ವಿಚಾರಭೇದವನ್ನು ವಿಚಾರದ ಮೂಲಕವೇ ಎದುರಿಸಿ ಸರಿದಾರಿಯನ್ನು ಕಂಡುಕೊಳ್ಳುವುದು ಪ್ರಜಾಪ್ರಭುತ್ವದ ಮೂಲ ತತ್ವ. ಅದು ಯಾವುದೇ ಸಂಸ್ಥೆಗಾಗಲೀ, ವ್ಯಕ್ತಿಗಾಗಲೀ ಅನ್ವಯಿಸುತ್ತದೆ. ಅದಕ್ಕೆ ನಮ್ಮ ಸಂವಿಧಾನ ಮಾರ್ಗವನ್ನೂ ತೋರಿಸುತ್ತದೆ. ಇನ್ನು ಸರ್ಕಾರಗಳಿಗಂತೂ ಈ ದಾರಿಯಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕು. ಜನ ವಿರೋಧಗಳಲ್ಲಿ-ನಾಗರಿಕರ ಪ್ರತಿಭಟನೆಗಳಲ್ಲಿ, ತಮಗೆ ಸರಿ ಕಾರಣದಿದ್ದರೂ ಚರ್ಚೆ-ಸಂವಾದ ಸರ್ಕಾರದ ಆಯ್ಕೆಯಾಗಬೇಕು. ತಾನೂ ಕೇಳಿಸಿಕೊಂಡು, ತನ್ನ ವಿಚಾರಗಳನ್ನು ಜನರ ಮುಂದಿಟ್ಟು ಮತ್ತು ಆ ಮೂಲಕ ಮನವೊಲಿಸಿ ಜನಬೆಂಬಲ ಗಳಿಸುವುದು ನ್ಯಾಯಯುತ ಮಾರ್ಗ. ಆದರೆ ಇಂತಹ ನೇರ ಮಾರ್ಗ ಬಿಟ್ಟು ಅಕ್ರಮ ಹಾದಿಯಲ್ಲಿ ದಮನ ಮಾಡಲು ಮುಂದಾಗುವುದು ಸರ್ವಾಧಿಕಾರಿ ನಡೆ. ಕಾನೂನು-ಕಾಯ್ದೆಗಳಿಗೆ ಸರ್ಕಾರವೇ ಗಾಳಿಗೆ ತೂರಿದರೆ ಏನೆನ್ನುವುದು? ಭಾರತವೂ ಅಂತಹ ಸರ್ವಾಧಿಕಾರಿ ಆಳ್ವಿಕೆಗೆ ಒಳಪಟ್ಟಿದೆಯೇ ಎಂದು ಹಲವರು ಆತಂಕ ಸಂಶಯಗಳನ್ನು ವ್ಯಕ್ತಪಡಿಸುತ್ತಿದ್ದರು. ಇದೀಗ ಬಿಜೆಪಿಯು ಬಡ ಮುಸ್ಲಿಮರ ಮನೆಗಳನ್ನು ಬುಲ್ಡೋಜರ್‌ನಿಂದ ನಾಶಪಡಿಸುತ್ತಿರುವುದು ನೋಡಿದರೆ ಭಾರತ ಸರ್ವಾಧಿಕಾರಿಯ ಆಡಳಿತದಲ್ಲಿದೆ ಎಂಬಂತೆ ಗೋಚರಿಸುತ್ತಿದೆ.
