Homeಕರ್ನಾಟಕಸಿದ್ದರಾಮಯ್ಯ ಅಮೃತ ಮಹೋತ್ಸವ: ದುರುದ್ದೇಶಪೂರಿತ ಪೋಸ್ಟ್‌ ಹಾಕಿದ ಬಿಜೆಪಿ

ಸಿದ್ದರಾಮಯ್ಯ ಅಮೃತ ಮಹೋತ್ಸವ: ದುರುದ್ದೇಶಪೂರಿತ ಪೋಸ್ಟ್‌ ಹಾಕಿದ ಬಿಜೆಪಿ

ಬಿಜೆಪಿಯ ಅತಿರೇಕಕ್ಕೆ ಪ್ರಜ್ಞಾವಂತರು ವಿರೋಧ ವ್ಯಕ್ತಪಡಿಸಿದ್ದಾರೆ. (ವಿವರಗಳಿಗೆ ಮುಂದೆ ಓದಿರಿ...)

- Advertisement -
- Advertisement -

ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು 75ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ದಾವಣಗೆರೆಯಲ್ಲಿ ‘ಸಿದ್ದರಾಮಯ್ಯ ಅಮೃತ ಮಹೋತ್ಸವ’ವನ್ನು ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಆಯೋಜಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಆಡಳಿತ ಪಕ್ಷವೊಂದು ನಿರ್ಲಿಪ್ತವಾಗಿಯಾದರೂ ಇದ್ದು ತನ್ನ ಘನತೆಯನ್ನು ಉಳಿಸಿಕೊಳ್ಳಬಹುದಿತ್ತೇನೋ. ಆದರೆ ವಿನಾಕಾರಣ ಸಿದ್ದರಾಮಯ್ಯನವರ ಮೇಲೆ ಕೋಮುದ್ವೇಷ ಹರಡುವ ದುಷ್ಕೃತ್ಯಕ್ಕೆ ಬಿಜೆಪಿ ಕೈಹಾಕಿದಂತೆ ಕಾಣುತ್ತಿದೆ.

ಸಿದ್ದರಾಮಯ್ಯನವರನ್ನು ಹಿಂದೂ ವಿರೋಧಿ ಎಂದು ಬಿಂಬಿಸುವ ಪ್ರೊಪಗಾಂಡವನ್ನು ಸಂಘಪರಿವಾರ ಮೊದಲಿನಿಂದಲೂ ಮಾಡುತ್ತಾ ಬಂದಿದೆ. ಈ ಅಮೃತ ಮಹೋತ್ಸವದ ಸಂದರ್ಭದಲ್ಲಿಯಾದರೂ ಈ ಪ್ರೊಪಗಾಂಡವನ್ನು ಬಿಜೆಪಿ ನಿಲ್ಲಿಸಿ ತನ್ನ ಗೌರವವನ್ನು ಉಳಿಸಿಕೊಳ್ಳುತ್ತದೆ, ಜನ ಮಾನಸದಲ್ಲಿ ನೆಲೆಸಿರುವ ರಾಜಕಾರಣಿಯೊಬ್ಬರಿಗೆ ಕನಿಷ್ಠ ಗೌರವವನ್ನು ಸಲ್ಲಿಸುತ್ತದೆ ಎಂದು ನಿರೀಕ್ಷಿಸಿದ್ದ ಸಿದ್ದರಾಮಯ್ಯನವರ ಅಭಿಮಾನಿಗಳಿಗೆ ಬೇಸರ ತಂದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸಿದ್ದರಾಮಯ್ಯನವರ ಜನ್ಮದಿನ ಆಚರಣೆ ಕುರಿತು ಕರ್ನಾಟಕ ಬಿಜೆಪಿ ಘಟಕವು ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹೀಗೆ ಬರೆದುಕೊಂಡಿದೆ: “ಹಿಂದೂ ಆರಾಧಕರಾದ ರಾಮ, ಕೃಷ್ಣನನ್ನು ದೇವರಲ್ಲ ಎನ್ನುವ ಸಿದ್ದರಾಮಯ್ಯ ಮಸೀದಿಯನ್ನು ಪ್ರೀತಿಸಿ, ಅಯೋಧ್ಯೆಯ ರಾಮ ಮಂದಿರವನ್ನು ವಿರೋಧಿಸುತ್ತಾರೆ. ಬಾಬರ್‌, ಘೋರಿ, ಘಜಿನಿಗಳಂತೆ ಆಡಳಿತ ನಡೆಸಿ ಕೋಮು ಗಲಭೆ, ಜನಗಳ ಮಧ್ಯ ದ್ವೇಷ ಹೊತ್ತಿಸಿ, ಕಿಚ್ಚು ಹಚ್ಚಿ ಮೂರು ವರ್ಷದಲ್ಲಿ 23 ಕೊಲೆ ಮಾಡಿದ್ದು ಇದೇ ಸಿದ್ದರಾಮಯ್ಯ ಸರ್ಕಾರ. ಮುಖ್ಯಮಂತ್ರಿಯಾಗಿದ್ದಾಗ ಹಿಂದೂಗಳ ಪಾಲಿನ ರಾವಣನಾಗಿ, ಅಧಿಕಾರ ಕಳೆದುಕೊಂಡಾಗ ರಾಮನಂತೆ ನಟಿಸುವ ಸಿದ್ದರಾಮಯ್ಯ ಅವರ ಕಪಟ ಬುದ್ದಿ ಹಿಂದೂ ಸಮಾಜ ಎಂದೋ ತಿಳಿದುಕೊಂಡಿದೆ. ಸಿದ್ದರಾಮಯ್ಯ ಅಮೃತ ಮಹೋತ್ಸವ ಹಿಂದೂ ವಿರೋಧಿಗಳ ಹಬ್ಬವಷ್ಟೇ ಅಲ್ಲ, ಹಿಂದೂ ವಿರೋಧಿಗಳ ಉರೂಸ್‌ ಕೂಡಾ ಹೌದು.”

