Homeಮುಖಪುಟಬೌದ್ಧಧರ್ಮ ಅಪಾಯಕಾರಿಯೆ?

ಬೌದ್ಧಧರ್ಮ ಅಪಾಯಕಾರಿಯೆ?

- Advertisement -
- Advertisement -

ಇತ್ತೀಚೆಗೆ ಕರ್ನಾಟಕ ಸರ್ಕಾರದ ಮಂತ್ರಿಯೊಬ್ಬರು ಬ್ರಾಹ್ಮಣರ ಸಂಘದಲ್ಲಿ ಮಾತನಾಡುತ್ತಾ ಅವರನ್ನು ಮೆಚ್ಚಿಸುವ ಭರದಲ್ಲಿ ಬೌದ್ಧಧರ್ಮದ ಅಪಾಯದಿಂದ ಭಾರತವನ್ನು ರಕ್ಷಿಸಿದ ಕೀರ್ತಿ ಶಂಕರಾಚಾರ್ಯರಿಗೆ ಸಲ್ಲುತ್ತದೆ ಎಂಬ ಹೇಳಿಕೆ ನೀಡಿದ್ದಾರೆ. ವರದಿ ತಿರುಚಿದ್ದಾರೆಂದು ನಂತರ ಅಲ್ಲಗಳೆದಿದ್ದಾರೆ. ಅದೇನೇ ಇರಲಿ, ಮೊದಲಿಗೆ ಸ್ಪಷ್ಟನೆ ನೀಡಬೇಕಾಗಿರುವುದೇನೆಂದರೆ ಈ ಜಾತಿಗ್ರಸ್ತ ದೇಶದಲ್ಲಿ ಸಾರ್ವಜನಿಕ ಅಭಿಪ್ರಾಯ ಎಂಬುದನ್ನು ರೂಪಿಸಲು ಸಾಧ್ಯವಿಲ್ಲ. ನಮ್ಮ ಸಮಾಜ ಇಡಿಯಾಗಿ ಒಂದೊಂದು ಜಾತಿಯವರಿಗೆ ಒಂದೊಂದು ರೀತಿ ಕಾಣಿಸುತ್ತಿದ್ದರೆ ಆಶ್ಚರ್ಯವಿಲ್ಲ. ಮಾನ್ಯ ಮಂತ್ರಿಗಳು ಫ್ಯೂಡಲ್ ಜಾತಿಯ ಹಿನ್ನೆಲೆಯಿಂದ ಬಂದವರು, ಜಾತಿಪದ್ಧತಿಯ ಅನುಕೂಲಸ್ಥರು ಎಂಬುದನ್ನು ಹೇಳಬೇಕಾಗಿಲ್ಲ. ಇವರ ಗ್ರಹಿಕೆ ಆಶ್ಚರ್ಯ ತರುವುದಿಲ್ಲವಾದರೂ ಇವರು ತಮ್ಮ ಅಜ್ಞಾನವನ್ನು ಸಾರ್ವಜನಿಕವಾಗಿ ತೋರ್ಪಡಿಸಿದರಲ್ಲಾ ಎಂಬುದು ಖೇದವೆನಿಸುತ್ತದೆ. ಸತ್ಯವಾದ ಮಾತೇನೆಂದರೆ ಬೌದ್ಧಧರ್ಮವನ್ನು ಈ ದೇಶದಿಂದ ಓಡಿಸಿದ ಮೇಲೆ ಭಾರತ ಅಪಾಯಕ್ಕೆ ಸಿಕ್ಕಿದೆ ಎಂಬುದು. ಜಗತ್ತೇ ಆದರಿಸುವ ಬುದ್ಧನನ್ನು ಮತ್ತು ಬೌದ್ಧಧರ್ಮವನ್ನು ಹೀಗೆ ಸಾರ್ವಜನಿಕವಾಗಿ ಹೀಯಾಳಿಸುವುದು ಮಂತ್ರಿಯಾದವರ ಘನತೆಗೆ ಶೋಭೆ ತರುವಂಥದ್ದಲ್ಲ.

