Homeಕರ್ನಾಟಕಚಿತ್ರದುರ್ಗ: ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ಶಿವಮೂರ್ತಿ ಮುರುಘಾ ಶರಣರು

ಚಿತ್ರದುರ್ಗ: ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ಶಿವಮೂರ್ತಿ ಮುರುಘಾ ಶರಣರು

ಚಿತ್ರದುರ್ಗದ 2ನೇ ಸೆಷನ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯನ್ನು ದಾಖಲಿಸಿಕೊಂಡಿರುವ ನ್ಯಾಯಾಲಯ ಸೆಪ್ಟಂಬರ್ 01ರಂದು ವಿಚಾರಣೆಗೆ ನಿಗಧಿಪಡಿಸಿದೆ.

- Advertisement -
- Advertisement -

ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಡಾ. ಶಿವರಾತ್ರಿ ಮುರುಘಾ ಶರಣರು ಬಂಧನದಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

ತಮ್ಮ ವಕೀಲರ ಮೂಲಕ ಚಿತ್ರದುರ್ಗದ 2ನೇ ಸೆಷನ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯನ್ನು ದಾಖಲಿಸಿಕೊಂಡಿರುವ ನ್ಯಾಯಾಲಯ ಸೆಪ್ಟಂಬರ್ 01ರಂದು ವಿಚಾರಣೆಗೆ ನಿಗಧಿಪಡಿಸಿದೆ.

ಸ್ವಾಮೀಜಿಯವರನ್ನು ಪೊಲೀಸರು ಬಂಧಿಸಿಲ್ಲ: ಪೊಲೀಸರ ಸ್ಪಷ್ಟನೆ

ಪೋಕ್ಸೋ ಪ್ರಕರಣದ ಅಡಿಯಲ್ಲಿ ಮುರುಘ ಶರಣರನ್ನು ಬಂಧಿಸಲಾಗಿದೆ ಎಂಬ ಸುದ್ದಿ ಹರಡಿತ್ತು. ಆದರೆ ಪೊಲೀಸರು ಬಂಧಿಸಿಲ್ಲ, ಆದರೆ ವಶಕ್ಕೆ ಪಡೆದು ಮಠಕ್ಕೆ ವಾಪಸ್‌ ಕರೆತಂದಿದ್ದಾರೆಂದು ವರದಿಯಾಗಿದೆ.

ಹಾವೇರಿ ಜಿಲ್ಲೆಯ ಬಂಕಾಪುರದ ಬಳಿ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗಾಗಿ ಮಠಕ್ಕೆ ಕರೆತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರ ನಡುವೆಯೆ “ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾದರೂ ಯಾಕಿನ್ನೂ ಸ್ವಾಮೀಜಿಯ ಬಂಧನವಾಗಿಲ್ಲ?” ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.

ಚಿತ್ರದುರ್ಗದ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ ಅವರನ್ನು ಭಾನುವಾರ ಪ್ರಶ್ನಿಸಿದಾಗ, ‘ತನಿಖೆಯಾಗುತ್ತಿದೆ. ಕ್ರಮ ಜರುಗಿಸುತ್ತೇವೆ’ ಎಂದಿದ್ದರು. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಸ್ವಾಮೀಜಿಯನ್ನು ಯಾವಾಗ ಬಂಧಿಸುತ್ತೀರಿ? ಪೋಕ್ಸೋ ಪ್ರಕರಣದಲ್ಲಿ ತಕ್ಷಣವೇ ಆರೋಪಿಗಳನ್ನು ಬಂಧಿಸಬೇಕಲ್ಲ, ಬೇರೆಯವರಾಗಿದ್ದರೆ ಹೀಗೆಯೇ ವಿಳಂಬವಾಗುತ್ತಿತ್ತೇ ಎಂದು ಕೇಳಿದರೆ, “ಆರೋಪಗಳನ್ನು ಪರಿಶೀಲನೆ ಮಾಡಬೇಕು. ಏಕಾಏಕಿ ಬಂಧಿಸಲು ಆಗುವುದಿಲ್ಲ. ತನಿಖೆ ನಡೆಸುತ್ತಿದ್ದೇವೆ. ಮೈಸೂರಿನಿಂದ ನಿನ್ನೆಯಷ್ಟೇ ಪ್ರಕರಣ ಚಿತ್ರದುರ್ಗಕ್ಕೆ ವರ್ಗಾವಣೆಯಾಗಿದೆ” ಎಂದು ತಿಳಿಸಿದ್ದರು.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ದಲಿತ ಚಿಂತಕ ಸಿ.ಕೆ.ಮಹೇಶ್, “ಪೋಕ್ಸೋ ಪ್ರಕರಣ ದಾಖಲಾಗಿದೆ. ಸ್ವಾಮೀಜಿಯಾಗಲೀ, ಮತ್ತೆ ಯಾವನೇ ಆಗಿರಲಿ, ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಒಂದೇ. ಇದು ಮಠಕ್ಕೂ ಅನ್ವಯಿಸುತ್ತದೆ. ಸಾಮಾನ್ಯ ಮನುಷ್ಯನಿಗೆ ಅನ್ವಯವಾಗುವ ಕಾನೂನು ಈ ದೇಶದ ಪ್ರಭಾವಿಗೂ ಅನ್ವಯವಾಗುತ್ತದೆ” ಎಂದಿದ್ದಾರೆ.