-ಇದು ಬಿಜೆಪಿ ಕಾರಿಕೊಂಡಿರುವ ರೀತಿ. ರಾಜ್ಯದ ಮೂಲೆ ಮೂಲೆಯಿಂದ ಮಳೆಯನ್ನೂ ಲೆಕ್ಕಿಸದೆ ಸಾಗರೋಪಾದಿಯಲ್ಲಿ ಜನರು ಜಾತಿ, ಮತವೆನ್ನದೆ ಸಿದ್ದರಾಮಯ್ಯನವರ ಅಮೃತ ಮಹೋತ್ಸವಕ್ಕೆ ತೆರಳಿದ್ದಾರೆ. ಸಿದ್ದರಾಮಯ್ಯನವರ ಜನಪ್ರಿಯತೆ ಬಿಜೆಪಿಗೆ ತಿಳಿಯದ ಸಂಗತಿಯೇನಲ್ಲ. ಆದರೂ ‘ಹಿಂದೂ ವಿರೋಧಿ’ ಎಂಬ ಪ್ರೊಪಗಾಂಡವನ್ನು ಬಿಜೆಪಿ ಯಾಕೆ ಮೊದಲಿನಿಂದಲೂ ಮಾಡುತ್ತಿದೆ? ಎಂಬ ಪ್ರಶ್ನೆಯನ್ನು ಈ ಸಂದರ್ಭದಲ್ಲಿ ಗಂಭೀರವಾಗಿ ಕೇಳಿಕೊಳ್ಳಬೇಕಾಗಿದೆ.

ಬಿಜೆಪಿ ಅತಿರೇಕದ ಈ ಧೋರಣೆಯ ಕುರಿತು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್‌, “ಸಿದ್ದರಾಮಯ್ಯನವರ ಜನಪ್ರಿಯತೆ ಹಾಗೂ ಕಾಂಗ್ರೆಸ್ ಪಕ್ಷದ ಜನಪ್ರಿಯತೆಯನ್ನು ಸಹಿಸಿಕೊಳ್ಳಲಾಗದೆ ಬಿಜೆಪಿಯವರು ಇಂತಹ ಅಸಹ್ಯವಾದ ಕೃತ್ಯಕ್ಕೆ ಕೈ ಹಾಕಿದ್ದಾರೆ. ಜನರನ್ನು ದಿಕ್ಕು ತಪ್ಪಿಸುವುದೇ ಇವರ ಪ್ರಮುಖವಾದ ಉದ್ದೇಶ” ಎಂದು ತಿಳಿಸಿದರು.

