ಒಕ್ಕೂಟ ಸರ್ಕಾರ ಜಾರಿಗೊಳಿಸುತ್ತಿರುವ ಅಗ್ನಿಪಥ ಯೋಜನೆ ಕುರಿತ ಚರ್ಚೆಗಾಗಿ ಎರಡನೇ ದಿನವೂ (ಮಂಗಳವಾರ) ಬಿಹಾರ ವಿಧಾನಸಭೆಯಲ್ಲಿ ಗದ್ದಲ ಮುಂದುವರೆದಿದೆ. ಯೋಜನೆ ಕುರಿತು ಚರ್ಚೆ ನಡೆಸಬೇಕು ಎಂಬ ಪ್ರತಿಪಕ್ಷಗಳ ನಿರಂತರ ಬೇಡಿಕೆಯನ್ನು ಸಭಾಪತಿ ತಿರಸ್ಕರಿಸಿದ್ದಾರೆ.
ಆರ್‌ಜೆಡಿ ನೇತೃತ್ವದ ವಿರೋಧ ಪಕ್ಷದ ಸದಸ್ಯರು ಸಶಸ್ತ್ರ ಪಡೆಗಳಲ್ಲಿ ನೇಮಕಾತಿಯ ಹೊಸ ಯೋಜನೆಯ ವಿರುದ್ಧ ಘೋಷಣೆಗಳನ್ನು ಕೂಗುವುದರೊಂದಿಗೆ ಬೆಳಿಗ್ಗೆ 11 ಗಂಟೆಗೆ ಕಲಾಪ ಪ್ರಾರಂಭವಾಯಿತು. ಸೋಮವಾರವೂ ಗದ್ದಲ ಹೆಚ್ಚಾಗಿ ವಿಧಾನಸಭೆ ಕಲಾಪವನ್ನು ಪದೇ ಪದೇ ಮುಂದೂಡಲಾಗುತ್ತಿತ್ತು.
ರಾಷ್ಟ್ರೀಯ ಜನತಾ ದಳ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ-ಲೆನಿನಿಸ್ಟ್) ಮತ್ತು ಕಾಂಗ್ರೆಸ್‌ನ ಹಲವಾರು ಸದಸ್ಯರು ಯೋಜನೆಯ ವಿರುದ್ಧ ಸದನದ ಬಾವಿಯಲ್ಲಿ ನಿಂತು ಘೋಷಣೆಗಳನ್ನು ಕೂಗಿದ್ದಾರೆ. ಸದನದಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈ ವಿಷಯದ ಬಗ್ಗೆ ಮೌನ ಮುರಿಯುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ’ಅಗ್ನಿಪಥ್’ ಯೋಜನೆ; ’ಎಕ್ಸೆಕ್ಯುಟಿವ್’ ಆಡಳಿತ ಎಂಬುದು ಸರ್ವಾಧಿಕಾರದ ’ಪ್ರಾಕ್ಸಿ’
ಗಮನಾರ್ಹವಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯುನ ಅನೇಕ ನಾಯಕರು ಅಗ್ನಿಪಥ್ ವಿರುದ್ಧದ ಪ್ರತಿಭಟನೆಗಳ ಬಗ್ಗೆ ಸಹಾನುಭೂತಿ ಹೊಂದಿದ್ದು, ಇದು ಮಿತ್ರಪಕ್ಷ ಬಿಜೆಪಿಗೆ ಕಿರಿಕಿರಿಯನ್ನುಂಟುಮಾಡಿದೆ.
ಗದ್ದಲಗಳ ನಡುವೆ ಸಭಾಪತಿ ವಿಜಯ್ ಕುಮಾರ್ ಸಿನ್ಹಾ ಸದನವನ್ನು ನಡೆಸಲು ಪ್ರಯತ್ನಿಸಿದ್ದರು. ಪ್ರತಿಪಕ್ಷಗಳ ಸದಸ್ಯರ ಗದ್ದಲದ ನಡುವೆಯೇ ಪ್ರಶ್ನೋತ್ತರ ಅವಧಿಯನ್ನು ನಡೆಸಿದರು, ಆಗ ಪ್ರತಿಭಟನಾ ನಿರತ ನಾಯಕರು ಸದನದ ಬಾವಿಯಲ್ಲಿ ಕುಳಿತು ಘೋಷಣೆ ಕೂಗಿದ್ದಾರೆ.
ಸುಮಾರು ಅರ್ಧಗಂಟೆಯ ಬಳಿಕ ಶಾಸಕಾಂಗ ಕಲಾಪಕ್ಕೆ ಅಡ್ಡಿಯಾಗುತ್ತಿದ್ದಂತೆ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿತ್ತು. ಸದನ ಮತ್ತೆ ಕಲಾಪ ಆರಂಭವಾದಾಗ ಪ್ರತಿಪಕ್ಷಗಳ ಸದಸ್ಯರ ಗದ್ದಲದಿಂದ ಮಧ್ಯಾಹ್ನ 2 ಗಂಟೆಯವರೆಗೆ ಮತ್ತೆ ಕಲಾಪ ಮುಂದೂಡಲಾಯಿತು.
ಮಧ್ಯಾಹ್ನ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ನೇತೃತ್ವದಲ್ಲಿ ಎಲ್ಲಾ ವಿಪಕ್ಷಗಳು ಸಭೆ ನಡೆಸಿವೆ. “ಕೇಂದ್ರ ಸರ್ಕಾರದ ಗುತ್ತಿಗೆ ಆಧಾರಿತ ಅಗ್ನಿಪಥ ಯೋಜನೆಯಿಂದ ಉಂಟಾಗಿರುವ ಪ್ರತಿಭಟನೆ ಸಂದರ್ಭಗಳಲ್ಲಿ ದಮನಕಾರಿ ಕ್ರಮ ಕೈಗೊಂಡು, ಯುವಕರ ಮೇಲೆ ದಾಖಲಾದ ಪ್ರಕರಣಗಳು ಹಾಗೂ ಯುವಕರ ಭವಿಷ್ಯವನ್ನು ಹಾಳು ಮಾಡಿದ ಈ ಯೋಜನೆ ವಾಪಸಾತಿಗೆ ಮುಂದಿನ ಕ್ರಿಯಾ ಯೋಜನೆ ಕುರಿತು ಎಲ್ಲಾ ವಿರೋಧ ಪಕ್ಷಗಳ ಜೊತೆ ನಡೆದ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ” ಎಂದು ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದಾರೆ.
केंद्र सरकार की ठेका आधारित #अग्निपथ_योजना से उत्पन्न परिस्थितियों में युवाओं पर दमनात्मक कारवाई कर उन पर दायर मुक़दमों एवं नौजवानों का भविष्य बर्बाद करने वाली इस योजना के वापसी की आगे की कार्य योजना के संदर्भ में विधानसभा में सभी विपक्षी दलों के साथ सर्वसम्मति से बैठक की। pic.twitter.com/UcJPvUEEgq
— Tejashwi Yadav (@yadavtejashwi) June 28, 2022
ಇದನ್ನೂ ಓದಿ: ಅಗ್ನಿಪಥ ಯೋಜನೆ ಬೀರಬಹುದಾದ ಪರಿಣಾಮಗಳು