ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ “ಶೀಘ್ರದಲ್ಲೇ ಮುಂಬೈಗೆ ತೆರಳಿ ಬಾಳಾಸಾಹೇಬ್ ಠಾಕ್ರೆ ಅವರ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುತ್ತೇನೆ” ಎಂದು ಮಂಗಳವಾರ ಹೇಳಿದ್ದಾರೆ.
“ಗುವಾಹಟಿಯಲ್ಲಿ ನನ್ನೊಂದಿಗೆ 50 ಜನರಿದ್ದಾರೆ, ಅವರು ತಮ್ಮ ಸ್ವಂತ ಇಚ್ಛೆಯಿಂದ ಮತ್ತು ಹಿಂದುತ್ವಕ್ಕಾಗಿ ನನ್ನೊಂದಿಗೆ ಬಂದಿದ್ದಾರೆ. ನಾವೆಲ್ಲರೂ ಶೀಘ್ರದಲ್ಲೇ ಮುಂಬೈಗೆ ಹೋಗುತ್ತೇವೆ” ಎಂದು ಏಕನಾಥ್ ಶಿಂಧೆ ಗುವಾಹಟಿಯ ಐಷಾರಾಮಿ ಹೋಟೆಲ್‌ನಿಂದ ಹೊರಬಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮುಂಬೈಗೆ ಬಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರೊಂದಿಗೂ ಮಾತನಾಡುವುದಾಗಿ ಹೇಳಿದ್ದಾರೆ. ಈ ವೇಳೆ ಇತರ ಬಂಡಾಯ ಶಾಸಕರು ಉಪಸ್ಥಿತರಿದ್ದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ಸುಪ್ರೀಂಕೋರ್ಟ್; ‘ಬಾಳಾಸಾಹೇಬರ ಹಿಂದುತ್ವದ ವಿಜಯ’ ಎಂದ ಏಕನಾಥ್ ಶಿಂಧೆ
ವರದಿಗಳು ಸೂಚಿಸುವಂತೆ, ಬಿಜೆಪಿಯೊಂದಿಗಿನ ಸಮಾಲೋಚನೆಗಾಗಿ ಏಕನಾಥ್ ಶಿಂಧೆ ಇಂದು ಸಂಜೆ ಮುಂಬೈ ಅಥವಾ ದೆಹಲಿಗೆ ಹೋಗಬಹುದು ಎನ್ನಲಾಗಿದೆ. ಇತ್ತ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ದೇವೇಂದ್ರ ಫಡ್ನವೀಸ್ ದೆಹಲಿಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
“ನಾನು ಶಿವಸೇನೆಯನ್ನು ಬಿಡುತ್ತಿಲ್ಲ. ನಾನೇ ನಿಜವಾದ ಶಿವಸೇನೆ” ಎಂದು ಏಕನಾಥ್ ಶಿಂಧೆ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದೇ ವೇಳೆ ಸುಮಾರು 15 ರಿಂದ 20 ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರೆಲ್ಲರೂ ಮುಂಬೈಗೆ ಮರಳಲು ಬಯಸುತ್ತಾರೆ ಎಂಬ ಉದ್ಧವ್ ಠಾಕ್ರೆ ಬೆಂಬಲಿಗರ ಹೇಳಿಕೆಗಳನ್ನು ತಳ್ಳಿಹಾಕಿದ್ದಾರೆ.
ಇತ್ತ, ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಶಿವಸೇನೆಯ ಬಂಡಾಯ ಶಾಸಕರಿಗೆ ಪತ್ರ ಬರೆದು, ತಮ್ಮೊಂದಿಗೆ ಖುದ್ದಾಗಿ ಮಾತನಾಡುವಂತೆ ಒತ್ತಾಯಿಸಿದ್ದಾರೆ.
“ನಾನು ನಿಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಇನ್ನೂ ಸಮಯವಿದೆ. ದಯವಿಟ್ಟು ಬನ್ನಿ. ನನ್ನೊಂದಿಗೆ ಕುಳಿತುಕೊಳ್ಳಿ, ಶಿವಸೈನಿಕರು ಮತ್ತು ಸಾರ್ವಜನಿಕರ ಮನಸ್ಸಿನಲ್ಲಿರುವ ಎಲ್ಲಾ ಅನುಮಾನಗಳನ್ನು ತೆಗೆದುಹಾಕಿ. ನೀವು ಕೆಲವು ದಿನಗಳಿಂದ ಗುವಾಹಟಿಯಲ್ಲಿ ಸಿಕ್ಕಿಬಿದ್ದಿದ್ದೀರಿ, ನಾನು ನಿಮ್ಮ ಬಗ್ಗೆ ವಿವರಗಳನ್ನು ಪಡೆಯುತ್ತಿದ್ದೇನೆ. ನಿಮ್ಮಲ್ಲಿ ಹಲವರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ನೀವು ಹೃದಯಪೂರ್ವಕವಾಗಿ ಶಿವಸೇನೆಯವರು. ನಾವು ಮಾತನಾಡೋಣ, ಮಾತಾಡಿ ಒಂದು ದಾರಿ ಹುಡುಕಿಕೊಳ್ಳೋಣ” ಎಂದು ಪತ್ರದಲ್ಲಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ: ವಿಶ್ವಾಸಮತ ಯಾಚನೆ ನಡೆಸಲು ವಕೀಲರನ್ನು ಸಂಪರ್ಕಿಸುತ್ತಿರುವ ಬಂಡಾಯ ಶಾಸಕರು


