Homeಮುಖಪುಟಮೇಲ್ಮನೆಯ ಚುನಾವಣಾ ಮೇಲಾಟ

ಮೇಲ್ಮನೆಯ ಚುನಾವಣಾ ಮೇಲಾಟ

- Advertisement -
- Advertisement -

ಒಟ್ಟು 15 ರಾಜ್ಯಗಳ 57 ರಾಜ್ಯಸಭಾ ಸ್ಥಾನಗಳು ತೆರವಾಗಿದ್ದು ಜೂನ್ 10ರಂದು ಚುನಾವಣೆ ನಿಗದಿಯಾಗಿತ್ತು. ಆದರೆ ಚುನಾವಣೆ ನಡೆಯುವ ಮುಂಚೆಯೇ ಈಗಾಗಲೇ 11 ರಾಜ್ಯಗಳ 41 ಅಭ್ಯರ್ಥಿಗಳ ಅವಿರೋಧ ಆಯ್ಕೆಯಾಗಿದೆ. ಅವುಗಳ ಪೈಕಿ ಬಿಜೆಪಿ ಗೆದ್ದಿರುವುದು 13 ಸ್ಥಾನಗಳನ್ನು ಮಾತ್ರ. ಈಗ ಸ್ಪರ್ಧೆ ಇರುವುದು ಉಳಿದ 16 ಸ್ಥಾನಗಳಿಗೆ ಮಾತ್ರ. ಅದರಲ್ಲಿ ಕರ್ನಾಟಕದ 4, ಹರ್ಯಾಣದಲ್ಲಿ 2, ರಾಜಸ್ಥಾನದಲ್ಲಿ 4 ಮತ್ತು ಮಹಾರಾಷ್ಟ್ರದಲ್ಲಿ 6 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ರಾಜಸ್ಥಾನದಲ್ಲಿ ಬಿಜೆಪಿಯ ಲೆಕ್ಕಾಚಾರ ಏನು ಹೇಳುತ್ತದೆ ನೋಡೋಣ. ಬಿಜೆಪಿಯ ಶಾಸಕರ ಒಟ್ಟು ಸಂಖ್ಯೆ 71. ಪ್ರತಿಯೊಂದು ಸ್ಥಾನ ಗೆಲ್ಲಲು ಅಗತ್ಯವಿರುವ ಮತಗಳ ಸಂಖ್ಯೆ 41. ಬಿಜೆಪಿಯ ಪ್ರಥಮ ಪ್ರಾಶಸ್ತ್ಯದ ಅಭ್ಯರ್ಥಿ ಘನಶಾಮ್ ತಿವಾರಿ ಅವರ ಗೆಲುವು ನಿಶ್ಚಿತವಾಗಿದೆ. ಇನ್ನು ಎರಡನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕೆಂದರೆ ಹೆಚ್ಚುವರಿಯಾಗಿ 11 ಮತಗಳು ಬೇಕು. ಹಾಗಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಮಾಧ್ಯಮ ದೊರೆ ಸುಭಾಷ್ ಚಂದ್ರರನ್ನು ಕಣಕ್ಕಿಳಿಸಿದೆ.

