Homeಮುಖಪುಟಬೆಳ್ಳಿಚುಕ್ಕಿ; ಭೂಮಿಯು ವೇಗವಾಗಿ ತಿರುಗಿದ್ದು ನಿಮಗೇನಾದರೂ ಭಾಸವಾಯಿತೇ?

ಬೆಳ್ಳಿಚುಕ್ಕಿ; ಭೂಮಿಯು ವೇಗವಾಗಿ ತಿರುಗಿದ್ದು ನಿಮಗೇನಾದರೂ ಭಾಸವಾಯಿತೇ?

- Advertisement -
- Advertisement -

ನೀವು ಕೆಲಸಕಾರ್ಯಗಳಲ್ಲಿ ತಲ್ಲೀನರಾಗಿರಬೇಕಾದರೆ ಗಡಿಯಾರ ನೋಡಿದಾಗ, ಅಯ್ಯೋ ಎಷ್ಟು ಬೇಗ ಸಮಯ ಆಗಿದೆ ಅಥವಾ ಇನ್ನೂ ಟೈಮೇ ಹೋಗುತ್ತಿಲ್ಲ ಎಂದೆನ್ನಿಸಿರುವುದಕ್ಕೆ ಸಾಧ್ಯವಿದೆ. ಆದರೆ ನಿಸರ್ಗದಲ್ಲಿ ಸ್ವಾಭಾವಿಕವಾಗಿ ನಡೆಯುವ ದಿನದ ಅವಧಿಯಲ್ಲಿನ ಏರುಪೇರುಗಳ ಬಗೆಗಿನ ವಿಷಯ ನಿಮ್ಮ ಅರಿವಿಗೆ ಬಂದಿದೆಯಾ? ವೈಜ್ಞಾನಿಕವಾಗಿ ನಾವು ದಿನದ ಅವಧಿಯಲ್ಲಿನ ಏರುಪೇರುಗಳನ್ನು ಗ್ರಹಿಸಿದ್ದೇವೆ. ಅದು ಏಕೆ, ಹೇಗೆ ಮತ್ತು ಯಾರು ಈ ದಿನದ ಅವಧಿಯನ್ನು ಏರುಪೇರಾಗಿಸುತ್ತಿರುವುದು ಎಂಬ ಪ್ರಶ್ನೆ ಕೇಳಿಕೊಂಡರೆ, ಇದಕ್ಕೆ ಸರಿ ಉತ್ತರ: ಭೂಮಿಯು ತನ್ನ ಅಕ್ಷದ ಸುತ್ತ ಸುತ್ತುತ್ತಿರುವುದು ಅಂದರೆ ಭೂಮಿಯ ತಿರುಗುವಿಕೆ!

