Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮಂಗಳೂರು ನಗರ ಉತ್ತರ: ಹಿಂದುತ್ವದ ಫ್ರಿಂಜ್ ಅಖಾಡದಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟ್...

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮಂಗಳೂರು ನಗರ ಉತ್ತರ: ಹಿಂದುತ್ವದ ಫ್ರಿಂಜ್ ಅಖಾಡದಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟ್ ಯಾರು?

- Advertisement -
- Advertisement -

ಸುರತ್ಕಲ್ ಪ್ರಾಕೃತಿಕ ಸೌಂದರ್ಯ, ಶಿಕ್ಷಣ, ವಾಣಿಜ್ಯ ಮತ್ತು ಕೈಗಾರಿಕೆಗಳ ರಾಷ್ಟ್ರೀಯ-ಅಂತಾರಾಷ್ಟ್ರೀಯ ಪ್ರಾಮುಖ್ಯತೆಯಿಳ್ಳ ಸೀಮೆ. ಫಲ್ಗುಣಿ ಮತ್ತು ಪಾವಂಜೆ ನದಿಗಳ ನಡುವೆ ಇರುವ ಸುರತ್ಕಲ್ ಕರಾವಳಿಯ ನಿರ್ಣಾಯಕ ಸ್ಥಳವೆಂದೇ ಪರಿಗಣಿತವಾಗಿದೆ. 2007ರಲ್ಲಾದ ವಿಧಾನಸಭಾ ಕ್ಷೇತ್ರಗಳ ಭೌಗೋಳಿಕ ಮಿತಿಯ ಮರುವಿಂಗಡಣೆ ಪ್ರಕ್ರಿಯೆಯಲ್ಲಿ ಸುರತ್ಕಲ್ ಕ್ಷೇತ್ರಕ್ಕೆ ಮೂಡಬಿದಿರೆಯ ಕೆಲವು ಗ್ರಾಮಗಳನ್ನು ಸೇರಿಸಿ ಮಂಗಳೂರು ನಗರ ಉತ್ತರ ಎಂದು ನಾಮಕರಣ ಮಾಡಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ 23 ವಾರ್ಡ್‌ಗಳು ಮತ್ತು ಮಂಗಳೂರು ತಾಲೂಕಿನ ಸುರತ್ಕಲ್ ಹಾಗು ಗುರುಪುರ ಕಂದಾಯ ಹೋಬಳಿಗಳಿರುವ ಈ ವಿಭಿನ್ನ ಜನಾಂಗ-ಭಾಷೆಯ ಬೃಹತ್ ಬಂದರು ಕ್ಷೇತ್ರದಲ್ಲಿ ಸುಮಾರು 2-205 ಲಕ್ಷ ವಲಸೆ ಹಾಗು ಸ್ಥಳೀಯ ಕಾರ್ಮಿಕರಿದ್ದಾರೆ.

ಆರ್‌ಎಸ್‌ಎಸ್ ಮತ್ತು ಪಿಎಫ್‌ಐ ಫ್ರಿಂಜ್ ಪಡೆಗಳು ಪ್ರಬಲವಾಗಿರುವ ಸುರತ್ಕಲ್ ಯಾನೆ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ಕೋಮುಸೂಕ್ಷ್ಮ ಪ್ರದೇಶವೆಂದು ಪೊಲೀಸ್ ಫೈಲ್‌ನಲ್ಲಿ ದಾಖಲಾಗಿ ಅದೆಷ್ಟೋ ವರ್ಷ ಕಳೆದುಹೋಗಿದೆ. ಮತೀಯ ಧ್ರುವೀಕರಣ ವಿಪರೀತವಾಗಿರುವ ಸುರತ್ಕಲ್ ಮತ್ತದರ ಸುತ್ತಲಿನಲ್ಲಿ ಅನೈತಿಕ ಪೊಲೀಸ್ ಪಡೆ ಮತ್ತು ಗೋರಕ್ಷಕ ದಳಗಳ ಒಂದಿಲ್ಲೊಂದು ಹಲ್ಲೆ-ಸುಲಿಗೆ ಪ್ರಕರಣಗಳು ಮೇಲಿಂದ ಮೇಲೆ ಸುದ್ದಿಯಾಗುವುದು ಸರ್ವೇಸಾಮಾನ್ಯ; ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು ಸಿದ್ಧಾಂತದ ಸಮಾಜವಾದಿ ನೆಲವಾಗಿದ್ದ ಸುರತ್ಕಲ್ ಈಗ ಸದಾ ಸನ್ನದ್ಧವಾಗಿರುವ ವ್ಯಗ್ರ ಹಿಂದುತ್ವದ ಗುಂಪುದಾಳಿಕೋರರ ಹಿಡಿತಕ್ಕೆ ಒಳಗಾಗಿರುವುದು ದುರಂತವೆಂದು ಪ್ರಜ್ಞಾವಂತರು ಆತಂಕ ಪಡುತ್ತಾರೆ.

ಇತಿಹಾಸ-ಸಂಸ್ಕೃತಿ-ಆರ್ಥಿಕತೆ

ಮಂಗಳೂರಿನ ಉತ್ತರಕ್ಕೆ-ಹೊಸ ಬಂದರಿಂದ (ಎನ್‌ಎಂಪಿಟಿಯಿಂದ) 8 ಕಿ.ಮೀ. ದೂರದಲ್ಲಿರುವ ಸುರತ್ಕಲ್ ಮಂಗಳೂರು ಮಹಾನಗರದ ಬೀಚ್ ಉಪನಗರವೆಂದು ಹೆಸರಾಗಿದೆ. ಶೈಕ್ಷಣಿಕ-ಔದ್ಯಮಿಕ ಮತ್ತು ವಾಣಿಜ್ಯಿಕವಾಗಿ ಮುಂದುವರಿದಿರುವ ಸುರತ್ಕಲ್‌ನ ಸ್ಥಳನಾಮದ ಬಗ್ಗೆ ಒಂದು ದಂತಕತೆಯಿದೆ. ತುಳುವಿನ ಶಿರತ ಕಲ್ಲು ಶಬ್ದದಿಂದ ಸುರತ್ಕಲ್ ಉತ್ಪತ್ತಿಯಾಗಿದೆ ಎಂದು ನಂಬಲಾಗಿದೆ. ಶಿರತ ಕಲ್ಲು ಎಂದರೆ ತಲೆಗಲ್ಲು ಎಂದರ್ಥ; ಶಿರದಕಲ್ ಪದದಿಂದ ಸುರತ್ಕಲ್ ಹೆಸರು ಬಂದಿದೆ ಎಂಬ ವಾದವೂ ಇದೆ. ಶಿರದಕಲ್ ಎಂದರೆ ತುಳು ಮತ್ತು ಕನ್ನಡದಲ್ಲಿ ಶಿರಸ್ತ್ರಾಣ.

