Homeಮುಖಪುಟ2022-23ರಲ್ಲಿ 2.09 ಲಕ್ಷ ಕೋಟಿ ರೂ ಸಾಲ ರೈಟ್ ಆಫ್: ನಮ್ಮೆಲ್ಲರ ಹಣ ಸೋರಿ ಹೋಗುತ್ತಿರುವುದು...

2022-23ರಲ್ಲಿ 2.09 ಲಕ್ಷ ಕೋಟಿ ರೂ ಸಾಲ ರೈಟ್ ಆಫ್: ನಮ್ಮೆಲ್ಲರ ಹಣ ಸೋರಿ ಹೋಗುತ್ತಿರುವುದು ಹೀಗೆ…

ಒಟ್ಟಾರೆಯಾಗಿ ಕಳೆದ ಹತ್ತು ವರ್ಷಗಳಲ್ಲಿ ಭಾರತೀಯ ಬ್ಯಾಂಕುಗಳು 15,31,453 ಕೋಟಿ ರೂಗಳನ್ನು ಮನ್ನಾ ಮಾಡಿವೆ ಎಂದು ಆರ್‌ಬಿಐ ಹೇಳಿದೆ.

- Advertisement -
- Advertisement -

2022-23ರ ಸಾಲಿನ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ಗಳು 2.09 ಲಕ್ಷ ಕೋಟಿ ರೂ ರೈಟ್ ಆಫ್ ಮಾಡಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಈ ರೀತಿಯಾಗಿ ಕಳೆದ 5 ವರ್ಷಗಳಲ್ಲಿ ಒಟ್ಟು 10.57 ಲಕ್ಷ ಕೋಟಿ ಸಾಲ ಮನ್ನಾವಾಗಿದೆ ಎಂದು ತಿಳಿದುಬಂದಿದೆ.

ಇಂಡಿಯನ್ ಎಕ್ಸ್‌ಪ್ರೆಸ್ ಸಲ್ಲಿಸಿದ ಮಾಹಿತಿ ಹಕ್ಕು ಅರ್ಜಿಗೆ ಉತ್ತರ ನೀಡಿರುವ ಆರ್‌ಬಿಐ “ಕಳೆದೊಂದು ವರ್ಷದಲ್ಲಿ 2,09,144 ಕೋಟಿ ರೂಗಳನ್ನು ಬ್ಯಾಂಕಿನ ಸಾಲದ ಪುಸ್ತಕರಿಂದ ಹೊಡೆದು ಹಾಕಲಾಗಿದೆ. 2021-22 ರಲ್ಲಿ 1,74,966 ಕೋಟಿ ರೂ. ಮತ್ತು 2020-21ರ ವರ್ಷದಲ್ಲಿ 2,02,781 ಕೋಟಿ ರೂಗಳನ್ನು ಇದೇ ರೀತಿ ಹೊಡೆದು ಹಾಕಲಾಗಿದೆ” ಎಂದು ಮಾಹಿತಿ ನೀಡಿದೆ.

ಒಟ್ಟಾರೆಯಾಗಿ ಕಳೆದ ಹತ್ತು ವರ್ಷಗಳಲ್ಲಿ ಭಾರತೀಯ ಬ್ಯಾಂಕುಗಳು 15,31,453 ಕೋಟಿ ರೂಗಳನ್ನು ಮನ್ನಾ ಮಾಡಿವೆ ಎಂದು ಆರ್‌ಬಿಐ ಹೇಳಿದೆ. ಬಹುತೇಕ ಉದ್ಯಮಿಗಳ ಸಾಲವೇ ಮನ್ನಾ ಆಗಿದೆ ಎನ್ನಲಾಗಿದೆ. ಆದರೆ ಅವರ ಹೆಸರುಗಳನ್ನು ಬಹಿರಂಗಪಡಿಸಲು ಆರ್‌ಬಿಐ ನಿರಾಕರಿಸಿದೆ. ಈ ಹೊಡೆದು ಹಾಕುವ (ರೈಟ್ ಆಫ್) ವಿಧಿಯನ್ನು ಭಾರತೀಯ ರಿಜ಼ರ್ವ್ ಬ್ಯಾಂಕಿನ ಮಾಜಿ ಡೆಪ್ಯೂಟಿ ಗವರ್ನರ್  ಕೆ.ಸಿ.ಚಕ್ರಬರ್ತಿಯವರು “ದೊಡ್ಡ ಹಗರಣ” ಎಂದು ಕರೆಯುತ್ತಾರೆ.

