Homeಮುಖಪುಟಲಸಿಕೆ ಸರ್ಟಿಫಿಕೇಟ್‌‌ನಲ್ಲಿ ಮೋದಿ ಭಾವಚಿತ್ರ ಸ್ವೀಕರಿಸಲಾಗದಷ್ಟು ಅಸಹಿಷ್ಣುತೆ ಇರಬಾರದು: ಕೇರಳ ಹೈಕೋರ್ಟ್

ಲಸಿಕೆ ಸರ್ಟಿಫಿಕೇಟ್‌‌ನಲ್ಲಿ ಮೋದಿ ಭಾವಚಿತ್ರ ಸ್ವೀಕರಿಸಲಾಗದಷ್ಟು ಅಸಹಿಷ್ಣುತೆ ಇರಬಾರದು: ಕೇರಳ ಹೈಕೋರ್ಟ್

- Advertisement -
- Advertisement -

ಕೋವಿಡ್‌‌ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿಯವರ ಭಾವಚಿತ್ರ ಇರುವುದನ್ನು ಸ್ವೀಕರಿಸಲು ಸಾಧ್ಯವಾಗದ ಮಟ್ಟಿಗೆ ನಾಗರಿಕರು ಅಸಹಿಷ್ಣುತೆ ಹೊಂದಬಾರದು ಎಂದು ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠವು ಶನಿವಾರ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರನ್ನೊಳಗೊಂಡ ಪೀಠವು, ಲಸಿಕೆ ಪ್ರಮಾಣಪತ್ರ ಸಂಬಂಧ ಏಕ ಸದಸ್ಯ ಪೀಠದ ನ್ಯಾಯಾಧೀಶರ ಆದೇಶದ ವಿರುದ್ಧದ ಮೇಲ್ಮನವಿಯನ್ನು ವಜಾಗೊಳಿಸಿತು. ಕೋವಿಡ್‌‌ ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ತೆಗೆದುಹಾಕುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.

ನಾಗರಿಕರ ಗಮನವನ್ನು ಸೆಳೆಯಲು, ಗರಿಷ್ಠ ಸಂಖ್ಯೆಯ ಜನರು ಲಸಿಕೆಯನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ತನ್ನ ಕರ್ತವ್ಯಗಳನ್ನು ನಿರ್ವಹಿಸುವ ಪ್ರಯತ್ನವಾಗಿ ಛಾಯಾಚಿತ್ರವು  ಇರುವುದಾಗಿ ವಿಭಾಗೀಯ ಪೀಠ ಹೇಳಿದೆ.

ಪ್ರಧಾನ ಮಂತ್ರಿಯವರ ಭಾವಚಿತ್ರವನ್ನು ಪ್ರಮಾಣಪತ್ರಗಳಿಂದ ತೆಗೆದುಹಾಕುವಂತೆ ಸರ್ಕಾರವನ್ನು ಪ್ರಶ್ನಿಸುವ ಮೂಲಕ ನಾಗರಿಕರು ಮೂಲಭೂತ ಹಕ್ಕನ್ನು ಪ್ರತಿಪಾದಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿರುವುದಾಗಿ ಬಾರ್ ಮತ್ತು ಬೆಂಚ್ ವರದಿ ಮಾಡಿದೆ.

ಕೇಂದ್ರ ಸರ್ಕಾರವು ಸಾರ್ವಜನಿಕರ ಮೂಲಭೂತ ಹಕ್ಕುಗಳ ಬಗ್ಗೆ ಕಾಳಜಿ ವಹಿಸುತ್ತದೆಯೇ ಹೊರತು ಕರೋನವೈರಸ್ ಸಾಂಕ್ರಾಮಿಕದಂತಹ ಪರಿಸ್ಥಿತಿಯಲ್ಲಿ ವ್ಯಕ್ತಿಯ ಮೂಲಭೂತ ಹಕ್ಕುಗಳ ಬಗ್ಗೆ ಅಲ್ಲ ಎಂದು ನ್ಯಾಯಾಲಯ ಹೇಳಿದೆ.