ಕಾಂಗ್ರೆಸ್‌ನ ಲೆಕ್ಕಾಚಾರ ಏನು? ರಾಜಸ್ಥಾನದಲ್ಲಿ ಕಾಂಗ್ರೆಸ್‌ನ ಬಲ 108. ಇದರೊಂದಿಗೆ 13 ಪಕ್ಷೇತರ ಶಾಸಕರು ಗೆಹ್ಲೋಟ್ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಜೊತೆಗೆ ಆರ್‌ಎಲ್‌ಪಿ ಪಕ್ಷದ 3 ಮತ್ತು ಆರ್‌ಎಲ್‌ಡಿ ಪಕ್ಷದ ಒಬ್ಬರು ಶಾಸಕರು ಸೇರಿ ಒಟ್ಟು 125 ಶಾಸಕರ ಬೆಂಬಲ ಕಾಂಗ್ರೆಸ್ ಸರ್ಕಾರಕ್ಕಿದೆ. ಈ ಎಲ್ಲ 125 ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಾಕೋದಾದರೆ ಮೂರೂ ಅಭ್ಯರ್ಥಿಗಳ ಗೆಲುವು ಸಲೀಸು. ಆದರೆ ರಾಜಕೀಯ ಅಷ್ಟು ಸರಳವಾಗಿಲ್ಲ. ಕೆಲವು ಪಕ್ಷೇತರ ಶಾಸಕರು ಗೆಹ್ಲೋಟ್‌ರೊಂದಿಗೆ ನಾನಾ ಕಾರಣಗಳಿಂದ ಮುನಿಸಿಕೊಂಡಿದ್ದಾರೆ. ಅಂಥವರನ್ನು ಬುಟ್ಟಿಗೆ ಹಾಕಿಕೊಳ್ಳಲು ’ಸ್ವತಂತ್ರ ಅಭ್ಯರ್ಥಿ’ ತಂತ್ರ ಹೆಣೆಯುತ್ತಿದ್ದಾರೆ.

ಅಲ್ಲದೆ, ಭಾರತೀಯ ಟ್ರೈಬಲ್ ಪಾರ್ಟಿ(ಬಿಟಿಪಿ)ಯ 2 ಶಾಸಕರು ಹಾಗೂ ಸಿಪಿಐ(ಎಂ) ಪಕ್ಷದ 2 ಶಾಸಕರಿದ್ದಾರೆ. ಈ ಎರಡು ಪಕ್ಷಗಳು ಸರ್ಕಾರದಲ್ಲಿ ಸೇರಿಲ್ಲ. ಹೀಗಾಗಿ ಈ ನಾಲ್ಕು ಮತಗಳನ್ನು ಸೆಳೆಯಲು ಎರಡೂ ಬಣಗಳು ತೀವ್ರ ಪೈಪೋಟಿ ನಡೆಸಿವೆ. ಬಿಟಿಪಿ ಪಕ್ಷದ ಶಾಸಕರೊಡನೆ ಸಿಎಂ ಗೆಹ್ಲೋಟ್ ನಿನ್ನೆ ತಡರಾತ್ರಿ ಮಾತುಕತೆ ನಡೆಸಿ ಅವರ ಕೆಲವು ’ಬೇಡಿಕೆ’ಗಳನ್ನು ಈಡೇರಿಸಿ ಬೆಂಬಲದ ಆಶ್ವಾಸನೆ ಪಡೆದುಕೊಂಡಿದ್ದಾರೆ. ಇನ್ನು ಸಿಪಿಐ(ಎಂ) ಪಕ್ಷ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಬೆಂಬಲ ಕೊಡುವ ಸಾಧ್ಯತೆ ತೀರಾ ಕಡಿಮೆ.