ಹಿಂದಿನಿಂದಲೂ ಆಡಳಿತ ಪಕ್ಷಗಳು ವಿರೋಧ ಪಕ್ಷಗಳನ್ನು, ಪ್ರಬಲ ಎದುರಾಳಿಗಳನ್ನು ಮಣಿಸಲು ಸಿಬಿಐ, ಇಡಿ, ಚುನಾವಣಾ ಆಯೋಗ ಸೇರಿದಂತೆ ಹಲವು ಸ್ವತಂತ್ರ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಾ ಬಂದಿವೆ. ಈ ಕುರಿತು ತೀವ್ರ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ವಿರೋಧ ಪಕ್ಷಗಳು ಅಧಿಕಾರಕ್ಕೆ ಬಂದಾಗ ಸೇಡು ತೀರಿಸಿಕೊಳ್ಳಲು ಅವರೂ ಸಹ ಇದನ್ನೇ ಮಾಡಿದ್ದಿದೆ. ಆದರೆ 2014ರಿಂದ ಬಿಜೆಪಿ ಪಕ್ಷಕ್ಕೆ ಕೇಂದ್ರದಲ್ಲಿ ಬಹುಮತ ಸಿಕ್ಕ ಮೇಲೆ ಈ ದುರ್ಬಳಕೆ ಶರವೇಗದಲ್ಲಿ ನಡೆಯುತ್ತಿದೆ ಎಂಬ ಆರೋಪಗಳು ಹೆಚ್ಚಿವೆ. ಈ ಅಸ್ತ್ರಗಳನ್ನು ಬಳಸಿ ಇಂದಿಗೂ ವಿರೋಧ ಪಕ್ಷಗಳನ್ನು ಹಣಿಯುತ್ತಿರುವ ಬಿಜೆಪಿ ಕೆಲವರನ್ನು ಬೆದರಿಸಿ ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದೆ. ಬಗ್ಗದವರ ಮೇಲೆ ಸಿಬಿಐ, ಇಡಿ ದಾಳಿ ನಡೆಸಿ ದನಿಯಡಗಿಸುವ ಪ್ರಯತ್ನವನ್ನು ಜಾರಿಯಲ್ಲಿಟ್ಟಿದೆ. ವಿರೋಧ ಪಕ್ಷಗಳನ್ನು ಮಾತ್ರವಲ್ಲದೆ, ತಮ್ಮ ರಾಜಕೀಯ ವಿರೋಧಿಗಳನ್ನು, ಹೋರಾಟಗಾರರನ್ನು ಮಣಿಸಲು ಕೂಡ ಅದು ಮುಂದಾಗಿದೆ. ಅದಕ್ಕಾಗಿ ಈಗ ಹೊಸ ಮತ್ತು ವಿನಾಶಕಾರಿ ವಿಧಾನವೊಂದನ್ನು ಕಂಡುಕೊಂಡಿದ್ದು, ಯಾರಾದರೂ ತಮ್ಮ ವಿರುದ್ಧ ಹೋರಾಡಿದರೆ ಅವರ ಮನೆ ಮೇಲೆ ಬುಲ್ಡೋಜರ್ ಹರಿಸುತ್ತಿದೆ. ಆ ಮೂಲಕ ಈ ನೆಲದ ಕಾನೂನುಗಳನ್ನು ಗಾಳಿಗೆ ತೂರಿ ಅಟ್ಟಹಾಸಗೈಯ್ಯುವ ಕೀಳುಮಟ್ಟಕ್ಕಿಳಿದಿದೆ. ಆ ರೀತಿಯಾಗಿ ನಮ್ಮ ವಿರುದ್ಧ ಹೋರಾಡಬೇಡಿ ಎಂಬ ಸಂದೇಶ ನೀಡಲು ಯತ್ನಿಸುತ್ತಿದೆ.
