Homeಮುಖಪುಟದಲಿತ ಸಾಹಿತ್ಯ: ಹಾಗೆಂದರೇನು?

ದಲಿತ ಸಾಹಿತ್ಯ: ಹಾಗೆಂದರೇನು?

- Advertisement -
- Advertisement -

ದಲಿತ ಪದ ನಿರ್ವಚನ: ಯಾರು ತಾನು ಮಾಡದ ಅಪರಾಧಕ್ಕೆ ವೃಥಾ ನೋವು ಶಿಕ್ಷೆ (Pain and Punishment) ಅನುಭವಿಸುತ್ತಾನೋ ಅವನು ದಲಿತ. ಇದರಲ್ಲಿ ದಲಿತರು, ಮಹಿಳೆಯರು, ಮಕ್ಕಳು ರೈತರಾದಿಯಾಗಿ ನಮ್ಮ ಸುತ್ತ ಇರುವ ಪ್ರಕೃತಿ ಪರಿಸರ, ಪ್ರಾಣಿ, ಪಕ್ಷಿ ಮುಂತಾಗಿ ಸಕಲ ಸಚರಾಚರವೂ ಸೇರುತ್ತವೆ. ಐಹಿಕ ಭೋಗಾಪೇಕ್ಷಿ ಹಾಗೂ ತಾರತಮ್ಯ ವ್ಯವಸ್ಥೆಯ ನಾಗರಿಕ ಜಗತ್ತಿನಾದ್ಯಂತ, ಇರುವ ಸಕಲವೂ ತನ್ನ ಭೋಗಕ್ಕೆ ಮಾತ್ರ ಇರುವುದು ಎಂದು ಭಾವಿಸಿ ಉಳ್ಳವರು ಉಳಿದವರನ್ನು ಶೋಷಣೆಗೆ ಗುರಿ ಮಾಡುತ್ತಾರೆ. ಮನುಷ್ಯ ಜಾತಿಯಲ್ಲಿರುವುದು ಎರಡೇ ವರ್ಗ. ಒಂದು: ಬಹುಸಂಖ್ಯಾತರಾದ ಬಡವರು; ಎರಡು: ಕೇವಲ ಬೆರಳೆಣಿಕೆಯಷ್ಟಿರುವ ಬಲ್ಲಿದರು. ಗೇಣು ಹೊಟ್ಟೆಗಾಗಿ, ತುಂಡು ಬಟ್ಟೆಗಾಗಿ ದಿನವೆಲ್ಲಾ ಯಾರು ದುಡಿಯುತ್ತಾರೋ ಅವರು ಬಡವರು. ಅವರು ದುಡಿದುದ್ದನ್ನು ಉಂಡು, ಅವರಿಂದ ಸೇವೆಯನ್ನು ಮಾಡಿಸಿಕೊಂಡು, ಕಾಲ ಕಸದಂತೆ ಕಾಣುತ್ತಾರಲ್ಲಾ ಅವರು ಶ್ರೀಮಂತರು. ದುಡಿಯುವ ಮಂದಿಗೆ ತಾವು ಶೋಷಣಗೆ ಒಳಗಾಗುತ್ತಿದ್ದೇವೆ ಎಂಬ ತಿಳಿವಳಿಕೆಯೂ ಇರುವುದಿಲ್ಲ. ಯಾಕೆಂದರೆ ಆದಿಮ ಕಾಲದಿಂದ ಅವರನ್ನು ಅಜ್ಞಾನದಲ್ಲಿಯೇ ಇಡಲಾಗಿದೆ. ಇದೊಂದು ವಿಷವರ್ತುಲ. ಹುಟ್ಟಿನಿಂದ ಅವನು ಅಂತ್ಯಜನೆಂದೂ, ಅದು ಅವನ ಜನ್ಮಾಂತರ ಕರ್ಮವೆಂದೂ, ಈ ಜನ್ಮದಲ್ಲಿ ಅದನ್ನು ಅನುಭವಿಸದೆ ವಿಧಿಯಿಲ್ಲವೆಂದೂ ಅವನನ್ನು ಊರಿನಿಂದ ಹೊರಗಿಟ್ಟು ನಂಬಿಸಲಾಗಿದೆ. ಅಸ್ಪೃಶ್ಯನೆಂದು ಕರೆಯಲಾಗಿದೆ. ಒಂದು ದೇಶವಲ್ಲ; ಒಂದು ಕೋಶವಲ್ಲ; ಒಂದು ಧರ್ಮವಲ್ಲ; ಒಂದು ಕಾಲವಲ್ಲ; ಎಲ್ಲಾ ದೇಶ ಕೋಶ ಕಾಲಧರ್ಮಗಳಲ್ಲೂ ಇದು ನಡೆದೇ ಇದೆ-ಇವತ್ತಿಗೂ ಮುಂದುವರೆದಿದೆ. ಹರಕೆಗೆ ತಂದ ಕುರಿಯಂತೆ ದಲಿತರು ದುಡಿಯುತ್ತಲೇ ಇದ್ದಾರೆ; ಅವರ ದುಡಿಮೆಯಿಂದ ಇವರು ಐಷಾರಾಮಿ ಭೌತಿಕ ಜೀವನವನ್ನು ನಡೆಸುತ್ತಲೇ ಇದ್ದಾರೆ. ದುಡಿಯುವ ವರ್ಗವನ್ನು ಬಾಯಿಮುಚ್ಚಿಸಲು ದೇವರು ದಿಂಡರು ಧರ್ಮಶಾಸ್ತ್ರ ಮುಂತಾಗಿ ಪಂಚಾಂಗ ಕಟ್ಟುತ್ತಾರೆ, ಪುರಾಣ ಬಿಚ್ಚುತ್ತಾರೆ. ಪುರೋಹಿತ ಕಟ್ಟಿದ ಈ ಶಾಸ್ತ್ರಾಗಮ ಪಂಚಾಂಗವನ್ನು ಆಳುವ ದೊರೆ ಜಾರಿಗೊಳಿಸುತ್ತಾನೆ. ವಿರೋಧಿಸಿದವರ ಬಲಿ ಹಾಕುತ್ತಾನೆ. ಇದು ನಿನ್ನೆಮೊನ್ನೆಯ ಇತಿಹಾಸವಲ್ಲ. ಆದಿಮ ಕಾಲದಿಂದ ನಡೆದು ಬಂದದ್ದು, ಮತ್ತು ಈಗ ನಡೆಯುತ್ತಿರುವುದು ಸಹ ಮುಂದೆಯೂ ನಡೆಯತಕ್ಕದ್ದು. ಇದಕ್ಕೆ ಮೊದಲೆಂಬ ಮೊದಲಾಗಲೀ ಕೊನೆಯೆಂಬ ಕೊನೆಯಾಗಲೀ ಇಲ್ಲ.

