ಶಿವಸೇನೆಯ ನಾಯಕ ಸಚಿವ ಏಕನಾಥ್ ಶಿಂಧೆ ಮತ್ತು ಇತರ ಶಾಸಕರು ಬಂಡಾಯವೆದ್ದ ನಂತರ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಬಿಕ್ಕಟ್ಟು ಉಲ್ಬಣಗೊಂಡಿದೆ. ಇದರಿಂದ ಶಿವಸೇನೆ ಬುಧವಾರ ತನ್ನ ಶಾಸಕರಿಗೆ ಸಂಜೆ 5 ಗಂಟೆಯೊಳಗೆ ಮುಂಬೈನಲ್ಲಿ ಸಭೆಗೆ ಹಾಜರಾಗುವಂತೆ ಗಡುವು ನೀಡಿದೆ. ಇಲ್ಲದಿದ್ದರೇ ಸೂಕ್ತ ಕ್ರಮವನ್ನು ಎದುರಿಸುವಂತೆ ಎಚ್ಚರಿಕೆ ನೀಡಿದೆ.
ವಾಟ್ಸಾಪ್, ಇಮೇಲ್ ಮತ್ತು ಎಸ್‌ಎಂಎಸ್ ಮೂಲಕ ಕಳುಹಿಸಿರುವ ಪತ್ರದಲ್ಲಿ ಶಿವಸೇನೆ ಎಲ್ಲಾ ಶಾಸಕರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಅಧಿಕೃತ ನಿವಾಸ ವರ್ಷಾದಲ್ಲಿ ಸಭೆಗೆ ಕರೆಯಲಾಗಿದೆ ಎಂದು ತಿಳಿಸಲಾಗಿದೆ. ಕೊರೊನಾ ಪಾಸಿಟಿವ್ ಆಗಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಭೆಯ ಅಧ್ಯಕ್ಷತೆ ವಹಿಸುವ ನಿರೀಕ್ಷೆಯಿದೆ.
“ಇಂದು ಸಂಜೆ 5 ಗಂಟೆಗೆ ನೀವು ಈ ಸಭೆಗೆ ಹಾಜರಾಗದಿದ್ದರೆ, ನೀವು ಪಕ್ಷವನ್ನು ತೊರೆಯುವ ಉದ್ದೇಶವನ್ನು ಹೊಂದಿದ್ದೀರಿ ಎಂದು ಭಾವಿಸಲಾಗುತ್ತದೆ. ಕಾನೂನಿನ ಅಡಿಯಲ್ಲಿ ನಿಮ್ಮ ಸದಸ್ಯತ್ವವನ್ನು ರದ್ದುಗೊಳಿಸಲಾಗುತ್ತದೆ” ಎಂದು ಪತ್ರದಲ್ಲಿ ಪತ್ರದಲ್ಲಿ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಉದ್ಧವ್ ಸರ್ಕಾರಕ್ಕೆ ಸಂಕಷ್ಟ: 46 ಶಾಸಕರ ಬೆಂಬಲವಿದೆ, ಆದರೆ ಪಕ್ಷ ಬದಲಾಯಿಸುವುದಿಲ್ಲ ಎಂದ ಏಕನಾಥ್ ಶಿಂಧೆ

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮಧ್ಯಾಹ್ನದ ಸುಮಾರಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ತಮ್ಮ ಸಂಪುಟ ಸಭೆಯನ್ನು ನಡೆಸಿದ ನಂತರ ಈ ಪತ್ರ ಕಳುಹಿಸಲಾಗಿದೆ.
ಬಿಜೆಪಿ ಆಡಳಿತವಿರುವ ಅಸ್ಸಾಂನ ಗುವಾಹಟಿಯಲ್ಲಿದ್ದು, ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಬಂಡಾಯ ನಾಯಕ ಏಕನಾಥ್ ಶಿಂಧೆ, ’ನನಗೆ ಸ್ವತಂತ್ರ ಶಾಸಕರು ಸೇರಿದಂತೆ 46 ಶಾಸಕರ ಬೆಂಬಲವಿದೆ. ಆದರೆ, ಪಕ್ಷವನ್ನು ಬದಲಾಯಿಸುವ ಯಾವುದೇ ಯೋಚನೆಯಿಲ್ಲ. ತಾನು ಶಿವಸೇನೆಯಿಂದ ಬೇರ್ಪಡುವುದಿಲ್ಲ ಮತ್ತು ಬಾಳಾಸಾಹೇಬ್ ಠಾಕ್ರೆಯವರ ಸಿದ್ಧಾಂತವನ್ನು ಮುಂದುವರಿಸುತ್ತೇನೆ. ನಾವು ಹಿಂದುತ್ವದಲ್ಲಿ ನಂಬಿಕೆ ಇಟ್ಟಿದ್ದೇವೆ’ ಎಂದು ತಿಳಿಸಿದ್ದರು.
ಇನ್ನು ಗುಜರಾತಿನ ಸೂರತ್‌ನಿಂದ ಚಾರ್ಟರ್ಡ್ ಫ್ಲೈಟ್‌ನಲ್ಲಿ ಪ್ರಯಾಣಿಸುತ್ತಿದ್ದ ಬಂಡಾಯ ಶಿವಸೇನೆ ಶಾಸಕರ ನಿಖರ ಸಂಖ್ಯೆಯನ್ನು ಖಚಿತಪಡಿಸಲು ಸಾಧ್ಯವಾಗಿಲ್ಲ. ಆದರೆ ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ 89 ಪ್ರಯಾಣಿಕರಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಮಾಡಿದೆ.
ಇದನ್ನೂ ಓದಿ: ಉದ್ಧವ್ ಸರ್ಕಾರಕ್ಕೆ ಸಂಕಷ್ಟ: ವಿಧಾನಸಭೆ ವಿಸರ್ಜನೆಯತ್ತ ರಾಜಕೀಯ ಬೆಳವಣಿಗೆ-ಸಂಜಯ್ ರಾವತ್ ಟ್ವೀಟ್