ತುಳುನಾಡಿನ ಇತರೆಡೆಯಂತೆ ಸುತ್ಕಲ್‌ನಲ್ಲೂ ತುಳುವಿನಲ್ಲೆ ಸಂವಹನ-ವಹಿವಾಟು ನಡೆಯುತ್ತದೆ. ಕನ್ನಡ ಆಡಳಿತ ಭಾಷೆ. ತೌಳವ ಸಂಸ್ಕೃತಿಯ ಸುರತ್ಕಲ್ ಸುತ್ತಮುತ್ತಲಿನಲ್ಲಿ ಕೊಂಕಣಿ, ಬ್ಯಾರಿ, ಮಲಯಾಳಂ, ತಮಿಳು, ಮರಾಠಿ ಮುಂತಾದ ಸಾಮುದಾಯಿಕ ಭಾಷೆಗಳು ಇದೆಯಾದರೂ ಮನೆಯಾಚೆ ಪ್ರಮುಖವಾಗಿ ಕೇಳಿಬರುವುದು ತುಳು. ತುಳು ಸಂಸ್ಕೃತಿಯ ವೈಶಿಷ್ಟ್ಯಗಳಾದ ಭೂತಾರಾಧನೆ, ನಾಗಾರಾಧನೆ, ಆಟಿಕಳೆಂಜ, ಪಾಡ್ದನ, ಯಕ್ಷಗಾನ ಸಂಪ್ರದಾಯ ಸುರತ್ಕಲ್‌ನಲ್ಲಿದೆ. ಸೂಫಿ ಸಂಸ್ಕೃತಿಯ ಬ್ಯಾರಿಗಳು ಸುರತ್ಕಲ್‌ನಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ತುಳುನಾಡಿನ ದೈವ ಮತ್ತು ದೇವರ ಮೇಲಾಟದಲ್ಲಿ ದೈವಕ್ಕೆ ಹೆಚ್ಚು ಪ್ರಾಶಸ್ತ್ಯ. ಆದರೆ ಸಂಘಿ ಸಂಸ್ಕೃತಿ ಅಬ್ಬರದಲ್ಲಿ ದೇವರನ್ನು ಹೆಚ್ಚು ಮರೆಸುತ್ತ ದೈವಾರಾಧನೆ ಹಿಂದು ಧಾರ್ಮಿಕ ಮಹತ್ವದ ಆಚಾರವಲ್ಲ ಎಂದು ಶೂದ್ರಾದಿಗಳ ತಲೆ ತೊಳೆಯುವ ಬ್ರಾಹ್ಮಣಿಕೆ ತಂತ್ರಗಾರಿಕೆ ನಾಜೂಕಾಗಿ ನಡೆಯುತ್ತಿದೆ ಎಂದು ಕರಾವಳಿಯ ಸಾಂಸ್ಕೃತಿ ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಸುರತ್ಕಲ್‌ನ ಗುರುಪುರ ಹೋಬಳಿಯ ಗ್ರಾಮೀಣ ಭಾಗದಲ್ಲಿ ತೆಂಗು-ಕಂಗು ಮತ್ತು ಗೋಡಂಬಿ ಬೆಳೆಯುತ್ತಾರೆ; ಕೃಷಿ, ಮೀನುಗಾರಿಕೆ, ಸಣ್ಣ-ಪುಟ್ಟ ವ್ಯಾಪಾರ-ಉದ್ಯಮದಿಂದ ಜನರು ಬದುಕು ಕಟ್ಟಿಕೊಂಡಿದ್ದಾರೆ. ಯುವ ಸಮೂಹ ಉದ್ಯೋಗ ಅರಸಿ ಬೆಂಗಳೂರು, ಮುಂಬೈ, ದುಬೈಗಳಿಗೆ ವಲಸೆ ಹೋಗುತ್ತಿದ್ದಾರೆ. ತಾಲೂಕಿನ ಆರ್ಥಿಕತೆ ಪ್ರಮುಖವಾಗಿ ಕೈಗಾರಿಕಾ ವಲಯವನ್ನು ಅವಲಂಬಿಸಿದೆ. ವಾಣಿಜ್ಯ, ಕೈಗಾರಿಕೆ, ಕೃಷಿ ಸಂಸ್ಕರಣೆ ಹಾಗು ಬಂದರು ಸಂಬಂಧಿತ ಚಟುವಟಿಕೆ ಮಂಗಳೂರು ಉತ್ತರದ ಆರ್ಥಿಕತೆಯ ಜೀವಜೀವಾಳ. 1974ರಲ್ಲಿ ಹೊಸ ವಾಣಿಜ್ಯ ಬಂದರು ಆರಂಭವಾಗಿದ್ದು ಮತ್ತು 1976ರಲ್ಲಾದ ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಲಿ. ಸ್ಥಾಪನೆಯಿಂದ ಮಂಗಳೂರಿನ ಅಭಿವೃದ್ಧಿ ಶಕೆ ಶುರುವಾಯಿತು. ಭಾರತದ 7ನೆ ದೊಡ್ಡ ಕಂಟೇನರ್ ಬಂದರಾದ ನವ ಮಂಗಳೂರು ಬಂದರು ದೇಶದ ಶೇ.75ರಷ್ಟು ಕಾಫಿ, ಗೋಡಂಬಿ ರಫ್ತು ನಿರ್ವಹಿಸುತ್ತಿದೆ. ಪೆಟ್ರೋಲಿಯಂ ನಿಕ್ಷೇಪಗಳ ಮಂಗಳೂರು, ವಾಣಿಜ್ಯ ಮತ್ತು ಪೆಟ್ರೋ ಕೆಮಿಕಲ್ ಕೇಂದ್ರವಾಗಿ ಅಭಿವೃದ್ಧಿಯಾಗಿದೆ. ಸುರತ್ಕಲ್
ಕೈಗಾರಿಕಾ ಪ್ರದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸುರತ್ಕಲ್‌ನಲ್ಲಿ ಸುಮಾರು ಒಂದೂ ಮುಕ್ಕಾಲು ಲಕ್ಷದಷ್ಟು ಉತ್ತರ ಕರ್ನಾಟಕ, ತಮಿಳುನಾಡು, ಕೇರಳ, ಜಾರ್ಖಂಡ್, ಬಿಹಾರ ಮತ್ತಿತರೆಡೆಯಿಂದ ಬಂದಿರುವ ವಲಸೆ ಕಾರ್ಮಿಕರಿದ್ದಾರೆ. ದೈತ್ಯ ರಾಸಾಯನಿಕ ಕೈಗಾರಿಕಾ ಸಂಸ್ಥೆಗಳಾದ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ (ಎಮ್‌ಆರ್‌ಪಿಎಲ್), ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ (ಎಮ್‌ಸಿಎಫ್), ಬಿಎಎಸ್‌ಎಫ್, ಓಎನ್‌ಜಿಸಿ, ಕೆಐಒಸಿಎಲ್, ಎಚ್‌ಪಿಸಿಎಲ್, ಬಿಪಿಸಿಎಲ್, ಟೋಟಲ್ ಆಯಿಲ್ ಇಂಡಿಯಾ ಲಿ., ಹಿಂದೂಸ್ಥಾನ್ ಯುನಿಲಿವರ್, ಹಡಗು ನಿರ್ಮಾಣ, ಅನೇಕ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿರುವ ಬೈಕಂಪಾಡಿ ಕೈಗಾರಿಕಾ ವಲಯ, ರಾಷ್ಟ್ರೀಯ ಪ್ರಾಮುಖ್ಯತೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ (ಎನ್‌ಐಟಿಕೆ), ವೈದ್ಯಕೀಯ ಕಾಲೇಜು ಮಂಗಳೂರು ಉತ್ತರ ವಲಯದಲ್ಲಿದ್ದು, ಸುರತ್ಕಲ್‌ನ ಆರ್ಥಿಕ ವ್ಯವಸ್ಥೆಯನ್ನು ನಿಭಾಯಿಸುತ್ತಿವೆ. ಸ್ವಚ್ಛತೆಗೆ ಹೆಸರಾದ ಮತ್ತು ಕೆಡದ ನೈಸರ್ಗಿಕ ಸೌಂದರ್ಯದ ಬೀಚ್‌ಗಳು ಸುರತ್ಕಲ್‌ನ ಹೆಗ್ಗುರುತು. ’ಸುರತ್ಕಲ್ ಲೈಟ್ ಹೌಸ್’, ಉಡುಪಿ ಅಷ್ಠ ಮಠಗಳಲ್ಲಿ ಒಂದಾದ ಕೃಷ್ಣಾಪುರ ಮಠದ ಮೂಲ ಮಠ ಸುರತ್ಕಲ್‌ನ ಪ್ರವಾಸಿ ಆಕರ್ಷಣೆಯ ತಾಣಗಳು.

ಚುನಾವಣಾ ಚರಿತ್ರೆ

ಮಂಗಳೂರು ದಕ್ಷಿಣ-ಬಂಟ್ವಾಳ ಮತ್ತು ಮೂಡಬಿದಿರೆ ವಿಧಾನಸಭಾ ಕ್ಷೇತ್ರಗಳೊಂದಿಗೆ ಗಡಿ ಹಂಚಿಕೊಂಡಿರುವ ಮಂಗಳೂರು ಉತ್ತರ ಕಾರ್ಮಿಕರು, ತೋಟಿಗರು, ಮೀನುಗಾರರು ಮತ್ತು ವ್ಯಾಪಾರಸ್ಥರಿರುವ ಕಾಸ್ಮೋಪಾಲಿಟನ್ ಪ್ರದೇಶ. 2,28,055 ಲಕ್ಷ ಮತದಾರರಿರುವ ಈ ಕ್ಷೇತ್ರದಲ್ಲಿ ಸುಮಾರು 65 ಸಾವಿರದಷ್ಟಿರುವ ಬ್ಯಾರಿ ಮುಸ್ಲಿಮರು ಪ್ರಥಮ ಬಹುಸಂಖ್ಯಾತರು. ದ್ವಿತೀಯ ಸ್ಥಾನದಲ್ಲಿರುವ ಬಿಲ್ಲವರು 45 ಸಾವಿರ, ಬಂಟರು 35 ಸಾವಿರ, ಮೊಗವೀರರು 15 ಸಾವಿರ, ಕ್ರಿಶ್ಚಿಯನ್ನರು 10 ಸಾವಿರ, ಪರಿಶಿಷ್ಟ ಜಾತಿ ಶೇ.2ರಷ್ಟು ಮತ್ತು ಇತರ ಒಬಿಸಿ ಜಾತಿಯವರು, ತಮಿಳರು, ಮಲಯಾಳಿಗಳು ಇದ್ದಾರೆ. ಗುರುಪುರ ಕಡೆಯಲ್ಲಿ ಬುಡಕಟ್ಟು ಕುಡುಬಿ ಸಮುದಾಯದವರಿದ್ದಾರೆ. ಸಂಜೀವನಾಥ ಸುವರ್ಣರಂಥ ಸ್ವಾತಂತ್ರ್ಯ ಹೋರಾಟಗಾರ ಸಮಾಜವಾದಿ ತತ್ವನಿಷ್ಠರು ಶಾಸಕರಾಗುತ್ತಿದ್ದ ಮಂಗಳೂರು ಉತ್ತರ ಕ್ಷೇತ್ರವೀಗ ಕಟ್ಟರ್ ಮತೀಯ ಸಂಘಟನೆಗಳಾದ ಆರ್‌ಎಸ್‌ಎಸ್ ಮತ್ತು ಪಿಎಫ್‌ಐಗಳ ಆಡಂಬೋಲ ಆಗಿದೆಯೆಂಬ ಆತಂಕದ ಮಾತುಗಳು ಕೇಳಿಬರುತ್ತವೆ. ಓರ್ವ ಕಾರ್ಪೋರೇಟರ್ ಹೊಂದಿರುವ ಎಸ್‌ಡಿಪಿಐ ಉಳಾಯಿಬೆಟ್ಟು ಮತ್ತು ಮಲ್ಲೂರು ಗ್ರಾಮ ಪಂಚಾಯತ್ ಆಡಳಿತ ನಡೆಸುತ್ತಿದೆ.