ಇದು ಆರಂಭವಾಗಿದ್ದು ಮತ್ತು ಅತ್ಯಂತ ದುಃಸ್ಥಿತಿಗೆ ತಲುಪಿರುವುದು ಉತ್ತರ ಪ್ರದೇಶದಲ್ಲಿ. ದೇಶದಲ್ಲಿಯೇ ಅತಿ ಹೆಚ್ಚಿನ ಕೊಲೆ, ಸುಲಿಗೆ, ಅತ್ಯಾಚಾರ ನಡೆಯುವುದು ಇದೇ ರಾಜ್ಯದಲ್ಲಿ ಎಂದು NCRB (ನ್ಯಾಷನಲ್ ಕ್ರೈಮ್ ರಕಾರ್ಡ್ಸ್ ಬ್ಯೂರೋ) ವರದಿಗಳು ಸಾರಿಸಾರಿ ಹೇಳುತ್ತವೆ. ಇಂತವುಗಳನ್ನು ನಿಗ್ರಹಿಸಬೇಕಾದ ಸರ್ಕಾರ ಅದರ ಬದಲು ತಾನೇ ವಿನಾಶಕಾರಿ ಕೃತ್ಯಗಳ ನೇತೃತ್ವ ವಹಿಸಿದರೆ ಪರಿಣಾಮ ಏನಾಗಬೇಡ? ಈಗ ಅಲ್ಲಿ ಆಗುತ್ತಿರುವುದು ಅದೇ ಆಗಿದೆ. ಮಾಫಿಯಾ, ಕ್ರಿಮಿನಲ್‌ಗಳನ್ನು ಬಗ್ಗುಬಡಿಯುತ್ತೇವೆ ಎಂದು ಹೇಳಿಕೊಂಡು ಇದುವರೆಗೂ ಅಲ್ಲಿ ಅಮಾಯಕ ಮುಸ್ಲಿಮರ ಮೇಲೆ ಅಸಂವಿಧಾನಿಕವಾಗಿ ಬುಲ್ಡೋಜರ್ ಹರಿಸಲಾಗಿದೆ. ನೂರಾರು ಮನೆಗಳನ್ನು ನೆಲಸಮ ಮಾಡಿ ವಿಕೃತಿ ಮೆರೆಯಲಾಗಿದೆ. ಇದನ್ನು ಸಂಘಪರಿವಾರದ ಬೆಂಬಲಿಗರು ಪ್ರೋತ್ಸಾಹಿಸುತ್ತಿದ್ದು, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ರನ್ನು ’ಬುಲ್ಡೋಜರ್ ಬಾಬಾ’ ಎಂದು ಕರೆದರೆ, ಮತ್ತೊಂದು ಬಿಜೆಪಿ ಸರ್ಕಾರವಿರುವ ಮಧ್ಯಪ್ರದೇಶದ ಸಿಎಂ ಶಿವರಾಜ್‌ಸಿಂಗ್ ಚೌಹಾಣ್‌ರನ್ನು ’ಬುಲ್ಡೋಜರ್ ಮಾಮಾ’ ಎಂದು ಕರೆದು ಹುರಿದುಂಬಿಸುತ್ತಿದ್ದಾರೆ. ಅಂದರೆ ಬಹುಸಂಖ್ಯಾತ ಜನರ ಬೆಂಬಲ ಗಳಿಸಿಯೇ ಈ ದುಷ್ಕೃತ್ಯಗಳನ್ನು ಸರ್ಕಾರ ಎಸಗುತ್ತಿದೆ. ಆದರೆ ಇದು ನಾಳೆ ತಮ್ಮ ಬುಡಕ್ಕೂ ಬರಬಹುದು ಎಂಬುದನ್ನು ಆ ಬಹುಸಂಖ್ಯಾತರು ಮರೆತಿರುವುದು ವಿಷಾದನೀಯ.
ಬುಲ್ಡೋಜರ್ ಅಡಿ ಸಿಕ್ಕ ಸಂತ್ರಸ್ತರು
