Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಸೊರಬ: ಬಂಗಾರಪ್ಪ ಪುತ್ರರ ಕಲಹದಲ್ಲಿ ಕೇಸರಿ ಕಸರತ್ತು!

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಸೊರಬ: ಬಂಗಾರಪ್ಪ ಪುತ್ರರ ಕಲಹದಲ್ಲಿ ಕೇಸರಿ ಕಸರತ್ತು!

- Advertisement -
- Advertisement -

ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಹರಿಯುವ ದಂಡಾವತಿ ನದಿ ದಂಡೆಯ ಸೊರಬ ಶುದ್ಧ ಸಮಾಜವಾದಿ ನೆಲ. ಲಿಂಗಾಯತ ಮತ್ತು ಬ್ರಾಹ್ಮಣ ಜಮೀನ್ದಾರರ ಹೊಲಗಳಲ್ಲಿ ಗೇಯುತ್ತಿದ್ದ ಭೂರಹಿತ ದೀವರ ಗೇಣಿ ರೈತರು ಸೊರಬದಲ್ಲಿ ಕೆಚ್ಚೆದೆಯ ಕಾಗೋಡು ಸತ್ಯಾಗ್ರಹದ ಕಿಚ್ಚು ಹಬ್ಬಿದ್ದು ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ. ಹಿಂದುಳಿದ ವರ್ಗದ ಕಾಡು ವ್ಯವಸಾಯಗಾರ ರೈತಾಪಿ ಕುಟುಂಬಗಳು ಹೆಚ್ಚಿರುವ ಸೊರಬ ನಾಲ್ಕೈದು ದಶಕಗಳ ಕಾಲ ಕನ್ನಡ ನಾಡು ಕಂಡ ಸಮಾಜವಾದಿ ಹಿನ್ನೆಲೆಯ ವರ್ಣರಂಜಿತ ರಾಜಕಾರಣಿ ಸಾರೆಕೊಪ್ಪ ಬಂಗಾರಪ್ಪನವರ ಕರ್ಮಭೂಮಿಯಾಗಿತ್ತು.

ದಲಿತರನ್ನು ಕ್ರಯಕ್ಕೆ ಕೊಂಡು ಜೀತ ಮಾಡಿಸಿಕೊಳ್ಳುತ್ತಿದ್ದ ಕ್ರೌರ್ಯದ ಸೊರಬದಲ್ಲಿ 1950ರ ದಶಕದಲ್ಲಾದ ಗೇಣಿ ರೈತ ಚಳವಳಿ ಶೋಷಣೆ ವಿರುದ್ಧ ಬಂಡೇಳುವ ಪ್ರಜ್ಞೆ ಮೂಡಿಸಿತ್ತು. ಬಂಗಾರಪ್ಪನಂಥ ವಿದ್ಯಾವಂತ ದೀವರ ತರುಣ ಮುಂದಾಳುಗಳು ಹೋರಾಟದ ಮುಂಚೂಣಿಯಲ್ಲಿ ನಿಂತು ಅಸಹಾಯಕ ರೈತರಲ್ಲಿ ನೈತಿಕ ಸ್ಥೈರ್ಯ ತುಂಬಿದ್ದರು. ಇಂಥ ಸಮಾಜವಾದಿ ವೈಚಾರಿಕತೆಯ ಸೊರಬ ಸೀಮೆಯಲ್ಲೀಗ ಧರ್ಮಕಾರಣದ ದಾಳಗಳು ಉರುಳಾಡಲು ಅನುಕೂಲ ಆಗುತ್ತಿರುವುದು ಆತಂಕಕಾರಿಯಾಗಿದೆ ಎಂದು ಪ್ರಜ್ಞಾವಂತರು ಕಳವಳಿಸುತ್ತಾರೆ! ಹಿಂದುಳಿದ ವರ್ಗದ ನಂಬಿಗಸ್ಥ ನಾಯಕರಾಗಿದ್ದ ಬಂಗಾರಪ್ಪ ಜೀವನದ ಸಂಧ್ಯಾಕಾಲದಲ್ಲಿ ಅಧಿಕಾರ ರಾಜಕಾರಣದ ಸೆಳೆತಕ್ಕೆ ಬಿದ್ದು ಎಡವಿದ್ದೇ ಸೊರಬದಲ್ಲಿ ಹಿಂದುಳಿದವರ ದಿಕ್ಕು ತಪ್ಪಿಸುವ ಕೇಸರಿ ಪತಾಕೆ ಹಾರಲು ಅವಕಾಶವಾಯಿತೆಂದು ವ್ಯಾಖ್ಯಾನಿಸಲಾಗುತ್ತಿದೆ.

ಇತಿಹಾಸ ಹಾಗು ಸಮಾಜ

ಪಶ್ಚಿಮಘಟ್ಟದ ಸೆರಗಿನಲ್ಲಿ ಹಚ್ಚಹಸುರಿನಿಂದ ಕಂಗೊಳಿಸುತ್ತಿದ್ದ ಸೊರಬವೀಗ ಅರೆ ಮಲೆನಾಡಿನಂತಾಗಿದೆ. ಸೊರಬದ ಮೂಲ ಹೆಸರು ’ಸುರಭಿಪುರ’ ಎಂದು ಸ್ಥಳ ನಾಮ ಪುರಾಣ ಹೇಳುತ್ತದೆ. ಒಂದು ಸುರಭಿ (ಆಕಳು) ಇಲ್ಲಿನ ರಂಗನಾಥ ದೇವರ ಪ್ರತಿಮೆಯ ಮೇಲೆ ತನ್ನ ಕೆಚ್ಚಲು ಬರುವಂತೆ ನಿಂತು ಹಾಲಿನ ಅಭಿಷೇಕ ಮಾಡುತಿತ್ತೆಂಬ ಪ್ರತೀತಿಯಿದೆ. ಈ ರಂಗನಾಥ ಮೂರ್ತಿಗೆ ಹಳೆ ಸೊರಬದ ಜಮೀನ್ದಾರಿ ಲಿಂಗಾಯತ ಗೌಡರೊಬ್ಬರು ಗುಡಿ ಕಟ್ಟಿಸಿದರೆಂಬ ಉಲ್ಲೇಖ, ದಂಡಾವತಿ ನದಿ ತೀರದಲ್ಲಿರುವ ಕಲ್ಲಿನ ಗೋಪುರದ ಮೇಲೆ ಹಳೆಗನ್ನಡ ಲಿಪಿಯಲ್ಲಿ ಕಾಣುತ್ತದೆ. ಸೊರಬ ತಾಲೂಕಿನ ಆನಮಟ್ಟಿ ಹೋಬಳಿ ಹಾಗು ಐತಿಹಾಸಿಕ-ಧಾರ್ಮಿಕ ಖ್ಯಾತಿಯ ಚಂದ್ರಗುತ್ತಿಗೂ ಅದರದೆ ಆದ ಸ್ಥಳ ಮಹಿಮೆಯಿದೆ.

ಎಸ್.ಬಂಗಾರಪ್ಪ

ಸೊರಬದಲ್ಲಿ ದೀವರು (ಈಡಿಗರು) ಮತ್ತು ಲಿಂಗಾಯತರು ಬಹುಸಂಖ್ಯಾತರು. ಲಿಂಗಾಯತರ ಮನೆ-ತೋಟಗಳಲ್ಲಿ ಕೂಲಿ ಮಾಡುತ್ತಿರುವ ದೀವರ ಶೋಷಣೆ ಲಾಗಾಯ್ತಿನಿಂದ ನಡೆದಿದೆ. ಹಾಗೆಯೆ ದೀವರ-ಲಿಂಗಾಯತರ ಸಾಮಾಜಿಕ, ರಾಜಕೀಯ ಪ್ರಚ್ಛನ್ನ ಸಂಘರ್ಷವೂ ಅನಾದಿ ಕಾಲದ್ದು. ದೀವರ ಸಮುದಾಯದ ಬಂಗಾರಪ್ಪ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದ ಬಳಿಕವೆ ದೀವರಿಗೆ ಸೆಟೆದು ನಿಲ್ಲುವ ಧೈರ್ಯ ಬಂತೆನ್ನುವ ವಿಶ್ಲೇಷಣೆಗಳು ಸೊರಬ ವಿಧಾನಸಭಾ ಕ್ಷೇತ್ರದಲ್ಲಿವೆ. ಈಗೀಗ ದೀವರಲ್ಲಿ ಶೈಕ್ಷಣಿಕ, ಆರ್ಥಿಕ ಬದಲಾವಣೆಯಾಗುತ್ತಿವೆ. ದೀವರು ಸಮುದಾಯ ಸಾಮಾನ್ಯವಾಗಿ ಅಡಿಕೆ ತೋಟಗಾರಿಕೆಯಲ್ಲಿ ತೊಡಗಿಸಿಕೊಂಡರೆ, ಯುವಕರು ವಿದ್ಯಾವಂತರಾಗಿ ಸರಕಾರಿ, ಖಾಸಗಿ ವಲಯದಲ್ಲಿ ಉನ್ನತ ಉದ್ಯೋಗಕ್ಕೆ ಸೇರುತ್ತಿದ್ದಾರೆ.