1957ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿ.ಆರ್.ಕರ್ಕೆರ ಮತ್ತು ಪ್ರಜಾ ಸೋಷಲಿಸ್ಟ್ ಪಕ್ಷದ ಡಾ.ಸಂಜೀವನಾಥ ಐಕಳ್ ನಡುವೆ ನೇರ ಹಣಾಹಣಿ ಏರ್‍ಪಟ್ಟಿತ್ತು. 15,629 ಮತ ಪಡೆದ ಕಾಂಗ್ರೆಸ್ 3,840 ಮತದಂತರದಿಂದ ಗೆದ್ದಿತ್ತು. 1959ರಲ್ಲಾದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ. ದೂಮಪ್ಪ ಶಾಸಕರಾದರು. ಆದರೆ ಬಿಲ್ಲವ ಜಾತಿಯ ದೂಮಪ್ಪರಿಗೆ 1962ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಜಾ ಸೂಷಲಿಸ್ಟ್ ಪಾರ್ಟಿಯ ಸಂಜೀವನಾಥ ಐಕಳ್‌ರನ್ನು ಸೋಲಿಸಲಾಗಲಿಲ್ಲ. 13,148 ಮತ ಪಡೆದಿದ್ದ ಬ್ರಾಹ್ಮಣ ಸಮುದಾಯದ ಐಕಳ್ 3,167 ಮತಗಳ ಅಂತರದಿಂದ ಗೆದ್ದು ಶಾಸಕರಾದರು. 1966ರಲ್ಲಿ ದೂಮಪ್ಪರನ್ನು ಕಾಂಗ್ರೆಸ್ ವಿಧಾನಪರಿಷತ್‌ಗೆ ಕಳಿಸಿತು. 1967ರ ಅಸೆಂಬ್ಲಿ ಇಲೆಕ್ಷನ್‌ನಲ್ಲಿ ಬಂಟ ಜನಾಂಗದ ಕೆ.ಎನ್.ಆಳ್ವ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದರು. ಪ್ರಜಾ ಸೋಷಲಿಸ್ಟ್ ಪಾರ್ಟಿಯಿಂದ ಪಿ.ವಿ.ಐತಾಳ್ ಕಣಕ್ಕಿಳಿದಿದ್ದರು. 25,090 ಮತ ಗಳಿಸಿದ್ದ ಐತಾಳ್ 10,514 ಮತಗಳ ಅಂತರದಿಂದ ಆಯ್ಕೆಯಾದರು.

ಭೂ ಸುಧಾರಣೆ ಸಚಿವ

1972ರಲ್ಲಿ ಚುನಾವಣೆಗೆ ಮೊದಲು ಕಾಂಗ್ರೆಸ್ ವಿಭಜನೆಗೊಂಡಾಗ ದಕ್ಷಿಣ ಕನ್ನಡದ ಪ್ರಭಾವಿ ಜಮೀನ್ದಾರಿ ಬಂಟ ಮನೆತನದ ಬಿ.ಸುಬ್ಬಯ್ಯ ಶೆಟ್ಟಿ ಇಂದಿರಾ ಗಾಂಧಿಯ ಕೆಲವು ಕ್ರಾಂತಿಕಾರಿ ಕಾರ್ಯಕ್ರಮ ಕಂಡು ಆಗತಾನೆ ಕಾಂಗ್ರೆಸ್(ಓ) ಸೇರಿದ್ದರು. ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಫೋರ್‍ಸ್ ಸದಸ್ಯನಾಗಿ ಭಾರತ-ಚೀನಾ ಗಡಿಯಲ್ಲಿ ದೇಶ ರಕ್ಷಣೆ ಕಾರ್ಯದಲ್ಲಿ ತೊಡಗಿಕೊಂಡು ಮರಳಿದ ಬಳಿಕ ವಕೀಲಿಕೆ ಮಾಡಿಕೊಂಡಿದ್ದ ಉತ್ಸಾಹಿ ತರುಣ ಸುಬ್ಬಯ್ಯ ಶೆಟ್ಟರನ್ನು ದೇವರಾಜ ಅರಸು ತಮ್ಮ ಆಪ್ತ ವಲಯದಲ್ಲಿ ಇಟ್ಟುಕೊಂಡಿದ್ದರು. ಅರಸು 1972ರ ಚುನಾವಣೆಯಲ್ಲಿ ಸುಬ್ಬಯ್ಯ ಶೆಟ್ಟರನ್ನು ಸುರತ್ಕಲ್‌ನಲ್ಲಿ ಕಾಂಗ್ರೆಸ್ ಹುರಿಯಾಳು ಮಾಡಿದರು. 27,720 ಮತ ಪಡೆದ ಸುಬ್ಬಯ್ಯ ಶೆಟ್ಟಿ ಸ್ವತಂತ್ರ ಪಕ್ಷದ ರತನ್‌ಕುಮಾರ್ ಕಟ್ಟೆಮಾರ್‌ರನ್ನು 21,572 ಮತಗಳಿಂದ ಸೋಲಿಸಿ ಶಾಸನಸಭೆಗೆ ಆಯ್ಕೆಯಾದರು.

ಬಿ.ಸುಬ್ಬಯ್ಯ ಶೆಟ್ಟಿ

ಅರಸು 1973ರಲ್ಲಿ ಸುಬ್ಬಯ್ಯ ಶೆಟ್ಟರಿಗೆ ’ಭೂಸುಧಾರಣಾ ಖಾತೆ’ಯ ಮಂತ್ರಿ ಮಾಡುತ್ತಾರೆ. ಇದು ಭಾರತ ಸರಕಾರ ಅಥವಾ ಬೇರಾವ ರಾಜ್ಯದಲ್ಲೂ ಇಲ್ಲದ ಪೋರ್ಟ್‌ಪೋಲಿಯೋ ಆಗಿತ್ತು. ಭೂ ಸುಧಾರಣೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ದೃಢ ನಿರ್ಧಾರ ಮಾಡಿದ್ದ ಅರಸು ಆ ಯೋಜನೆ ಅನುಷ್ಠಾನಕ್ಕೆ ಸುಬ್ಬಯ್ಯ ಶೆಟ್ಟರೆ ಸಮರ್ಥರೆಂದು ಭಾವಿಸಿದ್ದರು. ಇದಕ್ಕೆ ಎರಡು ಕಾರಣವಿತ್ತು. ಒಂದು, ಸ್ವತಃ ಭೂ ಮಾಲಿಕರಾಗಿದ್ದ ಸುಬ್ಬಯ್ಯ ಶೆಟ್ಟರು ತಮ್ಮ ಹಲವು ಎಕರೆ ಜಮೀನನ್ನು ಒಕ್ಕಲುಗಳಿಗೆ ಕೊಟ್ಟಿದ್ದರು. ಎರಡನೆಯದು, ಸುಬ್ಬಯ್ಯ ಶೆಟ್ಟರ ಬಂಟ ಜಾತಿಯೆಂದರೆ ದಕ್ಷಿಣ ಕನ್ನಡದಲ್ಲಿ ಪ್ರಬಲ ಜಮೀನ್ದಾರಿ ಸಮೂಹವಾಗಿತ್ತು. ಭೂ ಮಾಲಕರಿಂದ ಭೂ ಸುಧಾರಣಾ ಕಾನೂನಿಗೆ ದೊಡ್ಡ ವಿರೋಧ ಬರುವುದೆಂದು ಮುಖ್ಯಮಂತ್ರಿ ಅರಸು ಮತ್ತು ಭೂ ಸುಧಾರಣಾ ಇಲಾಖೆಯ ಮಂತ್ರಿ ಶೆಟ್ಟರಿಬ್ಬರಿಗೂ ಗೊತ್ತಿತ್ತು. ಪೇಜಾವರ ಮಠದ ದಿವಂಗತ ಸ್ವಾಮಿ ವಿಶ್ವೇಶತೀರ್ಥರಂಥವರು ಭೂ ಮಾಲಿಕರ ಪರವಾಗಿ ವಾದಿಸಿದರೂ ಮುಲಾಜಿಗೆ ಒಳಗಾಗದ ಸುಬ್ಬಯ್ಯ ಶೆಟ್ಟಿ ತಮ್ಮ ಮತ್ತು ತಮ್ಮ ನಾಯಕನ ಸಂಕಲ್ಪ ಸಾಧಿಸಿದರು! ಭೂ ಸುಧಾರಣಾ ಕಾನೂನು ಜಾರಿ ಮಾಡಿದರು.