ಜಾತಿ ಪ್ರತಿಯೊಬ್ಬರ ಬದುಕನ್ನು ಇಡಿಯಾಗಿ ಆವರಿಸಿಕೊಂಡಿದೆ. ಆದರೆ ಹೇಳಿಕೊಳ್ಳಲು ಕೆಲವರು ಹಿಂಜರಿಯುವ, ಕೆಲವರು ನಾಚಿಕೆ ಪಟ್ಟುಕೊಳ್ಳುವ, ಕೆಲವರು ಜಂಬದಿಂದ ಪ್ರದರ್ಶನ ಮಾಡಿಕೊಳ್ಳುವ ಈ ಜಾತಿ ಧಾರ್ಮಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಸಮಾಜದ ಮೇಲೆ ಪ್ರಭಾವವನ್ನು ಬೀರುತ್ತಿರುವುದು ಎಲ್ಲರಿಗೂ ತಿಳಿದಿದೆ. ಮನುಷ್ಯರ ನಡುವೆ ಮೇಲುಕೀಳನ್ನು ಹುಟ್ಟುಹಾಕಿರುವುದು ಹಿಂದೂ ಧರ್ಮದ ಗುಣಾತ್ಮಕ ಅಂಶವೇನಲ್ಲ, ಆದ್ದರಿಂದ ಸಾರ್ವಜನಿಕವಾಗಿ ಅದನ್ನು ಚರ್ಚೆ ಮಾಡುವುದಿಲ್ಲ. ಈ ಪಿರಮಿಡ್ ಆಕೃತಿಯ ಜಾತಿವ್ಯವಸ್ಥೆ ಒಟ್ಟಾರೆ ಸಮಾಜಕ್ಕೆ ವಿನಾಶಕಾರಿಯಾದರೂ ಮೇಲಿನ ಜಾತಿಯವರಲ್ಲಿ ಒಂದು ಗುಪ್ತ ಆಕರ್ಷಣೆಯಾಗಿ ಉಳಿದುಕೊಂಡಿದೆ. ಯಾಕೆಂದರೆ ಆಸ್ತಿ, ಅಂತಸ್ತು, ಗೌರವ, ಅಧಿಕಾರ, ಹಣ ಮೇಲಿನ ತುದಿಯ ಅಲ್ಪಸಂಖ್ಯಾತ ವರ್ಗದ ಬಳಿಯೆ ಉಳಿಯುತ್ತದೆ. ಆದುದರಿಂದ ಆ ವರ್ಗದ ಜನ ಅವೇ ಸಂಪನ್ಮೂಲವನ್ನು ಬಳಸಿ ಜಾತಿವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದ್ದಾರೆ.

ಭಾರತದ ಚರಿತ್ರೆ ಪ್ರಾರಂಭವಾಗುವುದೇ ಬುದ್ಧನೊಂದಿಗೆ. ಅದರ ಹಿಂದಿನ
ಚರಿತ್ರೆಯೇನಾದರೂ ದೊರಕಿದ್ದರೆ ಅದೂ ಬೌದ್ಧ ಸಾಹಿತ್ಯದ ಮೂಲಕವೆ. ಬಾಬಾಸಾಹೇಬರಿಗೆ
ಮೊದಲು ವೇದಗಳನ್ನು ಅಧ್ಯಯನ ಮಾಡಬೇಕೆನ್ನಿಸಿತು. ಮೂಲದಲ್ಲಿಯೇ ಓದಬೇಕೆಂದು ಸಂಸ್ಕೃತ ಕಲಿಯಲು ಬಯಸಿದರು. ಆದರೆ ಭಾರತದಲ್ಲಿ ಯಾರೂ ಕಲಿಸಲು ಮುಂದೆ ಬರಲಿಲ್ಲ. ಆದ್ದರಿಂದ ಜರ್ಮನಿಯ ಬಾನ್ ನಗರಕ್ಕೆ ಹೋಗಿ ಸಂಸ್ಕೃತವನ್ನು ಕಲಿತರು. ತ್ರಿಪಿಟಕಗಳನ್ನು
ಅರ್ಥಮಾಡಿಕೊಳ್ಳಲು ಪಾಲಿಯನ್ನು ಕಲಿತರು. ಅಷ್ಟೇ ಅಲ್ಲ. ಪಾಲಿ ಭಾಷೆಗೆ ಒಂದು ನಿಘಂಟನ್ನು ರಚಿಸಿದರು. ಅವರ ಈ ಸಾಹಸವು ಬೆರಗು ಮೂಡಿಸುತ್ತದೆ. ಅವರು ಇಷ್ಟೆಲ್ಲ ಮಾಡಿದ್ದು ಜಾತಿಪದ್ಧತಿಯೆಂಬ ಅನಿಷ್ಟ ಸಾಮಾಜಿಕ ರಚನೆಯ ಹಿನ್ನೆಲೆಯನ್ನು ಅರಿಯುವುದು ಮತ್ತು ಅಸ್ಪೃಶ್ಯತೆಯೆಂಬ ಮಾನವ ಕಳಂಕವನ್ನು ತೊಡೆಯುವುದೇ ಆಗಿತ್ತು.

