Homeಮುಖಪುಟಚಂದ್ರಯಾನ-3 ಉಡಾವಣೆ ಮತ್ತು ಬಾಹ್ಯಾಕಾಶಯಾನ ಇತಿಹಾಸದ ಪಕ್ಷಿನೋಟ

ಚಂದ್ರಯಾನ-3 ಉಡಾವಣೆ ಮತ್ತು ಬಾಹ್ಯಾಕಾಶಯಾನ ಇತಿಹಾಸದ ಪಕ್ಷಿನೋಟ

- Advertisement -
- Advertisement -

ಸೌರಮಂಡಲದ ಒಟ್ಟು ಎಂಟು ಗ್ರಹಗಳಲ್ಲಿ ಮೂರನೇ ಗ್ರಹ ನಮ್ಮ ಭೂಮಿ. ಮಾನವರು ಭೂಮಿಯ ಮೇಲಿನ ಜೀವಸಂಕುಲದ ಒಂದು ಸಣ್ಣ ಭಾಗ. ಮಾನವನಿಗೆ ಮಾತನಾಡುವ, ತಿಳಿದುಕೊಳ್ಳುವ, ಯೋಚಿಸುವ, ಯೋಚನೆಯನ್ನು ನಡೆಯನ್ನಾಗಿಸುವ ಹಾಗೂ ಇವೆಲ್ಲಾ ವಿಷಯ ತನಗೆ ತಿಳಿದಿದೆ ಎಂಬ ಅರಿವಿರುವುದರಿಂದ ಸುತ್ತಮುತ್ತಲ ಪರಿಸರದ ಇರುವಿಕೆ, ಅದರ ಚಲನೆ ಮತ್ತಿತರ ಪ್ರಕ್ರಿಯೆಗಳ ಬಗ್ಗೆ ಅಧ್ಯಯನ ನಡೆಸಲು ಮುಂದಾಗುತ್ತಾನೆ. ಬೆಂಕಿಯನ್ನು ತನಗೆ ಬೇಕಾದಂತೆ ನಿಯಂತ್ರಿಸಿ ಆಹಾರವನ್ನು ಬೇಯಿಸಿ ತಿಂದ ಕಾಲದಿಂದಲೂ ಈಗ ರಾಕೆಟ್ ಉಡಾವಣೆ ಮಾಡಿ ಬೇರೆಬೇರೆ ಉಪಗ್ರಹ-ಗ್ರಹಗಳಿಗೆ ಹೋಗಲು ಲೆಕ್ಕಹಾಕುತ್ತಿರುವವರೆಗೂ ಮಾನವನ ಅನ್ವೇಷಣೆಯ ಹಸಿವು ಕಡಿಮೆಯಾಗಿಲ್ಲ ಮತ್ತು ಈ ಹಸಿವು ನಿರಂತರವಾದದ್ದು.

ಜಗತ್ತಿನ ಮುಂದುವರಿದ ದೇಶಗಳು ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ಮೂಲಭೂತ ವಿಜ್ಞಾನ ಮತ್ತು ಸಂಶೋಧನೆಗೆ ಅಗತ್ಯ ಸವಲತ್ತನ್ನು ಕಲ್ಪಿಸಿಕೊಂಡು ಅಧ್ಯಯನಗಳನ್ನು ನಡೆಸುತ್ತಿವೆ. ಇತ್ತೀಚೆಗೆ ಖಾಸಗಿ ಸಂಸ್ಥೆಗಳೂ ಕೂಡ ಸೇರಿಕೊಂಡಿವೆ. ಕೆಲವು ಕ್ಷಿಪ್ರಗತಿಯ ಅನ್ವೇಷಣೆಗಳು ನಮ್ಮ ಜೀವನವನ್ನು ಸುಧಾರಿಸಿದ್ದರೆ, ಇನ್ನೂ ಕೆಲವು ಹೊಸಹೊಸ ಸಮಸ್ಯೆಗಳನ್ನು ತಂದೊಡ್ಡುತ್ತಿವೆ. ಆದರೂ ನಮ್ಮ ಕುತೂಹಲಕ್ಕೆ ಅವ್ಯಾವುವೂ ಮಿತಿಯನ್ನು ಒಡ್ಡಿಲ್ಲ; ವಿಶ್ವದ ಉಗಮ, ಸದ್ಯದ ಪರಿಸ್ಥಿತಿ ಮತ್ತು ಅಂತ್ಯದ ಪ್ರಶ್ನೆಗಳು ಇನ್ನೂ ಕಾಡುತ್ತಲೇ ಇವೆ.

ಅದೇನೆ ಇರಲಿ, 130 ಕೋಟಿಯ ಜನಸಂಖ್ಯೆ ಮೀರಿರುವ ಭಾರತದಲ್ಲಿ ಕಳೆದ ವಾರ ಜುಲೈ 14ರಂದು ಚಂದ್ರಯಾನ-3 ಯೋಜನೆಯ ರಾಕೆಟ್ ಉಡಾವಣೆಯ ಪ್ರಮುಖ ಸುದ್ದಿಯಾಯಿತು. ಜುಲೈ 14ಕ್ಕೆ ಸರಿಯಾಗಿ ಮಧ್ಯಾಹ್ನ 2.35 ಗಂಟೆಗೆ 3900 ಕೆ.ಜಿ. ತೂಕವಿರುವ ಚಂದ್ರಯಾನ-3 ಗಗನನೌಕೆ ಹೊತ್ತ LMV3M4 ರಾಕೆಟ್ ಉಡಾವಣೆಯಾಗಿದ್ದು, 24 ಗಂಟೆ ಹಿಂದೆಯೇ ಅಂದರೆ ಜುಲೈ 13 ಮಧ್ಯಾಹ್ನದಿಂದ ಉಡಾವಣಾ ಸಮಯದ ಇಳಿಯೆಣಿಕೆ (Countdown) ಪ್ರಾರಂಭವಾಗಿತ್ತು. ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೊದ ಈ ಯೋಜನೆಯ ಹಿನ್ನೆಲೆಯಲ್ಲಿ ಬಾಹ್ಯಾಕಾಶಯಾನದ ಸಣ್ಣ ಇತಿಹಾಸದ ಕಡೆ ಒಂದು ಸುತ್ತು ಹಾಕಿ ಬರುವ.

