Homeಅಂತರಾಷ್ಟ್ರೀಯಭೌತಶಾಸ್ತ್ರ ನೊಬೆಲ್ 2022; ಮೂಲಕಣಗಳ ಚಲನೆಯ ಬಗ್ಗೆ ಕ್ರಾಂತಿಕಾರಕ ಸಂಶೋಧನೆ

ಭೌತಶಾಸ್ತ್ರ ನೊಬೆಲ್ 2022; ಮೂಲಕಣಗಳ ಚಲನೆಯ ಬಗ್ಗೆ ಕ್ರಾಂತಿಕಾರಕ ಸಂಶೋಧನೆ

- Advertisement -
- Advertisement -

ಅವಳಿ ಮಕ್ಕಳಿಬ್ಬರು 1940ರಲ್ಲಿ ಬೇರೆಯಾಗಿ 39 ವರ್ಷದ ಬಳಿಕ ಮತ್ತೆ ಭೇಟಿಯಾಗುತ್ತಾರೆ. ಅನಾಥಮಕ್ಕಳಾದ ಇವರನ್ನು 1940ರಲ್ಲಿ ಎರಡು ಭಿನ್ನ ದಂಪತಿಗಳ ಕುಟುಂಬ ದತ್ತು ಸ್ವೀಕರಿಸಿರುತ್ತದೆ. ಅವರವರ ಮನೆಯಲ್ಲಿ ಬೆಳೆಯುವ ಈ ಮಕ್ಕಳು ಎಂದೂ ಕೂಡ ಭೇಟಿಯಾಗಿರುವುದಿಲ್ಲ. ಮೂವತ್ತೊಂಬತ್ತು ವರ್ಷ ಕಳೆದ ನಂತರ 1979ರಲ್ಲಿ ಮತ್ತೆ ಸಂಧಿಸುತ್ತಾರೆ. ಈ ಭೇಟಿ ಹಲವು ಅಚ್ಚರಿಗಳಿಗೆ ಕಾರಣವಾಗುತ್ತದೆ.

ದತ್ತು ಮಕ್ಕಳಾಗಿ ಸ್ವೀಕರಿಸಿದ್ದ ಎರಡು ಕುಟುಂಬಗಳು ಇವರುಗಳ ಹೆಸರಗಳನ್ನು ಚಿಕ್ಕದಾಗಿ ಜಿಮ್ (Jim) ಎಂದೇ ಕರೆಯುತ್ತಿದ್ದರು. ಇಬ್ಬರು ಸಾಕಿದ್ದ ನಾಯಿಯ ಹೆಸರು ಟಾಯ್ (Toy). ಇಬ್ಬರು ಎರಡು ಬಾರಿ ಮದುವೆಯಾಗಿದ್ದರು. ಇಬ್ಬರದ್ದೂ ಮೊದಲ ಪತ್ನಿಯ ಹೆಸರು ಲಿಂಡಾ (Linda) ಎರಡನೇ ಪತ್ನಿಯ ಹೆಸರು ಬೆಟ್ಟಿ (Betty). ಈ ಪರಸ್ಪರ ಹೋಲಿಕೆ ಇಲ್ಲಿಗೆ ನಿಲ್ಲುವುದಿಲ್ಲ. ಇಬ್ಬರಿಗೂ ಒಬ್ಬೊಬ್ಬ ಮಗ. ಆ ಮಕ್ಕಳಿಬ್ಬರ ಹೆಸರು ಕೂಡ ಜೇಮ್ಸ್ (ಒಬ್ಬನದು James Alan ಇನ್ನೊಬ್ಬರದು James Allan). ಇಬ್ಬರೂ ಧೂಮಪಾನ ವ್ಯಸನಿಗಳಾಗಿದ್ದರು; ಇಬ್ಬರೂ ಒಂದೇ ಕಾರನ್ನು ಒಡಿಸುತ್ತಿದ್ದರು (Chevrolet), ಅಷ್ಟೇ ಅಲ್ಲದೆ, ಇಬ್ಬರೂ ಕೂಡ ಭದ್ರತಾ ಸಿಬ್ಬಂದಿಯಾಗಿಯೇ ಕೆಲಸ ನಿರ್ವಹಿಸುತ್ತಿದ್ದರು. ಇಬ್ಬರೂ ಕೂಡ ತಮ್ಮ ರಜಾ ದಿನಗಳನ್ನು ಫ್ಲೋರಿಡಾ ಬೀಚ್‌ನಲ್ಲಿಯೇ ಕಳೆಯುತ್ತಿದ್ದುದು. ಇಬ್ಬರೂ ಭೇಟಿ ನೀಡುವ ಮೊದಲಿಗೆ ಈ ಯಾವ ವಿಷಯಗಳೂ ಪರಸ್ಪರ ತಿಳಿದಿರಲಿಲ್ಲ!

