Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮೂಲ್ಕಿ-ಮೂಡಬಿದಿರೆ: ಬಿಜೆಪಿ ಪಾಲಾಗಿರುವ ಹಳೆಯ ಕಾಂಗ್ರೆಸ್ ಕೋಟೆ! ಅದಲುಬದಲು ಸಾಧ್ಯವೇ?

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮೂಲ್ಕಿ-ಮೂಡಬಿದಿರೆ: ಬಿಜೆಪಿ ಪಾಲಾಗಿರುವ ಹಳೆಯ ಕಾಂಗ್ರೆಸ್ ಕೋಟೆ! ಅದಲುಬದಲು ಸಾಧ್ಯವೇ?

- Advertisement -
- Advertisement -

ಸಹ್ಯಾದ್ರಿ ತಪ್ಪಲು ಮತ್ತು ಅರಬ್ಬೀ ಕಡಲ ತಡಿಯ ನಡುವೆಯಿರುವ ಮೂಲ್ಕಿ-ಮೂಡಬಿದಿರೆ ವಿಧಾನಸಭಾ ಕ್ಷೇತ್ರ ತುಳುನಾಡಿನ ಬಹುಭಾಷಾ ಸಾಂಸ್ಕೃತಿಕ ಸೀಮೆ. ಅಹಿಂಸೆಯ ತತ್ವದರ್ಶದ ಜೈನ ಬಸದಿಗಳು ಹಾಗು ಸಹಿಷ್ಣುತೆ-ಸಾಮರಸ್ಯದ ಸಂಕೇತದಂತಿರುವ ಮುಸ್ಲಿಮ್ ವರ್ತಕ ಬಪ್ಪ ಬ್ಯಾರಿ ಕಟ್ಟಿಸಿದ ಹಿಂದೂ ದೇವತೆ ದುರ್ಗಾ ಪರಮೇಶ್ವರಿ ದೇಗುಲವಿರುವ, ವಿವಿಧತೆಯಲ್ಲಿ ಏಕತೆ-ಸೌಹಾರ್ದತೆ ಸಾರುವ ಮೂಲ್ಕಿ-ಮೂಡಬಿದಿರೆ ಈಗ ಕೇಸರಿ ಫ್ರಿಂಜ್ ಪಡೆಗಳ ಹಾವಳಿಗೆ ಸಿಲುಕಿ ದಿಕ್ಕೆಟ್ಟು ಹೋಗಿದೆ ಎಂಬುದು ಸಾಮಾನ್ಯ ಜನರ ಅಭಿಪ್ರಾಯ. ಮಂಗಳೂರು ತಾಲ್ಲೂಕಿನ ಹೋಬಳಿಗಳಾಗಿದ್ದ ಮೂಡಬಿದಿರೆ ಮತ್ತು ಮೂಲ್ಕಿಯನ್ನು ಈಚೆಗಷ್ಟೇ ಎರಡು ಪ್ರತ್ಯೇಕ ತಾಲೂಕುಗಳನ್ನಾಗಿ ಘೋಷಿಸಲಾಗಿದೆ. 2008ರ ಅಸೆಂಬ್ಲಿ ಚುನಾವಣೆ ಸಂದರ್ಭದಲ್ಲಿ ಮಾಡಲಾದ ಕ್ಷೇತ್ರಗಳ ಭೌಗೋಳಿಕ ಪನರ್ ರಚನೆ ಪ್ರಕ್ರಿಯೆಯಲ್ಲಿ ಪರಿಧಿ ಮಾರ್ಪಾಡಾಗಿರುವ ಮೂಲ್ಕಿ-ಮೂಡಬಿದಿರೆ ಕ್ಷೇತ್ರದ ರಾಜಕೀಯ ಚಹರೆಯೂ ಕೇಸರಿ ಮಿಶ್ರಿತವಾಗಿ ಬದಲಾಗಿದೆ.

ಇತಿಹಾಸ-ಸಂಸ್ಕೃತಿ-ಜೀವನಾಧಾರ

ಫಲ್ಗುಣಿ ಮೂಡಬಿದಿರೆ ಭಾಗದ ಜೀವ ನದಿಯಾದರೆ, ಮೂಲ್ಕಿ ಶಾಂಭವಿ ನದಿಯ ದಕ್ಷಿಣ ದಡದಲ್ಲಿದೆ. ಪ್ರಾಚೀನ ಕಾಲದಲ್ಲಿ ಈಗಿನ ಮೂಡಬಿದಿರೆ ಪ್ರದೇಶದಲ್ಲಿ ವಿಪುಲವಾಗಿ ಬಿದಿರು ಬೆಳೆಯುತ್ತಿದ್ದರಿಂದ ಮೂಡಬಿದ್ರಿ ಹೆಸರು ಬಂದಿದೆ ಎನ್ನಲಾಗುತ್ತಿದೆ. ತುಳುವಿನಲ್ಲಿ ’ಬೆದ್ರ’ ಎಂದು ಕರೆಯಲ್ಪಡುತ್ತಿರುವ ಮೂಡಬಿದ್ರಿ ಭಾಷಾ ಶಾಸ್ತ್ರದ ತರ್ಕದಂತೆ ಎರಡು ತುಳು ಶಬ್ದಗಳಿಂದ ವ್ಯುತ್ಪತ್ತಿಯಾಗಿದೆ. ಮೂಡ(ಪೂರ್ವ) ಮತ್ತು ಬಿದಿರು ಸೇರಿ ಮೂಡಬಿದಿರೆ ಬಳಕೆಗೆ ಬಂದಿದೆ ಎಂಬ ವಾದವಿದೆ. ಮೂಲ್ಕಿ ಹೆಸರಿನ ಬಗ್ಗೆ ಎರಡು-ಮೂರು ಸ್ಥಳನಾಮ ಪುರಾಣಗಳಿವೆ. ಮೊದಲಿನ ಮೂಲಿಕಾಪುರ ಕ್ರಮೇಣ ಮೂಲ್ಕಿಗೆ ತಿರುಗಿತೆನ್ನಲಾಗಿದೆ. ’ಮೂಲಿಕೆ’ ಶಬ್ದದಿಂದ ಮುಲ್ಕಿಯಾಗಿದೆ ಎಂಬ ಪ್ರತೀತಿ ಒಂದೆಡೆಯಾದರೆ, ’ಮುಲ್ಕ್’ ಎಂಬ ಉರ್ದು ಶಬ್ದವೆ ಮೂಲ್ಕಿಯ ಮೂಲವೆಂದು ಮತ್ತೊಂದು ಕತೆ ಹೇಳುತ್ತದೆ. ಭಕ್ತಿ ಪಂಥದ ಪ್ರತಿಪಾದಕ ಕನಕದಾಸರು 16ನೆ ಶತಮಾನದಲ್ಲಿ ಉಡುಪಿ ಸುತ್ತಮುತ್ತ ತಿರುಗಾಡುತ್ತಿದ್ದಾಗ ’ಮೋಲಲಂಕೆ’ ಎಂದು ಕರೆಯಲ್ಪಡುತ್ತಿದ್ದ ಸ್ಥಳಕ್ಕೆ ’ಮೂಲ್ಕಿ’ ಎಂದು ನಾಮಕರಣ ಮಾಡಿದರೆಂಬ ನಂಬಿಕೆಯೂ ಇದೆ.

’ದಕ್ಷಿಣದ ಜೈನ ಕಾಶಿ’ ಎಂಬ ಹೆಗ್ಗಳಿಕೆಯ ಮೂಡಬಿದಿರೆ ಮತ್ತು ತುಳುನಾಡಿನ ಸೌಹಾರ್ದತೆಯ ಹೆಗ್ಗುರುತು ಬಪ್ಪ ಬ್ಯಾರಿಯಿಂದ ಸ್ಥಾಪಿಸಲ್ಪಟ್ಟ ’ಬಪ್ಪನಾಡು ದುರ್ಗಾ ಪರಮೇಶ್ವರಿ’ ದೇವಾಲಯ ಇರುವ ಮೂಲ್ಕಿಯ ಬಹುಜನರ ಸಂವಹನದ ಪ್ರಮುಖ ಭಾಷೆ ತುಳು. ಕನ್ನಡ ಆಡಳಿತ ಭಾಷೆಯಷ್ಟೆ. ಕೊಂಕಣಿ, ಬ್ಯಾರಿ, ಉರ್ದು, ಕುಡುಬಿ, ಕೊರಗ ಭಾಷೆಗಳು ಎರಡೂ ಕಡೆಯಲ್ಲಿ ಕೇಳಿಬರುತ್ತದೆ. ತುಳುನಾಡಿನ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯ ಆತ್ಮಾರಾಧನೆ (ಭೂತಕೋಲ), ನಾಗಾರಾಧನೆ, ಆಟಿಕಳೆಂಜ, ಪಾಡ್ದನ, ಕಂಬಳ (ಕೆಸರುಗದ್ದೆಯಲ್ಲಿ ಕೋಣಗಳ ಓಡಿಸುವ ಸ್ಪರ್ಧೆ), ಕೋರಿಕಟ್ಟಾ (ಕೋಳಿ ಕಾಳಗ), ಯಕ್ಷಗಾನ ಮೂಲ್ಕಿ-ಮೂಡಬಿದಿರೆಯ ಜನಜೀವನದಲ್ಲಿ ಹಾಸುಹೊಕ್ಕಾಗಿದೆ.