“ಬುದ್ಧನ ಮೇಲೆ ಬ್ರಾಹ್ಮಣರು ಆರೋಪಗಳನ್ನು ಮಾಡಿದಾಗ ಸ್ವಯಃ ಬುದ್ಧ ಗುರುವೇ ತನಿಖೆಗೆ ಒಳಗಾಗುತ್ತಾರೆ. ತನಿಖೆಯಾದ ಬಳಿಕ ಹೊರಗೆ ಬರುತ್ತಾರೆ. ಬುದ್ಧನ ಬಗ್ಗೆ ಮಾತನಾಡುವ ಮುರುಘಾ ಶರಣರು, ತನಿಖೆಗೆ ಒಳಗಾಗಬೇಕು. ನೀವು ಎಷ್ಟೇ ಶುದ್ಧರಾಗಿರಿ, ಪ್ರಾಮಾಣಿಕರಾಗಿರಿ, ಆ ಸರ್ಟಿಫಿಕೇಟ್‌ಗಳನ್ನು ನೀವಾಗಿಯೇ ತೆಗೆದುಕೊಳ್ಳಬಾರದು. ನಿಮ್ಮ ಕ್ರಿಯೆಗಳನ್ನು ಗುರುತಿಸಿದ ಬಳಿಕ ಜನರು ಆ ಸರ್ಟಿಫಿಕೇಟ್‌ಗಳನ್ನು ದೃಢೀಕರಿಸಬೇಕು” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಗತಿಪರ ಚಿಂತಕ ಶಿವಣ್ಣ, “ಅಂಬೇಡ್ಕರ್‌ ಕೊಟ್ಟ ಸಂವಿಧಾನ ಉಳಿಯಬೇಕು. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಸ್ವಾಮೀಜಿ ಬಂಧನಕ್ಕೆ ಒಳಗಾಗಬೇಕು. ಇದಕ್ಕಾಗಿ ದಲಿತ ಶೋಷಿತರ ಬಳಗದಿಂದ ಹೋರಾಟ ರೂಪಿಸುತ್ತಿದ್ದೇವೆ” ಎಂದು ಸೂಚನೆ ನೀಡಿದ್ದಾರೆ.