ರೈಟ್ ಆಫ್ ಎಂದರೇನು?

“ಸಾಲ ಮನ್ನಾ” ಎಂದ ಕೂಡಲೇ ಅದು ಏನೆಂದು ಎಲ್ಲರಿಗೂ ತಿಳಿಯುತ್ತದೆ. ಆದರೆ ಈ “ರೈಟ್-ಆಫ್” ಅಂದರೆ “ಸಾಲ ಮನ್ನಾ” ಅಷ್ಟೇ ಅಲ್ಲ ಎಂಬುದು ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಯಾವುದೇ ಬ್ಯಾಂಕ್ ತನ್ನ ಸಾಲವನ್ನು ಮನ್ನಾ ಮಾಡಲು ಇಷ್ಟ ಪಡುವುದಿಲ್ಲ, ಏಕೆಂದರೆ ಜನರಿಗೆ/ಉದ್ದಿಮೆಗಳಿಗೆ ನೀಡಿರುವ ಸಾಲ ಬ್ಯಾಂಕಿನ “ಆಸ್ತಿ” ಯಾಗಿರುತ್ತದೆ.

ಉದಾಹರಣೆಗೆ ನೀವು ಬ್ಯಾಂಕಿನಿಂದ ಒಂದು ಲಕ್ಷ ರೂ. ಸಾಲ ಪಡೆದಿದ್ದೀರಿ ಎಂದುಕೊಳ್ಳೋಣ. ಬ್ಯಾಂಕಿನ ದೃಷ್ಟಿಯಲ್ಲಿ ನೀವು ತೆಗೆದುಕೊಂಡಿರುವ ಸಾಲ ಬ್ಯಾಂಕಿಗೆ “ಆಸ್ತಿ” ಮತ್ತು ಅದಕ್ಕೆ ನೀವು ಕಟ್ಟುವ ಬಡ್ಡಿ ಹಣ ಬ್ಯಾಂಕಿಗೆ “ಆದಾಯ” ಆಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಖಾತೆ “ಸಾಮಾನ್ಯ” ಮತ್ತು ನಿಮಗೆ ನೀಡಿರುವ ಹಣ ಬ್ಯಾಂಕಿನ “ಆಸ್ತಿ” ಎಂದು ಪರಿಗಣಿಸಲಾಗುತ್ತದೆ. ಆದರೆ ನೀವು ಬಡ್ಡಿ ಕಟ್ಟುವುದನ್ನು ನಿಲ್ಲಿಸಿದ ನಂತರ ಅಂದರೆ ಬ್ಯಾಂಕಿಗೆ “ಆದಾಯ” ನಿಂತ ದಿನದಿಂದ ನಿಮ್ಮ ಸಾಲವನ್ನು ನಿಷ್ಕ್ರಿಯ ಆಸ್ತಿ ಅಥವಾ ವಸೂಲಾಗದ ಸಾಲ (ನಾನ್-ಪರ್ಫಾರ್ಮಿಂಗ್ ಅಸೆಟ್) ಎಂದು ಮತ್ತು ನಿಮ್ಮಿಂದ ಬರಬೇಕಾಗಿದ್ದ ಬಡ್ಡಿ ಹಣವನ್ನು “ಖರ್ಚು” ಎಂದು ಪರಿಗಣಿಸಲಾಗುತ್ತದೆ.