16ನೇ ಶತಮಾನದಲ್ಲಿ ಮೂಡಬಿದಿರೆ ಜೈನ ರಾಜ ವಂಶದ-ಚೌಟರ ರಾಜಧಾನಿಯಾಗಿತ್ತು. 14-16ನೇ ಶತಮಾನದ ಅವಧಿಯಲ್ಲಿ ಮೂಡಬಿದಿರೆ ಜೈನ ಧರ್ಮ, ಸಂಸ್ಕೃತಿ, ಕಲೆ ಮತ್ತು ವಾಸ್ತುಶಿಲ್ಪದ ಕೇಂದ್ರವಾಗಿ ಹೊರಹೊಮ್ಮಿತ್ತು ಎಂದು ಇತಿಹಾಸ ಪುಟಗಳಲ್ಲಿ ದಾಖಲಾಗಿದೆ. ದಕ್ಷಿಣ ಕನ್ನಡದಲ್ಲಿ ಕೆರೆಗಳು ಅಪರೂಪ. ಆದರೆ ಮೂಡಬಿದಿರೆಯಲ್ಲಿ 18 ಕೆರೆಗಳಿವೆ; 18 ಜೈನ ಬಸದಿಗಳು, 18 ಹಿಂದು ದೇವಾಲಯಗಳು ಮತ್ತು ವಿವಿಧ ಹಳ್ಳಿಗಳನ್ನು ಜೋಡಿಸುವ 18 ರಸ್ತೆಗಳು ಮೂಡಬಿದಿರೆಯ ವಿಶೇಷ. ದೇಶಾದ್ಯಂತದ ಜೈನರ ಪವಿತ್ರ ಕ್ಷೇತ್ರವಾದ ಮೂಡಬಿದಿರೆಯಲ್ಲಿ ಹಿಂದೆ ಜೈನ ಧರ್ಮ ಪ್ರಬಲವಾಗಿತ್ತು.

ಈಗ ಶೇಕಡಾ ಮೂರೂವರೆಯಷ್ಟು ಜೈನ ಸಮುದಾಯವಿದೆ ಎನ್ನಲಾಗುತ್ತಿದೆ. ವಿಜಯನಗರ ಸಾಮ್ರಾಜ್ಯ ಶೈಲಿಯ ವೈವಿಧ್ಯಮಯ ಕುಸುರಿ ಕಲೆಯ ಶಿಲಾ ಕೆತ್ತನೆಗಳಿಂದ ಅಲಂಕರಿಸಲಾದ 1,000 ದೊಡ್ಡ ಕಂಬಗಳ, ಮೂರು ಅಂತಸ್ತ್ತಿನ ಭವ್ಯವಾದ ’ತ್ರಿಭುವನ ತಿಲಕ ಚೂಡಾಮಣಿ’ (ಸಾವಿರ ಕಂಬಗಳ) ಬಸದಿ ಮೂಡಬಿದಿರೆಯಲ್ಲಿದೆ. ಒಳಗೆ 2.5 ಮೀಟರ್ ಎತ್ತರದ ಚಂದ್ರಪ್ರಭ ತೀರ್ಥಂಕರ (ಚಂದ್ರನಾಥಸ್ವಾಮಿ) ಕಂಚಿನ ವಿಗ್ರಹವಿದೆ. ’ಧವಲ ಗ್ರಂಥ’ ಎಂದು ಕರೆಯಲಾಗುವ ಜೈನರ ಅಂಗೀಕೃತ ಪಠ್ಯಗಳು ಹಾಗು ಸಾಕ್ಷರತೆ ಮೌಲ್ಯದ ಐತಿಹಾಸಿಕ ತಾಳೆಗರಿ ಹಸ್ತಪ್ರತಿ ಸಂರಕ್ಷಿಸಿಡಲಾಗಿರುವ ಪ್ರಾಚೀನ ’ಗುರು ಬಸದಿ’, ಅಮ್ಮನವರ ಬಸದಿ, ಲೆಪ್ಪದ ಬಸದಿಗಳು ಮೂಡಬಿದಿರೆಯಲ್ಲಿರುವ ಬಸದಿಗಳಲ್ಲಿ ಪ್ರಮುಖವೆನಿಸಿವೆ.

ಬಂಡೆಯಿಂದ ನಿರ್ಮಿಸಲಾದ ವೆಂಕಟರಮಣ ದೇವಸ್ಥಾನ, ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನ, 16ನೇ ಶತಮಾನದಲ್ಲಿ ಪೋರ್ಚುಗೀಸರು ಕಟ್ಟಿದ ಇ ಗ್ರೇಜಾ-ಡ-ಸಾಂತಾ ಕ್ರೋಜ್ ಚರ್ಚ್ ಮೂಡಬಿದಿರೆಯಲ್ಲಿದ್ದರೆ, ಮೂಲ್ಕಿಯಲ್ಲಿರುವ ಸುಮಾರು 8ನೇ ಶತಮಾನದ್ದು ಎನ್ನಲಾಗುತ್ತಿರುವ ಬಪ್ಪನಾಡು ದುರ್ಗಾ ಪರಮೇಶ್ವರಿ ದೇವಸ್ಥಾನದ ನಿರ್ಮಾಣದ ಹಿಂದೊಂದು ಹಿಂದು-ಮುಸ್ಲಿಮ್ ಸಹಬಾಳ್ವೆಯ ಇತಿಹಾಸ-ಸಂದೇಶವಿದೆ. ಕೇರಳದ ಮುಸ್ಲಿಮ್ ವ್ಯಾಪಾರಿ ಬಪ್ಪ ಬ್ಯಾರಿ ಬೆಲೆ ಬಾಳುವ ವಸ್ತುಗಳನ್ನು ಹಡಗಿನಲ್ಲಿ ತುಂಬಿಕೊಂಡು ಉತ್ತರ ಕರಾವಳಿಯ ದೂರದ ಊರಿಗೆ ಹೊರಡುತ್ತಾರೆ; ಸಮುದ್ರದಲ್ಲಿ ಹಡಗು ಪ್ರತಿಕೂಲ ವಾತಾವರಣಕ್ಕೆ ಸಿಲುಕುತ್ತದೆ. ವೋಲಲಂಕೆ (ಮೂಲ್ಕಿ) ಬಂದರಿನಲ್ಲಿ ಲಂಗರು ಹಾಕಲು ಪ್ರಯತ್ನಿಸಿದರೆ ಸಾಧ್ಯವಾಗುವುದಿಲ್ಲ. ಸಕಲ ಧರ್ಮ ಸಹಿಷ್ಣುವಾದ ಬಪ್ಪ ಬ್ಯಾರಿ ಹತಾಶನಾಗಿ ನಮಾಜು ಮಾಡಿ ಮಲಗುತ್ತಾರೆ.

ಬಪ್ಪ ಬ್ಯಾರಿಯ ಕನಸಿನಲ್ಲಿ ಒಬ್ಬ ದೇವತೆ ಮೂಡಿ, “ನಾನು ದುರ್ಗೆ… ಇಡೀ ಜಗತ್ತಿಗೆ ದೇವರು ಒಂದೆ. ಹೆಸರು ಮಾತ್ರ ಹಲವು… ನೀನು ನನಗೊಂದು ಗುಡಿಯನ್ನು ಇಲ್ಲಿ (ಮೂಲ್ಕಿಯಲ್ಲಿ) ಕಟ್ಟಿಸು… ನಿನ್ನ ಸಮಸ್ಯೆ ಪರಿಹಾರವಾಗುತ್ತದೆ… ನಿನ್ನ ಹೆಸರು ಅಜರಾಮರವಾಗುತ್ತದೆ” ಎಂದು ಹೇಳಿ ಮಾಯವಾದಳಂತೆ. ದುರ್ಗಾ ಪರಮೇಶ್ವರಿಗೆ ದೇವಸ್ಥಾನ ಕಟ್ಟುವ ಹರೆಕೆ ಬಪ್ಪ ಬ್ಯಾರಿ ಹೊತ್ತ ನಂತರ ಹಡಗು ಸುರಕ್ಷಿತವಾಗಿ ದಡಕ್ಕೆ ತರಲು ಸಾಧ್ಯವಾಯಿತಂತೆ. ಬಪ್ಪ ಹರಕೆಯಂತೆ ದುರ್ಗೆಗೆ ಗುಡಿ ನಿರ್ಮಿಸುತ್ತಾರೆ. ಗುಡಿಯ ಸುತ್ತಲಿನ ಪ್ರದೇಶ ’ಬಪ್ಪನಾಡು’ ಎಂದು ಕರೆಯಲ್ಪಡುತ್ತದೆ. ಬ್ಯಾರಿ ಕಟ್ಟಿಸಿದ ಹಿಂದೂ ದೇವತೆಯ ಗುಡಿಯೀಗ ಕರಾವಳಿಯ ಸೌಹಾರ್ದದ ಸಂಕೇತವಾಗಿದೆ. ಧಾರ್ಮಿಕ ಮಹತ್ವದ ಯಾತ್ರಾ ಸ್ಥಳವಾಗಿರುವ ’ಬಪ್ಪನಾಡು ದುರ್ಗಾ ಪರಮೇಶ್ವರಿ ದೇವಸ್ಥಾನ’ಕ್ಕೆ ಲಕ್ಷಾಂತರ ರೂ ಆದಾಯವೂ ಬರುತ್ತಿದೆ. ಬಪ್ಪ ಬ್ಯಾರಿ ದುರ್ಗಾ ದೇವಳ ಕಟ್ಟಿಸಿದ ಕತೆ ಆಧರಿಸಿದ ಯಕ್ಷಗಾನ ಪ್ರಸಂಗ ಪ್ರಸಿದ್ಧವಾಗಿದೆ.