ಸೊರಬ ತಾಲೂಕಿನಲ್ಲಿ ಇರುವಷ್ಟು ಕೆರೆಗಳು ಏಷಿಯಾ ಖಂಡದಲ್ಲಿ ಮತ್ತೆಲ್ಲಿಯೂ ಇಲ್ಲ. ಅಧಿಕೃತ ಅಂಕಿ-ಅಂಶಗಳ ಪ್ರಕಾರ ಕೃಷಿಗೆ ಆಧಾರವಾಗಿರುವ 1,186 ಕೆರೆಗಳಿವೆ; ಅನಧಿಕೃತವಾಗಿ ಇನ್ನೂ 200-300 ಕೆರೆಗಳಿವೆಯೆಂದು ತಾಲೂಕಿನ ಸಾಮಾಜಿಕ- ಚಾರಿತ್ರಿಕ ತಿಳಿವಳಿಕೆಯಿರುವ ಉಪನ್ಯಾಸಕರೊಬ್ಬರು ಹೇಳುತ್ತಾರೆ. ಸಾಗರ ಸೀಮೆಯ ಬಹುಭಾಷಾ ಸಾಂಸ್ಕೃತಿಕ ಪ್ರದೇಶ ಸೊರಬ. ಕನ್ನಡ ಪ್ರಮುಖ ಭಾಷೆ; ಹವ್ಯಕ ಕನ್ನಡ, ಕೊಂಕಣಿ, ಮರಾಠಿ, ಉರ್ದು, ಲಂಬಾಣಿ ಮಾತೂ ಕೇಳಿಬರುವ ಸೊರಬದ ಕನ್ನಡದ ಲಯ ಸಾಗರದ ಕನ್ನಡಕ್ಕಿಂತ ಕೊಂಚ ಭಿನ್ನವಾಗಿದೆ. ಯಕ್ಷಗಾನ ಮತ್ತು ಸಾಮಾಜಿಕ ನಾಟಕಗಳ ಪ್ರಭಾವದ ಸೊರಬದ ಡೊಳ್ಳು ಕುಣಿತ ಪ್ರಸಿದ್ಧಿ ಪಡೆದಿದೆ. ದೀವರ ಮತ್ತು ಹೈಗರ (ಹವ್ಯಕ ಬ್ರಾಹ್ಮಣರ) ಸಮುದಾಯದಲ್ಲಿ ವಿವಿಧ ಸಂದರ್ಭ ಹಾಗು ಸಮಾರಂಭಗಳಲ್ಲಿ ಹಾಡುವ ಜಾನಪದ ಗೀತ ಸಾಹಿತ್ಯವಿದೆ. ದೀಪಾವಳಿ ಹಬ್ಬದ ಹೊತ್ತಲ್ಲಿ ಒಂದು ದೀಪ ಹಚ್ಚಿಕೊಂಡು ಗ್ರಾಮಸ್ಥರು ಮನೆಮನೆಗೆ ಹಾಡು ಹೇಳುತ್ತ ಹೋಗುವ ಅಂಟಿಗೆಪಿಂಟಿಗೆ ಅಥವಾ ಹಬ್ಬಾಡೋದು, ಹೋರಿ ಬೆರೆಸುವ (ಓಡಿಸುವ) ಆಟ, ಊರವರು ಮೇಲಾಟಕ್ಕೆ ಬಿದ್ದು ಕೆರೆಯಲ್ಲಿನ ಮೀನು ಹಿಡಿದು ಆಹಾರಕ್ಕೆ ಬಳಸುವ ಕೆರೆ ಬೇಟೆ ಸಂಪ್ರದಾಯ ಸೊರಬದಲ್ಲಿ ನಡೆದುಕೊಂಡು ಬಂದಿದೆ.

ಆರ್ಥಿಕ ಚಹರೆ

ವರದಾ ಮತ್ತು ದಂಡಾವತಿ ನದಿಗಳು ಸೊರಬದ ಜೀವನಾಡಿ. ಕೃಷಿ-ತೋಟಗಾರಿಕೆ ಜೀವನಾಧಾರ. ಕೃಷಿ ಪ್ರಧಾನ ಹಳ್ಳಿಗಳಿರುವ ಸೊರಬದಲ್ಲಿ ಭತ್ತ ಪ್ರಮುಖ ಬೆಳೆ. ಮೇಲ್ವರ್ಗದವರು ಹಿಂದಿನಿಂದಲೂ ವಾಣಿಜ್ಯ ಬೆಳೆಯಾದ ಅಡಿಕೆ ತೋಟ ಮಾಡಿಕೊಂಡಿದ್ದರೆ, ಇತ್ತೀಚಿನ ದಶಕದಲ್ಲಿ ದೀವರು, ಮಡಿವಾಳ ಮುಂತಾದ ಹಿಂದುಳಿದ ಜನಾಂಗದವರು ಅರಣ್ಯ ಅತಿಕ್ರಮಣ ಮಾಡಿ ಅಡಿಕೆ ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ. ಈ ಬಗರ್ ಹುಕುಮ್‌ದಾರರು ಸಾಗುವಳಿ ಹಕ್ಕನ್ನು ಹಲವು ವರ್ಷದಿಂದ ಕೇಳುತ್ತಿದ್ದಾರೆ; ಅರಣ್ಯ ಇಲಾಖೆಯ ಗೊಂದಲದ ಕಾನೂನುಗಳಿಂದ ಅಸಹಾಯಕ ರೈತರು ಅತಂತ್ರ ಸ್ಥಿತಿಯಲ್ಲಿ ಚಡಪಡಿಸುವಂತೆ ಆಗಿದೆಯೆಂದು ಅರಣ್ಯ ಸಾಗುವಳಿದಾರರ ಹೋರಾಟದ ಮುಂಚೂಣಿಯಲ್ಲಿರುವ ಮುಖಂಡರು ’ನ್ಯಾಯಪಥ’ಕ್ಕೆ ತಿಳಿಸಿದರು.

ಜೋಳ, ಬಾಳೆ, ಹತ್ತಿ ಸೊರಬದ ರೈತರ ಸಾಂಪ್ರದಾಯಿಕ ಬೆಳೆಗಳು; ಆದರೆ ಈಗೀಗ ಆರ್ಥಿಕ ಬೆಳೆಗಳಾದ ಶುಂಠಿ ಮತ್ತು ಅನಾನಸ್ ಬೆಳೆಯಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅನಾನಸ್ ಅತಿಹೆಚ್ಚು ಉತ್ಪದಿಸುವ ತಾಲೂಕು ಸೊರಬ! ಅನಾನಸ್ ಮತ್ತು ಶುಂಠಿಯಿಂದ ತಾಲೂಕಿನ ಆರ್ಥಿಕ ಚಹರೆ ಬದಲಾಗಿದೆಯಾದರೂ ಈ ಬೆಳೆಗಳಿಗೆ ಸ್ಥಿರವಾದ ಮಾರುಕಟ್ಟೆ ವ್ಯವಸ್ಥೆ ಇಲ್ಲಿಲ್ಲ. ಯಾತ್ರಾ ಮತ್ತು ಪ್ರವಾಸಿತಾಣವಾದ ಚಂದ್ರಗುತ್ತಿ ಅಭಿವೃದ್ಧಿಪಡಿಸಿದರೆ ತಾಲೂಕಿನ ಆರ್ಥಿಕವಾಗಿ ಚಹರೆ ಬದಲಾಗುತ್ತಿತ್ತೆಂದು ವಾಣಿಜ್ಯ ಕ್ಷೇತ್ರದ ಅನುಭವಿಗಳು ಹೇಳುತ್ತಾರೆ. ಸೊರಬ ವಾಣಿಜ್ಯ-ವ್ಯಾಪಾರದ ಕೇಂದ್ರವಾಗಿ ಬೆಳೆದಿಲ್ಲ. ಇವತ್ತಿಗೂ ಜನರು ತಮ್ಮ ದೊಡ್ಡ ಅಗತ್ಯಗಳಿಗೆ ಸಾಗರ, ಶಿವಮೊಗ್ಗದಂತ ನಗರಗಳನ್ನು ಅವಲಂಬಿಸಿದ್ದಾರೆ.

ಶ್ರೀಗಂಧ ಮತ್ತು ಇತರ ಮರಗಳ ಕರಕುಶಲ ವಸ್ತು ತಯಾರಿಕೆಗೆ ಸೊರಬ ಹೆಸರುವಾಸಿಯಾಗಿದೆ. ಇಲ್ಲಿಯ ಗುಡಿಗಾರ ಕುಟುಂಬಗಳು ತಲೆತಲಾಂತರದಿಂದ ಕಟ್ಟಿಗೆಯ ಮೇಲೆ ಸಂಕೀರ್ಣ ವಿನ್ಯಾಸಗಳನ್ನು ಕೆತ್ತುವುದರಲ್ಲಿ ಪರಿಣಿತವಾಗಿದೆ. ಗುಡಿಗಾರ ಗಂಡಸರು ಪ್ರತಿಮೆ-ವಿಗ್ರಹ, ನಿಕ್‌ನ್ಯಾಕ್ ತಯಾರಿಕೆಯಲ್ಲಿ ನಿಷ್ಣಾತರಾದರೆ, ಹೆಂಗಸರು ಗಂಧದ ತೆಳುವಾದ ಪದರುಗಳಿಂದ ಮಾಲೆ ಕಟ್ಟುತ್ತಾರೆ.

ರಾಜ್ಯದಲ್ಲಿರುವ ಪ್ರಮುಖ ಐದು ಪಕ್ಷಿಧಾಮಗಳಲ್ಲಿ ಒಂದಾದ ’ಗುಡುವಿ ಪಕ್ಷಿಧಾಮ’ ಸೊರಬದಲ್ಲಿದೆ. 180 ಎಕರೆಯಷ್ಟು ವಿಶಾಲವಾದ ನೈಸರ್ಗಿಕ ಕೆರೆಯಲ್ಲಿ ನಾನಾ ನಮೂನೆಯ ಸಸ್ಯ, ಪ್ರಾಣಿ, ಪಕ್ಷಿಗಳಿವೆ. ಸುಮಾರು 217 ಜಾತಿಯ ಪಕ್ಷಿಗಳಿರುವ ಈ ಪಕ್ಷಿಧಾಮ ಆಕರ್ಷಕ ಪ್ರವಾಸಿತಾಣ. ಪುರಾಣ ಪ್ರಸಿದ್ಧ ರೇಣುಕಾ ದೇವಾಲಯ ಮತ್ತು ಜ್ವಾಲಾಮುಖಿಯಿಂದ ರಚನೆಯಾಗಿರುವ ಗ್ರಾನೈಟ್ ಬಂಡೆಗಳ 865 ಮೀಟರ್ ಎತ್ತರದ ಬೆಟ್ಟವಿರುವ ಚಂದ್ರಗುತ್ತಿಯಲ್ಲಿ ಕದಂಬರ ಕಾಲದ ಕೋಟೆಯಿದೆ. ಇಲ್ಲಿಂದ ಕದಂಬರ ರಾಜಧಾನಿ ಬನವಾಸಿಗೆ ಸುರಂಗ ಮಾರ್ಗವಿತ್ತೆಂಬ ಪ್ರತೀತಿಯಿದೆ. ಚಂದ್ರನನ್ನು ನೋಡಲು ಸಾಧ್ಯವಾಗದಷ್ಟು ದುರ್ಗಮವಾದ ಗುಡ್ಡ(ಗುತ್ತಿ)ವಿದ್ದರಿಂದ ಚಂದ್ರಗುತ್ತಿ ಎಂಬ ಹೆಸರು ಬಂತೆನ್ನಲಾಗುತ್ತಿದೆ. ಈ ಇತಿಹಾಸ-ಪುರಾಣಕ್ಕಿಂತ ಬೆತ್ತಲೆ ಸೇವೆ ಮತ್ತು ಕೋಣ ಬಲಿಯಿಂದ ಸುದ್ದಿಯಾಗಿದ್ದ ಚಂದ್ರಗುತ್ತಿ ಗುಡ್ಡದಲ್ಲಿ ಯುದ್ಧದಲ್ಲಿ ಬಳಸುತ್ತಿದ್ದ ಫಿರಂಗಿಗಳು, ಮದ್ದು ಗುಂಡು ಸಂಗ್ರಹಿಸಿಡಲಾಗುತ್ತಿದ್ದ ಗೋದಾಮುಗಳಿವೆ. ಚಾರಣ ಪ್ರಿಯರಿಗೆ ಹೇಳಿಮಾಡಿಸಿದ ದುರ್ಗಮ ಗುಡ್ಡವಿದು.