ಮೂವತ್ತೊಂಬತ್ತು ವರ್ಷಗಳವರೆಗೆ ಈ ಅವಳಿಗಳು ಭೇಟಿಯಾಗದೇ ಇದ್ದರೂ ಅವರ ಜೀವನಗಳ ಹಾದಿ, ಅವರು ಯೋಚಿಸಿದ ರೀತಿ ಮತ್ತು ಬಳಸಿದ ಹೆಸರುಗಳು ಒಂದೇ ರೀತಿಯಾಗಿರುವುದು ಅಚ್ಚರಿಯಾಗಿಯೇ ಇದೆ. ಮಿನಿಸೋಟಾ ವಿಶ್ವವಿದ್ಯಾನಿಲಯದ ಡಾಕ್ಟರ್ ಒಬ್ಬರು ಈ ಇಬ್ಬರ ಮೆದುಳು ತರಂಗಗಳ ಮೇಲೆ ಪರೀಕ್ಷೆಗಳನ್ನು ನಡೆಸಿದ್ದು ಆ ತರಂಗಗಳ ಫಲಿತಾಂಶವೂ ಕೂಡು ಒಂದೇ ತೆರನಾಗಿದೆ ಎಂದು ಹೇಳಿದ್ದಾರೆ. ಈ ಕಥೆ “ಜಿಮ್ ಟ್ವಿನ್ಸ್” (Jim Twins) ಎಂದೇ ಪ್ರಸಿದ್ಧಿ ಪಡೆದಿದೆ. ಅರೆ ಈ ಜಿಮ್ ಟ್ವಿನ್ಸ್ ಕಥೆ ಈಗೇಕೆ ಬಂತು ಅಂದರೆ, ಈ ವರ್ಷದ ಭೌತವಿಜ್ಞಾನಕ್ಕೆ ನೀಡಿದ ನೊಬೆಲ್ ಪ್ರಶಸ್ತಿಯು ಈ ಜಿಮ್ ಟ್ವಿನ್ಸ್ ಕಥೆಯ ತರಹದ ಥಿಯರಿ ಮತ್ತು ಪ್ರಯೋಗಗಳೇ ಆಗಿರುವುದಕ್ಕೆ!