ಭೂಮಿಯಿಂದ ನಾವು ಕಾಣುವ ಆಕಾಶ ಆದಿಮಾನವನ ಕಾಲದಿಂದಲೂ ಚಿರಪರಿಚಿತ. ಮಾನವನು ಆಕಾಶದಲ್ಲಿ ಕಾಣುವ ನಕ್ಷತ್ರ, ಚಲಿಸುವ ನಕ್ಷತ್ರ (ಗ್ರಹಗಳು), ಚಂದ್ರ, ಸೂರ್ಯ ಇವುಗಳ ಚಲನವಲನದ ವಿವರಗಳನ್ನು ಕಂಡುಕೊಂಡು ತನ್ನ ಉಪಯೋಗಕ್ಕೆ ಬಳಸಿಕೊಳ್ಳುತ್ತಿದ್ದ. ವೈಜ್ಞಾನಿಕ ಮನೋಭಾವ ಬೆಳೆದಂತೆ ವಿವಿಧ ಕಾಲಘಟ್ಟಗಳಲ್ಲಿ ಈ ವೀಕ್ಷಣೆಗಳನ್ನು ಅರ್ಥೈಸುವುದು ಬದಲಾಗುತ್ತಾ ಬಂದಿದೆ. ಭೂಮಿಯನ್ನು ಹೊರತುಪಡಿಸಿ, ನಮಗೆ ಹತ್ತಿರದಲ್ಲಿ ಗೋಚರಿಸುವ ಚಂದ್ರನ ಬಳಿಗೆ ಹೊಗಲೇಬೇಕೆಂದು ಮಾನವ ಕನಸು ಕಂಡಿದ್ದು ಮಾತ್ರ 19ನೇ ಶತಮಾನದಲ್ಲಿ. ಕಾಲ್ಪನಿಕ ಕಥೆಗಳಲ್ಲಿ ಚಂದ್ರನ ಬಳಿಗೆ ಹೋಗುವ ಬಯಕೆಯಲ್ಲಿದ್ದ ಮಾನವನಿಗೆ, 19ನೇ ಶತಮಾನದ ಅರ್ಧ ಭಾಗದಲ್ಲಿ ಆದ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗಳಿಂದ ಅದು ಸಾಧ್ಯವೆನಿಸಿತು. ಈ ವಿಷಯದಲ್ಲಿ ಜಗತ್ತಿಗೆ ಮೊದಲ ಅಚ್ಚರಿ ನೀಡಿತ್ತು ಅಂದಿನ ಸೋವಿಯತ್ ಯೂನಿಯನ್! 1957ರ ಅಕ್ಟೋಬರ್‌ನಲ್ಲಿ ರಷ್ಯಾ ಸ್ಪುಟ್ನಿಕ್ ಎನ್ನುವ ಮೊದಲ ಮಾನವ ನಿರ್ಮಿತ ಕೃತಕ ಉಪಗ್ರಹವನ್ನು ನಭಕ್ಕೆ ಹಾರಿಸಿತು. ಆಗಷ್ಟೆ ಎರಡನೇ ಮಹಾಯುದ್ಧ ಅಂತ್ಯಗೊಂಡು ಒಂದು ದಶಕವಾಗಿದ್ದ ಜಗತ್ತಿನಲ್ಲಿ, ಇನ್ನೂ ಶೀತಲ ಸಮರ ಜಾರಿಯಲ್ಲಿದ್ದಾಗ ಸ್ಪುಟ್ನಿಕ್ ಉಡಾವಣೆ ಬಾಹ್ಯಾಕಾಶವೆಂಬ ಕಾಲ್ಪನಿಕ ಜಗತ್ತನ್ನು ವಾಸ್ತವಿಕಗೊಳಿಸಿತು. ಆಗಿನ್ನೂ ಭಾರತ ಸ್ವತಂತ್ರಗೊಂಡು ಒಂದು ದಶಕ ಮಾತ್ರ ಕಳೆದಿತ್ತು, ಎರಡನೇ ಸಾರ್ವತ್ರಿಕ ಚುನಾವಣೆಯನ್ನು ಎದುರಿಸುತ್ತಿತ್ತು.

ಸ್ಪುಟ್ನಿಕ್

ಸ್ಪುಟ್ನಿಕ್ ಉಡಾವಣೆ, ಅಂದು ಎದುರುಬದುರು ನಿಂತಿದ್ದ ಬಲಿಷ್ಟ ಎರಡು ರಾಷ್ಟ್ರಗಳಾದ ಸೋವಿಯತ್ ಮತ್ತು ಅಮೆರಿಕ ನಡುವಿನ ಶೀತಲ ಸಮರವನ್ನು ಇನ್ನಷ್ಟು ಗಟ್ಟಿಗೊಳಿಸಿತು. ಸೋವಿಯತ್ ಒಕ್ಕೂಟ 1959ರಲ್ಲಿಯೇ ಲೂನಾ-1 ಎಂಬ ಗಗನನೌಕೆಯನ್ನು ಆಗಲೇ ಚಂದ್ರನ ಬಳಿಗೆ ಕಳುಹಿಸಿ ಇನ್ನಷ್ಟು ಅಚ್ಚರಿ ಮೂಡಿಸಿತು. ಇದೇ ಸರಣಿಯ ಲೂನಾ-3 ಚಂದ್ರನ ಇನ್ನೊಂದು ಭಾಗ ಅಂದರೆ ಭೂಮಿಯಿಂದ ಗೋಚರಿಸದ ಭಾಗದ ಮೊದಲ ಚಿತ್ರವನ್ನು ಕಳುಹಿಸಿತು. 1961ರಲ್ಲಿ ಜಗತ್ತಿಗೆ ಮತ್ತೊಂದು ಅಚ್ಚರಿ ಕಾದಿತ್ತು. ಸೋವಿಯತ್ ಮೊದಲ ಬಾರಿಗೆ ಒಬ್ಬ ಮನುಷ್ಯನನ್ನು ಬಾಹ್ಯಾಕಾಶಕ್ಕೆ ಹಾರಿಸಿತು! ಯೂರಿ ಗಗಾರಿನ್ ಮೊದಲ ಗಗನಯಾನಿಯಾಗಿ ಜಗತ್ತಿಗೆ ಪರಿಚಯವಾದರು. ಈ ಐತಿಹಾಸಿಕ ಘಟನೆಯಿಂದ ಕನಲಿದ ಅಮೆರಿಕ ಪೈಪೋಟಿಗೆ ಇಳಿಯಿತು; ಅಮೆರಿಕದ ಅಂದಿನ ಅಧ್ಯಕ್ಷರಾದ ಜಾನ್ ಎಫ್. ಕೆನಡಿಯವರು, ಮುಂದಿನ ಒಂದು ದಶಕದಲ್ಲಿ ಚಂದ್ರನ ಮೇಲೆ ಮಾನವನನ್ನು ಇಳಿಸುವುದಾಗಿ ಮಾಧ್ಯಮದ ಮುಂದೆ ಘೋಷಿಸಿದರು. ಇದು ಅಮೆರಿಕ ಮತ್ತು ಸೋವಿಯತ್ ನಡುವಿನ ಬಾಹ್ಯಾಕಾಶ ಸಮರಕ್ಕೆ ನಾಂದಿಯಾಯಿತು.

