Homeಪುಸ್ತಕ ವಿಮರ್ಶೆಮೋಟಮ್ಮನವರ ಆತ್ಮಕಥನ ’ಬಿದಿರು ನೀನ್ಯಾರಿಗಲ್ಲದವಳು’ವಿನಿಂದ ಆಯ್ದ ಭಾಗ; ಇಂದಿರಾಜಿಗೆ ಮರುಹುಟ್ಟು

ಮೋಟಮ್ಮನವರ ಆತ್ಮಕಥನ ’ಬಿದಿರು ನೀನ್ಯಾರಿಗಲ್ಲದವಳು’ವಿನಿಂದ ಆಯ್ದ ಭಾಗ; ಇಂದಿರಾಜಿಗೆ ಮರುಹುಟ್ಟು

- Advertisement -
- Advertisement -

1978ರ ಫೆಬ್ರವರಿಯಲ್ಲಿ ವಿಧಾನಸಭೆಗೆ ಚುನಾವಣೆ ನಡೆದು, ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಕಾಂಗ್ರೆಸ್ (ಐ) ಪಕ್ಷವು ಜಯಭೇರಿ ಬಾರಿಸಿತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕರ್ನಾಟಕದ ಜನತೆ ಮತ್ತೊಮ್ಮೆ ಇಂದಿರಾ ಕಾಂಗ್ರೆಸ್‌ಗೆ ಭಾರಿ ಬಹುಮತ ನೀಡಿ ಮತ್ತೆ ಅಧಿಕಾರಕ್ಕೆ ತಂದರು.

ನಾನು ವಿಧಾನಸಭೆಗೆ ಆಯ್ಕೆಯಾದಾಗ ಒಬ್ಬ ಕಾಲೇಜು ಹುಡುಗಿಯಂತೆ ಇದ್ದೆ. ಅಂದರೆ ಆಗ ನನಗೆ ಕೇವಲ 26 ವರ್ಷ ವಯಸ್ಸು. ಇಷ್ಟು ಸಣ್ಣ ವಯಸ್ಸಿಗೇ ವಿಧಾನಸಭೆಯ ಸದಸ್ಯೆಯಾದುದು ನನ್ನ ಸುದೈವವೇ ಎನ್ನಬೇಕು. ಚುನಾವಣೆ ಮುಗಿದು, ಶಾಸಕಾಂಗ ಪಕ್ಷದ ನಾಯಕರನ್ನು ಆಯ್ಕೆ ಮಾಡಿಯಾಯಿತು. ಮರುದಿನವೇ ದೇವರಾಜ್ ಅರಸು ಅವರು ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಅಧಿಕಾರ ಸ್ವೀಕಾರ ಮಾಡಿದರು. ನನಗೆ ಶಾಸಕರ ಭವನದಲ್ಲಿ ಕೊಠಡಿಯನ್ನು ಅಲಾಟ್ ಮಾಡಿದರು. ಕೂಡಲೇ ಬೆಂಗಳೂರಿನಲ್ಲಿ ಎಲ್ಲಿ ಇರುವುದು ಎಂಬ ನನ್ನ ಸಮಸ್ಯೆ ಬಗೆಹರಿಯಿತು. ಆದರೆ, ನಾನು ಒಬ್ಬಳೇ ಅಲ್ಲಿ ಇರಲು ಮನಸ್ಸಾಗಲಿಲ್ಲ. ಯಾಕೆಂದರೆ, ನಾನು ಆಗ ಅವಿವಾಹಿತೆಯಾಗಿದ್ದೆ ಮತ್ತು ರಾಜಕಾರಣದ ತೊಟ್ಟಿಲಲ್ಲಿ ಆಗತಾನೆ ಕಣ್ಣು ಬಿಟ್ಟಿದ್ದೆ. ಹೀಗಾಗಿ ಏನೂ ಗೊತ್ತಿರಲಿಲ್ಲ. ಆದ್ದರಿಂದ ಸ್ವಲ್ಪ ಚಿಂತೆಯಾಯಿತು.

ಹೀಗೆ ಯೋಚಿಸುತ್ತಿರಬೇಕಾದರೆ, ಸಾಗರದ ಕೆ. ಅನ್ನಪೂರ್ಣ ಎಂಬ ಹೆಸರಿನ ನನ್ನ ಸ್ನೇಹಿತೆಯೊಬ್ಬಳ ಹೆಸರು ನೆನಪಾಯಿತು. ಅವಳು ಬೆಂಗಳೂರಿನಲ್ಲಿಯೇ ಕೆಲಸ ಮಾಡುತ್ತಿದ್ದಳು. ನಾನು ಮತ್ತು ಅನ್ನಪೂರ್ಣ ಎಂ.ಎ. ಓದುವಾಗ ಸಹಪಾಠಿಗಳಾಗಿದ್ದೆವು. ಓದಿದ ಮೇಲೆ ಆಕೆ ಬೆಂಗಳೂರಿನಲ್ಲಿಯೇ ಕೆಲಸಕ್ಕೆ ಸೇರಿಕೊಂಡಿದ್ದಳು. ಅವಳು ಗಾಂಧಿಬಜಾರಿನ ಶಾರದಾ ಹಾಸ್ಟೆಲ್‌ನಲ್ಲಿ ಪೇಯಿಂಗ್ ಗೆಸ್ಟಾಗಿ ಇದ್ದಳು. ಅವಳಿಗೆ ಕರೆದು, ನನ್ನ ಜೊತೆ ಶಾಸಕರ ಭವನದಲ್ಲಿ ಬಂದು ಇರುವಂತೆ ನಾನು ಮನವಿ ಮಾಡಿದೆ. ಆಕೆ ಒಪ್ಪಿಕೊಂಡು ನನ್ನ ಜೊತೆಗಿದ್ದಳು. ಅವಳಿಂದಾಗಿ ನನಗೆ ಎಷ್ಟೋ ಸಹಾಯವಾಯಿತು. ಆಕೆ ಬಂದಿರದೇ ಇದ್ದಿದ್ದರೆ ನಾನು ಶಾಸಕರ ಭವನದಲ್ಲಿ ಇರುತ್ತಲೇ ಇರಲಿಲ್ಲ. ನಾನು ಸ್ನೇಹಿತೆಯ ಮನೆಗೋಗಿ ಇದ್ದುಬಿಡೋಣ ಅಂತ ಯೋಚನೆ ಮಾಡಿದ್ದೆ. ಆದರೆ, ಪುಣ್ಯಕ್ಕೆ ಅನ್ನಪೂರ್ಣ ಬಂದುದರಿಂದ ನಿರಾಳವಾಯಿತು.