2022ರ ಉತ್ತರ ಪ್ರದೇಶ ಚುನಾವಣೆಗೂ ಮುನ್ನವೇ ಸಿಎಂ ಯೋಗಿ ಆದಿತ್ಯನಾಥ್ ಅಕ್ರಮ ಕಟ್ಟಡಗಳ ನೆಪದಲ್ಲಿ ಹಲವೆಡೆ ಬುಲ್ಡೋಜರ್ ಹರಿಸಿ ಬೆದರಿಕೆ ಹುಟ್ಟಿಸಿದ್ದರು. ಅದನ್ನೆ ಮಾದರಿಯಾಗಿ ತೆಗೆದುಕೊಂಡ ಕೇಂದ್ರ ಸರ್ಕಾರ, ದೆಹಲಿ ಪೊಲೀಸರನ್ನು ಬಳಸಿ ಬಡವರು, ಶ್ರಮಿಕರು ವಾಸಿಸುವ ದೆಹಲಿಯ ಜಹಾಂಗೀರ್ ಪುರಿಯಲ್ಲಿ ಬುಲ್ಡೋಜರ್ ದಾಳಿ ನಡೆಸಿತು. ಸುಪ್ರೀಂ ಕೋರ್ಟ್ ಆದೇಶಕ್ಕೂ ಬೆಲೆ ಕೊಡದೆ ಅಮಾನವೀಯವಾಗಿ ಬಡವರ ಮನೆಗಳ ನೆಲಸಮಕ್ಕೆ ಮುಂದಾಯಿತು. ಸಿಪಿಐ ಪಕ್ಷದ ಬೃಂದಾ ಕಾರಟ್ ಸೇರಿದಂತೆ ನೂರಾರು ಹೋರಾಟಗಾರರು ಬುಲ್ಡೋಜರ್‌ಗಳ ಎದುರು ನಿಂತು ಸುಪ್ರೀಂ ಆದೇಶ ತೋರಿಸಿ ತೆರವು ಕಾರ್ಯಾಚರಣೆ ತಡೆಯಬೇಕಾಗಿ ಬಂತು. ಅದಾದ ಒಂದೇ ವಾರದಲ್ಲಿ ಸಿಎಎ-ಎನ್‌ಆರ್‌ಸಿ ವಿರೋಧಿ ಹೋರಾಟದ ಕೇಂದ್ರ ಬಿಂದುವಾಗಿದ್ದ ದೆಹಲಿಯ ಶಾಹೀನ್‌ಬಾಗ್‌ನಲ್ಲಿಯೂ ಅದು ಮುಂದುವರಿಯಿತು. ಬಡ ಮುಸ್ಲಿಂ ವ್ಯಾಪಾರಿಗಳ ಅಂಗಡಿ ಮೇಲೆ ಬುಲ್ಡೋಜರ್‌ಗಳು ಮೃಗೀಯ ವರ್ತನೆ ತೋರಿದವು. ಒಂದು ವಾರಗಳ ಕಾಲ ಬುಲ್ಡೋಜರ್‌ಗಳ ಮೊರೆತ ನಡೆಯಿತು.
ಇದೀಗ ಉತ್ತರ ಪ್ರದೇಶ ಸರ್ಕಾರ ಮತ್ತಷ್ಟು ಕ್ರೂರತೆಯೊಂದಿಗೆ ಹಲವು ಪ್ರದೇಶಗಳಲ್ಲಿ ಮುಸ್ಲಿಂ ಹೋರಾಟಗಾರರ ಮನೆಗಳನ್ನು ಕೆಡವುತ್ತಿದೆ. ಮುಸ್ಲಿಂ ಮುಖಂಡರಾದ ಜಾಫರ್ ಹಯಾತ್ ಹಶ್ಮಿ, ಮೊಹಮ್ಮದ್ ಇಶ್ತಿಯಾಕ್, ಮುಝಮ್ಮಿಲ್ ಮತ್ತು ಅಬ್ದುಲ್ ವಾಕಿರ್ ಎಂಬುವವರ ಮನೆಗಳನ್ನು ಧ್ವಂಸಗೊಳಿಸಿ, ಪೊಲೀಸರು ಅದನ್ನು ಸಂಭ್ರಮದಿಂದ ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡಿದ್ದಾರೆ. ಮುಂದುವರಿದು ಸಿಎಎ ವಿರೋಧಿ ಹೋರಾಟದಲ್ಲಿ ಮೂಂಚೂಣಿಯಲ್ಲಿದ್ದ ಹೋರಾಟಗಾರ್ತಿ ಅಫ್ರೀನ್ ಫಾತಿಮಾ ಮತ್ತು ಅವರ ತಂದೆ ಜಾವೇದ್ ಮೊಹಮ್ಮದ್‌ರವರ ಮನೆ ಮೇಲೆಯೂ ಬುಲ್ಡೋಜರ್ ಹರಿಸಿ ತಮ್ಮ ವಿರುದ್ಧ ಮಾತನಾಡುವವರಿಗೆ ಇದುವೆ ಶಿಕ್ಷೆ ಎಂದು ಸಂದೇಶ ಸಾರಲು ಮುಂದಾಗಿದೆ ಅಲ್ಲಿನ ಸರ್ಕಾರ.
