ರಾಜಸ್ಥಾನದ ಸಚಿವರ ಪುತ್ರನ ವಿರುದ್ಧ ಅತ್ಯಾಚಾರದ ಆರೋಪಗಳನ್ನು ಹೊರಿಸಿರುವ 23 ವರ್ಷದ ಯುವತಿಯ ಮೇಲೆ ದೆಹಲಿಯ ರಸ್ತೆಯೊಂದರಲ್ಲಿ ಶನಿವಾರ ಮಸಿ ಬಳಿಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಆದೇಶಿಸಲಾಗಿದೆ ಎಂದಿದ್ದಾರೆ.
ದಕ್ಷಿಣ ದೆಹಲಿಯಲ್ಲಿ ಕಾಳಿಂದಿ ಕುಂಜ್ ರಸ್ತೆಯ ಬಳಿ ತನ್ನ ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಮಸಿ ದಾಳಿ ನಡೆದಿದೆ. ದಾಳಿಯಲ್ಲಿ ಇಬ್ಬರು ಪುರುಷರು ಭಾಗಿಯಾಗಿದ್ದಾರೆ ಎಂದು ಯವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮಹಿಳೆಯನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ಕರೆದುಕೊಂಡು ಹೋಗಿ ಕೂಲಂಕಷವಾಗಿ ಪರೀಕ್ಷಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಯುವತಿ ರಾಜಸ್ಥಾನದ ಸಚಿವ ಮಹೇಶ್ ಜೋಶಿ ಅವರ ಪುತ್ರನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಆಕೆಯ ದೂರಿನ ಮೇರೆಗೆ ದೆಹಲಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಳೆದ ತಿಂಗಳು ಸಚಿವರ ಪುತ್ರ ರೋಹಿತ್ ಜೋಶಿಯನ್ನು ಬಂಧಿಸಲು ಪೊಲೀಸ್ ತಂಡವನ್ನು ಜೈಪುರಕ್ಕೆ ಕಳುಹಿಸಲಾಗಿತ್ತು. ಆದರೆ ಸಚಿವರ ಪುತ್ರ ಮನೆಯಲ್ಲಿ ಪತ್ತೆಯಾಗಿರಲಿಲ್ಲ.
ಇದನ್ನೂ ಓದಿ: ಬಿಬಿಸಿ ಸಂದರ್ಶನದ ವೇಳೆ ಸಿಟ್ಟಿಗೆದ್ದ ಸ್ವಘೋಷಿತ ದೇವಮಾನವ ‘ಜಗ್ಗಿ ವಾಸುದೇವ್’
ದೆಹಲಿಯ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದ ನಂತರ ಆರೋಪಿ ರೋಹಿತ್ ಜೋಶಿ ದೆಹಲಿ ಪೊಲೀಸ್ ತಂಡದ ಮುಂದೆ ಶನಿವಾರ ಹಾಜರಾಗಿದ್ದರು.
ಕಳೆದ ವರ್ಷ ಜನವರಿ 8 ರಿಂದ ಈ ವರ್ಷದ ಏಪ್ರಿಲ್ 17 ರ ನಡುವೆ ಸಚಿವರ ಮಗ ತನ್ನ ಮೇಲೆ ಹಲವಾರು ಸಂದರ್ಭಗಳಲ್ಲಿ ಅತ್ಯಾಚಾರವೆಸಗಿದ್ದಾನೆ. ಜೊತೆಗೆ ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆ ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.
ಕಳೆದ ವರ್ಷ ಫೇಸ್‌ಬುಕ್‌ನಲ್ಲಿ ರೋಹಿತ್ ಜೋಶಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದೆ. ಅಂದಿನಿಂದ ಅವರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ. ರೋಹಿತ್ ಜೋಶಿ ವಿರುದ್ಧ ಅಪಹರಣ ಮತ್ತು ಬ್ಲ್ಯಾಕ್‌ಮೇಲ್ ಆರೋಪವನ್ನು ಯುವತಿ ಮಾಡಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸಚಿವ ಮಹೇಶ್ ಜೋಶಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಸಚಿವರ ವಿರುದ್ಧ ಯಾವುದೇ ಆರೋಪವಿಲ್ಲ ಎಂದು ವಾದಿಸಿದ್ದಾರೆ.
ಇದನ್ನೂ ಓದಿ: ಪ್ರವಾದಿ ನಿಂದನೆ: ಪ್ರತಿಭಟನಾಕಾರರ ಮೇಲೆ ’ಬುಲ್ಡೋಜರ್’ ಪ್ರಭಾವ ತೋರಿದ ಯೋಗಿ ಸರ್ಕಾರ