ಕೆಲವು ದಿನಗಳಲ್ಲೇ ಶ್ರೀಮತಿ ನಾಗಮ್ಮ ಕೇಶವಮೂರ್ತಿ ಅವರ ಪರಿಚಯವಾಯಿತು. ಎಚ್.ಡಿ. ಕೋಟೆಯ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿ ಬಂದಿದ್ದ ಶ್ರೀಮತಿ ಸುಶೀಲಾ ಚೆಲುವರಾಜ್ ಎಂಬುವರದ್ದೂ ಪರಿಚಯವಾಯಿತು. ಶ್ರೀಮತಿ ನಾಗಮ್ಮ ಕೇಶವಮೂರ್ತಿ ಮತ್ತು ಶ್ರೀಮತಿ ಸುಶೀಲಾ ಚೆಲುವರಾಜ್ ಅವರೊಂದಿಗೆ ನಾನು ವಿಧಾನಸೌಧಕ್ಕೆ ಹೋಗುತ್ತಿದ್ದೆ. ಜೊತೆಗೆ ಶಾಸಕರ ಭವನದಲ್ಲಿ ಅನ್ನಪೂರ್ಣ ಇದ್ದಳು. ಅದಲ್ಲದೇ ಒಬ್ಬಳು ಸರ್ವೆಂಟ್ ಕೂಡ ಇದ್ದುದರಿಂದ ನಮಗೆ ಊಟ-ತಿಂಡಿಗೇನೂ ತೊಂದರೆಯಾಗುತ್ತಿರಲಿಲ್ಲ. ನಮಗೆ ಸಹಾಯಕಿಯಾಗಿದ್ದವಳು ನಮಗೆ ಬೇಕಾದಂಥ ಆಹಾರ ಸಿದ್ಧಪಡಿಸಿ ಕೊಡುತ್ತಿದ್ದುದರಿಂದ ಯಾವ ತೊಂದರೆಯೂ ಇರುತ್ತಿರಲಿಲ್ಲ.

*****

1977ರಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲಿ ದೇಶದಾದ್ಯಂತ ಕಾಂಗ್ರೆಸ್ ಸೋತು ಹೋಗಿತ್ತು
(ಆದರೆ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ 26 ಸ್ಥಾನಗಳನ್ನು ಗೆದ್ದಿತ್ತು). ಲೋಕಸಭೆಯಲ್ಲಿ ಕಾಂಗ್ರೆಸ್‌ನ ಸಂಖ್ಯಾಬಲ 200ಕ್ಕಿಂತಲೂ ಕಡಿಮೆಯಾಗಿತ್ತು. ತುರ್ತು ಪರಿಸ್ಥಿತಿ ಹೇರಿದ್ದರಿಂದ ಕಾಂಗ್ರೆಸ್‌ಗೆ 200ಕ್ಕಿಂತಲೂ ಕಡಿಮೆ ಲೋಕಸಭಾ ಸ್ಥಾನಗಳು ಸಿಕ್ಕಿದ್ದರಿಂದ ಅಧಿಕಾರ ಕಳೆದುಕೊಳ್ಳಬೇಕಾಯಿತು. ರಾಯ್‌ಬರೇಲಿಯಲ್ಲಿ ಚುನಾವಣೆಗೆ ನಿಂತಿದ್ದ ಇಂದಿರಾ ಗಾಂಧಿಯವರು ಜನತಾ ಪಕ್ಷದ ರಾಜ್ ನಾರಾಯಣ್ ಅವರಿಗೆ 1977ರಲ್ಲಿ ಸೋತುಹೋದರು. ಅಮೇಥಿಯಿಂದ ಚುನಾವಣಾ ಕಣಕ್ಕಿಳಿದಿದ್ದ ಸಂಜಯ್ ಗಾಂಧಿ ಕೂಡ ಸೋತುಹೋದರು. ತಾಯಿ ಮಗ ಇಬ್ಬರೂ ಲೋಕಸಭೆಯಿಂದ ಹೊರಗುಳಿಯಬೇಕಾಯಿತು.

