂದು ಕರೆಯಲಾಗಿದೆ!

ಸಕಲ ಜೀವಾತ್ಮಗಳಿಗೆ ಲೇಸು ಬಗೆದ ಶಿವಶರಣರ ಕರ್ಮಭೂಮಿಯಾಗಿದ್ದ ಶಿಕಾರಿಪುರ ಇವತ್ತು ಅಸಹಿಷ್ಣುತೆಯ ನೆಲವಾಗಿರುವುದು ವಿಪರ್ಯಾಸ ಎಂದು ಪ್ರಜ್ಞಾವಂತರು ಅಭಿಪ್ರಾಯ ಪಡುತ್ತಾರೆ. ಕಳೆದ ನಾಲ್ಕು ದಶಕದಿಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಮಕ್ಕಳ ಕುಟುಂಬದ ಆಡುಂಬೊಲದಂತಾಗಿರುವ ಶಿಕಾರಿಪುರದ ರಾಜಕಾರಣ ನಿಂತ ನೀರಿನಂತಾಗಿದ್ದು, ಪರ್ಯಾಯ ನಾಯಕತ್ವದ ಹಂಬಲ ಶುರುವಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಇತಿಹಾಸ-ಸಂಸ್ಕೃತಿ

ಶಿಕಾರಿಪುರ ಅಹಿಂದ ತಾಲೂಕು; ಆದರೆ ಇಲ್ಲಿಯ ರಾಜಕೀಯ-ಸಾಮಾಜಿಕ ಮತ್ತು ಆರ್ಥಿಕ ಆಗುಹೋಗು ಲಿಂಗಾಯತರ ಏಕಸ್ವಾಮ್ಯಕ್ಕೆ ಒಳಪಟ್ಟಿದೆ ಎನ್ನಲಾಗುತ್ತಿದೆ. ತಾಲೂಕಿನಲ್ಲಿ ಲಿಂಗಾಯತರು ಹಾಗು ಪರಿಶಿಷ್ಟ ವರ್ಗ-ಪಂಗಡದವರು ಹೆಚ್ಚು-ಕಡಿಮೆ ಸಮಸಂಖ್ಯೆಯಲ್ಲಿದ್ದಾರೆ. ಮುಸ್ಲಿಮರು ಗಣನೀಯವಾಗಿರುವ ಶಿಕಾರಿಪುರದ ಸಾಮರಸ್ಯದ ಬದುಕು ಮೆಚ್ಚುಗೆಗೆ ಪಾತ್ರವಾಗಿದೆ. ಹತ್ತಿರದ ಶಿವಮೊಗ್ಗದಲ್ಲಿ ಆಗಾಗ ಭುಗಿಲೇಳುವ ಮತೀಯ ಕೆಂಜ್ವಾಲೆಯ ಧಗೆ ಶಿಕಾರಿಪುರಕ್ಕೆ ಸೋಕದಿರುವುದು ಸಮಾಧಾನದ ಸಂಗತಿಯೆಂಬ ಉದ್ಘಾರಗಳು ಕೇಳಿಬರುತ್ತದೆ! ಸಂಘ ಪರಿವಾರ ಅಥವಾ ಬಿಜೆಪಿ ಬೆಳೆಯದೆ ಯಡಿಯೂರಪ್ಪ ಮತ್ತವರ ’ಕುಟುಂಬಕಾರಣ’ ಪ್ರಬಲವಾಗಿರುವುದೆ ಶಿಕಾರಿಪುರದ ನೆಮ್ಮದಿಯ ರಹಸ್ಯವೆಂದು ವಿಶ್ಲೇಷಿಸಲಾಗುತ್ತಿದೆ. ಯಡಿಯೂರಪ್ಪ ಕೇಸರಿ ಪಕ್ಷದ ಸರ್ವೋಚ್ಚ ನಾಯಕನಾಗಿ ರಾಜ್ಯದಲ್ಲಿ ಅದೆಷ್ಟೋ ಧರ್ಮಕಾರಣದ ತಂತ್ರಗಾರಿಕೆ ಹೆಣೆದಿರಬಹುದು; ಹಾಗಂತ ಶಿಕಾರಿಪುರದಲ್ಲಿ ಮಾತ್ರ ಅವರೆಂದೂ ಮತಾಂಧ ಭಾಷಣ ಮಾಡಲಿಲ್ಲ ಅಥವಾ ಗೆಲ್ಲಲು ಹಿಂದುತ್ವದ ವರಸೆ ಪ್ರದರ್ಶಿಸಲಿಲ್ಲವೆಂಬ ಪ್ರಶಂಸೆ ಜಿಲ್ಲೆಯಲ್ಲಿದೆ.

ಶಿಕಾರಿಪುರದ ಗ್ರಾಮದೇವತೆ ಹುಚ್ಚುರಾಯ ಸ್ವಾಮಿಯೆಂದು ಆರಾಧಿಸಲ್ಪಡುತ್ತಿರುವ ಭಜರಂಗಿಗೆ ಮೈಸೂರಿನ ಆಡಳಿತಗಾರನಾಗಿದ್ದ ಟಿಪ್ಪು ಸುಲ್ತಾನ್ ಬಾಸಿಂಗ ಮತ್ತಿತರ ಆಭರಣ ಮಾಡಿಸಿದ್ದನೆಂಬ ಉಲ್ಲೇಖವಿದೆ. ಮಳೆಯ ಎಂಬವರು ಶಿಕಾರಿಪುರ ಪಟ್ಟಣ ನಿರ್ಮಿಸಿದ್ದರಿಂದ ಮೊದಲು ’ಮಳಿಯನ್ ಹಳ್ಳಿ’ ಅಥವಾ ’ಮಳೇನ ಹಳ್ಳಿ’ ಎಂದು ಕರೆಯಲಾಗುತ್ತಿತ್ತು ಎನ್ನಲಾಗಿದೆ; ಕೆಳದಿಯ ಅರಸರ ಕಾಲದಲ್ಲಿ ’ಮಹಾದಾನಪುರ’ ಎಂದಾಗಿತ್ತು. ಈ ಅರಣ್ಯ ಪ್ರದೇಶ ಕಾಡು ಪ್ರಾಣಿಗಳ ಬೇಟೆಗೆ ಪ್ರಶಸ್ತವಾಗಿದ್ದ ಕಾರಣ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ತಮ್ಮ ಆಡಳಿತದ ಹೊತ್ತಲ್ಲಿ ’ಶಿಕಾರಿಪುರ’ವೆಂದು ನಾಮಕರಣ ಮಾಡಿದರೆಂಬ ಪ್ರತೀತಿಯಿದೆ. ಮಲೆನಾಡು ಸಂಸ್ಕೃತಿಯ ಡೊಳ್ಳು ಕುಣಿತ, ವೀರಗಾಸೆ, ಕೋಲಾಟ, ಭಜನೆ, ಅಂಟಿಗೆಪಿಂಟಿಗೆ (ಹಬ್ಬಾಡೋದು), ಹೋರಿ(ಬರೆಸುವ) ಹಬ್ಬದ ಸಂಪ್ರದಾಯದ ಶಿಕಾರಿಪುರದಲ್ಲಿ ಕನ್ನಡ ಪ್ರಮುಖ ಭಾಷೆ; ಕೊಂಕಣಿ, ಹವ್ಯಕ ಕನ್ನಡ, ಮರಾಠಿ, ಲಂಬಾಣಿ, ಉರ್ದು ಭಾಷೆಗಳೂ ಕೇಳಿಬರುತ್ತವೆ.

ಐತಿಹಾಸಿಕ ಮಹತ್ವದ ಶಾಸನಗಳು, ವೀರಗಲ್ಲುಗಳು, ನಿಸಿದಿಗಲ್ಲುಗಳು, ಕೆರೆ, ಕೋಟೆ, ಮಠ, ಮಂದಿರ, ಮಸೀದಿ ಬಸದಿ ಹಾಗು ಪ್ರಕೃತಿ ಸೌಂದರ್ಯದ ಮದಗದ ಕೆರೆ, ಅಂಬ್ಲಿಗೋಳ ಜಲಾಶಯ ಪ್ರದೇಶಗಳ ವೈವಿಧ್ಯಮಯ ತಾಣ ಶಿಕಾರಿಪುರ. ಕರ್ನಾಟಕದ ಮೊದಲ ಕೆರೆ (ತಾಳಗುಂದದ ಪ್ರಣವೇಶ್ವರ ಕೆರೆ), ಮೊದಲ ದೇವಾಲಯ (ತಾಳಗುಂದದ ಪ್ರಣವೇಶ್ವರ ದೇಗುಲ), ಮೊದಲ ವಿದ್ಯಾ ಕೇಂದ್ರ (ತಾಳಗುಂದ- ಕನ್ನಡದ ಮೊದಲ ಸಾಮ್ರಾಜ್ಯದ ದೊರೆ ಮಯೂರ ಶರ್ಮ[ವರ್ಮ] ಕಲಿತ ವಿದ್ಯಾಲಯದ ಊರು), ಮೊದಲ ಯೋಜನಾಬದ್ಧ ನಗರ (ಬೆಳ್ಳಿಗಾವಿ) ನಿರ್ಮಾಣಗೊಂಡಿರುವ ಶಿಕಾರಿಪುರ ಕನ್ನಡದ ಮೊಟ್ಟಮೊದಲ ಸಾಮ್ರಾಜ್ಯದ (ಕದಂಬ) ರಾಜಮನೆತನದ ತವರೂರು! ಹಲ್ಮಿಡಿ ಶಾಸನವೆ ಕನ್ನಡದ ಮೊದಲ ಶಾಸನವೆಂದು ನಂಬಲಾಗಿತ್ತು. ಆದರೆ ಶಿಕಾರಿಪುರದ ತಾಳಗುಂದದಲ್ಲಿ ಕಂಡುಬಂದ ಕ್ರಿ.ಶ.370ರ ’ಸಿಂಹಕಟಾಂಜನ’ ಶಾಸನ ಅದಕ್ಕಿಂತ ಮೊದಲಿನದು ಎನ್ನಲಾಗುತ್ತಿದೆ.