ಸಂಘರ್ಷದ ಅಖಾಡ!

ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ಮತ್ತವರ ಪುತ್ರದ್ವಯರ ಆಡೊಂಬಲವೆಂದು ರಾಜಕೀಯ ವಲಯದಲ್ಲಿ ಪರಿಗಣಿಸಲ್ಪಟ್ಟಿರುವ ಸೊರಬ ದೀವರ ಮತ್ತು ಲಿಂಗಾಯತರ ಜಿದ್ದಾಜಿದ್ದಿನ ಆಖಾಡ! 1967ರಲ್ಲಿ ಸೊರಬ ವಿಧಾನಸಭಾ ಕ್ಷೇತ್ರ ರಚನೆಯಾದ ಬಳಿಕ 12 ಸಾರ್ವತ್ರಿಕ ಮತ್ತು ಒಂದು ಉಪ ಚುನಾವಣೆ ನಡೆದಿದೆ. ಇದರಲ್ಲಿ ಬಂಗಾರಪ್ಪ ಸತತ 7 ಬಾರಿ ನಿರಾಯಾಸವಾಗಿ ಗೆದ್ದು ಮೂರು ದಶಕ ವಿವಿಧ ಆಯಕಟ್ಟಿನ ಅಧಿಕಾರ ಸ್ಥಾನದಲ್ಲಿದ್ದರು. 1996ರಲ್ಲಿ ಬಂಗಾರಪ್ಪ ಎಮ್ಮೆಲ್ಲೆ ಸ್ಥಾನವನ್ನು ಹಿರಿಯ ಮಗ ಕುಮಾರ್ ಬಂಗಾರಪ್ಪನವರಿಗೆ ಬಿಟ್ಟುಕೊಟ್ಟರು. ಕುಮಾರ್ ಒಂದು ಉಪ ಚುನಾವಣೆ ಮತ್ತು 3 ಸಾರ್ವತ್ರಿಕ ಚುನಾವಣೆಯಲ್ಲಿ ಶಾಸಕರಾಗಿದ್ದಾರೆ; ಬಂಗಾರಪ್ಪನವರ ಎರಡನೆ ಮಗ ಮಧು ಬಂಗಾರಪ್ಪ ಒಮ್ಮೆ ಜಯಶಾಲಿಯಾದರೆ, ಇನ್ನೊಮ್ಮೆ ಬಂಗಾರಪ್ಪನವರೆ ರಾಜಕೀಯ ದೀಕ್ಷೆ ಕೊಟ್ಟಿದ್ದ ಅವರ ಹೆಂಡತಿ ಕಡೆಯ ಸಂಬಂಧಿ ಹರತಾಳು ಹಾಲಪ್ಪ ಸೊರಬದಲ್ಲಿ ಗೆಲುವು ಕಂಡಿದ್ದಾರೆ. ಅಂದರೆ ಅಲ್ಲಿಂದಿಲ್ಲಿಗೂ ಸೊರಬ ಕ್ಷೇತ್ರ ಬಂಗಾರಪ್ಪರ ಪರಿವಾರದ ಹಿಡಿತದಲ್ಲೇ ಇದೆ.

ಮಧು ಬಂಗಾರಪ್ಪ

ಸೊರಬದ ರಾಜಕೀಯ ರಣರಂಗದ ರಾಸಾಯನಿಕ ಸೂತ್ರ ಹೊರನೋಟಕ್ಕೆ ಕಾಣಿಸುವಷ್ಟು ಸರಳವಾಗಿಲ್ಲ. ಹಿಂದುಳಿದ ದೀವರ ಸಮುದಾಯದ ಬಂಗಾರಪ್ಪ ಮತ್ತವರ ಮಕ್ಕಳನ್ನು ಕ್ಷೇತ್ರದ ದ್ವಿತೀಯ ಬಹುಸಂಖ್ಯಾತರಾದ ಲಿಂಗಾಯತರು ನಿರಂತರವಾಗಿ ವಿರೋಧಿಸಿಕೊಂಡೆ ಬಂದಿದ್ದಾರೆ. ಅಷ್ಟೇ ಅಲ್ಲ, ತಮ್ಮ ತೋಟ-ಗದ್ದೆ-ಮನೆಯಲ್ಲಿ ಕೆಲಸ ಮಾಡುವ ಹಿಂದುಳಿದ ವರ್ಗದ ಮಡಿವಾಳ ಜಾತಿಯವರು ಬಂಗಾರಪ್ಪ ಪರಿವಾರವನ್ನು ಸಹಿಸದಂತೆ
ತಂತ್ರಗಾರಿಕೆ ನಡೆಸುತ್ತಿದ್ದಾರೆ; ಆದರೆ ಹಿಂದುಳಿದ ವರ್ಗದ ಚಾಂಪಿಯನ್ ಎನಿಸಿದ್ದ ಬಂಗಾರಪ್ಪ ಬಹುಸಂಖ್ಯಾತ ಸ್ವಜಾತಿ ದೀವರ ಮತದೊಂದಿಗೆ ಅಲ್ಪಸಂಖ್ಯಾತ ದಲಿತ ಹಾಗು ಇನ್ನಿತರ ಒಬಿಸಿ ಮತ ಪಡೆಯುವ ಕಲೆ ಕರಗತ ಮಾಡಿಕೊಂಡಿದ್ದರಿಂದ ಸುಲಭವಾಗಿ ದೊಡ್ಡ ಅಂತರದಲ್ಲೇ ಗೆಲ್ಲುತ್ತಿದ್ದರೆಂದು ಬಂಗಾರಪ್ಪ ಕಾಲದ ರಾಜಕಾರಣ ನೋಡಿದವರು ಹೇಳುತ್ತಾರೆ.

2008ರಲ್ಲಾದ ವಿಧಾನಸಭಾ ಕ್ಷೇತ್ರಗಳ ಭೌಗೋಳಿಕ ಪರಿಮಿತಿ ಪುನರ್ ನಿಗದಿ ಪ್ರಕ್ರಿಯೆಯಲ್ಲಿ ಸೊರಬದ ವ್ಯಾಪ್ತಿ ಬದಲಾಗಿದೆ. ಸಾಗರ ಕ್ಷೇತ್ರದಲ್ಲಿದ್ದ ತಾಳಗುಪ್ಪ ಹೋಬಳಿಯನ್ನು ಸೊರಬಕ್ಕೆ ಸೇರಿಸಲಾಗಿದೆ. ಕಳೆದ ಚುನಾವಣೆಯಲ್ಲಿ 1,84,621 ಮತದಾರರಿದ್ದ ಸೊರಬದಲ್ಲಿ ದೀವರು (ಈಡಿಗರು) 60 ಸಾವಿರ, ಲಿಂಗಾಯತರು 40 ಸಾವಿರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ 35 ಸಾವಿರ, ಮಡಿವಾಳರು 15 ಸಾವಿರ, ಮುಸ್ಲಿಮರು 12 ಸಾವಿರ, ಗಂಗಾಮತಸ್ಥರು 10 ಸಾವಿರ, ಒಕ್ಕಲಿಗರು ಮತ್ತು ಬ್ರಾಹ್ಮಣರು ತಲಾ 8 ಸಾವಿರ ಇರಬಹುದೆಂದು ಅಂದಾಜಿಸಲಾಗಿದೆ. 1967ರಲ್ಲಾದ ಸೊರಬದ ಮೊಟ್ಟಮೊದಲ ಅಸೆಂಬ್ಲಿ ಚುನಾವಣೆಯಲ್ಲಿ ಸೋಷಲಿಸ್ಟ ಪಾರ್ಟಿ (ಎಸ್‌ಎಸ್‌ಪಿ) ಅಭ್ಯರ್ಥಿಯಾಗಿದ್ದ ಎಸ್.ಬಂಗಾರಪ್ಪ ತಮ್ಮ ನೇರ ಎದುರಾಳಿ ಕಾಂಗ್ರೆಸ್‌ನ ಎಂ.ಪಿ.ಈಶ್ವರಪ್ಪರನ್ನು 10,734 ಮತಗಳಿಂದ ಮಣಿಸಿ ಶಾಸನಸಭೆಗೆ ಪ್ರವೇಶ ಪಡೆಯುತ್ತಾರೆ. ಆ ನಂತರ ಬಂಗಾರಪ್ಪ ಪಕ್ಷ ಬದಲಿಸುತ್ತ ಅಥವಾ ಹೊಸ ಪಕ್ಷ ಕಟ್ಟುತ್ತ ಹಿಂದಿರುಗಿ ನೋಡದೆ 1994ರ ತನಕ ಶರವೇಗದಲ್ಲಿ ಸಾಗಿಬಂದರು!