ಕ್ರೊನಾಲಜಿ ಅರ್ಥಮಾಡಿಕೊಳ್ಳಿ
ಇದುವರೆಗೆ ಎಲ್ಲೆಲ್ಲಿ ಬುಲ್ಡೋಜರ್ ಹರಿಸಲಾಗಿದೆಯೇ ಆ ಎಲ್ಲಾ ಕಡೆ ಅಕ್ರಮ ಕಟ್ಟಡಗಳು ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ ಅದಕ್ಕೂ ಮುಂಚೆ ಆ ಎಲ್ಲಾ ಸ್ಥಳಗಳಲ್ಲಿ ಕೋಮುಗಲಭೆಗಳು ನಡೆದಿದ್ದು, ಆ ಗಲಭೆಕೋರರ ಮೇಲಿನ ಆಪರೇಷನ್ ಇದು ಎಂದು ಮಾಧ್ಯಮಗಳು ಮತ್ತು ಸರ್ಕಾರದ ಬೆಂಬಲಿಗರು ಸಂಭ್ರಮಿಸಿದ್ದಾರೆ. ಜಹಾಂಗೀರ್‌ಪುರಿಯಲ್ಲಿ ಗಲಭೆಯಲ್ಲಿ ಪೊಲೀಸ್ ವೈಫಲ್ಯ ಎದ್ದು ಕಾಣುತ್ತಿತ್ತು, ಅದನ್ನು ಮುಚ್ಚಿಹಾಕಲು ಬುಲ್ಡೋಜರ್ ಹರಿಸಲಾಯಿತು. ಈಗ ಪ್ರವಾದಿ ನಿಂದನೆ ಮಾಡಿದ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಮೇಲಿನ ಆಕ್ರೋಶವನ್ನು ಡೈವರ್ಟ್ ಮಾಡಲು ರಾಂಚಿ, ಕಾನ್ಪುರ, ಸಹರಾನ್‌ಪುರ್, ಪ್ರಯಾಗ್ ರಾಜ್‌ಗಳಲ್ಲಿ ಗಲಭೆ ಎಬ್ಬಿಸಲಾಯ್ತು. 360ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಯ್ತು. ಅದಾದ ಎರಡೇ ದಿನಗಳಲ್ಲಿ ಆರೋಪಿಗಳು ಎಂದು ಕರೆದು ಹಲವು ಮುಸ್ಲಿಮರ ಮನೆಗಳನ್ನು ಕೆಡವಲಾಗಿದೆ. ಆ ಮೂಲಕ ಗಲಭೆ ಮಾಡಿದವರಿಗೆ ಶಿಕ್ಷೆ ನೀಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಗಲಭೆ ಆರೋಪಿಗಳ ಮನೆ ಕೆಡವಿ ಎಂದು ಸಂವಿಧಾನದಲ್ಲಿ, ಕಾನೂನಿನಲ್ಲಿ, ಐಪಿಸಿಯ ಯಾವ ಸೆಕ್ಷನ್ ಹೇಳುತ್ತದೆ ತೋರಿಸಿ ಎಂದು ಪ್ರಶ್ನಿಸಿದವರಿಗೆ ನೀವು ಗಲಭೆಕೋರರ ಪರವಾಗಿದ್ದೀರಿ ಎಂದು ಹೆದರಿಸಲಾಗುತ್ತಿದೆ.
ನಮ್ಮ ದೇಶದಲ್ಲಿ ಪ್ರಜೆಗಳಾದ ನಾವು ನಮಗೆ ಅರ್ಪಿಸಿಕೊಂಡು ಸಂವಿಧಾನವನ್ನು ಜಾರಿಗೆ ತಂದಿದ್ದೇವೆ. ಅದರ ಪ್ರಕಾರ ಕಾನೂನುಗಳಿದ್ದು, ಯಾವುದೇ ಜನರ ವಿರುದ್ಧ ಯಾವುದೇ ಆರೋಪ ಕೇಳಿಬಂದಾಗ ಪ್ರಕರಣ ದಾಖಲಿಸಿ, ತನಿಖೆ ನಡೆಸಿ, ಶಿಕ್ಷೆ ವಿಧಿಸುವ ಒಂದು ಸಾಂವಿಧಾನಿಕ ಪ್ರಕ್ರಿಯೆ ಇಲ್ಲಿದೆ. ಆದರೆ ಅದನ್ನು ಗಾಳಿಗೆ ತೂರುತ್ತಿರುವ ಬಿಜೆಪಿ ಸರ್ಕಾರ ಮುಸ್ಲಿಮರನ್ನು ಟಾರ್ಗೆಟ್ ಮಾಡಿ ಅವರ ಮನೆ ಉರುಳಿಸುತ್ತಿದೆ. Instant Justice (ತ್ವರಿತ ನ್ಯಾಯ) ಪರಿಕಲ್ಪನೆಯ ನಕಲಿ ಎನ್‌ಕೌಂಟರ್‌ಗಳಂತೆ, ನಕಲಿ ಡೆಮೊಲಿಶಗಳು ನಡೆಯುತ್ತಿವೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದ ಒಂದು ಗುಂಪು ಮತ್ತು ಮಾಧ್ಯಮಗಳು ಅದನ್ನು ಸಂಭ್ರಮಿಸುವಂತೆ ನೋಡಿಕೊಳ್ಳುವ ಮೂಲಕ, ಒಪ್ಪಿಗೆಯ ಮುದ್ರೆಯೊತ್ತಲಾಗುತ್ತದೆ. ಆ ಮೂಲಕ ಬಿಜೆಪಿ ಬಹುಸಂಖ್ಯಾತರ ಮತಗಳ ಮೇಲೆ ಕಣ್ಣಿಟ್ಟು ತನ್ನ ಅಧಿಕಾರ ಭದ್ರಗೊಳಿಸಿಕೊಳ್ಳುತ್ತಿದೆ. ಬಹುಸಂಖ್ಯಾತರ ಒಪ್ಪಿಗೆಯ ಮೇರೆಗೆ ಅಲ್ಪಸಂಖ್ಯಾತರನ್ನು ಮತ್ತು ದಮನಿತ ವರ್ಗವನ್ನು ಶೋಷಿಸುವ ಈ ಪ್ರಕ್ರಿಯೆಗೆ ಜಗತ್ತಿನಾದ್ಯಂತ ಫ್ಯಾಸಿಸಂ ಎಂದು ಕರೆಯಲಾಗುತ್ತದೆ. ಅದೀಗ ಭಾರತದಲ್ಲಿ ಬೇರು ಬಿಡುತ್ತಿದೆ.
ಸರ್ವಾಧಿಕಾರಿಗಳಾರೂ ಉಳಿದಿಲ್ಲ ಎನ್ನುತ್ತಿದೆ ಇತಿಹಾಸ
ಸರ್ವಾಧಿಕಾರಿಯಾಗಿ ಮೆರೆದು ಜನರನ್ನು ಅಮಾನವೀಯವಾಗಿ ಶೋಷಿಸಿದ ಯಾವ ರಾಜನೂ, ಯಾವ ವ್ಯಕ್ತಿಯೂ ನೆಮ್ಮದಿಯಿಂದ ಉಳಿದ ಉದಾಹರಣೆಯಿಲ್ಲ. ಹಿಂದಿನ ರಾಜ ಮಹಾರಾಜರಿಂದ ಹಿಡಿದು, ಹಿಟ್ಲರ್-ಮುಸಲೋನಿಯವರೆಗೆ, ಮಧ್ಯಪ್ರಾಚ್ಯದ ಸರ್ವಾಧಿಕಾರಿಗಳಿಂದ ಪಕ್ಕದ ರಾಷ್ಟ್ರ ಶ್ರೀಲಂಕಾದವರೆಗೆ ಸರ್ವಾಧಿಕಾರಿಗಳಾಗಿದ್ದವರು ಸೋತು ಸುಣ್ಣವಾಗಿದ್ದಾರೆ. ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಯಾವ ಜನರು ಇವರನ್ನು ಬೆಂಬಲಿಸಿದ್ದರೋ ಅವರೇ ತಿರುಗಿಬಿದ್ದಿರುವ ನೂರಾರು ಉದಾಹರಣೆಗಳು ಪ್ರಪಂಚದಲ್ಲಿ ಸಿಗುತ್ತವೆ. ಆದರೆ ಅದು ಹಾಲಿ ಸರ್ವಾಧಿಕಾರಿಗಳಿಗೆ ಕಾಣುವುದಿಲ್ಲ. ಅಧಿಕಾರದ ಹಪಾಹಪಿ ಅವರನ್ನು ಯಾವ ಹಂತಕ್ಕೆ ಬೇಕಾದರೂ ತೆಗೆದುಕೊಂಡು ಹೋಗುತ್ತದೆ. ಈಗ ಭಾರತದಲ್ಲಿಯೂ ಅದೇ ಆಗುತ್ತಿದೆ.
ಇದು ಮೋದಿ ವರ್ಸಸ್ ಯೋಗಿ ಕುಸ್ತಿಯೇ?