ಹೊಯ್ಸಳ ಶೈಲಿಯ ಸೊಬಗಿನ ಶಿಲ್ಪಕಲೆಯ ಕೇದಾರೇಶ್ವರ ಮತ್ತು ಅಮರನಾಥೇಶ್ವರ ಇನ್ನಿತರ ದೇವಾಲಯವಿರುವ ಬೆಳ್ಳಿಗಾವಿಯಲ್ಲಿ 10-13ನೇ ಶತಮಾನದವರೆಗೆ ವೈದಿಕ, ಶಾಕ್ತ, ಕಾಳಾಮುಖ, ವೈಷ್ಣವ, ಜೈನ, ಬೌದ್ಧ ಮುಂತಾದ ಧರ್ಮಪಂಥಗಳು ವಿಜೃಂಭಿಸಿದ್ದವು. ಕರ್ನಾಟಕದ ಅತ್ಯಂತ ಪ್ರಾಚೀನವಾದ ಕಾಳಾಮುಖ ಕೇಂದ್ರ-ಪಂಚ ಮಠಗಳಲ್ಲಿ ಒಂದಾದ ಕೋಡಿ ಮಠವಿರುವ ಬೆಳ್ಳಿಗಾವಿ ಪ್ರಮುಖ ಕಲಾ ಕೇಂದ್ರವಾಗಿತ್ತು. ಹನ್ನೆರಡು ಶಿಲ್ಪಿಗಳಿದ್ದ ಬೆಳ್ಳಿಗಾವಿ ’ನಾಟ್ಯರಾಣಿ’ ಎನಿಸಿದ್ದ ಹೊಯ್ಸಳ ರಾಣಿ ಶಾಂತಲೆಯ ಊರು. 30ಕ್ಕೂ ಹೆಚ್ಚು ಶಾಸನ-ಸ್ಮಾರಕಗಳಿರುವ ಬಂದಳಿಕೆಯಲ್ಲಿ ಶಾಂತಿನಾಥ ಬಸದಿಯಿದೆ. ಶಿಕಾರಿಪುರದ ಬೇಗೂರು ಪ್ರಮುಖ ಕಾಳಾಮುಖ (ವೈದಿಕ) ವಿದ್ಯಾ ಕೇಂದ್ರವಾಗಿದ್ದರೆ, ಹೀರೇಜಂಬೂರು ಕಾಯಕಯೋಗಿ-ವಚನಕಾರ್ತಿ ಸತ್ಯಕ್ಕನ ಕರ್ಮ ಕ್ಷೇತ್ರ; ಉಡುತಡಿ ವಚನಕಾರ್ತಿ ಅಕ್ಕಮಹಾದೇವಿಯ ಜನ್ಮ ಸ್ಥಳ. ಶಿಕಾರಿಪುರದಿಂದ 24 ಕಿ.ಮಿ. ದೂರದಲ್ಲಿರುವ ತಾಳಗುಂದದಲ್ಲಿ ಪ್ರಭುದೇವರ ಗದ್ದುಗೆಯಿದ್ದರೆ, ಮುತ್ತಿಗೆಯಲ್ಲಿ ಶಿವಶರಣ ಅಜಗಣ್ಣ ಮತ್ತು ಶಿವಶರಣೆ ಮುಕ್ತಾಯಕ್ಕರ ಸಮಾಧಿಗಳಿವೆ.

ಮಳವಳ್ಳಿಯಲ್ಲಿ 2 ಪ್ರಾಕೃತ ಮತ್ತು ಚಾಲುಕ್ಯರ ಶಾಸನಗಳಿವೆ. ಶಿಕಾರಿಪುರದಿಂದ 10 ಕಿ.ಮಿ. ದೂರದಲ್ಲಿರುವ ಈಸೂರು ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅಚ್ಚಳಿಯದ ಅಧ್ಯಾಯದ ಹಳ್ಳಿ. ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಈಸೂರಿಗರ ರಕ್ತದ ಕೋಡಿಯೇ ಹರಿಸಿದ್ದ ಬ್ರಿಟಿಷರು ಐವರು ಯುವಕರ ಆಹುತಿ ಪಡೆದಿದ್ದರು. ಆದರೂ ಹಿಮ್ಮೆಟ್ಟದ ಈಸೂರಿಗರು ತಮ್ಮ ಹಳ್ಳಿಗೆ ಸ್ವಾತಂತ್ರ್ಯ ಘೋಷಿಸಿಕೊಂಡು ಬ್ರಿಟಿಷ್ ಅಧಿಕಾರಿ-ಪೊಲೀಸರು ಒಳಬರದಂತೆ ತಡೆದಿದ್ದರು. ಈಸೂರು ಕರ್ನಾಟಕದಲ್ಲೇ ಸ್ವಾತಂತ್ರ್ಯ ಘೋಷಿಸಿಕೊಂಡ ಮೊಟ್ಟಮೊದಲ ಹಳ್ಳಿ! ಶಿಕಾರಿಪುರ ಪಟ್ಟಣದಲ್ಲಿ ಹಳೆಯ ಕೋಟೆ, ಅನೇಕ ಶಾಸನ, ವೀರಗಲ್ಲುಗಳಿವೆ; ದ್ರಾವಿಡ ಶೈಲಿ-ಹೊಯ್ಸಳ ಶಿಲ್ಪಕಲೆಯ ಆಂಜನೇಯ (ಹುಚ್ಚುರಾಯ ಸ್ವಾಮಿ) ದೇವಾಲಯದಲ್ಲಿ ಇಬ್ಬಾಯಿ ಕತ್ತಿಯಿದೆ. ಈ ಕತ್ತಿ ಬ್ರಿಟಿಷರ ವಿರುದ್ಧ ಕಾದಾಡಿದ ಧೋಂಡಿಯ ವಾಘನದೆಂದು ಹೇಳಲಾಗಿದೆ. ಶಾಸನಗಳ ಸಾಲಿನಲ್ಲಿ ಅಮರವಾಗಿರುವ ವೀರ ವನಿತೆಯರಾದ ಮದಗದ ಕೆಂಚಮ್ಮ, ನಾಗಿಯಕ್ಕ, ಜಕ್ಕಿಯಬ್ಬೆ, ಆಶುಕವಿ ವಿಠಲಾಕ್ಷ, ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ, ಹರಪ್ಪ ಮೊಹಂಜೊದಾರೊ ಖ್ಯಾತಿಯ ಪುರಾತತ್ವ ಶಾಸ್ತ್ರಜ್ಞ ಎಸ್.ಆರ್.ರಾವ್, ಕನ್ನಡ ಪರಿಚಾರಕ ಹರಿಹರೇಶ್ವರ ಶಿಕಾರಿಪುರದಲ್ಲಿ ಜನಿಸಿದ ಪ್ರತಿಭಾವಂತರು!

ಕೃಷಿ-ಕಸುಬು-ಆರ್ಥಿಕತೆ

ಶಿಕಾರಿಪುರದ ಆರ್ಥಿಕ ಜೀವನಾಡಿ ಕೃಷಿ. ಕುಮುದ್ವತಿ, ತುಂಗಭದ್ರಾ ನದಿಗಳು ಮತ್ತು ಹಳ್ಳಿಗಳಲ್ಲಿರುವ ಕರೆಗಳು ಶಿಕಾರಿಪುರ ತಾಲೂಕಿಗೆ ಜೀವತುಂಬಿವೆ. ಕೃಷಿ ಪ್ರಧಾನವಾದ ಹಳ್ಳಿಗಳಲ್ಲಿ ಭತ್ತ, ಕಬ್ಬು, ಹತ್ತಿ, ರಾಗಿ ಮತ್ತು ದ್ವಿದಳ ಧಾನ್ಯ ಸಾಂಪ್ರದಾಯಿಕ ಬೆಳೆಯಾಗಿತ್ತು. ಇತ್ತೀಚಿನ ವರ್ಷದಲ್ಲಿ ಭತ್ತದ ಗದ್ದೆಗಳನ್ನು ವಾಣಿಜ್ಯ ಬೆಳೆಗಳಾದ ಶುಂಠಿ, ಅಡಿಕೆ ಹಾಗು ಮೆಕ್ಕೆ ಜೋಳ ಆಕ್ರಮಿಸಿಕೊಳ್ಳುತ್ತಿದೆ. ಇಡೀ ರಾಜ್ಯಕ್ಕೆ ಅಕ್ಕಿ ಪೂರೈಸುತ್ತಿದ್ದ ಶಿಕಾರಿಪುರದಲ್ಲಿ ಸುಮಾರು 25 ಅಕ್ಕಿ ಗಿರಣಿಗಳಿದ್ದವು. ಭತ್ತ ಬೆಳೆಯುವುದು ಕಡಿಮೆಯಾಗಿರುವುದರಿಂದ ರೈಸ್ ಮಿಲ್‌ಗಳು ಜೋಳದ ಗೋದಾಮುಗಳಾಗಿವೆ. ಈಗ ಐದಾರು ಗಿರಣಿಗಳಷ್ಟೇ ಉಳಿದಿವೆ. ಶೇಂಗಾ, ಸೂರ್ಯಕಾಂತಿ ಬೆಳೆ ಕೂಡ ಕಮ್ಮಿ ಆಗಿರುವುದರಿಂದ ಎಣ್ಣೆ ಮಿಲ್‌ಗಳೂ ಕಣ್ಮರೆಯಾಗಿವೆ. ಶಿವಮೊಗ್ಗ ಜಿಲ್ಲೆಯಲ್ಲೇ ಶಿಕಾರಿಪುರ ಅತಿ ಹೆಚ್ಚು ಶುಂಠಿ ಉತ್ಪಾದಿಸುವ ತಾಲೂಕು. ಮೊದಲು ವಲಸಿಗ ಮಲಯಾಳಿಗಳು ಬೆಳೆಯುತ್ತಿದ್ದ ಶುಂಠಿಯತ್ತ ಈಗ ಸ್ಥಳೀಯ ರೈತರು ಆಕರ್ಷಿತರಾಗಿದ್ದಾರೆ.

ಕೆರೆಗಳಲ್ಲಿ ಮೀನು ಸಾಕಾಣಿಕೆ ಮತ್ತು ಪಶುಸಂಗೋಪನೆಯಿಂದ ಒಂದಿಷ್ಟು ಮಂದಿ ಬದುಕುತ್ತಿದ್ದಾರೆ. ವಾಣಿಜ್ಯ ಕೇಂದ್ರವಾಗಿ ಬೆಳೆದಿರುವ ಶಿಕಾರಿಪುರ ನಗರದ ವ್ಯವಹಾರ ಮೇಲ್ವರ್ಗದ ಲಿಂಗಾಯತರ ಕೈಯ್ಯಲ್ಲಿದೆ ಎನ್ನಲಾಗುತ್ತಿದೆ.