ಈ ವರ್ಷ ಜೂನ್ 29ರಂದು, ಭೂಮಿಯ ಒಂದು ಅಸಾಮಾನ್ಯ ವಿದ್ಯಮಾನವನ್ನು ನಾವು ಗ್ರಹಿಸಿದ್ದೇವೆ. ಭೂಮಿಯು ಸೂರ್ಯನ ಸುತ್ತ ಸುತ್ತಲು ಒಂದು ವರ್ಷ ಅಂದರೆ 365.25 ದಿನಗಳನ್ನು ತೆಗೆದುಕೊಳ್ಳುವುದು ಹಾಗೂ ತನ್ನ ಅಕ್ಷದ ಸುತ್ತ ತಿರುಗುವುದಕ್ಕೆ 24 ಗಂಟೆಗಳನ್ನು ತೆಗೆದುಕೊಳ್ಳುವ ವಿಚಾರ ನಮಗೆ ತಿಳಿದಿದೆ. 1960ರ ದಶಕದ ನಂತರ ವಿಜ್ಞಾನಿಗಳು ಗ್ರಹದ ತಿರುಗುವಿಕೆಯನ್ನು ಮತ್ತು ಇತರೆ ಚಲನೆಗಳ ಅವಧಿಯನ್ನು ಪರಮಾಣು ಗಡಿಯಾರಗಳೊಂದಿಗೆ ಇನ್ನಷ್ಟು ನಿಖರವಾಗಿ ಅಳೆಯಲು ಪ್ರಾರಂಭಿಸಿದರು. ಇಂತಹ ಪರಮಾಣು ಗಡಿಯಾರದ ಸಹಾಯದಿಂದ ಜೂನ್ 29ರಂದು ಭೂಮಿಯು ತನ್ನ ಅಕ್ಷದ ಸುತ್ತ ಅತೀ ವೇಗವಾಗಿ ತಿರುಗಿದೆ ಎಂದು ತಿಳಿದುಬಂದಿದೆ. ಅಂದಿನ ದಿನದ ಅವಧಿಯು 1960ರಿಂದೀಚೆಗೆ ದಾಖಲಾದ ಅತೀ ಕಡಿಮೆ ದಿನದ ಅವಧಿ ಎಂದು ಕಂಡುಕೊಂಡಿದ್ದೇವೆ! ಅಂದರೆ ದಿನದ ಸಮಯ ಬೇಗ ಮುಗಿದಿದೆ ಎಂದು ಅರ್ಥ. ಅಂದು ನೀವು ಏನು ಕೆಲಸ ಮಾಡುತ್ತಿದ್ದಿರಿ? ಆ ದಿನದಂದು ನಿಮ್ಮ ಕೆಲಸವನ್ನು ಸರಿಯಾದ ಸಮಯಕ್ಕೆ ಮುಗಿಸದೆ ಇರುವುದಕ್ಕೆ ಕಾರಣ ಭೂಮಿಯ ತಿರುಗುವಿಕೆಯು ಇರಬಹುದು! ಅಂದು ಭೂಮಿ ವೇಗವಾಗಿ ತಿರುಗಿದೆ.

ಭೂಮಿ ತನ್ನ ಅಕ್ಷದ ಸುತ್ತ ಪಶ್ಚಿಮದಿಂದ ಪೂರ್ವದಿಕ್ಕೆಗೆ ತಿರುಗುತ್ತಿರುವುದರಿಂದ, ಭೂಮಿಯ ಮೇಲೆ ಸೂರ್ಯ ಪೂರ್ವ ದಿಕ್ಕಿನಲ್ಲಿ ಉದಯಿಸಿ, ಪಶ್ಚಿಮ ದಿಕ್ಕಿನಲ್ಲಿ ಅಸ್ತಂಗತವಾಗುತ್ತಿರುವುದು. ದಿನದಲ್ಲಿ ನಾವು ನೋಡುವ ಸೂರ್ಯನ ಚಲನೆ ಸೂರ್ಯನ ವಾಸ್ತವಿಕ ಚಲನೆಯಲ್ಲ. ಬದಲಾಗಿ ಭೂಮಿ ತಿರುಗುತ್ತಿರುವುದರಿಂದ ಮತ್ತು ತಿರುಗುವ ಭೂಮಿಯ ಮೇಲೆ ನಾವಿರುವುದರಿಂದ ಸೂರ್ಯನು ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಚಲಿಸುತ್ತಿರುವಂತೆ ಕಾಣುತ್ತದೆ. ಭೂಮಿಯು ಪ್ರತಿ 24 ಗಂಟೆಗಳಿಗೊಮ್ಮೆ ತನ್ನ ಅಕ್ಷದ ಮೇಲೆ ಒಂದು ಪೂರ್ಣ ತಿರುಗುವಿಕೆಯನ್ನು ಪೂರ್ಣಗೊಳಿಸುತ್ತದೆ. ಭೂಮಿಯ ಈ ಒಂದು ತಿರುವು ದಿನವನ್ನು ಗುರುತಿಸುತ್ತದೆ ಮತ್ತು ಸೂರ್ಯೋದಯ ಮತ್ತು ಸೂರ್ಯಾಸ್ತದ ಚಕ್ರವನ್ನು ಚಾಲನೆ ಮಾಡುತ್ತದೆ. ಈ ಚಲನೆಯ ಪರಿಣಾಮದಿಂದಲೇ ಭೂಮಿಯ ಮೇಲೆ ಶತಕೋಟಿ ವರ್ಷಗಳವರೆಗೆ ಜೀವಸಂಕುಲಗಳನ್ನು ರೂಪಿಸಿ, ಬದುಕಿಸುತ್ತಿದೆ. ಇಂತಹ ಚಲನೆಗಳ ಅಧ್ಯಯನದಲ್ಲಿ ಕುತೂಹಲ ವಿಷಯವೇನೆಂದರೆ, ಈ ವರ್ಷದ ಜೂನ್ 29ರ ಮಧ್ಯರಾತ್ರಿಯು ನಿರೀಕ್ಷೆಗಿಂತ 1.59 ಮಿಲಿಸೆಕೆಂಡ್‌ಗಳಷ್ಟು ಮುಂಚಿತವಾಗಿ ಆಗಮಿಸಿದೆ ಎಂದು ಪರಮಾಣು ಗಡಿಯಾರವು ದಾಖಲಿಸಿರುವುದು!