“ಸಿದ್ದರಾಮಯ್ಯನವರು ಯಾವತ್ತೂ ತಮ್ಮ ಜನ್ಮದಿನವನ್ನು ಆಚರಿಸಿಕೊಂಡವರಲ್ಲ. ಅವರ 75ನೇ ವರ್ಷದ ಹುಟ್ಟುಹಬ್ಬವನ್ನು ಜನಸಾಮಾನ್ಯರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಆಯೋಜಿಸಿದ್ದಾರೆ. ಸಿದ್ದರಾಮಯ್ಯನವರು ತಮ್ಮ ಅಧಿಕಾರವಧಿಯಲ್ಲಿ ಸಾಮಾನ್ಯ ಜನತೆಗೆ, ಕಡುಬಡವರಿಗೆ, ದೀನ ದಲಿತರಿಗೆ, ಹಿಂದುಳಿದ ವರ್ಗಗಳಿಗೆ ಕೊಟ್ಟಂತಹ ಕೊಡುಗೆಗಳೆಲ್ಲವೂ ಅಜರಾಮರ. ಅವರು ನೀಡಿದ ಕೊಡುಗೆಯ ಒಂದು ಪರ್ಸೆಂಟಾದರೂ ನೀಡುವ ಯೋಗ್ಯತೆ ಬಿಜೆಪಿಯವರಿಗಿಲ್ಲ. ಸಿದ್ದರಾಮಯ್ಯನವರ ಕೆಲಸಗಳನ್ನು ನೆನೆಯುವ ಸುವರ್ಣಾವಕಾಶ ನಾಡಿನ ಜನತೆಗೆ ಬಂದಿದೆ. ಅದನ್ನು ಈ ಕಾರ್ಯಕ್ರಮದ ಮೂಲಕ ಮಾಡುತ್ತಿದ್ದೇವೆವಷ್ಟೇ” ಎಂದು ಹೇಳಿದರು.

“ದಾವಣಗೆರೆಗೆ ಬಂದಿರುವ ಜನಸ್ತೋಮವನ್ನು ನೋಡಿ ತಡೆದುಕೊಳ್ಳಲಾಗದ ಪರಿಸ್ಥಿತಿ ಬಿಜೆಪಿಯವರಿಗೆ ಉದ್ಭವವಾಗಿದೆ. ಮುಂದಿನ ದಿನಗಳಲ್ಲಿ ಐವತ್ತು ಸೀಟ್‌ ಕೂಡ ಬರಲ್ಲ ಎಂಬುದು ಬಿಜೆಪಿಗೆ ಖಚಿತವಾಗಿದ್ದು, ತಮ್ಮ ಕೈ, ಕಾಲು, ಕಣ್ಣು ಮೂಗನ್ನು ಇಸುಕಿಕೊಳ್ಳುತ್ತಿದ್ದಾರೆ. ದಾವಣಗೆರೆಗೆ ಬಂದು ನೋಡಿದರೆ ಹತ್ತಾರು ಕಿಮೀ ದೂರದವರೆಗೂ ಜನರಿದ್ದಾರೆ. ಲಕ್ಷಾಂತರ ಜನ ಮಳೆಯ ನಡುವೆಯೂ ಬರುತ್ತಿದ್ದಾರೆ. ಯಾವುದೇ ಜಾತಿ, ಜನಾಂಗವೆನ್ನದೆ ಆಗಮಿಸುತ್ತಿದ್ದಾರೆ. ಜನಸಾಮಾನ್ಯರ ಕಾರ್ಯಕ್ರಮವನ್ನು ಕಂಡು ಬಿಜೆಪಿಯವರಿಗೆ ಹೊಟ್ಟೆಉರಿ ಏಕೆಂದು ತಿಳಿಯುತ್ತಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಬಹಳ ತೃತೀಯ ದರ್ಜೆಯ ಪದಗಳನ್ನು ಬಳಸಿ ಮಾಡುವ ಪೋಸ್ಟ್‌ಗಳು ಒಂದು ರಾಷ್ಟ್ರೀಯ ಪಕ್ಷಕ್ಕೆ ಕ್ಷೋಭೆ ತರುವುದಿಲ್ಲ” ಎಂದು ಕುಟುಕಿದರು.