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಚಂದ್ರನ ಮೇಲೆ ಮಾನವನನ್ನು ಇಳಿಸುವ ನೇತೃತ್ವ ವಹಿಸಿತು. ನಾಸಾ ಚಂದ್ರನ ಬಗ್ಗೆ ಮಾಹಿತಿ ಕಲೆಹಾಕಲು ರೇಂಜರ್ ಎನ್ನುವ ಗಗನನೌಕೆಯನ್ನು ತಯಾರಿಸಿ ಚಂದ್ರನ ಬಳಿಗೆ ಕಳುಹಿಸಿತು. ಹಲವು ಬಾರಿ ಈ ರೇಂಜರ್ ನೌಕೆ ವೈಫಲ್ಯಗೊಂಡರೂ, 1964ರ ರೇಂಜರ್-7 ಗಗನನೌಕೆ ಚಂದ್ರನ ಅತ್ಯುತ್ತಮ ಚಿತ್ರಗಳನ್ನು ನಾಸಾಗೆ ರವಾನಿಸಿ, ಹಲವು ಮಾಹಿತಿಯನ್ನು ನೀಡಿತು. ಮುಂದಿನ ರೇಂಜರ್ ನೌಕೆಗಳು ಚಂದ್ರನ ಮೇಲ್ಮೈಅನ್ನು ಲೈವ್ ಟೆಲಿಕಾಸ್ಟ್ ಕೂಡ ಮಾಡಿದವು; ಆದರೆ, ಈ ರೇಂಜರ್ ನೌಕೆಯು ಚಂದ್ರನ ಮೇಲೆ ಲ್ಯಾಂಡ್ ಆಗದೆ, ಚಂದ್ರನನ್ನು ಸುತ್ತುವ ನೌಕೆಗಳಾಗಿದ್ದವು. ಆಗ ಸೋವಿಯತ್ ಮತ್ತೊಂದು ಅಚ್ಚರಿ ನೀಡಿತು. 1966ರಲ್ಲಿ ಲೂನಾ-9 ನೌಕೆಯನ್ನು ಮೊದಲ ಬಾರಿಗೆ ಚಂದ್ರನ ಮೇಲೆ ಲೀಲಾಜಾಲವಾಗಿ ಇಳಿಸಿ ಮತ್ತೊಂದು ಇತಿಹಾಸ ನಿರ್ಮಿಸಿತು. ಲೂನಾ-9 ನೌಕೆ ಚಂದ್ರನ ಮೇಲೆ ಇಳಿದಾಗ ಚಂದ್ರನ ಮೇಲ್ಮೈ ಹೇಗೆ ಧೂಳಿನ ಕಣಗಳಿಂದ ಕೂಡಿದೆ ಎನ್ನುವ ವಿಚಾರಗಳು ತಿಳಿಯಿತು. ಅದೇ ವರ್ಷದಲ್ಲಿ ಅಮೆರಿಕ ಸಹ ಸರ್ವೇಯರ್-1 ಎಂಬ ತಮ್ಮ ನೌಕೆಯನ್ನು ಚಂದ್ರನ ಮೇಲೆ ಮೃದುವಾಗಿ ಇಳಿಸಿ, Space Raceನಲ್ಲಿ ತಾನು ಸೋವಿಯತ್‌ಗೆ ಹತ್ತಿರದಲ್ಲೇ ಇರುವೆ ಎಂದು ತಿಳಿಸಿತು. ಎರಡೂ ದೇಶಗಳ ಮಧ್ಯೆ ಚಂದ್ರನಲ್ಲಿಗೆ ಮೊದಲ ಮಾನವರನ್ನು ಕಳಿಸುವ ಸ್ಪರ್ಧೆ ತೀವ್ರವಾಯಿತು. ರೇಂಜರ್, ಲೂನಾ, ಸರ್ವೇಯರ್ ಮತ್ತು ಹಲವು ಚಂದ್ರ-ಕಕ್ಷೆಯ ನೌಕೆಗಳಿಂದ ಚಂದ್ರನ ಮೇಲ್ಮೈನ ಅತ್ಯುತ್ತಮ ಚಿತ್ರಗಳು, ಧೂಳಿನ ಕಣಗಳ ವಿವರಗಳು ಮತ್ತು ಮಾನವರು ಇಳಿಯುವುದಾದರೆ ಯಾವ ಪ್ರದೇಶದಲ್ಲಿ ಇಳಿಯಬೇಕು ಎನ್ನುವ ವಿವರಗಳು ಸಿಕ್ಕಿದವು.