ಮೂಲ್ಕಿ ಮತ್ತು ಮೂಡಬಿದಿರೆ ಪೇಟೆಯಲ್ಲಿ ವಾಣಿಜ್ಯ-ವಹಿವಾಟು ಬೆಳೆದಿದೆ. ಜನರು ವ್ಯಾಪಾರ, ಕುಲಕಸುಬು ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಎರಡೂ ತಾಲೂಕಿನಲ್ಲಿ ಸಣ್ಣ-ಪುಟ್ಟ ಗೃಹ ಕೈಗಾರಿಕೆಗಳಿವೆ; ಗೋಡಂಬಿ ಸಂಸ್ಕರಣಾ ಘಟಕಗಳು ಮೂಡಬಿದಿರೆ ಬದಿಯಲ್ಲಿವೆ; ಬಜ್ಪೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಸುರತ್ಕಲ್-ಮೂಲ್ಕಿ ಗಡಿಯಲ್ಲಿ ಬಿಎಎಸ್‌ಎಫ್‌ನಂಥ ದೊಡ್ಡ ಕೈಗಾರಿಕೆಗಳಿದ್ದರೂ ಸ್ಥಳೀಯರಿಗೇನು ಪ್ರಯೋಜನವಾಗುತ್ತಿಲ್ಲ ಎನ್ನಲಾಗುತ್ತಿದೆ. ಮೂಲ್ಕಿ ಗ್ರಾಮೀಣ ಭಾಗದಲ್ಲಿ ಮೀನುಗಾರಿಕೆ, ಭತ್ತ, ತೆಂಗು, ಅಡಿಕೆ, ಮಲ್ಲಿಗೆ ವ್ಯವಸಾಯ ಬದುಕಿಗೆ ಆಧಾರವಾಗಿದೆ. ಮೂಡಬಿದಿರೆ ತಾಲೂಕಿನ ಆರ್ಥಿಕತೆಗೆ ಅಡಿಕೆ, ರಬ್ಬರ್ ತೋಟಗಳು ಮತ್ತು ಹೈನುಗಾರಿಕೆಯನ್ನು ಅವಲಂಬಿಸಲಾಗಿದೆ.

ಮೂಡಬಿದಿರೆ ಶಿಕ್ಷಣೋದ್ಯಮದ ಬಿಗ್ ಬಜಾರ್‌ನಂತಾಗಿದ್ದರೂ ಸ್ಥಳೀಯ ವಿದ್ಯಾರ್ಥಿ ಸಮೂಹಕ್ಕೆ ಫಾಯ್ದೆಯೇನಾಗುತ್ತಿಲ್ಲವೆಂಬ ಬೇಸರ ಮಡುಗಟ್ಟಿದೆ. ಡಾಕ್ಟರ್, ಇಂಜಿನಿಯರ್ ಮತ್ತಿತರ ವೃತ್ತಿಪರ ಕೋರ್ಸ್‌ಗಳಿಗೆ ಸೀಟು ಸಿಗಬೇಕೆಂದಿದ್ದರೆ ಮೂಡಬಿದಿರೆಯ ಹೆಸರಾಂತ ಸಂಸ್ಥೆಯಲ್ಲಿ ಪಿಯುಸಿ ಮಾಡಬೇಕೆಂಬ ಭ್ರಮೆ ರಾಜ್ಯದಾದ್ಯಂತ ಬಿತ್ತಲಾಗಿದೆ; ಎಸ್‌ಎಸ್‌ಎಲ್‌ಸಿಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದವರನ್ನಷ್ಟೇ ತಮ್ಮ ಪ್ರತಿಷ್ಠಿತವೆನ್ನಲಾಗುವ ಕಾಲೇಜಿಗೆ ಸೇರಿಸಿಕೊಳ್ಳುವ ಶಿಕ್ಷಣ ಉದ್ಯಮಿಗಳು, ಇವರಲ್ಲಿ ಕೆಲವೇ ಕೆಲವು ಐಕ್ಯೂ ಹೆಚ್ಚಿರುವ ಅಥವಾ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳು ಪಡೆದ ಅಧಿಕ ಅಂಕಗಳನ್ನು ಮತ್ತು ವೈದ್ಯಕೀಯ, ಇಂಜಿನಿಯರಿಂಗ್ ಸೀಟು ಪಡೆದ ವಿದ್ಯಾರ್ಥಿಗಳ ಸಾಧನೆಯನ್ನು ಮುಂದಿನ ವರ್ಷ ಹೊಸ ವಿದ್ಯಾರ್ಥಿಗಳನ್ನು ಸೆಳೆಯುವ ದಂಧೆಗೆ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಶೇ.50 ಅಂಕ ಪಡೆದವರನ್ನು ತಮ್ಮ ಸಂಸ್ಥೆಗೆ ಸೇರಿಸಿಕೊಂಡು ಅವರಿಂದ ಶೇ.90 ಮಾರ್ಕ್ ತೆಗೆಸಿ ಮೆಡಿಕಲ್, ಇಂಜಿನಿಯರಿಂಗೆ ಅಥವಾ ಮಹತ್ವದ ವೃತ್ತಿಪರ ಕೋರ್ಸುಗಳ ಸೀಟು ಪಡೆವಂತೆ ಮಾಡಿದರೆ ಈ ಶಿಕ್ಷಣ ಉದ್ಯಮಿಗಳು ಕಾಲೇಜು ಕಟ್ಟಿದ್ದು ಸಾರ್ಥಕವಾಗುತ್ತಿತ್ತು ಎಂದು ಹೆಸರು ಹೇಳಲಿಚ್ಛಿಸದ ಶಿಕ್ಷಣ ತಜ್ಞರೊಬ್ಬರು ’ನ್ಯಾಯಪಥ’ಕ್ಕೆ ತಿಳಿಸಿದರು.

’ಭರತೇಶ ವೈಭವ’ದ ಮೇರು ಕನ್ನಡ ಲೇಖಕ ರತ್ನಾಕರವರ್ಣಿ ಮೂಡುಬಿದಿರೆಯವರಾದರೆ, ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳಲ್ಲೊಬ್ಬರಾದ ಗಿರೀಶ್ ಕಾರ್ನಾಡ್, ಬಾಲ ವಿಧವೆಯರ, ಅಸಹಾಯಕ ಮಹಿಳೆಯರ, ದಲಿತರ ಶ್ರೇಯೋಭಿವೃದ್ಧಿ ಮತ್ತು ಮೂಢನಂಬಿಕೆ-ಸಾಮಾಜಿಕ-ಆರ್ಥಿಕ ಶೋಷಣೆ ವಿರುದ್ಧ ಹೋರಾಡಿದ ’ದಕ್ಷಿಣದ ಗಾಂಧಿ’ ಕಾರ್ನಾಡ ಸದಾಶಿವ ರಾವ್, ಬಾಲಿವುಡ್ ನಟ ಸುನಿಲ್ ಶೆಟ್ಟಿ, ವಿಜಯಾ ಬ್ಯಾಂಕ್ ಉನ್ನತಿಗೇರಿಸಿದ ಹೆಸರಾಂತ ಬ್ಯಾಂಕರ್ ಸುಂದರ್ ರಾಮ್ ಶೆಟ್ಟಿ, ಕೆನರಾ ಬ್ಯಾಂಕ್ ಮತ್ತು ಮಂಗಳೂರಿನ ಕೆನರಾ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಮ್ಮೆಂಬಳ ಸುಬ್ಬಾ ರಾವ್ ಪೈ ಮೂಲ್ಕಿಯವರು. ಕಟೀಲು, ಬಪ್ಪನಾಡು ಮುಂತಾದ ಯಕ್ಷಗಾನ ಮೇಳಗಳು ಪ್ರಸಿದ್ಧಿ ಪಡೆದಿವೆ.