ದುಡಿಯುವ ಕೈಗಳಿಗೆ ಕೆಲಸ ಕೊಡುವ ಕೈಗಾರಿಕೆ-ಉದ್ಯಮ ಶಿಕಾರಿಪುರದಲ್ಲಿಲ್ಲ. ಈಚೆಗೆ ಒಂದು ಗಾರ್ಮೆಂಟ್ಸ್ ಉದ್ಯಮ ಮತ್ತು ಕೆಎಂಎಫ್‌ನ ಪಶು ಆಹಾರ ತಯಾರಿಕಾ ಘಟಕ ಸ್ಥಾಪಿಸಲಾಗಿದೆ. ಇದರಿಂದ ಶೇಕಡಾ ಒಂದರಷ್ಟು ನಿರುದ್ಯೋಗವೂ ಕಡಿಮೆಯಾಗಿಲ್ಲ ಎನ್ನಲಾಗುತ್ತಿದೆ. ಶಿಕಾರಿಪುರ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ ಆಗುತ್ತಿಲ್ಲ; ಯುವ ಸಮೂಹ ವಲಸೆ ಹೋಗುತ್ತಿದೆ. ಲಂಬಾಣಿ ಜನಾಂಗದವರು ಕಾಫಿ ತೋಟಗಳ ಕಡೆಗೆ ಕೂಲಿ ಅರಸಿ ಗುಳೆ ಹೋಗುತ್ತಿದ್ದಾರೆ.

ಐತಿಹಾಸಿಕ, ಸಾಮಾಜಿಕ, ಪ್ರಾಕೃತಿಕ, ಸ್ವಾತಂತ್ರ್ಯ ಸಂಗ್ರಾಮದಂಥ ವಿವಿಧ ಮಹತ್ವದ ಸ್ಥಳಗಳಿರುವ
ಶಿಕಾರಿಪುರದಲ್ಲಿ ಪ್ರವಾಸೋದ್ಯಮ ಬೆಳೆಸಿದರೆ ನಿರುದ್ಯೋಗಿಗಳಿಗೆ ಜೀವನೋಪಾಯ ಕಂಡುಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ ಶಾಸಕ ಯಡಿಯೂರಪ್ಪ ಮತ್ತು ಸಂಸದ ರಾಘವೇಂದ್ರರಿಗೆ ಅಂಥ ದೂರದರ್ಶಿತ್ವವಿಲ್ಲ; ನಾಲ್ಕು ದಶಕದಿಂದ ನಿರಂತರವಾಗಿ ಗೆಲ್ಲಿಸಿ ವಿರೋಧ ಪಕ್ಷದ ನಾಯಕ-ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಂಥ ಪರಮೋಚ್ಚ ಆಯಕಟ್ಟಿನ ಅಧಿಕಾರಕ್ಕೇರಲು ಅವಕಾಶ ಮಾಡಿಕೊಟ್ಟರೂಯಡಿಯೂರಪ್ಪ ನಿರುದ್ಯೋಗ ನಿವಾರಣೆಗೆ ಯೋಚನೆಗಳನ್ನು ಮಾಡಲಿಲ್ಲ ಎಂಬ ಬೇಸರದ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತವೆ!

ಕ್ಷೇತ್ರ ಮಹಿಮೆ!

ಶಿಕಾರಿಪುರ 1962ರಲ್ಲಿ ರಚನೆಯಾದ ವಿಧಾನಸಭಾ ಕ್ಷೇತ್ರ. ಅದಕ್ಕೂ ಮೊದಲು ಶಿಕಾರಿಪುರ ಸೊರಬ ವಿಧಾನಸಭಾ ಕ್ಷೇತ್ರದಲ್ಲಿತ್ತು. ಮೊದಲು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿತ್ತು. 1978ರ ಚುನಾವಣೆ ಸಂದರ್ಭದಲ್ಲಿ ಶಿಕಾರಿಪುರ ಸಾಮಾನ್ಯ ಕ್ಷೇತ್ರವಾಗಿ ಬದಲಾಯಿತು. ಆದರೆ ಕ್ಷೇತ್ರದಲ್ಲಿ ದಲಿತೇತರ ನಾಯಕತ್ವ ಬೆಳೆದಿರಲಿಲ್ಲ; ಜತೆಗೆ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಮತಗಳು ನಿರ್ಣಾಯಕ ಎನ್ನುವಷ್ಟು ದೊಡ್ಡ ಸಂಖ್ಯೆಯಲ್ಲಿದ್ದರಿಂದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಜನತಾ ಪಕ್ಷಗಳು ಪರಿಶಿಷ್ಟ ವರ್ಗದ ನಾಯಕರಿಗೆ 1978ರಲ್ಲಿ ಟಿಕೆಟ್ ಕೊಟ್ಟಿದ್ದವು. 1983ರಲ್ಲಿ ಲಿಂಗಾಯತ ಜಾತಿಯ ಬಿ.ಎಸ್.ಯಡಿಯೂರಪ್ಪ ಕೇಸರಿ ಪಾರ್ಟಿಯಿಂದ ಗೆದ್ದ ನಂತರ ಶಿಕಾರಿಪುರ ಒಂಥರಾ ಲಿಂಗಾಯತ ಮೀಸಲು ಕ್ಷೇತ್ರದಂತಾಗಿಹೋಗಿದೆಯೆಂದು
ರಾಜಕೀಯಾಸಕ್ತರು ಅಭಿಪ್ರಾಯಪಡುತ್ತಾರೆ.

ಶಿಕಾರಿಪುರ ರಾಜ್ಯದ ಪ್ರಬಲ ಲಿಂಗಾಯತ ನಾಯಕಗ್ರೇಸರಾಗಿ ಬೆಳೆದಿರುವ ಯಡಿಯೂರಪ್ಪನವರ ಭದ್ರ ಕೋಟೆ ಎಂಬ ಭಾವನೆ ಹೊರಪ್ರಪಂಚದಲ್ಲಿದೆ. ಆದರೆ ಯಡಿಯೂರಪ್ಪ ಎದುರಿಸಿರುವ 9 ಚುನಾವಣೆಗಳ ಅಂಕಿಅಂಶದ ಮೇಲೆ ಕಣ್ಣುಹಾಯಿಸಿದರೆ ಚಲಾವಣೆಯಾದ ಮತದಲ್ಲಿ ಅರ್ಧಕ್ಕಿಂತ ಹೆಚ್ಚು ಸೋತ ಅಭ್ಯರ್ಥಿಗಳೇ ಹಂಚಿಕೊಂಡಿದ್ದಾರೆ. ಹಲವು ಬಾರಿ ಬಿಜೆಪಿಯ ಈ ಶಕ್ತಿಶಾಲಿ ಮುಖಂಡ ಸಾಮ-ಭೇದ-ದಂಡ ಬಳಸಿದರೂ ತಿಣುಕಾಡಿ ಗೆದ್ದು ನಿಟ್ಟುಸಿರುಬಿಡುವಂತಾಗಿದೆ; ಒಮ್ಮೆ ಹೀನಾಯ ಸೋಲೂ ಕಂಡಿದ್ದಾರೆ ಎಂದು ಸ್ಥಳೀಯ ಚುನಾವಣಾ ವಿಶ್ಲೇಷಕರು ವಿವರಿಸುತ್ತಾರೆ. ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯ ಬೂಕನಕೆರೆಯ ವಲಸಿಗರಾದ ಯಡಿಯೂರಪ್ಪ ಶಿಕಾರಿಪುರದ ಮಣ್ಣಿನ ಅಳಿಯ; ಕ್ಷೇತ್ರದಲ್ಲಿ ತೀರಾ ಅಲ್ಪಸಂಖ್ಯಾತರಾದ ಗಾಣಿಗ ಲಿಂಗಾಯತ ಒಳ ಪಂಗಡದ ಯಡಿಯೂರಪ್ಪ ಬಹುಸಂಖ್ಯಾತ ಸಾದರ ಲಿಂಗಾಯತರ ಎದೆಗಿಳಿದಿರುವ ಪ್ರೀತಿಯ ನಾಯಕನೇನಲ್ಲ; ದೊಡ್ಡ ಸಮುದಾಯವಾದ ಸಾದರ ಲಿಂಗಾಯತರು ತಮ್ಮವನು ಯಾವುದಾದರು ಪಕ್ಷದ ಕ್ಯಾಂಡಿಡೇಟಾದರೆ ಅತ್ತಲೇ ಒಲಿಯುತ್ತಾರೆಂಬ ಮಾತು ಶಿಕಾರಿಪುರದಲ್ಲಿ ಕೇಳಿಬರುತ್ತದೆ. ನಾಲ್ಕು ದಶಕದ ಚುನಾವಣಾ ಚಿತ್ರಣವೂ ಈ ಮಾತನ್ನು ಪುಷ್ಟೀಕರಿಸುವಂತಿದೆ.