ಕಳೆದ ಕೆಲವು ವರ್ಷಗಳಲ್ಲಿ ಇಂತಹ ಕಡಿಮೆ ದಿನದ ಅವಧಿಯನ್ನು ಹೆಚ್ಚೆಚ್ಚು ಗುರುತಿಸಲಾಗಿದೆ. ಕಳೆದ 50 ವರ್ಷಗಳಲ್ಲಿ ಸುಮಾರು 28 ಕಡಿಮೆ ದಿನದ ಅವಧಿಯ ದಿನಗಳು 2020ರಲ್ಲಿಯೇ ದಾಖಲಾಗಿವೆ. ಇದರಲ್ಲಿ ಜುಲೈ 19 ರಂದು ದಾಖಲಾಗಿರುವುದು ಆ ವರ್ಷದ ಅತೀ ಕಡಿಮೆ ದಿನದ ಅವಧಿ. ಅಂದರೆ, 2020 ಜುಲೈ 19ರ ಮಧ್ಯರಾತ್ರಿಯು 1.47 ಮಿಲಿಸೆಕೆಂಡ್‌ಗಳಷ್ಟು ಮುಂಚಿತವಾಗಿಯೇ ಆಗಮಿಸಿತ್ತು. ಜೊತೆಗೆ, ಈ ವರ್ಷದ ಜುಲೈ 26ರಂದೂ ಕೂಡ ಮಧ್ಯರಾತ್ರಿಯು 1.50 ಮಿಲಿಸೆಕೆಂಡ್‌ಗಳಷ್ಟು ಮುಂಚಿತವಾಗಿಯೇ ಆಗಮಿಸಿ, ಜೂನ್ 29ರ ದಾಖಲೆಯನ್ನು ಮುರಿಯುವ ಹಂತದಲ್ಲಿತ್ತು.

ಇದೆಲ್ಲವನ್ನು ಗಮನಿಸಿದರೆ ಜಗತ್ತು ವೇಗವಾಗುತ್ತಿದೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ಮನುಷ್ಯನ ಜೀವಿತಾವಧಿಯ ಕಾಲಮಾನದಂತೆ ಭೂಮಿಯ ಜೀವಿತಾವಧಿಯ ಕಾಲಮಾನವನ್ನು ಗ್ರಹಿಸಿ ಹೇಳುವುದಾದರೆ ನಾವು ಕಣ್ಣು ಮಿಟುಕಿಸುವ ಸಮಯದ ಅವಧಿಯಲ್ಲಿ ಭೂಮಿಯ ಮೇಲೆ ಡೈನೋಸಾರ್‌ಗಳು ಜೀವಿಸಿ, ನಶಿಸಿಹೊಗಿವೆ. ಅಷ್ಟು ಅನಂತವಾಗಿದೆ ಈ ಭೂಮಿಯ ಭೌಗೊಳಿಕ ಕಾಲಮಾನ (Geological Timescale). ಈ ಕಾಲಮಾನದ ದೀರ್ಘಾವಧಿಯಲ್ಲಿ ನಾವು ಭೂಮಿಯ ತಿರುಗುವಿಕೆಯನ್ನು ಅಧ್ಯಯನ ಮಾಡಿದರೆ ಈಗ ಭೂಮಿಯು ಕಡಿಮೆ ವೇಗದಲ್ಲಿ ತಿರುಗುತ್ತಿದ್ದು, ಹಿಂದೆ ಇದು ವೇಗವಾಗಿ ತಿರುಗುತ್ತಿದ್ದನ್ನು ನಾವು ಕಂಡುಕೊಂಡಿದ್ದೇವೆ. ಸುಮಾರು 140 ಕೋಟಿ ವರ್ಷಗಳ ಹಿಂದೆ ಭೂಮಿಯ ಒಂದು ದಿನ 19 ಗಂಟೆಗಳಿಗೂ ಕಡಿಮೆ ಇತ್ತು, ಈಗ ಇದು 24 ಗಂಟೆಗಳಾಗಿದೆ. ವೈಜ್ಞಾನಿಕವಾಗಿ ಲೆಕ್ಕ ಹಾಕಿರುವ ಪ್ರಕಾರ ಪ್ರತಿ ವರ್ಷ ಒಂದು ದಿನದ ಅವಧಿಯು (Both Day and Night) ಎಪ್ಪತ್ತ ನಾಲ್ಕು ಸಾವಿರದ ಒಂದನೇ ಬಾಗದಷ್ಟು ಸೆಕೆಂಡುಗಳಷ್ಟು ದೀರ್ಘವಾಗುತ್ತಿದೆ. ಇದಕ್ಕೆ ಕಾರಣ ಬೆಳದಿಂಗಳಾಗಿ ಹೊಳೆಯುವ, ಭೂಮಿಯ ಉಪಗ್ರಹವಾದ ಚಂದಿರ. ಭೂಮಿ ಮತ್ತು ಚಂದ್ರನ ಗುರುತ್ವ ಬಲದ ಎಳೆತವು ಭೂಮಿಯ ತಿರುಗುವಿಕೆಯನ್ನು ನಿಧಾನಗೊಳಿಸುತ್ತಿದೆ.

ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟವು ನಮ್ಮ (ನಾಗರಿಕರು ಬಳಸುವ ಸಮಯ- Civil Time) ಗಡಿಯಾರಗಳ ಸಮಯವನ್ನು ಗ್ರಹಗಳ ತಿರುಗುವಿಕೆಯ ಸಮಯದಲ್ಲಾಗುವ ಬದಲಾವಣೆಯ ಅನುಗುಣವಾಗಿ ಇರಿಸಲು ಕಲವೊಂದು ವಿಧಾನವನ್ನು ಕಂಡುಕೊಂಡಿದೆ. ಗ್ರಹಗಳ ತಿರುಗುವಿಕೆ ಅಂದರೆ ಭೂಮಿಯ ತಿರುಗುವಿಕೆಯ ಅವಧಿಯ ಆಧಾರದಲ್ಲಿ ವರ್ಷದ ಜೂನ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ಅಧಿಕ ಸೆಕೆಂಡ್‌ಗಳನ್ನು ಸೇರಿಸಲು ನಿರ್ಧರಿಸಿದೆ. ನಿಮಗೆ ನೆನಪಿದ್ದರೆ 2016ರಲ್ಲಿ ಡಿಸೆಂಬರ್ 31ರ ಮಧ್ಯರಾತ್ರಿಯಂದು ಗಡಿಯಾರಕ್ಕೆ ಒಂದು ಅಧಿಕ ಸೆಕೆಂಡ್‌ಅನ್ನು ಸೇರಿಸಿ 2017ರ ವರ್ಷವನ್ನು ಬರಮಾಡಿಕೊಳ್ಳಲಾಯಿತು. ಅಂದರೆ ಡಿಸೆಂಬರ್ 31ರ ಮಧ್ಯರಾತ್ರಿ 11 ಗಂಟೆ 59 ನಿಮಿಷ 59 ಸೆಕೆಂಡ್‌ನಿಂದ 2017ರ ಮುಂಜಾನೆ 00:00:00 ಸಮಯವಾಗಲು ಎರಡು ಸೆಕೆಂಡಿನ ಕಾಲಾವಕಾಶ ನೀಡಲಾಯಿತು! ಈ ಮೊದಲು 1972ರಲ್ಲಿಯೂ ಹೀಗೆ ಅಧಿಕ ಸೆಕೆಂಡ್ ಸೇರಿಸಲಾಗಿತ್ತು. ಈ ರೀತಿ ಲೆಕ್ಕಹಾಕಿರುವ ಪ್ರಕಾರ ಈ ವರ್ಷ ಡಿಸೆಂಬರ್ 31ರ ಮಧ್ಯರಾತ್ರಿಯೂ ಕೂಡ ಅಧಿಕ ಸೆಕೆಂಡ್ ಸೇರಿಸುವ ಪ್ರಸ್ತಾವನೆ ಇದೆ. ಆದರೆ, ಭೂಮಿಯ ಈ ಅನಿರೀಕ್ಷಿತ ವೇಗವಾಗಿ ತಿರುಗುವಿಕೆಯು ವರ್ಷಾಂತ್ಯದಲ್ಲಿ ಅಧಿಕ ಸೆಕೆಂಡ್ ಸೇರಿಸಲು ಅವಕಾಶ ನೀಡುವುದೋ ಇಲ್ಲವೋ ಇನ್ನೂ ತಿಳಿಯದ ವಿಚಾರ.