ಬಂಗಾರಪ್ಪ 1972ರಲ್ಲಿ ಸಂಘಟಿತ ಸಮಾಜವಾದಿ ಪಕ್ಷದಿಂದ (ಎಸ್‌ಒಪಿ) ಆಖಾಡಕ್ಕೆ ಇಳಿದಿದ್ದರು. ಅವರ ನಿಕಟ ಸ್ಪರ್ಧಿ ಕಾಂಗ್ರೆಸ್‌ನ ಆರ್.ಸಿ.ಪಾಟೀಲ್ 15,243 ಮತ ಪಡೆದು 7,294 ಮತದಂತರದಿಂದ ಪರಾಭವಗೊಂಡರು. ಶಾಸನಸಭೆಯಲ್ಲಿ ತನ್ನನ್ನು ಸಮಾಜವಾದಿ ಪಕ್ಷದ ನಾಯಕನನ್ನಾಗಿ ಮಾಡದೆ ಕೋಣಂದೂರು ಲಿಂಗಪ್ಪನವರನ್ನು ಆಯ್ಕೆ ಮಾಡಿದ್ದಕ್ಕೆ ಮುನಿದು ತಮ್ಮದೆ ’ಕ್ರಾಂತಿಕಾರಿ’ ಎಂಬ ಪಕ್ಷ ಬಂಗಾರಪ್ಪ ಕಟ್ಟುತ್ತಾರೆ. 1978ರ ಅಸೆಂಬ್ಲಿ ಇಲೆಕ್ಷನ್‌ಗೆ ಮೊದಲು ಕಾಂಗ್ರಸ್ ವಿಭಜನೆಯಾಗಿದ್ದರಿಂದ ಬಹುಮತ ನಷ್ಟದ ಸಮಸ್ಯೆ ಮುಖ್ಯಮಂತ್ರಿ ಅರಸುಗೆ ಎದುರಾಗುತ್ತದೆ. ಬಂಗಾರಪ್ಪನಂಥವರನ್ನು ಅರಸು ಸೆಳೆದುಕೊಳ್ಳುತ್ತಾರೆ. ಬಂಗಾರಪ್ಪ ತಮ್ಮ ಏಕ ಶಾಸಕ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿ ಅರಸು ಸಂಪುಟದಲ್ಲಿ ಬಂದಿಖಾನೆ (ಗೃಹ) ಇಲಾಖೆಯ ಸಹಾಯಕ ಮಂತ್ರಿಯಾಗುತ್ತಾರೆ. 1978ರಲ್ಲಿ ಕಾಂಗ್ರೆಸ್ ಪಕ್ಷದ ಹುರಿಯಾಳಾದ ಬಂಗಾರಪ್ಪ ಜನತಾ ಪಕ್ಷದ ಎದುರಾಳಿ ಎಸ್.ನಾಗಪ್ಪರನ್ನು 22,295 ಮತದಿಂದ ಸೋಲಿಸಿ ಅರಸು ಸರಕಾರದಲ್ಲಿ ಮಹತ್ವದ ಲೋಕೋಪಯೋಗಿ ಇಲಾಖೆಯ ಕ್ಯಾಬಿನೆಟ್ ಮಂತ್ರಿಯಾದರು.

ಬಂಡುಕೋರ ಬಂಗಾರಪ್ಪ!

ಇಂದಿರಾ ಗಾಂಧಿ ಮತ್ತು ಅರಸು ನಡುವೆ ಬಿರಕು ಮೂಡಿದಾಗ ಬಂಗಾರಪ್ಪರ ನಿಷ್ಠೆ ಇಂದಿರಾ ಗಾಂಧಿ ಕಡೆಗಿತ್ತು. ಹಿಂದುಳಿದ ವರ್ಗದ ನಾಯಕರಲ್ಲಿ ಎದ್ದುಕಾಣಿಸುತ್ತಿದ್ದ ಬಂಗಾರಪ್ಪನವರನ್ನು ಇಂದಿರಾ 1979ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ನೇಮಿಸಿದರು. ಅರಸು ಸರಕಾರ ಪತನವಾದಾಗ ತನಗೆ ಸಿಎಂ ಮಾಡುವಂತೆ ಬಂಗಾರಪ್ಪ ಹಠಹಿಡಿದರಾದರೂ ಸಂಜಯ್ ಗಾಂಧಿ ಆಪ್ತ ವಲಯದಲ್ಲಿದ್ದ ಗುಂಡೂರಾವ್‌ಗೆ ಮುಖ್ಯಮಂತ್ರಿಯಾಗುವ ಯೋಗ ಖುಲಾಯಿಸಿತು. ಗುಂಡೂರಾವ್ ಸರಕಾರದಲ್ಲಿ ಮಹತ್ವದ ಖಾತೆಗಳ ಮಂತ್ರಿಯಾಗಿದ್ದರೂ ಬಂಗಾರಪ್ಪನವರಿಗೆ ಅವರ ಬಂಡುಕೋರ ಸ್ವಭಾವ ಹೆಚ್ಚು ದಿನ ಕಾಂಗ್ರೆಸ್‌ನಲ್ಲಿ ಉಳಿಯಲು ಬಿಡಲಿಲ್ಲ ಎಂಬ ಮಾತು ಕೇಳಿಬರುತ್ತದೆ.

ದೇವರಾಜ ಅರಸು ನಿಧನಾನಂತರ ಅವರು ಸ್ಥಾಪಿಸಿದ್ದ ಕ್ರಾಂತಿರಂಗ ಪಕ್ಷದಲ್ಲಿ ಇಡೀ ರಾಜ್ಯವನ್ನು ಪ್ರಭಾವಿಸಬಲ್ಲ ಜನಾಕರ್ಷಕ ಮುಖಂಡರ ಕೊರತೆಯಿತ್ತು. ಆ ಸಾಮರ್ಥ್ಯವಿದ್ದ ಬಂಗಾರಪ್ಪ ಕ್ರಾಂತಿರಂಗ ಸೇರಿದರು. ಅಲ್ಲೂ ನಾಯಕತ್ವಕ್ಕೆ ತಗಾದೆಗಳಾದವು. 1983ರಲ್ಲಿ ಬಂಗಾರಪ್ಪ ಜನತಾ ರಂಗ (ಜನತಾ ಪಕ್ಷ ಮತ್ತು ಕ್ರಾಂತಿ ರಂಗ ಮೈತ್ರಿ ಕೂಟ) ಗೆಲ್ಲಿಸಲು ರಾಜ್ಯಾದ್ಯಂತ ಪ್ರಚಾರ ಪ್ರವಾಸ ಕೈಗೊಂಡರು. ತನ್ನ ಕ್ಷೇತ್ರಕ್ಕೆ ಕಾಲಿಡದೆ ರಾಜ್ಯ ಸುತ್ತಿದ ಬಂಗಾರಪ್ಪ ಸೊರಬದಲ್ಲಿ ಗೆದ್ದು ದಾಖಲೆ ನಿರ್ಮಿಸಿದರು. ನಾಮಪತ್ರ ಕೊಟ್ಟು ಹೋಗಿದ್ದ ಬಂಗಾರಪ್ಪ ಸೊರಬಕ್ಕೆ ಬಂದಿದ್ದು ಮತದಾನದ ದಿನ! ಆ ಹಣಾಹಣಿಯಲ್ಲಿ ಜನತಾ ಪಕ್ಷದ ನೇಗಿಲು ಹೊತ್ತ ರೈತ ಚಿಹ್ನೆಯಲ್ಲಿ ಸ್ಪರ್ಧಿಸಿದ್ದ ಬಂಗಾರಪ್ಪ ತಮ್ಮ ಕಡು ಶತ್ರು-ಕಾಂಗ್ರೆಸ್ ಅಭ್ಯರ್ಥಿ-ಕಾಗೋಡು ತಿಮ್ಮಪ್ಪರನ್ನು 16,522 ಮತದಿಂದ ಸೋಲಿಸಿದರು.

1983ರ ಚುನಾವಣೆಯಲ್ಲಿ ಕಾಂಗ್ರೆಸ್‌ಗಿಂತ ಜನತಾರಂಗ ಮೈತ್ರಿಕೂಟ ಹೆಚ್ಚು ಸ್ಥಾನ ಪಡೆದಿತ್ತು. ಬಿಜೆಪಿ ಬಾಹ್ಯ ಬೆಂಬಲಕ್ಕೆ ಸಿದ್ಧವಾಗಿತ್ತು. ಬಂಗಾರಪ್ಪ ಮುಖ್ಯಮಂತ್ರಿ ರೇಸ್‌ನ ಮುಂಚೂಣಿಯಲ್ಲಿದ್ದರು. ಆದರೆ ಅಸೆಂಬ್ಲಿ ಚುನಾವಣೆಯಲ್ಲಿ ಹೆಚ್ಚು ಶ್ರಮವಹಿಸದ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದಶಿಯಾಗಿದ್ದ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಪಟ್ಟವೇರಿದರು. ಇದರಿಂದ ಕೆರಳಿದ ಬಂಗಾರಪ್ಪ ಬಂಡೆದ್ದರು. ಕ್ರಾಂತಿರಂಗದ ದೊಡ್ಡ ಭಾಗ ಜನತಾ ಪಕ್ಷದಲ್ಲಿ ವಿಲೀನವಾಯಿತು; ಬಂಗಾರಪ್ಪ ತಮ್ಮ ಆರೆಂಟು ನಿಷ್ಟಾವಂತ ಶಾಸಕರೊಂದಿಗೆ ಪ್ರತ್ಯೇಕವಾಗಿ ಉಳಿದರು. 1985ರಲ್ಲಿ ಸಿಎಂ ಹೆಗಡೆ (ಬಿಜೆಪಿ ಕಾಟ ತಡೆಯಲಾಗದೆ) ಮಧ್ಯಂತರ ಚುನಾವಣೆ ಘೋಷಿಸಿದಾಗ ಬಂಗಾರಪ್ಪ ತಮ್ಮ ಕ್ರಾಂತಿರಂಗವನ್ನು ಕಾಂಗ್ರೆಸ್‌ನಲ್ಲಿ ವಿಲೀನ ಮಾಡಿದರು.

1985ರ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟಾದ ಬಂಗಾರಪ್ಪ (38,102) ಜನತಾ ಪಕ್ಷದ ಪ್ರಫುಲ್ಲಾ ಮಧುಕರ್‌ರನ್ನು 20,611 ಮತದಂತರದಿಂದ ಸೋಲಿಸಿದರು. ಹೆಗಡೆ ಎರಡನೆ ಬಾರಿ ಸಿಎಂ ಆದರೆ ಬಂಗಾರಪ್ಪ ಅವರೆದುರು ವಿರೋಧ ಪಕ್ಷದ ನಾಯಕರಾದರು. 1987ರಲ್ಲಿ ಭೂ ಕಬಳಿಕೆ ಆರೋಪ ಎದುರಿಸಿದ ಬಂಗಾರಪ್ಪ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜಿನಾಮೆ ಕೊಡಬೇಕಾಗಿ ಬಂತು. 1989ರಲ್ಲಿ ಕಾಂಗ್ರೆಸ್‌ನಿಂದಲೆ ಕಣಕ್ಕಿಳಿದಿದ್ದ ಬಂಗಾರಪ್ಪ (41,648) ಜನತಾ ದಳದಿಂದ ತನಗೆ ಎದುರಾಳಿಯಾಗಿದ್ದ ಹಳೆಯ ಹಿಂಬಾಲಕ ಈಡೂರು ಪರಶುರಾಮಪ್ಪರನ್ನು (27,107) ನಿರಾಯಾಸವಾಗಿ ಮಣಿಸಿದರು. ಈ ಬಾರಿ ಬಂಗಾರಪ್ಪ ಮುಖ್ಯಮಂತ್ರಿ ಪಟ್ಟಾಕಾಂಕ್ಷಿಯಾಗಿರುತ್ತಾರೆ. ಆದರೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ವೀರೇಂದ್ರ ಪಾಟೀಲ್‌ಗೆ ಆ ಅವಕಾಶ ಸಿಗುತ್ತದೆ. ಬಂಗಾರಪ್ಪ ಕೃಷಿ ಮಂತ್ರಿಯಾಗುತ್ತಾರೆ. ಎಐಸಿಸಿ ಅಧ್ಯಕ್ಷ ರಾಜೀವ ಗಾಂಧಿಯವರ ವಿಶ್ವಾಸ
ಕುದುರಿಸಿಕೊಂಡಿದ್ದ ಬಂಗಾರಪ್ಪ ಸಿಎಂ ಆಗಲು ಹೊಂಚುಹಾಕಿ ಕುಳಿತಿರುತ್ತಾರೆ.