ಬೌದ್ಧಧರ್ಮವನ್ನು ಬಾಬಾಸಾಹೇಬರು ಒಂದು ಮಹಾಕ್ರಾಂತಿಯೆಂದು ಬಣ್ಣಿಸಿದ್ದಾರೆ. ಯಾಕೆಂದರೆ ಬುದ್ಧ ಪೂರ್ವ ಸಮಾಜವು ಒಂದು ಅನೈತಿಕತೆಯ, ಅಸಮಾನತೆಯಿಂದ ಕೂಡಿದ ಭ್ರಷ್ಟ ಸಮಾಜವಾಗಿತ್ತು. ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಅವನತಿಯ ಹಾದಿ ಹಿಡಿದಿತ್ತು. ಅಂದರೆ ಆರ್ಯ ಸಮುದಾಯವು ವಿಷಯಲಂಪಟತೆಯಲ್ಲಿ ಮುಳುಗಿತ್ತು. ಮದ್ಯಪಾನವು ರಾಜ ಮತ್ತು ಪುರುಷ ಪ್ರಜೆಗಳಲ್ಲಿ ಅಷ್ಟೆ ಅಲ್ಲ, ಸ್ತ್ರೀಯರೂ ವ್ಯಸನಿಗಳಾಗಿದ್ದರು. ದ್ಯೂತವು ಮತ್ತೊಂದು ಚಟವಾಗಿ ಸಮಾಜವನ್ನು ಹಾಳುಗೆಡವಿತ್ತು.

ಈಗ ಹಿಂದೂ ಎನ್ನಿಸಿಕೊಳ್ಳುವ ವೈದಿಕ ಧರ್ಮ ಅಂದು ಹೇಗಿತ್ತು ಎಂಬುದನ್ನು ಡಾ.ಬಿ.ಆರ್ ಅಂಬೇಡ್ಕರ್ ಅವರು ತಮ್ಮ ವಿಸ್ತಾರವಾದ, ಆಳವಾದ ಅಧ್ಯಯನ ಮತ್ತು ಸಂಶೋಧನೆಯ ಮೂಲಕ ನಿರೂಪಿಸಿದ್ದಾರೆ. ಅದರ ಝಲಕುಗಳನ್ನು ಒಮ್ಮೆ ನೋಡಿ ಬರೋಣ.

ದ್ಯೂತ

ವಿರಾಟರಾಜನಿಗೆ ಕಂಕ ಎಂಬ ನಿಷ್ಣಾತ ಜೂಜುಗಾರನಿದ್ದ. ಅದು ವಿನೋದದ ಆಟವಾಗಿರಲಿಲ್ಲ. ದೊಡ್ಡ ಪಣಗಳನ್ನು ಹಚ್ಚಿ ಆಡುತ್ತಿದ್ದರು. ಬಂಧುಗಳನ್ನು, ಗುಲಾಮರನ್ನು, ಸೇವಕರನ್ನು ಪಣಕ್ಕೆ ಒಡ್ಡುತ್ತಿದ್ದರು. ನಳ ಮಹಾರಾಜನು ಪುಷ್ಕರನೊಡನೆ ದ್ಯೂತವಾಡಿ ಎಲ್ಲವನ್ನೂ ಕಳೆದುಕೊಂಡನು. ಹೆಂಡತಿಯೊಡನೆ ಕಾಡಿಗೆ ಹೋಗಿ ಭಿಕ್ಷುಕನಂತೆ ಜೀವಿಸಿದನು. ಪಾಂಡವರಲ್ಲಿ ಹಿರಿಯನಾದ ಧರ್ಮರಾಯನು ತನೆಲ್ಲ ಸರ್ವಸ್ವವನ್ನು ಕಳೆದುಕೊಂಡಮೇಲೆ ಸಹೋದರರನ್ನೂ ಮತ್ತು ದ್ರೌಪದಿಯನ್ನು ಕಳೆದುಕೊಂಡ ಕಥೆ ಮಹಾಭಾರತದಲ್ಲಿದೆ. ದ್ಯೂತವು ಅವರಿಗೆ ಗೌರವದ ಪ್ರಶ್ನೆಯಾಗಿತ್ತಂತೆ. ಅದನ್ನು ನಿರಾಕರಿಸಲಾಗುತ್ತಿರಲಿಲ್ಲ. ಕೌಟಿಲ್ಯನ ಕಾಲದಲ್ಲಿ ಸಾಮಾನ್ಯರು ಕೂಡ ದ್ಯೂತ ವ್ಯಸನಿಗಳಾಗಿದ್ದರು. ರಾಜನಿಂದ ಪರವಾನಗಿ ಪಡೆದ ದ್ಯೂತವಾಸಗಳಿದ್ದವು.