ಭೂಮಿಯ ಭೌಗೋಳಿಕ ಕಾಲಮಾನದಲ್ಲಿ ಭೂಮಿಯ ತಿರುಗುವಿಕೆಯ ಅವಧಿ ಕಡಿಮೆಯಾಗುತ್ತಿದ್ದರೆ, ಕೆಲವು ನಿರ್ದಿಷ್ಠ ದಿನದಂದು ಭೂಮಿಯ ತಿರುಗುವಿಕೆಯ ಅವಧಿಯು ಏರುವುದು ಮತ್ತು ಇಳಿಯುವುದನ್ನು ಗಮನಿಸುತ್ತಿದ್ದೇವೆ. ಭೂಮಿಯ ಕೇಂದ್ರಭಾಗದಲ್ಲಿ ಅತೀ ಭಾರವಾದ ಲೋಹಗಳು ಕರಗಿದ ತಿರುಳಿದೆ, ಇದರೆ ಮೇಲೆ ಅತ್ಯಂತ ನಿಧಾನವಾಗಿ ಚಲಿಸಬಹುದಾದ ಭೂ ಪ್ರದೇಶವಾದ ಖಂಡಗಳು ಮತ್ತು ಸಾಗರಗಳಿವೆ; ಇದರೆ ಜೊತೆಗೆ ಅನಿಲದ ವಾತಾವರಣದ ಹೊದಿಕೆಯು ಭೂಮಿಯನ್ನು ಸುತ್ತುವರಿದಿದೆ. ಜೊತೆಗೆ ಭೂಮಿ ತನ್ನ ಅಕ್ಷದ ಸುತ್ತ ತಿರುಗುವಾಗ ಕೂಡ ಬುಗರಿಯಂತೆ ಅತ್ತಿತ್ತಾ ವಾಲಾಡುತ್ತಾ ತಿರುಗುತ್ತಿದೆ. ಭೂಮಿಯ ಈ ಎಲ್ಲಾ ಭಾಗಗಳು ಮತ್ತು ಇದರೆ ಒಟ್ಟು ಚಲನೆಗಳಿಂದ ಭೂಮಿಯ ತಿರುಗುವಿಕೆಯ ಅವಧಿ ಏರಬಹುದು ಅಥವಾ ಇಳಿಯಬಹುದು. ಸಾಮಾನ್ಯವಾಗಿ ಇಂತಹ ಅತೀ ಸೂಕ್ಷ್ಮ ಬದಲಾವಣೆಗಳು ನಮ್ಮ ಗ್ರಹಿಕೆಗೆ ಬರುವುದಿಲ್ಲ.