“ಯಾವುದೇ ಅಸ್ಥಿರ ಪರಿಸ್ಥಿತಿಯು ರಾಷ್ಟ್ರ ಮತ್ತು ಇಡೀ ಜಗತ್ತನ್ನು ಆವರಿಸಿದಾಗ ಭಾರತದ ಸಂವಿಧಾನದ ಭಾಗ IIIರ ಅಡಿಯಲ್ಲಿ ಖಾತರಿಪಡಿಸಿದ ವೈಯಕ್ತಿಕ ಹಕ್ಕು ದೊಡ್ಡ ಮಟ್ಟದ ಸಾರ್ವಜನಿಕ ಹಿತಾಸಕ್ತಿಗೆ ಅಧೀನವಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಇದಕ್ಕೂ ಮುನ್ನ ಏಕ ಸದಸ್ಯ ಪೀಠವು  ಅರ್ಜಿದಾರರಾದ ಪೀಟರ್ ಮೈಲಿಪರಂಪಿಲ್ ಅವರ ಮೇಲೆ 1 ಲಕ್ಷ ರೂ. ದಂಡ ವಿಧಿಸಿತ್ತು. ಆದರೆ ವಿಭಾಗೀಯ ಪೀಠ ಅದನ್ನು 25 ಸಾವಿರ ರೂ.ಗೆ ಇಳಿಸಿತು. ಕ್ಷುಲ್ಲಕ ಅರ್ಜಿಗಳನ್ನು ಸಲ್ಲಿಸದಂತೆ ಪೀಠವು ಎಚ್ಚರಿಕೆ ನೀಡಿದೆ.

ಪ್ರಧಾನಿಯವರು ರಾಜಕೀಯ ಪಕ್ಷವೊಂದರ ನಾಯಕರೂ ಆಗಿರುವುದರಿಂದ ಸರ್ಕಾರಿ ಅನುದಾನಿತ ಸಂದೇಶಗಳು, ಪ್ರಚಾರಗಳಲ್ಲಿ ಪ್ರಧಾನಿಯವರನ್ನು ಉದಾಹರಿಸುವುದನ್ನು ತಡೆಯಬೇಕು ಎಂದು ಮೈಲಿಪರಂಪಿಲ್ ವಾದಿಸಿದ್ದರು.

ಇಂತಹ ಪ್ರಚಾರವು ಚುನಾವಣಾ ವ್ಯವಸ್ಥೆಯಲ್ಲಿ ಅಳವಡಿಸಲಾಗಿರುವ ಮತದಾನದ ಸ್ವತಂತ್ರ ಆಯ್ಕೆಯ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಹೇಳಿದರು.

ಕೊರೊನಾ ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ತೆಗೆಯುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ್ದ ಕೇರಳ ಹೈಕೋರ್ಟ್‌, “ಪ್ರಧಾನಿ ಬಗ್ಗೆ ನಾಚಿಕೆ ಏಕೆ?” ಎಂದು ಅರ್ಜಿದಾರರನ್ನು ಪ್ರಶ್ನಿಸಿತ್ತು.

ಇತರ ದೇಶಗಳಲ್ಲಿ ಇಂತಹ ಪದ್ಧತಿ ಇಲ್ಲ ಎಂದು ಅರ್ಜಿದಾರರ ಪರ ವಕೀಲರು ಕೇರಳ ಹೈಕೋರ್ಟ್‌ಗೆ ತಿಳಿಸಿದ್ದರು. ಇದಕ್ಕೆ ಮೌಖಿಕವಾಗಿ ಪ್ರತಿಕ್ರಿಯಿಸಿದ್ದ ನ್ಯಾಯಾಧೀಶರು, “ಅವರು ತಮ್ಮ ಪ್ರಧಾನಿಗಳ ಬಗ್ಗೆ ಹೆಮ್ಮೆಪಡದಿರಬಹುದು, ನಮ್ಮ ಪ್ರಧಾನಿ ಬಗ್ಗೆ ನಮಗೆ ಹೆಮ್ಮೆ ಇದೆ” ಎಂದು ಹೇಳಿದ್ದರು.

ದೇಶದ ಜನರು ಬಹುಮತದಿಂದ ಪ್ರಧಾನಿಯನ್ನು ಅಧಿಕಾರಕ್ಕೆ ಆಯ್ಕೆ ಮಾಡಿದ್ದಾರೆ. ಲಸಿಕೆ ಪ್ರಮಾಣ ಪತ್ರದಲ್ಲಿ ಅವರ ಭಾವಚಿತ್ರ ಇರುವುದರಲ್ಲಿ ತಪ್ಪೇನು ಎಂದು ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್ ಕೇಳಿದ್ದರು.

“ನೀವು (ಅರ್ಜಿದಾರರು) ಪ್ರಧಾನ ಮಂತ್ರಿಯ ಬಗ್ಗೆ ಏಕೆ ನಾಚಿಕೆಪಡುತ್ತೀರಿ? ಅವರು ಜನಾದೇಶದ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ…. ನಾವು ವಿಭಿನ್ನ ರಾಜಕೀಯ ದೃಷ್ಟಿಕೋನಗಳನ್ನು ಹೊಂದಿರಬಹುದು, ಆದರೆ ಅವರು ಇನ್ನೂ ನಮ್ಮ ಪ್ರಧಾನಿ” ಎಂದು ನ್ಯಾಯಾಲಯ ಹೇಳಿತ್ತು.