ಮದ್ಯಪಾನ

ಜನಸಾಮಾನ್ಯರಲ್ಲಿದ್ದ ಇನ್ನೊಂದು ದುಷ್ಟಚಟವೆಂದರೆ ಮದ್ಯಪಾನ. ಸೋಮ ಮತ್ತು ಸುರಾ ಎಂಬ ಎರಡು ಪ್ರಕಾರದ ಮದ್ಯಗಳಿದ್ದವು. ಸೋಮವು ಯಜ್ಞಗಳಲ್ಲಿ ಬಳಸುವ ಮದ್ಯ. ಮೊದಲು ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರಿಗೆ ಸೋಮಪಾನ ಮಾಡಲು ಅನುಮತಿಯಿತ್ತು. ಶೂದ್ರರು ಅದರ ರುಚಿ ನೋಡುವಂತಿರಲಿಲ್ಲ. ಸುರಾಪಾನ ಎಲ್ಲರಿಗೂ ಮುಕ್ತವಾಗಿತ್ತು. ಅಸುರರ ಗುರುವಾದ ಶುಕ್ರಾಚಾರ್ಯನು ಎಷ್ಟು ಅತಿಯಾಗಿ ಕುಡಿದಿದ್ದನೆಂದರೆ ಅವನು ಅಸುರರನ್ನು ಬದುಕಿಸಲು ತನಗೊಬ್ಬನಿಗೆ ಮಾತ್ರ ತಿಳಿದಿದ್ದ ಒಂದೇ ಒಂದು ಮಂತ್ರವನ್ನು ದೇವರುಗಳ ಗುರುವಾದ ಬೃಹಸ್ಪತಿಯ ಮಗ ಕಚನಿಗೆ ಕುಡಿದ ಅಮಲಿನಲ್ಲಿ ಕೊಟ್ಟುಬಿಟ್ಟನು. ಕೃಷ್ಣ ಮತ್ತು ಅರ್ಜುನ ಎಚ್ಚರ ತಪ್ಪಿ ಕುಡಿದ ಒಂದು ಪ್ರಸಂಗ ಮಹಾಭಾರತದಲ್ಲಿದೆ. ಆರ್ಯ ಸ್ತ್ರೀಯರು ಮದ್ಯವ್ಯಸನಿಗಳಾಗಿದ್ದರು. ವಿರಾಟ ರಾಜನ ಹೆಂಡತಿ ಸುದೇಷ್ಣೆಯು ಒಮ್ಮೆ ಮದ್ಯವಿಲ್ಲದೆ ಹತಾಶಳಾಗಿ ತನ್ನ ಸೇವಕಿ ಸೈರಂದ್ರಿಯನ್ನು ಕೀಚಕನ ಅರಮನೆಗೆ ಕಳಿಸುತ್ತಾಳೆ.

ವಿಷಯ ಲಂಪಟತೆ

ಆರ್ಯ ಸಮಾಜದ ಲೈಂಗಿಕ ಅನೈತಿಕತೆಯು ಆಘಾತ ಮೂಡಿಸುವಂತಿದೆ. ವೈವಾಹಿಕ ಸಂಬಂಧಗಳಲ್ಲಿ ಪಾವಿತ್ರ್ಯವೆಂಬುದೇನು ಇರಲಿಲ್ಲ. ಬ್ರಹ್ಮನಿಗೆ ಮೂವರು ಗಂಡು ಮಕ್ಕಳು ಒಬ್ಬ ಮಗಳು ಇದ್ದರು. ಮೊದಲನೆಯ ಮಗ ದಕ್ಷ ಸೋದರಿಯನ್ನೆ ಮದುವೆಯಾದ. ಮುಂದೆ ಹುಟ್ಟುವ ಸೋದರಸೋದರಿಯರ ಮಕ್ಕಳು ಅವರೊಳಗೆ ಮದುವೆಯಾಗುತ್ತಾರೆ! ಋಗ್ವೇದದಲ್ಲಿ ಬರುವ ಯಮ ಯಮಿಯರ ಉಪಾಖ್ಯಾನ ಅನೈತಿಕತೆಯ ತುತ್ತತುದಿಯನ್ನು ಮುಟ್ಟುವಂತಿದೆ. ಯಮಿ ಕಾಮೋನ್ಮತ್ತಳಾಗಿ ತನ್ನ ಸಹೋದರನನ್ನೆ ಸಮಾಗಮಕ್ಕೆ ಆಹ್ವಾನಿಸುತ್ತಾಳೆ. ನಿರಾಕರಿಸಿದಾಗ ಕೋಪಗೊಳ್ಳುತ್ತಾಳೆ.

ಅತ್ಯಾಚಾರ

ದೀರ್ಘತಮಸ್ ಎಂಬ ಋಷಿಯ ಕಥೆ ಇನ್ನೂ ಭಯಾನಕವಾಗಿದೆ. ಮಮತೆ ಮತ್ತು ಉಚತ್ಯ ದಂಪತಿಗಳು ಸುಖವಾಗಿ ಸಂಸಾರ ಮಾಡಿಕೊಂಡಿದ್ದರು. ಮಮತೆ ಗರ್ಭಿಣಿಯಾದಳು. ಉಚತ್ಯನ ತಮ್ಮ ಬೃಹಸ್ಪತಿಗೆ, ಗರ್ಭಿಣಿಯಾದ ಅತ್ತಿಗೆ ಮಮತೆಯ ಮೇಲೆ ಆಸೆಯಾಗುತ್ತದೆ. ಅವಳ ಮೇಲೆ ಅತ್ಯಾಚಾರವೆಸಗುತ್ತಾನೆ. ಗರ್ಭದ ಒಳಗಿರುವ ಮಗು ಅವನ ವೀರ್ಯವನ್ನು ತಡೆಯುತ್ತದೆ. ಅದಕ್ಕೆ ಬೃಹಸ್ಪತಿ ಕೋಪಗೊಂಡು ನೀನು ದೀರ್ಘಕಾಲ ಕುರುಡನಾಗು ಎಂದು ಶಾಪ ಕೊಡುತ್ತಾನೆ. ಎಂಥ ವಿಚಿತ್ರ! ಶಾಪ ಫಲಿಸುತ್ತದೆ ಕೂಡ. ಹುಟ್ಟಿದ ಮಗು ಕುರುಡಾಗಿರುತ್ತದೆ. ಅವನು ದೀರ್ಘತಮಸ್ ಎಂಬ ಹೆಸರು ಪಡೆದುಕೊಳ್ಳುತ್ತಾನೆ. ಇದರ ಬಗ್ಗೆ ನಾನು ಬೇರೊಂದೆಡೆಯಲ್ಲಿ ಬರೆದಿದ್ದೇನೆ.

ಮುಕ್ತ ಲೈಂಗಿಕತೆ

ತಂದೆಯು ಮಗಳನ್ನು ವಿವಾಹವಾಗಬಹುದಿತ್ತು. ವಸಿಷ್ಠನು ತನ್ನ ಮಗಳಾದ ಶತ್ರುಪಳನ್ನು, ಮನು ತನ್ನ ಮಗಳಾದ ಇಳಾಳನ್ನು, ಹಾಗೆಯೆ ಜಹ್ನುವು ಜಾಹ್ನವಿಯನ್ನು ಮದುವೆಯಾದರು. ಅಸಾಮಾನ್ಯ ರೀತಿಯ ಬಹುಪತಿತ್ವವೂ ಇತ್ತು. ಅಜ್ಜನು ಮೊಮ್ಮಗಳನ್ನು ಮದುವೆಯಾದ ಉದಾಹರಣೆಗಳು ಇದ್ದವು. ದಕ್ಷನು ತನ್ನ ಮಗಳನ್ನು ತಂದೆಯಾದ ಬ್ರಹ್ಮನಿಗೆ ಮದುವೆ ಮಾಡಿಕೊಟ್ಟನು. ಆ ಮದುವೆಯಿಂದ ಪ್ರಸಿದ್ಧನಾದ ನಾರದನು ಹುಟ್ಟಿದನು.

ಆರ್ಯರಿಗೆ ಎಲ್ಲೆಂದರಲ್ಲಿ ಎಲ್ಲರೆದುರು ಸಮಾಗಮಿಸುವುದರಲ್ಲಿ ಸಂಕೋಚವಿರಲಿಲ್ಲ. ವಾಮದೇವ್ಯ ಎಂಬ ಧಾರ್ಮಿಕ ಕ್ರಿಯಾವಿಧಿಯ ಪ್ರಕಾರ ಯಜ್ಞಭೂಮಿಯಲ್ಲಿ ಯಾವುದೇ ಸ್ತ್ರೀಯು ಸಂಭೋಗವನ್ನು ಬಯಸಿದರೆ ಋಷಿಯು ಯಜ್ಞಭೂಮಿಯಲ್ಲಿ ಎಲ್ಲರೆದುರು ಸಮಾಗಮಿಸುತ್ತಿದ್ದನು. ಅಂಥ ಪದ್ಧತಿಯು ಸರ್ವೇಸಾಧಾರಣವಾಗಿತ್ತು.

ಆರ್ಯರಲ್ಲಿ ವಿಚಿತ್ರ ಪದ್ಧತಿಯೊಂದಿತ್ತು. ಅವರು ತಮ್ಮ ಸ್ತ್ರೀಯರನ್ನು ಕೆಲಕಾಲದ ಮಟ್ಟಿಗೆ ಇತರರಿಗೆ ಉಪಯೋಗಕ್ಕಾಗಿ ಅಂದರೆ ಬಾಡಿಗೆಗೆ ಬಿಟ್ಟುಕೊಡುತ್ತಿದ್ದರು. ಯಯಾತಿ ರಾಜನು ತನ್ನ ಮಗಳು ಮಾಧವಿಯನ್ನು ಗುರು ಗಾಲವನಿಗೆ ಕಾಣಿಕೆಯಾಗಿ ಕೊಟ್ಟನು. ಗಾಲವನು ಮಾಧವಿಯನ್ನು ಒಂದೊಂದು ಅವಧಿಗಾಗಿ ಮೂವರು ರಾಜರಿಗೆ ಎರವಲು ಕೊಟ್ಟನು. ನಂತರ ವಿಶ್ವಾಮಿತ್ರನಿಗೆ ಅವಳನ್ನು ಮದುವೆ ಮಾಡಿಕೊಟ್ಟನು. ಅವಳು ತನಗೆ ಒಂದು ಗಂಡುಮಗು ಹುಟ್ಟುವತನಕ ಅವನೊಡನೆ ಇದ್ದಳು. ತದನಂತರ ಗಾಲವನು ಮಾಧವಿಯನ್ನು ಯಯಾತಿಗೆ ಹಿಂದಿರುಗಿಸಿದನು. ಸ್ತ್ರೀಯರನ್ನು ಇಷ್ಟು ನಿಕೃಷ್ಟವಾಗಿ ನಡೆಸಿಕೊಂಡ ಧರ್ಮ ಬೇರೊಂದಿರಲಾರದು.