ತದನಂತರ ಪ್ರಾರಂಭವಾಗಿದ್ದು, ನಾಸಾದ ಅಪೋಲೋ ಸರಣಿಯ ಅಂತರಿಕ್ಷಯಾನದ ನೌಕೆಗಳು. ಈ ಯೋಜನೆಯ ಸ್ಪಷ್ಟ ಉದ್ದೇಶ ಮಾನವನನ್ನು ಚಂದ್ರನ ಮೇಲೆ ಇಳಿಸುವುದಾಗಿತ್ತು. ಅಪೋಲೋ ಯೋಜನೆ ಕೂಡ ದುರಂತದಲ್ಲಿಯೇ ಪ್ರಾರಂಭವಾಯಿತು. ಅಪೋಲೋ-1ರ ಪರೀಕ್ಷಾಥ ಉಡಾವಣೆಯ ಸಮಯದಲ್ಲಿ ನೌಕೆಯ ಒಳಗೆ ಕಾಣಿಸಿದ ಬೆಂಕಿಯು ಕ್ಷಣಾರ್ಧದಲ್ಲಿ ಮೂವರು ಗಗನಯಾನಿಗಳನ್ನು ಬಲಿತೆಗೆದುಕೊಂಡಿತು. ಇದರಿಂದ ಆಘಾತವಾದರೂ ಅಮೆರಿಕ ಅಪೋಲೋ ಯೋಜನೆಯನ್ನು ನಿಲ್ಲಿಸಲಿಲ್ಲ. ಮೊದಲ ಗಗನಯಾನಿಯನ್ನು ಅಂತರಿಕ್ಷಕ್ಕೆ ಕಳುಹಿಸಿದ್ದ ಸೋವಿಯತ್ ಕೂಡ, ಚಂದ್ರನ ಮೇಲೆ ಮನುಷ್ಯನನ್ನು ಇಳಿಸುವ ಮೊದಲ ದೇಶ ತಾನೇ ಆಗಬೇಕೆಂದು ಹಲವು ಯೊಜನೆಗಳನ್ನು ರೂಪಿಸಿತ್ತು; ಆದರೆ ಅವೆಲ್ಲವೂ ಅಂದಿಗೆ ನಿಗೂಢವಾಗಿಯೇ ನಡೆಯುತ್ತಿದ್ದವು. 1968ರ ನಾಸಾದ ಅಪೋಲೋ-8 ಹೊಸ ಇತಿಹಾಸವನ್ನೇ ನಿರ್ಮಿಸಿತು. ಮೊದಲ ಬಾರಿಗೆ ಮೂವರು ಗಗನಯಾತ್ರಿಗಳು ಚಂದ್ರನನ್ನು ಒಂದು ಸುತ್ತು ಹೊಡೆದು ಬಂದರು. ಮಾನವನ ಇತಿಹಾಸದಲ್ಲಿ ಇದೊಂದು ಅಳಿಸಲಾಗದ ವಿದ್ಯಮಾನ. ಚಂದ್ರನ ಹಿಂಬದಿಯಿಂದ ಭೂಮಿ ಹುಟ್ಟುವುದನ್ನು ಮೊದಲ ಬಾರಿಗೆ ಕಂಡ ಈ ಗಗನಯಾತ್ರಿಗಳು, ಅದರ ಫೋಟೋ ಕೂಡ ತೆಗೆದರು. ಇದು Earthrise ಫೋಟೋ ಎಂದೇ ಪ್ರಖ್ಯಾತಿಗಳಿಸಿದೆ. 1969ರ ಮೇನಲ್ಲಿ ನಭಕ್ಕೆ ಜಿಗಿದ ಅಪೋಲೋ-10 ಚಂದ್ರನಲ್ಲಿ ಇಳಿಯುವ ಲ್ಯಾಂಡರ್‌ಅನ್ನು ಪರೀಕ್ಷೆಗೆ ಒಳಪಡಿಸಿತು. ಅಪೋಲೋ-10 ಚಂದ್ರನ ಮೇಲೆ ಮಾನವನು ಇಳಿಯುವಿಕೆಗೆ ನಡೆದ ಪೂರ್ವಾಭ್ಯಾಸವಾಯಿತು (Dress Rehearsal). ತದನಂತರ ಜುಲೈ 20, 1969ರಲ್ಲಿ ನಡೆದದ್ದು ಬಹಳ ಜನಪ್ರಿಯವಾಗಿರುವ ಐತಿಹಾಸಿಕ ಘಟನೆ! ಅಪೋಲೋ-11ರ ಗಗನಯಾನಿಯಾಗಿದ್ದ ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಬಸ್ ಆಲ್ಡ್ರಿನ್ ಇಬ್ಬರೂ ಚಂದ್ರನ ಮೇಲೆ ಮೊದಲ ಹೆಜ್ಜೆಗಳನ್ನು ಇರಿಸಿದರು. ಸುಮಾರು ಎರಡು ಗಂಟೆಗಳ ಕಾಲ ಈ ಇಬ್ಬರು ಗಗನಯಾನಿಗಳು ಚಂದ್ರನ ಮೇಲೆ ನಡೆದಾಡಿ, ಚಂದ್ರನ ಮೇಲ್ಮೈನ ಕಲ್ಲು, ಮಣ್ಣುಗಳನ್ನು ಶೇಖರಿಸಿಕೊಂಡು, ಇನ್ನಿತರ ಹಲವು ಪ್ರಯೋಗಗಳನ್ನು ಮಾಡುತ್ತಿರಬೇಕಾದರೆ, ಚಂದ್ರನ ಕಕ್ಷೆಯಲ್ಲಿದ್ದ ನೌಕೆಯಿಂದ ಮೈಕ್ ಕಾಲಿನ್ಸ್ ಇವರಿಬ್ಬರ ಮೇಲೆ ನಿಗಾ ಇಟ್ಟಿದ್ದರು. ಜುಲೈ 24, 1969ರಂದು ಈ ಮೂವರು ಗಗನಯಾನಿಗಳು ಭೂಮಿಗೆ ಸುರಕ್ಷಿತವಾಗಿ ವಾಪಸ್ಸಾಗುತ್ತಾರೆ.

ಇದೇ ಸಮಯದಲ್ಲಿ ಸೋವಿಯತ್ ತನ್ನ ಅತ್ಯುನ್ನತ ರಾಕೆಟ್ ಇಂಜಿನಿಯರ್ ಸರ್ಜೈ ಕೊರೊಲಿವರನ್ನು ಕಳೆದುಕೊಂಡಿದ್ದರಿಂದ ಅವರ ಬಾಹ್ಯಾಕಾಶ ಯೋಜನೆಗಳು ಕುಂಠಿತವಾಗಿದ್ದವು.

ಯೂರಿ ಗಗಾರಿನ್

ಒಟ್ಟು 17 ಅಪೋಲೋ ಯಾನದಲ್ಲಿ 12 ಜನ ಚಂದ್ರನ ಮೇಲೆ ನಡೆದಾಡಿದರೆ, 12 ಜನ ಚಂದ್ರನ ಕಕ್ಷೆಯಲ್ಲಿ ಸುತ್ತಿರುತ್ತಾರೆ. ಎಲ್ಲಾ 24 ಜನರು ಕೂಡ ಅಮೆರಿಕ ದೇಶದವರೇ ಆಗಿದ್ದಾರೆ. ಅಮೆರಿಕ ಮತ್ತು ಸೋವಿಯತ್ ಹೊರತುಪಡಿಸಿದರೆ, 21ನೇ ಶತಮಾನದ ಪ್ರಾರಂಭದಲ್ಲಿ ಚೈನಾ ಕೂಡ ಚಂದ್ರನ ಬಳಿಗೆ ತೆರಳಲು ಯೋಜನೆ ರೂಪಿಸಿತು. 2007ರಿಂದ 2010ರ ನಡುವೆ ಚಂಗೆ-1 ಮತ್ತು ಚಂಗೆ-2 ನೌಕೆ ಚಂದ್ರನನ್ನು ಸುತ್ತಿ ಬಂದರೆ, 2013 ಮತ್ತು 2018ರಲ್ಲಿ ಚಂಗೆ-3 ಮತ್ತು ಚಂಗೆ-4 ನೌಕೆ ಚಂದ್ರನ ಮೇಲೆ ಮೃದುವಾದ ಲ್ಯಾಂಡಿಂಗ್ ಮಾಡಿ, ಚಂದ್ರನ ಮೇಲ್ಮೈ ತಲುಪಿದ ಜಗತ್ತಿನ ಮೂರನೇ ರಾಷ್ಟ್ರವಾಯಿತು.