ಆಯಾ ಪಕ್ಷಗಳು ತಂತಮ್ಮ ಶಾಸಕರನ್ನು ಅಂಕೆಯಲ್ಲಿಟ್ಟುಕೊಳ್ಳುವುದು ಅಸಲಿ ಸವಾಲು. ಯಾಕೆಂದರೆ ಶಾಸಕರು ತಮ್ಮ ಸ್ವಂತ ನಿರ್ಣಯಾನುಸಾರ ಮತ ಚಲಾಯಿಸಲು ಸ್ವತಂತ್ರರು. ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಗೆ ಅಥವ ಸೂಚಿತ ಅಭ್ಯರ್ಥಿಗೆ ಮತ ಚಲಾಯಿಸದಿದ್ದರೆ ಅಂಥವರ ಮೇಲೆ ಆಯಾ ಪಕ್ಷಗಳು ಕ್ರಮ ತೆಗೆದುಕೊಳ್ಳಬಹುದೆ ಹೊರತು ಅವರ ಶಾಸಕ ಸ್ಥಾನಕ್ಕೆ ಯಾವುದೇ ಚ್ಯುತಿ ಬರುವುದಿಲ್ಲ. ಇದರಿಂದಾಗಿ ಕುದುರೆ ವ್ಯಾಪಾರಕ್ಕೆ ವಿಪುಲ ಅವಕಾಶವಿದೆ. ಹೀಗಾಗಿ ತಂತಮ್ಮ ಶಾಸಕರು ’ಮಾರಾಟ’ವಾಗದಂತೆ ಕಾಪಾಡಿಕೊಳ್ಳಲು ಪಕ್ಷಗಳು ಕಸರತ್ತು ನಡೆಸುತ್ತಿವೆ. ಕಾಂಗ್ರೆಸ್ ನಾಯಕರು ತಮ್ಮ ಶಾಸಕರನ್ನು ಉದಯಪುರದ ರೆಸಾರ್ಟ್‌ಗೆ ಸಾಗಿಸಿದ್ದಾರೆ. ಹಾಗೆಯೆ ಬಿಜೆಪಿಯ ಶಾಸಕರ ದಂಡು ಜೈಪುರದ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿದೆ. ಹಣಾಹಣಿ ತೀವ್ರವಾಗಿದ್ದು ಕಾಂಗ್ರೆಸ್‌ನ ಮೂರನೆಯ ಅಭ್ಯರ್ಥಿ ಪ್ರಮೋದ್ ತಿವಾರಿ ಅಥವಾ ಗೋದಿ ಮೀಡಿಯಾ ಖ್ಯಾತಿಯ ಮಾಧ್ಯಮ ದೊರೆ ಸುಭಾಷ್ ಚಂದ್ರರ ಹಣೆಬರಹ ಏನೆಂಬುದನ್ನು ಜೂನ್ 10ರಂದೇ ತಿಳಿಯಬೇಕು.

ಹರ್ಯಾಣದ ವಿಚಾರಕ್ಕೆ ಬರೋಣ. ಇಲ್ಲಿ ಕಾಂಗ್ರೆಸ್‌ನ ಸದಸ್ಯ ಬಲ 31. ರಾಜ್ಯಸಭೆಯ ಸ್ಥಾನ ಗೆಲ್ಲಲು ಬೇಕಾಗಿರುವ ಮತಗಳ ಸಂಖ್ಯೆ ಕೂಡ 31. ಹೀಗಾಗಿ ಕಾಂಗ್ರೆಸ್‌ನ ಅಭ್ಯರ್ಥಿ ಅಜಯ್ ಮಾಕನ್ ಗೆಲುವು ಸರಳ ಎಂದು ನೀವು ಭಾವಿಸುವಂತಿಲ್ಲ. ಅಜಯ್ ಮಾಕನ್ ಹರ್ಯಾಣದಿಂದ ಹೊರಗಿನವರೆಂಬ ಕಾರಣ ಮುಂದೊಡ್ಡಿ ಹಲವು ನಾಯಕರು ಈಗಾಗಲೇ ಅಪಸ್ವರ ತೆಗೆದಿದ್ದಾರೆ. ಹಾಲಿ ರಾಯಪುರದ ರೆಸಾರ್ಟ್‌ನಲ್ಲಿ ಠಿಕಾಣಿ ಹೂಡಿರುವ ಕಾಂಗ್ರೆಸ್ ಶಾಸಕರ ಸಂಖ್ಯೆ 28 ಮಾತ್ರ. ಮೂರು ಮಂದಿ ಇನ್ನೂ ’ಹಿಡಿತ’ಕ್ಕೆ ಸಿಕ್ಕಿಲ್ಲ.