ಇನ್ನೊಂದು ಪದ್ಧತಿಯಿತ್ತು. ಅದೇನೆಂದರೆ ಆರ್ಯರಲ್ಲಿ ಶ್ರೇಷ್ಠರೆನಿಸಿಕೊಳ್ಳುವ ಗಂಡಸರಿಂದ
ಹೆಂಗಸು ಸಂತಾನ ಪಡೆಯಲು ಅನುಮತಿ ಕೊಡುವುದು. ಕುಟುಂಬವನ್ನು ಬೆಳೆಸುವುದೆಂದರೆ ಅವರು ದನಗಳ ತಳಿಯನ್ನು ಬೆಳೆಸಿದಂತೆ ಎಂದು ತಿಳಿದಿದ್ದರು. ಆರ್ಯರಲ್ಲಿ ದೇವ ಅನ್ನುವ ಒಂದು ವರ್ಗವಿತ್ತು. ಅವರು ಇಷ್ಟಪಡುವ ಯಾರನ್ನು ಬೇಕಾದರೂ ಸಂಭೋಗಿಸಬಹುದಿತ್ತು. ಉತ್ತಮ ಸಂತಾನ ಪಡೆಯುವ ಉದ್ದೇಶದಿಂದ ಆರ್ಯರು ತಮ್ಮ ಸ್ತ್ರೀಯರನ್ನು ಅವರಲ್ಲಿಗೆ ಕಳಿಸುತ್ತಿದ್ದರು. ಆರ್ಯ ಸ್ತ್ರೀಯರ ಕನ್ಯತ್ವ ಹರಣವು ತಮಗಾಗಿಯೆ ಕಾಯ್ದಿರಿಸಿದ ಹಕ್ಕೆಂದು ದೇವವರ್ಗವು ತಿಳಿದಿತ್ತು. ಆರ್ಯ ಸ್ತ್ರೀಯರು ಕನ್ಯತ್ವ ಪಾಲಿಸಬೇಕೆಂಬ ನಿಯಮವೇನು ಇರಲಿಲ್ಲ. ತಮಗೆ ಇಷ್ಟ ಬಂದವರೊಂದಿಗೆ ಕೂಡಿ ಮಕ್ಕಳನ್ನು ಪಡೆಯುವ ಸ್ವಾತಂತ್ರ್ಯ ಅವರಿಗಿತ್ತು. ಕುಂತಿ, ಮತ್ಸ್ಯಗಂಧಿ ಅಂತಹ ಉದಾಹರಣೆಗಳು. ಆರ್ಯರಲ್ಲಿ ಪಶುಗಮನವೂ ಪ್ರಚಲಿತವಿತ್ತು. ದಮ ಎಂಬ ಋಷಿಯು ಹೆಣ್ಣು ಜಿಂಕೆಯೊಡನೆ ಲೈಂಗಿಕ ಸಂಪರ್ಕಹೊಂದಿದ ಕಥೆ ಜನಜನಿತವಾಗಿದೆ. ಸೂರ್ಯನು ಹೆಣ್ಣು ಕುದುರೆಯೊಡನೆ ಸಂಪರ್ಕ ಹೊಂದಿದ ಕಥೆಯಿದೆ.