ಹತ್ತೊಂಬತ್ತು-ಇಪ್ಪತ್ತನೇ ಶತಮಾನದಲ್ಲಿ ಅನೇಕ ಕ್ರಾಂತಿಕಾರಕ ಚಿಂತನೆಗಳು ಮೂಡಿದವು; ಮತ್ತು ಆ ಪರಿಸರದಲ್ಲಿ ಘಟಿಸಿದ ಅನೇಕ ವಿದ್ಯಮಾನಗಳನ್ನು ವೈಜ್ಞಾನಿಕವಾಗಿ ಅರಿಯುವ ಅಧ್ಯಯನಗಳು ಮತ್ತು ಪ್ರಯೋಗಗಳು ನಡೆದವು. 19ನೇ ಶತಮಾನದ ಮಧ್ಯಭಾಗದಲ್ಲಿ ಸ್ಕಾಟ್‌ಲ್ಯಾಂಡ್ ಗಣಿತಜ್ಞ ಮತ್ತು ಭೌತ ವಿಜ್ಞಾನಿಯಾದ ಜೇಮ್ಸ್ ಕ್ಲಾರ್ಕ್ ಮ್ಯಾಕ್ಸ್‌ವೆಲ್ ಬೆಳಕಿನ ಕಿರಣಗಳು ವಿದ್ಯುತ್ ಮತ್ತು ಕಾಂತೀಯ ಕ್ಷೇತ್ರಗಳಿಂದ ರೂಪುಗೊಂಡಿದೆ ಎಂದು ಪ್ರಥಮ ಬಾರಿಗೆ ನಿರೂಪಿಸಿದರು. ಈ ನಿರೂಪಣೆ ಭೌತವಿಜ್ಞಾನದಲ್ಲಿ ಹೊಸ ಅಧ್ಯಾಯಕ್ಕೆ ಕಾರಣವಾಯಿತು. ಎಲ್ಲಾ ವಿದ್ಯುತ್ ಕಾಂತೀಯ ತರಂಗಗಳೂ ಕೂಡ ಬೆಳಕಿನ ವೇಗವಾದ ಸೆಕೆಂಡಿಗೆ ಮೂರು ಲಕ್ಷ ಕಿಲೋ ಮೀಟರ್ ಸಾಗುತ್ತದೆ ಎನ್ನುವುದನ್ನು ಕೂಡ ಅವರು ತಿಳಿಸಿದರು. ತದನಂತರದ ಅಧ್ಯಯನಗಳು ಮ್ಯಾಕ್ಸ್‌ವೆಲ್ ಅವರ ವಿದ್ಯುತ್ ಕಾಂತೀಯ ತರಂಗಗಳ ಗುಣ ಲಕ್ಷಣಗಳ ಸಹಾಯದಿಂದ ಇನ್ನೂ ಅನೇಕ ವಿದ್ಯಮಾನವನ್ನು ವಿವರಿಸಿದವು. ಆದರೆ, ಭೌತವಿಜ್ಞಾನದಲ್ಲಿ ಬರುವ ದ್ಯುತಿವಿದ್ಯುತ್ ಪರಿಣಾಮವನ್ನು (Photoelectric Effect) ವಿವರಿಸಲು ಸಾಧ್ಯವಾಗಲಿಲ್ಲಾ. ಮ್ಯಾಕ್ಸ್ ಪ್ಲಾಂಕ್ ಮತ್ತು ಐನ್‌ಸ್ಟೀನ್ ಇಬ್ಬರೂ ಈ ದ್ಯುತಿವಿದ್ಯುತ್ ಪರಿಣಾಮವನ್ನು ವಿವರಿಸಲು ವಿದ್ಯುತ್ ಕಾಂತೀಯ ತರಂಗಗಳು ಸಣ್ಣಸಣ್ಣ ಕಣಗಳೆಂದು ಊಹಿಸಿ ವಿವರಿಸಿದರು. ಐನ್‌ಸ್ಟೀನ್ ಈ ಸಣ್ಣ ಕಣಗಳನ್ನು ’ಫೋಟಾನ್’ಗಳೆಂದು (Photon) ಕರೆದರು. ಐನ್‌ಸ್ಟೀನ್‌ನ ಫೋಟಾನ್ ವಿವರಣೆಯು ದ್ಯುತಿವಿದ್ಯುತ್ ಪರಿಣಾಮವನ್ನು ಅತ್ಯಂತ ನಿಖರವಾಗಿ ಮತ್ತು ಯಶಸ್ವಿಯಾಗಿ ವಿವರಿಸಿತು. ಇದೇ ವಿವರಣೆಗೆ 1921ರ ನೊಬೆಲ್ ಪ್ರಶಸ್ತಿಯನ್ನು ಐನ್‌ಸ್ಟೀನ್ ಅವರಿಗೆ ನೀಡಲಾಯಿತು. ಈ ವಿವರಣೆ ವಿದ್ಯುತ್ ಕಾಂತೀಯ ತರಂಗಗಳಿಗೆ ಕಣದ ಗುಣಲಕ್ಷಣಗಳಿರುವುದನ್ನು ಖಾತ್ರಿ ಪಡಿಸಿತ್ತು. ಇದೇ ಕಾಲಘಟ್ಟದಲ್ಲಿ ಡಿ ಬ್ರಾಗ್ಲೀ ಎಂಬ ವಿಜ್ಞಾನಿಯು ಎಲ್ಲಾ ಕಾಯಗಳಿಗೂ ಕಣ ಮತ್ತು ತರಂಗದ ಗುಣಗಳು ಇದ್ದೇ ಇರುತ್ತವೆ, ದೊಡ್ಡ ಕಾಯಗಳಲ್ಲಿ ತರಂಗದ ಗುಣ ಲಕ್ಷಣಗಳು ಗೊಚರಿಸುವುದು ಕಷ್ಟ ಎಂದು ವಿವರಿಸಿದರು. ಇದನ್ನು ಭೌತವಿಜ್ಞಾನದಲ್ಲಿ ಕಾಯದ ದ್ವಂದ್ವ ಗುಣ (Dual Nature of Matter) ಎಂದು ಕರೆಯಲಾಗುತ್ತದೆ. ಈ ಥಿಯರಿಯು ಭೌತವಿಜ್ಞಾನದ ಜಗತ್ತಿನಲ್ಲಿ ಪಲ್ಲಟಗಳನ್ನು ಸೃಷ್ಟಿಸಿತು. ಇಂತಹ ಚಿಂತನೆ ಮತ್ತು ಸಂಕಥನಗಳ ಮುಂದುವರಿದ ಭಾಗವೇ ಕ್ವಾಂಟಮ್ ಮೆಕಾನಿಕ್ಸ್!