ಒಟ್ಟೂ 1,91,955 ಮತದಾರರಿರುವ ಶಿಕಾರಿಪುರದಲ್ಲಿ ಲಿಂಗಾಯತರು ಒಳ ಪಂಗಡಗಳೆಲ್ಲ ಸೇರಿ 57 ಸಾವಿರ, ಲಂಬಾಣಿಗಳು (ಎಸ್‌ಸಿ) 26 ಸಾವಿರ, ಮುಸ್ಲಿಮರು 21 ಸಾವಿರ, ಕುರುಬರು 19 ಸಾವಿರ, ಎಸ್‌ಸಿ-ಎಸ್‌ಟಿ 16 ಸಾವಿರ, ವಾಲ್ಮೀಕಿ (ಎಸ್‌ಟಿ) 15 ಸಾವಿರ, ಈಡಿಗರು 12 ಸಾವಿರ, ಒಕ್ಕಲಿಗರು 5 ಸಾವಿರ, ಬ್ರಾಹ್ಮಣರು
3 ಸಾವಿರ ಮತ್ತು ಇತರರು 10 ಸಾವಿರ ಇರಬಹುದೆಂದು ಅಂದಾಜಿಸಲಾಗಿದೆ. 1962ರಲ್ಲಿ ಕಾಂಗ್ರೆಸ್‌ನ ವೀರಪ್ಪರಿಗೆ ಪ್ರಜಾ ಸೋಷಲಿಸ್ಟ್ ಪಕ್ಷದ ಜಿ.ಬಸವಣ್ಯೆಪ್ಪ ಸೆಡ್ಡು ಹೊಡೆದಿದ್ದರು. ಈ ಕಾದಾಟದಲ್ಲಿ ಕಾಂಗ್ರೆಸ್ 4,928 ಮತಗಳ ಅಂತರದಿಂದ ಗೆಲುವು ಕಂಡಿತ್ತು. 1967ರಲ್ಲಿ ಸಂಯುಕ್ತ ಸಮಾಜವಾದಿ ಪಕ್ಷದ ಬಸವಣ್ಯೆಪ್ಪ (21,241) ಕಾಂಗ್ರೆಸ್ ಶಾಸಕ ವೀರಪ್ಪರನ್ನು (9,227) ದೊಡ್ಡ ಅಂತರದಲ್ಲಿ ಸೋಲಿಸಿ ಅಸೆಂಬ್ಲಿ ಪ್ರವೇಶಿಸಿದರು. 1972ರಲ್ಲಿ ಕೊರಚ ಸಮುದಾಯದ ಕೆ.ಯೆಂಕಟಪ್ಪನವರನ್ನು ಕಾಂಗ್ರೆಸ್ ಅಭ್ಯರ್ಥಿ ಮಾಡಿತ್ತು; ಸಂಸ್ಥಾ ಕಾಂಗ್ರೆಸ್‌ನ ಈ.ಪಿ.ಚಂದ್ಯಾ ನಾಯ್ಕ್ ಎದುರಾಳಿಯಾಗಿದ್ದರು. ಈ ಜಿದ್ದಾಜಿದ್ದಿನಲ್ಲಿ ಯೆಂಕಟಪ್ಪ 17,014 ಮತಗಳ ಅಂತರದಿಂದ ಚುನಾಯಿತರಾದರು. 1978ರಲ್ಲಿ ಶಿಕಾರಿಪುರ ಸಾಮಾನ್ಯ ಕ್ಷೇತ್ರವಾಗಿದ್ದರೂ ಪರಿಶಿಷ್ಟರ ಮಧ್ಯವೇ ಹಣಾಹಣಿ ಏರ್ಪಟಿತ್ತು. ಕಾಂಗ್ರೆಸ್(ಐ) ಪಕ್ಷದ ಯೆಂಕಟಪ್ಪ ಮತ್ತು ಜನತಾ ಪಕ್ಷದ ಜಿ.ಬಸವಣ್ಯೆಪ್ಪ ಮುಖಾಮುಖಿಯಾಗಿದ್ದರು; 11,186 ಮತಗಳ ಅಂತರಿಂದ ಗೆದ್ದ ಯೆಂಕಟಪ್ಪ ಎರಡನೆ ಬಾರಿ ಶಾಸಕರಾದರು.

ಯಡಿಯೂರಪ್ಪ ರಂಗಪ್ರವೇಶ!

1983ರ ಚುನಾವಣೆಯಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ರಾಜಕಾರಣದ ರಾಸಾಯನಿಕ ಸೂತ್ರ-ಸಮೀಕರಣ ಬದಲಾಯಿತು. ಆ ಆಖಾಡದಲ್ಲಿ ದಲಿತ ರಾಜಕಾರಣ ಹಿನ್ನಲೆಗೆ ಸರಿದು ಲಿಂಗಾಯತ ’ಪ್ರಜ್ಞೆ’ ಜಾಗ್ರತವಾಯಿತು ಎನ್ನಲಾಗುತ್ತಿದೆ. ಪ್ರಬಲ ಲಿಂಗಾಯತ ಸಮುದಾಯದ ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿಯಾಗಿದ್ದರು; ಕಾಂಗ್ರೆಸ್ ಮತ್ತು ಜನತಾ ರಂಗ ಟಿಕೆಟ್ ತಂತ್ರಗಾರಿಕೆಯಲ್ಲಿ ವಿಫಲವಾಗಿದ್ದವು. ಸಾದರ ಲಿಂಗಾಯತರನ್ನು ಕಣಕ್ಕಿಳಿಸಿದ್ದರೆ ಗೆಲ್ಲುವ ಅವಕಾಶವಿತ್ತು. ಆದರೆ ಕಾಂಗ್ರೆಸ್ ಎಂಟಿ ಇನ್‌ಕಂಬೆನ್ಸ್‌ನಲ್ಲಿದ್ದ ದಲಿತ ಸಮುದಾಯದ ಶಾಸಕ ಯೆಂಕಟಪ್ಪನವರನ್ನು ಮತ್ತೆ ಕಣಕ್ಕಿಳಿಸಿತ್ತು; ಆ ಹೊತ್ತಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಭಾವಿಯಾಗಿದ್ದ ಬಂಗಾರಪ್ಪ ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದಿದ್ದರು. ಸಾದು/ಸಾದರ ಲಿಂಗಾಯತ ವರ್ಗದ ಪ್ರಭಾವಿ ಮುಂದಾಳಾಗಿದ್ದ ಶಾಂತವೀರಪ್ಪ ಗೌಡ ಯಡಿಯೂರಪ್ಪರ ಬೆನ್ನಿಗಿದ್ದರು. ಈ ರಾಜಕೀಯ ಸನ್ನಿವೇಶದ ಒಟ್ಟೂ ಲಾಭ ಯಡಿಯೂರಪ್ಪನವರಿಗೆ ಆಗಿಯಿತು ಎನ್ನುವ ವಾದವಿದೆ. 40,687 ಮತ ಪಡೆದ ಯಡಿಯೂರಪ್ಪ ಭರ್ಜರಿ 22,183 ಮತದಂತರದಿಂದ ಶಾಸಕನಾದರು!

1985ರ ನಡುಗಾಲ ಚುನಾವಣೆಯಲ್ಲಿ ಯಡಿಯೂರಪ್ಪರಿಗೆ ಕಾಂಗ್ರೆಸ್‌ನ ಮಹಾದೇವನ ಗೌಡ ಪಾಟೀಲ್ ಎದುರಾಳಿಯಾಗಿದ್ದರು. ಯಡಿಯೂರಪ್ಪ ಎರಡನೆ ಬಾರಿ ಗೆದ್ದರಾದರೂ ಮತದಂತರ ಅರ್ಧದಷ್ಟು (11,555) ಇಳಿದಿತ್ತು. ಶಿಕಾರಿಪುರ ಕ್ಷೇತ್ರದಲ್ಲಿ ಜನಾನುರಾಗಿಯಾಗಿದ್ದ-ಕ್ಷೇತ್ರದ ನಾಡಿಮಿಡಿತ ಅರಿತಿದ್ದ ಪ್ರತಿಭಾನ್ವಿತ ರಾಜಕಾರಣಿ ನಗರದ ಮಹಾದೇವಪ್ಪ 1989ರ ಚುನಾವಣೆ ಹೊತ್ತಿಗೆ ಯಡಿಯೂರಪ್ಪರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ರೂಪುಗೊಂಡಿದ್ದರು. 1989ರಲ್ಲಿ ಯಡಿಯೂರಪ್ಪ ಹಾಗು ಪಕ್ಷೇತರರಾಗಿ ಸ್ಪರ್ಧಿಸಿದ್ದ ಮಹಾದೇವಪ್ಪರ ಮಧ್ಯೆ ಕತ್ತುಕತ್ತಿನ ಹೋರಾಟವೇ ನಡೆದುಹೋಯಿತು. ಶಾಸಕನಾಗುವ ಸಕಲ ಅರ್ಹತೆಯಿದ್ದ ಕುರುಬ ಸಮಾಜದ ಮಹಾದೇವಪ್ಪ ಎಲ್ಲ ವರ್ಗದ ವಿಶ್ವಾಸ ಗಳಿಸಿದ್ದರು. ಎದುರಾಳಿಯ ಜಾತಿ ತಂತ್ರಗಾರಿಕೆಗೆ ಸಮರ್ಥವಾಗಿ ಪ್ರತಿತಂತ್ರ ಹೆಣೆದಿದ್ದ ಮಹಾದೇವಪ್ಪರಿಗೆ ಹಣಬಲ ಇರಲಿಲ್ಲ. ಹೀಗಾಗಿ ಕೇವಲ 2,274 ಮತಗಳ ಅಂತರದಿಂದ ಸೋಲುವಂತಾಯಿತೆಂದು ಅಂದಿನ ಜಿದ್ದಾಜಿದ್ದಿಯನ್ನು ಹತ್ತಿರದಿಂದ ಕಂಡ ಹಿರಿಯರು ಹೇಳುತ್ತಾರೆ.

ಬಂಗಾರಪ್ಪ

1994ರಲ್ಲಿ ನಗರದ ಮಹಾದೇವಪ್ಪ ಕಾಂಗ್ರೆಸ್ ಕ್ಯಾಂಡಿಡೇಟಾದರು. ಮೂರು ಬಾರಿ ಎಮ್ಮೆಲ್ಲೆಯಾಗಿ ಚುನಾವಣೆಗಳನ್ನು ಗೆಲ್ಲುವ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದ ಯಡಿಯೂರಪ್ಪ 1994ರಲ್ಲಿ ’ಹಣಾ’ಹಣಿ ಮತ್ತು ಜಾತಿ ರಾಜಕಾರಣದಿಂದ ಗೆದ್ದರೆಂಬ ಮಾತು ಕ್ಷೇತ್ರದಲ್ಲಿ ಈಗಲೂ ಕೇಳಿಬರುತ್ತದೆ. ಯಡಿಯೂರಪ್ಪರ ಸೆಳೆತಕ್ಕಿ ಸಿಲುಕಿದ್ದ ಕಾಂಗ್ರೆಸ್ ನಾಯಕರು ಮಹಾದೇವಪ್ಪರ ಪರ ಕೆಲಸ ಮಾಡದೆ ನಿಷ್ಕ್ರಿಯರಾಗಿದ್ದರು ಎನ್ನಲಾಗಿದೆ. ಯಡಿಯೂರಪ್ಪ 28,685 ಮತಗಳ ಅಂತರದಿಂದ ಶಾಸಕರಾದರು. ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ಯಡಿಯೂರಪ್ಪ ಆ ವೇಳೆಗೆ ಪಕ್ಷ ಮತ್ತು ಸಂಘಪರಿವಾರದಲ್ಲಿ ವರ್ಚಸ್ವಿ ಮುಂದಾಳಾಗಿದ್ದರು. 1994ರಲ್ಲಿ ಜನತಾ ದಳ ಅಧಿಕಾರ ಹಿಡಿದಿತ್ತು. ಕಾಂಗ್ರೆಸ್ ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟು, ಬಿಜೆಪಿ ಅಧಿಕೃತ ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು. ಯಡಿಯೂರಪ್ಪ ಮೊದಲ ಬಾರಿ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೇರಿದರು.