ಬರಹಗಾರ ನಾಗೇಗೌಡ ಕೀಲಾರ ಅವರು ಪ್ರತಿಕ್ರಿಯೆ ನೀಡಿ, “ಜನ್ಮದಿನವನ್ನು ಆಚರಿಸಿದರೆ ಅದು ಹೇಗೆ ಹಿಂದೂ ವಿರೋಧಿಯಾಗುತ್ತದೆ? ಬ್ರಾಹ್ಮಣರನ್ನು ಕರೆಸಿ ಯಜ್ಞ, ಯಾಗಾದಿಗಳನ್ನು ಮಾಡಿ ಆರ್ಶೀವಾದ ಪಡೆಯದೆ, ಚಾತುರ್‌ವರ್ಣ ಅನುಸರಿಸದೆ ಸಿದ್ದರಾಮಯ್ಯನವರು ಜನ್ಮದಿನ ಆಚರಿಸುತ್ತಿರುವುದಕ್ಕೆ ಹಿಂದೂ ವಿರೋಧಿಯಾಗಿರಬಹುದು” ಎಂದು ವ್ಯಂಗ್ಯವಾಡಿದರು.

“ಇದು ಬಿಜೆಪಿಯವರ ಹಳೆಯ ಚಾಳಿ. ಒಬಿಸಿ, ದಲಿತರಲ್ಲಿ ಯಾರಾದರೂ ಬೆಳೆದರೆ ಅವರನ್ನು ತುಳಿಯುವುದೇ ಬ್ರಾಹ್ಮಣ್ಯದ ಉದ್ದೇಶ. ಕಾನ್ಶಿರಾಮ್‌, ಮಾಯಾವತಿ, ಲಾಲು ಪ್ರಸಾದ್ ಯಾದವ್‌, ಸಿದ್ದರಾಮಯ್ಯ- ಹೀಗೆ ಯಾರೆಲ್ಲ ಹಿಂದುಳಿದ ಜಾತಿ, ದಲಿತ ಸಮುದಾಯದಿಂದ ನಾಯಕರಾಗಿ ಹೊಮ್ಮುತ್ತಾರೋ ಅವರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಲು ಸಂಘಪರಿವಾರ ಯತ್ನಿಸುತ್ತದೆ. ಈ ರಾಜಕಾರಣಿಗಳು ಭ್ರಷ್ಟರು, ಬುದ್ಧಿ ಇಲ್ಲದವರು ಎಂದು ವ್ಯಕ್ತಿತ್ವ ಹರಣ ಮಾಡಿ ಈ ಸಮುದಾಯಗಳ ನಾಯಕರು ಬೆಳೆಯದಂತೆ ತಡೆಯುತ್ತಾರೆ. ಚಲವಾದಿ ನಾರಾಯಣಸ್ವಾಮಿ ಥರದ ದಲಿತ ನಾಯಕರು, ಹಿಂದುಳಿದ ನಾಯಕರು ಇವರಿಗೆ ಬೇಕೇ ಹೊರತು ಸಿದ್ದರಾಮಯ್ಯನವರ ಥರದ ನಾಯಕರಲ್ಲ” ಎಂದು ವಿಶ್ಲೇಷಿಸಿದರು.

ಇದನ್ನೂ ಓದಿರಿ: ಇದು ಹಿಂದೂ ದೇವರಲ್ಲ, ಬೌದ್ಧ ವಿಗ್ರಹ: ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು

ಸಾಮಾಜಿಕ ಕಾರ್ಯಕರ್ತ ಹರ್ಷಕುಮಾರ್‌ ಕುಗ್ವೆ ಪ್ರತಿಕ್ರಿಯೆ ನೀಡಿ, “ಸಿದ್ದರಾಮಯ್ಯನವರನ್ನು ಕಂಡು ಬಿಜೆಪಿಯವರು ಎಷ್ಟು ಹೆದರಿದ್ದಾರೆ ಎಂಬುದನ್ನು ಈ ಅಪಪ್ರಚಾರ ಸೂಚಿಸುತ್ತದೆ. ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯನವರಿಗೆ ಜನ ಗೌರವಿಸುವುದು, ಅಭಿಮಾನದಿಂದ ನೋಡುವುದು, ಅವರ ಹುಟ್ಟು ಹಬ್ಬವನ್ನು ಸಂಭ್ರಮಿಸುವುದು ಇವರ ಎದೆ ನಡುಗುವುದಕ್ಕೆ ಕಾರಣವಾಗಿದೆ” ಎಂದು ಅಭಿಪ್ರಾಯಪಟ್ಟರು.