ಕ್ವಾಂಟಮ್ ಮೆಕಾನಿಕ್ಸ್ ನಮ್ಮ ಸುತ್ತಮುತ್ತಲ ಜಗತ್ತಿನಲ್ಲಿ ಸಾಮಾನ್ಯವಾಗಿ ಗ್ರಹಿಸುವ ಸ್ಥೂಲಕಾಯಗಳ ಅಧ್ಯಯನಕ್ಕೆ ಇರುವ ಥಿಯರಿ ಅಲ್ಲ. ಇದು ಸೂಕ್ಷ್ಮ ಕಣಗಳು ಅಂದರೆ ಮೂಲ ಕಣಗಳ (Elementary Particle) ಅಧ್ಯಯನದ ವಿಭಾಗ. ಮೂಲಕಣಗಳಲ್ಲಿ ದ್ವಂದ್ವ ಗುಣಗಳ ತೋರಿಕೆಯು ಹೆಚ್ಚಿರುತ್ತದೆ. ಅಂದರೆ ಈ ಮೂಲ ಕಣಗಳು ಪ್ರತಿ ಕ್ಷಣದಲ್ಲೂ ಕಣದ ಹಾಗೂ ತರಂಗದ ಗುಣ ಲಕ್ಷಣಗಳನ್ನು ತೋರುತ್ತಿರುತ್ತವೆ. ಇಂತಹ ಮೂಲಕಣಗಳ ಚಲನವಲನಗಳನ್ನು ಅಧ್ಯಯನ ಮಾಡುವುದು ಕಷ್ಟವಾಗಿದೆ. ಒಂದು ಉದಾಹರಣೆ: ನೀವು ಹೀಗೆ ಊಹಿಸಿಕೊಳ್ಳಿ; ಒಂದು ಬಾಕ್ಸ್ ಒಳಗೆ ಒಂದು ಬೆಕ್ಕು, ವಿಷ ತುಂಬಿದ ಗಾಜಿನ ಮುಚ್ಚಿದ ಲೋಟ, ಒಂದು ವಿಕಿರಣಶೀಲ ವಸ್ತು (Radioactive material), ವಿಕಿರಣವನ್ನು ಗ್ರಹಿಸುವ ಒಂದು ಗ್ರಹಿಕಾವಸ್ತು ಮತ್ತು ಒಂದು ಸುತ್ತಿಗೆ ಇದೆ ಎಂದಿಟ್ಟುಕೊಳ್ಳೋಣ. ಈ ವಿಕಿರಣಶೀಲ ವಸ್ತು ಗಂಟೆಗೆ ಒಂದು ಪರಮಾಣುವನ್ನು ಹೊರಸೂಸಬಹುದು ಅಥವಾ ಹೊರಸೂಸದೆ ಇರಬಹುದು. ಆದರೂ ಒಂದು ಪರಮಾಣು ಹೊರಬಂದರೆ ಅದನ್ನು ಗ್ರಹಿಕಾವಸ್ತು ಗ್ರಹಿಸಿ, ಇದಕ್ಕೆ ಜೋಡಿಸಲಾಗಿರುವ ಸುತ್ತಿಗೆಯು ವಿಷ ತುಂಬಿದ ಗಾಜಿನ ಮುಚ್ಚಿದ ಲೋಟವನ್ನು ಒಡೆಯುತ್ತದೆ. ಆಗ ಬೆಕ್ಕು ವಿಷ ತಿಂದು ಸಾಯಬಹುದು. ವಿಕಿರಣಶೀಲ ವಸ್ತುವು ಯಾವುದೇ ಪರಮಾಣುವನ್ನು ಹೊರಸೂಸದಿದ್ದರೆ, ಬೆಕ್ಕು ಹಾಗೆ ಬದುಕಿರುತ್ತದೆ. ಈ ಎಲ್ಲವೂ ಸೀಲ್ಡ್ ಬಾಕ್ಸ್‌ನ ಒಳಗೆ ಇರುತ್ತದೆ. ಈ ವ್ಯವಸ್ಥೆಯನ್ನು ಒಂದು ಗಂಟೆ ಹಾಗೆ ಬಿಟ್ಟಾಗ ಏಳುವ ಪ್ರಶ್ನೆ ಏನೆಂದರೆ, ಒಂದು ಗಂಟೆಯ ನಂತರ ಬೆಕ್ಕು ಈ ಸೀಲ್ಡ್ ಬಾಕ್ಸ್ ಒಳಗೆ ಬದುಕಿದೆಯೋ ಅಥವಾ ಸತ್ತಿದೆಯೋ ಎಂದು. ಬೆಕ್ಕು ಎರಡೂ ಸ್ಥಿತಿಯ ಅಸ್ತಿತ್ವವನ್ನು ಹೊಂದಿರುತ್ತದೆ ಎಂದು ಕ್ವಾಂಟಮ್ ಮೆಕಾನಿಕ್ಸ್ ಹೇಳುತ್ತದೆ. ಒಂದೇ ಕ್ಷಣದಲ್ಲಿ ಬೆಕ್ಕು ಬದುಕಿರುತ್ತದೆ ಮತ್ತು ಸತ್ತಿರುತ್ತದೆಂದು. ಇದನ್ನು ಶ್ರೋಡಿಂಗರ್ ಕ್ಯಾಟ್ ಊಹೆಯ ಪ್ರಯೋಗ ಎಂದು ಕರೆಯುತ್ತಾರೆ. ಅಂದರೆ, ಮೂಲ ಕಣಗಳು ಎಲ್ಲಾ ಕ್ಷಣಗಳಲ್ಲಿ ಎಲ್ಲಾ ಬಗೆಯ ಸ್ಥಿತಿಯ ಅಸ್ತಿತ್ವವನ್ನು ಹೊಂದಿರುತ್ತದೆ ಎಂದು ಅರ್ಥ. ನೈಜ ಜೀವನದಲ್ಲಿ ಬೆಕ್ಕು ಒಂದೇ ಕ್ಷಣದಲ್ಲಿ ಬದುಕಿರುವುದು ಮತ್ತು ಸತ್ತಿರುವುದನ್ನು ನಾವು ಕಲ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ, ಕ್ವಾಂಟಮ್ ಮೆಕಾನಕ್ಸ್‌ನಲ್ಲಿ ಒಂದು ಕ್ಷಣದಲ್ಲಿ ಕಾಯಗಳು ಎಲ್ಲಾ ಬಗೆಯ ಸ್ಥಿತಿಯಲ್ಲಿಯು ತನ್ನ ಅಸ್ತಿತ್ವವನ್ನು ಹೊಂದಿರುವುದು ಸಹಜವಾದ ಗುಣ. ಮೂಲಕಣಗಳು ಈ ರೀತಿಯ ಗುಣ ಲಕ್ಷಣಗಳನ್ನು ಹೊಂದಿವೆ. ಹಾಗಾಗಿಯೇ ಈ ಮೂಲಕಣಗಳ ನಿಖರವಾದ ಚಲನವಲನವನ್ನು ಗ್ರಹಿಸುವುದು ಕಷ್ಟವಾಗಿರುವುದು.