ಭಾರತದ ಉಪಗ್ರಹ ಉಡಾವಣೆ ಮತ್ತು ಬಾಹ್ಯಾಕಾಶ ಸಂಶೋಧನೆ ಕೈಗೊಳ್ಳುವ ದೃಷ್ಟಿಯಿಂದ 1969ರಲ್ಲಿ Indian National Committee for Space Research (INCOSPAR-1962)ಅನ್ನು ಮತ್ತು ಡಾ. ವಿಕ್ರಂ ಸಾರಾಭಾಯಿಯವರ ನೇತೃತ್ವದಲ್ಲಿ Indian Space Research Organisation (ISRO) ಎಂದು ಸ್ಥಾಪಿಸಲಾಯಿತು. ರಾಷ್ಟ್ರದ ಅಗತ್ಯತೆಗೆ ಸಂಬಂಧಿಸಿದಂತೆ ಬಾಹ್ಯಾಕಾಶ ತಂತ್ರಜ್ಞಾನ, ಅದರ ಅನ್ವಯಕ ಮತ್ತು ಹೊಸ ಉಪಕ್ರಮಗಳನ್ನು ಪ್ರಾರಂಭಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. 1975ರಲ್ಲಿ ಅಂದಿನ ಸೊವಿಯತ್ ಒಕ್ಕೂಟದಿಂದ ನಭಕ್ಕೆ ಚಿಮ್ಮಿದ ಆರ್ಯಭಟ ಉಪಗ್ರಹವು ಭಾರತದ ಬಾಹ್ಯಾಕಾಶಯಾನಕ್ಕೆ ನಾಂದಿಯಾಯಿತು. 1969ರಲ್ಲಿ ಅಮೆರಿಕ ದೇಶವು ತಮ್ಮ ಮೊದಲ ಗಗನಯಾನಿಯನ್ನು ಚಂದ್ರನ ಮೇಲೆ ಇಳಿಸುತ್ತಿದ್ದಾಗ, ಭಾರತವು ಆಂಧ್ರದ ಶ್ರೀಹರಿಕೋಟಾ ಪ್ರದೇಶದಲ್ಲಿ ರಾಕೆಟ್ ಉಡಾವಣಾ ನಿಲ್ದಾಣ ನಿರ್ಮಿಸಲು ತಕ್ಕ ಪ್ರದೇಶವನ್ನು ಗುರುತಿಸುತ್ತಿತ್ತು. 1979ರಲ್ಲಿ ಇಲ್ಲಿಂದಲೇ ಪ್ರಥಮವಾಗಿ ರೊಹಿಣಿ-1 ನಭಕ್ಕೆ ಚಿಮ್ಮಿದ್ದು. ತದನಂತರ ಶ್ರೀಹರಿಕೋಟ ಭಾರತದ Space Port ಆಯಿತು. ರಾಷ್ಟ್ರದ ಅಗತ್ಯಕ್ಕೆ ತಕ್ಕಂತೆ ರಡಾರ್, ಹವಾಮಾನ, ಟೆಲಿಕಮ್ಯುನಿಕೇಶನ್, ಜಿಪಿಎಸ್, ಮ್ಯಾಪಿಂಗ್ ಹಾಗೂ ವಿವಿಧ ಉಪಯೋಗಗಳಿಗೆ ಅನುವಾಗುವಂತೆ ಅನೇಕ INSAT ಮತ್ತು ಇತರೆ ಹಲವು ಉಪಗ್ರಹಗಳನ್ನು ನಭಕ್ಕೆ ಚಿಮ್ಮಿಸಿತು. ವಿವಿಧ ಕಕ್ಷೆಗಳಿಗೆ ಸೇರಿಸಲು ಅನುವಾಗುವಂತೆ SLV, PSLV and GSLV ಎನ್ನುವ ರಾಕೆಟ್ ಮತ್ತು ಇಂಜಿನ್‌ಗಳನ್ನು ಸಿದ್ಧಪಡಿಸಿತು. ಉಪಗ್ರಹ ಯೋಜನೆಗಳ ಜೊತೆಗೆ ಬಾಹ್ಯಾಕಾಶ ಸಂಶೋಧನೆಗೆ ಒತ್ತುನೀಡುವ ಕ್ರಮಕ್ಕಾಗಿ ಉದ್ದೇಶಿಸಿದ ಚಂದ್ರಯಾನ, ಮಂಗಳಯಾನದಂತಹ ಯೋಜನೆಗಳು ಕೂಡ ಭಾರತದಲ್ಲಿ ಹೆಚ್ಚು ಮಹತ್ವ ಪಡೆಯಿತು.

ಇದನ್ನೂ ಓದಿ: ಇಂದು ‘ಚಂದ್ರಯಾನ- 3’ ಉಡಾವಣೆ; ತಿರುಪತಿಯಲ್ಲಿ ಪೂಜೆ ಸಲ್ಲಿಸಿದ ಇಸ್ರೋ ನಡೆಗೆ ಖಂಡನೆ ವ್ಯಕ್ತ