ಯಡಿಯೂರಪ್ಪಗೆ ಸೋಲು!

ಶಿವಮೊಗ್ಗ ರಾಜಕಾರಣದಲ್ಲಿ ಬಂಗಾರಪ್ಪ ಫ್ಯಾಕ್ಟರ್ ಕೆಲಸ ಮಾಡುತ್ತಿದ್ದ ಕಾಲವದು; ಅಸೆಂಬ್ಲಿ ಮತ್ತು ಪಾರ್ಲಿಮೆಂಟ್ ಇಲೆಕ್ಷನ್ 1999ರಲ್ಲಿ ಒಟ್ಟಿಗೆ ಬಂದಿತ್ತು; ಕಾಂಗ್ರೆಸ್‌ಗೆ ಮರಳಿದ್ದ ಬಂಗಾರಪ್ಪ ಲೋಕಸಭೆಗೆ ಸ್ಪರ್ಧಿಸಿದ್ದರು. ಯಡಿಯೂರಪ್ಪರನ್ನು ಸೋಲಿಸುವ ತಂತ್ರ ಹೆಣೆದಿದ್ದ ಬಂಗಾರಪ್ಪ ಶಿಕಾರಿಪುರದಲ್ಲಿ ಪ್ರಬಲವಾಗಿರುವ ಸಾದರ ಲಿಂಗಾಯತ ಪಂಗಡದ ಮಹಾಲಿಂಗಪ್ಪರನ್ನು ಕಾಂಗ್ರೆಸ್ ಹುರಿಯಾಳಾಗಿಸಿದರು. ಸತತ ನಾಲ್ಕು ಬಾರಿ ಗೆದ್ದು ಬಿಜೆಪಿಯಲ್ಲಿ ಎತ್ತರೆತ್ತರಕ್ಕೇರಿದ್ದ ಯಡಿಯೂರಪ್ಪ ಕ್ಷೇತ್ರವನ್ನು ಕಡೆಗಣಿಸಿ ರಾಜ್ಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದು ಜನರಲ್ಲಿ ಅಸಮಾಧಾನ ಸೃಷ್ಟಿಯಾಗಿತ್ತು ಎನ್ನಲಾಗಿದೆ. ಬಂಗಾರಪ್ಪರ ಸ್ಟ್ರಾಟಜಿ ವರ್ಕಔಟ್ ಆಗಿತ್ತು; ತಾಲೂಕು ಪಂಚಾಯ್ತಿ ಸದಸ್ಯರಾಗಿದ್ದ ಮಹಾಲಿಂಗಪ್ಪರ (55,852) ಎದುರು ಯಡಿಯೂರಪ್ಪ 7,661 ಮತದಂತರದಿಂದ ಪರಾಭವಗೊಂಡರು! ನೇರ ಚುನಾವಣೆಯಲ್ಲಿ ಸೋತ ಕೆಲವೇ ತಿಂಗಳಲ್ಲಿ ಯಡಿಯೂರಪ್ಪ ಶಾರ್ಟ್‌ಕಟ್ ಮೂಲಕ ವಿಧಾನ ಪರಿಷತ್ ಸದಸ್ಯರಾದರು.

2004ರಲ್ಲಿ ಬಂಗಾರಪ್ಪ ಬಿಜೆಪಿ ಸೇರಿದ್ದು ಯಡಿಯೂರಪ್ಪರಿಗೆ ಕಠಿಣವಾಗತೊಡಗಿದ್ದ ಕಣವನ್ನು ಸುಲಭ ಮಾಡಿಕೊಟ್ಟಂತಾಯಿತು; ಕಾಂಗ್ರೆಸ್‌ನ ಶೇಖರಪ್ಪ ದುರ್ಬಲ ಉಮೇದುದಾರರಾಗಿದ್ದರು. ಈ ಅನುಕೂಲಗಳಿಂದ ಯಡಿಯೂರಪ್ಪ 19,953 ಮತಗಳ ಅಂತರದಿಂದ ಜಯಭೇರಿ ಬಾರಿಸಿದರೆಂಬ ತರ್ಕ ಶಿಕಾರಿಪುರದಲ್ಲಿದೆ. 2004ರ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಜೆಡಿಎಸ್ ಬೆಂಬಲ ಪಡೆದು ಮುಖ್ಯಮಂತ್ರಿ ಆಗಲು ಪ್ರಯತ್ನಿಸಿ ಯಡಿಯೂರಪ್ಪ ವಿಫಲರಾದರು. ಜೆಡಿಎಸ್ ಬೆಂಬಲದಿಂದ ಧರ್ಮಸಿಂಗ್ ಸಿಎಂ ಆದರು. ಎರಡು ದಶಕಗಳ ನಿರಂತರ ಹೋರಾಟ-ಸಂಘಟನೆಯ ರಾಜಕಾರಣದಲ್ಲಿ ಅಧಿಕಾರ ಮರೀಚಿಕೆಯಾಗಿದ್ದರಿಂದ ಹತಾಶರಾಗಿದ್ದ ಯಡಿಯೂರಪ್ಪ ಒಂದು ಹಂತದಲ್ಲಿ ಕಾಂಗ್ರೆಸ್ ಸೇರಿ ಮಂತ್ರಿಯಾಗುವ ಯೋಚನೆಯೂ ಮಾಡಿದ್ದರೆಂಬ ಮಾತು ರಾಜಕೀಯ ಪಡಸಾಲೆಯಲ್ಲಿದೆ.

ಸಮಾನಾಂತರವಾಗಿ ಜೆಡಿಎಸ್ ನಾಯಕ ಕುಮಾರಸ್ವಾಮಿ ಜತೆಗೂ ಯಡಿಯೂರಪ್ಪ ಮೈತ್ರಿ ಮಾತುಕತೆ ನಡೆಸುತ್ತಿದ್ದರು. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರ ಸ್ಥಾಪಿಸೋಣ; ನನಗೊಂದು ಮಂತ್ರಿಸ್ಥಾನ ಕೊಟ್ಟರೆ ಸಾಕೆಂದು ಯಡಿಯೂರಪ್ಪ ದುಂಬಾಲು ಬಿದ್ದಿದ್ದರು ಎಂದು ಕುಮಾರಸ್ವಾಮಿ ಸಿಟ್ಟಿನ ಸಂದರ್ಭದಲ್ಲಿ ಹೇಳಿಕೆಯೂ ಕೊಟ್ಟಿದ್ದರು. ಅಂತೂ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಸೇರಿ ಧರ್ಮಸಿಂಗ್ ಸರಕಾರ ಉರುಳಿಸಿ ಕೋಮುವಾದಿ (ಬಿಜೆಪಿ) ಮತ್ತು ಜಾತ್ಯತೀತ (ಜೆಡಿಎಸ್) ನಂಟಿನ ಸರಕಾರ ಕಟ್ಟಿದ್ದು ಇತಿಹಾಸ. ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ, ಯಡಿಯೂರಪ್ಪ ಉಪ ಮುಖ್ಯಮಂತ್ರಿ (ಹಣಕಾಸು ಸಚಿವ) ಆದರು. ಇಪ್ಪತ್ತಿಪ್ಪತ್ತು ತಿಂಗಳು ಮುಖ್ಯಮಂತ್ರಿಯಾಗುವ ಒಪ್ಪಂದ ಕುಮಾರಸ್ವಾಮಿ-ಯಡಿಯೂರಪ್ಪರಲ್ಲಿ ಆಗಿತ್ತು. ಆದರೆ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಮರುಕ್ಷಣವೆ ಜೆಡಿಎಸ್ ಬೆಂಬಲ ವಾಪಸ್ ಪಡೆಯಿತು; ಬೃಹನ್ನಾಟಕ ನಡೆದು ವಿಧಾನಸಭೆ ವಿಸರ್ಜನೆ ಆಗಿತ್ತು.

ಮುಖ್ಯಮಂತ್ರಿ-ಜೈಲು ವಾಸ

ಅವಧಿಗೂ ಮೊದಲೆ ಬಂದ 2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಬಿಂಬಿಸಿತ್ತು. ತನ್ನ ಕೃಪೆಯಿಂದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ವಚನಭ್ರಷ್ಟರೆಂದು ಪ್ರಚಾರ ಮಾಡಿದ ಯಡಿಯೂರಪ್ಪ ರಾಜ್ಯಾದ್ಯಂತ ಸ್ವಜಾತಿ ಲಿಂಗಾಯತರ ಓಟುಗಳನ್ನು ಬಿಜೆಪಿ ಪರ ಕ್ರೋಢೀಕರಿಸಿದರು. ಆ ಇಲೆಕ್ಷನ್‌ನಲ್ಲಿ ಬಿಜೆಪಿ ದೊಡ್ಡ ಪಕ್ಷವಾಯಿತೆ ಹೊರತು, ಯಡಿಯೂರಪ್ಪರಿಗೆ ಅಧಿಕಾರ ನಡೆಸಲು ಬೇಕಾದ ಮ್ಯಾಜಿಕ್ ನಂಬರ್ ಪಡೆಯಲಾಗಲಿಲ್ಲ. ಇತ್ತ ಶಿಕಾರಿಪುರದಲ್ಲಿ ತನಗೆ ಸೆಡ್ಡುಹೊಡೆದಿದ್ದ ರಾಜ್ಯದ ಪ್ರತಿಷ್ಠಿತ ರಾಜಕಾರಣಿ ಬಂಗಾರಪ್ಪನವರನ್ನು 45,927 ಮತಗಳ ಅಂತರದ ಪ್ರಚಂಡ ಬಹುಮತದಿಂದ ಯಡಿಯೂರಪ್ಪ ಸೋಲಿಸಿದರು.