ಅಧ್ಯಯನಗಳು ನಡೆದಂತೆ, ಈ ಮೂಲಕಣಗಳ ಗುಣಗಳ ಬಗೆಗಿನ ತಿಳಿವಳಿಕೆ ಕಲ್ಪನೆಗೂ ನಿಲುಕದಷ್ಟು ಬದಲಾಗುತ್ತಿವೆ. ನಮ್ಮ ಚಿಕ್ಕಂದಿನಲ್ಲಿ ಚೆಂಡನ್ನು ಗೋಡೆಗೆ ಎಸೆದು ಅದು ವಾಪಸ್ ಪುಟಿದೆದ್ದಾಗ ಹಿಡಿಯುವ ಆಟವನ್ನು ಆಡಿದ್ದೇವಲ್ಲವೆ. ಎಂದಾದರೂ ಚೆಂಡು ಗೋಡೆಯ ಒಳಗೆ ನುಸುಳಿ ಮತ್ತೊಂದು ಬದಿಗೆ ಹೋಗಿರುವ ಅನುಭವ ಏನಾದರೂ ಇದೆಯಾ? ನಮ್ಮ ಅನುಭವದಲ್ಲಿ ಇಂತಹ ಪ್ರಸಂಗ ಸಾಧ್ಯವೇ ಇಲ್ಲಾ ಅಥವಾ ಹಾಗೆ ನಡೆಯಲಾಗದು ಎಂದೇ ಹೇಳಬಹುದು. ಆದರೆ, ಮೂಲಕಣಗಳ ವಿಷಯದಲ್ಲಿ ಹಾಗಾಗುವುದಿಲ್ಲ. ಈ ಕಣಗಳು ಇಂತಹ ಗೋಡೆಗಳನ್ನು ನುಸುಳಿ ಇನ್ನೊಂದು ಬದಿಗೆ ಸರಾಗವಾಗಿ ಹೋಗುವ ಸಾಮರ್ಥ್ಯವನ್ನು ಹೊಂದಿವೆ; ಇದನ್ನು ಸುರಂಗ ಪರಿಣಾಮ (Tunnelling Effect) ಎಂದು ಕರೆಯುತ್ತಾರೆ. ಸೂಕ್ಷ್ಮ ಕಣಗಳಲ್ಲಿ ಸುರಂಗ ಪರಿಣಾಮ ಒಂದು ಸಹಜ ಪ್ರಕ್ರಿಯೆ. 1930ರಲ್ಲಿ ಮೂಲಕಣಗಳ ಬಗ್ಗೆ ಇಂತಹದ್ದೇ ಇನ್ನೊಂದು ವಿಚಿತ್ರ ಗುಣವನ್ನು ವಿವರಿಸಲಾಯಿತು. ಅದೇನೆಂದರೆ, ಎರಡು ಮೂಲಕಣಗಳು ಮಧ್ಯ ಒಂದು ನಿಗೂಢ ಬಂಧನವಿದ್ದು, ಅವುಗಳಲ್ಲಿ ಒಂದು ಮೂಲ ಕಣದ ಸ್ಥಿತಿಯನ್ನು ಗ್ರಹಿಸಿದರೆ, ಇನ್ನೊಂದು ಕಣದ ಸ್ಥಿತಿಯು ಒಂದೇ ರೀತಿಯಾಗಿರುತ್ತದೆ ಎನ್ನುವುದು.

ಈ ಎರಡು ಮೂಲಕಣಗಳು ಎಷ್ಟೇ ಕೋಟಿ ಕಿಲೋಮೀಟರ್ ಅಥವಾ ಬೆಳಕಿನ ವರ್ಷ ದೂರವಿದ್ದರೂ ಇಂತಹ ಪರಸ್ಪರ ಹೋಲಿಕೆ ಸಾಧ್ಯ ಮತ್ತು ಈ ಪ್ರಕ್ರಿಯೆ ಕ್ಷಣದಲ್ಲಿ ಅಂದರೆ ತತ್‌ಕ್ಷಣದಲ್ಲಿ (Instantaneous) ನಡೆಯುವುದಾಗಿರುತ್ತದೆ. ಇದನ್ನು ಕ್ವಾಂಟಮ್ ಎಂಟಾಂಗಲ್‌ಮೆಂಟ್ (Quantum Entanglement) ಎಂದು ಕರೆದರು. ಈ ವಿಚಾರವನ್ನು ಐನ್‌ಸ್ಟೀನ್ ಪ್ರಸ್ತಾಪ ಮಾಡಿದ್ದರಾದರೂ ಸಹ ಇದು ಸಾಧ್ಯವಾಗದು ಎಂದು ಹೇಳಿ ಈ ವಿದ್ಯಮಾನವನ್ನು “Spooky action at a distance” (ದೂರದಲ್ಲಿ ನಡೆಯುವ ವಿಚಿತ್ರ ಕ್ರಿಯೆ) ಎಂದು ನುಡಿದರು.