ಇಂಥ ಸಂದರ್ಭದಲ್ಲಿ ಇಂದಿರಾ ಗಾಂಧಿಯವರಿಗೆ ಮತ್ತೊಮ್ಮೆ ಲೋಕಸಭೆ ಪ್ರವೇಶ ಮಾಡುವುದು ಅನಿವಾರ್ಯವಾಗಿತ್ತು. ಅದಕ್ಕಾಗಿ ಅವರು ಯಾವುದಾದರೂ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಗೆದ್ದು ಲೋಕಸಭೆ ಪ್ರವೇಶ ಮಾಡಬೇಕಾಗಿತ್ತು. ಆಗ ದೇವರಾಜ್ ಅರಸು ಅವರು ಇಂದಿರಾ ಗಾಂಧಿಯವರನ್ನು ಕರ್ನಾಟಕಕ್ಕೆ ಬನ್ನಿ, ನಿಮ್ಮನ್ನು ಗೆಲ್ಲಿಸಿ, ಲೋಕಸಭೆಗೆ ಕಳುಹಿಸುತ್ತೇವೆ ಎಂದು ಆಹ್ವಾನ ನೀಡಿದರು. ಜೊತೆಗೆ ಅವರನ್ನು ಕೋಲಾರ ಜಿಲ್ಲೆಯಿಂದ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಮಾಡಿ, ಗೆಲ್ಲಿಸಿ ಕಳುಹಿಸಬೇಕು ಎಂದು ಯೋಜಿಸಲಾಗಿತ್ತು. ಆಗ ಕೋಲಾರದಿಂದ ಜಿ.ವೈ. ಕೃಷ್ಣನ್ ಗೆದ್ದಿದ್ದರು. ಆಮೇಲೆ ಬೆಂಗಳೂರು ಉತ್ತರ ಕ್ಷೇತ್ರದಿಂದ ನಿಂತ್ಕೋತ್ತಾರೆ ಅಂತಲೂ ಸುದ್ದಿ ಆಯಿತು. ಆದರೆ, ಅದು ಸೇಫ್ ಅಲ್ಲ ಅಂತಂದು, ಕೊನೆಗೆ ಚಿಕ್ಕಮಗಳೂರಿಗೆ ಬಂದು ಚುನಾವಣೆಗೆ ಸ್ಪರ್ಧಿಸುವಂತೆ ದೇವರಾಜ್ ಅರಸು ಅವರು ಒತ್ತಾಯಿಸಿದರು. ಅವರ ಒತ್ತಾಯದ ಮೇರೆಗೆ ಇಂದಿರಾ ಗಾಂಧಿಯವರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಮಾಡಿದರು. ಯಾಕೆಂದರೆ, ಚಿಕ್ಕಮಗಳೂರು ಕಾಂಗ್ರೆಸ್‌ಗೆ ತುಂಬ ಪ್ರಶಸ್ತವಾದ ಜಾಗ. 1978ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಎಲ್ಲ ಆರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆದ್ದಿದ್ದರು. ಹೀಗಾಗಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಮರುಚುನಾವಣೆ ನಡೆದರೆ, ಅಲ್ಲಿ ಇಂದಿರಾ ಗಾಂಧಿಯವರು ಆಯ್ಕೆಯಾಗುವುದು ಖಚಿತವಾಗಿತ್ತು. ಈ ಕಾರಣದಿಂದ ಅವರಿಗೆ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯಿಸಲಾಗಿತ್ತು.

1977ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಡಿ.ಬಿ. ಚಂದ್ರೇಗೌಡರು ಎರಡನೇ ಬಾರಿಗೆ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ದೇವರಾಜ್ ಅರಸು ಅವರ ಸಲಹೆಯ ಮೇರೆಗೆ ಹಾಗೂ ಇಂದಿರಾ ಅವರ ಮೇಲಿಟ್ಟಿದ್ದ ನಂಬಿಕೆ ಮತ್ತು ವಿಶ್ವಾಸದ ಕಾರಣ ಚಂದ್ರೇಗೌಡರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಇಂದಿರಾ ಗಾಂಧಿಯವರಿಗೆ ಚುನಾವಣೆಗೆ ನಿಲ್ಲಲು ಅವಕಾಶ ಮಾಡಿಕೊಟ್ಟರು. ಹೀಗೆ ಚಂದ್ರೇಗೌಡರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಇಂದಿರಾ ಅವರಿಗೆ ಮರು ಆಯ್ಕೆಯಾಗಲು ಅವಕಾಶ ಮಾಡಿಕೊಟ್ಟದ್ದು ಭಾರತದ ರಾಜಕೀಯ ಇತಿಹಾಸದಲ್ಲಿಯೇ ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ.