ನರೇಂದ್ರ ಮೋದಿಯವರ ಮೊದಲ ಐದು ವರ್ಷಗಳ ಆಡಳಿತದ ನಂತರ ಎರಡನೇ ಬಾರಿ ಅವರಿಗೆ ಬಹುಮತ ಸಿಕ್ಕ ನಂತರ ಮುಸ್ಲಿಂ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ವಿರೋಧಿಯಾದ, ಸಂವಿಧಾನ ವಿರೋಧಿಯಾದ ಹಲವು ಕಾನೂನುಗಳನ್ನು ತರಲು ಮುಂದಾಗಿತ್ತು. ಆದರೆ ಆ ಎಲ್ಲಾ ಸಂದರ್ಭಗಳಲ್ಲಿಯೂ ಈ ದೇಶದ ಪ್ರಜ್ಞಾವಂತ ಜನರು ಒಗ್ಗಟ್ಟಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ದಿಟ್ಟವಾಗಿ ಹೋರಾಡಿ ಸರ್ಕಾರವನ್ನು ಮಣಿಸಿದ್ದಾರೆ. ಉದಾಹರಣೆಯಾಗಿ ಸಿಎಎ-ಎನ್‌ಆರ್‌ಸಿ ವಿರೋಧಿ ಹೋರಾಟ ಮತ್ತು ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟ ನೋಡಬಹುದು. ಈ ಎರಡೂ ಸಂದರ್ಭಗಳಲ್ಲಿಯೂ ಮೋದಿ ಸರ್ಕಾರ ಹೋರಾಟನಿರತ ಜನರೆದುರು ಮಂಡಿಯೂರಿದೆ. ಆ ಸಂದರ್ಭಗಳಲ್ಲಿ ಉಗ್ರ ಹಿಂದುತ್ವವಾದಿಗಳು (ಬಿಜೆಪಿ ಪ್ರಕಾರ ಫ್ರಿಂಜ್ ಎಲಿಮೆಂಟ್‌ಗಳು) ಮೋದಿಯವರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ. ಮೋದಿ ಬೇಡ ಯೋಗಿ ಬೇಕು ಎಂದು ಘೋಷಿಸಿದ್ದಾರೆ. ನೂಪುರ್ ಶರ್ಮಾ ಪ್ರವಾದಿ ನಿಂದನೆ ಪ್ರಕರಣದಲ್ಲಿಯೂ ಇದೇ ನಡೆದಿದೆ. ಅಂತಾರಾಷ್ಟ್ರೀಯ ಒತ್ತಡಗಳ ಕಾರಣಕ್ಕೆ, ಅದರಲ್ಲಿಯೂ ಮುಸ್ಲಿಂ ರಾಷ್ಟ್ರಗಳು ಭಾರತ ಸರ್ಕಾರದ ವಿರುದ್ಧ ಸಿಡಿದೆದ್ದ ಸಂದರ್ಭದಲ್ಲಿ ಬಿಜೆಪಿಯು ಆ ಇಬ್ಬರೂ ಫ್ರಿಂಜ್ ಎಲಿಮೆಂಟ್‌ಗಳನ್ನು ಅಮಾನತ್ತು ಮಾಡಿ ಅವರ ಮೇಲೆ ಪ್ರಕರಣ ದಾಖಲಿಸಿದೆ. ಇದು ದೇಶಾದ್ಯಂತ ಹಬ್ಬಿರುವ ಇತರ ಫ್ರಿಂಜ್ ಎಲಿಮೆಂಟ್‌ಗಳಿಗೆ ಅವಮಾನವಾಗಿ ಕಂಡಿದ್ದು, ಅವರು ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೌಲನಾ ಮೋದಿ ಎಂದು ಹೀಯಾಳಿಸಿದ್ದಾರೆ. ಈಗ ಅವರೆಲ್ಲರೂ ಬುಲ್ಡೋಜರ್ ಬಾಬಾ ಯೋಗಿ ಮುಂದಿನ ಪ್ರಧಾನಿಯಾಗಬೇಕೆಂದು ಆಗ್ರಹಿಸುತ್ತಿದ್ದಾರೆ.