ಅಟ್ರಾಸಿಟಿ ಪ್ರಕರಣ ದಾಖಲಿಸಲು ಆಗ್ರಹ

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪದಡಿಯಲ್ಲಿ ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಡಾ. ಶಿವರಾತ್ರಿ ಮುರುಘಾ ಶರಣರ ವಿರುದ್ಧ ಕೇವಲ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆದರೆ ಇವರ ವಿರುದ್ಧ ಎಸ್‌.ಸಿ., ಎಸ್‌.ಟಿ. ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲೂ ಪ್ರಕರಣ ದಾಖಲಿಸಬೇಕು ಎಂದು ದಲಿತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಮುರುಘಾ ಶರಣರು ಇಂದು ಭಕ್ತರನ್ನು ಉದ್ದೇಶಿಸಿ ಮಠದ ಆವರಣದಲ್ಲಿ ಮಾತನಾಡಿದ್ದಾರೆ. “ಈ ನೆಲದ ಕಾನೂನು ಎಲ್ಲರಿಗೂ ಒಂದೇ. ಅದನ್ನು ಗೌರವಿಸುತ್ತೇನೆ. ಪಲಾಯನವಾದ ಮಾಡುವುದಿಲ್ಲ. ಎಲ್ಲ ತನಿಖೆಗೂ ಸಹಕಾರ ಕೊಡುತ್ತೇವೆ. ಕಾನೂನಿಗೆ ಗೌರವ ಕೊಡುತ್ತೇವೆ. ಊಹಾಪೋಹಗಳಿಗೆ ಅವಕಾಶ ಇಲ್ಲ” ಎಂದಿದ್ದಾರೆ.

“ಶ್ರೀ ಮಠದ ಅಸಂಖ್ಯಾತ ಭಕ್ತರು, ಅಭಿಮಾನಿಗಳು ಊಹಾಪೋಹಗಳನ್ನು, ಗಾಳಿ ಸುದ್ದಿಗಳನ್ನು ನಂಬಬಾರದು. ಈ ನೆಲದ ಕಾನೂನಿಗೆ ಬೆಲೆ ಕೊಡಬೇಕು. ಒಂದು ಕಾಲದಲ್ಲಿ ಮುರುಘಾ ಮಠ ಚಲಿಸುವ ನ್ಯಾಯಾಲಯವಾಗಿತ್ತು” ಎಂದರು.

“ವಿದ್ಯಾರ್ಥಿಗಳನ್ನು ಒಳಗೊಂಡಂತೆ ಎಲ್ಲ ಜನಾಂಗದವರನ್ನು, ಎಲ್ಲಾ ವರ್ಗದವರನ್ನು, ಪ್ರೀತಿಯಿಂದ ಅಕ್ಕರೆಯಿಂದ ನೋಡಿಕೊಂಡಿದ್ದೇವೆ. ಒಂದು ಅಹಿತಕರವಾದ ಬೆಳವಣಿಗೆಯಾಗಿದೆ. ಅದರಿಂದ ಹೊರಗಡೆ ಬಂದೇ ಬರುತ್ತೇನೆ. ಎಲ್ಲರಿಗೆ ಶುಭವಾಗಲಿ” ಎಂದು ಆಶಿಸಿದರು.

“ಪ್ರವಾಹೋಪಾದಿಯಲ್ಲಿ ಜನರು ಮಠಕ್ಕೆ ಬರುತ್ತಾರೆ. ಮೊನ್ನೆಯಿಂದಲೂ ಲಕ್ಷೋಪಲಕ್ಷ ಜನರು ಮಠಕ್ಕೆ ಬರುತ್ತಿರುವುದು ಅತೀವ ಧೈರ್ಯವನ್ನು ಉಂಟು ಮಾಡಿದೆ. ಕಾನೂನುನನ್ನು ಗೌರವಿಸೋಣ. ಇಂತಹದೊಂದು ಅಭಿಮಾನದ ಚಿಲುಮೆ ಚುಮ್ಮಲು ಕಾರಣವಾದವರಿಗೂ ಧನ್ಯವಾದಗಳನ್ನು ಹೇಳುತ್ತೇವೆ. ಅಭಿಮಾನವನ್ನು ಜಾಗೃತಿಗೊಳಿಸಿದ್ದೇವೆ” ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಸಿದ್ದರಾಮಯ್ಯ ಮತ್ತು ರಂಭಾಪುರಿ ಪೀಠಾಧೀಶ್ವರರ ಭೇಟಿ; ಮತ್ತೆ ಭುಗಿಲೆದ್ದ ಲಿಂಗಾಯತ ಧರ್ಮ ಚರ್ಚೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು ಮತ್ತು ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಕಾಂಗ್ರೆಸ್ ಶುಕ್ರವಾರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...