ಆಡಳಿತಾರೂಢ ಬಿಜೆಪಿಯ ಸ್ಥಿತಿ ನೋಡಿ. ಬಿಜೆಪಿಯ ಶಾಸಕರ ಸಂಖ್ಯೆ 40 ಹಾಗೂ ಮೈತ್ರಿ ಪಕ್ಷವಾದ ಜೆಜೆಪಿಯ 10 ಶಾಸಕರು, 6 ಪಕ್ಷೇತರ ಶಾಸಕರು ಹಾಗೂ ಮತ್ತೊಬ್ಬರು ಸೇರಿ ಒಟ್ಟು 57 ಸಂಖ್ಯಾಬಲವಿದೆ. ಬಿಜೆಪಿಯ ಅಭ್ಯರ್ಥಿ ಕ್ರಿಶನ್ ಪಾಲ್ ಪನ್ವಾರ್ ಸುಲಭವಾಗಿ ಆರಿಸಿ ಬಂದ ನಂತರ ಬಿಜೆಪಿ ಬಳಿ ಕೇವಲ 9 ಹೆಚ್ಚುವರಿ ಮತಗಳು ಉಳಿಯುತ್ತವೆ.

ಹೀಗಿದ್ದರೂ ಬಿಜೆಪಿಯ ಆಟದ ಗಮ್ಮತ್ತೇ ಬೇರೆ. ಈ ಬಾರಿ ಕಾಂಗ್ರೆಸ್ ಹಾಗೂ ಇನ್ನಿತರರ ಮತಗಳನ್ನು ಸೆಳೆದು ತಮ್ಮ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಲು ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಮತ್ತೊಂದು ಗೋದಿ ಮೀಡಿಯಾ ನ್ಯೂಸ್ ಎಕ್ಸ್‌ನ ಮಾಲಿಕ ಕಾರ್ತಿಕೇಯ ಶರ್ಮನನ್ನು ಕಣಕ್ಕಿಳಿಸಿದೆ. ಈಗ ಮೇಲ್ನೋಟಕ್ಕೆ ಖಚಿತವಾಗಿರುವ 26 ಮತಗಳ ಜೊತೆಗೆ ಈ ಶರ್ಮ ಗೆಲ್ಲಲು ಇನ್ನೂ 5 ಮತಗಳು ಬೇಕು. ಅವು ಎಲ್ಲಿಂದ ಬರುತ್ತವೆ ಎಂಬುದೇ ಪ್ರಶ್ನೆ.