ಅಂದಿನ ಭೌತವಿಜ್ಞಾನವು ಈ “Spooky Action at a Distance” ಒಪ್ಪದಿರಲು ಕಾರಣವಿದೆ. ಐನ್‌ಸ್ಟೀನ್ ತನ್ನ ವಿಶೇಷ ಸಾಪೇಕ್ಷ ಸಿದ್ಧಾಂತದಲ್ಲಿ ಬೆಳಕು ಅಥವಾ ವಿದ್ಯುತ್ ಕಾಂತೀಯ ವಿಕಿರಣ ಚಲಿಸುವ ವೇಗವೇ ನಮ್ಮ ಜಗತ್ತಿನಲ್ಲಿರುವ ’ವೇಗದ ಮಿತಿ’ ಎಂದಿದ್ದರು. ಅಂದರೆ, ಯಾವುದೇ ಕಾಯವು ಅಥವಾ ವಿಕಿರಣವು ಬೆಳಕಿನ ವೇಗಕ್ಕಿಂತ ಹೆಚ್ಚು ವೇಗವಾಗಿ ಚಲಿಸಲು ಸಾಧ್ಯವಿಲ್ಲ ಮತ್ತು ಈ ಬೆಳಕಿನ ವೇಗ ಅಚಲವಾದದ್ದು ಎಂಬ ಸಿದ್ಧಾಂತವದು. ಆದರೆ, ಕ್ವಾಂಟಮ್ ಎಂಟಾಂಗಲ್‌ಮೆಂಟ್ ಬೆಳಕಿನ ವೇಗದ ಮಿತಿಯನ್ನು ಮೀರುವಂತಿದೆ. ಅಂದರೆ, ಪರಸ್ಪರ ನಿಗೂಢ ಬಂಧನದಲ್ಲಿರುವ ಕಣಗಳು ಎಷ್ಟೇ ಲಕ್ಷ ಕೋಟಿ ಬೆಳಕಿನ ವರ್ಷ ದೂರದಲ್ಲಿದ್ದರೂ, ಯಾವುದೇ ಭೌತಿಕ ಸಂಬಂಧ ಇರದಿದ್ದರೂ ಸಹ ಒಂದು ಕಣದ ಸ್ಥಿತಿಯಂತೆಯೇ ಎರಡನೇ ಕಣವು ತತ್‌ಕ್ಷಣಕ್ಕೆ ಇರುತ್ತದೆ. ಅಂದರೆ, ಒಂದು ಕಣದ ಸ್ಥಿತಿಯ ಮಾಹಿತಿ ಇನ್ನೊಂದು ಕಣಕ್ಕೆ ಕ್ಷಣಮಾತ್ರದಲ್ಲಿ ಚಲಿಸುತ್ತಿದ್ದು, ಇದು ಬೆಳಕಿನ ವೇಗಕ್ಕಿಂತಲೂ ಹೆಚ್ಚು ವೇಗವಾಗಿ ಚಲಿಸುತ್ತಿರಬಹುದು ಎಂಬ ಊಹೆ ಇರುವುದರಿಂದ, ಇಂತಹ ಕ್ವಾಂಟಮ್ ಎಂಟಾಗಲ್‌ಮೆಂಟ್ ಸಾಧ್ಯವಿಲ್ಲ ಎಂದೇ ತಿಳಿದು, ಕ್ವಾಂಟಮ್ ಮೆಕಾನಿಕ್ಸ್‌ನ ಮೂಲಭೂತ ವಿಚಾರಗಳಲ್ಲಿ ಏನಾದರೂ ತಪ್ಪಿರಬಹುದು ಎಂದು ಐನ್‌ಸ್ಟೀನ್ ಮತ್ತು ಅಂದಿನ ಕೆಲವು ಭೌತವಿಜ್ಞಾನಿಗಳು ತಿಳಿದಿದ್ದರು.