ಇದೇ ಸಮಯಕ್ಕೆ ಕಾದು ಕುಳಿತಿದ್ದಂತೆ ವರ್ತಿಸಿರುವ ಯೋಗಿ ಆದಿತ್ಯನಾಥ್ ಕೂಡ ಉತ್ತರ ಪ್ರದೇಶದಲ್ಲಿ ಎರಡನೇ ಬಾರಿಗೆ ಬಹುಮತ ಗಳಿಸಿರುವ ಬಲದಲ್ಲಿ ತಮ್ಮ ಶಕ್ತಿ ತೋರಿಸಲು ಮುಂದಾಗಿದ್ದಾರೆ. ಹಾಗಾಗಿ ಗಲಭೆಕೋರರಿಗೆ ಪಾಠ ಕಲಿಸುತ್ತೇನೆ ಎಂಬ ನೆಪದಲ್ಲಿ ಮುಸ್ಲಿಮ್ ಹೋರಾಟಗಾರರ ಮೇಲೆ ನಿರ್ದಾಕ್ಷಿಣ್ಯವಾಗಿ ಬುಲ್ಡೋಜರ್ ಹರಿಸುತ್ತಿದ್ದಾರೆ. ಆ ಮೂಲಕ ನೂಪುರ್ ಶರ್ಮಾ ಅಮಾನತ್ತಿನಿಂದ ಸಿಟ್ಟಾಗಿದ್ದ ಫ್ರಿಂಜ್ ಎಲಿಮೆಂಟ್‌ಗಳ ಬೆಂಬಲ ಗಳಿಸುತ್ತಿದ್ದಾರೆ. ಆದರೆ ಈ ಸರ್ವಾಧಿಕಾರಿ ನಡೆ, ಹಿಂಸೆಯ ಪ್ರಚೋದನೆಯೆಂಬುದು ಹುಲಿಯ ಸವಾರಿ ಇದ್ದ ಹಾಗೆ. ಅದನ್ನು ನೀವು ಸದಾ ಮುಂದುವರೆಸುತ್ತಿರಲೇಬೇಕಿದೆ. ಯಾವುದೇ ಕಾರಣಕ್ಕೆ ಹುಲಿಯ ಮೇಲಿಂದ ಕೆಳಗಿಳಿದರೆ ಅದು ನಿಮ್ಮನ್ನೆ ತಿಂದು ಹಾಕುತ್ತದೆ. ಈಗ ಮೋದಿ ಅದರಿಂದ ಪಾಠ ಕಲಿತಿದ್ದಾರೇನೋ ಎಂಬ ಅನುಮಾನ ಹುಟ್ಟುವಷ್ಟರಲ್ಲಿಯೇ ಯೋಗಿ ಆ ಹುಲಿ ಸವಾರಿಗೆ ಸಜ್ಜಾಗಿದ್ದಾರೆ. ಇದು ಸಂಘಪರಿವಾರದ ವಿನ್ಯಾಸವೇ ಇರಬಹುದು ಕೂಡ. ಇದು ಕೂಡಲೇ ನಿಲ್ಲದಿದ್ದಲ್ಲಿ ಇದು ದೇಶವನ್ನು ವಿನಾಶಕ್ಕೆ ಕೊಂಡೊಯ್ಯವುದರಲ್ಲಿ ಅನುಮಾನವಿಲ್ಲ.
ಇದನ್ನೂ ಓದಿ: ಮಾಧ್ಯಮಗಳ ಬುಲ್ಡೋಜರ್ ಸಂಸ್ಕೃತಿ



ತಲೇಲಿ ಸಗಣಿ ತುಂಬಿರೋ ಅವಿವೇಕಿಗಳು ಒಳ್ಳೆಯ ಸ್ಥಾನ ಮಾನ ಇರುವ ಕುರ್ಚಿಗಳಿಗೆ ಒಕ್ಕರಿಸಿದ್ರೆ ಹೀಗೆ ಆಗೋದು 😡😡😡ಇದ್ಕೆ ಬೆಂಬಲಗಳು ಬೇರೆ ಕೇಡು ಥೂ… ಇವರ ಜನಮಕ್ಕೆ.. ಎಂಥ ಪೂಕಲಾoಡ ಗೊತ್ತಿಲ್ಲ,, ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ಅರಿವಿಲ್ಲದ ಅವಿವೇಕಿಗಳು, ಖಬರಗೇಡಿಗಳು ಅಂತಲೂ ಕರೀಬಹುದು ಇವುಗಳನ್ನು