1978ರ ಚುನಾವಣೆಯಲ್ಲಿ ಜನತಾ ಪಕ್ಷದ ಜೆ.ಆರ್.ಪೈಸ್‌ರನ್ನು (15,203) ಪರಾಭವಗೊಳಿಸಿದ ಸುಬ್ಬಯ್ಯ ಶೆಟ್ಟಿ (29,452) ಅರಸು ಸಚಿವ ಸಂಪುಟದಲ್ಲಿ ಮಹತ್ವದ ಶಿಕ್ಷಣ ಖಾತೆಯ ಸಚಿವರಾದರು. ಇಂದಿರಾ ಗಾಂಧಿ ಮತ್ತು ದೇವರಾಜ ಅರಸು ನಡುವೆ ಭಿನ್ನಾಭಿಪ್ರಾಯ ತಲೆದೋರಿದಾಗ ಸುಬ್ಬಯ್ಯ ಶೆಟ್ಟಿ ಅರಸು ಸಂಗಡ ಉಳಿದರು. ಆನಂತರ ಅರಸರಿಂದ ದೂರಾದರು. ಸುಬ್ರಹ್ಮಣ್ಯಸ್ವಾಮಿ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದರು; ಬಳಿಕ ಜನತಾದಳ ಸೇರಿದರು. ರಾಜಕೀಯ ಅಸ್ಪಷ್ಟತೆ-ಅನಿಶ್ಚಿತತೆಯಿಂದ ಅಸ್ತಿತ್ವ ಕಳೆದುಕೊಂಡರು. ಇತ್ತ ಸುರತ್ಕಲ್ ಕಾಂಗ್ರೆಸ್ ನಾಯಕನಾಗಿ ಇಂಟಕ್ ಮುಖಂಡ ನಿಟ್ಟೆ ಮಂಜಪ್ಪ ಆಡ್ಯಂತಾಯ ರೂಪುಗೊಂಡಿದ್ದರು. 1983ರ ಚುನಾವಣೆಯಲ್ಲಿ ಬಂಟ ಸಮುದಾಯದ ಆಡ್ಯಂತಾಯ (ಕಾಂಗ್ರೆಸ್) ಮತ್ತು ಲೋಕಯ್ಯ ಶೆಟ್ಟಿ ಮುಖಾಮುಖಿಯಾದರು. ಬಂದರು ಕಾರ್ಮಿಕರ ನೇತಾರ-ಸ್ವಾತಂತ್ರ್ಯ ಹೋರಾಟಗಾರ ಲೋಕಯ್ಯ ಶೆಟ್ಟಿ 11,131 ಮತದಿಂದ ಶಾಸಕರಾದರು. 1985ರಲ್ಲಾದ ಮಧ್ಯಂತರ ಚುನಾವಣೆಯಲ್ಲಿ ಕಾಂಗ್ರೆಸ್ ಹುರಿಯಾಳು ಎನ್.ಎಂ.ಆಡ್ಯಂತಾಯ (31,846) ಜನತಾ ಪಕ್ಷದ ಲೋಕಯ್ಯ ಶೆಟ್ಟಿಯವರನ್ನು (25,745) 6,101 ಮತಗಳ ಅಂತರದಿಂದ ಮಣಿಸಿದರು.

ಯಕ್ಷ ನಟನ ಆಕಸ್ಮಿಕ!

ಕಾಂಗ್ರೆಸ್ ಹೈಕಮಾಂಡ್‌ಗೆ ತೀರ ಹತ್ತಿರದಲ್ಲಿದ್ದ ಅಂದಿನ ಸಂಸದ ಆಸ್ಕರ್ ಫರ್ನಾಂಡಿಸ್ 1989ರಲ್ಲಿ ಶಾಸಕ ಆಡ್ಯಂತಾಯರಿಗೆ ಕಾಂಗ್ರೆಸ್ ಟಿಕೆಟ್ ಸಿಗದಂತೆ ಮಾಡಿದರೆಂದು ಮೂರೂ ಕಾಲು ದಶಕದ ಹಿಂದಿನ ಟಿಕೆಟ್ ತಂತ್ರಗಾರಿಕೆ ಕಂಡವರು ಹೇಳುತ್ತಾರೆ. ಹಠಕ್ಕೆ ಬಿದ್ದ ಆಸ್ಕರ್ ಸುರತ್ಕಲ್ ಬಂದರು ಕಾರ್ಮಿಕರ ನಡುವೆ ಓಡಾಡಿಕೊಂಡಿದ್ದ ಮಂಗಳೂರಿನ ಅತ್ತಾವರದ ತಮ್ಮ ಹಿಂಬಾಲಕ ವಿಜಯ್‌ಕಮಾರ್ ಶೆಟ್ಟಿಯವರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದರೆನ್ನಲಾಗಿದೆ. ಆ ಸಂದರ್ಭದಲ್ಲಿ ಮೀನುಗಾರ (ಮೊಗವೀರ) ಸಮುದಾಯದ ರಾಮಚಂದರ್ ಬೈಕಂಪಾಡಿ ಬಿಜೆಪಿಗೆ ಅಡಿಪಾಯ ಹಾಕಿ ಟಿಕೆಟ್ ಸಹ ಪಡೆದುಕೊಂಡಿದ್ದರು. ಹೀಗಾಗಿ 1989ರಲ್ಲಿ ಸುರತ್ಕಲ್‌ನಲ್ಲಿ ಕಾಂಗ್ರೆಸ್‌ನ ವಿಜಯಕುಮಾರ್ ಶೆಟ್ಟಿ (35,230), ಜನತಾ ದಳದ ಸುಬ್ಬಯ್ಯ ಶೆಟ್ಟಿ (20,000) ಮತ್ತು ಬಿಜೆಪಿಯ ರಾಮಚಂದರ್ ಬೈಕಂಪಾಡಿ (17,406) ನಡುವೆ ತ್ರಿಕೋನ ಕಾಳಗ ಏರ್‍ಪಟ್ಟಿತ್ತು; 15,230 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಗೆ ಜಯವಾಗಿತ್ತು.

ಶಾಸಕ ವಿಜಯ್‌ಕುಮಾರ್ ಶೆಟ್ಟಿ ಮತ್ತು ಮಾಜಿ ಶಾಸಕ ಆಡ್ಯಂತಾಯ ನಡುವೆ 1994ರಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಮೇಲಾಟ ನಡೆಯಿತು. ಶೆಟ್ಟರ ಹಿಂದೆ ಆಸ್ಕರ್ ಇದ್ದೆರೆ, ಆಡ್ಯಂತಾಯರಿಗೆ ಜನಾರ್ದನ ಪೂಜಾರಿ ಬೆಂಬಲವಿತ್ತೆನ್ನಲಾಗಿದೆ. ಶೆಟ್ಟರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿತು; ಬಂಡಾಯವೆದ್ದ ಆಡ್ಯಂತಾಯ ಪಕ್ಷೇತರರಾಗಿ ತೊಡೆತಟ್ಟಿದರು. ತೀರಾ ಸಣ್ಣ ಕ್ಯಾಥಲಿಕ್ ಸಮುದಾಯದ ಆಂಟನಿ ಡಿಸೋಜಾ ಜನತಾ ದಳದ ಕ್ಯಾಂಡಿಡೇಟಾಗಿದ್ದರು. 1994ರ ವೇಳೆಗೆ ಬಾಬರಿ ಮಸೀದಿ ಪತನಾನಂತರದ ಕೋಮುಗಲಭೆ, ಸಂಘ ಸರದಾರರ ಹಿಂದುತ್ವ ಕಾರಣದಿಂದ ಬ್ಯಾರಿಗಳು ಹೆಚ್ಚಿರುವ ಸುರತ್ಕಲ್ ಕ್ಷೇತ್ರದಲ್ಲಿ ಬಿಜೆಪಿ ಬೇರುಗಳು ಹಬ್ಬಲಾರಂಭಿಸಿತ್ತು. ಬಂಗಾರಪ್ಪ ನಿರ್ಗಮನದಿಂದ ಕಾಂಗ್ರೆಸ್‌ಗೆ ಹಾನಿಯಾಗಿತ್ತು. ಹಾಗಂತ ಗೆಲ್ಲುವ ಬಲವೇನೂ ಬರದ ಬಿಜೆಪಿಯಲ್ಲಿ ಟಿಕೆಟ್ ಪೈಪೋಟಿ ಮಾತ್ರ ಜೋರಾಗಿತ್ತು. ಹಿಂದಿನ ಚುನಾವಣೆಯಲ್ಲಿ ಸೋತಿದ್ದ ರಾಮಚಂದರ್ ಬೈಕಂಪಾಡಿಗೆ ಮತ್ತೆ ಅವಕಾಶ ಕೊಡುವ ಮನಸ್ಸು ಸಂಸದ ಧನಂಜಯ್‌ಕುಮಾರ್ ಮತ್ತು ಸಂಘ ಶ್ರೇಷ್ಠರಿಗಿರಲಿಲ್ಲ ಎನ್ನಲಾಗಿದೆ.