ದಶಕಗಳು ಕಳೆದಂತೆ, ಕ್ವಾಂಟಮ್ ಎಂಟಾಗಲ್‌ಮೆಂಟ್ ಕಣಗಳ ಬಗೆಗಿನ ಕುತೂಹಲ ಹೆಚ್ಚಾದಂತೆ ಅನೇಕ ವಿಜ್ಞಾನಿಗಳು ಈ “Spooky Action at a Distance” ವಿದ್ಯಮಾನ ಮೂಲ ಕಣಗಳಲ್ಲಿ ನಡೆಯುತ್ತಿದೆ ಎನ್ನುವುದನ್ನು ನಿರೂಪಿಸಿದರು. ಇಂದಿಗೆ ಕ್ವಾಂಟಮ್ ಎಂಟಾಗಲ್‌ಮೆಂಟ್‌ಅನ್ನು ಪ್ರಾಯೋಗಿಕವಾಗಿ ನಿರೂಪಿಸುವ ಅನೇಕ ಪ್ರಯೋಗಗಳು ನಡೆದಿದ್ದರು, ಎರಡು ಮೂಲ ಕಣಗಳ ಮಧ್ಯೆ ಬೆಳಕಿನ ವೇಗಕ್ಕಿಂತಲೂ ಮಿಗಿಲಾಗಿ ಹೇಗೆ ಮಾಹಿತಿ ರವಾನೆಯಾಗುತ್ತಿದೆ ಎನ್ನುವುದು ಇನ್ನು ಪ್ರಶ್ನೆಯಾಗೇ ಉಳಿದಿದೆ. ಇದು ನಾವು ಈ ಲೇಖನದ ಪ್ರಾರಂಭದಲ್ಲಿ ತಿಳಿದ ಜಿಮ್ ಟ್ವಿನ್ಸ್ ಕತೆ ತರಹವೇ ಇದೆ! ವಿಜ್ಞಾನಿಗಳು ಕ್ವಾಂಟಮ್ ಎಂಟಾಗಲ್‌ಮೆಂಟ್ ಆಗಿರುವುದು ಮೂಲ ಕಣಗಳ ಮಧ್ಯೆ ಯಾವುದೇ ಮಾಹಿತಿಯು ಸಂವಹನವಾಗುವುದಿಲ್ಲ, ಅವುಗಳು ಎಷ್ಟೇ ದೂರವಿದ್ದರೂ ಅವುಗಳನ್ನು ಎರಡು ಕಾಯ (Two Body) ಎನ್ನುವ ಬದಲು ಒಂದೇ ಕಾಯ (One Body) ಎಂದು ಭಾವಿಸಬೇಕು ಎನ್ನುವ ಥಿಯರಿಗಳನ್ನು ಪ್ರಸ್ತಾಪಿಸಿದ್ದಾರೆ. ಆದರೆ ಈ ವಿಚಾರ ಇನ್ನೂ ಅಸ್ಪಷ್ಟವಾಗಿಯೇ ಇದೆ.

ಮೂಲ ಕಣಗಳ ಈ ಗುಣಗಳು “ಕ್ವಾಂಟಮ್ ಇನ್‌ಫರ್ಮೇಷನ್”ಗೆ ಬಹಳ ಉಪಯೋಗವಾಗಲಿದೆ. ಈ ವಿಧಾನದಲ್ಲಿ ಸುರಕ್ಷಿತವಾಗಿ ದತ್ತಾಂಶವನ್ನು ರವಾನಿಸಲು, ಸಂಸ್ಕರಣೆ ಮಾಡಲು, ಈಗಿನ ಸೂಪರ್ ಕಂಪ್ಯೂಟರ್‌ಗಳಿಗಿಂತ ಹೆಚ್ಚು ಶಕ್ತಿಯಿರುವ ಕ್ವಾಂಟಮ್ ಕಂಪ್ಯೂಟರ್‌ಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಲಿದೆ. ಕ್ವಾಂಟಮ್ ಎಂಟಾಗಲ್‌ಮೆಂಟ್ ಮತ್ತು ಕ್ವಾಂಟಮ್ ಇನ್‌ಫರ್ಮೇಷನ್‌ಗಳ ಬಗ್ಗೆ ಅಧ್ಯಯನಗಳು 70ರ ದಶಕಗಳಿಂದಲೇ ನಡೆಯುತ್ತಿದ್ದರೂ, ಅದರ ಅನ್ವಯಕಗಳು ಇನ್ನೂ ಅಂಬೆಗಾಲು ಇಡುತ್ತಿವೆ. ಆದರೆ ಈ ವಿಷಯದಲ್ಲಿ ಅಧ್ಯಯನಗಳು ನಡೆದಂತೆ ಭವಿಷ್ಯದಲ್ಲಿ ಕ್ವಾಟಂಮ್ ಎಂಟಾಗಲ್‌ಮೆಂಟ್ ಮತ್ತು ಕ್ವಾಂಟಮ್ ಇನ್‌ಫರ್ಮೇಷನ್‌ಗಳ ವಿಸ್ತಾರ ಅಗಾಧವಾಗಿದೆ. ಈ ವರ್ಷದ ನೊಬೆಲ್ ಪ್ರಶಸ್ತಿಯ ಸಮಿತಿಯು ಇದನ್ನು ಗುರುತಿಸಿದಂತಿದೆ.

ಅಕ್ಟೊಬರ್ 4ರಂದು ಸ್ಟಾಕ್‌ಹೋಮ್‌ನಲ್ಲಿ ನಡೆದ ನೊಬೆಲ್ ಆಯ್ಕೆ ಸಮಿತಿಯ ಪತ್ರಿಕಾಗೋಷ್ಠಿಯಲ್ಲಿ ಅತ್ಯಂತ ಸೂಕ್ಷ್ಮ ಕಣಗಳಾದ ಫೋಟಾನ್‌ಗಳನ್ನು ಜೋಡಿಸುವ ವಿಧಾನವನ್ನು ಸಂಶೋಧಿಸಿದ ಭೌತವಿಜ್ಞಾನಿಗಳಾದ ಅಲೇನ್ ಅಸ್ಟೆಕ್ಟ್ (ಫ್ರೆಂಚ್), ಜಾನ್ ಎಫ್. ಕ್ಲಾಸರ್ (ಅಮೆರಿಕ) ಹಾಗೂ ಆಂಟನ್ ಜಿಲಿಂಗರ್ (ಆಸ್ಟ್ರಿಯಾ) ಇವರುಗಳು 2022ರ ಭೌತವಿಜ್ಞಾನದ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ತಿಳಿಸಿತು. ಇವರ ಸಂಶೋಧನಾ ವಿಷಯವು “ಕ್ವಾಂಟಮ್ ಇನ್‌ಫರ್ಮೇಷನ್”ಗೆ ಸಂಬಂಧಿಸಿದ್ದಾಗಿದೆ; ಕ್ವಾಂಟಮ್ ಕಂಪ್ಯೂಟಿಂಗ್, ಸಂವೇದಿ ತಂತ್ರಜ್ಞಾನ ಮತ್ತು ಮಾಹಿತಿಯನ್ನು ಅತ್ಯಂತ ಸುರಕ್ಷಿತವಾಗಿ ವರ್ಗಾವಣೆ ಮಾಡಲು ಕ್ವಾಂಟಮ್ ಇನ್‌ಫರ್ಮೇಷನ್ ವಿಜ್ಞಾನದಿಂದ ಉಪಯೋಗವಾಗಲಿದೆ.