ರಾಜೀವ್ ಗಾಂಧಿ 1990ರಲ್ಲಿ ಅನಾರೋಗ್ಯದ ಕಾರಣದಿಂದ ಪಾಟೀಲ್‌ರನ್ನು ಪದಚ್ಯುತಗೊಳಿಸಿ ಬಂಗಾರಪ್ಪರಿಗೆ
ಪಟ್ಟಾಭಿಷೇಕ ಮಾಡುತ್ತಾರೆ. ರಾಜೀವ್ ಹತ್ಯೆಯ ನಂತರ ಕಾಂಗ್ರೆಸ್ ಮೇಲೆ ಹಿಡಿತ ಸಾಧಿಸಿದ ಅಂದಿನ ಪ್ರಧಾನಿ ನರಸಿಂಹರಾವ್ ಮತ್ತು ಬಂಗಾರಪ್ಪ ನಡುವೆ ಹೊಂದಾಣಿಕೆ ಇರುವುದಿಲ್ಲ. 1992ರಲ್ಲಿ ಬಂಗಾರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ವೀರಪ್ಪ ಮೊಯ್ಲಿಯವರನ್ನು ಏರಿಸಲಾಗುತ್ತದೆ. ಅವಮಾನಿತರಾದ ಬಂಗಾರಪ್ಪ ಕಾಂಗ್ರೆಸ್‌ಗೆ ಬೈ ಹೇಳಿ ’ಕರ್ನಾಟಕ ಕಾಂಗ್ರೆಸ್ ಪಕ್ಷ’ ಕಟ್ಟುತ್ತಾರೆ. 1994ರ ಚುನಾವಣೆಯಲ್ಲಿ ಶೇ.8ರಷ್ಟು ಮತ ಪಡೆದ ಈ ಕೆಸಿಪಿಯಿಂದ ಕಾಂಗ್ರೆಸ್‌ಗೆ ಅದೆಂಥ ಹೊಡೆತ ಬೀಳುತ್ತದೆಂದರೆ, ಜನತಾ ದಳ ಅಧಿಕಾರಕ್ಕೆ ಬಂದು ಕಾಂಗ್ರೆಸ್ ಮೂರನೆ ಸ್ಥಾನಕ್ಕೆ ತಳ್ಳಲ್ಪಡುತ್ತದೆ! ಸೊರಬದಲ್ಲಿ ಬಂಗಾರಪ್ಪ (45,641) ಲಿಂಗಾಯತ ಸಮುದಾಯದ ಪಕ್ಷೇತರ ಎದುರಾಳಿ ಬಾಸೂರು ಚಂದ್ರಪ್ಪ ಗೌಡರನ್ನು 18,470 ಮತಗಳಿಂದ ಸೋಲಿಸಿ ಜಯಭೇರಿ ಬಾರಿಸುತ್ತಾರೆ; ಕಾಂಗ್ರೆಸ್ಸಿಗೆ ಠೇವಣಿಯೂ ಉಳಿಯುವುದಿಲ್ಲ.

ಪಾರ್ಲಿಮೆಂಟಿಗೆ ಬಂಗಾರಪ್ಪ

1996ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಕೆಸಿಪಿ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದ ಬಂಗಾರಪ್ಪ ಸಂಸದರಾಗುತ್ತಾರೆ. ತಮ್ಮ ರಾಜಿನಾಮೆಯಿಂದ ತೆರವಾದ ಸೊರಬ ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆಯಲ್ಲಿ ಹಿರಿಯ ಮಗ ಕುಮಾರ್ ಬಂಗಾರಪ್ಪರನ್ನು ಕೆಸಿಪಿಯಿಂದ ಸ್ಪರ್ಧೆಗಿಳಿಸಿ ಗೆಲ್ಲಿಸಿಕೊಂಡುಬರುತ್ತಾರೆ. ಆ ಬಳಿಕ ಮತ್ತೆ ಕಾಂಗ್ರೆಸ್‌ಗೆ ಮರಳುವ ಬಂಗಾರಪ್ಪನವರಿಗೆ 1998ರ ನಡುಗಾಲ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗುವುದಿಲ್ಲ. ಕರ್ನಾಟಕ ವಿಕಾಸ್ ಪಕ್ಷ ಕಟ್ಟಿ ಆಖಾಡಕ್ಕಿಳಿವ ಬಂಗಾರಪ್ಪ ಬಿಜೆಪಿಯ ಆಯನೂರು ಮಂಜುನಾಥರ ಎದುರು ಸೋಲುತ್ತಾರೆ. ಸೋಲರಿಯದ ಸರದಾರ ಎನಿಸಿದ್ದ ಬಂಗಾರಪ್ಪನವರಿಗೆ ಸೋಲಿನ ಅನುಭವ ಆಗುತ್ತದೆ!

ಹರತಾಳು ಹಾಲಪ್ಪ

1999ರಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಜತೆಯಲ್ಲಿಯೆ ಚುನಾವಣೆ ಎದುರಾದಾಗ ಬಂಗಾರಪ್ಪ ಕೆವಿಪಿಯನ್ನು ಕಾಂಗ್ರೆಸ್‌ನಲ್ಲಿ ವಿಲೀನಮಾಡಿ ಸಂಸದ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಾರೆ. ಸೊರಬದ ಕಾಂಗ್ರೆಸ್ ಟಿಕೆಟ್ ಮಗ ಕುಮಾರ್‌ಗೆ ಕೊಡಿಸುತ್ತಾರೆ. ಅಪ್ಪ-ಮಗ ಇಬ್ಬರು ಗೆಲ್ಲುತ್ತಾರೆ. ಸೊರಬದಲ್ಲಿ ಕೆ.ಬಿ.ಪ್ರಕಾಶ್ ಎಂಬ ಪಕ್ಷೇತರ ಅಭ್ಯರ್ಥಿಯನ್ನು 12,495 ಮತಗಳಿಂದ ಸೋಲಿಸಿದ ಕುಮಾರ್ ಅಪ್ಪನ ಪ್ರಭಾವದಿಂದ ಎಸ್.ಎಂ.ಕೃಷ್ಣ ಸರಕಾರದಲ್ಲಿ ಸಣ್ಣ ನೀರಾವರಿ ಇಲಾಖೆಯ ರಾಜ್ಯ ಮಂತ್ರಿಯಾಗುತ್ತಾರೆ. 2004ರ ಅಸೆಂಬ್ಲಿ ಮತ್ತು ಪಾರ್ಲಿಮೆಂಟ್ ಇಲೆಕ್ಷನ್ ಒಟ್ಟಿಗೆ ಬರುವ ಹೊತ್ತಿಗೆ ಬಂಗಾರಪ್ಪ ಕುಟುಂಬದ ಜಗಳ ಬೀದಿಗೆ ಬಂದಿರುತ್ತದೆ. ಹಿರಿಯ ಮಗ ಕುಮಾರ್‌ನ ರಾಜಕೀಯ ಜೀವನ ಮುಗಿಸಿ ಎರಡನೆ ಪುತ್ರ ಮಧುರನ್ನು ಸೊರಬದ ಸರದಾರ ಮಾಡುವ ಹಠಕ್ಕೆ ಬಂಗಾರಪ್ಪ ಬಿದ್ದಿದ್ದರು.

ಇದೇ ಸಂದರ್ಭದಲ್ಲಿ ಬಂಗಾರಪ್ಪ ರಾಜಕೀಯ ನಿಲುವೂ ಬದಲಿಸಿ ಬಿಜೆಪಿ ಸೇರಿದರು. ಸಮಾಜವಾದಿ ಹಿನ್ನೆಲೆಯ ಬಂಗಾರಪ್ಪ ಧರ್ಮೋನ್ಮಾದ ಸಿದ್ಧಾಂತದ ಬಿಜೆಪಿ ಸೇರಿದ್ದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿತ್ತು. ಮತ್ತೆ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಕೇಂದ್ರದಲ್ಲಿ ಬರುತ್ತದೆ; ಅಲ್ಲಿ ಮಂತ್ರಿ ಆಗಬಹುದೆಂಬ ಲೆಕ್ಕಾಚಾರ ಬಂಗಾರಪ್ಪ ಹಾಕಿದ್ದರೆನ್ನಲಾಗುತ್ತಿದೆ. ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದ ಆಯನೂರು ಮಂಜುನಾಥರನ್ನು ಸೋಲಿಸಿದ ಬಂಗಾರಪ್ಪ ಬಿಜೆಪಿ ಸಂಸದರಾದರು. ಆದರೆ ಕೇಂದ್ರದಲ್ಲಿ ಬಿಜೆಪಿಗೆ ಅಧಿಕಾರ ಸಿಗಲಿಲ್ಲ. ಬಂಗಾರಪ್ಪನವರ ಎಣಿಕೆ ತಪ್ಪಿತ್ತಾದರೂ ರಾಜ್ಯ ಬಿಜೆಪಿಗೆ ಅವರ ಬಲದಿಂದ ದೊಡ್ಡ ಲಾಭವಾಯಿತೆಂಬ ವಿಶ್ಲೇಷಣೆಗಳು ಇವತ್ತಿಗೂ ನಡೆಯುತ್ತಿದೆ. 2004ರ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿ ರಾಜ್ಯದಲ್ಲಿ ದೈತ್ಯವಾಗಿ ಬೆಳೆಯಲು ಬಂಗಾರಪ್ಪನವರ ಕೊಡುಗೆ ಸಾಕಷ್ಟಿದೆ ಎಂದು ರಾಜಕೀಯ ಪಂಡಿತರು ಹೇಳುತ್ತಾರೆ.