ಜರ್ಮನ್ ತತ್ವಜ್ಞಾನಿ ’ಫೆಡರಿಕ್ ನೀಟ್ಸ್’ ಎಂದಂತೆ ’ಬಹುಶಃ ಈಗೊಮ್ಮೆ ಪ್ರಳಯವಾಗಿ ವಿಶ್ವ ಮತ್ತೊಮ್ಮೆ ಮರುಸೃಷ್ಟಿಯಾದರೂ ಸಹ ಇದು ಹೀಗೆ ನಡೆಯುತ್ತದೆ’. ನಿದರ್ಶನಕ್ಕೆ ಈಚೆಗೆ ಕೊರೊನಾ ಅಲೆಗಳ ಬಡಿತದ ನಂತರವೂ ಬಿಟ್ಟಲ್ಲಿಂದಲೇ ಮತ್ತೆ ಶುರುವಾಗಿದೆ ಅದೇ ಹಿಂದಿನ ಬದುಕು.

ಅಭಿವೃದ್ಧಿ ಹೆಸರಿನಲ್ಲಿ ಪ್ರಾಕೃತಿಕ ಜಗತ್ತಿನ ಶೋಷಣೆ; ಸ್ವರ್ಗ ಕಟ್ಟುತ್ತೇವೆಂಬ ಅವಸರದಲ್ಲಿ ಭೂಮಿಯನ್ನು ನರಕವನ್ನಾಗಿ ಪರಿವರ್ತಿಸುವುದು; ಹೀಗೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಂವಿಧಾನದ ಆಶಯವನ್ನು ಗಾಳಿಗೆ ತೂರಲಾಗುತ್ತಿದೆ. ಕೆಲವೇ ಕೆಲವು ಬಲಾಢ್ಯ ಕಾರ್ಪೊರೆಟ್ ಕಂಪನಿ ಮಾಲೀಕರು, ಅವರಿಗೆ
ಷರೀಕಾಗಿ ನಿಲ್ಲುವ ರಾಜಕಾರಣಿಗಳು, ಸಹಕರಿಸುವ ಸರ್ಕಾರಿ ಅಧಿಕಾರಿಗಳು, ಇವರೆಲ್ಲರಿಗೂ ಮಿಗಿಲಾಗಿ ದೇವರು ಧರ್ಮ ಶಾಸ್ತ್ರ ಪಂಚಾಂಗ ಹೇಳಿ ಮೂಢನಂಬಿಕೆಗಳನ್ನು ಬಿತ್ತಿ ಜನರು ದಂಗೆ ಏಳದಂತೆ ತಡೆಯುವ ಪುರೋಹಿತ ವರ್ಗ-ಈ ದುಷ್ಟಕೂಟ ಜನರನ್ನು ಇಂಥ ಹೀನ ಸ್ಥಿತಿಯಲ್ಲಿಡುತ್ತಿದೆ. ಇವೆಲ್ಲವುಗಳಿಂದ ಮಾಧ್ಯಮ ವರ್ಗದ ಜನರಾದರೋ ತಮ್ಮ ಸ್ವಂತ ಬುದ್ಧಿ ಕಳಕೊಂಡು ಚೈನ್ ಹಾಕಿ ಕಟ್ಟಿದ ಶ್ವಾನದಂತೆ ಅಸಹಾಯಕರಾಗಿ ಬದುಕಿದರು-ಬದುಕುತ್ತಿದ್ದಾರೆ. ಕೊರೊನಾ ವೈರಸ್ಸಿಗಿಂತ ಭಯಂಕರವಾದ ಅಸ್ಪೃಶ್ಯತೆಯನ್ನು-ಜಾತೀಯತೆಯನ್ನು ಹುಟ್ಟುಹಾಕಿ, ಚಾತುರ್ವರ್ಣ್ಯ ಪದ್ಧತಿಯನ್ನು ಚಾಲ್ತಿಯಲ್ಲಿರಿಸಿ ಮನುಷ್ಯರು ಮನುಷ್ಯರನ್ನೇ ಮುಟ್ಟದಂತೆ ಮಾಡಿ ಶೂದ್ರ ಅಂತ್ಯಜರಿಂದ ದುಡಿಸಿಕೊಂಡಿದ್ದನ್ನು ಮತ್ತು ಅದನ್ನು ಮುಂದುವರೆಸಿದ್ದನ್ನು ಮರೆಯಲಾದೀತೇ?

ಆಫ್ರಿಕಾದ ಕಾಡುಗಳಲ್ಲಿ ಹಾರುವ ಚಿರತೆಗಳಂತಿದ್ದ ಸ್ವಚ್ಛಂದವಾಗಿ ವಾಸಿಸುತ್ತಿದ್ದ ಅರಣ್ಯವಾಸಿ ಕಪ್ಪು ಜನರನ್ನು, ಮೃಗಗಳನ್ನು ಬೇಟೆಯಾಡಿದಂತೆ ಹಿಡಿದು ಯೂರೋಪು ಅಮೆರಿಕಾ ಮುಂತಾದ ದೇಶಗಳಿಗೆ ಕೊಂಡೊಯ್ದು ಪಶುಗಳೆಂಬಂತೆ ಮಾರಾಟ ಮಾಡಿದರು. ಬಿಳಿಯ ದೊರೆಗಳು ಕೊಂಡು ದುಡಿಸಿಕೊಂಡರು. ರವಿಮುಳುಗದ ಸಾಮ್ರಾಜ್ಯ ಕಟ್ಟಿ ಆಳಿದ ಬ್ರಿಟಿಷ್ ವಸಾಹತು ರಾಷ್ಟ್ರಗಳ ಕಥೆಯೆಲ್ಲಾ ಇದೇ.