ವಿಶ್ವದ ಬಗೆಗಿನ ಮನುಷ್ಯನ ಗ್ರಹಿಕೆ ಶೇ.4 ರಷ್ಟೂ ದಾಟಿಲ್ಲವೆನ್ನಬಹುದು. ಈಗಾಗಲೇ ತಿಳಿದಿರುವ ಕೆಲವು ನಿಸರ್ಗದ ನಿಯಮಗಳಿಂದ ನಮ್ಮ ಸುತ್ತಮುತ್ತಲ ಜಗತ್ತನ್ನು ಸ್ವಲ್ಪ ಪ್ರಮಾಣದಲ್ಲಿ ಅರ್ಥ ಮಾಡಿಕೊಂಡಿದ್ದರೂ ಇನ್ನೂ ಹಲವು ವಿಷಯಗಳ ಅಸ್ಪಷ್ಟವಾಗಿಯೇ ಉಳಿದಿವೆ. ನ್ಯೂಟನ್‌ನ ಗುರುತ್ವ ಸಮೀಕರಣವು ನಮ್ಮ ಸುತ್ತಲು ನಡೆಯುವ ದಿನನಿತ್ಯದ ಭೌತಿಕ ಚಲನೆಗಳನ್ನು, ಗ್ರಹಗಳ ಚಲನೆ, ಗ್ಯಾಲಾಕ್ಸಿಗಳ ಚಲನೆ ಮತ್ತು ನಕ್ಷತ್ರಗಳ ಹುಟ್ಟು-ಸಾವು ಇವುಗಳ ಬಗ್ಗೆ ವಿವರಿಸಿದರೂ ಸಹ, ವಿಶ್ವದ ಮೂಲ ಕಣಗಳಾದ ಎಲೆಕ್ಟ್ರಾನ್, ಪ್ರೊಟಾನ್‌ಗಳಂತಹ ಕಣಗಳ ಚಲನೆಯ ಬಗ್ಗೆ ವಿವರಿಸಲಾಗಲಿಲ್ಲ. ಸೂಕ್ಷ್ಮ ಕಣಗಳ ವಿಶ್ವದಲ್ಲಿ ನ್ಯೂಟನ್ ಸಮೀಕರಣ ವಿಫಲವಾಗುತ್ತದೆ. ಈ ಕಣಗಳ ಚಲನೆ, ಗುಣ-ಲಕ್ಷಣ ಎಲ್ಲವೂ ನಮ್ಮ ಗ್ರಹಿಕೆಯಲ್ಲಿ ಊಹಿಸಲು ಸಾಧ್ಯವಾಗದು. ಇಂತಹ ಮೂಲಕಣಗಳ ವಿವರಗಳನ್ನು ಗಣಿತದ ಸಮೀಕರಣದಲ್ಲಿ ಕಟ್ಟಿಕೊಂಡು ವಿವರಿಸುವುದು ಕ್ವಾಂಟಮ್ ಮೆಕಾನಿಕ್ಸ್. ಈ ಕ್ವಾಂಟಮ್ ಮೆಕಾನಿಕ್ಸ್‌ನ ಥಿಯರಿಗಳು, ಚಿಂತನೆಗಳು ಬೆಳೆದಂತೆ ನ್ಯೂಟನ್ ವಿಶ್ವದಲ್ಲಿ ಕಾಣದ, ಸೂಕ್ಷ್ಮ ಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳನ್ನು ವಿವರಿಸಲು ಸಹಾಯಾವಾಗುತ್ತದೆ. ಕ್ವಾಂಟಮ್ ಮೆಕಾನಿಕ್ಸ್ ವಿಷಯಕ್ಕೆ ಸುಮಾರು 120 ವರ್ಷಗಳು ಕಳೆದಿದ್ದರು, ಇದಿನ್ನೂ ಅಂಬೆಗಾಲಿಡುತ್ತಿರುವ ಮಗು.


ಇದನ್ನೂ ಓದಿ: ಅಲೈನ್ ಆಸ್ಪೆಕ್ಟ್, ಜಾನ್ ಎಫ್. ಕ್ಲೌಸರ್, ಆಂಟನ್ ಝೈಲಿಂಗರ್‌ರವರಿಗೆ 2022ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...