ಬಿ.ವೈ ರಾಘವೇಂದ್ರ

ಶಿಕಾರಿಪುರದಲ್ಲಿ ಗೆದ್ದಷ್ಟು ಸುಲಭವಾಗಿ ಮುಖ್ಯಮಂತ್ರಿ ಪೀಠವೇರಲು ಯಡಿಯೂರಪ್ಪರಿಗೆ ಸಾಧ್ಯವಾಗಲಿಲ್ಲ. ಯಡಿಯೂರಪ್ಪ 30 ಮೇ 2008ರಂದು ಎರಡನೆ ಸಲ ಸಿಎಂ ಆದರು. ಅಸೆಂಬ್ಲಿಯಲ್ಲಿ ಬಹುಮತ ಗಳಿಸಲು ಅನ್ಯಪಕ್ಷಗಳ ಶಾಸಕರನ್ನು ಕದಿಯುವ ’ಆಪರೇಷನ್ ಕಮಲ’ ಹೆಸರಿನ ಪ್ರಜಾಪ್ರಭುತ್ವ ವಿರೋಧಿ ವಾಮಮಾರ್ಗವನ್ನು ಯಡಿಯೂರಪ್ಪ ಅನುಸರಿಸಿದರೆಂಬ ಕಳಂಕ ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಶಾಶ್ವತವಾಗಿ ದಾಖಲಾಗಿದೆ ಎಂದು ಶಿಕಾರಿಪುರದ ಪ್ರಜ್ಞಾವಂತರು ವಿಷಾದದಿಂದ ಹೇಳುತ್ತಾರೆ! ಅದಿರು ಲೂಟಿಕೋರರ ಉಪಟಳದ ನಿರಂತರ ಭಿನ್ನಮತದಿಂದ ಅಕ್ಷರಶಃ ಕಣ್ಣೀರು ಸುರಿಸುತ್ತಲೆ ಆಳ್ವಿಕೆ ನಡೆಸಿದ ಯಡಿಯೂರಪ್ಪ ಭ್ರಷ್ಟಾಚಾರದ ಆರೋಪದಿಂದ ಸಿಎಂ ಹುದ್ದೆ ಬಿಡಬೇಕಾಗಿಬಂತು. ಅಷ್ಟೆ ಅಲ್ಲ, ಅವ್ಯವಹಾರದ ಪ್ರಕಾಣದಲ್ಲಿ ಬಂಧಿಸಲ್ಪಟ್ಟ ಯಡಿಯೂರಪ್ಪ 23 ದಿನ ಜೈಲಿನಲ್ಲಿ ಕಳೆದರು; ರಾಜ್ಯದ ಮಾಜಿ ಸಿಎಂ ಒಬ್ಬ ಭ್ರಷ್ಟಾಚಾರದ ಆರೋಪಲ್ಲಿ ಜೈಲುಪಾಲಾದ ಪ್ರಥಮ ಪ್ರಕರಣವಿದು!

ಬಿಜೆಪಿಗೆ ಬೈ-ಜೈ!

ಬಿಜೆಪಿಯಲ್ಲಿ ಮೂಲೆಗುಂಪಾದ ಯಡಿಯೂರಪ್ಪ ಸಿಡಿದು ಕೆಜೆಪಿ ಎಂಬ ಸ್ವಂತ ಪಕ್ಷ ಕಟ್ಟಿದರು. ಶಿಕಾರಿಪುರದಲ್ಲಿ ಯಡಿಯೂರಪ್ಪ ಕೆಜೆಪಿ ಕ್ಯಾಂಡಿಡೇಟ್ ಆದರು. ಕ್ಷೇತ್ರದಲ್ಲಿ ಯಡಿಯೂರಪ್ಪರ ಉನ್ನತಿಗೆ ಕಾರಣಕರ್ತರು ಎನ್ನಲಾಗುತ್ತಿರುವ ಸಾದರ ಲಿಂಗಾಯತ ಪಂಗಡದ ಶಾಂತವೀರಪ್ಪ ಗೌಡ ಬಿಜೆಪಿಯಿಂದ ಕಾಂಗ್ರೆಸ್ ಸೇರಿದ್ದರು. ಈ ಹಳೆಯ ಗೆಳೆಯರಲ್ಲಿ ಜಿದ್ದಾಜಿದ್ದಿ ಏರ್‍ಪಟ್ಟಿತು. ಯಡಿಯೂರಪ್ಪ 24,425 ಮತಗಳ ಅಂತರದಿಂದ ಗೆದ್ದರು. ಆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಸಿಕ್ಕಿದ್ದು ಕೇವಲ 2,383 ಮತಗಳಷ್ಟೆ! 2013ರ ಚುನಾವಣೆಯಲ್ಲಿ ಕೈಬೆರಳೆಣಿಕೆಯಷ್ಟು ಶಾಸಕರು ಕೆಜೆಪಿಯಿಂದ ಗೆದ್ದರು. ಆದರೆ ಬಿಜೆಪಿಗೆ ಯಡಿಯೂರಪ್ಪರ ಪಾರ್ಟಿ ಮುಟ್ಟಿ ನೋಡುವಂತ ಪೆಟ್ಟುಕೊಟ್ಟಿತ್ತು. ಅಲ್ಲಿಗೆ ಶಿಕಾರಿಪುರದಲ್ಲಿ ಯಡಿಯೂರಪ್ಪ ಇಲ್ಲದೆ ಬಿಜೆಪಿಗೆ ನೆಲೆಬೆಲೆ ಇಲ್ಲ ಮತ್ತು ರಾಜ್ಯದಲ್ಲಿ ಬಿಜೆಪಿ ಹಾಗು ಯಡಿಯೂರಪ್ಪರಿಗೆ ಪರಸ್ಪರ ಅವಲಂಬನೆ ಅನಿವಾರ್ಯ ಎಂಬುದನ್ನು 2013ರ ಅಸೆಂಬ್ಲಿ ಚುನಾವಣೆಯಿಂದ ಸಾಬೀತಾದಂತಾಗಿತ್ತು ಎಂಬ ವಿಶ್ಲೇಷಣೆಗಳು ರಾಜಕೀಯ ಪಡಸಾಲೆಯಲ್ಲಿದೆ.

2014ರ ಲೋಕಸಭೆ ಚುನಾವಣೆ ಎದುರಾದಾಗ ಯಡಿಯೂರಪ್ಪ ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿ ಸಂಸದರಾದರು. ಯಡಿಯೂರಪ್ಪರಿಂದ ತೆರವಾದ ಶಿಕಾರಿಪುರ ಅಸೆಂಬ್ಲಿ ಸ್ಥಾನಕ್ಕೆ ಅದೇ ವರ್ಷ ಉಪಚುನಾವಣೆ ಜರುಗಿತು. ತಂದೆಗೆ ಎಂಪಿ ಸೀಟು ಬಿಟ್ಟುಕೊಟ್ಟಿದ್ದ ಯಡಿಯೂರಪ್ಪರ ಹಿರಿಮಗ ರಾಘವೇಂದ್ರ ಮತ್ತು ಕಾಂಗ್ರೆಸ್ ಹುರಿಯಾಳು ಶಾಂತವೀರಪ್ಪ ಗೌಡರ ನಡುವೆ ಕತ್ತುಕತ್ತಿನ ಸೆಣಸಾಟ ನಡೆಯಿತು. ರಾಘವೇಂದ್ರ ತೀರಾ ಸಣ್ಣ ಅಂತರದಲ್ಲಿ (6,430) ಬಚಾವಾದರು. ತಮ್ಮ ಪಟ್ಟುಗಳೆಲ್ಲ ಗೊತ್ತಿರುವ ಈ ಶಾಂತವೀರಪ್ಪ ಗೌಡ ಮಗ್ಗಲುಮುಳ್ಳೆಂದು ಭಾವಿಸಿದ ಯಡಿಯೂರಪ್ಪ & ಫ್ಯಾಮಿಲಿ, ಅವರನ್ನು ಆಪರೇಷನ್ ಕಮಲಕ್ಕೆ ಒಳಪಡಿಸಿ ಎಮ್ಮೆಲ್ಸಿ ಮಾಡಿತು.

ಬಿಜೆಪಿಯ ಕಟ್ಟರ್ ಸಂಘ ಪರಿವಾರಿಗರು ಎಷ್ಟೇ ವಿರೋಧಿಸಿದರೂ ರಾಜ್ಯದ ಪ್ರಬಲ ಲಿಂಗಾಯತ ಸಮುದಾಯದ ಏಕಮೇವಾದ್ವಿತೀಯ ನಾಯಕನಾಗಿದ್ದ ಯಡಿಯೂರಪ್ಪರನ್ನು ಕಡೆಗಣಿಸುವ ಸ್ಥಿತಿಯಲ್ಲಿ ಇರಲಿಲ್ಲ ಎನ್ನಲಾಗಿದೆ. 2016ರಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಯಡಿಯೂರಪ್ಪರನ್ನು ನೇಮಕ ಮಾಡಿದ ಮೋದಿ-ಶಾ ಜೋಡಿ 2016ರ ಚುನಾವಣೆಯಲ್ಲಿ ಮುಖ್ಯಮಂತ್ರಿ ಕ್ಯಾಡಿಡೇಟೆಂದು ಘೋಷಣೆಯೂ ಮಾಡಿತು! ಸಂಸದ ಯಡಿಯೂರಪ್ಪ 2018ರ ಅಸೆಂಬ್ಲಿ ಅಖಾಡಕ್ಕಿಳಿಯುತ್ತಾರೆ. ಕುರುಬ ಸಮುದಾಯದ ಗೋಣಿ ಮಹಾಂತೇಶ್ ಕಾಂಗ್ರೆಸ್ ಪ್ರತಿಸ್ಪರ್ಧಿ. ಜಾತಿ ಓಟ್ ಬ್ಯಾಂಕ್ ಮತ್ತು ಪ್ರಬಲ ಸಂಪನ್ಮೂಲಗಳ ಯಡಿಯೂರಪ್ಪ 35,357 ಮತಗಳ ಅಂತರದಿಂದ ಸಲೀಸಾಗಿ ಆ ಚುನಾವಣೆಯಲ್ಲಿ ಗೆಲುವು ಕಂಡರೆಂಬ ಮಾತು ಸಾಮಾನ್ಯವಾಗಿದೆ.