ಚುನಾವಣಾ ಚಮತ್ಕಾರ

ಮೂಲ್ಕಿ-ಮೂಡಬಿದಿರೆ ಕ್ಷೇತ್ರ ರಚನೆಯಾಗಿದ್ದು 1962ರಲ್ಲಿ. ಮೊದಲ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿತ್ತು. ಸ್ವತಂತ್ರ ಪಕ್ಷದ ಗೋಪಾಲ ಸಾಲಿಯಾನ್ (10,431) 1932ರಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟ್ ಮಂಜಪ್ಪ ಉಳ್ಳಾಲ್‌ರನ್ನು (10,173) 258 ಮತಗಳಿಂದ ಸೋಲಿಸಿ ಶಾಸನಸಭೆಗೆ ಚುನಾಯಿತರಾಗಿದ್ದರು. 1967ರಲ್ಲೂ ಸ್ವತಂತ್ರ ಪಕ್ಷವೆ ಗೆದ್ದಿತ್ತು. ಆ ಪಾರ್ಟಿಯ ಕೆ.ಆರ್.ಶೆಟ್ಟಿ ಕಾಂಗ್ರೆಸ್‌ನ ಬಿ.ಜಿ.ದಾಸ್‌ರನ್ನು 1,814 ಮತದಿಂದ ಮಣಿಸಿ ಜಯಗಳಿಸಿದರು. ದೇವರಾಜ ಅರಸರ ಸಾಮಾಜಿಕ ನ್ಯಾಯ ರಾಜಕಾರಣದಲ್ಲಿ ಮೂಲ್ಕಿಯಲ್ಲಿ ವೈದ್ಯರಾಗಿದ್ದ ಹಿಂದುಳಿದ ಬಿಲ್ಲವ ಸಮುದಾಯದ ಡಾ.ದಾಮೋದರ ಮುಲ್ಕಿ ಕಾಂಗ್ರೆಸ್‌ನಲ್ಲಿ ಮುನ್ನಲೆಗೆ ಬರುತ್ತಾರೆ. ಅರಸು 1972ರಲ್ಲಿ ಡಾ.ದಾಮೋದರ ಮುಲ್ಕಿಯವರಿಗೆ ಕಾಂಗ್ರೆಸ್ ಟಿಕೆಟ್ ಕೊಡುತ್ತಾರೆ. ಕಾಂಗ್ರೆಸ್ ವಿಭಜನೆಯ ಆ ಸಂದರ್ಭದಲ್ಲಿ ಸಂಸ್ಥಾ ಕಾಂಗ್ರೆಸ್ ಕಡೆ ಗುರುತಿಸಿಕೊಂಡಿದ್ದ ಬಂಟ ವರ್ಗದ ಅಮರನಾಥ ಶೆಟ್ಟಿ ಎದುರಾಳಿಯಾಗುತ್ತಾರೆ. ಬಂಟ ಮತ್ತು ಬಿಲ್ಲವ ಪ್ರತಿಷ್ಠೆಯ ಜಿದ್ದಾಜಿದ್ದಿಯಲ್ಲಿ 12,394 ಮತದಂತರದಿಂದ ಕಾಂಗ್ರೆಸ್‌ನ ಡಾ.ಮುಲ್ಕಿ ಆಯ್ಕೆಯಾಗುತ್ತಾರೆ.

1978ರ ಚುನಾವಣೆಯಲ್ಲಿ ಮತ್ತೆ ಡಾ.ಮುಲ್ಕಿ ಹಾಗು ಅಮರನಾಥ ಶೆಟ್ಟಿ ಮುಖಾಮುಖಿ ಆಗುತ್ತಾರೆ. ಅವರ ಪಕ್ಷಗಳ ಹೆಸರಷ್ಟೆ ಬದಲಾಗಿರುತ್ತದೆ. ಡಾ.ಮುಲ್ಕಿ ಕಾಂಗೈ ಕ್ಯಾಂಡಿಡೇಟಾಗಿದ್ದರೆ, ಶೆಟ್ಟಿ ಜನತಾ ಪಕ್ಷದ
ಹುರಿಯಾಳು. ಪ್ರಬಲ ಹೋರಾಟ ನಡೆಸಿದ ಶೆಟ್ಟಿ 4,679 ಮತಗಳಿಂದ ಸೋಲುತ್ತಾರೆ. ಅರಸು-ಇಂದಿರಾ ನಡುವಿನ ಭಿನ್ನಾಭಿಪ್ರಾಯದಿಂದಾದ ಸ್ಥಿತ್ಯಂತರದಲ್ಲಿ ಡಾ.ಮುಲ್ಕಿ ಅರಸು ಸಂಗಡ ಉಳಿದುಕೊಳ್ಳುತ್ತಾರೆ. ಕೊನೆಯ ಹೊತ್ತಲ್ಲಿ ಅರಸು ಡಾ.ಮುಲ್ಕಿಯವರನ್ನು ಮಂತ್ರಿಯೂ ಮಾಡುತ್ತಾರೆ. ಬಂಗಾರಪ್ಪ-ನಜೀರ್‌ಸಾಬ್‌ರಿದ್ದ ಕ್ರಾಂತಿ ರಂಗದಲ್ಲಿ ಡಾ.ಮುಲ್ಕಿ ಗುರುತಿಸಿಕೊಂಡದ್ದರಿಂದ 1983ರ ಚುನಾವಣೆಯಲ್ಲಿ ಕ್ಷೇತ್ರದ ಪ್ರಬಲ ಬಿಲ್ಲವ ಕೋಮಿನ ಡಿ.ಡಿ.ಕಟ್ಟೆಮಾರ್‌ಗೆ ಕಾಂಗ್ರೆಸ್ ಟಿಕೆಟ್ ಸಿಗುತ್ತದೆ. ಸ್ವಜಾತಿ ಬಂಟ ಹಾಗು ಕ್ಷೇತ್ರದ ನಿರ್ಣಾಯಕ ಸಮುದಾಯವಾದ ಕ್ರಿಶ್ಚಿಯನ್ನರ ಮತಗಳನ್ನು ಏಕಗಂಟಲ್ಲಿ ಪಡೆದ ಜನತಾ ಪಕ್ಷದ ಶೆಟ್ಟಿಗೆ, ಬಂಗಾರಪ್ಪರ ಪ್ರಭಾವದಿಂದ ಬಿಲ್ಲವರ ಮತದಲ್ಲಿ ಸಣ್ಣ ಪಾಲೂ ಸಿಕ್ಕಿದ್ದು ಸೇರಿ 4,757 ಮತದಂತರದ ಗೆಲುವು ಸಾಧ್ಯವಾಯಿತೆಂದು ರಾಜಕೀಯ ಪಡಸಾಲೆಯಲ್ಲಿ ಲೆಕ್ಕಾಚಾರಗಳಿವೆ.

ಅಮರನಾಥ ಶೆಟ್ಟಿ

ನಿವೃತ್ತ ಶಿಕ್ಷಕರಾಗಿದ್ದ ಸೋಮಪ್ಪ ಸುವರ್ಣ 1985ರ ನಡುಗಾಲ ಚುನಾವಣೆಯಲ್ಲಿ ಕಾಂಗ್ರೆಸ್ ಉಮೇದುವಾರರಾಗಿ ಜನತಾ ಪಕ್ಷದ ಅಮರನಾಥ ಶೆಟ್ಟರ ಎದುರು ನಿಲ್ಲುತ್ತಾರೆ. ಕ್ಷೇತ್ರದ ಪ್ರಥಮ
ಬಹುಸಂಖ್ಯಾತ ಬಿಲ್ಲವ ಜಾತಿಯ ಸೋಮಪ್ಪ ಸುವರ್ಣರನ್ನು (27,075) ಸಣ್ಣ ಅಂತರದಲ್ಲಿ(1,608) ಸೋಲಿಸಿ ಅಮರನಾಥ ಶೆಟ್ಟಿ (28,683) ಎರಡನೆ ಸಲ ಶಾಸಕರಾಗಿ ಆಯ್ಕೆಯಾಗುತ್ತಾರೆ. ರಾಮಕೃಷ್ಣ ಹೆಗಡೆ ತಮ್ಮ ಸರಕಾರದಲ್ಲಿ ಶೆಟ್ಟರನ್ನು ಮಂತ್ರಿ ಮಾಡುತ್ತಾರೆ. ಆದರೆ ಜನತಾದಳದ ಅಭ್ಯರ್ಥಿಯಾದ ಮಂತ್ರಿ ಶೆಟ್ಟರಿಗೆ 1989ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸೋಮಪ್ಪ ಸುವರ್ಣರನ್ನು ಸೋಲಿಸಲು ಆಗಲಿಲ್ಲ. 5,448 ಮತಗಳಿಂದ ಸುವರ್ಣ ಶಾಸಕರಾಗಿ ಆಯ್ಕೆಯಾದರು. 1994ರ ಇಲೆಕ್ಷನ್ ಬರುವ ಹೊತ್ತಿಗೆ ಎಮ್ಮೆಲ್ಲೆ ಸೋಮಪ್ಪ ಸುವರ್ಣ ಕಾಂಗ್ರೆಸ್ ಮತ್ತು ಜನರ ನಡುವೆ ವರ್ಚಸ್ಸು ಕಳೆದುಕೊಂಡಿದ್ದರು. ವಯೋಸಹಜ ನಿರುತ್ಸಾಹ, ಅಸಹನೆಗಳಿಂದ ಆಂಟಿ ಇನ್‌ಕಂಬೆನ್ಸ್ ಶುರುವಾಗಿತ್ತು. ಹೀಗಾಗಿ ಜನತಾ ದಳದ ಅಮರನಾಥ ಶೆಟ್ಟಿ (33,319) ದೊಡ್ಡ ಅಂತರದಲ್ಲಿ (13,699) ಕಾಂಗ್ರೆಸ್‌ನ ಸೋಮಪ್ಪ ಸುವರ್ಣರನ್ನು (19,620) ಪರಾಭವಗೊಳಿಸಿ ಮೂರನೆ ಬಾರಿ ಶಾಸಕರಾಗಿ ಚುನಾಯಿತರಾದರು.