ಆರ್.ಬಿ.ಐ. ನಿಯಮಾವಳಿ ಅನುಸಾರ ಒಂದು ಸಮಯ/ಹಂತದ ನಂತರ ಇದನ್ನು “ಆಸ್ತಿ” ಎಂದು ಪರಿಗಣಿಸಲು ಆಗುವುದಿಲ್ಲ, ಅದಕ್ಕಾಗಿ ಅದನ್ನು ಬ್ಯಾಂಕಿನ ಲೆಕ್ಕ-ಪತ್ರದಲ್ಲಿ ಆಸ್ತಿ ಪಟ್ಟಿಯಿಂದ ಹೊಡೆದು ಹಾಕಲಾಗುತ್ತದೆ. ಇದನ್ನು ರೈಟ್-ಆಫ್ ಎಂದು ಕರೆಯುತ್ತಾರೆ. ರೈಟ್-ಆಫ್ ಎಂದ ಕೂಡಲೇ ಬ್ಯಾಂಕು ಈ ಸಾಲವನ್ನು ಕೈ ಬಿಟ್ಟಿದೆ ಎಂಬ ಅರ್ಥವಲ್ಲ. ಕಾನೂನಿನ ಪ್ರಕಾರ ಸಾಲಗಾರರ ವಿರುದ್ಧ ಸಾಲ ಮತ್ತು ಬಡ್ದಿಯ ವಸೂಲಿಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರವಿರುತ್ತದೆ. ಕೆಲವು ಬ್ಯಾಂಕುಗಳು ಈ “ಹೊಡೆದು ಹಾಕಿದ ಸಾಲ” ವನ್ನು ವಸೂಲಿಗಾಗಿ ವಸೂಲಿ ಕಂಪನಿಗಳಿಗೆ ಮಾರಲೂಬಹುದು. ಅಂತಹ ಸಂದರ್ಭದಲ್ಲಿ ವಸೂಲಿ ಕಂಪನಿಯ ದಾಂಢಿಗರು ನಿಮ್ಮ ಮನೆ ಬಾಗಿಲಿಗೆ ಬಂದು ಕದ ತಟ್ಟಬಹುದು. ನೀವು ಸಾಲದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇವಷ್ಟು ಪುಸ್ತಕದ ಬದನೇಕಾಯಿ.

ಇದರಲ್ಲಿ ಬ್ಯಾಂಕಿಗೆ ಆಗುವ ನಷ್ಟ-ಲಾಭವೇನು ನೋಡೋಣ. ಸಾಲರೂಪದಲ್ಲಿ ನೀಡಿರುವ ಹಣ ಸಂಪೂರ್ಣವಾಗಿ ಹಿಂದಕ್ಕೆ ಬಂದೇ ಬರುವುದೆಂಬ ನಂಬಿಕೆ ಯಾವ ಬ್ಯಾಂಕಿಗೂ ಇರುವುದಿಲ್ಲ ಹಾಗಾಗಿ ಸಾಲದ ಮೊತ್ತದ ಒಂದು ಅಂಶವನ್ನು ಅದು ತನ್ನ ಖರ್ಚೆಂದು ಲೆಕ್ಕದ ಪುಸ್ತಕದಲ್ಲಿ ಮೊದಲೇ ತೋರಿಸುತ್ತದೆ. ಇದು ಒಟ್ಟು ಸಾಲದ 5% ಆಗಿರಬಹುದು ಅಥವಾ ಸಾಲದ ಗುಣಮಟ್ಟದ ಆಧಾರದ ಮೇಲೆ ಇನ್ನೂ ಹೆಚ್ಚಾಗಿರಬಹುದು. ನಿಷ್ಕ್ರಿಯ ಸಾಲವನ್ನು ಆಸ್ತಿ ಪಟ್ಟಿಯಿಂದ ಹೊಡೆದು ಹಾಕಿದ ನಂತರ ಬ್ಯಾಂಕಿಗೆ ಖರ್ಚು ಹೆಚ್ಚಾಗಿ ಅದರ ವಾರ್ಷಿಕ ಲಾಭ ಕಡಿಮೆ ಆಗುತ್ತದೆ. ಅಂದರೆ ಆದಾಯ ತೆರಿಗೆಯಲ್ಲಿ ಬ್ಯಾಂಕುಗಳಿಗೆ ವಿನಾಯಿತಿ ದೊರೆಯುತ್ತದೆ. ಇದರಿಂದ ಬ್ಯಾಂಕಿನ ಲೆಕ್ಕ-ಪತ್ರ ಸ್ವಲ್ಪ ಮಟ್ಟಿಗೆ ಸ್ವಚ್ಛವಾಗುತ್ತದೆ. ಆದರೆ ಇದರಿಂದ ಸರಕಾರಕ್ಕೆ ಆದಾಯ ಕಡಿಮೆ (ತೆರಿಗೆ ಖೋತಾ) ಆಗುತ್ತದೆ. ಈ ನಿಷ್ಪ್ರಯೋಜಕ ಆಸ್ತಿಗಳನ್ನು ಕೈ ಬಿಟ್ಟ ನಂತರ ಬ್ಯಾಂಕ್ ಮತ್ತೆ ಬೇರೆಯವರಿಗೆ ಸಾಲ ನೀಡಲು ಸಾಧ್ಯವಾಗುತ್ತದೆ. ಸಾಲ ನೀಡಲು ಬ್ಯಾಂಕಿನ ಬಳಿ ಹಣ ಇಲ್ಲದೆ ಇದ್ದಾಗ ಸರಕಾರ ಅವಕ್ಕೆ “ರಿ-ಫೈನಾನ್ಸಿಂಗ್” ಮಾಡುತ್ತದೆ. ಅಂದರೆ ಸರಕಾರವೂ ಸಹ ಇಂತಹ “ರೈಟ್-ಆಫ್” ಗೆ ಬೆಂಬಲ ನೀಡುತ್ತವೆ ಎಂದರ್ಥ.

ಟೆಕ್ನಿಕಲ್ ರೈಟ್-ಆಫ್ ಎಂದರೇನು?

ಇತ್ತೀಚೆಗೆ ಬ್ಯಾಂಕಿನವರು ಹೊಸ “ಟೆಕ್ನಿಕಲ್ ರೈಟ್-ಆಫ್” ಎಂಬ ಪದ ಉಪಯೋಗಿಸಿ ಜನ ಸಾಮಾನ್ಯರನ್ನು ದಾರಿ ತಪ್ಪಿಸುತ್ತಿವೆ. ಇದನ್ನು ಮಾಜಿ ಡೆಪ್ಯೂಟಿ ಗವರ್ನರ್ ಕೆ.ಸಿ.ಚಕ್ರಬರ್ತಿಯವರು “ದೊಡ್ಡ ಹಗರಣ” ಎಂದು ಕರೆಯುತ್ತಾರೆ. ಇದರಲ್ಲಿ ಯಾವುದೇ “ಟೆಕ್ನಿಕಲ್” ಪ್ರಶ್ನೆ ಇಲ್ಲ. ಸಾಲ ತೆಗೆದುಕೊಂಡಿರುವ ಉದ್ದಿಮೆಗಳ ನಿವ್ವಳ ಆದಾಯ ಬ್ಯಾಂಕಿಗೆ ಬರಬೇಕಾಗಿರುವ ಬಡ್ಡಿಯಷ್ಟೂ ಇಲ್ಲದಿರುವುದು ಅವರ ಲೆಕ್ಕ-ಪತ್ರದಲ್ಲಿ ಸ್ಪಷ್ಟವಾಗಿರುವಾಗ ಸಾಲ ತೆಗೆದುಕೊಂಡಿರುವುದು ಮೋಸದ ಉದ್ದೇಶ. ರೈಟ್-ಆಫ್ ಎನ್ನುವುದು ಬ್ಯಾಂಕಿಂಗ್ ಕ್ಷೇತ್ರದ ಸರ್ವೇ ಸಾಮಾನ್ಯ ಪ್ರಕ್ರಿಯೆ ಅದನ್ನು ಮೀರಿ ನಡೆದಿರುವ ಎಲ್ಲಾ “ಟೆಕ್ನಿಕಲ್ ರೈಟ್-ಆಫ್”ಗಳೂ ಕೇವಲ ಹಗರಣ ಎಂಬುದು ಅವರ ಅನಿಸಿಕೆ.