2004ರಲ್ಲಿ ಸೊರಬದ ರಾಜಕಾರಣ ವಿಚಿತ್ರ ತಿರುವು ಕಂಡಿತ್ತು. ಬಂಗಾರಪ್ಪ ಬಿಜೆಪಿ ಸೇರಿದಾಗ ಕಾಂಗ್ರೆಸ್ ಸರಕಾರದಲ್ಲಿ ಮಂತ್ರಿಯಾಗಿದ್ದ ಕುಮಾರ್ ತಂದೆಯನ್ನು ಹಿಂಬಾಲಿಸಿದರು. ಆದರೆ ಬಂಗಾರಪ್ಪ ಕುಮಾರ್ ಒಳಬರದಂತೆ ಬಿಜೆಪಿ ಬಾಗಿಲು ಹಾಕಿಸಿದರು. ಅನಿವಾರ್ಯವಾಗಿ ಕಾಂಗ್ರೆಸ್ಸಿಗೆ ಮರಳಿದ ಕುಮಾರ್ ಆ ಪಕ್ಷದ ಹುರಿಯಾಳಾದರು; ಬಿಜೆಪಿ ಟಿಕೆಟ್‌ನಲ್ಲಿ ಬಂಗಾರಪ್ಪ ಎರಡನೆ ಪುತ್ರ ಮಧುವನ್ನು ಆಖಾಡಕ್ಕಿಳಿಸಿದರು. ಬಂಗಾರಪ್ಪನವರನ್ನು ಲಾಗಾಯ್ತಿನಿಂದ ವಿರೋಧಿಸುತ್ತಿದ್ದ ಕ್ಷೇತ್ರದ ಎರಡನೆ ಬಹುಸಂಖ್ಯಾತರಾದ ಲಿಂಗಾಯತರು ಕುಮಾರ್‌ಗೆ ಬೆಂಬಲಿಸಿದರು. ಜತೆಗೆ ದೀವರ-ದಲಿತರ ಮತದಲ್ಲಿ ಒಂದು ಪಾಲು ಪಡೆದ ಕಾಂಗ್ರೆಸ್‌ನ ಕುಮಾರ್ ಜಿದ್ದಾಜಿದ್ದಿನ ಸೋದರರ ಸವಾಲ್‌ನಲ್ಲಿ ಮಧುರನ್ನು (32,748), 11,929 ಮತಗಳಿಂದ ಸೋಲಿಸಿ ಅಪ್ಪನಿಗೆ ಆಘಾತ ಮಾಡಿದರು!

ಬಿಜೆಪಿಗೆ ಬೈಬೈ

ಬಿಜೆಪಿಯ ಗರ್ಭಗುಡಿ ಸಂಸ್ಕೃತಿಗೆ ಒಗ್ಗಿಕೊಳ್ಳಲಾಗದೆ ಒಂದೇ ವರ್ಷದಲ್ಲಿ ಹೊರಬಂದ ಬಂಗಾರಪ್ಪ ಸಂಸದ ಸ್ಥಾನಕ್ಕೂ ರಾಜಿನಾಮೆ ಕೊಟ್ಟು ಮುಲಾಯಂ ಸಿಂಗ್ ಯಾದವರ ಸಮಾಜವಾದಿ ಪಾರ್ಟಿ ಸೇರಿದರು. ಆ ಪಕ್ಷದ ರಾಜ್ಯಾಧ್ಯಕ್ಷರಾದ ಬಂಗಾರಪ್ಪ 2005ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಮತ್ತೆ ಶಿವಮೊಗ್ಗೆಯ ಎಂಪಿಯಾಗಿ ಆಯ್ಕೆಯಾದರು. 2008ರ ಅಸೆಂಬ್ಲಿ ಇಲೆಕ್ಷನ್ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ರಾಜಕಾರಣ ಬಂಗಾರಪ್ಪ ಮತ್ತು ಯಡಿಯೂರಪ್ಪರ ಪ್ರತಿಷ್ಟೆಯ ಆಖಾಡದಂತಾಗಿತ್ತು. ತನ್ನಿಂದ 2004ರಲ್ಲಿ ಹೊಸನಗರದಲ್ಲಿ ಶಾಸಕನಾಗಿದ್ದ ಹರತಾಳು ಹಾಲಪ್ಪ ದ್ರೋಹ ಮಾಡಿದನೆಂಬ ಆಕ್ರೋಶ ಬಂಗಾರಪ್ಪನವರಲ್ಲಿತ್ತು. ಅದೇ ಹಾಲಪ್ಪರನ್ನು ತನ್ನ ಮಗ ಮಧು ವಿರುದ್ಧ ಸೊರಬದಲ್ಲಿ ಬಿಜೆಪಿ ಕ್ಯಾಂಡಿಡೇಟ್ ಮಾಡಲು ಯಡಿಯೂರಪ್ಪ ಪ್ಲಾನು ಹಾಕಿದ್ದು ಬಂಗಾರಪ್ಪನವರನ್ನು ಇನ್ನಷ್ಟು ಕೆರಳಿಸಿತ್ತು. ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಹೊಸನಗರ
ರದ್ದಾದ್ದರಿಂದ ಹಾಲಪ್ಪ ಸ್ವಜಾತಿ ದೀವರು ಹೆಚ್ಚಿರುವ ಸೊರಬಕ್ಕೆ ವಲಸೆ ಬಂದಿದ್ದರು.

ಹಠದ ರಾಜಕಾರಣಕ್ಕೆ ಹೆಸರುವಾಸಿಯಾದ ಬಂಗಾರಪ್ಪ 2008ರಲ್ಲಿ ಬಿಜೆಪಿಯ ಮುಖ್ಯಮಂತ್ರಿ ಕ್ಯಾಂಡಿಡೇಟ್ ಎನಿಸಿದ್ದ ಯಡಿಯೂರಪ್ಪರ ಶಿಕಾರಿಪುರಕ್ಕೇ ಬಂದು ಸೆಡ್ಡು ಹೊಡೆದರು. ಎಸ್‌ಪಿ ಅಭ್ಯರ್ಥಿಯಾಗಿದ್ದ ಬಂಗಾರಪ್ಪನವರಿಗೆ ಕಾಂಗ್ರೆಸ್ ಬೆಂಬಲ ನೀಡಿತು. ಅತ್ತ ಸೊರಬದಲ್ಲಿ ತ್ರಿಕೋನ ಕಾಳಗ ಏರ್‍ಪಟ್ಟಿತ್ತು. ಬಂಗಾರಪ್ಪರ ಮಕ್ಕಳ ದಾಯಾದಿ ಕಾಳಗದಲ್ಲಿ ದೀವರ ಓಟ್ ಬ್ಯಾಂಕ್ ಮೂರು ಪಾಲಾಗಿ ಹರಿದು ಹಂಚಿಹೋಯಿತು. ಲಿಂಗಾಯತರ ಮತ ಏಕಗಂಟಿನಲ್ಲಿ ಪಡೆದ ಬಿಜೆಪಿಯ ಹಾಲಪ್ಪ (53,552), ಕಾಂಗ್ರೆಸ್‌ನ ಕುಮಾರ್ ಬಂಗಾರಪ್ಪ (32,499) ಮತ್ತು ಎಸ್‌ಪಿ ಹುರಿಯಾಳು ಮಧು ಬಂಗಾರಪ್ಪರನ್ನು (31,135) ಸೋಲಿಸಿ ಚುನಾಯಿತರಾದರು. ಶಿಕಾರಿಪುರದಲ್ಲಿ ಬಂಗಾರಪ್ಪರಿಗೆ ಗೆಲ್ಲಲಾಗಲಿಲ್ಲ. ಮುಖ್ಯಮಂತ್ರಿಯಾದ ಯಡಿಯೂರಪ್ಪ ಸೊರಬದಲ್ಲಿ ಗೆದ್ದ ಹಾಲಪ್ಪರಿಗೆ ಮಂತ್ರಿ ಮಾಡುವ ಮೂಲಕ ಬಂಗಾರಪ್ಪನವರ ಮೇಲಿನ ಅಳಿದುಳಿದ ಸೇಡನ್ನೂ ತೀರಿಸಿಕೊಂಡರು.

2009ರ ಪಾರ್ಲಿಮೆಂಟ್ ಇಲೆಕ್ಷನ್ ವೇಳೆ ಕಾಂಗ್ರೆಸ್ ಸೇರಿ ಆಖಾಡಕ್ಕಿಳಿದ ಬಂಗಾರಪ್ಪನವರಿಗೆ ಬಿಜೆಪಿ ಅಭ್ಯರ್ಥಿಯಾಗಿ ಯಡಿಯೂರಪ್ಪರ ಮಗ ರಾಘವೇಂದ್ರ ಮುಖಾಮುಖಿಯಾದರು. ಆ ಚುನಾವಣೆಯಲ್ಲಿ ಅನಾರೋಗ್ಯದಿಂದ ಸರಿಯಾಗಿ ಪ್ರಚಾರಕ್ಕೆ ಹೋಗಲಾಗದೆ ಮತ್ತು ಬಿಜೆಪಿಯ ಧನಬಲ ಎದುರಿಸಲು ಸಂಪನ್ಮೂಲದ ಕೊರತೆಯಿಂದ ಬಂಗಾರಪ್ಪ ಸೋಲುವಂತಾಯಿತೆಂಬ ವಿಶ್ಲೇಷಣೆಗಳು ಜಿಲ್ಲೆಯಲ್ಲಿ ಇಂದಿಗೂ ಚಾಲ್ತಿಯಲ್ಲಿದೆ. 2010ರಲ್ಲಿ ಜೆಡಿಎಸ್ ಸೇರಿದ ಬಂಗಾರಪ್ಪ 2011ರಲ್ಲಿ ನಿಧನರಾದರು.

2013ರ ಚುನಾವಣೆಯಲ್ಲಿ ಜೆಡಿಎಸ್‌ನ ಮಧು ಬಂಗಾರಪ್ಪ, ಕಾಂಗ್ರೆಸ್‌ನ ಕುಮಾರ್ ಬಂಗಾರಪ್ಪ ಮತ್ತು ಯಡಿಯೂರಪ್ಪರ ಕೆಜೆಪಿಯ ಹರತಾಳು ಹಾಲಪ್ಪರ ಮಧ್ಯೆ ತುರುಸಿನ ಹೋರಾಟ ನಡೆಯಿತು. ಬಂಗಾರಪ್ಪನವರ ಸಾವಿನ ಅನುಕಂಪದ ಅಲೆಯಿಂದ ಮಧು ಸಮೀಪದ ಪ್ರತಿಸ್ಪರ್ಧಿ ಕೆಜೆಪಿಯ ಹಾಲಪ್ಪರನ್ನು 21,225 ಮತದಿಂದ ಸೋಲಿಸಿ ಶಾಸಕನಾದರು. ಮೂರನೆ ಸ್ಥಾಕ್ಕೆ ತಳ್ಳಲ್ಪಟ್ಟಿದ್ದ ಕುಮಾರ್ ಬಂಗಾರಪ್ಪ 33,176 ಮತ ಪಡೆದರು.