ಅಭಯರ ಏರಿಳಿತ

ಮುಖ್ಯಮಂತ್ರಿಯಾಗಿದ್ದ ವೀರಪ್ಪ ಮೊಯ್ಲಿ ಮತ್ತವರ ಕುಟುಂಬದ ನಿಕಟ ಒಡನಾಟ ಸಾಧಿಸಿದ್ದರೆನ್ನಲಾಗುತ್ತಿರುವ ಅಲ್ಪಸಂಖ್ಯಾತ ಜೈನ್ ಸಮುದಾಯದ ಅಭಯಚಂದ್ರ ಜೈನ್ 1990ರ ದಶಕದಲ್ಲಿ ಮೂಡಬಿದಿರೆ ಕಾಂಗ್ರೆಸ್ ಚಟುವಟಿಕೆಯಲ್ಲಿ ಮುನ್ನಲೆಗೆ ಬರತೊಡಗಿದ್ದರು. ಖಾಸಗಿ ಸಾರಿಗೆ ಬಸ್ ಉದ್ಯಮಿ ಅಭಯ್ ಮೊಯ್ಲಿ ಬೆಂಬಲದಿಂದ ಎರಡೆರಡು ಸಾರಿ ವಿಧಾನಪರಿಷತ್‌ಗೆ ಕಳಿಸಲ್ಪಟ್ಟಿದ್ದರು. ಎರಡನೆ ಸಲದ ಅವಧಿ ಮುಗಿವ ಮುನ್ನವೆ ವಿಧಾನಸಭಾ ಚುನಾವಣೆಗೆ (1999) ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿದ್ದರು. ಮೂರು ಸಾವಿರ ಮತದಾರರೂ ಇರದ ಜೈನ ಸಮುದಾಯದ ಅಭಯ್‌ರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ದು ಅಂದು ಅಚ್ಚರಿ ಮತ್ತು ಕದನ ಕುತೂಹಲಕ್ಕೆ ಕಾರಣವಾಗಿತ್ತು. ದೇವೇಗೌಡ-ರಾಮಕೃಷ್ಣ ಹೆಗಡೆ ನಡುವಿನ ಮೇಲಾಟದಲ್ಲಿ ಜನತಾ ದಳ ವಿಭಜನೆಯಾದಾಗ ಅಮರನಾಥ ಶೆಟ್ಟಿ ’ಗುರು’ ಹೆಗಡೆ ಬಣವಿದ್ದ ಜೆಡಿಯುನಲ್ಲಿ ಗುರುತಿಸಿಕೊಂಡಿದ್ದರು. ಹಳೆ ಹುಲಿ ಅಮರನಾಥ ಶೆಟ್ಟರೆ ಗೆಲ್ಲುತ್ತಾರೆಂಬ ನಿರೀಕ್ಷೆಯಿತ್ತಾದರೂ, ಅಭಯ್ 4,190 ಮತಗಳ ಅಂತರದಿಂದ ಗೆದ್ದು ಅಸೆಂಬ್ಲಿಗೆ ಪ್ರವೇಶ ಪಡೆದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂಲ್ಕಿ-ಮೂಡಬಿದಿರೆ ಮಾತ್ರ 2018ರವರೆಗೆ ’ಕಮಲ’ ಅರಳದ ಕ್ಷೇತ್ರವಾಗಿತ್ತು. ಜಿಲ್ಲೆಯ ಉಳಿದೆಲ್ಲ ಕ್ಷೇತ್ರಗಳಲ್ಲಿ ಒಂದಲ್ಲ ಒಂದು ಬಾರಿ ಗೆದ್ದಿದ್ದ ಸಂಘ ಪರಿವಾರಕ್ಕೆ ಮೂಡಬಿದಿರೆಯಲ್ಲಿ ಮಾತ್ರ ಕೇಸರಿ ಬಾವುಟ ಹಾರಿಸಲು ಸಾಧ್ಯವಾಗಿರಲಿಲ್ಲ. ಜಾತಿ ಲೆಕ್ಕಾಚಾರ ಹಾಕಿ ಬಹುಸಂಖ್ಯಾತ ಬಿಲ್ಲವರಿಗೆ ಬಿಜೆಪಿ ಹೆಚ್ಚು ಅವಕಾಶ ಕೊಟ್ಟಿತು. ಒಟ್ಟ್ಟು 2,00,066 ಸಾವಿರ ಮತದಾರರು ಕಳೆದ ಚುನಾವಣೆಯಲ್ಲಿದ್ದ ಮೂಲ್ಕಿ-ಮೂಡಬಿದಿರೆ ಕ್ಷೇತ್ರದಲ್ಲಿ ಬಿಲ್ಲವರು 50 ಸಾವಿರ, ಬಂಟರು 30 ಸಾವಿರ, ಕ್ಯಾಥಲಿಕ್ ಕ್ರೈಸ್ತರು 30 ಸಾವಿರ, ಮುಸ್ಲಿಮರು 18 ಸಾವಿರ, ಮೊಗವೀರರು 15 ಸಾವಿರ, ಸಣ್ಣ-ಪುಟ್ಟ ಸಂಖ್ಯೆಯ ಒಬಿಸಿಗಳು, ದಲಿತರು, ಕುಡುಬಿಗಳಂಥ ಗುಡ್ಡಗಾಡು ಜನಾಂಗವಿದೆಯೆಂದು ಅಂದಾಜಿಸಲಾಗಿದೆ.

2004ರಲ್ಲಿ ಕಾಂಗ್ರೆಸ್‌ನ ಅಭಯ್ ಎರಡನೆ ಬಾರಿ ಆಖಾಡಕ್ಕಿಳಿದಾಗಲೂ ಅಮರನಾಥ ಶೆಟ್ಟರೆ ಎದುರಾಳಿ. ಆದರೆ ಆಗವರು ಜೆಡಿಎಸ್‌ನ ಕ್ಯಾಂಡಿಡೇಟಾಗಿದ್ದರು. ಕಾಂಗ್ರೆಸ್‌ನ ಅಭಯ್(29,926), ಜೆಡಿಎಸ್‌ನ ಅಮರನಾಥ ಶೆಟ್ಟಿ (26,977), ಬಿಜೆಪಿ ಎಂ.ಎಸ್.ಕೋಟ್ಯಾನ್ (23,788) ನಡುವೆ ತ್ರಿಕೋನ ಕಾಳಗ ನಡೆದಿತ್ತು. ಈ ತುರುಸಿನ ಹೋರಾಟದಲ್ಲಿ ಕಾಂಗ್ರೆಸ್‌ನ ಅಭಯ್ 2,949 ಮತದಂತರದಿಂದ ಗೆಲುವು ಕಂಡರು. 2004ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಜಿಪಂ ಸದಸ್ಯರಾಗಿದ್ದ ಕೆ.ಪಿ.ಜಗದೀಶ ಅಧಿಕಾರಿ ಮಾಡಿದ ಪ್ರಯತ್ನ ಕೈಗೂಡಿರಲಿಲ್ಲ. ಆ ನಂತರ ಶಾಸಕ ಅಭಯ್‌ರ ಮೇಲೆ ಮುನಿಸಿಕೊಂಡು ಜೈನ್ ಸಮುದಾಯದ ಅಧಿಕಾರಿ ಬಿಜೆಪಿ ಸೇರಿ 2008ರಲ್ಲಿ ಆ ಪಕ್ಷದ ಅಭ್ಯರ್ಥಿಯೂ ಆದರು. 34,841 ಮತ ಅಧಿಕಾರಿ ಪಡೆದರಾದರೂ, ಅಭಯ್‌ರನ್ನು (44,744) ಸೋಲಿಸಲಾಗಲಿಲ್ಲ. 2013ರಲ್ಲಿ ಬಿಜೆಪಿ ಮಂಗಳೂರು ಮೂಲದ ಬಿಲ್ಲವ ಜಾತಿಯ ಉಮಾನಾಥ ಕೋಟ್ಯಾನ್‌ರನ್ನು ತಂದು ಅಖಾಡಕ್ಕಿಳಿಸಿತು. ಅಭಯ್-ಕೋಟ್ಯಾನ್-ಅಮರನಾಥ ಶೆಟ್ಟರಲ್ಲಿ ಪ್ರಬಲ ಪೈಪೋಟಿ ಏರ್‍ಪಟ್ಟಿತ್ತು. ಅಭಯ್ ನಿಕಟ ಪ್ರತಿಸ್ಪರ್ಧಿ ಬಿಜೆಪಿಯ ಉಮಾನಾಥ ಕೋಟ್ಯಾನ್‌ರನ್ನು (48,630) 4,550ಮತಗಳಿಂದ ಸೋಲಿಸಿ ಚುನಾಯಿತರಾದರು.