ಹೀಗಿರುತ್ತ ಬ್ರಿಟಿಷರು ತಮ್ಮ ಸುಗಮ ಆಡಳಿತ ಹಾಗೂ ಸಾಮ್ರಾಜ್ಯ ವಿಸ್ತರಣೆಯ ಅನುಕೂಲಕ್ಕೆಂದು ಶೂದ್ರ ಹಾಗೂ ಪಂಚಮರಿಗೂ ಶಿಕ್ಷಣ ಕೊಟ್ಟರು. ಎದೆಗೆ ಬಿದ್ದ ಅಕ್ಷರದಿಂದ ಎಚ್ಚೆತ್ತ ದಲಿತರಿಗೆ ಶತಶತಮಾನಗಳ ಈ ಅವಮಾನ ಹಾಗೂ ಹೀನಾಯ ಬದುಕಿಗೆ ಯಾರು ಕಾರಣ? ಹೇಗೆ ಕಾರಣರು ಎಂಬ ವಿವೇಕ ಮೂಡಿತು. ಆಧುನಿಕ
ಶಿಕ್ಷಣದಿಂದ ಪ್ರಭಾವಿತರಾದ ಕೆಲವು ಸಮಾಜ ಸುಧಾರಕರು ಹಾಗೂ ಓದಿ ಬರೆಯುವಂಥ ಲೇಖಕರು ಕಾಣಿಸಿಕೊಂಡರು.

ಸ್ವಾತಂತ್ರ್ಯಾನಂತರ ಸಂವಿಧಾನಬದ್ಧ ಮೀಸಲಾತಿ ದೊರೆತಮೇಲೆ ದಲಿತರೂ ಸಹ ಯಥಾಪ್ರಕಾರ ರಾಜಕಾರಣದ ಬೆನ್ನುಹತ್ತಿ ಸವರ್ಣೀಯರೊಂದಿಗೆ ಅಲ್ಪಸ್ವಲ್ಪ ಅಧಿಕಾರ ಹಂಚಿಕೊಳ್ಳಲು ಸಾಧ್ಯವಾಯಿತು; ಆದರೆ ಅವರಲ್ಲಿ ಕೆಲವರು ತಾವು ಬಂದ ಶೋಷಿತ ಸಮಾಜವನ್ನೇ ಮರೆತು ಬೆನ್ನುಹಾಕಿ ನಿಂತದ್ದು ನಿಜಕ್ಕೂ ದುರಂತ. ಕುವೆಂಪು ಎಂದೋ ಉದ್ಗರಿಸಿರುವಂತೆ ’ಯಾರು ಆಳಿದರೇನು? ಕತ್ತಿ ಪರದೇಶಿಯಾದರೆ ಮಾತ್ರ ನೋವೆ? ನಮ್ಮವರೆ ಹದ ಹಾಕಿ ತಿವಿದರದು ಹೂವೆ?’ ಎಂದು ಕೇಳುವಂತಾಗಿದೆ ಈಗ. ಹಾಗೇಯೇ ದ.ರಾ.ಬೇಂದ್ರೆಯವರು ನಿರ್ವಚಿಸಿರುವಂತೆ ’ಬುದ್ಧ ಗೆದ್ದುದೇನೆಂದು ಹಿಂದೆ ನೋಡಿದರೆ ಸಾವು ನೋವಿನ ಸಂತೆ ಹಾಗೆ ಬಿದ್ದಿತ್ತು.’