2018ರಲ್ಲಿ ಬಿಜೆಪಿಗೆ ಸರಕಾರ ರಚಿಸುವಷ್ಟು ಶಾಸಕರ ಬಲವಿರಲಿಲ್ಲ; ಆದರೂ ದೊಡ್ಡ ಪಕ್ಷವೆಂಬ ನೆಲೆಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ ಬಹುಮತ ಸಾಬೀತುಪಡಿಸಲಾಗದೆ ರಾಜಿನಾಮೆ ನೀಡಿದರು;

ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರಕಾರ ಅಸ್ತಿತ್ವಕ್ಕೆ ಬಂತು. ಜೆಡಿಎಸ್‌ನ ಕುಮಾರಸ್ವಾಮಿ ಸಿಎಂ ಆದರು; ಯಡಿಯೂರಪ್ಪ ಮೂರನೆ ಸಲ ವಿರೋಧಪಕ್ಷದ ನಾಯಕರಾದರು. ’ಆಪರೇಷನ್ ಕಮಲ’ ಕಾರ್ಯಾಚರಣೆಗಿಳಿದ ಯಡಿಯೂರಪ್ಪ ಅಂತೂ 2019ರಲ್ಲಿ ಕುಮಾರಸ್ವಾಮಿ ಸರಕಾರ ಕೆಡವಿ ನಾಲ್ಕನೆ ಬಾರಿ ಮುಖ್ಯಮಂತ್ರಿ ಆದರು. ವಿರೋಧ ಪಕ್ಷದವರನ್ನು ಆಪರೇಷನ್ ಮಾಡಿ ಅಧಿಕಾರ ಹಿಡಿಯುವುದು ಯಡಿಯೂರಪ್ಪರ ಐದು ದಶಕದ ಹಿಂದಿನ ಚಾಳಿ ಎಂಬ ಆಕ್ಷೇಪದ ಮಾತುಗಳು ಶಿಕಾರಪುರದಲ್ಲಿ ಕೇಳಿಬರುತ್ತದೆ; 1972ರಲ್ಲಿ ಶಿಕಾರಿಪುರ ಮುನ್ಸಿಪಾಲಿಟಿಯಲ್ಲಿ ಜನಸಂಘದ ಸದಸ್ಯರಾಗಿದ್ದ ಯಡಿಯೂರಪ್ಪ ಕಾಂಗ್ರೆಸಿಗರಿಗೆ ಆಪರೇಷನ್ ನಡೆಸಿಯೇ ಅಧ್ಯಕ್ಷರಾಗಿದ್ದರೆಂದು ಹಿರಿಯ ಉಪನ್ಯಾಸಕರೊಬ್ಬರು ’ನ್ಯಾಯಪಥ’ಕ್ಕೆ ವಿವರಿಸಿದರು!

ಕ್ಷೇತ್ರದಲ್ಲಿ ಏನಿದೆ? ಏನಿಲ್ಲ?

ಮಂಡ್ಯದ ಕೆಆರ್ ಪೇಟೆ ತಾಲೂಕಿನ ಬೂಕನಕೆರೆಯಿಂದ ವಲಸೆ ಬಂದು ಶಿಕಾರಿಪುರವನ್ನು ಕೌಟುಂಬಿಕ-ರಾಜಕೀಯ-ಸಾಮಾಜಿಕ ಕಾರ್ಯಕ್ಷೇತ್ರ ಮಾಡಿಕೊಂಡು ರಾಜ್ಯ ಆಳುವ ಮಟ್ಟಕ್ಕೇರಿದ ಯಡಿಯೂರಪ್ಪನವರ ಆರು ದಶಕಗಳ ಏಳು-ಬೀಳು ರೋಚಕವಾಗಿದೆ! ಯಡಿಯೂರಪ್ಪ 1960ರ ದಶಕದಲ್ಲಿ ಸರಕಾರಿ ಕರ್ಮಚಾರಿಕೆ ಬಟ್ಟು ಶಿಕಾರಿಪುರದ ಶ್ರೀಮಂತ-ಪ್ರತಿಷ್ಠಿತ ಅಕ್ಕಿ ವ್ಯಾಪಾರಿ ವೀರಭದ್ರ ಶಾಸ್ತ್ರಿಯವರ (ಲಿಂಗಾಯತ) ರೈಸ್ ಮಿಲ್‌ನಲ್ಲಿ ಗುಮಾಸ್ತನಾಗಿ ಸೇರಿಕೊಂಡಿದ್ದರು. ಧಣಿಯ ಮಗಳು ಮೈತ್ರಾದೇವಿಯನ್ನೆ ಮದುವೆಯಾದ ಯಡಿಯೂರಪ್ಪ ಅದೇ ಹೊತ್ತಿಗೆ ಸ್ಥಳೀಯ ಆರ್‌ಎಸ್‌ಎಸ್ ಮತ್ತು ಜನಸಂಘದಲ್ಲಿ ಸಕ್ರಿಯರಾಗಿದ್ದರು. 1983ರಿಂದ ಒಂದಲ್ಲ ಒಂದು ಅಧಿಕಾರದ ಆಯಕಟ್ಟಿನ ಸ್ಥಾನದಲ್ಲಿರುವ ಯಡಿಯೂರಪ್ಪರ ಸಾಧನೆ ಏನೆಂದು ಕೇಳಿಕೊಂಡು ಶಿಕಾರಿಪುರದಲ್ಲಿ ಸುತ್ತು ಹೊಡೆದರೆ ಒಂದಿಷ್ಟು ಸರಕಾರಿ ಸ್ಥಾವರಗಳು (ಆಫೀಸು), ರಸ್ತೆಗಳು ಆಗಿರುವುದು ಕಾಣಿಸುತ್ತದೆ. ಸಿದ್ದರಾಮಯ್ಯ ಸರಕಾರವಿದ್ದಾಗ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಬಸ್ ಡಿಪೊ, ಹೈವೆ ಆಗಿದೆಯೆಂಬ ಮಾತು ಕೇಳಿಬರುತ್ತದೆ.

ವಿಜಯೇಂದ್ರ

ನಂಜುಂಡಪ್ಪ ವರದಿಯಲ್ಲಿ ಹಿಂದುಳಿದ ತಾಲೂಕೆಂದು ಗುರುತಿಸಲ್ಪಟ್ಟಿದ್ದ ಶಿಕಾರಿಪರದ ಚಿತ್ರಣ ಬದಲಾಗಲು ಆರಂಭಿಸಿದ್ದು ಯಡಿಯೂರಪ್ಪ ಡಿಸಿಎಂ ಆದ ಬಳಿಕ. ಈಗದು ಸರಕಾರಿ ದಾಖಲೆಗಳ ಪ್ರಕಾರ ಮುಂದುವರಿದ ತಾಲೂಕು. ಆದರೆ ಶಿಕಾರಿಪುರದ ಜನರು ರಸ್ತೆ, ಕಾಲು ಸಂಕ, ಸರಕಾರಿ ಕಚೇರಿ, ಶಾಲಾ ಕಟ್ಟಡಗಳ ಕಾಂಕ್ರಿಟ್ ಕಾಮಗಾರಿ ಅಭಿವೃದ್ಧಿಯಲ್ಲ; ಅವು ಮೂಲಭೂತ ಸೌಕರ್ಯಗಳಷ್ಟೆ; ಜನರು ಬದುಕು ಕಟ್ಟಿಕೊಳ್ಳಲಿಕ್ಕೆ ಮತ್ತು ಆರ್ಥಿಕ ಪ್ರಗತಿಗೆ ಅವಕಾಶವಾದರೆ ಮಾತ್ರ ಪ್ರಗತಿ ಎನ್ನಬಹುದು ಅನ್ನುತ್ತಾರೆ. ಪ್ರವಾಸೋದ್ಯಮ, ಕೈಗಾರಿಕೆ, ನೈಸರ್ಗಿಕ ನೀರಾವರಿ ಯೋಜನೆಗಳು ಬಂದರೆ ತಂತಾನೆ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬದು ಕ್ಷೇತ್ರದಲ್ಲಿನ ಸಾಮಾನ್ಯ ಅಭಿಪ್ರಾಯವಾಗಿದೆ.

ಯಡಿಯೂರಪ್ಪರಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕಲ್ಪನೆಯಿಲ್ಲ. ಅವರಲ್ಲಿ ದೂರದೃಷ್ಟಿಯಿದ್ದರೆ ಅತಿ ಹೆಚ್ಚು ಭತ್ತ ಬೆಳೆಯುವ ಶಿಕಾರಿಪುರಕ್ಕೆ ತುಂಗಭದ್ರೆಯಿಂದ ಸ್ವಾಭಾವಿಕವಾಗಿ ನೀರುಹರಿಸುವ ನೀರಾವರಿ ಯೋಜನೆ ಕನಿಷ್ಟ 20 ವರ್ಷದ ಹಿಂದೆಯೆ ಬರುತ್ತಿತ್ತು; ಕ್ಷೇತ್ರದಲ್ಲಿ ರೈಸ್‌ಪಾರ್ಕ್ ನಿರ್ಮಾಣ ಮಾಡಬೇಕಿತ್ತು; ಏತ ನೀರಾವರಿಗಾಗಿ ಜನರು ಪಾದಯಾತ್ರೆ ಮಾಡಿ ಹೋರಾಟ ನಡೆಸಿದರು; ಕುಮಾರಸ್ವಾಮಿ-ಕಾಂಗ್ರೆಸ್ ಸರಕಾರ ಇದ್ದಾಗ 850 ಕೋಟಿ ರೂಗಳ ಮೂರು ಏತ ನೇರಾವರಿ ಯೋಜನೆಗೆ ಮಂಜೂರು ಸಿಕ್ಕಿತ್ತು. ಅದನ್ನು ಅನುಷ್ಠಾನ ಮಾಡಲಾಗಿದೆಯೆ ಹೊರತು ರೈತ ಮುಖಂಡನೆಂದು ತೋರಿಸಿಕೊಳ್ಳುವ ಯಡಿಯೂರಪ್ಪರ ಪ್ರಯತ್ನದಿಂದ ರೈತರಿಗೆ ಯಾವ ಅನುಕೂಲವೂ ಆಗಿಲ್ಲ ಎಂದು ನಿವೃತ್ತ ಕೆಎಎಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

ಯಡಿಯೂರಪ್ಪ ತಮ್ಮ ಬಹುಕಾಲದ ಪರಮಾಪ್ತ ಸಹಾಯಕ ಆರ್‌ಎಸ್‌ಎಸ್ ಕಟ್ಟಾಳು ಸಾಗರದ ಬ್ರಾಹ್ಮಣ ಸಮುದಾಯದ ಗುರುಮೂರ್ತಿಗೆ ಕ್ಷೇತ್ರ ವಹಿಸಿಕೊಟ್ಟು ರಾಷ್ಟ್ರ-ರಾಜ್ಯ ರಾಜಕಾರಣದಲ್ಲಿ ತೊಡಗಿರುತ್ತಾರೆ; ಶಾಸಕ-ಸಂಸದ ಜನರಿಗೆ ಸಿಗುವುದೆ ಅಪರೂಪ ಎಂಬ ಬೇಸರ ಕ್ಷೇತ್ರದಲ್ಲಿದೆ.

