ಕನ್ನಡದ ಖ್ಯಾತ ಕಥೆಗಾರ, ಕಾದಂಬರಿಕಾರ, ವಿಮರ್ಶಕ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರನ್ನು ಅಣಿಕಿಸಿ ಬಲಪಂಥೀಯ ಬರಹಗಾರ ರೋಹಿತ್ ಚಕ್ರತೀರ್ಥ ಮಾಡಿರುವ ಕಮೆಂಟ್‌ನ ಸ್ಕ್ರೀನ್‌ಶಾಟ್ ಈಗ ಹರಿದಾಡುತ್ತಿದೆ.
ತೇಜಸ್ವಿಯವರ ಏಕೈಕ ಕವನ ಸಂಕಲನ ‘ಬೃಹನ್ನಳೆ ಸೋಮುವಿನ ಸ್ವಗತ ಲಹರಿ’. ಈ ಕೃತಿಯು 1962ರಲ್ಲಿ ಪ್ರಕಟವಾಯಿತು. ರಾಜಕೀಯ ವಿಡಂಬನೆ, ಹತಾಶೆ, ಅಸಹಾಯಕತೆ, ಸಿಟ್ಟು ಅಪ್ರಕಟಿತ ಪ್ರೇಮವನ್ನು ಇಲ್ಲಿನ ಕವನಗಳಲ್ಲಿ ಕಾಣಬಹುದು ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲಿನ ಕವಿತೆಯೊಂದರ ಕುರಿತು ಕಮೆಂಟ್ ಮಾಡಿರುವ ಚಕ್ರತೀರ್ಥ, ‘ನೈಂಟಿ ಎಮ್ಮೆಲ್ ಕವಿತೆ’ ಎಂದು ಅಣಕಿಸಿದ್ದಾರೆ.


‘#ನವಇತಿಹಾಸನಿರ್ಮಾಣಗಳು’ ಹ್ಯಾಷ್‌ಟ್ಯಾಗ್ ಬಳಸಿ ಮಾಡಿರುವ ಪೋಸ್ಟ್‌ನಲ್ಲಿ “ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಪ್ರತಿ ಕವನದಲ್ಲಿ ನಮ್ಮ ದೇಶದ Inequality of wealth ಬಗ್ಗೆ ಹೇಳಿದ್ದಾರೆ” ಎಂದು ಚಕ್ರತೀರ್ಥ ಬರೆದಿದ್ದಾರೆ.
ಭಾಗ್ಯ ಸುಭಾಷ್ ಎಂಬವರು ‘ಅವರು ಕವಿತೆ ಬರೆದಿದ್ದಾರಾ?’ ಎಂದು ಕಮೆಂಟ್ ಮಾಡಿದ್ದಾರೆ. ಅದಕ್ಕೆ ಸುಮಾ ಆರಾಧ್ಯ ಅವರು ಕವಿತೆಯನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ರೋಹಿತ್ ಚಕ್ರತೀರ್ಥ ಕಮೆಂಟ್ ಮಾಡಿ, “ನೈಂಟಿಎಮ್ಮೆಲ್” ಕವಿತೆ ಎಂದಿದ್ದಾರೆ.
‘ಬ್ರಾಹ್ಮಣ ಯುವಕರಿಗೆ’ ಎಂಬ ಕವಿತೆಯನ್ನು ಸುಮಾ ಆರಾಧ್ಯ ಹಂಚಿಕೊಂಡಿರುವುದನ್ನು ಕಾಣಬಹುದು.

ಕನ್ನಡ ಸಾಹಿತಿಗಳು, ಬರಹಗಾರರ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಾ ಬಂದಿರುವ ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿ, ಆ ಸಮಿತಿ ನೀಡಿರುವ ಪಠ್ಯವನ್ನು ಅಳವಡಿಸಿಕೊಳ್ಳಲು ಮುಂದಾಗಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ನೂತನ ಪಠ್ಯಪುಸ್ತಕಗಳನ್ನು ಕೂಡಲೇ ವಾಪಸ್ ಪಡೆಯಬೇಕೆಂಬ ಆಗ್ರಹ ಹೆಚ್ಚಾಗುತ್ತಿದೆ.
ರಾಷ್ಟ್ರಕವಿ ಕುವೆಂಪು ಅವರು ಬರೆದ ನಾಡಗೀತೆಯನ್ನು ತಿರುಚಿದ ಆರೋಪ ಎದುರಿಸುತ್ತಿರುವ ರೋಹಿತ್ ಚಕ್ರತೀರ್ಥ ಅವರು ಈ ಹಿಂದೆ ಮಾಡಿರುವ ಪೋಸ್ಟ್‌ಗಳು, ಕಮೆಂಟ್‌ಗಳು ಹೊರಬೀಳತೊಡಗಿವೆ. ಅಶ್ಲೀಲವಾಗಿ ಮಾಡಿದ್ದ ಪೋಸ್ಟ್‌ಗಳೆಲ್ಲ ಚರ್ಚೆಗೆ ಬಂದ ಬಳಿಕ ರೋಹಿತ್ ಚಕ್ರತೀರ್ಥ ಅವರು ತಮ್ಮ ಎಫ್‌ಬಿ ಪ್ರೊಫೈಲ್ ಲಾಕ್ ಮಾಡಿಕೊಂಡಿದ್ದಾರೆ.



ತನ್ನ ಸ್ವಭಾವವನ್ನು ಬಹುಷ ತೇಜಸ್ವಿ ಗೆ ಹೇಳಿರಬೇಕು…….
“ವೈಚಾರಿಕತೆಯನ್ನು ತುಳಿದುಹಾಕದಿದ್ದರೆ ತಟ್ಟೆ ಕಾಸಿಗೆ ಕುತ್ತು ಬರುತ್ತದೆ” ಎಂಬುದು ಮನುವಾದಿಗಳ ಆತಂಕ. ಅದಕ್ಕಾಗಿ ಅವರು ಚಕ್ರತೀರ್ತನಂತಹ ಹೀನಕ್ರಿಮಿಯನ್ನು ಉನ್ನತ ಸ್ಥಾನದಲ್ಲಿ ಕೂರಿಸಿದ್ದಾರೆ. ಈ ನಾಡಿನ ಪ್ರಜ್ಞಾವಂತರು ಇದಕ್ಕೆ ಪ್ರತಿಬಟಿಸದಿದ್ದರೆ, ದೇವನೂರು ಮಹಾದೇವ ಅವರು ಹೇಳಿರುವಂತೆ ಈ ನಾಡಿಗೆ ಕೇಡುಗಾಲ ಕಟ್ಟಿಟ್ಟ ಬುತ್ತಿ.