ಯಡಿಯೂರಪ್ಪ

2018ರ ಚುನಾವಣೆ ಎದುರಾದಾಗ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಬಿಟ್ಟು ಯಡಿಯೂರಪ್ಪರ ಅನುಯಾಯಿಯಾಗಿ ಬಿಜೆಪಿ ಸೇರಿ ಟಿಕೆಟ್ ಪಡೆದರು. ಸೊರಬದಲ್ಲಿ ನೆಲೆ-ಬೆಲೆಯಿಲ್ಲದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಮಧು ವೈಯಕ್ತಿಕ ಸಾಮರ್ಥ್ಯದಿಂದ ಸೆಣಸಾಡಬೇಕಿತ್ತು. ಈ ಚುನಾವಣೆಯಲ್ಲಿ ಹಿಂದೆಂದೂ ಕಾಣದ ಜಾತಿಕಾರಣ ಮತ್ತು ಧರ್ಮಕಾರಣ ತಂತ್ರಗಾರಿಕೆಗಳು ಬಿರುಸಾಗಿತ್ತು ಎನ್ನಲಾಗಿದೆ. ಲಿಂಗಾಯತ ಪ್ರಜ್ಞೆಯ ತಂತ್ರಗಾರಿಕೆಯಿಂದ ಹಿಂದುಳಿದ ವರ್ಗದ ಮತ ಬ್ಯಾಂಕ್ ವಿಭಜನೆಯಾಗಿದ್ದರಿಂದ ನೇರಾನೇರ ಕಾಳಗದಲ್ಲಿ ಬಿಜೆಪಿಯ ಕುಮಾರ್ ಬಂಗಾರಪ್ಪ 13,286 ಮತಗಳ ಅಂತರದಿಂದ ಆಯ್ಕೆಯಾದರೆಂಬ ಮಾತು ಕ್ಷೇತ್ರದಲ್ಲಿ ಸಾಮಾನ್ಯವಾಗಿದೆ.

ಕ್ಷೇತ್ರದ ಕತೆ-ವ್ಯಥೆ!

ಸೊರಬ ಶಿವಮೊಗ್ಗ ಜಿಲ್ಲೆಯಲ್ಲಿ ಎದ್ದುಕಾಣುವಂಥ ಹಿಂದುಳಿದ ಪ್ರದೇಶ. ಅಕ್ಕಪಕ್ಕದ ಸಾಗರ, ಶಿಕಾರಿಪುರಕ್ಕೆ ಹೋಲಿಸಿದರೆ ಸೊರಬ ತಾಲೂಕು ದೊಡ್ಡ ಗ್ರಾಮದಂತೆ ಗೋಚರಿಸುತ್ತದೆ. ’ದೀಪದ ಬುಡದಲ್ಲಿ ಕತ್ತಲು’ ಅಂತಾರಲ್ಲ ಹಾಗಾಗಿದೆ ಸೊರಬದ ಸ್ಥಿತಿ-ಗತಿ. ಹೆಚ್ಚುಕಮ್ಮಿ ನಾಲ್ಕು ದಶಕಗಳ ಕಾಲ ಸೊರಬವನ್ನು ಆಳಿದ ಬಂಗಾರಪ್ಪ ಇಡೀ ರಾಜ್ಯದ ಕಣ್ಣುಕೋರೈಸುವ ದೀಪದಂತೆ ಝಗಮಗಿಸುತ್ತಿದ್ದರು. ಆದರೆ ಅವರು ಪ್ರತಿನಿಧಿಸುತ್ತಿದ್ದ ಸೊರಬ ಮಾತ್ರ ಗಾಢಾಂಧಕಾರದಲ್ಲಿತ್ತು. ಬಹುಜನ ಸಮಾಜದ ಪ್ರೀತಿ-ವಿಶ್ವಾಸದ ನಾಯಕಾಗ್ರೇಸರಾಗಿದ್ದ ಬಂಗಾರಪ್ಪ ಗೇಣಿ ರೈತರ ಪರ ಹೋರಾಟ ಬಿಟ್ಟರೆ ಸಮಷ್ಠಿ ಹಿತದ ಕೆಲಸ ಮಾಡಿದ್ದು ಕಡಿಮೆ; ವೈಯಕ್ತಿಕ ಕಷ್ಟಸುಖಕ್ಕೆ ತಕ್ಷಣ ಸ್ಪಂದಿಸುತ್ತಿದ್ದ ಬಂಗಾರಪ್ಪ ತನ್ನನ್ನು ಕಾಣಲು ಬಂದವರಿಗೆ ಊಟ-ತಿಂಡಿ ಕೊಟ್ಟು ಉಪಚರಿಸಿ ಹೋಗುವಾಗ ಬಸ್ ಚಾರ್ಜ್ ಕೊಟ್ಟು ಕಳಿಸುತ್ತಿದ್ದರು. ಮನುಷ್ಯ ಸಂಬಂಧ ಕಟ್ಟಿಕೊಳ್ಳುತ್ತಿದ್ದ ಹೃದಯವಂತ ಮುಖಂಡರಾಗಿದ್ದ ಬಂಗಾರಪ್ಪ ಸೊರಬದ ಅಭಿವೃದ್ಧಿಗೆ ದೂರದೃಷ್ಟಿಯ ಸ್ಕೆಚ್ ಹಾಕಿಕೊಂಡವರಾಗಿರಲಿಲ್ಲ ಎಂಬ ಮೆಚ್ಚುಗೆ-ಬೇಸರ ಇವತ್ತಿಗೂ ಕ್ಷೇತ್ರದಲ್ಲಿದೆ.

1999ರ ಬಳಿಕ ಸೊರಬದಲ್ಲಿ ಒಂಚೂರು ಬದಲಾವಣೆಯ ಗಾಳಿ ಬೀಸುತ್ತಿದೆ. ರಸ್ತೆಗಳು ಯೋಜನಾಬದ್ಧವಾಗಿದೆ; ಸರಕಾರಿ ಕಚೇರಿಗಳು ಎದ್ದುನಿಂತಿವೆ. ಹಳ್ಳಿಗಾಡಲ್ಲಿ ತಕ್ಕಮಟ್ಟಿಗೆ ಮೂಲ ಸೌಕರ್ಯ ಅಭಿವೃದ್ಧಿಗೆ ಪ್ರಯತ್ನಗಳು ಆಗಿವೆಯಾದರೂ ಆಗಬೇಕಾಗಿರುವುದು ಬಹಳವಿದೆ ಎಂದು ಜನರು ಹೇಳುತ್ತಾರೆ. ಹಿಂದಿನ ಜಿಲ್ಲಾ ಉಸ್ತುವಾರಿ ಮಂತ್ರಿ ಕಾಗೋಡು ತಿಮ್ಮಪ್ಪರ ನಿಕಟ ಒಡನಾಟದಲ್ಲಿದ್ದ, ಕಳೆದ ಅವಧಿಯ ಶಾಸಕ ಮಧು ಬಂಗಾರಪ್ಪ ದೊಡ್ಡ ಮೊತ್ತದ ಹಲವು ಯೋಜನೆ ತಂದಿದ್ದರು; ಬಗರ್ ಹುಕುಮ್ ಹಕ್ಕುಪತ್ರ ರೈತರಿಗೆ ಹಂಚಲು ಬದ್ಧತೆಯಿಂದ ಕೆಲಸ ಮಾಡಿದ್ದರು. ಈಗ ಬಗರ್ ಹುಕುಮ್ ಹಕ್ಕುಪತ್ರಗಳನ್ನು 50-60 ಸಾವಿರಕ್ಕೆ ಹರಾಜು ಹಾಕಲಾಗುತ್ತಿದೆ. ಮಧು ತಂದಿದ್ದ ಯೋಜನೆಗಳನ್ನೆ ಕುಮಾರ್ ಮುಂದುವರಿಸುತ್ತಿದ್ದಾರೆಯೆ ವಿನಃ ಅವರ ಪ್ರಯತ್ನದಿಂದ ಜನರಿಗೆ ಅನುಕೂಲ ಆಗುವಂಥ ಯೋಜನೆಗಳ್ಯಾವುದೂ ಬಂದಿಲ್ಲ ಎಂದು ದಲಿತ ಸಮುದಾಯದ ನಿವೃತ್ತ ಶಿಕ್ಷಕರೊಬ್ಬರು ’ನ್ಯಾಯಪಥ’ದೊಂದಿಗೆ ಮಾತಾಡುತ್ತ ಹೇಳಿದರು.

ಸೊರಬದಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ ಜನರು ಪರದಾಡುತ್ತಿದ್ದಾರೆ. ಸಾವಿರಾರು ಕೆರೆಗಳಿರುವ ಸೊರಬದಲ್ಲಿ ಇನ್ನೊಂದಿಷ್ಟು ಕೆರೆಗಳ ಹೂಳೆತ್ತಿದರೆ ಕೃಷಿಗೆ ಅನುಕೂಲವಾಗುತ್ತದೆ. ಜೋಗಕ್ಕೆ ಬರುವವರಿಗಿಂತ ಒಂದೂವರೆ ಪಟ್ಟು ಹೆಚ್ಚು ಪ್ರವಾಸಿಗರು-ಯಾತ್ರಿಕರು ಚಂದ್ರಗುತ್ತಿಗೆ ಬರುತ್ತಾರೆ. ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಿದರೆ ಉದ್ಯೋಗ ಸೃಷ್ಟಿಯಾಗುತಿತ್ತು. ಆದರೆ ಆಳುವವರಲ್ಲಿ ಇಚ್ಛಾಶಕ್ತಿಯಿಲ್ಲವೆಂದು ಪತ್ರಕರ್ತರೊಬ್ಬರು ಹೇಳುತ್ತಾರೆ.

ಬಿಜೆಪಿಗೆ ಬೇಡವಾದ ಕುಮಾರ್?!