ನಾಡಿಗೆ ಮುಖ್ಯಮಂತ್ರಿಯನ್ನು ಕೊಟ್ಟ ಶಿಕಾರಿಪುರದ ಜನರು ಮಲಿನವಾದ ಕೆನ್ನೀರು ಕುಡಿಯುತ್ತಿದ್ದಾರೆ; ರೈತರಿಗೆ ಬೀಜ-ರಸಗೊಬ್ಬರ ಸರಿಯಾಗಿ ವಿತರಣೆಯಾಗುತ್ತಿಲ್ಲ; ಶಿಕಾರಿಪುರದಲ್ಲಿನ ಶಿಕ್ಷಣ ವ್ಯವಸ್ಥೆಯು ಅಷ್ಟಕ್ಕಷ್ಟೆ ಎನ್ನಲಾಗಿದ್ದು ಇಂಜಿನಿಯರಿಂಗ್, ಪಾಲಿಟೆಕ್‌ನಿಕ್, ನರ್ಸಿಂಗ್ ಮುಂತಾದ ವೃತ್ತಿಪರ ಕೋರ್ಸ್‌ಗಳ ಕಾಲೇಜು ಬೇಕಾಗಿದೆ; ಕಾಗೋಡು ತಿಮ್ಮಪ್ಪ ಕಂದಾಯ ಮಂತ್ರಿಯಾಗಿದ್ದಾಗ ಬಗರ್ ಹುಕುಂದಾರ ರೈತರಿಗೆ ಹಕ್ಕುಪತ್ರ ಕೊಟ್ಟಿದ್ದು ಬಿಟ್ಟರೆ ಯಡಿಯೂರಪ್ಪ ಇತ್ತ ತಲೆಯೆ ಹಾಕಿಲ್ಲ ಎಂಬ ದೂರು-ದುಮ್ಮಾನಗಳ ದೊಡ್ಡ ಪಟ್ಟಿಯೆ ಶಿಕಾರಿಪುರದ ಜನರ ಕೈಲಿದೆ! ವಿಪರ್ಯಾಸವೆಂದರೆ, ಬಗರ್ ಹುಕುಮ್‌ದಾರರಿಗೆ ಹಕ್ಕುಪತ್ರಕ್ಕಾಗಿ ಶಿಕಾರಿಪುರ-ಶಿವಮೊಗ್ಗ-ಬೆಂಗಳೂರು ಪಾದಯಾತ್ರೆ ಮಾಡಿದ್ದ ಯಡಿಯೂರಪ್ಪ ತಾವು ಅಧಿಕಾರದಲ್ಲಿದ್ದಾಗ ಈ ಸಮಸ್ಯೆ ಪರಿಹಾರಕ್ಕೆ ಬದ್ಧತೆಯಿಂದ ಪ್ರಯತ್ನ ನಡೆಸಿಲ್ಲ ಎಂಬ ಆಕ್ರೋಶ ಕ್ಷೇತ್ರದಲ್ಲಿದೆ.

2023ರ ಸಮರಕ್ಕೆ ತಯಾರಿ!

ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಮಾಜಿಮುಖ್ಯಮಂತ್ರಿ ಯಡಿಯೂರಪ್ಪರ ಸ್ಪರ್ಧೆಯ ಸಂಭವನೀಯತೆ ಆಧಾರದ ಮೇಲೆಯೆ ಶಿಕಾರಿಪುರದ ಸಕಲ ಪಕ್ಷಗಳ ಸಮರಾಭ್ಯಾಸ ನಡೆದಿದೆ. ಇಳಿವಯಸ್ಸು ಹಾಗು ಮತ್ತೆ ಸಿಎಂ ಆಗುವುದು ಸಾಧ್ಯವಿಲ್ಲದ್ದರಿಂದ ಯಡಿಯೂರಪ್ಪ 2023ರಲ್ಲಿ ಸ್ಪರ್ಧಿಸಲಾರರೆಂಬ ಭಾವನೆ ಕ್ಷೇತ್ರದಲ್ಲಿದೆ. ಕಳೆದ ವಾರ ಯಡಿಯೂರಪ್ಪನವರೇ ಅದನ್ನು ಸೂಚಿಸಿ ಮಗ ವಿಜಯೇಂದ್ರರಿಗೆ ಕ್ಷೇತ್ರ ಬಿಟ್ಟುಕೊಡುವುದಾಗಿ ಹೇಳಿದ್ದರು. ವಿಜಯೇಂದ್ರರಿಗೆ ಶಿಕಾರಿಪುರದ ಟಿಕೆಟ್‌ಕೊಟ್ಟು ಅವರು ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಅಥವಾ ಮೈಸೂರು ಭಾಗದ ಲಿಂಗಾಯತ ಏರಿಯಾದಲ್ಲಿ ಪ್ರಭಾವ ಬೆಳೆಸಿಕೊಳ್ಳದಂತೆ ಕಟ್ಟಿಹಾಕುವುದು ಸೂಕ್ತವೆಬುಂದು ಸಂಘ ಪರಿವಾರದ ಎಣಿಕೆ ಕೂಡ ಅನ್ನಲಾಗುತ್ತಿದೆ.

ಶಿಕಾರಿಪುರ ಕ್ಷೇತ್ರ ಹೇಗೆ ಹದಗೊಂಡಿದೆ ಎಂದರೆ ಕಾಂಗ್ರೆಸ್ ಉಮೇದುವಾರ ಅದೆಷ್ಟೇ ದುರ್ಬಲನಿರಲಿ, ಜತೆಗೆ ಹಳೆ ಹುಲಿ ಯಡಿಯೂರಪ್ಪ ತನ್ನೆಲ್ಲ ಶಕ್ತಿ-ಸಾಮರ್ಥ್ಯ ಪಣಕ್ಕಿಟ್ಟು ಕಾದಾಡಿದರೂ ಕಾಂಗ್ರೆಸಿಗೆ 50 ಸಾವಿರ ಮತ ತಂತಾನೆ ಬರುತ್ತದೆ. ’ಕೇಸರಿಕಾರಣ’ದ ಪ್ರಭಾವವಿಲ್ಲದ ಶಿಕಾರಿಪುರದಲ್ಲಿ ಯಡಿಯೂರಪ್ಪರ ಹೊರತಾಗಿ ಯಾರೇ ಬಿಜೆಪಿಯಿಂದ ಕಣಕ್ಕಿಳಿದರೂ ಗೆಲ್ಲುವ ಅವಕಾಶ ಕಡಿಮೆಯೆಂಬ ಲೆಕ್ಕಾಚಾರದ ಕಟ್ಟೆಪುರಾಣ ಶಿಕಾರಿಪುರದಲ್ಲಿ ಕೇಳಿಬರುತ್ತದೆ. ಕಳೆದ ಚುನಾವಣೆಯಲ್ಲಿ ಸೋತಿರುವ ಕುರುಬ ಸಮುದಾಯದ ಗೋಣಿ ಮಾಲತೇಶ್ ತಾನೆ ಕಾಂಗ್ರೆಸ್ ಕ್ಯಾಂಡಿಡೇಟೆಂದು ಓಡಾಡುತ್ತಿದ್ದಾರೆ.

ಶಾಮನೂರು ಶಿವಶಂಕರಪ್ಪನವರ ಸಂಬಂಧಿ ಎನ್ನಲಾಗಿರುವ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬೆಂಬಲದಿಂದ ಶಿಕಾರಿಪುರದಲ್ಲಿ ರಂಗತಾಲೀಮು ಶುರುಹಚ್ಚಿಕೊಂಡಿದ್ದಾರೆ. ಕ್ಷೇತ್ರದ ಬೇಕು-ಬೇಡ, ಕಷ್ಟ-ಸುಖದ ಅರಿವಿರುವ ಕುರುಬ ಜನಾಂಗದ ನಗರದ ಮಹದೇವಪ್ಪ ಇಲ್ಲವೆ ಸದ್ಯ ಜೆಡಿಎಸ್ ನಲ್ಲಿರುವ ವಾಲ್ಮೀಕಿ ಸಮುದಾಯದ-ಮಾಜಿ ಕೆಎಎಸ್ ಅಧಿಕಾರಿ ಎಚ್.ಟಿ.ಬಳೆಗಾರ್‌ಗೆ ಕಾಂಗ್ರೆಸಿಗರು ಅಭ್ಯರ್ಥಿ ಮಾಡಿ ಬದ್ಧತೆಯಿಂದ ದುಡಿದರೆ ಗೆಲ್ಲುವ ಸಾಧ್ಯತೆಯಿದೆ ಎಂಬ ತರ್ಕ ಶಿಕಾರಿಪುರದಲ್ಲಿದೆ. ಸದ್ಯಕ್ಕೆ ಕ್ಷೇತ್ರದಲ್ಲಿರುವ ಕುತೂಹಲವೆಂದರೆ, ಯಡಿಯೂರಪ್ಪನವರು ಆಖಾಡಕ್ಕಿಳಿವ ಅನಿವಾರ್ಯತೆ ಬಿಜೆಪಿಗಿದೆಯೇ ಎಂಬುದು; ಯಡಿಯೂರಪ್ಪನವರು ಚುನಾವಣೆಗೆ ಸ್ಪರ್ಧಿಸದಿದ್ದರೆ, ಬಿಜೆಪಿಗೆ ಕರ್ನಾಟಕದಲ್ಲಿ ಲಿಂಗಾಯತ ಮತಗಳನ್ನು ಸೆಳೆಯುವ-ಗಳಿಸುವ ಸಾಧ್ಯತೆ ಎಷ್ಟು ಕ್ಷೀಣಿಸಬಹುದೆಂಬ ಲೆಕ್ಕಾಚಾರ ಕೂಡ!


ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಸೊರಬ: ಬಂಗಾರಪ್ಪ ಪುತ್ರರ ಕಲಹದಲ್ಲಿ ಕೇಸರಿ ಕಸರತ್ತು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...