‘ಪ್ರಸಾದ’ದ ಪ್ಯಾಕೆಟ್‌ಗಳ ಮೇಲೆ ಉತ್ಪನ್ನದ ತೂಕ, ಉತ್ಪಾದನಾ ದಿನಾಂಕ, ಮುಕ್ತಾಯ ದಿನಾಂಕ ಮತ್ತು ತೂಕದ ಪ್ರಮಾಣವನ್ನು ತೋರಿಸಿಲ್ಲ ಎಂದು ಗ್ರಾಹಕರು ನೀಡಿದ ದೂರಿನ ಮೇರೆಗೆ ತೆಲಂಗಾಣದ ಸಮಾನತೆಯ ಪ್ರತಿಮೆಯ ವಿರುದ್ಧ ಕಾನೂನು ಮಾಪನಶಾಸ್ತ್ರ ಇಲಾಖೆ ಪ್ರಕರಣ ದಾಖಲು ಮಾಡಿದೆ.
11ನೇ ಶತಮಾನದ ಸಮಾಜ ಸುಧಾರಕ ರಾಮಾನುಜಾಚಾರ್ಯರ 216 ಅಡಿ ಪ್ರತಿಮೆಯನ್ನು ಸಮಾನತೆಯ ಪ್ರತಿಮೆ ಎಂದು ಹೆಸರಿಸಲಾಗಿದೆ. ಈ ಪ್ರತಿಮೆಯು ಶಂಶಾಬಾದ್ ಬಳಿಯ 45 ಎಕರೆ ಜಾಗದಲ್ಲಿ, ರಂಗಾ ರೆಡ್ಡಿ ಜಿಲ್ಲೆಯ ಮುಚಿಂತಲ್‌ನಲ್ಲಿರುವ ಚಿನ್ನಾ ಜೀಯರ್ ಟ್ರಸ್ಟ್‌ನ ಆವರಣದಲ್ಲಿದೆ.
ಈ ಹಿಂದೆ ಮೇ 26ರಂದು ವಿನಯ್ ವಂಗಾಲ ಎಂಬವರು ದೂರು ನೀಡಿದ್ದರು. ಪ್ರಸಾದದ ಪ್ಯಾಕೆಟ್‌ಗಳಲ್ಲಿ ತೂಕ, ಉತ್ಪಾದನೆ ಮತ್ತು ಮುಕ್ತಾಯ ದಿನಾಂಕ ನಮೂದಿಸದ ಕಾರಣ ಸಮಾನತೆಯ ಪ್ರತಿಮೆ ವಿರುದ್ಧ ಕಾನೂನು ಮಾಪನಶಾಸ್ತ್ರ ಇಲಾಖೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದರು.
ದೂರಿನ ಆಧಾರದ ಮೇಲೆ, ರಂಗಾರೆಡ್ಡಿ ವಲಯದ ಕಾನೂನು ಮಾಪನಶಾಸ್ತ್ರದ ಸಹಾಯಕ ನಿಯಂತ್ರಕರು ಪ್ರಕರಣ ದಾಖಲು ಮಾಡಿರುವುದಾಗಿ ಜೂ.21 ರಂದು ತೆಲಂಗಾಣದ ಕಾನೂನು ಮಾಪನಶಾಸ್ತ್ರದ ನಿಯಂತ್ರಕರಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ, ಜೂನ್ 20ರಂದು ಸಮಾನತೆಯ ಪ್ರತಿಮೆ ಆವರಣವನ್ನು ಪರಿಶೀಲಿಸಲಾಯಿತು. ಅದರ ಆಧಾರದ ಮೇಲೆ, ಕಾನೂನು ಮಾಪನಶಾಸ್ತ್ರ ಕಾಯಿದೆ, 2009ರ ಕಲಂ 10, 11, 12 ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಫೆಬ್ರವರಿ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸಮಾನತೆಯ ಪ್ರತಿಮೆಯನ್ನು ಉದ್ಘಾಟನೆ ಮಾಡಿದ್ದರು.
ಸಮಾನತೆಯ ಪ್ರತಿಮೆ ಸ್ಥಳದ ಪ್ರವೇಶ ದರವೂ ಹೆಚ್ಚಾಗಿದೆ ಎಂಬ ಆರೋಪಗಳು ಬಂದಿವೆ. ವಯಸ್ಕರಿಗೆ 200 ಮತ್ತು ಮಕ್ಕಳಿಗೆ 125 ರೂ.ಗಳನ್ನು ಚಿನ್ನ ಜೀಯರ್ ಸ್ವಾಮಿಯ ಸಂಸ್ಥೆಯು ವಿಧಿಸುತ್ತಿದೆ.
“ಇತರ ಚಟುವಟಿಕೆಗಳು ಈ ಪ್ರದೇಶದಲ್ಲಿ ನಡೆಯುತ್ತಿದ್ದು, ಅವುಗಳನ್ನು ನಿರ್ವಹಿಸಲು ಶುಲ್ಕ ವಿಧಿಸಲಾಗಿದೆ” ಎಂದು ಸಂಸ್ಥೆ ಹೇಳಿಕೊಂಡಿದೆ. “ಒಂದಿಷ್ಟು ಪ್ರವೇಶ ಶುಲ್ಕವನ್ನು ಇರಿಸದ ಹೊರತು, ಗುಂಪನ್ನು ನಿಯಂತ್ರಿಸುವುದು ಕಷ್ಟ. ಅಂತಹ ಸ್ಥಳಗಳಿಗೆ ಸಾಮಾನ್ಯವಾಗಿ ಸಾವಿರಾರು ರೂಪಾಯಿಗಳ ಪ್ರವೇಶ ದರವಿದೆ, ಆದರೆ ನಾವು ಸ್ಥಳದ ನಿರ್ವಹಣೆಗೆ ಅಗತ್ಯವಿರುವ ಶುಲ್ಕವನ್ನು ಮಾತ್ರ ಇರಿಸಿದ್ದೇವೆ” ಎಂದು ಪ್ರತಿಕ್ರಿಯೆ ನೀಡಿದೆ.