ಸೊರಬ ತಾಲೂಕಿನಲ್ಲಿ ಒಂದು ಸುತ್ತುಹಾಕಿದರೆ ಜನರು ಶಾಸಕ ಕುಮಾರ್ ಬಂಗಾರಪ್ಪರ ಮೇಲೆ ಅಸಮಾಧಾನಗೊಂಡಿರುವುದು ಎಂಥವರಿಗೂ ಅರ್ಥವಾಗುತ್ತದೆ; ಶಾಸಕರು ಬೆಂಗಳೂರಿನಲ್ಲಿ
ಇರುತ್ತಾರೆ; ಜನರಿಗೆ ಸದಾ ನಾಟ್ ರಿಚೇಬಲ್. ಸಿಕ್ಕಾಗ ಸಮಸ್ಯೆ ಹೇಳಿಕೊಂಡರೆ ಕೆಟ್ಟದಾಗಿ ಬಯ್ಯುತ್ತಾರೆ. ಮನುಷ್ಯ ಸಂಬಂಧ ಕೆಡಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತದೆ.

ಸುಮಾರು ಎರಡು ತಿಂಗಳ ಹಿಂದೆ ರಸ್ತೆಗಡ್ಡವಾಗಿ ಕಾರು ನಿಲ್ಲಿಸಿದ್ದಾನೆಂಬ ನೆಪದಿಂದ ದಂತ ವೈದ್ಯ ಡಾ.ಜ್ಞಾನೇಶ್‌ರ ಆಸ್ಪತ್ರೆ ಮೆಟ್ಟಿಲೇರಿ ಅವರ ಮೇಲೆ ಹಲ್ಲೆಗೆ ಕುಮಾರ್ ಬಂಗಾರಪ್ಪ ಹವಣಿಸಿದರೆಂದು ಮಾಧ್ಯಮಗಳು ದೊಡ್ಡದಾಗಿ ಸದ್ದು ಮಾಡಿದ್ದವು. ತನ್ನ ಕಾರು ದಾಟಲು ಸಾಧ್ಯವಾಗುವಷ್ಟು ಜಾಗವಿದ್ದರೂ ಶಾಸಕರು ಕ್ಯಾತೆ ತೆಗೆದಿದ್ದರ ಜಾಡು ಹಿಡಿದು ಹೋದರೆ ಬಿಜೆಪಿಯೊಳಗಿನ ಟಿಕೆಟ್ ತಂತ್ರಗಾರಿಕೆ ಸ್ಪಷ್ಟವಾಗುತ್ತದೆಂದು ಸೊರಬದ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಸೊರಬದ ಮಣ್ಣಿನ ರಾಜಕಾರಣವೆ ಹಾಗೆ; ಮೇಲ್ವರ್ಗದ ಲಿಂಗಾಯತರು ಎಂದಿಗೂ ದೀವರ ಶಾಸಕನನ್ನು ಸಹಿಸಿಕೊಳ್ಳುವುದಿಲ್ಲ ಎಂಬ ಮಾತಿದೆ. ಸ್ವಜಾತಿ ಸರ್ವೋಚ್ಚ ನಾಯಕ ಯಡಿಯೂರಪ್ಪರ ಮುಖ ನೋಡಿ ಬಿಜೆಪಿಗೆ ಮತ ಹಾಕಿದ್ದ ಲಿಂಗಾಯತ ಸಮುದಾಯದ ಮುಂದಾಳುಗಳು ಆ ನಂತರ ಕುಮಾರ್‌ರನ್ನು ಓವರ್‌ಟೇಕ್ ಮಾಡಿ ಯಡಿಯೂರಪ್ಪ ಮತ್ತವರ ಮಗ ಸಂಸದ ರಾಘಣ್ಣನಿಂದ ತಮ್ಮ ಬೇಕುಬೇಡಗಳನ್ನು ಪೂರೈಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ತನ್ನನ್ನು ಕಡೆಗಣಿಸುತ್ತಿರುವ ಲಿಂಗಾಯತ ನಾಯಕರೆ ವಿರುದ್ಧ ಕುಮಾರ್ ತಿರುಗಿಬಿದ್ದಿದ್ದರೆನ್ನುವುದು ಸೊರಬದಲ್ಲಿನ ಬಹಿರಂಗ ರಹಸ್ಯ.

ಈ ನಡುವೆ ಲಿಂಗಾಯತರ ನಿಯೋಗವೊಂದು ಬಿಜೆಪಿ ಹೈಕಮಾಂಡ್ ಭೇಟಿಯಾಗಿ, ’2023ರ ಚುನಾವಣೆಯಲ್ಲಿ ಯಾವ ಕಾರಣಕ್ಕೂ ಕುಮಾರ್‌ಗೆ ಬಿಜೆಪಿ ಟಿಕೆಟ್ ಕೊಡಕೂಡದು… ಹಾಗೊಮ್ಮೆ ದೀವರಿಗೆ ಅವಕಾಶ ನೀಡಬೇಕೆಂದಾದರೆ ಡಾ.ಜ್ಞಾನೇಶ್‌ಗೆ ಅಭ್ಯರ್ಥಿ ಮಾಡಿ’ ಎಂದು ಹೇಳಿದೆ ಎನ್ನಲಾಗುತ್ತಿದೆ. ಈ ನಿಯೋಗದಲ್ಲಿ ಡಾ.ಜ್ಞಾನೇಶ್ ಸಹ ಇದ್ದದ್ದು ಕುಮಾರ್‌ರನ್ನು ಕೆರಳಿಸಿತ್ತು. ಈ ಆಕ್ರೋಶವೆ ಕುಮಾರ್ ಡಾ.ಜ್ಞಾನೇಶ್ ಮೇಲೇರಿಹೋಗಲು ಕಾರಣವೆಂಬ ಕಟ್ಟೆಪುರಾಣಗಳು ಸೊರಬದಲ್ಲಿ ಚಾಲ್ತಿಯಲ್ಲಿವೆ. ಅತ್ತ ವಲಸಿಗ ಕುಮಾರ್ ಬಗ್ಗೆ ನಂಬಿಕೆಯಿಲ್ಲದ ಸಂಘ ಪರಿವಾರ ತಮ್ಮ ಸಿದ್ಧಾಂತ ಬದ್ಧತೆಯ ಹೊಸ ದೀವರ ಮುಖದ ಅನ್ವೇಷಣೆಯಲ್ಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಬಿಜೆಪಿ ಟಿಕೆಟ್ ತಪ್ಪಿದರೆ ಕುಮಾರ್ ತಮ್ಮನಿಗೆ ಸೊರಬ ಬಿಟ್ಟುಕೊಟ್ಟು ಕಾಂಗ್ರೆಸ್ ಸೇರಿ ಲೋಕಸಭೆಗೆ ಸ್ಪರ್ಧಿಸುವ ಸಂದರ್ಭ ಬಂದರೂ ಬರಬಹುದೆಂಬ ಚರ್ಚೆಗಳು ಶಿವಮೊಗ್ಗದ
ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿವೆ.

ಟಿಕೆಟ್ ಪಕ್ಕಾ ಮಾಡಿಕೊಂಡೆ ಜನತಾ ದಳ ಬಿಟ್ಟು ಕಾಂಗ್ರೆಸ್ ಸೇರಿರುವ ಮಾಜಿ ಶಾಸಕ ಮಧು ಬಂಗಾರಪ್ಪ ಕುಮಾರ್‌ಗಿಂತ ಬೆಟರ್ ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತದೆ. ಕಾಂಗ್ರೆಸ್‌ನಲ್ಲಿ ಮಧುಗೆ ಟಿಕೆಟ್ ಪ್ರತಿಸ್ಪರ್ಧಿಗಳೂ ಇಲ್ಲ. ತಂದೆಯಂತೆ ಜನರೊಂದಿಗೆ ಬೆರೆಯುವ ಮಧು ಯಾರೇ ಎದುರಾಳಿಯಾದರೂ ಗೆಲ್ಲುವ ಸಾಧ್ಯತೆ ಹೆಚ್ಚೆಂಬ ವಿಶ್ಲೇಷಣೆಗಳು ನಡೆದಿವೆ. ಕುಮಾರ್‌ಗೇ ಬಿಜೆಪಿ ಟಿಕೆಟ್ ಕೊಟ್ಟರೆ, ಬಿಜೆಪಿಯ ಲಿಂಗಾಯತ ಮುಂದಾಳುಗಳು ಹಿಂದೊಮ್ಮ ಬಂಗಾರಪ್ಪನವರ ವಿರುದ್ಧ ಸ್ಪರ್ಧಿಸಿ ಗಣನೀಯ ಮತ ಪಡೆದಿದ್ದ ಸ್ವಜಾತಿಯ ಬಾಸೂರು ಚಂದ್ರಪ್ಪ ಗೌಡರನ್ನು ಜನತಾ ದಳದಿಂದ ಆಖಾಡಕ್ಕೆ ಇಳಿಸುವ ಪ್ಲಾನ್ ಹಾಕಿದ್ದಾರೆನ್ನಲಾಗಿದೆ. ಸೊರಬದಲ್ಲಿ ಸದ್ಯಕ್ಕಿರುವ ಒಂದೇಒಂದು ಕುತೂಹಲದ ಪ್ರಶ್ನೆಯೆಂದರೆ, 2023ರಲ್ಲಿ ’ಸೋದರರ ಸವಾಲ್’ ಇರಲಾರದಾ ಎಂಬುದಾಗಿದೆ.


ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಸಾಗರ: ಸಮಾಜವಾದಿ ನೆಲದಲ್ಲಿ ಸಂಚುಕೋರ ರಾಜಕಾರಣ ಮುನ್ನಲೆಗೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. Respected Sir,,
    I think You Received a Wrong Information About Kumara bangarappa Sir..He is Always Responding Citizen problems..And Daily He visit the Taluk office,,He is always available in taluk office..
    Who told you He is Always not reachable May be You have recieved a wrong information…Thank you

LEAVE A REPLY

Please enter your comment!
Please enter your name here

- Advertisment -

Must Read

ಓಂ ಬಿರ್ಲಾ ಪುತ್ರಿಯ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್; ಧ್ರುವ ರಾಠಿ ವಿರುದ್ಧ ಪ್ರಕರಣ ದಾಖಲು

0
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿಯ ಬಗ್ಗೆ ಎಕ್ಸ್‌ನಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದ ನಂತರ, ಮಹಾರಾಷ್ಟ್ರದ ಸೈಬರ್ ಪೊಲೀಸರು ಜನಪ್ರಿಯ ಯೂಟ್ಯೂಬರ್ ಧ್ರುವ ರಾಠಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಹಿರಿಯ...