Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಸಾಗರ: ಸಮಾಜವಾದಿ ನೆಲದಲ್ಲಿ ಸಂಚುಕೋರ ರಾಜಕಾರಣ ಮುನ್ನಲೆಗೆ?

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಸಾಗರ: ಸಮಾಜವಾದಿ ನೆಲದಲ್ಲಿ ಸಂಚುಕೋರ ರಾಜಕಾರಣ ಮುನ್ನಲೆಗೆ?

- Advertisement -
- Advertisement -

ವರದಾ ನದಿಯ ದಡದಲ್ಲಿರುವ ಪ್ರಕೃತಿ ಸೊಬಗಿನ ಸಾಗರ ಹಚ್ಚಹಸುರಿನ ದಟ್ಟ ಮಲೆನಾಡಿನ ಹೃದಯ! ಗುಡ್ಡ-ಬೆಟ್ಟ-ನದಿ-ತೊರೆ-ಜಲಪಾತಗಳ ವೈವಿಧ್ಯಮಯ ಜೀವವಿಕಾಸದ ತೊಟ್ಟಿಲಿನಂತಿರುವ ಈ ಸಹ್ಯಾದ್ರಿ ಕಣಿವೆಯ ಬಹುಭಾಗ ನಾಡಿಗೆ ಬೆಳಕು ಕೊಡುವ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಿಂದ ಆವೃತವಾಗಿದೆ. ಪಶ್ಚಿಮಘಟ್ಟಗಳ ಹೆಬ್ಬಾಗಿಲಾಗಿರುವ ಸಾಗರ ಗೇಣಿ ರೈತರ ಚಾರಿತ್ರಿಕ ಕೆಚ್ಚೆದೆಯ ಹೋರಾಟದ ಸೀಮೆ! ಭೂಮಾಲೀಕರಿಂದ ಶ್ರಮ ಸಂಸ್ಕೃತಿಯ ಅಸಹಾಯಕ ರೈತಾಪಿ ವರ್ಗಕ್ಕಾಗುತ್ತಿದ್ದ ಅನ್ಯಾಯ, ಶೋಷಣೆ ವಿರುದ್ಧ ಎಚ್.ಗಣಪತಿಯಪ್ಪ ಶುರು ಮಾಡಿದ್ದ ಹೋರಾಟಕ್ಕೆ ಪ್ರಖರ ಸಮಾಜವಾದಿ ಬದ್ಧತೆಯ ಶಾಂತವೇರಿ ಗೋಪಾಲಗೌಡರು ಸಮರ್ಥ ನಾಯಕತ್ವ ಕೊಟ್ಟು ಮುನ್ನಡೆಸಿದ್ದರು. ಸಾಗರದ ’ಕಾಗೋಡು’ ಎಂಬ ಹಳ್ಳಿಯಲ್ಲಿ ಹೊತ್ತಿಕೊಂಡಿದ್ದ ಈ ರೈತ ಹೋರಾಟದ ಕಿಡಿ ಸುತ್ತಮುತ್ತ ಕಾಡ್ಗಿಚ್ಚಿನಂತೆ ವ್ಯಾಪಿಸಿತ್ತು.

ಗೇಣಿದಾರರು ತಾವು ಉತ್ತಿಬಿತ್ತಿ ಬೆಳೆ ತೆಗೆಯುತ್ತಿರುವ ಭೂಮಿ ಕೋರಿ 1951ರಲ್ಲಿ ನಡೆಸಿದ ಹೋರಾಟ ಇಡೀ ಭಾರತದ ಮೊಟ್ಟಮೊದಲ ರೈತ ಚಳವಳಿಯೆಂದು ದಾಖಲಾಗಿದೆ. ’ಕಾಗೋಡು ಸತ್ಯಾಗ್ರಹ’ ಎಂದು ಹೆಸರಾಗಿರುವ ಈ ಯಶಸ್ವಿ ಚಳವಳಿ ಮುಂದೆ ’ಉಳುವವನೆ ಹೊಲದೊಡೆಯ’ ಕಾನೂನು ಪರಿಣಾಮಕಾರಿಯಾಗಿ ಜಾರಿಗೆ ಬರಲು ಹೇತುವಾಗಿದ್ದು ಇತಿಹಾಸ! ಸಮಸಮಾಜ ನಿರ್ಮಾಣ ಸಿದ್ಧಾಂತದ ರಾಮಮನೋಹರ ಲೋಹಿಯಾರಂಥವರು ರೈತರೊಡಗೂಡಿ ಚಳವಳಿಗೆ ಸ್ಫೂರ್ತಿಯಾಗಿದ್ದ ಸಮಾಜವಾದಿ ನೆಲ ಸಾಗರದಲ್ಲೀಗ ಹಿಂದುತ್ವದ ಹಿಡನ್ ಅಜೆಂಡಾ ತಾಂಡವವಾಡುತ್ತಿದೆ; ಧರ್ಮಕಾರಣ ಅದೃಶ್ಯ ವರಸೆಗಳು ಪ್ರಯೋಗವಾಗುತ್ತಿರುವುದು ಆತಂಕ ಮೂಡಿಸುವಂತಿದೆ ಎಂದು ಪ್ರಜ್ಞಾವಂತರು ಕಳವಳಿಸುತ್ತಾರೆ. ಮಡಿಮೈಲಿಗೆ, ಬ್ರಾಹ್ಮಣಿಕೆ ತಾರತಮ್ಯ ನಾಜೂಕಾಗಿ ನಡೆಯುತ್ತಿರುವ ಸಾಗರದಲ್ಲಿ 2000ದಲ್ಲಿ ನಡೆದ ಕೋಮು ಗಲಭೆ ಬಿಟ್ಟರೆ ಶಾಂತಿ-ಸೌಹಾರ್ದತೆಗೆ ಭಂಗ ಬಂದಿದ್ದಿಲ್ಲ. ಆದರೆ ವಿಭಜಕ ರಾಜಕಾರಣ ಮತ್ತು ಪುರೋಹಿತಶಾಹಿ ಹುನ್ನಾರಗಳು ನಾಜೂಕಾಗಿ ಸಾಗಿದೆಯೆಂಬ ಮಾತುಗಳು ಸಾಗರದಲ್ಲಿ ಕೇಳಿಬರುತ್ತಿದೆ.

ಇತಿಹಾಸ-ಸಂಸ್ಕೃತಿ

ಸಾಗರದ ನಿರ್ಮಾಣ ಅಥವಾ ಸ್ಥಳನಾಮ ಇತಿಹಾಸದ ಜಾಡು ಹಿಡಿದು ಹೊರಟರೆ ಸುಮಾರು ನಾಲ್ಕು ನೂರು ವರ್ಷಗಳ ಹಿಂದಿನ ಕೆಳದಿ ಸಂಸ್ಥಾನಕ್ಕೆ ಹೋಗಿನಿಲ್ಲುತ್ತೇವೆ. ಕ್ರಿ.ಶ.1583ರಿಂದ 1630ರವರೆಗೆ ಕೆಳದಿ ಸಾಮ್ರಾಜ್ಯ ಆಳಿದ ವೆಂಕಟಪ್ಪ ನಾಯಕ, ಕೆಳದಿ ಮತ್ತು ಇಕ್ಕೇರಿ ನಡುವೆ ಸಾಗರ ಪಟ್ಟಣ ನಿರ್ಮಾಣ ಮಾಡಿದ್ದು ತಿಳಿದುಬರುತ್ತದೆ. ಉಪ್ಪರಿಗೆ ಅರಮನೆ, ದೇವಸ್ಥಾನಗಳು, ಕೆರೆಗಳನ್ನು ಕಟ್ಟಿಸಿದ ವೆಂಕಟಪ್ಪ ನಾಯಕ ಮೂರು ತಿಂಗಳಲ್ಲಿ ಸಾಗರ ಸ್ಥಾಪಿಸಿದನೆನ್ನಲಾಗುತ್ತಿದೆ. ಗಣಪತಿ ದೇವಸ್ಥಾನದ ಬಲ ಭಾಗದಲ್ಲಿ ವಿಶಾಲವಾದ ಕೆರೆ ಕಟ್ಟಿಸಿದ್ದ ವೆಂಕಟಪ್ಪ ನಾಯಕ ಅದಕ್ಕೆ ತನ್ನ ತಂದೆ ಸದಾಶಿವನ ಹೆಸರು ಇಟ್ಟಿದ್ದ. ಅದು ನೋಡಲು ಸಮುದ್ರದಂತೆ ವಿಶಾಲವಾಗಿ ಕಾಣಿಸುತ್ತಿದ್ದರಿಂದ ’ಸದಾಶಿವ ಸಾಗರ’ ಎಂದು ಕರೆಯಲ್ಪಡುತ್ತಿತ್ತು. ಕಾಲಕ್ರಮೇಣ ಸದಾಶಿವ ಜನರ ರೂಢಿಯಲ್ಲಿ ತಪ್ಪಿಹೋಗಿ ಕೇವಲ ’ಸಾಗರ’ ಮಾತ್ರ ಉಳಿಯಿತೆಂದು ಇತಿಹಾಸತಜ್ಞರು ಅಭಿಪ್ರಾಯಪಡುತ್ತಾರೆ.

ಶಾಂತವೇರಿ ಗೋಪಾಲಗೌಡ

ಸಾಗರದಲ್ಲಿ ದೀವರು (ಈಡಿಗರು) ಮತ್ತು ಹವ್ಯಕ (ಬ್ರಾಹ್ಮಣರು) ಸಮುದಾಯ ಪ್ರಬಲವಾಗಿದೆ. ಈ ಎರಡು ಜಾತಿ ನಡುವಿನ ಪ್ರಚ್ಛನ್ನ ಮೇಲಾಟ ಲಾಗಾಯ್ತಿನದು. ತಲತಲಾಂತರದಿಂದ ಶೋಷಣೆಗೆ ಒಳಗಾಗುತ್ತ ಬಂದಿದ್ದ ದೀವರ ಸಮುದಾಯಕ್ಕೆ ರಾಜಕೀಯ-ಸಾಮಾಜಿಕ-ಆರ್ಥಿಕ ’ಧ್ವನಿ’ ಬಂದಿದ್ದೇ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಮತ್ತು ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ರಾಜಕೀಯವಾಗಿ ಪ್ರಭಾವಿಗಳಾದ ನಂತರವೇ ಎಂಬ ಅಭಿಪ್ರಾಯ ಸಾಮಾನ್ಯವಾಗಿದೆ. ಹೊಸನಗರದಲ್ಲಿರುವ ಹವ್ಯಕ ಬ್ರಾಹ್ಮಣರ ರಾಮಚಂದ್ರಾಪುರ ಮಠ ಸಾಗರ ವಿಧಾನಸಭಾ ಕ್ಷೇತ್ರದ ರಾಜಕಾರಣವನ್ನು ಪ್ರಭಾವಿಸುತ್ತಿದ್ದು, ಚುನಾವಣಾ ಸಂದರ್ಭದಲ್ಲಿ ಮಠದ ’ಫತ್ವಾ’ ಹೈಗರು ಪಾಲಿಸಬೇಕಾದ ಪದ್ಧತಿಯಿದೆಯನ್ನಲಾಗಿದೆ. ಆದರೆ ರಾಮ ಕಥಾ ಗಾಯಕಿ ಅತ್ಯಾಚಾರ ಆರೋಪ ಎದುರಿಸುತ್ತಿರುವ ಹವ್ಯಕ ಗುರು ರಾಘವೇಶ್ವರ ಭಾರತಿ ಮೊದಲಿನ ವರ್ಚಸ್ಸು ಕಳೆದುಕೊಂಡಿದ್ದಾರೆಂಬ ಮಾತು ಕೂಡ ಕೇಳಿಬರುತ್ತಿದೆ. ಮಠದೊಳಗಿನ ಅನಾಚಾರ-ಅವ್ಯವಹಾರದ ಕೇಸುಗಳು ಕೋರ್ಟು-ಕಚೇರಿಗಳಲ್ಲಿ ಇರುವುದರಿಂದ ಹೈಗರ ಸಮುದಾಯ ಎರಡಾಗಿ ಹೋಳಾಗಿದೆ ಎಂದು ಹೆಸರು ಹೇಳಲಿಚ್ಛಸದ ಸಾತ್ವಿಕ ಹವ್ಯಕ ಹಿರಿಯರೊಬ್ಬರು ’ನ್ಯಾಯಪಥ’ಕ್ಕೆ ತಿಳಿಸಿದರು.

ಮಲೆನಾಡು ಸಂಸ್ಕೃತಿಯ ಸಾಗರದ ಪ್ರಮುಖ ಭಾಷೆ ಕನ್ನಡವಾದರೂ ಕೊಂಕಣಿ, ಮರಾಠಿ, ಉರ್ದು, ಹವ್ಯಕ ಕನ್ನಡದಂಥ ಉಪಭಾಷೆಗಳು ಕೇಳಿಬರುತ್ತವೆ. ಯಕ್ಷಗಾನದ ಅಬ್ಬರದ ಚಂಡೆಮದ್ದಲೆಯ ಪ್ರಭಾವದ ಸಾಗರದ ದೀವರು ಮತ್ತು ಹೈಗರಲ್ಲಿ ವಿಶಿಷ್ಟ ಜಾನಪದ ಸಂಪ್ರದಾಯವಿದೆ. ಮದುವೆ ಹಾಡು, ಬೀಸೊ ಹಾಡು, ಕಟ್ಟೋ ಹಾಡು, ಜೋಗುಳದ ಹಾಡು, ಗೌರಿ ಹಬ್ಬದ ಹಾಡುಗಳೇ ಮುಂತಾದ ಜಾನಪದ ಗೀತಸಾಹಿತ್ಯ ದೀವರಲ್ಲಿದೆ. ಹವ್ಯಕರಲ್ಲೂ ಅವರದೇ ಆದ ಜಾನಪದ ಹಾಡುಗಳಿವೆ. ಸಾಗರ ಸೀಮೆಯಲ್ಲಿ ದೀಪಾವಳಿ ಹಬ್ಬದ ರಾತ್ರಿ ಒಂದು ದೀಪ ಹಚ್ಚಿಕೊಂಡು ಹಾಡು ಹೇಳುತ್ತ ಮನೆಮನೆಗೆ ಗ್ರಾಮಸ್ಥರು ಬರುವ ಸಂಪ್ರದಾಯವಿದ್ದು, ಇದಕ್ಕೆ ಹಬ್ಬಾಡೋದು ಅಥವಾ ಅಂಟಿಗೆಪಿಂಟಿಗೆ ಎಂದು ಹೇಳಲಾಗುತ್ತದೆ. ಸಾಗರ ಸೀಮೆಯ ಡೊಳ್ಳು ಕುಣಿತದ ಗತ್ತು-ಗಮ್ಮತ್ತೇ ವಿಶಿಷ್ಟ. ಕೋಲಾಟ, ಮಲೆನಾಡು ಸಣ್ಣಾಟ, ಮೂಡಲಪಾಯ ಬಯಲಾಟ ಮತ್ತು ಗಮಕ ಕಲೆ ಸಾಗರ ಭಾಗದ ಪ್ರಮುಖ ಜಾನಪದ ಕಲಾ ಪ್ರಕಾರಗಳು. ದೀವರ ವಿಶಿಷ್ಟ ’ಹಸೆ ಚಿತ್ತಾರ’ಗಳು ಬೆರಗುಗೊಳಿಸುತ್ತವೆ.

ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಕೆ.ವಿ.ಸುಬ್ಬಣ್ಣ ಕಟ್ಟಿದ ನೀನಾಸಂ ಮತ್ತು ಅಸಹಾಯಕ ಮಹಿಳೆಯರು ಉದ್ಯೋಗಾವಕಾಶ ಕಂಡುಕೊಳ್ಳುಲು ನೆರವಾಗುವ ಬಿ.ಪ್ರಸನ್ನ ನೇತೃತ್ವದ ಚರಕ ಸಂಸ್ಥೆ ಸಾಗರದ ಹೆಗ್ಗೋಡಿನಲ್ಲಿದೆ. ದಕ್ಷಿಣ ಭಾರತದ ನಾಟಕ ಸಂಸ್ಕೃತಿ ಬಲಪಡಿಸುವ ನಿಟ್ಟಿನಲ್ಲಿ ನಿರಂತರ ಸಂಚಾರಿ ರಂಗಪ್ರದರ್ಶನ ಪ್ರಯೋಗ ನಡೆಸಿದ ಸುಬ್ಬಣ್ಣ ನಾಟಕರಂಗಕ್ಕೆ ಅಚ್ಚಳಿಯದ ಕೊಡುಗೆ ಕೊಟ್ಟಿದ್ದಾರೆ. ಹೊಸ ನೇಕಾರರನ್ನು ಸೃಷ್ಟಿಸುವ ಸಮಾಜಮುಖಿ ಕೆಲಸದ ಚರಕ ಸಂಸ್ಥೆ ಕೈಮಗ್ಗದ ಬಟ್ಟೆಗಳ ಮೇಲೆ ಮಲೆನಾಡಿನ ಪಾರಂಪರಿಕ ಹಸೆಚಿತ್ರ ಹಾಕುವುದು ಮತ್ತು ಬ್ಲಾಕ್ ಪ್ರಿಂಟಿಂಗ್‌ನಂಥ ಅಪರೂಪದ ಪ್ರಯತ್ನದಲ್ಲಿ ಯಶಸ್ವಿಯಾಗಿದೆ. ಸಾಗರ ಸಮಾಜವಾದಿಗಳ, ಸಾಹಿತಿಗಳ, ಕಲಾವಿದರ, ಕರಕುಶಲ ಕರ್ಮಿಗಳ ತವರು! ಸಮಾಜವಾದಿ ಚಿಂತಕ ಶಾಂತವೇರಿ ಗೋಪಾಲಗೌಡ, ನಾಟಕಕಾರ ಕೆ.ವಿ.ಸುಬ್ಬಣ್ಣ, ಸಾಹಿತಿ ನಾ.ಡಿಸೋಜಾ, ಕಾದಂಬರಿಕಾರ್ತಿ ಎಂ ಕೆ ಇಂದಿರಾ, ಗಾಯಕಿ ಅರ್ಚನಾ ಉಡುಪ, ಸಿನಿ ನಟ ದಿಗಂತ ಸಾಗರದ ಪ್ರತಿಭೆಗಳು.

ಆರ್ಥಿಕತೆ ಮತ್ತು ಬದುಕಿನ ಆಧಾರಗಳು

ಸಾಗರದ ಜನಜೀವನ ಕೃಷಿ ಆಧಾರಿತ ಅಸ್ಥಿರ ಆರ್ಥಿಕತೆಗೆ ಸಿಲುಕಿದೆ. ವರದೆ, ಶರಾವತಿ ತಾಲೂಕಿನ ಜೀವನದಿಗಳು. ಭತ್ತ ಮತ್ತು ಅಡಿಕೆ ಜನರ ತುತ್ತಿಗಾಧಾರ. ಬಾಳೆ, ಕಬ್ಬು, ಕೋಕೋ, ರಬ್ಬರ್, ಸಾಂಬಾರ ಪದಾರ್ಥಗಳಾದ
ಕಾಳು ಮೆಣಸು, ಲವಂಗ, ದಾಲ್ಚಿನಿ, ಜಾಯಿಕಾಯಿ, ವೀಳ್ಯದೆಲೆ ಬೆಳೆದು ಜನರು ಬದುಕು ಕಟ್ಟಿಕೊಂಡಿದ್ದಾರೆ. ಅರಣ್ಯ ಉತ್ಪನ್ನಗಳ ವ್ಯಾಪಾರ-ವಹಿವಾಟು ಸಾಗರದ ಆರ್ಥಿಕತೆಯನ್ನು ಸ್ವಲ್ಪ ಮಟ್ಟಿಗೆ ನಿಭಾಯಿಸುತ್ತಿದೆ. ವಾಣಿಜ್ಯ ಬೆಳೆಯಾದ ಅಡಿಕೆ ಸಣ್ಣ ಮತ್ತು ಅತಿಸಣ್ಣ ತೋಟಿಗರು ಹೆಚ್ಚಿರುವ ಸಾಗರದ ಆರ್ಥಿಕ ವ್ಯವಸ್ಥೆಯ ಜೀವನಾಡಿ. ಸಾಗರ ರಾಜ್ಯದ ಪ್ರಮುಖ ಅಡಿಕೆ-ವೀಳ್ಯದೆಲೆ ಮಾರುಕಟ್ಟೆ. ಹೇಗೆ ಅಡಿಕೆ ಧಾರಣೆ ಏರಿಳಿಯುತ್ತಿರುತ್ತದೋ ಹಾಗೆ ಇಡೀ ಸಾಗರದ ಅರ್ಥ ವ್ಯವಸ್ಥೆಯೂ ಅಸ್ಥಿರ! ಈಚೆಗೆ ಅಡಿಕೆ ಬೆಲೆ ತೇಜಿ ಆಗಿರುವುದರಿಂದ ತೋಟಿಗರ ಮುಖದಲ್ಲಿ ಮಂದಹಾಸ ಮೂಡಿದೆ; ಉಳ್ಳವರ ತೋಟದಲ್ಲಿ ಕೂಲಿ ಮಾಡುವ ಕೃಷಿ ಕಾರ್ಮಿಕರಿಗೂ ಇದು ಕೊಂಚ ಖುಷಿಯ ವಿಚಾರ ಎಂದು ಸಾಗರದ ಎಪಿಎಂಸಿ ಪ್ರಾಂಗಣದಲ್ಲಿ ಎದುರಾದ ತೋಟಿಗರೊಬ್ಬರು ಈ ವರದಿಗಾರನಿಗೆ ಹೇಳಿದರು.

ಬಂಗಾರಪ್ಪ

ಸಾಗರ ಕರಕುಶಲತೆಯ ಗುಡಿಗಾರ ಜನಾಂಗದ ನೆಲೆ. ಶ್ರೀಗಂಧದ ಕೆತ್ತನೆಗೆ ಸಾಗರ ರಾಜ್ಯದಲ್ಲಿ ಹೆಸರುವಾಸಿ. ತಲೆಮಾರುಗಳಿಂದ ಶ್ರೀಗಂಧ ಮತ್ತು ದಂತದ ಕೆತ್ತನೆಯಲ್ಲಿ ತೊಡಗಿಕೊಂಡಿರುವ ಅನೇಕ ಕುಟುಂಬಗಳಿವೆ. ಗುಡಿಗಾರ ಪುರುಷರು ಪ್ರತಿಮೆ, ವಿಗ್ರಹ, ಪೆನ್‌ಹೋಲ್ಡರ್‌ಗಳು, ಅಗರ್ ಬತ್ತಿ ಸ್ಟ್ಯಾಂಡ್‌ಗಳು, ಫೋಟೊ ಫ್ರೇಮ್ ಮುಂತಾದವುಗಳನ್ನು ತಯಾರಿಸುತ್ತಾರೆ; ಮಹಿಳೆಯರು ಶ್ರೀಗಂಧದ ಕಟ್ಟಿಗೆಯ ತೆಳುವಾದ ಪದರುಗಳಿಂದ ಮಾಲೆ ತಯಾರಿಕೆಯಲ್ಲಿ ನಿಪುಣರು.

ದಟ್ಟಕಾಡಿನ ಮರಗಳ ಮಧ್ಯದಲ್ಲಿ ತೇಲುವ ಮೋಡಗಳು, ಬಿಟ್ಟೂಬಿಡದೆ ಹೊಯ್ಯುವ ವಿಪರೀತ ಮಳೆಯ ಸಾಗರ ತಾಲೂಕು ಸಮ್ಮೋಹಕ ಚೆಲುವಿನ ಪ್ರವಾಸಿತಾಣ! ಸಾಗರ ತಾಲೂಕಿನಲ್ಲಿ ಹೆಜ್ಜೆಗೊಂದರಂತೆ ನಿಸರ್ಗ ರಮಣೀಯತೆಯ, ಐತಿಹಾಸಿಕ ಮಹತ್ವದ, ಅಪರೂಪದ ಶಿಲಾ ಕೆತ್ತನೆಯ ಸ್ಥಳಗಳು ಮತ್ತು ದೇವಾಲಯ, ಬಸದಿಗಳು ಕಾಣಿಸುತ್ತದೆ. ಭಾರತದಲ್ಲಿ ಅತಿ ಎತ್ತರದಿಂದ ಧುಮುಕುವ ಜಲಪಾತಗಳಲ್ಲಿ ನಂಬರ್ ಒನ್ ಆಗಿರುವ ಜಗತ್‌ಪ್ರಸಿದ್ಧ ಜೋಗ ಜಲಪಾತವಿರುವುದು ಸಾಗರ ತಾಲೂಕಿನಲ್ಲಿಯೇ!

ಕುಸುರಿ ಕೆತ್ತನೆಯ ರಾಮೇಶ್ವರ ದೇವಸ್ಥಾನ ಮತ್ತು ಐತಿಹಾಸಿಕ ವಸ್ತು ಸಂಗ್ರಹಾಲಯ ಇರುವ ಕೆಳದಿ, ಹೊಯ್ಸಳ ಶೈಲಿಯ ಶಿಲಾ ಕೆತ್ತನೆ ಮತ್ತು 32 ಕೈಗಳ ಅಘೋರೇಶ್ವರ ದೇವಾಲಯದ ಇಕ್ಕೇರಿ, ಸಾಹಸ ಕ್ರೀಡೆಗೆ ಪ್ರಶಸ್ತವಾದ ಶರಾವತಿ ಹಿನ್ನೀರಿನ ಚೆಂದದ ತಾಣ ಹೊನ್ನೆಮರಡು, ಜನಜೀವನ-ಇತಿಹಾಸದೊಂದಿಗೆ ಬೆಸೆದುಕೊಂಡಿರುವ ಸಾಗರದ ಮಾರಿಕಾಂಬ (ಕೆಳದಿ ಸಂಸ್ಥಾನದ ಕುಲದೇವತೆ) ದೇವಸ್ಥಾನ, ದ್ರಾವಿಡ ಹಾಗು ಹೊಯ್ಸಳ ವಾಸ್ತುಶಿಲ್ಪ ಮಿಶ್ರಣದ ಎರಡು ದೇಗುಲಗಳಿರುವ ನಾಡಕಲಸಿ, ಕಳ್ಳತನ-ದರೋಡೆಯಿಂದ ರಕ್ಷಿಸುತ್ತದೆಂಬ ನಂಬಿಕೆಯ ಚೌಡೇಶ್ವರಿ ದೇಗುಲದ ಸಿಗಂಧೂರು, ಶ್ರೀಧರ ಸ್ವಾಮಿ ಸಮಾಧಿ-ಆಶ್ರಮವಿರುವ ವರದಹಳ್ಳಿ (ವದ್ದಳ್ಳಿ), ಸಂತರಸರ ಕಾಲದ ಉಮಾಮಹೇಶ್ವರ ದೇಗುಲದ ಹೊಸಗುಂದ, ವರದಾ ನದಿ ಉಗಮ ಸ್ಥಳ, ಸಾಮಾಜಿಕ ಸಾಮರಸ್ಯದ ಸಂಕೇತದಂತೆ ಅಕ್ಕಪಕ್ಕ ನಿಂತಿರುವ ಸಾಗರದ ಗಣಪತಿ ದೇಗುಲ ಹಾಗು ಮಸೀದಿ, ಸೇಂಟ್ ಜೋಸೆಫ್ ಚರ್ಚ್, ಪದ್ಮಾವತಿ-ಪಾರ್ಶ್ವನಾಥ ಬಸದಿಯಿರುವ ವಡ್ಡನಬೈಲ್, ನಾಡಿಗೆ ಬೆಳಕು ಕೊಡುವ 128.7ಕಿ.ಮೀ. ವ್ಯಾಪ್ತಿಯ ವಿಶಾಲವಾದ ಲಿಂಗನಮಕ್ಕಿ ಜಲಾಶಯ, ದಬ್ಬೆ ಜಲಪಾತ ಸಾಗರ ತಾಲೂಕಿನ ಪ್ರಮುಖ ಪ್ರವಾಸಿ ಆಕರ್ಷಣೆಗಳು.

ಚುನಾವಣಾ ಚರಿತ್ರೆಗಳು!

ಶುದ್ಧ ಸಮಾಜವಾದಿಗಳ ಅಥವಾ ಅರೆ ಸಮಾಜವಾದಿ ಕಾಂಗ್ರೆಸಿಗರ ಗಟ್ಟಿ ನೆಲೆಯಾಗಿದ್ದ ಸಾಗರ ಈಗ ಕಟ್ಟರ್ ಸಂಘಪರಿವಾರದ ಆಡುಂಬೊಲವಾಗಿದೆ; ಹೈಗರು ಮತ್ತು ದೀವರು ಜಾತಿಯ ಜಿದ್ದಾಜಿದ್ದಿನ ಸಾಗರದ ರಣಕಣದಲ್ಲಿ ಆರ್‌ಎಸ್‌ಎಸ್ ಮತ್ತು ಹವ್ಯಕರ ರಾಮಚಂದ್ರಾಪುರ ಮಠ ದಾಳಗಳನ್ನು ಉರುಳಿಸುವುದು ಬಹಿರಂಗ ರಹಸ್ಯವೆಂದು ಹಿರಿಯ ಪತ್ರಕರ್ತರೊಬ್ಬರು ’ನ್ಯಾಯಪಥ’ದೊಂದಿಗೆ ಮಾತಾಡುತ್ತ ಅಭಿಪ್ರಾಯಪಟ್ಟರು. 2007ರಲ್ಲಿ ಮಾಡಲಾದ ವಿಧಾನಸಭಾ ಕ್ಷೇತ್ರಗಳ ಭೌಗೋಳಿಕ ಪರಿಮಿತಿ ಪುನರ್ ರಚನೆ ಪ್ರಕ್ರಿಯೆಯಲ್ಲಿ ಸಾಗರದ ಗಡಿ ಬದಲಾಗಿದೆ. ಹೊಸನಗರ ಕ್ಷೇತ್ರ ರದ್ದಾಗಿದ್ದು, ಅದರಲ್ಲಿದ್ದ ಎರಡು ಹೋಬಳಿ ಸಾಗರಕ್ಕೆ, ಇನ್ನೆರಡನ್ನು ತೀರ್ಥಹಳ್ಳಿಗೆ ಸೇರಿಸಲಾಗಿದೆ.

ಸಾಗರದ ಒಟ್ಟು ಮತದಾರರ ಸಂಖ್ಯೆ 1.97 ಲಕ್ಷದ ಆಸುಪಾಸಿನಲ್ಲಿದೆ. ಇದರಲ್ಲಿ ಈಡಿಗರು (ದೀವರು+ಬಿಲ್ಲವರು) 62 ಸಾವಿರ, ಹವ್ಯಕರು ಮತ್ತು ವಿವಿಧ ಬ್ರಾಹ್ಮಣ ಪಂಗಡಗಳು ಸೇರಿ 36 ಸಾವಿರ, ಮುಸ್ಲಿಮರು 20 ಸಾವಿರ, ಲಿಂಗಾಯತರು 18 ಸಾವಿರ, ಜೈನರು 14 ಸಾವಿರ, ಮಡಿವಾಳರು ಮತ್ತು ಮರಾಠರು ತಲಾ 7 ಸಾವಿರ, ಕ್ರಿಶ್ಚಿಯನ್ನರು 5 ಸಾವಿರ, ಕುರುಬರು 3 ಸಾವಿರ ಮತ್ತು ಸಣ್ಣ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತದಾರರಿದ್ದಾರೆಂದು ಅಂದಾಜಿಸಲಾಗಿದೆ. ಸಮಾಜವಾದಿ ಶಾಂತವೇರಿ ಗೋಪಾಲಗೌಡರು ಸಾಗರದ ಮೊದಲ ಶಾಸಕರು. 1952ರ ಚುನಾವಣೆಯಲ್ಲಿ ಗೌಡರು ಕಾಂಗ್ರೆಸ್‌ನ ಬದರಿ ನಾರಾಯಣರನ್ನು ಸೋಲಿಸಿ ಶಾಸನಸಭೆಗೆ ಹೋಗಿದ್ದರು. 1957ರಲ್ಲಿ ಶಾಸಕ ಗೋಪಾಲಗೌಡರನ್ನು ಕಾಂಗ್ರೆಸ್‌ನ ಡಿ.ಮೂಕಪ್ಪ ಸೋಲಿಸಿದರು.

ಕಾಗೋಡು ತಿಮ್ಮಪ್ಪ

ಕಾಗೋಡು ರೈತ ಹೋರಾಟದ ಮುಂಚೂಣಿಯಲ್ಲಿದ್ದ-ಕಾನೂನು ವಿದ್ಯಾಭ್ಯಾಸ ಮುಗಿಸಿದ್ದ ಹಿಂದುಳಿದ ದೀವರ ಸಮುದಾಯದ ಗೇಣಿದಾರನ ಮಗ ಕಾಗೋಡು ತಿಮ್ಮಪ್ಪ 1962ರ ಚನಾವಣೆಯಲ್ಲಿ ಕಾಂಗ್ರೆಸ್‌ನ ವಿ.ಎಸ್.ಲಕ್ಷ್ಮೀಕಾಂತಪ್ಪರಿಗೆ ಮುಖಾಮುಖಿಯಾಗಿದ್ದರು. ಸಂಯುಕ್ತ ಸೋಷಲಿಸ್ಟ್ ಪಕ್ಷದ ತಿಮ್ಮಪ್ಪ (17,555) 3,299 ಓಟುಗಳ ಅಂತರದಲ್ಲಿ ಸೋತರು. ಸಾಗರ ವಿಧಾನಸಭಾ ಕ್ಷೇತ್ರದಲ್ಲಿ 11 ಚುನಾವಣೆ ಎದುರಿಸಿ 5 ಬಾರಿ ಗೆದ್ದು ಹಲವು ಸರಕಾರದಲ್ಲಿ ಮಂತ್ರಿ, ಸ್ಪೀಕರ್ ಆಗಿದ್ದ ಕಾಗೋಡು ತಿಮ್ಮಪ್ಪರ ಚುನಾವಣಾ ರಾಜಕಾರಣದ ಆರಂಭವಿದು. 1967ರಲ್ಲಿ ಸೋಷಲಿಸ್ಟ್ ಪಾರ್ಟಿಯ ತಿಮ್ಮಪ್ಪ (11,111) ಕಾಂಗ್ರೆಸ್‌ನ ಕೆ.ಎಚ್. ಶ್ರೀನಿವಾಸ್‌ರಿಗೆ (11,860) ಪ್ರಬಲ ಹೋರಾಟ ಕೊಟ್ಟರೂ ತೀರಾ ಸಣ್ಣ ಅಂತರದಲ್ಲಿ (749) ಸೋಲಬೇಕಾಯಿತು. 1972ರಲ್ಲಿ ಕಾಗೋಡು ತಿಮ್ಮಪ್ಪ 11,477 ಮತ ಪಡೆದಿದ್ದ ಕಾಂಗ್ರೆಸ್‌ನ ಎಲ್.ಟಿ.ತಿಮ್ಮಪ್ಪ ಹೆಗಡೆಯವರನ್ನು 5,217 ಮತದಿಂದ ಪರಾಭವಗೊಳಿಸಿ ಮೊದಲ ಬಾರಿ ವಿಧಾನಸಭೆಗೆ ಪ್ರವೇಶ ಪಡೆದರು.

ಗೇಣಿ ರೈತರ ಸಮಸ್ಯೆ-ಸಂಕಟವನ್ನು ಅಧ್ಯಯನಪೂರ್ಣವಾಗಿ ಅಸೆಂಬ್ಲಿಯಲ್ಲಿ ಮಂಡಿಸುತ್ತಿದ್ದ ತಿಮ್ಮಪ್ಪ ರೈತರ ಪರವಿದ್ದ ಅಂದಿನ ಸಿಎಂ ದೇವರಾಜ ಅರಸುರನ್ನು ಆಕರ್ಷಿಸಿದ್ದರು. ಉಳುವವನೆ ಭೂಮಿಯೊಡೆಯ ಕಾನೂನು ಜಾರಿಗೆ ರಚಿಸಿದ್ದ ಸಮಿತಿಯಲ್ಲಿ ವಿರೋಧ ಪಕ್ಷದ ಶಾಸಕ ತಿಮ್ಮಪ್ಪರನ್ನು ಅರಸು ಸೇರಿಸಿದ್ದರು. 1978ರಲ್ಲಿ ಜನತಾ ಪಕ್ಷದ ಹುರಿಯಾಳಾದ ತಿಮ್ಮಪ್ಪನವರಿಗೆ (28,220) ಜಯ ಸಿಗುವುದಿಲ್ಲ. ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ದ್ವಿತೀಯ ಬಹುಸಂಖ್ಯಾತರಾದ ಹವ್ಯಕ ಬ್ರಾಹ್ಮಣ ಪಂಗಡದ ಎಲ್.ಟಿ.ತಿಮ್ಮಪ್ಪ ಹೆಗಡೆ (30,903) ತಮ್ಮ ಎರಡನೆ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾರೆ.

ಬಂಗಾರಪ್ಪ V/S ತಿಮ್ಮಪ್ಪ

ಶಿವಮೊಗ್ಗ ಜಿಲ್ಲೆಯಿಂದ 1972ರಲ್ಲಿ ಶಾಸಕರಾಗಿದ್ದ ಸೋಷಲಿಸ್ಟ್ ಪಕ್ಷದ ಕಾಗೋಡು ತಿಮ್ಮಪ್ಪ (ಸಾಗರ), ಸಾರೆಕೊಪ್ಪ ಬಂಗಾರಪ್ಪ (ಸೊರಬ) ಮತ್ತು ಕೋಣಂದೂರು ಲಿಂಗಪ್ಪರ (ತೀರ್ಥಹಳ್ಳಿ) ನಡುವೆ ನಾಯಕತ್ವಕ್ಕಾಗಿ ತಗಾದೆ ಶುರುವಾಗಿ ಪಾರ್ಟಿ ಒಡೆಯುತ್ತದೆ. ರಾಜ್ಯ ರಾಜಕಾರಣದಲ್ಲಿ ಚಿರ ಭಿನ್ನಮತೀಯನೆಂದು ಗುರುತಿಸಲ್ಪಟ್ಟಿದ್ದ ಬಂಗಾರಪ್ಪ ಸೋಷಲಿಸ್ಟ್ ಪಕ್ಷದಲ್ಲಿ ನಾಯಕತ್ವ ಸಿಗದೆ ಸಿಟ್ಟಿಂದ ’ಕ್ರಾಂತಿಕಾರಿ’ ಪಕ್ಷ ಕಟ್ಟುತ್ತಾರೆ. ಅದೆ ಹೊತ್ತಿಗೆ ಬಂಗಾರಪ್ಪ ಮತ್ತು ತಿಮ್ಮಪ್ಪರ ನಡುವೆ ಈಡಿಗ ಸಮುದಾಯದ ನಾಯಕತ್ವಕ್ಕೆ ಶೀತಲ ಸಂಘರ್ಷವೂ ಶುರುವಾಗುತ್ತದೆ. ಸೋಷಲಿಸ್ಟ್ ಪಾರ್ಟಿ ಜನತಾ ಪಕ್ಷದಲ್ಲಿ ವಿಲೀನವಾದ್ದರಿಂದ ತಿಮ್ಮಪ್ಪ ಆ ಪಕ್ಷದ ಪ್ರಮುಖ ಮುಂದಾಳಾಗಿ ಹೊರಹೊಮ್ಮಿದರೆ, ಇತ್ತ ಬಂಗಾರಪ್ಪ ತಮ್ಮ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಮಾಡಿ ಅರಸು ಸರಕಾರದಲ್ಲಿ ಮಂತ್ರಿಯಾಗುತ್ತಾರೆ. ಇಂದಿರಾ ಗಾಂಧಿ ಮತ್ತು ಅರಸು ನಡುವೆ ಭಿನ್ನಾಭಿಪ್ರಾಯ ಬಂದಾಗ ಬಂಗಾರಪ್ಪ ಅರಸು ಸರಕಾರದಿಂದ ಹೊರಬಂದು ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ.

1980ರಲ್ಲಿ ಅರಸು ಸರಕಾರ ಪತನವಾದಾಗ ಗುಂಡೂರಾವ್ ಹಾಗು ಬಂಗಾರಪ್ಪ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೂಟಿ ನಡೆಯುತ್ತದೆ. ಸಂಜಯ್ ಗಾಂಧಿ ಆಪ್ತ ವಲಯದಲ್ಲಿದ್ದ ಗುಂಡೂರಾವ್‌ಗೆ ಸಿಎಂ ಆಗುವ ಅವಕಾಶ ಸಿಗುತ್ತದೆ. ಮಹತ್ವದ ಕೃಷಿ-ಕಂದಾಯ ಖಾತೆಗಳ ಜತೆ ಬಂಗಾರಪ್ಪ ಸರಕಾರದಲ್ಲಿ ನಂಬರ್ ಟೂ ಆಗಬೇಕಾಗುತ್ತದೆ. ಸದಾ ನಂಬರ್ ಒನ್ ಆಗುವ ಮಹತ್ವಾಕಾಂಕ್ಷೆಯ ಬಂಗಾರಪ್ಪ ಹೆಚ್ಚು ದಿನ ಕಾಂಗ್ರೆಸ್‌ನಲ್ಲಿ ಉಳಿಯಲಾಗದೆ ಅರಸು ಕಟ್ಟಿದ್ದ ಕ್ರಾಂತಿರಂಗ ಸೇರುತ್ತಾರೆ. ಆ ವೇಳೆಗೆ ಈಡಿಗ ಸಮುದಾಯದ ವರ್ಚಸ್ವಿ ನೇತಾರನಾಗಿ ಹೊರಹೊಮ್ಮಿದ್ದ ಬಂಗಾರಪ್ಪನವರನ್ನು ಕೌಂಟರ್ ಮಾಡಲು ಇಂದಿರಾ-ಗುಂಡೂರಾವ್ ಅದೆ ಪಂಗಡದ ಮತ್ತು ಬಂಗಾರಪ್ಪರ ಸಾಂಪ್ರದಾಯಿಕ ಎದುರಾಳಿ ಕಾಗೋಡು ತಿಮ್ಮಪ್ಪರನ್ನು ಜನತಾ ಪಕ್ಷದಿಂದ ಕಾಂಗ್ರೆಸ್‌ಗೆ ಬರುವಂತೆ ನೋಡಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ತಿಮ್ಮಪ್ಪರಿಗೆ ಕ್ಯಾಬಿನೆಟ್ ಮಂತ್ರಿ ಸ್ಥಾನವೂ ಕೊಡಲಾಗುತ್ತದೆ. ಕಾಂಗ್ರೆಸ್‌ನಲ್ಲಿ ಎತ್ತರೆತ್ತರಕ್ಕೆ ಸಾಗಿದ ತಿಮ್ಮಪ್ಪ ಒಂದು ಹಂತದಲ್ಲಿ ಸಿಎಂ ಮಟೀರಿಯಲ್ ಎಂಬ
ಚರ್ಚೆ-ವಿಶ್ಲೇಷಣೆಗಳೂ ನಡೆದಿತ್ತು. ತಿಮ್ಮಪ್ಪ ಮುತ್ಸದ್ಧಿ-ಜನಪರ ಎಂಬುದೇನೂ ನಿಜ. ಆದರೆ ಬಂಗಾರಪ್ಪರ ವಿರೋಧಿ ಈಡಿಗ ಮುಖಂಡ ಎಂಬ ಒಂದೇಒಂದು ಅಂಶ ಅವರ ದೆಸೆಯನ್ನೇ ಬದಲಿಸಿತೆಂಬ ಮಾತು ಶಿವಮೊಗ್ಗದ ರಾಜಕೀಯ ಪಡಸಾಲೆಯಲ್ಲಿದೆ.

1983ರ ಚುನಾವಣೆ ಎದುರಾದಾಗ ಎಮ್ಮೆಲ್ಸಿಯಾಗಿದ್ದ ತಿಮ್ಮಪ್ಪ ನೇರ ಹೋರಾಟಕ್ಕೆ ಇಳಿಯಲಿಲ್ಲ. 1978ರಲ್ಲಿ ತಿಮ್ಮಪ್ಪರನ್ನು ಸೋಲಿಸಿದ್ದ ತಿಮ್ಮಪ್ಪ ಹೆಗಡೆಯವರೆ ಮತ್ತೆ ಕಾಂಗ್ರೆಸ್ ಕ್ಯಾಂಡಿಡೇಟಾದರು. ಬಂಗಾರಪ್ಪ ತಮ್ಮ ಶಡ್ಡಕ ಕೆ.ಜಿ.ಶಿವಪ್ಪರನ್ನು ಜನತಾರಂಗದ (ಜನತಾ ಪಕ್ಷ-ಕ್ರಾಂತಿರಂಗ ಮೈತ್ರಿ) ಅಭ್ಯರ್ಥಿಯಾಗಿ ಮಾಡಿದ್ದರು. ಈ ಹಣಾಹಣಿಯಲ್ಲಿ ಶಾಸಕ ಹೆಗಡೆ ತೀರಾ ಸಣ್ಣ ಅಂತರದಲ್ಲಿ (1,666) ಪುನರಾಯ್ಕೆಯಾದರು. 1985ರ ಚುನಾವಣೆ ಬಂದಾಗ ತಿಮ್ಮಪ್ಪರಿದ್ದ ಕಾಂಗ್ರೆಸ್‌ಗೆ ಬಂಗಾರಪ್ಪ ಮರಳಿದರು. ಇಬ್ಬರು ಘಟಾನುಘಟಿ ದೀವರ ಲೀಡರ್‌ಗಳು ಮತ್ತು ಸ್ವಜಾತಿ (ಹವ್ಯಕ) ಮತ ಬ್ಯಾಂಕ್ ಇದ್ದರೂ ಕಾಂಗ್ರೆಸ್‌ನ ತಿಮ್ಮಪ್ಪ ಹೆಗಡೆಯವರಿಗೆ ಆ ಇಲೆಕ್ಷನ್‌ನಲ್ಲಿ ಗೆಲ್ಲಲು ಸಾಧ್ಯವಾಗುವುದಿಲ್ಲ. ಅಂದು ಬೀಸಿದ್ದ ರಾಮಕೃಷ್ಣ ಹೆಗಡೆ ಗಾಳಿಯಲ್ಲಿ ಅಷ್ಟೇನು ಪರಿಚಿತರಲ್ಲದ ಜನತಾ ಪಕ್ಷದ ಅಭ್ಯರ್ಥಿ ಬಿ.ಧರ್ಮಪ್ಪ (30,558) 1,550 ಮತಗಳ ಅಂತರದಿಂದ ಗೆದ್ದು ಶಾಸಕನಾಗುತ್ತಾರೆ.

ಬಂಗಾರಪ್ಪ-ತಿಮ್ಮಪ್ಪ ನಡುವೆ 1989ರ ಸಾರ್ವತ್ರಿಕ ಚುನಾವಣೆ ಬಂದಾಗ ಸಣ್ಣ ರಾಜಿಯಾಗಿತ್ತೆಂದು ಅಂದಿನ ರಾಜಕಾರಣವನ್ನು ಹತ್ತಿರದಿಂದ ನೋಡಿದ ಹಿರಿಯರು ಹೇಳುತ್ತಾರೆ. ಆ ಇಲೆಕ್ಷನ್‌ನಲ್ಲಿ ತಿಮ್ಮಪ್ಪ ಕಾಂಗ್ರೆಸ್ ಕ್ಯಾಂಡಿಡೇಟಾದರೆ, ಸಮಾಜವಾದಿ ಬಿ.ಆರ್.ಜಯಂತ್ ಜನತಾದಳದ ಹುರಿಯಾಳು. ಬ್ರಾಹ್ಮಣ ಪಂಗಡದ ಜಯಂತ್‌ರನ್ನು (24,876)g ಹಳೆ ಹುಲಿ ತಿಮ್ಮಪ್ಪ (46,234) ದೊಡ್ಡ ಅಂತರದಲ್ಲಿ ಸೋಲಿಸಿ ಎರಡನೆ ಬಾರಿ ಎಮ್ಮೆಲ್ಲೆಯಾಗುತ್ತಾರೆ. ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಶಾಸಕ ತಿಮ್ಮಪ್ಪರನ್ನು ಮಹತ್ವದ ಗೃಹ ಮಂಡಳಿ ಅಧ್ಯಕ್ಷರಾಗಿ ನೇಮಿಸುತ್ತಾರೆ. ವೀರೇಂದ್ರ ಪಾಟೀಲರ ಪದಚ್ಯುತಿ ಬಳಿಕ ಮುಖ್ಯಮಂತ್ರಿಯಾದ ಬಂಗಾರಪ್ಪ ಗೃಹಮಂಡಳಿ ಅಧ್ಯಕ್ಷ ತಿಮ್ಮಪ್ಪರಿಗೆ ತೊಂದರೆ ಕೊಡುವುದಿಲ್ಲ.

ಗೋಪಾಲಕೃಷ್ಣ ಬೇಳೂರು

1994ರ ಚುನಾವಣೆಯ ಆಸುಪಾಸಿನಲ್ಲಾದ ರಾಜಕೀಯ ಸ್ಥಿತ್ಯಂತರದಲ್ಲಿ ಬಂಗಾರಪ್ಪ ಮುಖ್ಯಮಂತ್ರಿ ಪಟ್ಟದಿಂದ ಕೆಳಗೆ ಇಳಿಯಬೇಕಾಯಿತು. ಕೆರಳಿದ ಬಂಗಾರಪ್ಪ ಕಾಂಗ್ರೆಸ್‌ನಿಂದ ಸಿಡಿದು ತಮ್ಮದೆ ಕೆಸಿಪಿ ಸ್ಥಾಪಿಸುತ್ತಾರೆ. ಆ ಸಂದರ್ಭದಲ್ಲಿ ಬಂಗಾರಪ್ಪ ಮತ್ತು ಮೊಯ್ಲಿ ಸರಕಾರದಲ್ಲಿ ಮಂತ್ರಿಯಾಗಿದ್ದ ತಿಮ್ಮಪ್ಪ ಮತ್ತೆ ಹಾವು-ಮುಂಗುಸಿಯಂತೆ ಆದರೆಂದು ರಾಜಕೀಯ ಚರಿತ್ರೆಯಿಂದ ತಿಳಿಯುತ್ತದೆ. ತಿಮ್ಮಪ್ಪರನ್ನು ಸೋಲಿಸಲೇಬೇಕೆಂಬ ಹಠದಿಂದ ಬಂಗಾರಪ್ಪ ಖುದ್ದು ತಾವೆ ಸ್ವಕ್ಷೇತ್ರ ಸೊರಬದ ಜತೆ ಪಕ್ಕದ ಸಾಗರದಲ್ಲೂ ಸ್ಪರ್ಧಿಸುತ್ತಾರೆ. ಈ ತ್ರಿಕೋನ ಕಾಳಗದಲ್ಲಿ ತಿಮ್ಮಪ್ಪ 32,271 ಮತ ಪಡೆದರೆ ಜನತಾ ದಳದ ಚಂದ್ರಶೇಖರ್ 23,059 ಮತ ಗಳಿಸುತ್ತಾರೆ. ಬಂಗಾರಪ್ಪ(21,161) ಮೂರನೆ ಸ್ಥಾನಕ್ಕೆ ನೂಕಲ್ಪಡುತ್ತಾರೆ. ಸೋಲರಿಯದ ಸರದಾರ ಎನಿಸಿಕೊಂಡಿದ್ದ ಬಂಗಾರಪ್ಪನವರ ಮೊದಲ ಪರಾಭವವಿದು! ಈಡಿಗ ಹಿರಿಯರ ರಾಜಿ ಪಂಚಾಯ್ತಿಕೆಯಿಂದ ಆಖಾಡದಲ್ಲಿ ಬಂಗಾರಪ್ಪ ತಣ್ಣಗಾದ್ದರಿಂದ ತಿಮ್ಮಪ್ಪ ಗೆದ್ದರೆಂಬ ವಿಶ್ಲೇಷಣೆಗಳು ಸಾಗರದ ರಾಜಕೀಯ ವಲಯದಲ್ಲಿದೆ.

1999ರ ಚುನಾವಣೆ ಹೊತ್ತಲ್ಲಿ ಜನತಾ ದಳದ ದಳಗಳು ಉದುರಿ ಕಮಲ ಅರಳಲು ಆರಂಭಿಸಿತ್ತು. ಆ ರಣಾಂಗಣದಲ್ಲಿ ಕಾಂಗ್ರೆಸ್‌ನ ಕಾಗೋಡು ತಿಮ್ಮಪ್ಪ (50,797) ಬಿಜೆಪಿಯ ತಿಮ್ಮಪ್ಪ ಹೆಗಡೆಯವರನ್ನು (32,730) ಸೋಲಿಸಿ ಆಯ್ಕೆಯಾದರು. ಆ ವೇಳೆ ಬಂಗಾರಪ್ಪ ಕಾಂಗ್ರೆಸ್‌ಗೆ ಮರಳಿದ್ದರಿಂದ ತಿಮ್ಮಪ್ಪರಿಗೆ ಗೆಲ್ಲುವುದು ಕಷ್ಟವಾಗಲಿಲ್ಲ ಎನ್ನಲಾಗುತ್ತಿದೆ. ಎಸ್.ಎಂ.ಕೃಷ್ಣರ ಸರಕಾರದಲ್ಲಿ ತಿಮ್ಮಪ್ಪರಿಗೆ ಸ್ಥಾನ ಸಿಗುತ್ತದೆ. 2004ರ ಅಸೆಂಬ್ಲಿ ಸಮರಾಂಗಣ ಹದವಾಗುತ್ತಿದ್ದಾಗ ಸಂಸದ ಬಂಗಾರಪ್ಪನವರ ಬಂಡಾಯ ಮರುಕಳಿಸಿತು. ಬಂಗಾರಪ್ಪ ಬಿಜೆಪಿ ಸೇರಿದರು. ಸಮಾಜವಾದಿ ತತ್ವಾದರ್ಶ-ಬ್ರಾಹ್ಮಣಿಕೆ ಹುನ್ನಾರಗಳ ಅರಿವಿದ್ದ ಬಂಗಾರಪ್ಪ ಗರ್ಭಗುಡಿ ಸಂಸ್ಕೃತಿಯ ಬಿಜೆಪಿ ಸೇರಿದ್ದು ಆಘಾತಕಾರಿಯಾಗಿತ್ತು ಎಂದು ಪ್ರಜ್ಞಾವಂತರು ಅಭಿಪ್ರಾಯ ಪಡುತ್ತಾರೆ.

ಬೇಳೂರು-ಹರತಾಳು ಹಣಾಹಣಿ!

ಹಳೆಯ ಶತ್ರು ತಿಮ್ಮಪ್ಪರನ್ನು ಹಣಿಯಲು ಬಂಗಾರಪ್ಪ ಈ ಬಾರಿ ಕರಾರುವಾಕ್ಕಾದ ತಂತ್ರಗಾರಿಕೆ ಹೆಣೆದರು. ಬೆಂಗಳೂರಲ್ಲಿ ಬಿಸ್ನೆಸ್ ಮಾಡಿಕೊಂಡಿದ್ದ ತಿಮ್ಮಪ್ಪರ ಸೋದರಳಿಯ (ಅಕ್ಕನ ಮಗ) ಬೇಳೂರು ಗೋಪಾಲಕೃಷ್ಣರನ್ನು ರಣಕಣಕ್ಕಿಳಿಸಿದರು. ಬಿಜೆಪಿ ಪರ ಒಲವಿರುವ ಬ್ರಾಹ್ಮಣ ಮತ ಬ್ಯಾಂಕ್ ಜತೆ ಬಂಗಾರಪ್ಪರ ಪ್ರಭಾವದಿಂದ ದೀವರ ಒಂದಿಷ್ಟು ಮತ ಸೇರಿದ್ದರಿಂದ ಬಿಜೆಪಿ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಮಾವ ತಿಮ್ಮಪ್ಪರನ್ನು ಅನಾಯಾಸವಾಗಿ (ಮತಗಳ ಅಂತರ 15,173) ಸೋಲಿಸಿದರು. ಬಿಜೆಪಿಯಿಂದ ಎರಡೇ ವರ್ಷಕ್ಕೆ ಹೊರಬಿದ್ದರು ಬಂಗಾರಪ್ಪ.ಆದರೆ ಬೇಳೂರು ಗೋಪಾಲಕೃಷ್ಣ ’ಗುರು’ವನ್ನು ಹಿಂಬಾಲಿಸದೆ ಯಡಿಯೂರಪ್ಪರ ಅನುಯಾಯಿಯಾದರು. 2008ರಲ್ಲಿ ಯಡಿಯೂರಪ್ಪ ಗೋಪಾಲಕೃಷ್ಣರಿಗೆ ಬಿಜೆಪಿ ಟಿಕೆಟ್ ಕೊಡಿಸಿದರು. ಬಂಗಾರಪ್ಪರ ಕೃಪೆಯಿಲ್ಲದ ಗೋಪಾಲಕೃಷ್ಣ ಗೆಲ್ಲಲು ತಿಣುಕಾಡಬೇಕಾಯಿತೆಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಕತ್ತುಕತ್ತಿನ ಈ ಹಣಾಹಣಿಯಲ್ಲಿ ತಿಮ್ಮಪ್ಪರಿಗೆ ಕೇವಲ 2,845 ಮತಗಳಿಂದ ಸೋಲಾಯಿತು.

ಸಿಎಂ ಆಗಿದ್ದ ಯಡಿಯೂರಪ್ಪರ ವಿರುದ್ಧ ಬಂಡೆದ್ದು ಶಾಸಕ ಸ್ಥಾನದಿಂದ ಅನರ್ಹರಾಗಿದ್ದ ಶಾಸಕರಲ್ಲಿ ಗೋಪಾಲಕೃಷ್ಣರೂ ಒಬ್ಬರಾಗಿದ್ದರು. ತನಗೆ ಯಡಿಯೂರಪ್ಪ ಮಂತ್ರಿ ಮಾಡಲಿಲ್ಲ ಎಂಬುದಕ್ಕಿಂತ ಸ್ವಜಾತಿ ಪ್ರತಿಸ್ಪರ್ಧಿ ಹರತಾಳು ಹಾಲಪ್ಪರನ್ನು ಮಂತ್ರಿ ಮಾಡಿದ್ದರಿಂದ ಕೆರಳಿದ್ದರೆನ್ನಲಾಗಿದೆ. ಬೇಳೂರು-ಹರತಾಳು ಜಗಳ ಯಾವ ಮಟ್ಟಕ್ಕಿತ್ತೆಂದರೆ ಬಹಿರಂಗವಾಗಿಯೇ ಹೀನಾಯವಾಗಿ ಬೈದಾಡಿಕೊಳ್ಳುತ್ತಿದ್ದರು. ವರ್ಷಾನುಗಟ್ಟಲೆ ತ್ರಿಶಂಕುಸ್ಥಿತಿಯಲ್ಲಿ ಉಳಿದ ಗೋಪಾಲಕೃಷ್ಣ ಮತ್ತವರ ಸಂಗಡಿಗರು ಸುಪ್ರೀಂ ಕೋರ್ಟ್‌ನಿಂದ ಅನರ್ಹತೆ ರದ್ದುಪಡಿಸಿಕೊಂಡು ಬಂದರಾದರೂ ಆಗ ಅವರಿಗೆ ಬಿಜೆಪಿಯಲ್ಲಿ ಗಾಡ್‌ಫಾದರ್ ಯಾರೂ ಇರಲಿಲ್ಲ. 2013ರ ಇಲೆಕ್ಷನ್ ಸಂದರ್ಭದಲ್ಲಿ ಯಡಿಯೂರಪ್ಪರೂ ಕೆಜೆಪಿ ಕಟ್ಟಿದ್ದರು. ಕೆಜೆಪಿಯ ಬಿ.ಆರ್.ಜಯಂತ್, ಜೆಡಿಎಸ್ ಹುರಿಯಾಳಾಗಿದ್ದ ಬೇಳೂರು ಗೋಪಾಲಕೃಷ್ಣ ಮತ್ತು ಕಾಂಗ್ರೆಸ್‌ನ ಕಾಗೋಡು ತಿಮ್ಮಪ್ಪರ ಮಧ್ಯೆ ತ್ರಿಕೋನ ಕದನ ಏರ್‍ಪಟ್ಟಿತ್ತು. ಸಾಗರದ ಚುನಾವಣೆಗಳಲ್ಲಿ ವರ್ಕ್‌ಔಟ್ ಆಗುತ್ತಿದ್ದ ಬಂಗಾರಪ್ಪ ಫ್ಯಾಕ್ಟರ್ ಅವರ ನಿಧನದಿಂದಾಗಿ ಇಲ್ಲದಾಗಿತ್ತು. ತಿಮ್ಮಪ್ಪ ಸಮೀಪ ಪ್ರತಿಸ್ಪರ್ಧಿ ಕೆಜೆಪಿಯ ಜಯಂತ್‌ರನ್ನು 41,248 ಮತಗಳ ಅಂತರದಿಂದ ಸೋಲಿಸಿ ಜಯಭೇರಿ ಬಾರಿಸಿದರು!

ಯಡಿಯೂರಪ್ಪ ಬಿಜೆಪಿಗೆ ಮರಳಿದಾಗ ಗೋಪಾಲಕೃಷ್ಣ ಜತೆಯಾಗಿದ್ದರು. ಹರಿದುಹೋಗಿದ್ದ ಯಡಿಯೂರಪ್ಪ ಮತ್ತು ಗೋಪಾಲಕೃಷ್ಣರ ಸಂಬಂಧಕ್ಕೆ ತೇಪೆಹಾಕಲಾಗಿತ್ತು. ಗೋಪಾಲಕೃಷ್ಣರೆ 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯೆಂಬ ಸುದ್ದಿಗಳು ಹಬ್ಬಿತ್ತಷ್ಟೇ ಅಲ್ಲ, ಅವರು ರಂಗ ತಾಲೀಮು ಶುರು ಮಾಡಿಕೊಂಡಿದ್ದರು. 2013ರಲ್ಲಿ ಸೊರಬದಲ್ಲಿ ಮಧು ಬಂಗಾರಪ್ಪರ ಕೈಲಿ ಸೋತಿದ್ದ ಹಾಲಪ್ಪರ ಕಣ್ಣು ಸಾಗರದ ಮೇಲಿತ್ತು. ಕಾಂಗ್ರೆಸ್‌ನಲ್ಲಿದ್ದ ಕುಮಾರ್ ಬಂಗಾರಪ್ಪರಿಗೆ ಬಿಜೆಪಿ ಟಿಕೆಟ್ ಕೊಡುವ ಪ್ಲಾನು ಹಾಕಿಕೊಂಡಿದ್ದ ಯಡಿಯೂರಪ್ಪನವರಿಗೆ ತಮ್ಮ ನಂಬಿಕಸ್ಥ ಹರತಾಳು ಹಾಲಪ್ಪರಿಗೆ ’ಪುನರ್ವಸತಿ’ ಕಲ್ಪಿಸಬೇಕಾದ ದರ್ದು ಎದುರಾಗಿತ್ತು.

ಹಾಲಪ್ಪನವರಿಗೆ ಬಿಜೆಪಿ ಅವಕಾಶ ಕೊಡುವುದು ಖಾತ್ರಿಯಾಗುತ್ತಿದ್ದಂತೆ ಗೋಪಾಲಕೃಷ್ಣ ಅನಿವಾರ್ಯವಾಗಿ ಹಳೆ ವೈಮನಸ್ಸು ಮರೆತು ಮಾವನ ಕಡೆ (ಕಾಂಗ್ರೆಸ್‌ಗೆ) ಸೇರಿಕೊಂಡರು. ಎಂಭತ್ತೈದು ವರ್ಷದ ತಿಮ್ಮಪ್ಪ ಒಂದೆರಡು ಚುನಾವಣಾ ಪ್ರಚಾರ ಸಭೆಗಳಲ್ಲಿ ನಿತ್ರಾಣಗೊಂಡು ಕುಸಿದುಬಿದ್ದರು.

ಯಡಿಯೂರಪ್ಪ

ಬಿಜೆಪಿಗರು ಇದನ್ನೇ ಪ್ರಚಾರಕ್ಕೆ ಬಂಡವಾಳ ಮಾಡಿಕೊಂಡರು. ಹಾಲಪ್ಪ ’ಹಣಾ’ಹಣಿ ನಡೆಸಿದರೆಂಬ ಮಾತು ಕ್ಷೇತ್ರದಲ್ಲಿ ಸಾಮಾನ್ಯವಾಗಿದೆ. ಜತೆಗೆ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆಂಬ ಕಾರಣಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಬೀಸಿದ ಬಿಜೆಪಿ ಗಾಳಿ ಸೇರಿ ಹಾಲಪ್ಪ ಗೆಲುವು ಕಂಡರೆಂದು ವಿಶ್ಲೇಷಿಸಲಾಗುತ್ತಿದೆ.

ಕ್ಷೇತ್ರದ ಬೇಕು-ಬೇಡ

ಸಾಗರ ವಿಧಾನಸಭಾ ಕ್ಷೇತ್ರದ ಉದಗಲಕ್ಕೊಮ್ಮೆ ಕಣ್ಣು ಹಾಯಿಸಿದರೆ ಹಳ್ಳಿಹಳ್ಳಿಗಳಲ್ಲಿ ಸರಕಾರಿ ಸಾರಾಯಿ ಅಂಗಡಿಗಳಾಗಿರುವುದು ಬಿಟ್ಟರೆ ಈ ನಾಲ್ಕು ವರ್ಷದಲ್ಲಿ ಸ್ಥಳೀಯರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗುವಂಥ ಒಂದೇ ಒಂದು ಯೋಜನೆ ಬಂದಿದ್ದು ಕಾಣಿಸದು; ಕಾಗೋಡು ತಿಮ್ಮಪ್ಪ ವಿವಿಧ ಅಧಿಕಾರಗಳಲ್ಲಿದ್ದಾಗ ಸಾಕಷ್ಟು ಯೋಜನೆಗಳನ್ನು ಮಂಜೂರಿ ಮಾಡಿಸಿದ್ದರು. ಆ ಕೆಲಸಗಳೆ ಮುಂದುವರಿದಿವೆಯೆ ಹೊರತು ಹಾಲಿ ಶಾಸಕ ಹಾಲಪ್ಪರ ಆಸಕ್ತಿ-ಪ್ರಯತ್ನದಿಂದ ಯಾವ ಯೋಜನೆಯೂ ಬಂದಿಲ್ಲ. ’ಸಾಗರ ನಗರದಲ್ಲಿರುವ ಗಣಪತಿ ಕೆರೆಯ ಹತ್ತಾರು ಎಕರೆ ಅತಿಕ್ರಮಣವಾಗಿದ್ದು, ಈ ಅಕ್ರಮ ಜಾಗದಲ್ಲಿನ ತೋಟ ಶಾಸಕರು ಖರೀದಿಸಿದ್ದಾರೆ; ಶಾಸಕರ ಮುತುವರ್ಜಿಯಲ್ಲಿ ನಗರಸಭೆಯ ಲಕ್ಷಾಂತರ ರೂಪಾಯಿ ವ್ಯಯಿಸಿ ಆ ಅನಧಿಕೃತ ಪ್ರದೇಶದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಪಡಿಸಲಾಗುತ್ತಿದೆ; ಕೆರೆ ಕಬಳಿಕೆಯತ್ತ ಜನರ ಗಮನ ಹರಿಯಬಾರದೆಂದು ಪ್ರತಿ ವರ್ಷ ಸರಕಾರಿ ಹಣದಲ್ಲಿ ಕೆರೆದಂಡೆಯಲ್ಲಿ ’ಕೆರೆ ಹಬ್ಬ’ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಶಾಸಕರ ಅಧ್ವರ್ಯದಲ್ಲಿ ನಡೆಸಲಾಗುತ್ತಿದೆ’ ಎಂದು ಹೆಸರು ಹೇಳಲಿಚ್ಛಿಸದ ಸಾಮಾಜಿಕ ಕಾರ್ಯಕರ್ತರೋರ್ವರು ಹೇಳುತ್ತಾರೆ.

ವಲಸೆ ಹೋಗುತ್ತಿರುವ ಯುವ ಸಮೂಹಕ್ಕೆ ಕೆಲಸ ಕೊಡುವ ಉದ್ಯಮ-ಕೈಗಾರಿಕೆಗಳ ಅವಶ್ಯಕತೆ ಸಾಗರಕ್ಕಿದೆ. ದೇಶವಿದೇಶದಲ್ಲಿ ಪ್ರಸಿದ್ಧಿ ಪಡೆದಿರುವ ಸಾಗರದ ಕರಕುಶಲ ಕಸುಬು ಹಲವು ಜನರಿಗೆ ಅನ್ನಕೊಡುವ ಉದ್ಯಮವಾಗಿ ಬೆಳೆಸಬೇಕಾಗಿದೆ. ಸರಣಿ ಪ್ರವಾಸೋದ್ಯಮ ಬೆಳೆಸಿದರೆ ನಿರುದ್ಯೋಗಿಗಳಿಗೆ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುತಿತ್ತು.

ಲಿಂಗನಮಕ್ಕಿ ಆಣೆಕಟ್ಟು ನಿರ್ಮಾಣದಿಂದ ನಿರಾಶ್ರಿತರಾದ ಹೆಚ್ಚು-ಕಮ್ಮಿ 10 ಸಾವಿರ ಕುಟುಂಬಗಳಿಗಿನ್ನು ಹಕ್ಕುಪತ್ರ ಕೊಡಲಾಗಿಲ್ಲ. ಸುಮಾರು ಅಷ್ಟೇ ಸಂಖ್ಯೆಯಲ್ಲಿರುವ ಬಗರ್ ಹುಕುಮ್ (ಅರಣ್ಯ ಅತಿಕ್ರಮಣ) ಸಾಗುವಳಿದಾರರು ಭೂಮಿ ಹಕ್ಕು ಕೇಳುತ್ತಿದ್ದಾರೆ. ಈ ಜ್ವಲಂತ ಸಮಸ್ಯೆಗಳು ತಮಗೆ ಸಂಬಂಧಿಸಿದ್ದಲ್ಲ ಎಂಬಂತೆ ಉದಾಸೀನದಿಂದ ಆಳುವವರಿದ್ದಾರೆಂಬ ಮಾತು ಕೇಳಿಬರುತ್ತಿದೆ.

1994ರಲ್ಲಿದ್ದ ಅಸಿಸ್ಟಂಟ್ ಕಮಿಷನರ್ ಒಬ್ಬರು ಕಾಡಿನಂಚಿನಲ್ಲಿದ್ದ ಕಂದಾಯ ಭೂಮಿಯನ್ನು ಅರಣ್ಯವೆಂದು ದಾಖಲಿಸಿರುವ ಅಚಾತುರ್ಯದಿಂದ ಅಲ್ಲಿ ಸೂರು ಕಟ್ಟಿಕೊಂಡಿರುವ ಅನೇಕ ಕುಟುಂಬಗಳು ಅತಂತ್ರವಾಗಿ ಗೋಳಾಡುತ್ತಿವೆ. ಕೃಷಿಗೆ ಅವಶ್ಯವಾದ ಒಂದು ಎಲೆ ಸಹ ಮುಟ್ಟಲಾಗದ ಸಂಕಷ್ಟಕ್ಕೆ ಈ ರೈತಾಪಿವರ್ಗ ಸಿಲುಕಿದೆ. ಹಂದಿಗೋಡು ಕಾಯಿಲೆ ಅಸಹಾಕರ ಜೀವ ಹಿಂಡುತ್ತಿದ್ದರೂ ಅದರ ಅಧ್ಯಯನ-ನಿಯಂತ್ರಣ ಸಾಧ್ಯವಾಗಿಲ್ಲ. ಶರಾವತಿ ಅಭಯಾರಣ್ಯ ಕುಡುಬಿಯಂಥ ಗುಡ್ಡಗಾಡು ಜನರಿಗೆ ಹಾಗು ಕೃಷಿಕರಿಗೆ ಭಯ ಮೂಡಿಸುತ್ತಿದೆ. ದುರ್ಗಮ ಕಾಡು-ಮೇಡುಗಳಿಂದ ಆವೃತವಾಗಿರುವ ಸಾಗರ ತಾಲೂಕಿನಲ್ಲಿ ರಸ್ತೆ-ಕಾಲು ಸಂಕದಂಥ ಮೂಲಸೌಕರ್ಯಗಳೇ ಇಲ್ಲದ ಜನವಸತಿ ಪ್ರದೇಶಗಳಿವೆ. ಇದೆಲ್ಲವನ್ನು ಶಾಸಕ ಹಾಲಪ್ಪ ಮತ್ತು ಸಂಸದ ಬಿ.ಎಸ್.ರಾಘವೇಂದ್ರ ಕಡೆಗಣಿಸಿ ನಿರಾಯಸವಾಗಿ ಓಟು ತರುವ ಧರ್ಮಕಾರಣದಲ್ಲಿ ತೊಡಗಿದ್ದಾರೆಂಬ ಆಕ್ರೋಶ ಸಾಗರದಲ್ಲಿ ಮಡುಗಟ್ಟಿದೆ.

ಹಾಲಪ್ಪರಿಗೆ ಗೇಟ್‌ಪಾಸ್?!

ಶಾಸಕ ಹರತಾಳು ಹಾಲಪ್ಪರ ಬಣ ಮತ್ತು ಅವರನ್ನು ಮಾಜಿ ಮಾಡಲು ಪಣತೊಟ್ಟಿರುವ ಸಂಘ ಪರಿವಾರದ ಪಡೆಯ ನಡುವೆ ಮುಸುಕಿನ ಗುದ್ದಾಟ ಬಿಜೆಪಿಯಲ್ಲಿ ನಡೆದಿದೆಯೆಂಬುದು ಸಾಗರದಲ್ಲಿ ಟಾಕ್ ಆಫ್ ದಿ ಟೌನ್. ರೇಪ್ ಆರೋಪ ಎದುರಿಸಿರುವ ಹಾಲಪ್ಪ ಈಗ ಭ್ರಷ್ಟಾಚಾರದ ಆಕ್ಷೇಪಕ್ಕೆ ತುತ್ತಾಗಿರುವುದರಿಂದ 2023ರಲ್ಲಿ ಗೆಲ್ಲುವುದು ಕಷ್ಟವೆಂಬ ವಾದ ಸಂಘಿಗಳದು ಎನ್ನಲಾಗುತ್ತಿದೆ. ಹಾಲಪ್ಪ ಮನುಷ್ಯ ಸಂಬಂಧ ಕಟ್ಟಿಕೊಳ್ಳಲು ವಿಫಲರಾಗಿದ್ದಾರೆ; ಸಮಸ್ಯೆ ಹೇಳಿಕೊಂಡು ಬರುವ ಮಂದಿಗೆ ತುಚ್ಛವಾಗಿ ಬೈಯ್ಯುತ್ತಾರೆ; ಇದನ್ನೆ ಕಟ್ಟರ್ ಬಿಜೆಪಿಗಳು ಹಾಲಪ್ಪರಿಗೆ ಟಿಕೆಟ್ ತಪ್ಪಿಸಲು ಬಂಡವಾಳ ಮಾಡಿಕೊಂಡಿದ್ದಾರೆಂಬ ಮಾತು ಬಿಜೆಪಿ ಪಡಸಾಲೆಯಲ್ಲಿ ಜೋರಾಗಿದೆ.

ಆಯಕಟ್ಟಿನ ಸಾಗರ ವಿಧಾನಸಭಾ ಕ್ಷೇತ್ರದ ಮೇಲೆ ಹಿಡಿತ ಸಾಧಿಸುವ ಯೋಜನೆ ಹಾಕಿರುವ ಸಂಘಪರಿವಾರ ಹವ್ಯಕ ಬ್ರಾಹ್ಮಣ ಅಭ್ಯರ್ಥಿಯ ಹುಡುಕಾಟದಲ್ಲಿದೆ ಎಂಬ ಚರ್ಚೆಗಳು ನಡೆದಿದೆ. ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಸ್ವಾಮಿ ಹೆಸರು ಸಂಘ ಪರಿವಾರದ ಪರಿಶೀಲನೆಯಲ್ಲಿದೆ ಎನ್ನಲಾಗುತ್ತಿದೆ. ಸೊಪ್ಪಿನ ಬೆಟ್ಟ ಹೋರಾಟದ ಮುಂಚೂಣಿಯಲ್ಲಿದ್ದ ಗುರುಸ್ವಾಮಿ ಹವ್ಯಕರ ಕೇರಿಗಳಲ್ಲಿ ಚಿರಪರಿಚಿತರು;
ಆರ್‌ಎಸ್‌ಎಸ್ ಕಟ್ಟಾಳು. ಹವ್ಯಕರ ರಾಮಚಂದ್ರಾಪುರ ಮಠದ ಸ್ವಾಮಿಯ ಪರಮಾಪ್ತನೆನ್ನಲಾದ ಗುರುಸ್ವಾಮಿಯನ್ನು ಆರ್‌ಎಸ್‌ಎಸ್ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಅವರ ಪಿಎ ಆಗಿ ನೇಮಿಸಿತ್ತೆನ್ನಲಾಗುತ್ತಿದೆ. ಬೇರುಮಟ್ಟದ ಜನಸಂಪರ್ಕವಿರುವ ಮಾಜಿ ಶಾಸಕ ಗೋಪಾಲಕೃಷ್ಣ ಹಾಲಪ್ಪರಿಗಿಂತ ಸಮರ್ಥ ಎಂಬ ಭಾವನೆ ಸಂಘಿಗಳಲ್ಲಿದ್ದು, ಅವರನ್ನೇ ಕ್ಯಾಂಡಿಡೇಟ್ ಮಾಡುವ ಬಿ-ಪ್ಲಾನ್ ಬಿಜೆಪಿಯಲ್ಲಿದೆ ಎಂಬ ಸುದ್ದಿಗಳೆದ್ದಿದೆ.

ಕಾಂಗ್ರೆಸ್ ಟಿಕೆಟ್ ಪಡೆಯಲು ಬೇಳೂರು ಗೋಪಾಲಕೃಷ್ಣ ಪ್ರಯತ್ನ ನಡೆಸಿದ್ದಾರೆ. ಆದರೆ ತಿಮ್ಮಪ್ಪರಿಗೆ ಅಳಿಯನ ಮೇಲಿನ ಸಿಟ್ಟಿನ್ನೂ ಕಡಿಮೆ ಆಗಿಲ್ಲ ಎಂಬ ಮಾತು ಕೇಳಿಬರುತ್ತಿದೆ. ತಿಮ್ಮಪ್ಪ ತಮ್ಮ ಮಗಳು ಡಾ.ರಾಜನಂದಿಯನ್ನು ಕ್ಯಾಂಡಿಡೇಟ್ ಮಾಡುವ ಯೋಚನೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದು ಲೆಕ್ಕಾಚಾರದಂತೆ ಈ ಬಾರಿ ತಾವೇ ಆಖಾಡಕ್ಕಿಳಿದು ಮಗಳನ್ನು ಜಿಲ್ಲಾ ಪಂಚಾಯ್ತಿ ಸದಸ್ಯೆ ಮಾಡುವ ತಂತ್ರಗಾರಿಕೆ ಹೆಣೆದಿದ್ದಾರೆನ್ನಲಾಗುತ್ತಿದೆ. ಕ್ಷೇತ್ರದಲ್ಲಿನ ಸದ್ಯದ ರಾಜಕೀಯ ರಾಸಾಯನಿಕ ಕ್ರಿಯೆ ಸೂಕ್ಷ್ಮವಾಗಿ ಅವಲೋಕಿಸಿದರೆ ಬಿಜೆಪಿ ನಿರ್ಣಾಯಕ ಮತದಾರರಾಗಿರುವ ಹವ್ಯಕರು ಹಾಲಪ್ಪರ ಬಗ್ಗೆ ಬೇಸರದಲ್ಲಿದ್ದಾರೆ; ಎಂಬತ್ತೊಂಬತ್ತರ ಇಳಿವಯಸ್ಸಿನಲ್ಲೂ ಕ್ಷೇತ್ರದಲ್ಲಿ ಓಡಾಡುತ್ತ ಜನರಿಗೆ ಸ್ಪಂದಿಸುವ ಕೆಲಸಗಾರ ತಿಮ್ಮಪ್ಪರ ಬಗ್ಗೆ ಸಿಂಪಥಿಯಿದೆ. ಹೀಗಾಗಿ ತಿಮ್ಮಪ್ಪ ಗೆಲ್ಲುವ ಸಂಭವ ಹೆಚ್ಚೆನ್ನಲಾಗುತ್ತಿದೆ.


ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮೂಲ್ಕಿ-ಮೂಡಬಿದಿರೆ: ಬಿಜೆಪಿ ಪಾಲಾಗಿರುವ ಹಳೆಯ ಕಾಂಗ್ರೆಸ್ ಕೋಟೆ! ಅದಲುಬದಲು ಸಾಧ್ಯವೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾರರ ಹೆಸರು ಕೈಬಿಟ್ಟ ಹಗರಣ; ಬಿಜೆಪಿ ಪಕ್ಷದ ಕೈವಾಡದ ಆರೋಪ

0
ಭಾರತದ ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸತ್‌ವರೆಗೆ ಹಲವು ಹಂತಗಳ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಜನಪ್ರತಿನಿಧಿಗಳನ್ನು ಮತದಾರರು ಆರಿಸುವುದಲ್ಲದೆ, ಆಳುವ ಸರ್ಕಾರಗಳನ್ನು ನಿರ್ಧರಿಸುತ್ತಾರೆ. ಈ ಚುನಾವಣಾ ವ್ಯವಸ್ಥೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕಾದದ್ದು...