ಬಿಜೆಪಿ ಜತೆ ಸಂಯೋಜನೆಗೊಂಡಿರುವ ಕಾರ್ಮಿಕ ಸಂಘಟನೆ ಬಿಎಂಎಸ್‌ನ ವಿಶ್ವನಾಥ ಶೆಟ್ಟಿಯನ್ನು ಸಂಘಿಗಳು ರಾಮಚಂದರ್ ವಿರುದ್ಧ ಎತ್ತಿಕಟ್ಟಿದರೆನ್ನಲಾಗುತ್ತಿದೆ. ರಾಮಚಂದರ್ ಮತ್ತು ಶೆಟ್ಟಿ ಮಧ್ಯೆ ಸಂಘರ್ಷ ಬಿರುಸಾದಾಗ ಯಕ್ಷ ರಂಗಮಂಚದ ಮೇಲೆ ಪ್ರಚೋದನಾತ್ಮಕ ಹಿಂದುತ್ವದ ಡೈಲಾಗ್ ಡಿಲೆವರಿ ಮಾಡುತ್ತಿದ್ದ ವ್ಯವಸಾಯಿ ಯಕ್ಷಗಾನ ಮೇಳದ ಫೇಮಸ್ ನಟ ಕುಂಳೆ ಸುಂದರ್ ರಾವ್‌ಗೆ ಕಲ್ಲಡ್ಕ ಹೈಕಮಾಂಡ್ ಬಿಜೆಪಿ ಟಿಕೆಟ್ ಕೊಟ್ಟಿತು. ಬಂಡುಕೋರ ಆಡ್ಯಂತಾಯ ಕಾಂಗ್ರೆಸ್ ಬುಟ್ಟಿಯಿಂದ ತೆಗೆದ 8,816 ಮತ ಮತ್ತು ಬಂಗಾರಪ್ಪನವರ ಕೆಸಿಪಿ ಕ್ಯಾಂಡೀಟ್ ಪಡೆದ 5,076 ಮತದಿಂದ ಬಿಜೆಪಿಯ ಕುಂಬಳೆ, ಸ್ವತಃ ಅವರೆ ಅಚ್ಚರಿಯಿಂದ ಬೆಚ್ಚಿಬೀಳುವಂತೆ ಗೆದ್ದು ಶಾಸಕರಾದರೆಂಬ ರಾಜಕೀಯ ವಿಶ್ಲೇಷಣೆಗಳು ಕೇತ್ರದಲ್ಲಿ ಕೇಳಿಬರುತ್ತಿವೆ.

ಶೂದ್ರ ಸತ್ಯಜಿತ್‌ಗೆ ವಂಚನೆ

ಕೇರಳದಲ್ಲಿ ಸೇರಿಹೋಗಿರುವ ಕಾಸರಗೋಡಿನ ಕುಂಬಳೆಯ ಶಾಸಕ ಸುಂದರ್ ರಾವ್‌ಗೆ ಸುರತ್ಕಲ್ ಕ್ಷೇತ್ರದ ಉದ್ದಗಲ, ಜನರ ಬೇಕುಬೇಡ ಅರ್ಥವಾಗಲಿಲ್ಲ. ಕ್ಷೇತ್ರವಾಸಿಗಳಿಗೆ ನಾಟ್‌ರೀಚೆಬಲ್ ಆಗಿರುತ್ತಿದ್ದ ಶಾಸಕನ ಬಗ್ಗೆ ಬಿಜೆಪಿಯಲ್ಲೂ ಅಸಮಾಧಾನ ಹೊಗೆಯಾಡತೊಡಗಿತ್ತು. ಧರ್ಮಕಾರಣದ ಮುಂಚೂಣಿಯಲ್ಲಿದ್ದ ಬಿಲ್ಲವ ಸಮುದಾಯದ ಸತ್ಯಜಿತ್ ಸುರತ್ಕಲ್‌ಗೆ ಟಿಕೆಟ್ ವಂಚಿಸಿದ್ದು ಭಿನ್ನಮತಕ್ಕೆ ಕಾರಣವಾಗಿತ್ತು; ಜತೆಗೆ ಎಂಟಿ ಇನ್‌ಕಂಬೆನ್ಸ್‌ಯಲ್ಲಿದ್ದ ಶಾಸಕ ಸುಂದರ್ ರಾವ್‌ರನ್ನು 1999ರ ಚುನವಣೆಯಲ್ಲಿ ಕಾಂಗ್ರೆಸ್‌ನ ವಿಜಯಕುಮಾರ್ ಶೆಟ್ಟಿ 6,989 ಮತಗಳ ಅಂತರದಿಂದ ಪರಾಭವಗೊಳಿಸಿ ಎರಡನೇ ಬಾರಿ ಶಾಸಕನಾದರು. 2004ರಲ್ಲಿ ಸ್ಥಳೀಯ ಹಿಂದು ಜಾಗರಣಾ ವೇದಿಕೆಯ ಅಗ್ರೆಸಿವ್ ಮುಂದಾಳು ಎನ್ನಲಾಗಿದ್ದ ಕ್ಷೇತ್ರದ ಬಹುಸಂಖ್ಯಾತ ಬಿಲ್ಲವ ಸಮುದಾಯದ ಸತ್ಯಜಿತ್ ಸುರತ್ಕಲ್ ಬಿಜೆಪಿ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದರು.

ಸತ್ಯಜಿತ್ ಸುರತ್ಕಲ್

ಸಂಘ ಪರಿವಾರ ಹುಬ್ಬಳ್ಳಿ ಈದ್ಗಾ ಮೈದಾನಕ್ಕೆ ಲಗ್ಗೆ ಹಾಕಿದಾಗ ರಿಸ್ಕ್ ಕಡೆಗಣಿಸಿ ಬಾವುಟ ಹಾರಿದ್ದ ’ಮೆರಿಟ್’ಗೆ ಸಂಘದ ಹಿರಿಯರು ತನಗೆ ಸುರತ್ಕಲ್ ಎಮ್ಮೆಲ್ಲೆ ಮಾಡುತ್ತಾರೆಂಬ ಭಾವನೆ ಸತ್ಯಜಿತ್‌ದಾಗಿತ್ತು ಎನ್ನಲಾಗಿದೆ. ಆದರೆ ಆ ’ಸಾಹಸ’ದ ಕ್ರೆಡಿಟ್‌ಅನ್ನು ಸಂಘ ಪರಿವಾರದ ಬ್ರಾಹ್ಮಣ ಸೂತ್ರಧಾರರು, ಉತ್ತರ ಕನ್ನಡ ಹಿಂಜಾವೆಯ ಅಂದಿನ ದಂಗೆಕೋರನೆನ್ನಲಾಗಿದ್ದ, ಇಂದಿನ ಸಂವಿಧಾನ ಬದಲಾಯಿಸುವ ಹೇಳಿಕೆಯ ಸಂಸದ ಅನಂತಕುಮಾರ್ ಹೆಗಡೆಯದು ಎಂಬಂತೆ ಬಿಂಬಿಸಿ 1996ರ ಲೋಕಸಭಾ ಇಲೆಕ್ಷನ್‌ನಲ್ಲಿ ಬಿಜೆಪಿ ಟಿಕೆಟ್ ಕೊಡಲಾಯಿತೆಂಬ ಮಾತು ಈಗಲೂ ಸಂಘದ ಶೂದ್ರರ ಬಾಯಲ್ಲಿದೆ. ಮೂರ್‍ನಾಲ್ಕು ಬಾರಿ ಬಿಜೆಪಿ ಟಿಕೆಟ್‌ನಿಂದ ವಂಚಿಸಲ್ಪಟ್ಟರೆನ್ನಲಾಗುತ್ತಿರುವ ಸತ್ಯಜಿತ್ ಈಗ ಸಂಘ ಸಹವಾಸದಿಂದ ದೂರಾಗಿ ನಾರಾಯಣಗುರು ಹೆಸರಿನ ಸಂಘಟನೆಯೊಂದರ ಮುಂದಾಳಾಗಿ ಓಡಾಡುತ್ತಿದ್ದಾರೆ.

2004ರ ನಂತರ!

2004ರಲ್ಲಿ ರಿಯಲ್ ಎಸ್ಟೇಟ್ ದಂಧೆದಾರ ಕೃಷ್ಣ ಪಾಲೆಮಾರ್ ಕ್ಷೇತ್ರದ ಹೊರಗಿನವರೆಂಬ ಕಾರ್ಯಕರ್ತರ ಆಕ್ಷೇಪದ ನಡುವೆಯೂ ಹಣವಂತನೆಂಬ ಕಾರಣಕ್ಕೆ ಬಿಜೆಪಿ ಟಿಕೆಟ್ ಕೊಡಲಾಯಿತೆಂಬ ಅಭಿಪ್ರಾಯ ಕೇಳಿಬರುತ್ತಿದೆ. ಪಾಲೆಮಾರ್ (57,808), ಶಾಸಕ ವಿಜಯ್‌ಕುಮಾರ್ ಶೆಟ್ಟಿಯನ್ನು 3,312 ಮತಗಳಿಂದ ಸೋಲಿಸಿ ಶಾಸನಸಭೆಗೆ ಆಯ್ಕೆಯಾದರು. 2008ರ ಇಲೆಕ್ಷನ್ ಸಂದರ್ಭದಲ್ಲಾದ ಡಿಲಿಮಿಟೇಶನ್‌ನಲ್ಲಿ ಸುರತ್ಕಲ್ ಕ್ಷೇತ್ರದ ಭೌಗೋಳಿಕ ಪರಿಧಿ ಬದಲಾಗಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರವೆಂದು ಮರುನಾಮಕರಣಗೊಂಡಿತು. ಈ ಬಾರಿ ಕಾಂಗ್ರೆಸ್ ಬಂಟ (ಹಿಂದು) ಬದಲಿಗೆ ಬ್ಯಾರಿ ಮುಸ್ಲಿಮ್ ಸಮುದಾಯದ ಹುರಿಯಾಳನ್ನು ಕಣಕ್ಕಿಳಿಸುವ ಪ್ರಯೋಗ ಮಾಡಿತು.