ಅಕ್ಟೋಬರ್ 22, 2008ರಂದು ಶ್ರೀಹರಿಕೋಟಾ ರಾಕೆಟ್ ಉಡಾವಣಾ ಕೇಂದ್ರದಿಂದ ಭಾರತದ ಚೊಚ್ಚಲ ಚಂದ್ರಯಾನ-1 ನೌಕೆಯನ್ನು PSLVC-11 ರಾಕೆಟ್‌ನಿಂದ ಉಡಾವಣೆ ಮಾಡಲಾಯಿತು. ಈ ನೌಕೆಯು ಚಂದ್ರನಿಂದ 100 ಕಿಲೋಮೀಟರ್ ಅಂತರದ ಕಕ್ಷೆಯಲ್ಲಿದ್ದುಕೊಂಡು, ಚಂದ್ರನ ಮೇಲ್ಮೈಯನ್ನು ನೌಕೆಯಲ್ಲಿನ ವೈಜ್ಞಾನಿಕ ಉಪಕರಣಗಳಿಂದ ಅಧ್ಯಯನ ಮಾಡುವುದಾಗಿತ್ತು. ಚಂದ್ರಯಾನ-1 ನೌಕೆಯಿಂದ, ಚಂದ್ರನ ಬಳಿಗೆ ಹೊದ ಜಗತ್ತಿನ ನಾಲ್ಕನೇ ರಾಷ್ಟ್ರವಾಯಿತು ಭಾರತ. ಚಂದ್ರಯಾನ-1 ರಲ್ಲಿದ್ದ Moon Impact Probeಅನ್ನು ನಿಗದಿಯಾದಂತೆ ಚಂದ್ರನ ಮೇಲೆ Crash Land ಮಾಡಿಸಲಾಯಿತು. ಚಂದ್ರಯಾನ-1 ಚಂದ್ರನಲ್ಲಿ ನೀರಿರುವ ಬಗ್ಗೆ ಸಾಕ್ಷಿಯನ್ನು ಒದಗಿಸಿತು. ಇದರ ಜೀವಿತಾವಧಿ ಎರಡು ವರ್ಷಗಳಾಗಿತ್ತು. ತದನಂತರ ಇದೇ ಸರಣಿಯ ಚಂದ್ರಯಾನ-2 ನೌಕೆ, ಒಂದು Orbiter, Lander (Vikram) ಮತ್ತು Rover (Pragyan) ಒಳಗೊಂಡಿತ್ತು. ಈ ನೌಕೆಯು ಜುಲೈ 22, 2019ರಂದು ಚಂದ್ರನ ಬಳಿಗೆ ತನ್ನ ಯಾನವನ್ನು ಕೈಗೊಂಡು, ಆಗಸ್ಟ್ 20ರಂದು ಚಂದ್ರನ ಕಕ್ಷೆಗೆ ತೆರಳಿತು. ನಂತರ ಈ ನೌಕೆಯಲ್ಲಿದ್ದ ವಿಕ್ರಂ ಲ್ಯಾಂಡರ್‌ಅನ್ನು ಚಂದ್ರನ ಮೇಲೆ ಇಳಿಸುವ ಅತ್ಯಂತ ಕ್ಲಿಷ್ಟಕರವಾದ ತಾಂತ್ರಿಕ ಹಂತಕ್ಕೆ ಮುಟ್ಟಿತು. ಲ್ಯಾಂಡರ್, ಆರ್ಬಿಟರ್‌ನಿಂದ ಬೇರ್ಪಟ್ಟು ನಿಧಾನವಾಗಿ ಚಂದ್ರನ ಮೇಲೆ ಇಳಿಯುತ್ತಿತ್ತು. ಇನ್ನು ಎರಡೇ ಎರಡು ಕಿಲೋಮೀಟರ್ ಅಂತರ ಇರುವಾಗ ತಾಂತ್ರಿಕ ಸಮಸ್ಯೆಯಿಂದ ಲ್ಯಾಂಡರ್ ಚಂದ್ರನ ಮೇಲೆ ಮೃದುವಾದ ಲ್ಯಾಂಡಿಂಗ್ ಮಾಡಲಿಲ್ಲ. ಅಂದು ಎಲ್ಲವೂ ಸರಿಯಾಗಿ ನಡೆದಿದ್ದರೆ, ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿದು, ಅದರೊಳಗಿನ ಪ್ರಗ್ಯಾನ್ ರೋವರ್ ಚಂದ್ರನ ಮೇಲ್ಮೈ ಮೇಲೆ ಚಲಿಸಬೇಕಿತ್ತು. ಆದರೆ, ಇದು ಸಾಧ್ಯವಾಗಲಿಲ್ಲ. ಲ್ಯಾಂಡರ್ ಇಳಿಯುವಲ್ಲಿ ವಿಫಲವಾದರು, ಅದರಿಂದ ದೊರೆತ ಕ್ರಿಟಿಕಲ್ ಮಾಹಿತಿ ಮುಂದಿನ ನಿಯಂತ್ರತ ಲ್ಯಾಂಡಿಂಗ್‌ಗಳಿಗೆ ಉಪಯುಕ್ತ ಪಾಠವಾಯಿತು. ಚಂದ್ರಯಾನ-2ರ ಆರ್ಬಿಟರ್ ಈಗಲೂ ಚಂದ್ರನನ್ನು ಸುತ್ತುತ್ತಿದ್ದು, ಚಂದ್ರನ ಮೇಲ್ಮೈಯನ್ನು ಅಧ್ಯಯನ ಮಾಡುತ್ತಿದೆ. ಚಂದ್ರಯಾನ-3 ಚಂದ್ರನ ಬಳಿ ಬಂದಾಗ ಅದಕ್ಕೂ ಸಹಾಯ ಮಾಡಲಿದೆ.

ಚಂದ್ರಯಾನ- 1 ಮತ್ತು 2ರ ಇತಿಹಾಸದಿಂದ ಕಲಿತು ಮತ್ತೊಮ್ಮೆ ಚಂದ್ರನ ಬಳಿಗೆ ಚಂದ್ರಯಾನ-3 ಯಾನವನ್ನು ಇಸ್ರೋ ಕೈಗೊಂಡಿದೆ. ಈ ನೌಕೆಯಲ್ಲಿ ಚಂದ್ರಯಾನ-2ರಂತೆಯೇ Orbiter, Lander and Rover ಇದೆ. ಚಂದ್ರಯಾನ-3ರ ಪ್ರಮುಖ ಉದ್ದೇಶ, ಚಂದ್ರಯಾನ ಎರಡರಲ್ಲಿ ವಿಫಲವಾಗಿದ್ದನ್ನು ಸಾಧಿಸುವುದು ಅಂದರೆ, ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್‌ಅನ್ನು ಮೃದುವಾಗಿ ಲ್ಯಾಂಡ್ ಮಾಡಿಸುವುದು, ನಂತರ, ರೋವರ್‌ಅನ್ನು ಚಂದ್ರನ ಮೇಲೆ ಓಡಾಡಿಸುವುದು. ಇಸ್ರೋ ಪ್ರಕಾರ ಅಗಸ್ಟ್ 23-24ರಂದು ಈ ಪ್ರಕ್ರಿಯೆ ನಡೆಯಲಿದೆಯಂತೆ! ಇದಲ್ಲದೆ, ಚಂದ್ರಯಾನ-3ನ Orbiter, Lander and Roverನಲ್ಲಿ ಹಲವು ವೈಜ್ಞಾನಿಕ ಉಪಕರಣಗಳನ್ನು ಸಹ ಇರಿಸಲಾಗಿದೆ. ಪ್ರಮುಖವಾಗಿ ಲ್ಯಾಂಡರ್ ಭೂಮಿಯ ಭೂಕಂಪನದಂತೆ ಚಂದ್ರನಲ್ಲಿ ಉಂಟಾಗುವ ಚಂದ್ರ ಕಂಪನಗಳನ್ನು ಅಧ್ಯಯನ ಮಾಡಲಿದೆಯಂತೆ; ಚಂದ್ರ ಕಂಪನಗಳ ಬಗೆಗಿನ ನಮ್ಮ ಅರಿವು ಅಸ್ಪಷ್ಟವಾಗಿರುವುದರಿಂದ, ಇದರ ಅಧ್ಯಯನ ಚಂದ್ರನ ಬಗ್ಗೆ ಹೊಸ ಬೆಳಕು ಚೆಲ್ಲಬಹುದು. ಇದಲ್ಲದೆ, ಚಂದ್ರನ ಮಣ್ಣಿನ ಸಂಯೋಜನೆಯನ್ನು ಇನ್ನಷ್ಟು ತೀಕ್ಷ್ಣವಾಗಿ ಅಧ್ಯಯನ ನಡೆಸಲಿದೆಯಂತೆ.