ಹೀಗಿರಬೇಕಾದರೆ, 1978ರಲ್ಲಿ ಯಾವುದೋ ಒಂದು ದಿನ ಇಂದಿರಾ ಗಾಂಧಿಯವರು ಚಿಕ್ಕಮಗಳೂರಿಗೆ ಬಂದು ತಮ್ಮ ನಾಮಪತ್ರ ಸಲ್ಲಿಸಿದರು. ಆಗೆಲ್ಲ ನನಗೆ ಮುಖಂಡರ ಹಿಂದೆ ಹೋಗಬೇಕು, ನಾಮಪತ್ರ ಸಲ್ಲಿಸುವಾಗ ಅವರೊಂದಿಗೆ ಇರಬೇಕು, ಪಕ್ಷದ ನಾಯಕರೊಂದಿಗೆ ಓಡಾಡಬೇಕು, ಫೋಟೊ ತೆಗೆಸಿಕೊಳ್ಳಬೇಕು, ಪ್ರಚಾರ ಗಿಟ್ಟಿಸಿಕೊಳ್ಳಬೇಕು- ಎಂಬೆಲ್ಲ ತಿಳಿವಳಿಕೆ ಇರಲಿಲ್ಲ. ಹೀಗಾಗಿ ಅವರು ಯಾವಾಗ ನಾಮಪತ್ರ ಸಲ್ಲಿಸಿದರು, ನಾಮಪತ್ರ ಸಲ್ಲಿಸುವಾಗ ಯಾವೆಲ್ಲ ನಾಯಕರು ಜೊತೆಯಲ್ಲಿದ್ದರು, ಎಷ್ಟು ಜನ ಸೇರಿದ್ದರು ಎಂಬುದೆಲ್ಲ ನನಗೆ ಗೊತ್ತಿಲ್ಲ. ಆಗ ನಾಮಪತ್ರ ಸಲ್ಲಿಸೋದು ಅಂಥ ದೊಡ್ಡ ವಿಚಾರವಾಗಿರಲಿಲ್ಲ. ಈವಾಗ್ಲೇ, ನಾಮಪತ್ರ ಸಲ್ಲಿಸ್ತಾರೆ ಅಂತಂದ್ರೆ ದೊಡ್ಡ ಭಾಜಾ ಭಜಂತ್ರಿ ಜಾಸ್ತಿ. 1978ರಲ್ಲಿ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾವು ಹೋಗಿದ್ದು ಕೇವಲ ಐದು ಜನರು ಮಾತ್ರ. ಆದರೆ, ಈಗ ಮೆರವಣಿಗೆ ಮಾಡೋದೇನು? ಜನರನ್ನು ಸೇರಿಸೋದೇನು- ಭಾರಿ ಬದಲಾವಣೆ ಆಗಿದೆ. ಆದರೆ, ಚುನಾವಣೆ ಫಲಿತಾಂಶ ಬಂದಾಗ ಮಾತ್ರ ಎಲ್ಲವೂ ಉಲ್ಟಾ ಆಗಿರುತ್ತೆ. ನಾಮಿನೇಷನ್ ಫೈಲ್ ಮಾಡಲು ಹೋದಾಗ ಭಾರಿ ಸಂಖ್ಯೆಯಲ್ಲಿ ಜನರನ್ನು ಕರೆದುಕೊಂಡು ಹೋದವರು ಸೋತಿರುತ್ತಾರೆ. ಕೆಲವೇ ಜನರನ್ನು ಕರೆದುಕೊಂಡು ಹೋದವರು ಗೆದ್ದಿರುತ್ತಾರೆ. ಹೀಗೂ ಆಗಿರುವ ಬೇಕಾದಷ್ಟು ಪ್ರಸಂಗಗಳಿವೆ.

ಚುನಾವಣೆಗೆ ನಾಮಪತ್ರ ಸಲ್ಲಿಸುವುದಕ್ಕಿಂತಲೂ ಮೊದಲು ಇಂದಿರಾ ಗಾಂಧಿಯವರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು ಒಂದು ಸಲ ಪ್ರವಾಸ ಬಂದರು. ಆಮೇಲೆ ಚುನಾವಣೆ ಘೋಷಣೆಯಾಯಿತು. ಕೇಂದ್ರದಲ್ಲಿ ಪ್ರಧಾನಿಯಾಗಿ ಚರಣ್ ಸಿಂಗ್ ಇದ್ದರು. ಇಂದಿರಾ ಅವರು ಪ್ರಚಾರಕ್ಕೋಸ್ಕರ ದೆಹಲಿಯಿಂದ ಮಂಗಳೂರುವರೆಗೂ ವಿಮಾನದಲ್ಲಿ ಬಂದು ಮಂಗಳೂರು ವಿಮಾನ ನಿಲ್ದಾಣದಲ್ಲಿಳಿದರು. ಅಲ್ಲಿಂದ ಕಾರ್ಕಳದ ಮೇಲೆ ಹಾಯ್ದು ಕುದುರೆಮುಖ ಮೂಲಕ ಮೂಡಿಗೆರೆ ತಾಲ್ಲೂಕಿನ ಕಳಸದ ಸಂಸೆ ಗ್ರಾಮಕ್ಕೆ ಬಂದರು. ಅವರು ಬಂದಾಗ ಮಧ್ಯರಾತ್ರಿಯಾಗಿತ್ತು. ನಾವೆಲ್ಲರೂ ಕೊರೆಯೊ ಚಳಿಯಲ್ಲಿ ಅವರಿಗಾಗಿ ಕಾಯುತ್ತ ಸಂಸೆಯಲ್ಲಿ ನಿಂತಿದ್ದೆವು. ಜೊತೆಗೆ ಸಣ್ಣದಾಗಿ ಮಳೆ ಬೇರೆ ಬರುತ್ತಿತ್ತು. ಆಗ ಇಂದಿರಾ ಗಾಂಧಿಯವರ ಜೀವಕ್ಕೆ ಅಪಾಯ ಇದೆ ಅಂತ ಒಂದು ಸುದ್ದಿಯಿತ್ತು. ಯಾಕೆಂದರೆ, ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅವರ ಮೇಲೆ ಅನೇಕರಿಗೆ ರೋಷವಿತ್ತು ಅಂತ ಹೇಳುತ್ತಿದ್ದರು. ಅವರ ಜೀವಕ್ಕೆ ಅಪಾಯ ಇದೆ ಎಂಬ ಕಾರಣದಿಂದಾಗಿ ಅವರಿಗೆ ಕೊಡುವ ಆಹಾರವನ್ನು ಕೂಡ ಪರೀಕ್ಷೆ ಮಾಡಿ ಕೊಡುತ್ತಿದ್ದರು.

ಅವರು ಸಂಸೆಗೆ ಬಂದಾಗ ಅಲ್ಲೊಂದು ವಿಚಿತ್ರ ಘಟನೆ ನಡೆಯಿತು. ಮಧ್ಯರಾತ್ರಿಯ ಹೊತ್ತಿನಲ್ಲಿ ಒಬ್ಬ ಸ್ವಾಮೀಜಿ ಥರದ ವ್ಯಕ್ತಿ ಕೇಸರಿ ಬಟ್ಟೆ ಧರಿಸಿಕೊಂಡು, ಕೈಯಲ್ಲಿ ಕೇಸರಿ ಬಾವುಟ ಹಿಡಿದುಕೊಂಡು, ಹಣೆಗೆ, ಮೈ-ಕೈಗೆಲ್ಲ ಗಂಧ-ವಿಭೂತಿ-ತಿಲಕ ಬಳಿದುಕೊಂಡು ಓಡಾಡುತ್ತಿದ್ದ. ಎಲ್ಲರದ್ದೂ ಆತನ ಮೇಲೆಯೇ ಸಂಶಯ. ಯಾರೀತ? ಎಲ್ಲಿಂದ ಬಂದ? ಯಾಕೆ ಬಂದ? ಅಂತೆಲ್ಲ ಮಾತಾಡಿಕೊಂಡರು. ಸ್ವಲ್ಪ ಹೊತ್ತು ನೋಡಿದ ಪೊಲೀಸರು ಅವನನ್ನು ಎಲ್ಲಿಗೋ ಕರೆದುಕೊಂಡುಹೋದರು. ಎಲ್ಲಿಗೇಂತ ಗೊತ್ತಿಲ್ಲ. ಕುದುರೆಮುಖ ಗೆಸ್ಟ್‌ಹೌಸ್‌ನಲ್ಲಿ ಇಳಿದುಕೊಳ್ಳಲು ಅವಕಾಶ ಮಾಡಿಕೊಡಿ ಅಂತ ಕೇಳಿದ್ದರು. ಆದರೆ, ಕೇಂದ್ರ ಸರ್ಕಾರದ ಪರವಾನಗಿ ಸಿಗಲಿಲ್ಲ. ಹೀಗಾಗಿ ಆ ಸಂದರ್ಭದಲ್ಲಿ ಕೂಡಲೇ ಅವರನ್ನು ಎಲ್ಲಿ ವಾಸ್ತವ್ಯ ಮಾಡಿಸುವುದು ಅನ್ನೋ ಪ್ರಶ್ನೆ ಬಂದಿತು. ಆಗ ಸಂಸೆಯ ಅರಣ್ಯ ಇಲಾಖೆ ವಸತಿ ಗೃಹದಲ್ಲಿ ಉಳಿಸುವುದು ಅಂತ ತೀರ್ಮಾನಿಸಿದರು. ಅದೊಂದು ಅರಣ್ಯ ಇಲಾಖೆಯ ಸಾಮಾನ್ಯ ಗೆಸ್ಟ್‌ಹೌಸ್. ಅದನ್ನೇ ಸಿದ್ಧಮಾಡಬೇಕು ಅಂತ ತೀರ್ಮಾನ ಮಾಡಿದರು. ರಾತ್ರೋರಾತ್ರಿ ಕೆಲವು ಬೆಡ್‌ಶೀಟ್, ದಿಂಬು, ಸೋಫಾ ಸೆಟ್ಟು, ಟೇಬಲ್ ಇತ್ಯಾದಿ ತಂದುಹಾಕಿ ಸಿದ್ಧಪಡಿಸಿದರು. ಇಷ್ಟೊಂದು ಸಿದ್ಧತೆ ನಡೆದಿರುವ ವಿಚಾರ ನನಗೆ ಗೊತ್ತಿರಲಿಲ್ಲ. ನನಗೆ ಆಗ ಚಂದ್ರೇಗೌಡರು ಏನು ಹೇಳ್ತಾರೋ ಅದನ್ನು ಕೇಳುವುದಷ್ಟೇ ಗೊತ್ತಿತ್ತು. ನಾನೇ ನಾನಾಗಿ ತೀರ್ಮಾನ ತೆಗೆದುಕೊಳ್ಳುವುದಾಗಲೀ, ಮುನ್ನುಗ್ಗಿ ಕೆಲಸ ಮಾಡುವುದಾಗಲೀ ನನಗೆ ತಿಳಿಯದು. ಹೀಗಾಗಿ ಈ ಸಿದ್ಧತೆಗಳಾವವೂ ನನ್ನ ಗಮನಕ್ಕೆ ಬಂದಿರಲಿಲ್ಲ.

ಅಲ್ಲಿಂದ ಸಂಸೆ ಗೆಸ್ಟ್‌ಹೌಸಿಗೆ ಇಂದಿರಾ ಅವರನ್ನು ಕರೆದುಕೊಂಡು ಬಂದರು. ಅದು ರಸ್ತೆಯಿಂದ ಬಹಳ ಎತ್ತರದ ಜಾಗದಲ್ಲಿತ್ತು. ಅವರು ಕಾರಿನಲ್ಲಿ ಹೊರಟಿದ್ದರು. ಆದರೆ, ಅಲ್ಲಿ ಜಿಟಿಜಿಟಿ ಮಳೆ ಸುರಿಯುತ್ತಿತ್ತು. ರಸ್ತೆಯಲ್ಲ ಕೊಚ್ಚಿಹೋಗಿತ್ತು. ಕೆಲವೆಡೆ ರಸ್ತೆಯಲ್ಲೆಲ್ಲ ಕೆಸರು ತುಂಬಿಕೊಂಡಿತ್ತು. ಕೆಸರುಮಯವಾದ ಆ ಏರು ರಸ್ತೆಯಲ್ಲಿ ಕಾರು ಓಡುವುದು ಕಷ್ಟವಾಯಿತು. ಕೂಡಲೇ ಅರಣ್ಯ ಇಲಾಖೆಯ ಒಂದು ಜೀಪ್ ತರಿಸಿದರು. ಇಂದಿರಾ ಅವರು ಜೀಪ್ ಏರಿದರು. ಅವರ ಹಿಂದಿನ ಸೀಟಿನಲ್ಲಿ ಡಿ.ಬಿ. ಚಂದ್ರೇಗೌಡರು ಕುಳಿತರು. ನಾನು ಮತ್ತು ತಾರಾದೇವಿ ಜೀಪು ಹತ್ತಿದೆವು. ಜೀಪು ಗಡಗಡ ಸದ್ದು ಮಾಡುತ್ತಾ ಹೊರಟಿತು. ಆದರೆ, ಆ ಜೀಪು ಅರಣ್ಯದ ಏರು-ಇಳುವಿನ ರಸ್ತೆಯನ್ನು ಹತ್ತುತ್ತೋ ಇಲ್ಲವೋ ಎಂಬ ಅನುಮಾನ ಕಾಡತೊಡಗಿತು. ಯಾಕೆಂದರೆ ಕೆಲವು ಕಡೆಗಳಲ್ಲಿ ಜೀಪಿನ ಹಿಂಬದಿಯ ಟೈರುಗಳು ಕೆಸರಲ್ಲಿ ಸಿಕ್ಕಿಕೊಂಡು ಗರಗರ ತಿರುಗುತ್ತಿದ್ದುವೇ ಹೊರತು ಮುಂದೆ ಹೋಗುತ್ತಿರಲಿಲ್ಲ. ಇದೊಳ್ಳೆ ಫಜೀತಿಯಾಯ್ತಲ್ಲ ಅಂದುಕೊಳ್ಳುವಂತಾಯಿತು. ಆದರೆ, ಜೀಪು ಬಲು ಗಟ್ಟಿಯಾಗಿತ್ತು. ಅದಕ್ಕೆ ಫೋರ್ ವೀಲರ್ ಜೀಪ್ ಎಂದೇ ಕರೆಯುತ್ತಿದ್ದರು. ಜೊತೆಗೆ ಆ ಡ್ರೈವರ್ ಬಲು ಗಟ್ಟಿಗನಾಗಿದ್ದ. ಏನೇನೋ ಮಾಡಿ ಜೀಪನ್ನು ಸುರಕ್ಷಿತವಾಗಿ ಸಂಸೆಯ ಗೆಸ್ಟ್‌ಹೌಸಿಗೆ ತೆಗೆದುಕೊಂಡು ಹೋದ.

ಆದರೆ, ಇಂದಿರಾ ಗಾಂಧಿಯವರ ಮುಖದಲ್ಲಿ ಯಾವುದೇ ಆತಂಕ ಇರಲಿಲ್ಲ. ಅವರು ಅದನ್ನೊಂದು ಹೊಸ ಅನುಭವ ಎಂದೇ ಸ್ವೀಕರಿಸಿದರು. ನಾವು ಇಂದಿರಾ ಗಾಂಧಿಯವರನ್ನು ಸಂಸೆಯ ಗೆಸ್ಟ್‌ಹೌಸಿನಲ್ಲಿ ಬಿಟ್ಟು ಮರಳಿ ಕಳಸಕ್ಕೆ ಹೋಗಿ ಅಲ್ಲಿಯೇ ಉಳಿದುಕೊಂಡೆವು. ಮರುದಿನದಿಂದ ಚುನಾವಣಾ ಪ್ರಚಾರ ಪ್ರಾರಂಭವಾಯಿತು. ಮರುದಿನದಿಂದ ಎಲ್ಲಿಂದ ಅವರು ಚುನಾವಣಾ ಪ್ರಚಾರ ಶುರು ಮಾಡಿದರು ಎಂಬುದು ನನಗೆ ನೆನಪಿಲ್ಲ.

ಮೂಡಿಗೆರೆ ಕ್ಷೇತ್ರದಲ್ಲಿ ಮೂರು ದಿನಗಳ ಕಾಲ ಚುನಾವಣಾ ಪ್ರಚಾರ ಮಾಡಲು ಬರುತ್ತಾರೆ ಎಂದು ನನಗೆ ಹೇಳಿದ್ದರು. ಅಂದರೆ, ಮೂರು ದಿನಗಳ ಕಾಲ ನನ್ನ ಕ್ಷೇತ್ರದಲ್ಲಿ ಇಂದಿರಾ ಗಾಂಧಿಯವರಿಂದ ಚುನಾವಣಾ ಪ್ರಚಾರ. ಈ ಮೂರು ದಿನಗಳ ಪ್ರವಾಸದಲ್ಲಿ ಎರಡು ದಿನಗಳ ಕಾಲ ಮಾಕೋನಹಳ್ಳಿಯಲ್ಲಿ ಡಿ.ಎಂ. ಪುಟ್ಟೇಗೌಡರ ಮನೆಯಲ್ಲಿ ವಾಸ್ತವ್ಯ ಹೂಡಿದರು. ಕಡೂರು ತರೀಕೆರೆಗಳಿಗೆ ಹೋಗಿ ಅಲ್ಲಿಯೂ ರಾತ್ರಿ 12ರವರೆಗೂ ಚುನಾವಣಾ ಪ್ರಚಾರ ಕೈಗೊಂಡು, ನಂತರ ಅಲ್ಲಿಂದ ಪುಟ್ಟೇಗೌಡರ ಮನೆಗೆ ಬಂದು ವಾಸ್ತವ್ಯ ಮಾಡುತ್ತಿದ್ದರು.

ಮೊದಲ ದಿನ ಪ್ರಚಾರ ಮುಗಿಸಿಕೊಂಡು ರಾತ್ರಿ 12ರ ಸುಮಾರಿಗೆ ಇಂದಿರಾ ಅವರು ಪುಟ್ಟೇಗೌಡರ ಮನೆಗೆ ಬಂದರು. ಆಗ ಅವರನ್ನು ಪುಟ್ಟೇಗೌಡರ ಮನೆಗೆ ಬಿಟ್ಟು ಬರಲಿಕ್ಕೇಂತ ನಾವೂ ಕೂಡ ಹೋದೆವು. ಇಂದಿರಾ ಅವರು ಕಾರಿಂದ ಇಳಿಯಬೇಕಾದರೆ ಅವರು ತಮ್ಮ ಕೈಯಲ್ಲೊಂದು ಟಾರ್ಚ್ ಹಿಡಿದುಕೊಂಡಿದ್ದರು. ಎಲ್ಲಾದರೂ ಬೆಳಕಿಲ್ಲದ ಜಾಗದಲ್ಲಿ ಓಡಾಡಲು ಅನುಕೂಲವಾಗಲಿ ಅಂತ ಅವರ ಕೈಗೊಂದು ದೊಡ್ಡ ಟಾರ್ಚ್ ಕೊಟ್ಟಿದ್ದರು. ಪುಟ್ಟೇಗೌಡರ ಮನೆಯ ಮುಂದೆ ದೊಡ್ಡದಾದ ಅಂಗಳವಿತ್ತು. ಅಂಗಳದ ತುಂಬೆಲ್ಲಾ ಜನರು ಇವರನ್ನು ನೋಡುವುದಕ್ಕಾಗಿ ಆ ರಾತ್ರಿ ಹೊತ್ತಿನಲ್ಲಿಯೂ ಕಾಯ್ದುಕೊಂಡು ನಿಂತಿದ್ದರು. ಸುತ್ತಮುತ್ತಲಿನ ಹಳ್ಳಿಗಳಿಂದಲೂ ಜನರು ಬಂದಿದ್ದರು. ಹೀಗೆ ಬಂದವರು ಸಾಲಾಗಿ ನಿಂತುಕೊಂಡಿದ್ದರು. ಎಲ್ಲರೂ ’ಇಂದಿರಾ ಗಾಂಧಿ ಅಲ್ಲಿ ಬಂದರು, ಇಲ್ಲಿ ಬಂದರು, ಆ ಕಡೆ ನೋಡು, ಈ ಕಡೆ ನೋಡು’ ಅಂತ ಕುತೂಹಲದಿಂದ ಕಿರುಚಾಡುತ್ತಿದ್ದರು.

ಹೀಗಿರಬೇಕಾದರೆ, ಕಾರಿನಿಂದ ಟಾರ್ಚ್ ಬೆಳಕು ಹಿಡಿದುಕೊಂಡೇ ಇಂದಿರಾ ಅವರು ಕೆಳಗಿಳಿದರು. ಅವರು ಇಳಿದು ಸ್ವಲ್ಪ ಈಚೆ ಬರುತ್ತಿದ್ದಂತೇ ಅಲ್ಲಿ ಸೇರಿದ್ದ ಸುಮಾರು 40-50 ಜನರು ಒಂದೇ ಸಲ ದಬಾದಬಾ ಅಂತ ಅವರ ಕಾಲಿಗೆ ಬಿದ್ದರು. ಅವರಿಗೆ ಒಂದುಕಡೆ ಖುಷಿ. ಮತ್ತೊಂದೆಡೆ ಆಶ್ಚರ್ಯ. ಈ ಜನರು ಎಷ್ಟೊಂದು ಮುಗ್ಧರಿದ್ದಾರೆ ಅಂತ ಅವರಿಗೆ ಅಚ್ಚರಿಯಾಯ್ತು. ಆಗ ಇಂದಿರಾ ಅವರು ಪ್ರಧಾನಿಯಾಗಿ ಅಧಿಕಾರದಿಂದ ಇಳಿಯುವ ಸಂದರ್ಭದಲ್ಲಿ 20 ಅಂಶದ ಕಾರ್ಯಕ್ರಮ ತಂದಿದ್ದರು. ಮನೆ ಇಲ್ಲದವರಿಗೆ ಮನೆ, ಹಿರಿಯ ನಾಗರಿಕರಿಗೆ ಮಾಸಾಶನ, ಗೇಣಿ ಪದ್ಧತಿ ನಿರ್ಮೂಲನೆ- ಮುಂತಾದ ಕಾರ್ಯಕ್ರಮ ತಂದಿದ್ದರಲ್ಲ- ಅದೆಲ್ಲವೂ ಜನರಿಗೆ ತುಂಬ ಸಹಾಯಕವಾಗಿತ್ತು. ಅದಕ್ಕಾಗಿ ಜನರು ಇಂದಿರಾ ಗಾಂಧಿಯವರಿಗೆ ಕೃತಜ್ಞರಾಗಿದ್ದರು. ಅಲ್ಲದೇ 1978ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೇ ಕಾಂಗ್ರೆಸ್‌ಗೆ ’ಹಸ್ತ’ದ ಗುರುತು ಸಿಕ್ಕಿತ್ತು. ಅದಾದ ಮೇಲೆ ಬಂದ ಈ ಉಪಚುನಾವಣೆಯಲ್ಲಿ ಎಲ್ಲಿ ಹೋದರೂ ಅಲ್ಲಿ ಇಂದಿರಾ ಗಾಂಧಿಯವರು ತಮ್ಮ ಕೈಯನ್ನು ಮೇಲಕ್ಕೆತ್ತಿ, ಕೈಗೆ ಮತ ಹಾಕುವಂತೆ ಹೇಳುತ್ತಿದ್ದರು. ನಾವೆಲ್ಲರೂ ಮತ ಕೇಳಲು ಹೋದಾಗ ಕೈ ಎತ್ತಿ ಮತ ಕೇಳುವಾಗ ನಮಗೆ ಖುಷಿಯಾಗುತ್ತಿತ್ತು.

ಚುನಾವಣೆಯೆಲ್ಲಾ ಮುಗಿದು, ಅವರು ದೆಹಲಿಗೆ ಹೋದ ಮೇಲೆ ಪುಟ್ಟೇಗೌಡರಿಗೆ ಒಂದು ಕಾಗದ ಬರೆದರು. ನೀವು ಮತ್ತು ನಿಮ್ಮ ಪತ್ನಿಯವರು ಅಪಾರ ಪ್ರೀತಿಯಿಂದ ನನಗೆ ಆತಿಥ್ಯ ಕೊಟ್ಟಿದ್ದೀರಿ. ನಾನು ಚುನಾವಣಾ ಪ್ರಚಾರ ಮುಗಿಸಿಕೊಂಡು ಮಧ್ಯರಾತ್ರಿ ನಿಮ್ಮ ಮನೆಗೆ ಬಂದಾಗ ನೀವಿಬ್ಬರೂ ದಂಪತಿ ನನ್ನನ್ನು ಅತ್ಯಂತ ಆದರದಿಂದ ಬರಮಾಡಿಕೊಂಡು, ಎಷ್ಟೊಂದು ಪ್ರೀತಿ ವಿಶ್ವಾಸ ತೋರಿಸಿದಿರಿ. ನಿಮಗೆ ಧನ್ಯವಾದಗಳು ಅಂತ ಪತ್ರದಲ್ಲಿ ಬರೆದಿದ್ದರು. ಅದೊಂದು ಅಮೋಘವಾದ ಸಂಗತಿ. ಇಂದಿರಾ ಗಾಂಧಿಯವರು ಸ್ವತಃ ತಾವೇ ತಮ್ಮ ಕೈಬರಹದಿಂದ ಈ ರೀತಿ ಪತ್ರ ಬರೆಯುವುದು ಅಂದರೆ ಒಂದು ರೀತಿಯ ಅಚ್ಚರಿ ಮತ್ತು ಸಂತಸದ ಸಂಗತಿಯೇ ಸರಿ.

ಚಿಕ್ಕಮಗಳೂರು ಕ್ಷೇತ್ರದಲ್ಲಿ ಜನತಾ ಪಕ್ಷದ ಹಿರಿಯಾಳುಗಳ ಎಲ್ಲ ಪ್ರಚಾರವೂ ನೆಲಕಚ್ಚಿ ಇಂದಿರಾ ಗಾಂಧಿಯವರು ಭರ್ಜರಿಯಾಗಿ ಆಯ್ಕೆಯಾಗಿ ಮತ್ತೆ ಲೋಕಸಭೆ ಹೋದರು. ಚಿಕ್ಕಮಗಳೂರು ಕ್ಷೇತ್ರವು ಇಂದಿರಾ ಗಾಂಧಿಯವರಿಗೆ ಮರುಹುಟ್ಟು ನೀಡಿದ್ದಲ್ಲದೇ, ಇಡೀ ದೇಶದಲ್ಲಿ ಮತ್ತೆ ಕಾಂಗ್ರೆಸ್(ಐ) ಪಕ್ಷವು ಮೈಕೊಡವಿ ಎದ್ದುನಿಲ್ಲುವಂತೆ ಮಾಡಿತು ಎಂಬುದು ಈಗ ಇತಿಹಾಸ. ಅಂಥ ಒಂದು ಸಂಕ್ರಮಣ ಕಾಲದಲ್ಲಿ ಇಂದಿರಾ ಗಾಂಧಿಯವರು, ದೇವರಾಜ್ ಅರಸು ಅವರೊಂದಿಗೆ ನಾನು ಜೊತೆಯಾಗಿ ಹೆಜ್ಜೆ ಹಾಕಿದೆನೆಂಬುದು ಇನ್ನೂ ಹೆಮ್ಮೆಯ ಸಂಗತಿ.

ಬಿದಿರು ನೀನ್ಯಾರಿಗಲ್ಲದವಳು
ಶ್ರೀಮತಿ ಮೋಟಮ್ಮನವರ ಆತ್ಮಕಥನ
ನಿರೂಪಣೆ: ವೀರಣ್ಣ ಕಮ್ಮಾರ
ಪ್ರಕಟಣೆ: ವಿಕಾಸ ಪ್ರಕಾಶನ
ಬೆಲೆ: 400 ರೂ


ಇದನ್ನೂ ಓದಿ: ನೂಪುರ್ ಮತ್ತು ನವೀನ್‌ರನ್ನು ಉಚ್ಚಾಟಿಸಿದ್ದು ಬಿಜೆಪಿಯ ನಿಜವಾದ ಮುಖವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...