ಹಾಗಾದರೆ ಈ ಹೊಡೆದು ಹಾಕಿದ ಮೊತ್ತ ಬ್ಯಾಂಕಿಗೆ ಮತ್ತೆ ಬರುತ್ತದೆಯೇ? ವಿಷಯ ಪರಿಣಿತರಲ್ಲಿ ಇದರ ಬಗ್ಗೆ ಏಕಾಭಿಪ್ರಾಯ ಇಲ್ಲ. ಕೆಲವರು ಕೇವಲ 20% ಮಾತ್ರ ಬರುತ್ತದೆ. ಅದೂ ಸಹ ಹತ್ತಾರು ವರ್ಷಗಳ ನ್ಯಾಯಾಲಯದ ಹೋರಾಟದ ನಂತರ, ಎಂದರೆ ಕೆಲವರು ಸುಮಾರು ಅರ್ಧದಷ್ಟು ಬರುತ್ತದೆ ಎನ್ನುತ್ತಾರೆ.

ಏನೇ ಆಗಲಿ ದೊಡ್ಡವರ ದೊಡ್ಡ ಮೊತ್ತದ ಸಾಲ ದೊಡ್ಡ ಹಗರಣವೇ ಸರಿ. ಇದರಲ್ಲಿ ಎಲ್ಲರೂ ಸಹಭಾಗಿ. ಕೊನೆಗೆ ಸರಕಾರಿ ಬ್ಯಾಂಕಿನ ಹಣ ನಮ್ಮ ನಿಮ್ಮ ತೆರಿಗೆಯಿಂದಲೇ ಬರಬೇಕು. ಆದ್ದರಿಂದ ಈಗ ಸರಕಾರ ಹೊಡೆದು ಹಾಕಿರುವ ರೂ.15,31,453 ಕೋಟಿ ರೂ ಸರಿಯೋ ತಪ್ಪೋ ನೀವೇ ಮತ್ತೊಮ್ಮೆ ಯೋಚಿಸಿ.

ಜಿ. ಆರ್. ವಿದ್ಯಾರಣ್ಯ

(ಡಿಸ್ಕ್ಲೇಮರ್: ಲೇಖಕರು ಬ್ಯಾಂಕಿಂಗ್/ಫೈನಾನ್ಸ್ ಪರಿಣಿತರಲ್ಲ. ಬಲ್ಲವರೊಂದಿಗೆ ಚರ್ಚಿಸಿ ಲೇಖನ ತಯಾರಿಸಿದ್ದಾರೆ. ನಿಮ್ಮ ಅನಿಸಿಕೆಗೆ ಸ್ವಾಗತ.)

ಇದನ್ನೂ ಓದಿ; 11.68 ಲಕ್ಷ ಕೋಟಿ ರೈಟ್ ಆಫ್ – 20 ಲಕ್ಷ ಕೋಟಿ NPA: ನಮ್ಮೆಲ್ಲರ ಹಣ ಸೋರಿ ಹೋಗುತ್ತಿರುವುದು ಹೀಗೆ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...