ದೇಶದ ಪ್ರಧಾನಿಯಾಗಿ ನಾಡಿನ ಗಮನ ಸೆಳೆದವರು ಎಚ್.ಡಿ.ದೇವೇಗೌಡರು. ಈ ಹಿಂದಿನ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ಮಕ್ಕಳಿಗೆ ಈ ವಿಶೇಷತೆಯನ್ನು ತಿಳಿಸುವ ನಿಟ್ಟಿನಲ್ಲಿ ಪಠ್ಯ ರೂಪಿಸಿತ್ತು. ಆದರೆ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ವಿವಿಧ ಜಿಲ್ಲೆಗಳ ಮಾಹಿತಿಯನ್ನು ತೆಗೆದುಹಾಕುವ ಭರದಲ್ಲಿ ದೇವೇಗೌಡರ ಮಾಹಿತಿಯನ್ನೂ ತೆಗೆದುಹಾಕಿದೆ.
ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ರೂಪಿಸಲಾಗಿದ್ದ 6ನೇ ತರಗತಿ ಸಮಾಜ ವಿಜ್ಞಾನ ಭಾಗ-1ರ ಪಠ್ಯಪುಸ್ತಕದಲ್ಲಿ ‘ನಮ್ಮ ಕರ್ನಾಟಕ’ ಪಾಠವನ್ನು ಸೇರಿಸಲಾಗಿತ್ತು. ರಾಜ್ಯದ ಜಿಲ್ಲೆಗಳ ಪರಿಚಯದ ಜೊತೆಗೆ, ಕರ್ನಾಟಕದ ಅಸ್ಮಿತೆಗಳನ್ನು ಪುಟ್ಟ ಮಕ್ಕಳಿಗೆ ಪರಿಚಯಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ ಈ ಪಠ್ಯದಲ್ಲಿ ಕತ್ತರಿಯಾಡಿಸಿರುವ ಚಕ್ರತೀರ್ಥ ಸಮಿತಿಗೆ ಹಲವು ಸಂಗತಿಗಳು ಅಪ್ರಸ್ತುತವೆನಿಸಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪಾಠವನ್ನು ‘ನಮ್ಮ ಹೆಮ್ಮೆಯ ರಾಜ್ಯ- ಕರ್ನಾಟಕ’ ಎಂದು ಪರಿಷ್ಕರಣೆ ಮಾಡಿರುವ ನೂತನ ಸಮಿತಿಯು ವಿವಿಧ ಜಿಲ್ಲೆಗಳ ಮಾಹಿತಿಗೆ ಕತ್ತರಿಹಾಕಿದೆ.
“ಬೆಂಗಳೂರು ವಿಭಾಗ, ಮೈಸೂರು ವಿಭಾಗ, ಕಲಬುರಗಿ ವಿಭಾಗ, ಬೆಳಗಾವಿ ವಿಭಾಗ” ಎಂದು ವಿಭಾಗಿಸಿ, ಒಂದೊಂದು ವಿಭಾಗದ ಅಡಿಯಲ್ಲಿರುವ ಜಿಲ್ಲೆಗಳ ಪರಿಚಯವನ್ನು ಮಾಡಿಕೊಡಲಾಗಿತ್ತು. ಚಕ್ರತೀರ್ಥ ಸಮಿತಿಯು ಈ ವಿಭಾಗಗಳನ್ನು ಉಳಿಸಿದ್ದರೂ ಜಿಲ್ಲೆಗಳ ಮಾಹಿತಿಯನ್ನು ಕೈಬಿಟ್ಟಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಮೈಸೂರು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಮಂಡ್ಯ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳನ್ನು ಪರಿಚಯ ಮಾಡಿಕೊಡಲಾಗಿತ್ತು. ಇನ್ನುಳಿದ ಜಿಲ್ಲೆಗಳ ಪರಿಚಯವನ್ನು ಸಮಾಜವಿಜ್ಞಾನ ಭಾಗ-2ರ ಪಠ್ಯದಲ್ಲಿ ಮುಂದುವರಿಸಲಾಗಿತ್ತು.
(ಭಾಗ-2ರಲ್ಲಿ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ- ಜಿಲ್ಲೆಗಳ ಪರಿಚಯ ಮಾಡಿಕೊಡಲಾಗಿದೆ.)
ಮೈಸೂರು ವಿಭಾಗದಲ್ಲಿತ್ತು ಹಾಸನ ಜಿಲ್ಲೆಯ ಪರಿಚಯ ದೇವೇಗೌಡ ಫೋಟೋ
ಹಾಸನ ಜಿಲ್ಲೆಯ ಪರಿಚಯ ಹೀಗೆ ಆರಂಭವಾಗುತ್ತದೆ: “ಹಾಸನಾಂಬ ದೇವಾಲಯದಿಂದ ಇದಕ್ಕೆ ಹಾಸನ ಎಂಬ ಹೆಸರು ಬಂದಿದೆ. ಈ ದೇವಾಲಯದ ಗರ್ಭಗುಡಿ ಬಾಗಿಲನ್ನು ವರ್ಷದಲ್ಲಿ ಒಮ್ಮೆ ಮಾತ್ರ ತೆರೆಯಲಾಗುತ್ತದೆ. ಈ ಜಿಲ್ಲೆಯಲ್ಲಿ ದೇವಾಲಯಗಳು ಹೊಯ್ಸಳ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿವೆ. ಗೊರುರು, ಮೊಸಳೆ, ಮುಂತಾದವು ಪ್ರಸಿದ್ಧ ಗ್ರಾಮಗಳು…”
ಕೊನೆಯಲ್ಲಿ, “ಕರ್ನಾಟದಿಂದ ಪ್ರಧಾನಿಯಾಗಿದ್ದ ಶ್ರೀ ಎಚ್.ಡಿ.ದೇವೇಗೌಡರು ಈ ಜಿಲ್ಲೆಯವರು” ಎಂದು ಮಕ್ಕಳಿಗೆ ಪರಿಚಯ ಮಾಡಿಕೊಡಲಾಗಿದೆ. ಜೊತೆಗೆ ದೇವೇಗೌಡರ ಭಾವಚಿತ್ರವನ್ನು ನೀಡಲಾಗಿದೆ.