“ಆರ್‌ಎಸ್‌ಎಸ್ ಬುಡಕ್ಕೆ ಸಿದ್ದರಾಮಯ್ಯ ಕೈ ಹಾಕಿದ್ದಾರೆ. ಅನೇಕ ವಿಚಾರಗಳನ್ನು ಮುಂದಿಡುತ್ತಿದ್ದಾರೆ. ಆರ್‌ಎಸ್‌ಎಸ್‌ನ ಜನಾಂಗೀಯತೆ, ಹಿಂದೂ ಹೆಸರಲ್ಲಿ ಜಾರಿಯಾಗುತ್ತಿರುವ ನವ ಆರ್ಯ ಸಿದ್ಧಾಂತ- ಮೊದಲಾದವುಗಳ ಕುರಿತು ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ. ಹೀಗಾಗಿ ಆರ್‌ಎಸ್‌ಎಸ್ ವಿಚಲಿತವಾಗಿದೆ. ಭಯಭೀತರಾಗಿ ಈ ರೀತಿಯ ಪ್ರೊಪಗಾಂಡ ಮಾಡುತ್ತಿದೆ” ಎಂದು ಎಚ್ಚರಿಸಿದರು.

“ಸಿದ್ದರಾಮಯ್ಯನವರು ತಮ್ಮ ಗ್ರಾಮದಲ್ಲಿ ಸಿದ್ದರಾಮೇಶ್ವರ ದೇವಾಲಯ ಕಟ್ಟಿಸಿದ್ದಾರೆ. ಇದು ಹಿಂದೂ ದೇವರಲ್ಲವೇ? ಮೊನ್ನೆಯಷ್ಟೇ ಮಲೆಮಹದೇಶ್ವರ ದೇವಾಸ್ಥಾನಕ್ಕೆ ಹೋಗಿ ಬಂದಿದ್ದಾರೆ. ಇನ್ನು ಏನು ಬೇಕು? ಆರ್‌ಎಸ್‌ಎಸ್‌ ಹೇಳುವ ಹಿಂದುತ್ವಕ್ಕೆ ಹೊರತಾಗಿ ಸಾಮಾನ್ಯ ಹಿಂದುಗಳ ಜೊತೆ ಸಿದ್ದರಾಮಯ್ಯ ಗುರುತಿಸಿಕೊಂಡಿದ್ದಾರೆ. ಹಿಂದೂಗಳಿಂದ ಸಿದ್ದರಾಮಯ್ಯನವರನ್ನು ಬೇರೆ ಮಾಡುವ ಹತಾಶ ಪ್ರಯತ್ನವನ್ನು ಆರ್‌ಎಸ್‌ಎಸ್ ಮಾಡುತ್ತಿದೆ” ಎಂದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೇವಾಲಯ ಪ್ರವೇಶಿಸಿದ ದಲಿತ ಯುವಕನಿಗೆ ಡಿಎಂಕೆ ಮುಖಂಡನಿಂದ ಬೆದರಿಕೆ; ವಿಡಿಯೊ ವೈರಲ್‌

0
ಹಿಂದೂ ಮತ್ತು ಧಾರ್ಮಿಕ ದತ್ತಿ ಇಲಾಖೆ (ಎಚ್‌ಆರ್ ಮತ್ತು ಸಿಇ) ನಿರ್ವಹಿಸುತ್ತಿರುವ ದೇವಸ್ಥಾನಕ್ಕೆ ಪ್ರವೇಶಿಸಿದ್ದಕ್ಕಾಗಿ ದಲಿತ ಯುವಕನನ್ನು ಡಿಎಂಕೆ ಒಕ್ಕೂಟದ ಕಾರ್ಯದರ್ಶಿಯೊಬ್ಬರು ನಿಂದಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರ ಪ್ರಕಾರ, ತಮಿಳುನಾಡಿನ ತಿರುಮಲೈಗಿರಿ (ಸೇಲಂ ಜಿಲ್ಲೆ)ಯಲ್ಲಿರುವ...