ಚಂದ್ರನ ಅಧ್ಯಯನವು ಭೂಮಿಯ ಅಧ್ಯಯನದಷ್ಟೇ ಮುಖ್ಯ ಮತ್ತು ಭೂಮಿಯಲ್ಲಿ ಜೀವಸಂಕುಲ ಇರುವಿಕೆಗೆ ಕಾರಣವಾದ ಪ್ರಕ್ರಿಯಗಳ ಬಗ್ಗೆಯೂ ಹೆಚ್ಚು ಬೆಳಕು ಚೆಲ್ಲುತ್ತದೆ. ಇಸ್ರೋಗೆ ಚಂದ್ರಯಾನದಂತಹ ಯೋಜನೆಗಳು ಬಾಹ್ಯಾಕಾಶ ತಂತ್ರಜ್ಞಾನವನ್ನು ಸುಧಾರಿಸಲು ಮತ್ತು ಭಾರತದಿಂದ ಮಾನವರನ್ನು ಅಂತರಿಕ್ಷಕ್ಕೆ ಹಾರಿಸಲು ಬೇಕಾದ ತಾಂತ್ರಿಕತೆಯನ್ನು ಬೆಳೆಸಿಕೊಳ್ಳುವುದಾಗಿರುತ್ತದೆ. ಇಸ್ರೋ ಸೂರ್ಯನನ್ನು ಅಧ್ಯಯನ ಮಾಡಲು ಆದಿತ್ಯ ಎಲ್-1 ಗಗನನೌಕೆಯನ್ನು ಮುಂದಿನ ದಿನಗಳಲ್ಲಿ ಉಡಾವಣೆಗೊಳಿಸಲಿದ್ದು, ಹೆಚ್ಚು ವಿಜ್ಞಾನಾಧಾರಿತ ಗಗನನೌಕೆಗಳಿಂದ ವಿಶ್ವದ ಅಧ್ಯಯನ ನಡೆಸಲು ಇಸ್ರೋ ಸಜ್ಜಾಗುತ್ತಿರುವುದು ಭಾರತದ ವಿಜ್ಞಾನ ಕ್ಷೇತ್ರದ ಉತ್ತಮ ಬೆಳವಣಿಗೆ. ಇದಲ್ಲದೆ, ಚಂದ್ರ ಭೂಮಿಗೆ ಅತ್ಯಂತ ಸಮೀಪವಿರುವ ಆಕಾಶಕಾಯವಾದುದರಿಂದ, ಮುಂದೊಂದು ದಿನ ಚಂದ್ರನಲ್ಲೂ ಮಾನವನ ಕಾಲೋನಿ ಮಾಡುವ ಉದ್ದೇಶಗಳನ್ನು ಹೊಂದಿರುವ ಸಂಸ್ಥೆಗಳು/ಸರ್ಕಾರಗಳು ಕೂಡ ಚಂದ್ರನ ಅಧ್ಯಯನವನ್ನು ವ್ಯಾಪಕವಾಗಿ ಮಾಡುತ್ತಿವೆ. ನಾಸಾ ಮತ್ತೊಮ್ಮೆ ಚಂದ್ರನ ಅಂಗಳಕ್ಕೆ ಮಾನವರನ್ನು ಕಳುಹಿಸಲು Artemis ಎನ್ನುವ ಯೋಜನೆಯನ್ನು ರೂಪಿಸಿ, ಅದಕ್ಕಾಗಿ ಕಾರ್ಯೋನ್ಮುಖವಿದೆ. ಭೂಮಿಯ ಉಪಗ್ರಹ ಚಂದ್ರ ವಿಜ್ಞಾನದ ಅಧ್ಯಯನಕ್ಕೆ ಒಂದು ಲ್ಯಾಬೊರೆಟರಿ ಆಗಿರುವ ಜೊತೆಗೆ ಉಳ್ಳವರಿಗೆ ಕೈಗೆಟುಕುವಂತಾಗುತ್ತಿರುವ ವಿಲಾಸದ ಪ್ರದೇಶವು ಆಗಿ ಮಾರ್ಪಾಡಾಗುತ್ತಿರುವುದನ್ನು ಸಹ ನಾವು ಕಾಣಬಹುದು!