ಅಭಯಚಂದ್ರ ಜೈನ್

ಸತತ ನಾಲ್ಕು ಬಾರಿ ಶಾಸಕನಾಗಿದ್ದ ಕಾಂಗ್ರೆಸ್‌ನ ಅಭಯ್ ಸಮಸ್ಯೆಗಳಿಗೆ ಸ್ಪಂದಿಸದಿರುವ, ಜನರೊಂದಿಗೆ ಒರಟಾಗಿ ವರ್ತಿಸುವ ಸ್ವಭಾವದಿಂದ ಕ್ಷೇತ್ರದಲ್ಲಿ ಸಾವಕಾಶವಾಗಿ ಮಂಕಾದರೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಸಿದ್ದರಾಮಯ್ಯ ಸರಕಾರದಲ್ಲಿ ಕೆಲಕಾಲ ಮಂತ್ರಿಯಾಗಿದ್ದ ಅಭಯ್ ಜನರ ನಿರೀಕ್ಷೆಯ ಮಟ್ಟಕ್ಕೆ ಕೆಲಸ ಮಾಡಲಿಲ್ಲ. ಕ್ಷೇತ್ರದಲ್ಲಿದ್ದ ಅಭಯರ ಮೇಲಿನ ಅಸಮಾಧಾನ ಬಿಜೆಪಿಯ ಮತೀಯ-ವಿಭಜಕ ರಾಜಕಾರಣಕ್ಕೆ ಸಹಕಾರಿಯಾಗಿ ಪರಿಣಮಿಸಿತೆಂಬ ಅಭಿಪ್ರಾಯ ಕೇಳಿಬರುತ್ತಿದೆ. 2018ರಲ್ಲಿ ಕರಾವಳಿಯಲ್ಲಾದ ಪ್ರಬಲ ಮತೀಯ ಮತ ಧ್ರುವೀಕರಣಕ್ಕಿಂತ ಮಿಗಿಲಾಗಿ ಮೂಡಬಿದಿರೆ ಕ್ಷೇತ್ರದಲ್ಲಿ ಶಾಸಕ ಅಭಯ್ ಬಗೆಗಿನ ಜನಾಕ್ರೋಶ, ಭಜರಂಗ ದಳದ ಹುಡುಗ ಪ್ರಶಾಂತ ಪೂಜಾರಿ ಕೊಲೆಯ ನಂತರದ ಪರಿಸ್ಥಿತಿ ನಿಭಾಯಿಸಲಾಗದೆ ಅಭಯ್ ಎಡವಿದ್ದು ಮತ್ತು ಅಭಯರ ಪ್ರತಿ ಗೆಲುವಿನಲ್ಲೂ ಪ್ರಮುಖ ಪಾತ್ರವಾಡುತ್ತಿದ್ದ ಜೆಡಿಎಸ್‌ನ ಅಮರನಾಥ ಶೆಟ್ಟರು ಪಡೆಯುತ್ತಿದ್ದ 20-25 ಸಾವಿರ ಮತಗಳು (ಶೆಟ್ಟಿ ಸ್ಪರ್ಧಿಸದಿದ್ದರಿಂದ) ಬಿಜೆಪಿಯತ್ತ ಸರಿದಿದ್ದರಿಂದ ಕಾಂಗ್ರೆಸ್ ತನ್ನ ಪ್ರಬಲ ಕೋಟೆಯನ್ನು ಬಿಜೆಪಿಗೆ ಬಿಟ್ಟುಕೊಡಬೇಕಾಗಿ ಬಂದಿತೆಂಬ ಚುನಾವಣಾ ವಿಶ್ಲೇಷಣೆಗಳು ಕ್ಷೇತ್ರದಲ್ಲಿವೆ. ಅಭಯ್ ದೊಡ್ಡ ಮತದಂತರದಿಂದ (29,799) ಸೋತರು; ಮೊದಲ ಬಾರಿ ಕೇಸರಿ ಬಾವುಟ ಮೂಲ್ಕಿ-ಮೂಡಬಿದಿರೆಯಲ್ಲಿ ಹಾರಾಡಿತು!

ಕ್ಷೇತ್ರದ ಕತೆ-ವ್ಯಥೆ!

ಮೂಲ್ಕಿ-ಮೂಡಬಿದಿರೆಗೆ ವಲಸೆ ಬಂದು ಶಾಸಕನಾಗಿರುವ ಉಮಾನಾಥ ಕೋಟ್ಯಾನ್‌ಗೆ ಕ್ಷೇತ್ರದ ಭೌಗೋಳಿಕ ಉದ್ದಗಲ, ಸಾಮಾಜಿಕ-ಆರ್ಥಿಕ ಪರಿಸ್ಥಿತಿ, ಕ್ಷೇತ್ರದ ಬೇಕು-ಬೇಡಗಳ ಅರಿವಿಲ್ಲದಿರುವುದರಿಂದ ಯೋಜನಾಬದ್ಧ ಅಭಿವೃದ್ಧಿ ಆಗುತ್ತಿಲ್ಲ ಎಂಬ ಆಕ್ಷೇಪ ಕೇಳಿಬರುತ್ತಿದೆ. ಸಂಘ ಶ್ರೇಷ್ಠರು ಮಂಗಳೂರಿನ ಕಾವೂರಿಂದ ರಫ್ತು ಮಾಡಿರುವ ಶಾಸಕ ಕೋಟ್ಯಾನ್ ಧರ್ಮಕಾರಣದ ಲೆಕ್ಕಾಚಾರ ಹಾಕಿ ರಸ್ತೆ, ದೈವಸ್ಥಾನ-ದೇವಸ್ಥಾನಕ್ಕೆ ಅನುದಾನ ಹಂಚುತ್ತಿದ್ದಾರೆ ವಿನಃ ಸಮಷ್ಟಿಯ ದೃಷ್ಟಿಕೋನದಿಂದ ಕೆಲಸ-ಕಾಮಗಾರಿ ಮಾಡುತ್ತಿಲ್ಲವೆಂಬುದು ಸಾಮಾನ್ಯ ಅಭಿಪ್ರಾಯವಾಗಿದೆ. ಶಾಸಕರ ಕಾರ್ಯವೈಖರಿ ಕುರಿತು ಜನಸಾಮಾನ್ಯರಿಗಷ್ಟೆ ಅಲ್ಲ, ಬಿಜೆಪಿಯಲ್ಲೂ ಅಸಮಾಧಾನವಿದೆ ಎನ್ನಲಾಗುತ್ತಿದೆ.

ರಸ್ತೆ-ಕುಡಿಯುವ ನೀರು-ಶಿಕ್ಷಣ-ಆರೋಗ್ಯದಂಥ ಮೂಲಸೌಕರ್ಯಗಳೇ ಇಲ್ಲದ ಹಳ್ಳಿಗಳು ಎರಡೂ ತಾಲೂಕಲ್ಲಿದೆ. ಹೊಂಡ ಬಿದ್ದು ಜನ-ಜಾನುವಾರು ತಿರುಗಾಡಲು ಆಗದಂತಾಗಿರುವ ರಸ್ತೆಗಳಲ್ಲಿ ಗ್ರಾಮಸ್ಥರು ಬಾಳೆಗಿಡ ನೆಟ್ಟು ಪ್ರತಿಭಟಿಸಿದ್ದೂ ಆಗಿದೆ. ಹಳ್ಳಿಗಳಲ್ಲಿ ಕಲಿಯುವ ಮಕ್ಕಳಿಗೆ ಜೂನಿಯರ್ ಕಾಲೇಜು, ಪಟ್ಟಣದಲ್ಲಿ ಪ್ರಥಮ ದರ್ಜೆ ಕಾಲೇಜು ಬೇಕಾಗಿದೆ; ಮೂಲ್ಕಿ-ಸುರತ್ಕಲ್ ಸರಹದ್ದಿನಲ್ಲಿ ದೊಡ್ಡ ಕಾರ್ಖಾನೆಗಳಿವೆಯಾದರೂ ಸ್ಥಳೀಯರಿಗೆ ಉದ್ಯೋಗಾವಕಾಶವಿಲ್ಲ; ಹೊರ ರಾಜ್ಯದವರೆ ಅಲ್ಲಿ ತುಂಬಿದ್ದಾರೆ. ಇದನ್ನು ಸರಿಪಡಿಸಿ ಇಲ್ಲಿಯ ಯುವಸಮುದಾಯಕ್ಕೆ ಕೆಲಸ ಕೊಡಿಸುವುದಾಗಿ ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದ್ದು ಬರೀ ಸುಳ್ಳಾಗಿದೆ. ಆಕರ್ಷಕ ಬಸದಿಗಳು, ಸಾವಿರಾರು ಜನರು ಬಂದುಹೋಗುವ ಕಟೀಲು ಮತ್ತು ಬಪ್ಪನಾಡು ಯಾತ್ರಾ ಸ್ಥಳಗಳು, ಕಡಲ ಕಿನಾರೆಯಿರುವ ಮೂಡಬಿದಿರೆ ಮತ್ತು ಮೂಲ್ಕಿಯಲ್ಲಿ ಪ್ರವಾಸೋದ್ಯಮ ಬೆಳೆಸಿದರೆ ಒಂದಿಷ್ಟು ದುಡಿಯುವ ಕೈಗಳಿಗಾದರೂ ಕೆಲಸ ದೊರಕುತ್ತಿತ್ತು; ಮೂಡಬಿದಿರೆ ಪಟ್ಟಣದ ಮಾರುಕಟ್ಟೆ ಮತ್ತು ಒಳಚರಂಡಿ ಕಾಮಗಾರಿ ಮುಗಿಸುವ ಯೋಚನೆ ಅಧಿಕಾರಸ್ಥರಿಗೆ ಇದ್ದಂತಿಲ್ಲ. ಮುಖ್ಯಮಂತ್ರಿಗಳನ್ನು ಕರೆಸಿ ತಾಲೂಕು ಆಡಳಿತ ಸೌಧ ಉದ್ಘಾಟನೆ ಮಾಡಿಸಲಾಗಿದೆಯಾದರೂ ಅಲ್ಲಿಗಿನ್ನೂ ಸರಕಾರಿ ಕಚೇರಿಗಳನ್ನು ವರ್ಗಾಯಿಸದೆ ಜನರು ಪರದಾಡುವಂತಾಗಿದೆ. ಮೂಲ್ಕಿ ಇನ್ನೂ ಪೂರ್ಣ ಪ್ರಮಾಣದ ತಾಲೂಕಾಗದೆ ಜನರು ತೊಂದರೆ ಪಡುತ್ತಿದ್ದಾರೆ; ಬಡ ನಿವೇಶನ ರಹಿತರಿಗೆ-ಮನೆ ಇಲ್ಲದವರಿಗೆ ಜಾಗ-ಹಕ್ಕುಪತ್ರ ಸಿಗುತ್ತಿಲ್ಲ; ಮೂಡಬಿದಿರೆ ಅಭಿವೃದ್ಧಿ ಪ್ರಾಧಿಕಾರ (ಮೂಡಾ) ಅವ್ಯವಹಾದ ಅಡ್ಡೆಯಂತಾಗಿದೆ ಎಂದು ಜನರು ಹತಾಶೆಯಿಂದ ಸಮಸ್ಯೆಗಳ ಉದ್ದ ಪಟ್ಟಿಯೇ ಮಾಡುತ್ತಾರೆ!

ಕ್ಷೇತ್ರದಲ್ಲಿ ಹಾವಳಿ ಎಬ್ಬಿಸಿರುವ ಅಕ್ರಮ ಇಸ್ಪೀಟ್ ಅಡ್ಡೆಗಳನ್ನು ಬಂದ್ ಮಾಡಿಸುವಂತೆ ಜನರು ಆಗ್ರಹಿಸುತ್ತಲೆ ಇದ್ದಾರೆ. ಪುಚ್ಚೇರಿ ನದಿಯ ಮರಳು-ಕೆಂಪು ಕಲ್ಲು-ಶಿಲೆ ಕಲ್ಲು ಕಳ್ಳಸಾಗಾಣಿಕೆ ಶಾಸಕರ ಪರಮಾಪ್ತನೊಬ್ಬನ ಉಸ್ತುವಾರಿಯಲ್ಲಿ ನಡೆಯುತ್ತಿದೆ; ಶಾಸಕರ ಇನ್ನೋರ್ವ ಸಹಚರನ ಬಿಮಲ್ ಕನ್‌ಸ್ಟ್ರಕ್ಷನ್ ಕಂಪನಿಗೆ ಮಾತ್ರ ದೊಡ್ಡ ಕಂಟ್ರಾಕ್ಟ್‌ಗಳು ಸಿಗುತ್ತಿದ್ದು ಈ ಕಾಮಗಾರಿಗಳು ಕಳಪೆಯಾಗಿವೆ; ಶಾಸಕರು ರಿಯಲ್ ಎಸ್ಟೇಟ್ ಮತ್ತು ಕಂಟ್ರಾಕ್ಟರ್‍ಸ್ ಲಾಬಿ ಪೋಷಿಸಿದ್ದಾರೆ ಎಂಬ ಆರೋಪಗಳು ಪಕ್ಷ-ಪಂಗಡದ ಮುಲಾಜಿಲ್ಲದೆ ಜೋರಾಗಿ ಕೇಳಿಬರುತ್ತಿದೆ. ಬಳ್ಕುಂಜೆ ಎಂಬಲ್ಲಿ ಉದ್ದೇಶಿತ ಕೈಗಾರಿಕಾ ವಲಯ ಸ್ಥಾಪನೆಯಿಂದ ತಮ್ಮ ಬದುಕಿಗಾಧಾರವಾದ ಕೃಷಿ ನಷ್ಟವಾಗುತ್ತದೆ ಎಂದು ಆ ಭಾಗದ ರೈತರು ಶಾಸಕರಲ್ಲಿ ಅಲವತ್ತುಕೊಳ್ಳುತ್ತಿದ್ದಾರೆ.

ನಳಿನ್‌ಕುಮಾರ್ ಕಟೀಲ್

ಕಡಂದಲೆಯಲ್ಲಿ 400 ಕೋಟಿಯ ಪವರ್ ಸಬ್ ಸ್ಟೇಷನ್ ಸ್ಥಾಪನೆಗೆ ಪ್ಲಾನು ಹಾಕಲಾಗಿದ್ದು, ಸದರಿ ಯೋಜನೆಯ ವಿದ್ಯುತ್ ವಾಹಕ ತಂತಿಗಳು ಹಾದುಹೋಗುವ ದಾರಿಯುದ್ದಕ್ಕೂ ವ್ಯವಸಾಯಕ್ಕೆ ಹಾನಿಯಾಗುತ್ತದೆಂಬ ಕೂಗೆದ್ದಿದೆ. ಜನರ ಜೀವನ ಮಟ್ಟ ಸುಧಾರಿಸುವ ಅಭಿವೃದ್ಧಿಗಿಂತ ಜನರನ್ನು ದಿಕ್ಕು ತಪ್ಪಿಸಿ ದಂಡಿಯಾಗಿ ಓಟು ತರುವ ಧರ್ಮಕಾರಣದ ಪ್ರಗತಿಯೆ ಆಳುವವರಿಗೆ ಮುಖ್ಯವಾಗಿದೆಯೆಂದು ಪ್ರಜ್ಞಾವಂತರು ಕಳವಳಿಸುತ್ತಾರೆ.

ಕೇಸರಿ ಕುದುರೆ ಯಾರು?

ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ 2023ರ ಅಸೆಂಬ್ಲಿ ಚುನಾವಣೆಗೆ ರಂಗತಾಲೀಮು ನಿಧಾನಕ್ಕೆ ನಡೆಯತೊಡಗಿದೆ. ಕಳೆದ ಚುನಾವಣೆ ಹೊತ್ತಲ್ಲಿ ಕ್ಷೇತ್ರದಲ್ಲಾಗಿದ್ದ ಕಮ್ಯುನಲೀಕರಣ ಹಾಗು ಜೆಡಿಎಸ್‌ನ ಅಮರನಾಥ ಶೆಟ್ಟಿ ಸ್ಪರ್ಧೆಗೆ ಇಳಿಯದಿರುವ ನಿರ್ಧಾರ ತನ್ನ ಸೋಲಿಗೆ ಹೇತುವಾಗುತ್ತದೆಂದು ಖಾತ್ರಿಯಾಗಿದ್ದು ಅಂದಿನ ಕಾಂಗ್ರೆಸ್ ಶಾಸಕ ಅಭಯಚಂದ್ರ ಜೈನ್ ಟಿಕೆಟ್ ಕೇಳದಿರಲು ಕಾರಣವಾಗಿತ್ತು ಎನ್ನಲಾಗುತ್ತಿದೆ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಗೆ ಅಭ್ಯರ್ಥಿ ಮಾಡಲು ಅಭಯ್ ಹೈಕಮಾಂಡ್ ಮಟ್ಟದಲ್ಲಿ ಪ್ರಯತ್ನವೂ ನಡೆಸಿದ್ದರೆಂಬ ಮಾತುಗಳು ಕಾಂಗ್ರೆಸ್ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಕ್ಷೇತ್ರದಲ್ಲಿ ಗಣನೀಯವಾಗಿರುವ ಬಂಟ ಸಮುದಾಯದ ಮಿಥುನ್ ಮತ್ತು ಅದಕ್ಕಿಂತ ಕೊಂಚ ಹೆಚ್ಚಿರುವ ಕ್ಯಾಥಲಿಕ್ ಕ್ರಿಶ್ಚಿಯನ್ ಸಮುದಾಯದ ಮಾಜಿ ಎಮ್ಮೆಲ್ಸಿ ಐವಾನ್ ಡಿಸೋಜಾ ಟಿಕೆಟ್‌ಗೆ ಕಟಿಪಿಟಿ ನಡೆಸಿದ್ದರು. ಇವರಿಬ್ಬರ ಮೇಲಾಟ ಜೋರಾದಾಗ ಅನಿವಾರ್ಯವಾಗಿ ಅಭಯರಿಗೆ ಕಾಂಗ್ರೆಸ್ ಆಖಾಡಕ್ಕಿಳಿಸಬೇಕಾಗಿ ಬಂದಿತ್ತು. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಶಿಷ್ಯನೆನ್ನಲಾಗುತ್ತಿರುವ ಮಿಥುನ್ ರೈಗೆ ಈ ಬಾರಿಯ ಟಿಕೆಟ್ ಪಕ್ಕಾ ಆಗಿದೆಯೆನ್ನಲಾಗಿದ್ದು, ಮಿಥುನ್ ಮಾಜಿ ಮಂತ್ರಿ ಅಭಯರನ್ನು ಬೆನ್ನಿಗಿಟ್ಟುಕೊಂಡು ಚುನಾವಣಾ ತಯಾರಿ ಶುರುಮಾಡಿದ್ದಾರೆ.

ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಮುಸುಕಿನ ಗುದ್ದಾಟ ಬಿರುಸಾಗುತ್ತಿರುವ ಸುದ್ದಿಗಳೆದ್ದಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ವಿರೋಧಿ ಸಂಘ ಶ್ರೇಷ್ಠ ಕಲ್ಲಡ್ಕ ಪ್ರಭಾಕರ ಭಟ್ಟ ಬಣದ ಶಾಸಕ ಉಮಾನಾಥ ಕೋಟ್ಯಾನ್‌ಗೆ ಮತ್ತೆ ಅವಕಾಶ ಕೊಡಕೂಡದೆಂಬ ಕೂಗು ಬಿಜೆಪಿಯಲ್ಲಿ ಎದ್ದಿದೆ ಎನ್ನಲಾಗುತ್ತಿದೆ. ಮೂಲ ಬಿಜೆಪಿಗರಿಗೆ ಶಾಸಕನ ಕಂಡರಾಗದೆಂಬ ಮಾತಿದ್ದು, ಅನೈತಿಕ ಪೊಲೀಸ್‌ಗಿರಿ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದ ರೌಡಿ ಶೀಟರ್ ಒಬ್ಬನನ್ನು ಬಿಡಿಸಿಕೊಂಡು ಬರಲು ಖುದ್ದು ಶಾಸಕರೇ ಪೊಲೀಸ್ ಠಾಣೆಗೆ ಹೋಗಿದ್ದು ಪಾರ್ಟಿಗೆ ಡ್ಯಾಮೇಜ್ ಮಾಡಿದೆ ಎಂದು ಆ ತಂಡ ಸಂಘದ ಬೈಠಕ್‌ಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದೆಯಂತೆ. ಕಾರ್ಕಳದಿಂದ ಮೂಡಬಿದಿರೆಗೆ ಮುಸ್ಲಿಮ್ ದಂಪತಿ ಜತೆ ಹಿಂದು ಮಹಿಳೆ ಬರುತ್ತಿದ್ದಾಗ ಅವರ ಕಾರನ್ನು ಅಲಂಗಾರು ಬಳಿ ಅಡ್ಡಹಾಕಿ ಹಲ್ಲೆ ಮಾಡಿದ್ದ 7-8 ಕ್ರಿಮಿನಲ್ ಪ್ರಕರಣಗಳ ಭಜರಂಗಿ ಕಾರ್ಯಕರ್ತನ ಮೇಲಾಗಿದ್ದ ಎಫ್‌ಐಆರ್ ರದ್ದು ಮಾಡಿಸಲು ಶಾಸಕ ಕೋಟ್ಯಾನ್ 3-4 ತಾಸು ಠಾಣೆಯಲ್ಲಿ ಕುಳಿತಿದ್ದರೆಂಬುದು ದೊಡ್ಡ ಸುದ್ದಿಯಾಗಿತ್ತು!

ಕ್ಷೇತ್ರದಲ್ಲಿ ಬಹುಸಂಖ್ಯಾತರಾದ ಸ್ವಜಾತಿ ಬಿಲ್ಲವ ರಾಜಕಾರಣದ ಬಲ ಬಳಸಿ ಪಾರ್ಟಿಯ ದೊಡ್ಡವರನ್ನು ಮೀರಿ ಬೆಳೆಯಲು ಹವಣಿಸುತ್ತಾರೆ ಮತ್ತು ಬಿಲ್ಲವೇತರರ ಬೇಸರಕ್ಕೆ ಕಾರಣರಾಗಿದ್ದಾರೆಂಬ ’ಅವಗುಣ’ಕ್ಕಾಗಿ ಈ ಬಾರಿ ಕೋಟ್ಯಾನ್‌ರಿಗೆ ಟಿಕೆಟ್ ಕಟ್ ಮಾಡುವ ಯೋಜನೆ ಹಾಕಲಾಗಿದೆ ಎಂಬ ಮಾತಗಳು ಕೇಳಿಬರುತ್ತಿದೆ. ಕಾಂಗ್ರೆಸ್‌ನಲ್ಲಿದ್ದ ಉಮಾನಾಥ ಕೋಟ್ಯಾನ್ ಮಂಗಳೂರಿನ ಕಾವೂರು ತಾ.ಪಂ ಕ್ಷೇತ್ರದಲ್ಲಿ ಸೋತ ಬಳಿಕ ನಿಧಾನಕ್ಕೆ ಕಲ್ಲಡ್ಕ ಕಮಾಂಡ್ ಕೃಪೆಗೆ ಪ್ರಾತ್ರರಾದರು ಎನ್ನಲಾಗುತ್ತಿದೆ. ಹಿಂದೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಕೋಟ್ಯಾನ್‌ರನ್ನು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ನೇಮಿಸಿದಾಗ, ತುಳುವಿನಲ್ಲಿ ಹಿಂದುತ್ವದ ಭಾಷಣವನ್ನು ಏರುಸ್ವರದಲ್ಲಿ ಮಾಡುವುದು ಬಿಟ್ಟರೆ ತುಳು ಭಾಷೆ-ಸಾಹಿತ್ಯ-ಸಂಸ್ಕೃತಿಗೆ ಯಾವ ಕೊಡುಗೆಯೂ ಕೊಡದವರು ಎಂಬ ಟೀಕೆಟಿಪ್ಪಣಿಗಳಾಗಿತ್ತು.

ಮೂಡಬಿದಿರೆ ಬಿಜೆಪಿಯಲ್ಲಿ ಮೂರು ಬಣಗಳಿದ್ದು ಸಂಸದ ನಳಿನ್‌ಕುಮಾರ್ ಕಟೀಲ್ ಶಾಸಕ ಕೋಟ್ಯಾನ್‌ಗೆ ಪರ್ಯಾಯವಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷನಾದ ತನ್ನ ನಿಷ್ಟಾವಂತ ಅನುಯಾಯಿ ಸುದರ್ಶನ್ ಮೂಡಬಿದ್ರೆಯನ್ನು ತಯಾರು ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಬಿಲ್ಲವ ಜಾತಿಗೆ ಸೇರಿದ ಕೋಟ್ಯಾನ್ ಮತ್ತು ಸುದರ್ಶನ್ ಮಧ್ಯೆ ಟಿಕೆಟ್ ಕದನ ಜೋರಾದಾಗ ತಾನೆ ಕ್ಯಾಂಡಿಡೇಟಾಗುವ ತಂತ್ರಗಾರಿಕೆಯನ್ನು, ನಳಿನ್ ಹೆಣೆದಿರುವ ಸಾಧ್ಯಾಸಾಧ್ಯತೆಯ ಚರ್ಚೆಯೂ ನಡೆದಿದೆ. ರಾಜ್ಯ ಬಿಜೆಪಿ ಅಧ್ಯಕ್ಷತೆಯಿಂದ ನಳಿನ್‌ರನ್ನು ಕೆಳಗಿಳಿಸುವುದು ಬಹುತೇಕ ಖಚಿತವೆನ್ನಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ನಳಿನ್ ರಾಜ್ಯ ರಾಜಕಾರಣಕ್ಕೆ ಬಂದು ಆಯಕಟ್ಟಿನ ಅಧಿಕಾರ ಸ್ಥಾನ ಗಿಟ್ಟಿಸುವ ಯೋಚನೆಯಲ್ಲಿದ್ದಾರೆ ಎಂಬ ಮಾತು ಜಿಲ್ಲೆಯಲ್ಲಿ ಜೋರಾಗಿ ಕೇಳಿಬರುತ್ತಿದೆ. ಒಟ್ಟಿನಲ್ಲಿ ಮೂಲ್ಕಿ-ಮೂಡಬಿದಿರೆ ಬಿಜೆಪಿಯ ಟಿಕೆಟ್ ತಂತ್ರಗಳು ದಿನಕ್ಕೊಂದು ಆಯಾಮ ಪಡೆಯುತ್ತಿರುವುದು ಕುತೂಹಲ ಕೆರಳಿಸುತ್ತದೆ.


ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮಂಗಳೂರು ನಗರ ಉತ್ತರ: ಹಿಂದುತ್ವದ ಫ್ರಿಂಜ್ ಅಖಾಡದಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟ್ ಯಾರು?

ಇದನ್ನೂ ಓದಿ: ’ಆರ್‌ಎಸ್‌ಎಸ್ ಆಳ ಮತ್ತು ಅಗಲ’ ಪುಸ್ತಕ ಪ್ರಕಟಣೆ ಮತ್ತು ಹಂಚಿಕೆ ಕರ್ನಾಟಕದ ಉದ್ದಗಲಕ್ಕೆ ಆಂದೋಲನವಾಗಿದ್ದರ ಕುರಿತು..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾರರ ಹೆಸರು ಕೈಬಿಟ್ಟ ಹಗರಣ; ಬಿಜೆಪಿ ಪಕ್ಷದ ಕೈವಾಡದ ಆರೋಪ

0
ಭಾರತದ ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸತ್‌ವರೆಗೆ ಹಲವು ಹಂತಗಳ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಜನಪ್ರತಿನಿಧಿಗಳನ್ನು ಮತದಾರರು ಆರಿಸುವುದಲ್ಲದೆ, ಆಳುವ ಸರ್ಕಾರಗಳನ್ನು ನಿರ್ಧರಿಸುತ್ತಾರೆ. ಈ ಚುನಾವಣಾ ವ್ಯವಸ್ಥೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕಾದದ್ದು...