ಉಪನಿಷತ್ತುಗಳು ಮತ್ತು ಆತ್ಮದ ಬಗ್ಗೆ ವಿವರಣೆ

ಹಿಂದೂ ಧರ್ಮದ ಅಂತಃಸತ್ವವಾಗಿ ಈಗ ಉಪನಿಷತ್ತುಗಳೇ ಹೆಚ್ಚು ಬಳಕೆಯಾಗುತ್ತಿವೆ. ವರ್ಣವ್ಯವಸ್ಥೆಯಲ್ಲಿನ ಮೇಲು ಕೀಳು ಭಾವನೆಯನ್ನು ಸಮರ್ಥಿಸಲು ಮತ್ತು ತೀವ್ರಗೊಳಿಸಲು ಉಪನಿಷತ್ತುಗಳನ್ನು ಉಪಯೋಗಿಸಲಾಯಿತು. ಆತ್ಮ ಮತ್ತು ಪರಮಾತ್ಮ ಅನ್ನುವ ಪದಗಳನ್ನು ಬಳಸಿ ಮಿಕ್ಕೆಲ್ಲವನ್ನೂ ಅವಿದ್ಯೆ ಎಂದು ಸಾರಲಾಯಿತು. ಬುದ್ಧ ಆತ್ಮದ ಅಸ್ತಿತ್ವವನ್ನು ನಿರಾಕರಿಸಲಿಕ್ಕೆ ಇದೂ ಒಂದು ಕಾರಣ ಅಂತ ನಾನು ಅಂದುಕೊಂಡಿದ್ದೇನೆ. ಮುಂದೆ ಬಂದ ಭಗವದ್ಗೀತೆಯೂ ಇದೇ ಕೆಲಸವನ್ನು ಮಾಡಿತು. ಆದ್ದರಿಂದ ಈ ಬ್ರಹ್ಮವಿದ್ಯೆ ಅನ್ನೋದು ಹಿಂದೂಗಳನ್ನು ಭ್ರಮೆಯಲ್ಲಿ ಮುಳುಗಿಸಿದೆ. ಉಪನಿಷತ್ತುಗಳ ಬಗೆಗೆ ಅಂಬೇಡ್ಕರ್ ಅವರ ವ್ಯಾಖ್ಯಾನ ಬಹಳ ಮುಖ್ಯ ಅನ್ನಿಸ್ತದೆ ನನಗೆ: “ಹಿಂದೂಗಳ ನೈತಿಕ ಅಥವಾ ಸಾಮಾಜಿಕ ವ್ಯವಸ್ಥೆಯ ಮೇಲೆ ಕಿಂಚಿತ್ತೂ ಪರಿಣಾಮ ಬೀರದ, ನಿಷ್ಕ್ರಿಯವಾದ ಅಪ್ರಯೋಜಕ ಊಹೆಗಳ ಒಂದು ಮೊತ್ತ ಎಂದು ನಿಸ್ಸಂದೇಹವಾಗಿ ಉಪನಿಷತ್ತುಗಳನ್ನು ಕರೆಯಬಹುದು”. ಆದರೆ ಹಿಂದೂ ಧರ್ಮ ಸುಳ್ಳನ್ನೇ ಸತ್ಯವೆಂದು ಪ್ರತಿಪಾದಿಸುತ್ತಾ, ಪ್ರೀತಿಸುತ್ತಾ, ಆ ಸುಳ್ಳಿನ ಸಿಕ್ಕುಗಳಿಂದ ಬಿಡಿಸಿಕೊಳ್ಳಲಾಗದೆ ಒದ್ದಾಡುತ್ತಿದೆ.

ಪರಂಪರೆಯ ಕೊಳಕನ್ನು ತೊಳೆದು ಶುಚಿಗೊಳಿಸಿದ ಬುದ್ಧ

ಈ ಮೇಲೆ ಹೇಳಿದ ಎಲ್ಲ ಕ್ಲೇಶಗಳೂ ದುಃಖಕ್ಕೆ ಕಾರಣವಾದವು. ಮನುಷ್ಯನನ್ನು ದುಃಖದಿಂದ ಬಿಡುಗಡೆಗೊಳಿಸಲು ಬುದ್ಧ ನೈತಿಕ ನೆಲೆಗಟ್ಟಿನ ಮೇಲೆ ಒಂದು ದರ್ಶನವನ್ನು ರೂಪಿಸಿದ. ಅದು ಮನುಷ್ಯ ಕೇಂದ್ರಿತವಾದದ್ದು. ವರ್ತಮಾನಕ್ಕೆ, ಇಂದಿನ ಬದುಕಿಗೆ ಸಂಬಂಧಿಸಿದ್ದು. ಅನುಭವಕ್ಕೆ ನಿಲುಕುವಂಥದ್ದು. ಎಲ್ಲ ಪ್ರವಾದಿ/ದೇವರುಗಳು ನನ್ನನ್ನು ನಂಬಿ ಎಂದು ಹೇಳಿದರೆ, ’ನಾನು ಹೇಳಿದೆನೆಂದ ಮಾತ್ರಕ್ಕೆ ನಂಬಬೇಡಿ’ ಎಂದು ಹೇಳಿದ ಮೊದಲ ದಾರ್ಶನಿಕ ಪ್ರವಾದಿ ಬುದ್ಧ. ಜಾತಿವ್ಯವಸ್ಥೆಯನ್ನು ನಿರಾಕರಿಸಿದ. ಅದರಿಂದ ಉತ್ಪನ್ನವಾದ ಅಸಮಾನತೆ ಮತ್ತು ಅಸ್ಪೃಶ್ಯತೆಗಳನ್ನು ತೊಡೆದುಹಾಕಿದ. ಬುದ್ಧರ ಕಾಲದಲ್ಲಿ ಮೇಲಿನ ಮೂರು ವರ್ಣದ ಜನರೇ ತಂಡೋಪತಂಡವಾಗಿ ಬಂದು ಸಂಘವನ್ನು ಸೇರುತ್ತಿದ್ದರು. ಇದರಿಂದ ಕುಪಿತರಾದ ಮೂಲಭೂತವಾದಿಗಳು ಸಂಘದೊಳಗೆ ನುಸುಳಿ ಧಮ್ಮವನ್ನು ಚ್ಯುತಿಗೊಳಿಸಲು ಯತ್ನಿಸಿದರು. ಕಾಲಾನಂತರದಲ್ಲಿ ಸೈನ್ಯದೊಳಗೂ ಅಂಥವರು ಹೊಕ್ಕು ಪಿತೂರಿ ನಡೆಸಿದರು. ಇತಿಹಾಸದಲ್ಲಿ ಎಲ್ಲವೂ ಸ್ಪಷ್ಟವಾಗಿದೆ. ಅಹಿಂಸೆಯಿಂದ ಬೌದ್ಧಧರ್ಮ ಅಳಿಯಿತು ಎಂಬ ಪಟ್ಟಭದ್ರರ ಪ್ರಚಾರ ಸುಳ್ಳು. ಹಿಂಸೆಯನ್ನು ತ್ಯಜಿಸಿದ ಮೇಲೆಯೆ ಅಶೋಕ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿ, ಬೆಳೆಸಿ ಅಖಂಡ ಭಾರತವನ್ನು ಆಳಿದ. ಬೌದ್ಧಧರ್ಮ ಹುಟ್ಟಿದ ನೆಲದಲ್ಲಿಯೇ ಅಳಿದುದನ್ನು ಕುರಿತು ಬೇರೆಯೇ ಪ್ರಬಂಧ ಬರೆಯಬೇಕಾಗುತ್ತದೆ. ಇಲ್ಲಿಗೆ ಇಷ್ಟು ಸಾಕು.