ಕರ್ನಾಟಕದ ಸನ್ನಿವೇಶ ಮತ್ತಷ್ಟು ನಾಟಕೀಯವಾಗಿದೆ. ಆಯ್ಕೆಯಾಗಬೇಕಿರುವ 4 ಸ್ಥಾನಗಳಿಗೆ ಒಟ್ಟು 6 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸೂತ್ರದ ಪ್ರಕಾರ ಗೆಲ್ಲಲು ಬೇಕಾಗಿರುವುದು 45 ಮತಗಳು. ಬಿಜೆಪಿಯ ಈಗಿನ ಸಂಖ್ಯಾಬಲ 119. ಬಿಜೆಪಿಯ ಪ್ರಥಮ ಆದ್ಯತೆಯ ಮತದ ಲೆಕ್ಕಾಚಾರದಲ್ಲಿ ನಿರ್ಮಲಾ ಸೀತಾರಾಮನ್ ಹಾಗೂ ಜಗ್ಗೇಶ್ ಸುಲಭವಾಗಿ ಗೆಲ್ಲಬಹುದು. ಆದರೂ ಹೆಚ್ಚುವರಿಯಾಗಿ 29 ಮತಗಳು ಉಳಿಯಲಿವೆ. ಹೀಗಾಗಿ ಅಳೆದು ಸುರಿದು ಲೆಕ್ಕ ಹಾಕಿದ ನಂತರ ಬಿಜೆಪಿ ತಮ್ಮ ಮೂರನೇ ಅಭ್ಯರ್ಥಿಯಾಗಿ ಲೆಹರ್ ಸಿಂಗ್‌ರನ್ನು ಕಣಕ್ಕಿಳಿಸಿದೆ. ಇದರಿಂದಾಗಿ ಬಿಜೆಪಿಯ ಹೆಚ್ಚುವರಿ ಮತಗಳ ಬೆಂಬಲದಿಂದ ತಮ್ಮ ಅಭ್ಯರ್ಥಿ ಕುಪೇಂದ್ರರೆಡ್ಡಿಯನ್ನು ಗೆಲ್ಲಿಸಿ ರಾಜ್ಯಸಭಾ ಸ್ಥಾನ ಪಡೆಯುವ ಜೆಡಿಎಸ್‌ನ ಲೆಕ್ಕಾಚಾರ ತಲೆಕೆಳಗಾಗಿದೆ. ಜೆಡಿಎಸ್ ಶಾಸಕರ ಸಂಖ್ಯೆ ಲೆಕ್ಕಕ್ಕೆ 31. ಆದರೆ 5 ಮಂದಿ ಈಗಾಗಲೇ ಪಕ್ಷದಿಂದ ಕಾಲು ಹೊರಗಿಟ್ಟಿದ್ದಾರೆ. ಬಹುತೇಕ ಅವರ ಮತಗಳು ಕಾಂಗ್ರೆಸ್ ಪಾಲಾಗುವ ಸಂಭವವೇ ಹೆಚ್ಚು. ಕಾಂಗ್ರೆಸ್ ಪಕ್ಷಕ್ಕೆ 69 ಸದಸ್ಯ ಬಲ ಇರುವುದರಿಂದ ಮೊದಲ ಅಭ್ಯರ್ಥಿ ಜೈರಾಮ್ ರಮೇಶ್ ಸುಲಭವಾಗಿ ಆರಿಸಿ ಬರುತ್ತಾರೆ. ಆದರೆ ಕಾಂಗ್ರೆಸ್ ತಮ್ಮ ಎರಡನೆಯ ಅಭ್ಯರ್ಥಿಯಾಗಿ ಮನ್ಸೂರ್ ಅಲಿಯನ್ನು ಕಣಕ್ಕಿಳಿಸಿ ತ್ರಿಕೋಣ ಸ್ಪರ್ಧೆ ಏರ್ಪಡುವಂತೆ ಮಾಡಿದೆ. ರಾಜ್ಯಸಭೆಯ ಈ ನಾಲ್ಕನೆಯ ಸ್ಥಾನಕ್ಕೆ ಬಿಜೆಪಿ ಬಳಿ 29, ಕಾಂಗ್ರೆಸ್ ಬಳಿ 25 (+5) ಹಾಗೂ ಜನತಾದಳದಲ್ಲಿ 31(-5) ಮತಗಳು ಲಭ್ಯವಿದ್ದು ಬಹುತೇಕ ಸಮಬಲದ ತ್ರಿಕೋಣ ಸ್ಪರ್ಧೆ ಏರ್ಪಟ್ಟಿದೆ. ಹೀಗಾಗಿ ನಿರೀಕ್ಷೆಯಂತೆ ಮೂರೂ ಪಕ್ಷಗಳ ನಾಯಕರು ತುರ್ತಾಗಿ ರೆಸಾರ್ಟ್ ಯಾತ್ರೆ ಆಯೋಜಿಸುವ ಲೆಕ್ಕಾಚಾರದಲ್ಲಿದ್ದಾರೆ.

ಮಹಾರಾಷ್ಟ್ರದಲ್ಲಿ 6 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅತಿ ದೊಡ್ಡ ಪಕ್ಷ ಬಿಜೆಪಿಯ ಬಲ 106. ಆಡಳಿತಾರೂಢ ಮಹಾ ವಿಕಾಸ್ ಅಗಾಡಿ (ಎಂವಿಎ)ಯಲ್ಲಿ ಶಿವಸೇನಾ 55, ಎನ್‌ಸಿಪಿ 53 ಮತ್ತು ಕಾಂಗ್ರೆಸ್ 44 ಸ್ಥಾನಗಳನ್ನು ಹೊಂದಿವೆ. ಗೆಲ್ಲಲು ಬೇಕಾದ ಮತಗಳ ಸಂಖ್ಯೆ 41. ಹೀಗಾಗಿ ಬಿಜೆಪಿ 2 ಸ್ಥಾನಗಳಲ್ಲಿ ನಿರಾಯಾಸವಾಗಿ ಗೆದ್ದು, 24 ಹೆಚ್ಚುವರಿ ಮತಗಳನ್ನು ಹೊಂದಿರುತ್ತದೆ. ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಲಾ ಒಂದು ಸ್ಥಾನವನ್ನು ಪಡೆಯುವುದು ನಿಶ್ಚಿತ. ಈ ಐದು ಸ್ಥಾನಗಳ ನಂತರ ಆರನೇ ಸ್ಥಾನಕ್ಕಾಗಿ ಬಿಜೆಪಿ ಮತ್ತು ಶಿವಸೇನಾ ತೀವ್ರ ಹಣಾಹಣಿಗೆ ಇಳಿದಿವೆ. ಹಾಲಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಇತರೆ ಸಣ್ಣಪುಟ್ಟ ಪಕ್ಷಗಳ ಒಟ್ಟು 16 ಶಾಸಕರು ಹಾಗೂ 13 ಪಕ್ಷೇತರ ಶಾಸಕರಿದ್ದಾರೆ. ಹೀಗಾಗಿ ಇವರಿಗೆ ಇನ್ನಿಲ್ಲದ ಬೇಡಿಕೆ ಸೃಷ್ಟಿಯಾಗಿದ್ದು ದೇಶದ ಹಣಕಾಸು ರಾಜಧಾನಿ ಮುಂಬೈನಲ್ಲಿ ತುರುಸಿನ ಚಟುವಟಿಕೆಗಳು ನಡೆಯುತ್ತಿವೆ.

ಕೆಲವು ತಿಂಗಳುಗಳ ಹಿಂದಿನ ಲೆಕ್ಕದ ಪ್ರಕಾರ ರಾಜ್ಯಸಭೆಯಲ್ಲಿ ಬಿಜೆಪಿಯ ಬಲ 101 ಸ್ಥಾನಗಳಿಗೆ ಏರಿಕೆಯಾಗಿತ್ತು. 2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಟ್ಟು 46 ರಾಜ್ಯಸಭಾ ಸ್ಥಾನಗಳನ್ನು ಬಿಜೆಪಿ ಹೆಚ್ಚಿಸಿಕೊಂಡಿದೆ. 1990ರ ನಂತರ ಯಾವುದಾದರೂ ಒಂದು ಪಕ್ಷ ರಾಜ್ಯಸಭೆಯಲ್ಲಿ ನೂರರ ಗಡಿ ದಾಟಿದ್ದು ಇದೇ ಮೊದಲು.