ಅರ್ಜಿದಾರರ ಪರ ವಕೀಲ ಪೀಟರ್ ಮೈಲಿಪರಂಪಿಲ್ ಅವರು, “ಪ್ರಮಾಣಪತ್ರವು ಖಾಸಗಿ ದಾಖಲೆ ಆಗಿದ್ದು, ಅದರ ಮೇಲೆ ನಮಗೆ ಹಕ್ಕಿದೆ. ನಾವು ಹಣ ಕೊಟ್ಟು ಲಸಿಕೆ ಖರೀದಿಸಿದ್ದು, ಅದರ ಕ್ರೆಡಿಟ್ ಅನ್ನು ಪ್ರಭುತ್ವ ತೆಗೆದುಕೊಳ್ಳುವುದು ಸರಿಯಲ್ಲ” ಎಂದು ವಾದಿಸಿದ್ದಾರೆ.

ಪ್ರಮಾಣ ಪತ್ರಕ್ಕೆ ಪ್ರಧಾನಮಂತ್ರಿಯವರ ಭಾವಚಿತ್ರವನ್ನು ಸೇರಿಸಿರುವುದು ವ್ಯಕ್ತಿಯ ಖಾಸಗಿತನವನ್ನು ಉಲ್ಲಂಘಿಸಿದಂತಾಗುತ್ತದೆ ಪೀಟರ್‌ ಪ್ರತಿಪಾದಿಸಿದ್ದರು.

ಈ ದೇಶದಲ್ಲಿ ಜವಾಹಾರ್‌ ಲಾಲ್ ನೆಹರೂ ಹೆಸರಿನಲ್ಲಿ ವಿಶ್ವವಿದ್ಯಾಲಯವೇ ಇದೆ. ಹಾಗಿದ್ದಾಗ ಲಸಿಕೆ ಪ್ರಮಾಣ ಪತ್ರದ ಮೇಲೆ ಈಗಿನಿ ಪ್ರಧಾನಿಯವರ ಫೋಟೊ ಏಕಿರಬಾರದು ಎಂದು ಪೀಠ ಪ್ರಶ್ನಿಸಿತ್ತು.

ದೇಶದ 100 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿಯವರ ಫೋಟೊ ಇರುವುದರಿಂದ ತೊಂದರೆಯಾಗಿಲ್ಲ. ನಿಮಗೇಕೆ ತೊಂದರೆ? ಎಂದು ಕೇಳಿತ್ತು. ಅರ್ಜಿಗೆ ಯಾವುದೇ ಅರ್ಹತೆ ಇದೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಇಲ್ಲವೆಂದಾದರೆ, ಅರ್ಜಿಯನ್ನು ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿತ್ತು.


ಇದನ್ನೂ ಓದಿರಿ: ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೊ: ಪ್ರಧಾನಿ ಬಗ್ಗೆ ನಾಚಿಕೆ ಏಕೆ? ಕೇರಳ ಹೈಕೋರ್ಟ್ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಮಾರಾಟವಾಗಲು ನಿರಾಕರಿಸಿದ್ದಕ್ಕೆ ಜೈಲಿನಲ್ಲಿ ಹೊಡೆದು, ಚಿತ್ರಹಿಂಸೆ ನೀಡಿದ್ದರು: ಟಿಎಂಸಿ ನಾಯಕ ಸಾಕೇತ್ ಗೋಖಲೆ

0
ಬಿಜೆಪಿಗೆ ಸೇರಲು ಅಥವಾ ಮಾರಾಟವಾಗಲು ನಿರಾಕರಿಸಿದ್ದಕ್ಕಾಗಿ ಜೈಲಿನಲ್ಲಿ ನನಗೆ ಹೊಡೆದು ಚಿತ್ರಹಿಂಸೆ ನೀಡಲಾಗಿತ್ತು ಎಂದು ರಾಜ್ಯಸಭಾ ಸದಸ್ಯ, ಟಿಎಂಸಿ ನಾಯಕ ಸಾಕೇತ್ ಗೋಖಲೆ ಹೇಳಿದ್ದಾರೆ. ದಿ ವೈರ್‌ ಪ್ರಕಟಿಸಿದ ಹಿರಿಯ ವಕೀಲ ಕಪಿಲ್ ಸಿಬಲ್...