ಕೊನೆಯ ಮಾತು

ಬೌದ್ಧಧರ್ಮವನ್ನು ಉಚ್ಚಾಟಿಸಿದ ಮೇಲೆ ಪರಸ್ಪರ ಪ್ರೀತಿ, ನಂಬಿಕೆ, ವಿಶ್ವಾಸಗಳು ಬೆಳೆಯಲಾರದಂತಹ ಜಾತಿ ಸಮಾಜವನ್ನು ಸೃಷ್ಟಿ ಮಾಡಿಕೊಂಡು ನಮ್ಮ ದೇಶ ಬಳಲುತ್ತಾ ಇದೆ. ಮುಕ್ತವಾದ ಚರ್ಚೆ ಸಾಧ್ಯವಾಗೊದೇ ಇಲ್ಲ. ಅಂಬೇಡ್ಕರ್ ವರ್ಣಾಶ್ರಮ ಮತ್ತು ಜಾತಿಪದ್ಧತಿಯನ್ನು ಒಂದು ಅಸಂಬದ್ಧ ಸಿದ್ಧಾಂತ ಅಂತ ಕರೆದಿದ್ದಾರೆ. ಅಸಮಾನತೆ ದೈವನಿಯಮಿತ ಎಂದು ನಂಬಿಸಿ, ಆ ಮೂಲಕ ಹಿಂದೂಗಳ ಆಲೋಚನೆ ಮತ್ತು ಕ್ರಿಯೆಗಳನ್ನು ನಿಯಂತ್ರಿಸಲಾಗಿದೆ. ನಾವೆಲ್ಲರೂ ತಿಳಿದುಕೊಳ್ಳಬೇಕಾಗಿರುವ ಬಹಳ ಮುಖ್ಯವಾದ ಅಂಶ ಏನು ಅಂದರೆ ಸಾವಿರಾರು ವರ್ಷಗಳಿಂದ ಬಹುಸಂಖ್ಯಾತ ಶೂದ್ರವರ್ಗಕ್ಕೆ ವಿದ್ಯೆ, ಬುದ್ಧಿಯನ್ನು ನಿರಾಕರಿಸುವುದರ ಮೂಲಕ ಮಾನವ ಸಂಪನ್ಮೂಲವನ್ನು ವ್ಯರ್ಥಮಾಡಲಾಗಿದೆ ಮತ್ತು ಅದರಿಂದ ಭಾರತ ಹಿಂದುಳಿದಿದೆ ಎಂಬುದು. ಸಂವಿಧಾನೋತ್ತರ ಭಾರತಕ್ಕೆ ಇದನ್ನು ಸರಿಪಡಿಸಲು ನೂರಾರು ವರ್ಷಗಳೇ ಬೇಕಾಗಬಹುದು.

ಡಾ. ಮೂಡ್ನಾಕೂಡು ಚಿನ್ನಸ್ವಾಮಿ

ಡಾ. ಮೂಡ್ನಾಕೂಡು ಚಿನ್ನಸ್ವಾಮಿ
ಕನ್ನಡದ ಖ್ಯಾತ ಕವಿ. ದಲಿತ, ಬಂಡಾಯ ಮತ್ತು ಬೌದ್ಧ ಚಿಂತನೆಗಳನ್ನು ಸಾಹಿತ್ಯದ ಮೂಲಕ ಪ್ರಚುರಪಡಿಸಿದ ಪ್ರಮುಖರಲ್ಲಿ ಒಬ್ಬರು.


ಇದನ್ನೂ ಓದಿ: ಬುದ್ಧ ಗುರು ವಿಷ್ಣುವಿನ ಅವತಾರವಲ್ಲ, ಏಕೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...