ಬಿಜೆಪಿಗೆ ಈಗ ಹಾಲಿ ಅವಿರೋಧವಾಗಿ ಆಯ್ಕೆಯಾಗಿರುವ 13 ಸ್ಥಾನಗಳ ಜೊತೆಗೆ ಖಚಿತವಾಗಿರುವ ಸ್ಥಾನಗಳೆಂದರೆ ಮಹಾರಾಷ್ಟ್ರದಿಂದ 2, ಕರ್ನಾಟಕದಿಂದ 2, ರಾಜಸ್ಥಾನ ಹಾಗೂ ಹರ್ಯಾಣಗಳಿಂದ ತಲಾ ಒಂದು ಹೀಗೆ ಒಟ್ಟು ಆರು ಸ್ಥಾನಗಳು. ಹೀಗೆ ಒಟ್ಟು 19 ಸ್ಥಾನಗಳನ್ನು ಖಚಿತಪಡಿಸಿಕೊಂಡಂತಾಗುತ್ತದೆ. ಇನ್ನು ವ್ಯಾಪಾರ ಕುದುರಿದರೆ ಇನ್ನೊಂದೋ ಎರಡೋ ಸೀಟು ಗಳಿಸಬಹುದು. ಆದರೂ ಹಿಂದಿನ ಸೀಟುಗಳ ಲೆಕ್ಕಾಚಾರದಲ್ಲಿ ಆರೇಳು ಸೀಟುಗಳ ಖೋತಾ ಬೀಳುವುದು ಕಾಯಂ. ರಾಜ್ಯಸಭೆಯಲ್ಲಿ ತಮಗೆ (ಅಂದರೆ ತಮ್ಮ ಮಿತ್ರರಾದ ಅದಾನಿ, ಅಂಬಾನಿಗಳಿಗೆ ಒಳಗೊಂಡು) ಕಾನೂನುಗಳನ್ನು ಪಾಸು ಮಾಡಿಕೊಳ್ಳಲು ಬಿಜೆಪಿಯ ಫ್ರೆಂಡ್ಲಿ ಪಕ್ಷಗಳಾದ ವೈಎಸ್‌ಆರ್ ಕಾಂಗ್ರೆಸ್, ಬಿಜು ಜನತಾದಳ ಮುಂತಾದ ಪಕ್ಷಗಳು ಇದ್ದೇ ಇವೆ. ಆದರೂ ಪರಿಸ್ಥಿತಿ ಅಷ್ಟು ಸಲೀಸಾಗಿಲ್ಲ. ಶಿವಸೇನೆ ಈಗಾಗಲೇ ಎನ್‌ಡಿಎ ಮೈತ್ರಿಯಿಂದ ಹೊರಬಿದ್ದು ಕಾಂಗ್ರೆಸ್-ಎನ್‌ಸಿಪಿಯೊಂದಿಗೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದೆ. ಟಿಆರ್‌ಎಸ್ ಈ ಸದ್ಯ ಬಿಜೆಪಿಯೊಂದಿಗೆ ಸಂಘರ್ಷದ ಹಾದಿಯಲ್ಲಿದೆ. ಜೆಡಿಯುನ ನಿತೀಶ್ ಕುಮಾರ್ ಮತ್ತೆ ಲಲ್ಲೂ ಪಕ್ಷದೊಂದಿಗೆ ಚಕ್ಕಂದ ಶುರುವಿಟ್ಟುಕೊಂಡು ಬಿಜೆಪಿಗೆ ತಲೆನೋವಾಗುತ್ತಿದ್ದಾನೆ. ಒಟ್ಟಾರೆ ಸಾರಾಂಶದಲ್ಲಿ ಹೇಳೋದಾದರೆ ಪ್ರಾದೇಶಿಕ ಪಕ್ಷಗಳು ಹಾಗೂ ಪ್ರಾದೇಶಿಕ ರಾಜಕೀಯ ಬಲಗೊಂಡಂತೆಲ್ಲಾ ತಮ್ಮ ಉಕ್ಕಿನ ಪಾದದಡಿ ಕೇಂದ್ರೀಕೃತ ಆಳ್ವಿಕೆ ಹೇರಬಯಸುವ ನಿರಂಕುಶಾಧಿಕಾರಕ್ಕೆ ಅಂಕುಶ ಬೀಳಲಿದೆ.

ರಾಜ್ಯಸಭೆಯನ್ನು ಸ್ಥಾಪಿಸಿದ್ದರ ಹಿಂದಿನ ಉದ್ದೇಶವೇನು?