ಬಾಹ್ಯಾಕಾಶಯಾನ ಅಥವಾ ಅಂತರಿಕ್ಷಯಾನಗಳು ಮನುಷ್ಯನ ಕಲ್ಪನೆಗಳಿಗೆ ಆಹಾರ ನೀಡಿ ನಮ್ಮನ್ನು ವಿಸ್ಮಯಗೊಳ್ಳುವಂತೆ ಮಾಡುತ್ತದೆ. ರಾಕೆಟ್ ಆಕಾಶಕ್ಕೆ ಹಾರುವುದನ್ನು ನೋಡುವುದೇ ಒಂದು ರೋಮಾಂಚನ. ಅದು ನಿರ್ದಿಷ್ಟವಾಗಿ ಇಂತಹ ಕಕ್ಷೆಗೆ ತಲುಪಬೇಕು ಎಂದು ವರ್ಷಾನುಗಟ್ಟಲೆ ವಿಜ್ಞಾನದ ನಿಯಮಾನುಸಾರ ಲೆಕ್ಕ ಹಾಕಿ ಎಲ್ಲವು ಸರಿ ಇದೆ ಎಂದು ಹಲವು ಬಾರಿ ಪರೀಕ್ಷಿಸಿ ನಂತರ ನಭೋಮಂಡಲಕ್ಕೆ ಹಾರಿಸಲಾಗುತ್ತದೆ. ಮೊದಲಿಗೆ ರಾಕೆಟ್ ಹಾರಿಸುವುದು, ನಂತರ ಬಾಹ್ಯಾಕಾಶ ನೌಕೆಯಿಂದ ಮಾಹಿತಿ ಪಡೆಯುವುದು ಎರಡೂ ಕೂಡ ಅತ್ಯಂತ ಕ್ಲಿಷ್ಟಕರವಾದ ಮತ್ತು ಸಂಕೀರ್ಣವಾದ ಪ್ರಕ್ರಿಯೆಗಳು. ಏಕೆಂದರೆ, ಇಲ್ಲಿ ತಪ್ಪು ಮಾಡುವ ವ್ಯಾಪ್ತಿ ಕಡಿಮೆ ಅಥವಾ ಇಲ್ಲವೇ ಇಲ್ಲ! ಅದರಲ್ಲೂ ಮಾನವನನ್ನು ಕರೆದುಕೊಂಡು ಹೋಗುವ ಅಂತರಿಕ್ಷ ನೌಕೆಯಲ್ಲಿನ ಸಂಕೀರ್ಣತೆ ಅನನ್ಯವಾದದ್ದು. ಬಾಹ್ಯಾಕಾಶಯಾನ ಎಷ್ಟೇ ಸಂಕೀರ್ಣ ಆಗಿದ್ದರೂ, ನಾವು ಅನನ್ನು ಸಾಧ್ಯವಾಗಿಸಿ, ಹೇಗೆ ಯಶಸ್ವಿಯಾಗುತ್ತಿದ್ದೇವೆ ಎಂದು ಪ್ರಶ್ನೆ ಕೇಳಿಕೊಂಡರೆ, ಇದಕ್ಕೆ ಉತ್ತರ ಸರಳವಾಗಿದೆ; ಮನುಷ್ಯನು ಇಲ್ಲಿಯವರೆಗೂ ವೈಜ್ಞಾನಿಕ ಹಾದಿಯಲ್ಲಿ ಕಂಡುಕೊಂಡ ಹಲವು ನಿಯಮಗಳು, ಥಿಯರಿಗಳು ಮತ್ತು ಸುತ್ತಲಿನ ಪರಿಸರವನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿ ಅಧ್ಯಯನ ಮಾಡಿ ಕಂಡುಕೊಂಡ ವಿಚಾರಗಳು ಮತ್ತು ಸಮೀಕರಣಗಳಿಂದ ಸಾಧ್ಯವಾಗಿದೆ. ಮನುಷ್ಯನು ಚಂದ್ರಯಾನ ಕೈಗೊಂಡು, ಅದರ ಅಂಗಳದಲ್ಲಿ ನಡೆದಾಡಿ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾನೆ ಎಂದರೆ, ಶತಮಾನಗಳಿಂದ ಮನುಷ್ಯನು ಕಂಡುಕೊಂಡ ವೈಜ್ಞಾನಿಕ ದೃಷ್ಟಿಕೋನದ ಹಲವು ಅಧ್ಯಯನಗಳು ಇದಕ್ಕೆ ಸಾಕ್ಷಿ. ಇಂತಹ ಅಧ್ಯಯನಗಳು ನಿರ್ವಾತದಿಂದ/ಅಮೂರ್ತದಿಂದ ಒಮ್ಮೆಲೇ ಸೃಷ್ಟಿಯಾಗಿ ಮನುಷ್ಯನ ಕೈಗೆ ಬಂದಿರುವುದಿಲ್ಲ. ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಳ್ಳಿ ಎಂದು ಹೇಳುವ ಸಂವಿಧಾನದ ಆಶಯದಿಂದ ರಚನೆಯಾದ ಸಂಸ್ಥೆಯೊಳಗೆ ವೈಯಕ್ತಿಕವಾಗಿ ನಡೆದುಕೊಳ್ಳಬೇಕಾಗಿರುವ/ಆಚರಿಸುವ ಆಚರಣೆಗಳನ್ನು ಸಾಂಸ್ಥಿಕವಾಗಿ ಆಚರಿಸಿದರೆ, ಸಂವಿಧಾನದ ಪ್ರಜ್ಞೆಯುಳ್ಳ ಎಲ್ಲರೂ ಖಂಡಿಸಲೇಬೇಕಾಗುತ್ತದೆ. ಹಿಂದೆ ಮಾಡಿದ್ದರು, ಮುಂದುವರಿದ ದೇಶಗಳು ಕೂಡ ಹೀಗೆಯೇ ಮಾಡಿವೆ ಎನ್ನುವ ಮಾತುಗಳಿಗೆ ವೈಜ್ಞಾನಿಕವಾಗಿ ಯಾವ ತೂಕವೂ ಇರುವುದಿಲ್ಲ. ಇರಲಿ, ಇದೆಲ್ಲದರಾಚೆಗೆ ಚಂದ್ರಯಾನ-3 ಯಶಸ್ವಿಯಾಗಲಿ, ಚಂದ್ರನೆ ಮೇಲ್ಮೈಅನ್ನು ಮುಟ್ಟುವಂತಾಗಲಿ. ಮತ್ತೊಮ್ಮೆ ಹೇಳುವುದಾದರೆ ಮನುಷ್ಯನಿಗೆ ಈ ಚಂದ್ರಯಾನ ನಿರ್ವಾತದಿಂದ/ಅಮೂರ್ತದಿಂದ ಒಮ್ಮೆಲೇ ದಕ್ಕಿದ್ದಲ್ಲ; ಶತಮಾನಗಳ ವೈಜ್ಞಾನಿಕ ದೃಷ್ಟಿಕೋನದ ಅರಿವಿನಿಂದ ದಕ್ಕಿಸಿಕೊಂಡದ್ದು; ಆದಾಗ್ಯೂ, ಭೂಮಿಯ ಮೇಲೆ ಮನುಷ್ಯ ನಡೆಯುತ್ತಿರುವ ದಾರಿಯಲ್ಲಿ ಸಮಾನತೆಯೊಂದಿಗೆ ವೈಜ್ಞಾನಿಕ ದೃಷ್ಟಿಕೋನದ ಸಸಿಯನ್ನು ಮತ್ತು ಅಕ್ಷರವನ್ನು ಇನ್ನೂ ಬಿತ್ತಬೇಕಿದೆ ಎನ್ನುವುದನ್ನು ಎಚ್ಚರಿಸುತ್ತಲೇ ಇರುತ್ತದೆ. ನಾವು ಎಚ್ಚರವಾಗಿಯೇ ಇರಬೇಕಾಗುತ್ತದೆ.

ವಿಶ್ವ ಕೀರ್ತಿ ಎಸ್.

ವಿಶ್ವ ಕೀರ್ತಿ ಎಸ್
ವಿಜ್ಞಾನ ಮತ್ತು ಖಗೋಳದಲ್ಲಿ ಆಸಕ್ತಿ, ಹವ್ಯಾಸಿ ಆಕಾಶ ವೀಕ್ಷಣೆಗಾರ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಂಸ್ಥೆಯಲ್ಲಿ ವೈಜ್ಞಾನಿಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...