ಬಿಜೆಪಿಯ ಹಣವಂತ ಅಭ್ಯರ್ಥಿ ಪಾಲೆಮಾರ್ ಎದುರು ಕಾಂಗ್ರೆಸ್ ದುಡ್ಡಿನ ಬಿಸ್ನೆಮನ್ ಎಂದೇ ಸುರತ್ಕಲ್ ಭಾಗದಲ್ಲಿ ಗುರುತಿಸಲ್ಪಟ್ಟಿದ್ದ ಬಿ.ಎ.ಮೊಹಿಯುದ್ದೀನ್ ಬಾವಾರನ್ನು ಸ್ಪರ್ಧೆಗಿಳಿಸಿತ್ತು. ಶ್ರೀಮಂತ ಉದ್ಯಮಿ ಬಿ.ಎ.ಫಾರೂಕ್ (ಜೆಡಿಎಸ್ ಎಮ್ಮೆಲ್ಸಿ), ಸಹೋದರ ಮೊಹಿಯುದ್ದೀನ್ ಬಾವಾ ಮತ್ತು ಕೃಷ್ಠ ಪಾಲೆಮಾರ್ ನಡುವೆ ’ಹಣಾ’ಹಣಿಯೆ ನಡೆಯಿತು. 14,426 ಮತದಂತರದಿಂದ ಗೆದ್ದ ಪಾಲೆಮಾರ್ ಬಿಜೆಪಿ ಸರಕಾರದಲ್ಲಿ ಸಚಿವರೂ ಆದರು. ವಿಧಾನಸಭಾ ಅಧಿವೇಶನದಲ್ಲಿ ನೀಲಿ ಚಿತ್ರಗಳನ್ನು ನೋಡಿದ ಆರೋಪ ಎದುರಿಸಿದ ಅಂದಿನ ತ್ರಿಮೂರ್ತಿ ಮಂತ್ರಿಗಳಲ್ಲಿ ಪಾಲೆಮಾರ್ ಒಬ್ಬರಾಗಿದ್ದರು. ಸಚಿವ ಸ್ಥಾನಕ್ಕೆ ಪಾಲೆಮಾರ್ ರಾಜೀನಾಮೆ ಕೊಡಬೇಕಾಗಿಬಂತು. 2013ರ ಚುನಾವಣೆಯಲ್ಲಿ ಪಾಲೆಮಾರ್‌ಗೆ ಶಾಸಕನೂ ಆಗಲಾಗಲಿಲ್ಲ. ಕಾಂಗ್ರೆಸ್‌ನ ಮೊಹಿಯುದ್ದೀನ್ ಬಾವಾ 5,373 ಮತದಂತರದಿಂದ ಚುನಾಯಿತನಾದರು.

ಮೊಹಿಯುದ್ದೀನ್ ಬಾವಾ 2013ರ ದಕ್ಷಿಣ ಕನ್ನಡದ ಎಮ್ಮೆಲ್ಲೆ ಬ್ಯಾಚ್‌ನಲ್ಲೇ ಅತ್ಯುತ್ತಮ ಕೆಲಸಗಾರ ಶಾಸಕ ಎನಿಸಿಕೊಂಡಿದ್ದರು. ಮೃದು ಮಾತಿನ ಬಾವಾ ಎಲ್ಲ ಜಾತಿ-ಪಂಗಡದವರೊಂದಿಗೆ ಸಹಜವಾಗಿ ಬೆರೆಯುತ್ತಿದ್ದರು. ಆದರೆ 2018ರ ಚುನಾವಣೆ ಅಖಾಡದಲ್ಲಾದ ವಿಪರೀತ ಮತಾಂಧ ಧ್ರುವೀಕರಣದಿಂದಾಗಿ ಬಾವಾಗೆ (72,000) ಬಿಜೆಪಿ ಕ್ಯಾಂಡಿಡೇಟ್ ಡಾ.ಭರತ್ ಶೆಟ್ಟಿ (98,648) ಎದುರು ಗೆಲ್ಲಲು ಸಾಧ್ಯವಾಗಲಿಲ್ಲ!

ಕ್ಷೇತ್ರಕ್ಕೆ ಏನು ಬೇಕು? ಏನು ಬೇಡ?

ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಒಂದು ಸುತ್ತು ಹಾಕಿ ಬಂದರೆ ಒಂದಿಷ್ಟು ರಸ್ತೆಗೆ ಡಾಂಬರ್ ಹಾಕಿದ್ದು ಕಾಣಿಸುತ್ತದೆಯೆ ಹೊರತು ಪ್ರಗತಿ-ಅಭಿವೃದ್ಧಿಯ ಯಾವ ಲಕ್ಷಣಗಳೂ ಕಾಣಿಸದೆಂಬ ಆಕ್ಷೇಪ ಕೇಳಿಬರುತ್ತಿದೆ. ಶಾಸಕ ಜನರ ಕೈಗೆ ಸಿಗುವುದಿಲ್ಲ; ಮಂಗಳೂರು ಮಹಾನಗರಿಯಲ್ಲೆಲ್ಲೋ ಅಜ್ಞಾತ ಸ್ಥಳದಲ್ಲಿ ವಾಸಿಸುತ್ತಾರೆ. ಅವರ ವಿಳಾಸ ಕಂಟ್ರಾಕ್ಟರ್‌ಗಳಿಗಷ್ಟೇ ಗೊತ್ತು. ಸರ್ಕಾರಿ ಕಾರ್ಯಕ್ರಮವಿದ್ದರೆ ಬರುತ್ತಾರೆ, ಮರುಕ್ಷಣವೆ ನಾಪತ್ತೆಯಾಗುತ್ತಾರೆ ಎಂಬ ಆಕ್ರೋಶ-ಅಸಮಾಧಾನ ಅವರದೆ ಸಂಘ ಪರಿವಾರದ ಕಾರ್ಯಕರ್ತರಾದಿಯಾಗಿ ಇಡೀ ಕ್ಷೇತ್ರದಲ್ಲಿ ಮಡುಗಟ್ಟಿದೆ.

ಸುರತ್ಕಲ್ ಕ್ಷೇತ್ರ ಗೋರಕ್ಷಕ ದಳ ಮತ್ತು ಅನೈತಿಕ ಪೊಲೀಸರ ಆಡಳಿತಕ್ಕೆ ಒಳಪಟ್ಟಿದೆ; ರಾಷ್ಟ್ರೀಯ ಹೆದ್ದಾರಿ ಹಾಗು ಕಡಲ ತಡಿ ಗುಂಟ ಹೊಡಿ-ಬಡಿ ಸಂಸ್ಕೃತಿ ಹಾವಳಿ ವಿಪರೀತವಾಗಿದೆ; ಭರತ್ ಶೆಟ್ಟಿ ಸಂಘ ಪರಿವಾರಕ್ಕಷ್ಟೆ ಶಾಸಕ ಎಂಬಂತಾಗಿದೆ ಎನ್ನುವ ಆತಂಕ-ಆಕ್ರೋಶದ ಮಾತುಗಳು ಕ್ಷೇತ್ರದಲ್ಲಿ ಸಾಮಾನ್ಯವಾಗಿದೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಉದಾಸೀನದಿಂದಿರುವ ಶಾಸಕರು ಚೈತ್ರಾ ಕುಂದಾಪುರಳಂಥ ಕೋಮು ಕ್ರೌರ್ಯ ಪ್ರಚೋದಕ ಮಾತುಗಾರ್ತಿಯಿಂದ ಭಾಷಣ ಮಾಡಿಸುವಂಥ ಕಾರ್ಯಕ್ರಮಗಳನ್ನು ಆಸಕ್ತಿಯಿಂದ ಏರ್‍ಪಡಿಸುತ್ತಿದ್ದಾರೆ ಎಂದು ಜನರಾಡಿಕೊಳ್ಳುತ್ತಿದ್ದಾರೆ. ಈಚೆಗೆ ಹುಟ್ಟಿಕೊಂಡಿರುವ ತೆಂಕ ಉಳಿಪಾಡಿ ಗ್ರಾಮದ ಮಳಲಿ ಮಸೀದಿ-ಮಂದಿರ-ವಿವಾದದ ತೆರೆಮರೆಯ ಸೂತ್ರಧಾರತ್ವ ಶಾಸಕರದೆಂಬ ಆರೋಪ ಬಲವಾಗಿ ಕೇಳಿಬರುತ್ತಿದೆ.