ಲೋಕಸಭೆಯಲ್ಲಿ ಬಹುಮತ ಪಡೆದ ಪಕ್ಷವೊಂದು ರಾಜ್ಯಗಳ ಹಿತಾಸಕ್ತಿಯನ್ನು ಕಡೆಗಣಿಸುವ ಅಥವಾ ರಾಜ್ಯಗಳ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುವ ಅಪಾಯವಿರುತ್ತದೆ. ಭಾರತವೆಂಬ ಒಕ್ಕೂಟ ದೇಶದಲ್ಲಿನ ಬಹುಭಾಷೆ, ಬಹು ಸಂಸ್ಕೃತಿಗಳ ವೈವಿಧ್ಯಮಯ ಜನಜೀವನವನ್ನು, ವೈವಿಧ್ಯಮಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯಸಭೆಯನ್ನು ರೂಪಿಸಲಾಗಿದೆ. ಹೆಸರೇ ಸೂಚಿಸುವಂತೆ ಇದು ರಾಜ್ಯಗಳನ್ನು ಪ್ರತಿನಿಧಿಸುವ ಸಭೆ. ಅಂತಲೇ ವಿವಿಧ ರಾಜ್ಯಗಳ ವಿಧಾನಸಭಾ ಸದಸ್ಯರು ಮತ ಚಲಾಯಿಸಿ ರಾಜ್ಯಸಭೆಗೆ ತಮ್ಮ ಪ್ರತಿನಿಧಿಗಳನ್ನು ಕಳಿಸುತ್ತಾರೆ. ಒಂದು ಅಂಶವನ್ನು ನಾವಿಲ್ಲಿ ವಿಶೇಷವಾಗಿ ಗಮನಿಸಬೇಕು. ರಾಜ್ಯಸಭೆ ಪ್ರವೇಶಿಸುವುದು ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಪಕ್ಷವನ್ನು ಪ್ರತಿನಿಧಿಸುವವರು ಮಾತ್ರವಲ್ಲ; ವಿರೋಧ ಪಕ್ಷದ ಸದಸ್ಯರೂ ಕೂಡ ತಮ್ಮ ಸಂಖ್ಯಾಬಲಕ್ಕೆ ಅನುಗುಣವಾಗಿ ರಾಜ್ಯಸಭೆಯಲ್ಲಿ ಪ್ರತಿನಿಧಿತ್ವ ಹೊಂದಿರುತ್ತಾರೆ. ಇದು ಪ್ರಜಾತಂತ್ರದ ಸೌಂದರ್ಯ. ಇದು ನಮ್ಮ ಸಂವಿಧಾನದ ಶಕ್ತಿ. ಇಂತಹ ಸಂವಿಧಾನದ ಶಿಲ್ಪಿಗೆ ಮನದಾಳದ ಸಲಾಂ.

ಒಟ್ಟು 245 ಸದಸ್ಯ ಬಲದ ರಾಜ್ಯಸಭೆಗೆ 233 ಮಂದಿ ನೇರವಾಗಿ ರಾಜ್ಯಗಳಿಂದ ಆರಿಸಿ ಬರುತ್ತಾರೆ. ಹಾಗೆಯೇ ವಿಜ್ಞಾನ, ಸಾಹಿತ್ಯ, ಶಿಕ್ಷಣ ಮುಂತಾದ ಕ್ಷೇತ್ರಗಳ ಅನುಭವಿ ತಜ್ಞರನ್ನು ಗುರುತಿಸಿ ಉಳಿದ 12 ಸ್ಥಾನಗಳಿಗೆ ರಾಷ್ಟ್ರಪತಿಯವರು ನೇರವಾಗಿ ನಾಮಾಂಕಿತ ಮಾಡುವ ವ್ಯವಸ್ಥೆ ಇದೆ. ಲೋಕಸಭೆ ಪಾಸು ಮಾಡಿದ ಯಾವುದೇ ಮಸೂದೆ ರಾಜ್ಯಸಭೆಯಲ್ಲಿ ಚರ್ಚೆಗೊಳಪಟ್ಟು ಅಂಗೀಕಾರವಾಗಲೇಬೇಕು. ರಾಜ್ಯಸಭೆಯಿಂದ ತಿರಸ್ಕೃತಗೊಂಡ ಯಾವುದೇ ಮಸೂದೆ ಪುನರ್‌ಪರಿಶೀಲನೆಗೆ ಒಳಪಡಬೇಕು ಇಲ್ಲವೇ ಕಸದ ಬುಟ್ಟಿಗೆ ಸೇರಬೇಕು. ಇದು ರಾಜ್ಯಸಭೆಯ ಮಹತ್ವ. ಅಂದರೆ ನಮ್ಮ ಸಂವಿಧಾನವು ರಾಜ್ಯಗಳಿಗೆ ನೀಡಿರುವ ಸ್ಥಾನಮಾನ ಅದು.

——————————————————————————————–

ಇದನ್ನೂ ಓದಿ: ಒಳಗೊಳ್ಳದ ಮಾದರಿಯ ಸರ್ಕಾರಕ್ಕೆ ವಿದೇಶದಿಂದ ಬಂದೊದಗಿದ ಘಾಸಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...