ಸಾಗರಗಳ ತಾಪಮಾನವು ಸರಾಸರಿ ತಾಪಮಾನಕ್ಕಿಂತಲೂ ಹೆಚ್ಚಾದಾಗ ವಾತಾವರಣದಲ್ಲಿ ಒಣಹವೆ ಹೆಚ್ಚಾಗಿ ಅತಿ ಹೆಚ್ಚು ಬಲವಾದ ಗಾಳಿ ಬೀಸುವುದರಿಂದ ಭೂಮಿಯ ತಿರುಗುವಿಕೆಯ ಅವಧಿ ಕಡಿಮೆಯಾಗಿ ದಿನದ ಅವಧಿಯು ಕೆಲವು ಮಿಲಿ ಸೆಕೆಂಡುಗಳ ಕಾಲ ಹೆಚ್ಚುತ್ತದೆ. ಭೂಕಂಪನವು ಇದರ ವಿರುದ್ಧವಾದ ಪರಿಣಾಮವನ್ನು ಬೀರುತ್ತದೆ. 2004ರಲ್ಲಿ ಇಂಡೋನೆಷಿಯಾದಲ್ಲಿ ನಡೆದ ಭೂಕಂಪನದಿಂದ ಮತ್ತು ಸುನಾಮಿಯಿಂದ ನಡುಗಿದ ಭೂಪ್ರದೇಶದ ಕಾರಣದಿಂದ ಅಂದಿನ ದಿನದ ಅವಧಿಯು ಮೈಕ್ರೊ ಸೆಕೆಂಡಿನಷ್ಟು ಕಡಿಮೆಯಾಗಿದ್ದನ್ನು ಗಮನಿಸಲಾಗಿದೆ. ಭೂಮಿಯ ತಿರುಳಿನ ದಿಕ್ಕಿಗೆ ದ್ರವ್ಯವು ಚಲಿಸಿದರೆ ಭೂಮಿಯ ತಿರುಗುವಿಕೆಯ ಅವಧಿ ಏರಿಕೆಯಾಗುತ್ತದೆ. ಭೂಮಿಯ ತಿರುಳಿನ ಭಾಗದಿಂದ ದ್ರವ್ಯವು ಹೊರದೂಡಲ್ಪಟ್ಟರೆ, ಅದು ಭೂಮಿಯ ತಿರುಗುವಿಕೆಯ ಅವಧಿಯನ್ನು ಕಡಿಮೆ ಮಾಡುತ್ತದೆ; ಇದು ಭೌತವಿಜ್ಞಾನ ಹೇಳುವ ನಿಯಮ.

ಭೂಮಿಯ ಈ ಎಲ್ಲಾ ವಿಭಿನ್ನ ವಿದ್ಯಮಾನಗಳು ದಿನದ ಅವಧಿಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದು ವಿಜ್ಞಾನಿಗಳಿಗೆ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಆದರೆ, ಭೂಮಿಯು ಕೆಲವೊಮ್ಮೆ ಅನಿರೀಕ್ಷಿತವಾಗಿ ವೇಗವಾಗಿ ತಿರುಗುವುದು ಮುಂದಿನ ದಿನಗಳಲ್ಲಿಯೂ ಮುಂದುವರಿದರೆ ಇಲ್ಲಿಯವರೆಗೂ ವರ್ಷಾರ್ಧ ಅಥವಾ ವರ್ಷಾಂತ್ಯದಲ್ಲಿ ನಮ್ಮ ಗಡಿಯಾರಗಳಿಗೆ ಅಧಿಕ ಸೆಕೆಂಡ್ ಸೇರಿಸುವ ಬದಲಾಗಿ, ಒಂದು ಸೆಕೆಂಡ್‌ಅನ್ನು ಕಡಿತಗೊಳಿಸಬೇಕಾಗಬಹುದೇನೋ?

ಈ ಲೇಖನಕ್ಕೆ ಸ್ಪೂರ್ತಿಯಾದದ್ದು: https://www.theguardian.com/science/2022/aug/01/midnight-sooner-earth-spins-faster-shortest-day


ಇದನ್ನೂ ಓದಿ: ನಭೋಮಂಡಲ ಕೌತುಕವನ್ನು ಸೊಬಗಿನಲ್ಲಿ ಸೆರೆಹಿಡಿದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಕುಟುಂಬದ ಮೂವರ ಹತ್ಯೆ ಪ್ರಕರಣ: ಪೊಲೀಸರ ವರ್ಗಾವಣೆ

0
ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಸಂದೀಪನ್ ಘಾಟ್ ಪ್ರದೇಶದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿ ದಲಿತ ಕುಟುಂಬದ ಮೂವರು ಸದಸ್ಯರ ಹತ್ಯೆ ನಡೆದಿದ್ದು, ಇದೀಗ ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಮತ್ತು ಹೊರಠಾಣೆ ಪ್ರಭಾರ ಅಧಿಕಾರಿಯನ್ನು ವರ್ಗಾಯಿಸಲಾಗಿದೆ. ಸಾಂದೀಪನ್...