ಇಂಥಾದ್ದರಲ್ಲಿ ದಲಿತ ಸಾಹಿತ್ಯ ಎಂದರೇನು? ಎಂದು ಕೇಳಿದರೆ ಏನೆಂದು ಹೇಳುವುದು; ಅದೇ ನೋವು ಅದೇ ಸಾವು. ಅಲ್ಲೆ ಕುಳಿತ, ಅಲ್ಲೇ ಉಳಿದ ದಮನಿತರ ಕಣ್ಣ ಬೆಳಕಾಗಿಸುವುದು ಯಾವುದೋ ಅದು ದಲಿತ ಸಾಹಿತ್ಯ. ಅದು ಯುಗಯುಗಾಂತರದಿಂದ I want to be in my home (ಕುಸುಮಬಾಲೆ) ಎಂದು ಪಿಸುದನಿಯಲ್ಲಿ ಉಸುರುತ್ತಿದೆ. ನಿರ್ವಸಿತರೆಲ್ಲರ ದನಿಯಾಗಿ ದಿಗ್ಮಂಡಲ ಮುಟ್ಟುತ್ತಿದೆ; ಆಕಾಶ ತಾಗುತ್ತಿದೆ. ಆದರೂ ಕೇಳಿಸಿಕೊಳ್ಳುವ ವ್ಯವಧಾನ ಯಾರಿಗುಂಟು? ಒಡಲಾಳದ ಸಾಕವ್ವನ ’ಇದಕ್ಕೂ ಬೇರೆ ನರಕ ಎಲ್ಲಿದ್ದಾತು ಶಿವು!’ ಎಂಬ ಪ್ರಶ್ನೆ ಯಾರಿಗೆ ಅರ್ಥವಾದೀತು? ’ನೊಂದ ನೋವನ್ನು ನೋಯದವರೆತ್ತ ಬಲ್ಲಿರೇ ತಾಯಿ?’ ಎಂಬ ಅಕ್ಕನ ಸಂಕಟ ಯಾರಿಗೆ ವೇದ್ಯವಾದೀತು?

ಇಂಥಾದ್ದರಲ್ಲಿ ದಲಿತ ಸಾಹಿತ್ಯ ಏನೆಂದು ಕೇಳಿದರೆ ಏನು ಹೇಳುವುದು? ’ಹಾಡೆಂದು ಕಾಡ್ಬೇಡಿ ದೇವರೆ! ಹಾಡಲ್ಲ ಒಡಲುರಿ!’ – ದಮನಿತರ ಒಡಲುರಿಯ ಅಭಿವ್ಯಕ್ತಿಯೇ ದಲಿತ ಸಾಹಿತ್ಯ. ಅದು ಕೇವಲ ಹುಟ್ಟಿನಿಂದ ದಲಿತರು ಬರೆದದ್ದು ಮಾತ್ರವಲ್ಲ. ದಲಿತ ಲೋಕಕ್ಕೆ ಪರಕಾಯ ಪ್ರವೇಶ ಮಾಡಿ ಯಾರು ಬರೆದರೂ ಅದು ದಲಿತ ಸಾಹಿತ್ಯವೇ. ’ಕರುಣೆ ಒಲುಮೆಗೆ ಸಾಟಿಯೆ?’ – (ಪುತಿನ). ಭಟ್ಟರ ಮನೆಬಾಗಿಲಲ್ಲಿ ಚಳಿಯಲ್ಲಿ ನಡುಗುತ್ತಿದ್ದ ನಾಯಿಮರಿಯನ್ನು ಕಂಡ ಕುರುಬಗೌಡ ತಾನು ಹೊದ್ದ ಕಂಬಳಿಯೊಳಗಿಟ್ಟುಕೊಂಡು ಹೋಗಿ ಮುದ್ದಿಸಿ ಮಲಗಿಸಿಕೊಳ್ಳುತ್ತಾನಲ್ಲ ಅದು ನಿಜವಾದ ಒಲವು. ಆ ಅಭಿವ್ಯಕ್ತಿಯೇ ದಲಿತ ಸಾಹಿತ್ಯ. ಅದು ಪಂಡಿತರಿಗೆ ವಿವಿಧ ಕಲಾಪಂಡಿತರಿಗೆ ಮಾತ್ರ ರಂಜಿಸುವ ರಸೈಕ್ಯ ದೃಷ್ಟಿಯ ಸಾಹಿತ್ಯವಲ್ಲ.