ಬಿ.ಎ.ಮೊಹಿಯುದ್ದೀನ್ ಬಾವಾ

ಕರಾವಳಿಯ ದೇವಸ್ಥಾನ, ಮಸೀದಿ ಮತ್ತು ಜಿನಾಲಯಗಳ ವಾಸ್ತುಶಿಲ್ಪದಲ್ಲಿ ಹೋಲಿಕೆಯಿದೆ. ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿ ಕಟ್ಟಿಗೆಯ ಕಂಬ-ಕೆತ್ತನೆ ಸಾಮಾನ್ಯವಾಗಿದೆ ಎಂದು ಶಿಲ್ಪ ಮತ್ತು ಇತಿಹಾಸ ವಿದ್ವಾಂಸರ ವಾದವಾಗಿದೆ. ಮಂಗಳೂರು ಮಹಾನಗರದ ಹಿಂದುತ್ವ ವಿವಾದಗಳ ಮುಂದಾಳು ಎನ್ನಲಾಗುತ್ತಿರುವ ಶರಣ್ ಪಂಪ್‌ವೆಲ್ ಬಳಗ ಮಳಲಿ ಮಸೀದಿ-ಮಂದಿರ ಅಭಿಯಾನದ ಮುಂಚೂಣಿಯಲ್ಲಿ ಇರುವಂತೆ ಕಂಡರೂ ದಿಗ್ದರ್ಶನ ಶಾಸಕ ಡಾ. ಭರತ್ ಶೆಟ್ಟಿಯದೆನ್ನುವ ಆರೋಪ ಕೇಳಿಬರುತ್ತಿದೆ. 2023ರ ಅಸೆಂಬ್ಲಿ ಚುನಾವಣೆ
ಎದುರಿಸುವ ಶಾಸಕ ಭರತ್ ಶೆಟ್ಟಿ ಮಳಲಿ ಪ್ರಕರಣವನ್ನು ಶಸ್ತ್ರಾಸ್ತ್ರ ಮಾಡಿಕೊಳ್ಳುವ ಸಾಧ್ಯಾಸಾಧ್ಯತೆಯ ಚರ್ಚೆಗಳೀಗ ಮಂಗಳೂರಿನ ರಾಜಕೀಯ ಪಡಸಾಲೆಯಲ್ಲಿ ನಡೆದಿದೆ.

ಜನಪರ ಶಾಸಕ ಎನಿಸಿದ್ದ ಕಾಂಗ್ರೆಸ್‌ನ ಮೊಹಿಯುದ್ದೀನ್ ಬಾವಾ ಮಂಜೂರಿ ಮಾಡಿಸಿಕೊಂಡು ಬಂದಿದ್ದ ಯೋಜನೆಗಳಲ್ಲಿ ಆಗೊಂದು-ಈಗೊಂದು ಬಿಜೆಪಿ ಎಮ್ಮೆಲ್ಲೆ ಉದ್ಘಾಟಿಸುತ್ತಿದ್ದಾರೆಯೇ ವಿನಃ ಅವರ ಪ್ರಯತ್ನದಿಂದ ಯಾವ ಗಮನಾರ್ಹ ಕೆಲಸ-ಕಾಮಗಾರಿಗಳಾಗಿಲ್ಲ ಎಂದು ರಿಕ್ಷಾ ಚಾಲಕರೊಬ್ಬರು ’ನ್ಯಾಯ ಪಥ’ದೊಂದಿಗೆ ಮಾತನಾಡುತ್ತ ಹೇಳಿದರು. ಸ್ಥಳೀಯ ಯುವಕರ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಸಂಘ ಪರಿವಾರದ ಫ್ರಿಂಜ್ ಪಡೆಗಳ ಪಾಲಾಗುತ್ತಿದ್ದಾರೆ.

ಹಿಂದಿನ ಶಾಸಕ ಬಾವಾ ಕಾಲದಲ್ಲಿ ಆರಂಭವಾಗಿದ್ದ ಸುರತ್ಕಲ್, ಕಾಟಿಪಳ್ಳ ಮತ್ತಿತರೆಡೆಯ ಮಾರುಕಟ್ಟೆ ಕಾಮಗಾರಿ ಹಾಲಿ ಶಾಸಕರಿಂದ ಮುಗಿಸಲಾಗಿಲ್ಲ; ಎನ್‌ಐಟಿಕೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅಕ್ರಮ ಟೋಲ್ ಪ್ಲಾಝಾ ಬಂದ್ ಮಾಡಿಸುವೆನೆಂದು ಶಾಸಕರು ಭಾಷಣವಷ್ಟೇ ಮಾಡುತ್ತಿದ್ದಾರೆ; ಪ್ರಯಾಣಿಕರ ಸುಲಿಗೆ ಮಾತ್ರ ನಿಂತಿಲ್ಲ. ಕೈಗಾರಿಕೆಗಳ ಮಾಲಿನ್ಯದಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತಿದ್ದರೂ ಶಾಸಕರಿಗದು
ಅರ್ಥವಾಗುತ್ತಿಲ್ಲ; ಗಂಜಿಮಠ ಕೈಗಾರಿಕಾ ಎಸ್ಟೇಟ್‌ಗೆ ಕೈಗಾರಿಕೆಗಳು ಬರುತ್ತಿಲ್ಲ; ಅದು ರಿಯಲ್ ಎಸ್ಟೇಟ್ ದಂಧೆಕೋರರ ವಶದಲ್ಲಿದೆ. ಅತಿ ಅವಶ್ಯವಾದ ಸುರತ್ಕಲ್-ಕೈಕಂಬ ರಸ್ತೆ ಗುತ್ತಿಗೆ ಮುಸ್ಲಿಮ್ ಒಬ್ಬನಿಗಾಗಿದೆಯೆಂದು ಶಾಸಕರು ರದ್ದು ಮಾಡಿಸಿದ್ದಾರೆ ಎಂಬ ಆರೋಪವಿದೆ. ಗ್ರಾಮೀಣ ಪ್ರದೇಶದಿಂದ ಹಿಡಿದು ಸುರತ್ಕಲ್ ಸಿಟಿವರೆಗೆ ಸರಿಯಾದ ವೈದ್ಯಕೀಯ ಸೌಲಭ್ಯವಿಲ್ಲದಾಗಿದೆ; ನಗರದಲ್ಲಿ ಲಕ್ಷಾಂತರ ಕಾರ್ಮಿಕರು, ಹಳ್ಳಿಗಳಲ್ಲಿ ಬಡ ಕೂಲಿಕಾರ ಸಮೂಹವಿರುವ ಸುರತ್ಕಲ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿರಲಿ, ಒಂದು ಸಮುದಾಯ ಆರೋಗ್ಯ ಕೇಂದ್ರ ಸಹ ಇಲ್ಲ! ’ಆಸ್ಪತ್ರೆಗಾಗಿ ನಾವು ಪ್ರತಿಭಟನೆ ಸಹ ಮಾಡಿದ್ದೇವೆ. ಆದರೂ ಶಾಸಕರು ನಿಷ್ಕ್ರಿಯರಾಗಿದ್ದಾರೆಂದು’ ಜನಪರ ಹೋರಾಟಗಾರರೊಬ್ಬರು ’ಪತ್ರಿಕೆ’ಗೆ ಸುರತ್ಕಲ್‌ನ ಸಂಕಷ್ಟ ವಿವರಿಸಿದರು.

ಹೊಸಬರ ಮುಖಾಮುಖಿ?!

ದಕ್ಷಿಣ ಕನ್ನಡ ಜನತಾ ಪರಿವಾರದ ಪ್ರಬಲ ನಾಯಕರಾಗಿದ್ದ ಮಾಜಿ ಸಚಿವ ಅಮರನಾಥ ಶೆಟ್ಟರ ಅಳಿಯ (ಈಗ ವಿಚ್ಛೇದನ ಆಗಿದೆ) ಆಗಿದ್ದ ಡಾ.ಭರತ್ ಶೆಟ್ಟಿ ಯುವ ಜನತಾ ದಳದ ಕಾರ್ಯದರ್ಶಿ ಆಗಿದ್ದರು. ಭರತ್ ಶೆಟ್ಟಿ ಜನತಾ ದಳದಲ್ಲಿ ಭವಿಷ್ಯವಿಲ್ಲವೆಂಬುದು ಖಾತ್ರಿಯಾದಾಗ ಸಂಸದ ನಳಿನ್ ಮೂಲಕ ಬಿಜೆಪಿ ಸೇರಿದ್ದರೆಂಬುದು ಜಿಲ್ಲೆಯ ರಾಜಕಾರಣದಲ್ಲಿ ಜನಜನಿತ ಸಂಗತಿ. ಮಂಗಳೂರಿನ ಎ.ಜೆ.ದಂತ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ ಭರತ್ ಶೆಟ್ಟಿಗೆ 2018ರ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದರಿಂದ ಚುನಾವಣಾ ಖರ್ಚು-ವೆಚ್ಚ ನಿಭಾಯಿಸುವವರೆಗಿನ ವ್ಯವಹಾರವನ್ನು ಜಿಲ್ಲೆಯ ವೈದ್ಯಕೀಯ ಶಿಕ್ಷಣ ವಲಯದ ಕ್ಯಾಪಿಟೇಶನ್ ಲಾಬಿ ನಿಭಾಯಿಸಿತ್ತೆನ್ನಲಾಗಿದೆ.