‘ಶಿವಮೊಗ್ಗ’ ಜಿಲ್ಲೆಯ ಪರಿಚಯದಲ್ಲಿತ್ತು ಕವಿಮನೆಯ ಚಿತ್ರ
ಶಿವಮೊಗ್ಗ ಜಿಲ್ಲೆಯ ಪರಿಚಯದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ರಾಷ್ಟ್ರಕವಿ ಕುವೆಂಪು ಅವರ ಕುರಿತ್ತಷ್ಟೇ ಅಲ್ಲದೇ ಕುಪ್ಪಳಿಯಲ್ಲಿರುವ ‘ಕವಿ ಮನೆ’ಯ ಭಾವಚಿತ್ರವನ್ನು ನೀಡಲಾಗಿತ್ತು.
ಇದನ್ನೂ ಓದಿರಿ: ನೂತನ ಪಠ್ಯ: ಘಟನೋತ್ತರ ಆದೇಶ ಸಂವಿಧಾನಬದ್ಧ ಅವಕಾಶ- ವಿನಯ್ ಬಿದರೆ ಸಮರ್ಥನೆ
“ಜ್ಞಾನಪೀಠ ಪ್ರಶಸ್ತಿ ಪಡೆದ ಇಬ್ಬರು ಸಾಹಿತಿಗಳಾದ ರಾಷ್ಟ್ರಕವಿ ಕುವೆಂಪು ಮತ್ತು ಡಾ.ಯು.ಆರ್.ಅನಂತಮೂರ್ತಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿಗೆ ಸೇರಿದವರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಾಡುಗಾರ ಶಿವಮೊಗ್ಗ ಸುಬ್ಬಣ್ಣನವರು ಈ ಜಿಲ್ಲೆಯವರು” ಎಂಬ ಮಾಹಿತಿ ಇತ್ತು.
ಸರ್. ಎಂ.ವಿ. ಫೋಟೋ ಎರಡು ಕಡೆ ಬಳಕೆ
ಒಂದೇ ಪಠ್ಯ ಪುಸ್ತಕದಲ್ಲಿ ಎರಡು ಕಡೆ ಸರ್.ಎಂ.ವಿಶ್ವೇಶ್ವರಯ್ಯನವರ ಫೋಟೋವನ್ನು ಚಕ್ರತೀರ್ಥ ಸಮಿತಿ ಬಳಸಿದೆ. ಬರಗೂರರ ಸಮಿತಿ ರಚಿಸಿದ ‘ನಮ್ಮ ಕರ್ನಾಟಕ’ ಪಾಠದಲ್ಲಿ ಉದ್ದಿಮೆಗಳ ಕುರಿತು ತಿಳಿಸುವಾಗ ಸರ್.ಎಂ.ವಿ. ಅವರ ಫೋಟೋ ಬಳಸಲಾಗಿತ್ತು. ಮೈಸೂರು ವಿಭಾಗದ ಪಠ್ಯದಲ್ಲಿ ಟಿಪ್ಪು ಸುಲ್ತಾನ ಫೋಟೋವನ್ನು ನೀಡಲಾಗಿತ್ತು. ಆದರೆ ‘ಮೈಸೂರು ವಿಭಾಗ’ದ ಪಾಠವನ್ನು ಉಳಿಸಿಕೊಂಡಿರುವ ಸಮಿತಿಯು ಮೈಸೂರಿನ ಚಾರಿತ್ರಿಕ ಹಿನ್ನಲೆಯನ್ನು ಪರಿಚಯಿಸುವಾಗ ಟಿಪ್ಪು ಫೋಟೋ ಕೈಬಿಟ್ಟು ಮತ್ತೆ ಸರ್.ಎಂ.ವಿ.ಫೋಟೋ ಬಳಸಿದ್ದಾರೆ.



ಇನ್ನೆಂತಾ ವಿಷ ತುಂಬಿಕೊಂಡಿರಬೇಕು ಈ ಬ್ರಾಹ್ಮಣ್ಯ ವನ್ನ ವೈಭವೀಕರಿಸುವ ಪಠ್ಯ ಪರಿಸ್ಕರಣೆ ಅಧ್ಯಕ್ಷ,ಸದಸ್ಯರು ಮತ್ತು ಸಚಿವ,ನಾಚಿಕೆಯಾಗಬೇಕು ಇವರಿಗೆ.
ಎಷ್ಟೂಂದು ಅಸಹ್ಯದ ಫ್ಯಾಶಿಸ್ಟ್ ಮನಸ್ಥಿತಿಯವರು ಈ ಸವರ್ಣ ಮನಸ್ಥಿತಿಯವರು