ಒಂದು ಪ್ರಾಚೀನ ಕಥೆ ನೆನಪಾಗುತ್ತದೆ:

ಹರಿಶೇಣನ ಕಥಾಸರಿತ್ಸಾಗರದಿಂದ ತಿಳಿದುಬರುವ ಒಂದು ದಂತಕತೆ ಅದು. ಸುಮಾರು ಕ್ರಿ.ಶ ಒಂದನೇ ಶತಮಾನ. ಉಜ್ಜಯನಿಯಲ್ಲಿ ಶಾತವಾಹನ ಎಂಬ ದೊರೆ ಆಳುತ್ತಿದ್ದ. ಅವನ ಆಸ್ಥಾನಕ್ಕೆ ಗುಣಾಢ್ಯ ಎಂಬ ಕಥೆಗಾರನೊಬ್ಬ ಪೈಶಾಚಿ ಭಾಷೆಯಲ್ಲಿ ಬರೆದ ಸುಮಾರು 700000 ಶ್ಲೋಕವುಳ್ಳ ಒಂದು ಬೃಹತ್ ಗದ್ಯಕಥೆಗಳ ತಾಳೆಯೋಲೆ ಕಟ್ಟನ್ನು ತಂದು ಅರ್ಪಿಸಿದ. ಆದರೆ ಆಸ್ಥಾನ ಪಂಡಿತರು ’ಇದು ಅಸ್ಪೃಶ್ಯ ಬರೆದದ್ದು-ಓದಲಿಕ್ಕೆ ಅರ್ಹವಲ್ಲ’ ಎಂದು ಹೇಳಿ ಆ ಕವಿಯನ್ನು ಹೊರದಬ್ಬಿದರು. ಹಾಗೆ ಹೊರದಬ್ಬಿಸಿಕೊಂಡ ಗುಣಾಢ್ಯ ಕಾಡಿಗೆ ಹೋಗಿ ಪ್ರಾಣಿ ಪಕ್ಷಿಗಳ ಸಮ್ಮುಖದಲ್ಲಿ ತನ್ನ ಕಥೆಗಳ ಕಟ್ಟನ್ನು ಬಿಚ್ಚಿ ಒಂದೊಂದೇ ಕತೆ ವಾಚಿಸಿ, ಆ ತಾಳೆಯೋಲೆಗಳನ್ನು ಬೆಂಕಿಗೆ ಹಾಕುತ್ತಾ ಬಂದ. ಇದನ್ನು ಕಂಡ ಅಲ್ಲಿನ ಆದಿವಾಸಿ ಗಿರಿಜನರು ದೊರೆಯಲ್ಲಿಗೆ ಹೋಗಿ ಹೇಳಿದರು. ಆ ದೊರೆ ಖುದ್ದಾಗಿ ಬಂದು ಬೆಂಕಿಗೆ ಎಸೆವ ಗುಣಾಢ್ಯನ ಕ್ರಿಯೆಯನ್ನು ತಡೆದನಂತೆ. ಆದರೆ ಅಷ್ಟರಲ್ಲಿ ಕೇವಲ 200000 ಶ್ಲೋಕಗಳು ಮಾತ್ರ ಉಳಿದಿದ್ದವು.

ನಾವೀಗ ಈ ದಂತಕಥೆಯ ಸತ್ಯಾಸತ್ಯತೆಯನ್ನು ನಿದರ್ಶನ ಪೂರ್ವಕವಾಗಿ ಕೊಂಚ ನಿಕಷಕ್ಕೆ ಒಡ್ಡಬಹುದು. ಡಾ.ಬಿ.ಆರ್.ಅಂಬೇಡ್ಕರ್ ಬೌದ್ಧ ಧರ್ಮಧೀಕ್ಷೆ ಪಡೆದ ತರುವಾಯ ಆ ಧರ್ಮಕ್ಕೆ ಸಂಬಂಧಿಸಿ ಬಹಳಷ್ಟು ಸಾಹಿತ್ಯ ರಚನೆ ಮಾಡುತ್ತಿದ್ದರಂತೆ. ಆದರೆ ಅವರ ಅವಸಾನದ (ಡಿ.6.1956) ನಂತರ ಆ ಕಡತಗಳಲ್ಲಿ ಬೌದ್ಧಧರ್ಮಕ್ಕೆ ಸಂಬಂಧಿಸಿದ ಕೆಲವು ಕಡತಗಳು ಕಣ್ಮರೆಯಾದವು ಎಂದು ಹೇಳಲಾಗಿದೆ. [ಬಾಬಾ ಸಾಹೇಬರ ಕೊನೆ ದಿನಗಳು. ಮೂಲ: ನಾನಕ್ ಚಂದ್ ರತ್ತು. ಅನುವಾದ: ಡಾ. ವಿಜಯ ನರಸಿಂಹ.ಜೆ.] ಅಂಬೇಡ್ಕರ್ ಸಾವನ್ನು ಕುರಿತು ಸುತ್ತವರೆದಿರುವ ಶಂಕೆಯು ಇನ್ನೂ ಮುಂದುವರೆದಿದೆ. ಜಗತ್ತಿನ ಅತಿ ದೊಡ್ಡ ಪ್ರಜಾತಂತ್ರದ ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್. ಅಂಥವರು ಬರೆದ ಸಾಹಿತ್ಯಕ್ಕೇ ಈ ಗತಿಯಾದರೆ, ಇನ್ನುಳಿದ ದಲಿತ ಸಾಹಿತಿಗಳ ಕೃತಿಗಳನ್ನು ಕೇಳುವವರಾರು ಎಂಬುದು ಬೇತಾಳಪ್ರಶ್ನೆ!

ಕೊನೆಯದಾಗಿ ಒಂದು ಮಾತು. ಇದೇ ಮೇ 21.2022ರಂದು ನಾನು ಮತ್ತು ಗೆಳೆಯ ಪ್ರೊ.ಎಸ್.ಜಿ ಸಿದ್ದರಾಮಯ್ಯ ಇಬ್ಬರು ಕನಕಪುರಕ್ಕೆ ಹೋಗಿದ್ದವು-ಅಂಬೇಡ್ಕರ್ ಅವರ 131ನೇ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗವಹಿಸಲು. ನಾನು ಮಾತನಾಡುತ್ತಾ ಕಡೆಯಲ್ಲಿ ’ನಮ್ಮ ಸಂವಿಧಾನವೆಂದರೆ ನಮಗೆ ಪರಮ ಪವಿತ್ರ, ಅದು ನಮ್ಮ ವೇದೋಪನಿಷತ್ತುಗಳಿಗೆ ಸಮಾನ’ ಎಂದು ಹೇಳಿದೆ. ಸಮಾರಂಭ ಮುಗಿದ ಮೇಲೆ ಅಂಬೇಡ್ಕರ್ ಭವನದ ಮೆಟ್ಟಿಲು ಇಳಿಯುತ್ತಿದ್ದೆವು. ’ಅಶ್ವಿನಿ’ ಎಂಬ ಒಬ್ಬ ಯುವತಿ ಅಡ್ಡಲಾಗಿ ಬಂದು ನಮ್ಮ ಸಂವಿಧಾನ ವೇದಗಳಿಗೆ ಸಮಾನ ಅಲ್ಲ ಸರ್, ಅದಕ್ಕೂ ಮಿಗಿಲು ಅಲ್ಲವೆ ಸರ್ ಎಂದು ಕೆಳಿದರು. ನಾನು ಅರೆಕ್ಷಣ ನಿಂತು ’ಹೌದು, ಹೌದು ನಿಮ್ಮ ಅಭಿಪ್ರಾಯ ಸರಿ. welcome’ ಎಂದು ಹೇಳಿ ಕಾರು ಹತ್ತಿದೆ. ಅಷ್ಟೆ ಅಲ್ಲ ನಮ್ಮ ಸಂವಿಧಾನ ಯುವ ಜನಾಂಗದ ಭವಿಷ್ಯದ ಬೆಳಕು. ಅನ್ಯತಾ ಶರಣಂ ನಾಸ್ತಿ!

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು


ಇದನ್ನೂ ಓದಿ: ಆದೇಶ ಇಲ್ಲದೆ ಪಠ್ಯಪರಿಷ್ಕರಣೆ; ಜನಾಕ್ರೋಶದ ನಡುವೆ ‘ಪ್ರಜಾವಾಣಿ’ ವರದಿಗಳಿಗೆ ಸಚಿವ ಬಿ.ಸಿ.ನಾಗೇಶ್ ಗರಂ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...