ಜನಮನ ಮತ್ತು ಬಿಜೆಪಿಯ ಒಂದು ವರ್ಗದಲ್ಲಿ ಶಾಸಕ ಭರತ್ ಶೆಟ್ಟಿಯ ಬಗ್ಗೆ ಬೇಸರವಿದೆ; ದಕ್ಷಿಣ ಕನ್ನಡದ ಬಿಜೆಪಿ ಶಾಸಕರಲ್ಲಿ ಅತಿಹೆಚ್ಚು ಎಚಿಟಿ-ಇನ್‌ಕಂಬೆನ್ಸ್ ಸುತ್ತಿಕೊಂಡಿರುವ ಭರತ್ ಶೆಟ್ಟಿಗೆ ಮತ್ತೆ ಟಿಕೆಟ್ ಕೊಟ್ಟರೆ ಗೆಲುವು ಕಷ್ಟವೆಂದು ಈ ತಂಡ ಕಲ್ಲಡ್ಕ ಕಮಾಂಡ್ ಮುಂದೆ ವಾದ ಮಂಡಿಸಿದೆ ಎನ್ನಲಾಗುತ್ತಿದೆ. ಜನ ಸಂಪರ್‍ಕವಿಲ್ಲದ ಶಾಸಕನ ಕರ್ಮಗೇಡಿತನದ ಬಗ್ಗೆ ಅಸಮಾಧಾನಗೊಂಡಿರುವ ಸಂಘ ಸರ್ವೋತ್ತಮರು ಪರ್ಯಾಯ ಅಭ್ಯರ್ಥಿಯ ಹುಡುಕಾಟದಲ್ಲಿದ್ದಾರೆಂಬ ಮಾತು ಬಿಜೆಪಿ ಪಡಸಾಲೆಯಲ್ಲಿ ಜೋರಾಗಿದೆ. ಈಗ ಬಿಜೆಪಿಯಲ್ಲಾಗುತ್ತಿರುವ ಚರ್ಚೆ ಪ್ರಕಾರ, ಭರತ್ ಶೆಟ್ಟಿಗೆ ಅವರ ತವರು ಉಡುಪಿ ಜಿಲ್ಲೆಯ ಬೈಂದೂರು ಅಖಾಡಕ್ಕೆ ಕಳಿಸಲಾಗುತ್ತದಂತೆ. ಪ್ರಬಲ ಬಿಲ್ಲವ ಸಮುದಾಯದ ಸತ್ಯಜಿತ್ ಸುರತ್ಕಲ್ ಮುನಿಸಿನಿಂದಾಗಿರುವ ಡ್ಯಾಮೇಜ್ ನಿಯಂತ್ರಿಸಲು ಅದೇ ಜಾತಿಯ ಅಭ್ಯರ್ಥಿಯನ್ನು ಸುರತ್ಕಲ್‌ನಲ್ಲಿ ನಿಲ್ಲಿಸುವ ಯೋಚನೆ ಕಲ್ಲಡ್ಕ ಕಮಾಂಡಿನದು ಎನ್ನಲಾಗುತ್ತಿದೆ. ಮೂಡಬಿದರೆಯಿಂದ ಶಾಸಕನಾಗಿ ರಾಜ್ಯ ರಾಜಕಾರಣಕ್ಕೆ ಬರುವ ಯೋಚನೆಯಲ್ಲಿರುವ ಸಂಸದ ನಳಿನ್‌ಕುಮಾರ್ ಕಟೀಲ್‌ರಿಂದ ತೆರವಾಗುವ ಎಂಪಿ ಸೀಟು ಭರತ್ ಶೆಟ್ಟಿಗೆ ಕೊಟ್ಟು, ಬಿಲ್ಲವ ಜಾತಿಯ ಮೂಡಬಿದರೆಯ ಶಾಸಕ ಉಮಾನಾಥ ಕೊಟ್ಯಾನ್‌ರನ್ನು ಸುರತ್ಕಲ್‌ಗೆ ವರ್ಗಾಯಿಸುವ ಲೆಕ್ಕಾಚಾರಗಳು ಸಂಘಿ ಚಿಂತನ ಚಿಲುಮೆಯಲ್ಲಿ ನಡೆಯುತ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಅತ್ತ ಕಾಂಗ್ರೆಸ್‌ನಲ್ಲಿ ಟಿಕೆಟ್ ತಾಕಲಾಟ ಬಿಗಡಾಯಿಸುವ ಸೂಚನೆ ಗೋಚರಿಸುತ್ತಿದೆ. ಕಳೆದ ಬಾರಿ ಸೋತ ಮಾಜಿ ಶಾಸಕ ಮೊಹಿಯುದ್ದೀನ್ ಬಾವಾರಿಗೆ ಮತ್ತೆ ಅವಕಾಶ ಕೊಡಲು ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಮನಸ್ಸಿಲ್ಲ; ಓಶನ್ ಕನ್‌ಸ್ಟ್ರಕ್ಷನ್ ಗುತ್ತೆದಾರಿಕೆ ಕಂಪನಿ ಒಡೆಯ-ಆಗರ್ಭ ಶ್ರೀಮಂತ ಇನಾಯತ್ ಅಲಿ ಮುಲ್ಕಿಗೆ ಟಿಕೆಟ್ ಕೊಡುವ ಯೋಚನೆ ಡಿಕೆಶಿ ಹಾಕಿದ್ದಾರೆ; ಮೊಹಿಯುದ್ದೀನ್ ಬಾವಾ ಸೋದರ ಉದ್ಯಮಿ ಫಾರೂಕ್ (ಜೆಡಿಎಸ್ ಎಮ್ಮೆಲ್ಸಿ) ಮತ್ತು ಡಿಕೆಶಿ ನಡುವಿನ ವೈಮನಸ್ಸು ಸುರತ್ಕಲ್ ಕಾಂಗ್ರೆಸ್ ಟಿಕೆಟ್ ರಾಜಕಾರಣದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ ಎಂಬೆಲ್ಲ ಮಾತುಗಳು ಕೇಳಿಬರಲಾರಂಭಿಸಿವೆ. ಮತ್ತೊಂದೆಡೆ ಹಿಂದು ಮತ್ತು ಮುಸ್ಲಿಮರಲ್ಲಿ ಯಾರಿಗೆ ಟಿಕೆಟ್ ಕೊಟ್ಟರೆ ಗೆಲ್ಲಬಹುದೆಂಬ ಜಿಜ್ಞಾಸೆ ಶುರುವಾಗಿದೆ. ಕ್ಷೇತ್ರ ಕಮ್ಯೂನಲೀಕರಣಗೊಂಡಿರುವುದರಿಂದ ಬಂಟ ಜಾತಿಯ ಕ್ಯಾಂಡಿಡೇಟಾದರೆ ಅನುಕೂಲಕರವೆಂಬ ಭಾವನೆ ಕಾಂಗ್ರೆಸ್‌ನಲ್ಲಿದೆ ಎನ್ನಲಾಗುತ್ತಿದೆ.

ಸ್ಥಳೀಯ ಮುಸ್ಲಿಮರಿಗೆ ವಿಧಾನ ಪರಿಷತ್ ಇಲ್ಲವೆ ರಾಜ್ಯಸಭೆಗೆ ಹೋಗುವ ಅವಕಾಶ ಮಾಡಿಕೊಡುವ ಮೂಲಕ ಆ ಸಮುದಾಯವನ್ನು ಸಮಾಧಾನಪಡಿಸುವ ರಾಜಿ ಸೂತ್ರ ಸಿದ್ಧಮಾಡಲಾಗುತ್ತಿದೆ ಎಂಬ ಸುದ್ದಿಗಳು ಶುರುವಾಗಿದೆ. 2018ರಲ್ಲಿ ಕುಂದಾಪುರದಲ್ಲಿ ಸ್ಪರ್ಧಿಸಿ ಸೋಲನುಭವಿಸಿದ ಇಂಟಕ್‌ನ ರಾಕೇಶ್ ಮಲ್ಲಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಎಐಸಿಸಿ ಸದಸ್ಯ ಪಿ.ವಿ.ಮೋಹನ್ ಮುಸ್ಲಿಮ್ ಸಮುದಾಯದ ಮೊಹಿಯುದ್ದೀನ್ ಬಾವಾ ಮತ್ತು ಇನಾಯತ್ ಅಲಿ ಮುಲ್ಕಿ ಮೇಲಾಟದಲ್ಲಿ ತಮಗೆ ಛಾನ್ಸ್ ಸಿಗಬಹುದೆಂಬ ಯೋಚನೆಯಲ್ಲಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಯೊಳಗಿನ ಟಿಕೆಟ್ ಟ್ಯಾಕ್‌ಟಿಕ್‌ಗಳು 2023ರ ರಣಕಣಕ್ಕೆ ಹೊಸ ಕಲಿಗಳನ್ನು ಅಣಿಗೊಳಿಸುವ ಸಂಕೇತಗಳನ್ನು ಬಿತ್ತರಿಸುತ್ತಿವೆ!


ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮಂಗಳೂರು: ಕೇಸರಿ-ಹಸಿರು ಚಕ್ರವ್ಯೂಹ ಬೇಧಿಸಿ ಬರುವರೆ ಸೆಕ್ಯುಲರ್ ಖಾದರ್?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೈಕ್‌ನಲ್ಲಿ ಓವರ್‌ಟೇಕ್ ಮಾಡಿದ್ದಕ್ಕೆ ದಲಿತ ಯುವಕನನ್ನು ಮರಕ್ಕೆ ಕಟ್ಟಿ ಥಳಿತ: ಅವಮಾನ ತಾಳಲಾರದೆ ಆತ್ಮಹತ್ಯೆ

0
ಬೈಕ್‌ನಲ್ಲಿ ಓವರ್‌ಟೇಕ್ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕನ ಬೈಕ್ ಮತ್ತು ಮೊಬೈಲ್ ಕಿತ್ತುಕೊಂಡು ಸವರ್ಣೀಯರು ಮರಕ್ಕೆ ಕಟ್ಟಿ ಥಳಿಸಿರುವ ಮತ್ತು ಆ ಯುವಕ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಜಾತಿ...