2018ರ ಟ್ವೀಟ್ ಒಂದಕ್ಕೆ ಸಂಬಂಧಿಸಿ ದಿಟ್ಟ ಪತ್ರಕರ್ತ, ಆಲ್ಟ್‌ನ್ಯೂಸ್ ಸಹ ಸಂಪಾದಕ ಮೊಹಮ್ಮದ್ ಜುಬೇರ್‌ರನ್ನು ಬಂಧಿಸಿರುವ ದೆಹಲಿ ಪೊಲೀಸರ ಕ್ರಮಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಕೂಡ ಜುಬೇರ್ ಬಂಧನವನ್ನು ಖಂಡಿಸಿದ್ದು, ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿದೆ.
ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿರುವ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ’ಆಲ್ಟ್‌ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರನ್ನು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಆರೋಪದ ಮೇಲೆ ಬಂಧಿಸಿರುವುದು “ಅತ್ಯಂತ ಗೊಂದಲದ ಸಂಗತಿ” ಎಂದಿದೆ. ಜೊತೆಗೆ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ.
“ಸಮಾಜದಲ್ಲಿ ಅಶಾಂತಿಗೆ ಮತ್ತು ರಾಷ್ಟ್ರೀಯತಾವಾದಿ ಭಾವನೆಗಳನ್ನು ಕೆರಳಿಸುವ ಸಾಧನವಾಗಿ ತಪ್ಪು ಮಾಹಿತಿಯನ್ನು ಬಳಸುವವರ ವಿರುದ್ಧ ಆಲ್ಟ್‌ನ್ಯೂಸ್ ಎಚ್ಚರಿಕೆಯನ್ನು ಮೂಡಿಸಿದೆ ಎಂಬುದು ಈಗ ಸ್ಪಷ್ಟವಾಗಿದೆ” ಎಂದು ಎಡಿಟರ್ಸ್ ಗಿಲ್ಡ್ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಒಂದು ದಿನದ ಪೊಲೀಸ್ ಕಸ್ಟಡಿಗೆ ಜುಬೇರ್: ಬಂಧನಕ್ಕೆ ಕಾರಣವಾದ ಟ್ವೀಟ್, ದೂರುದಾರರು ಯಾರು?
The Editors Guild of India condemns the arrest of Muhammad Zubair, co-founder of the fact checking site AltNews, by the Delhi Police on June 27, for a tweet from 2018. EGI demands that the Delhi Police should immediately release Muhammad Zubair. pic.twitter.com/q9uYqFxaPA
— Editors Guild of India (@IndEditorsGuild) June 28, 2022
ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಹರಡುವ ಆರೋಪದ ಮೇಲೆ ಜುಬೇರ್ ಮೇಲೆ ಪ್ರಕರಣ ದಾಖಲಾಗಿದೆ. 2020ರ ಪ್ರಕರಣದ ವಿಚಾರಣೆಗೆಂದು ಅವರನ್ನು ದೆಹಲಿ ಪೊಲೀಸರು ಕರೆಸಿದ್ದರು. ಆ ಪ್ರಕರಣದಲ್ಲಿ ಜುಬೇರ್ ಬಂಧನದಿಂದ ರಕ್ಷಣೆ ಪಡೆದಿದ್ದರು. ಆನಂತರ ಪೊಲೀಸರು 2018ರ ಟ್ವೀಟ್ ಆಧರಿಸಿ ಬಂಧಿಸಿದ್ದೇವೆ ಎಂದಿದ್ದಾರೆ.
“ಜುಬೇರ್ ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಮತ್ತು 295 ರ ಅಡಿಯಲ್ಲಿ ಬಂಧಿಸಲಾಗಿದೆ. ಇದು ಅತ್ಯಂತ ಗೊಂದಲದ ಸಂಗತಿಯಾಗಿದೆ ಏಕೆಂದರೆ ಜುಬೇರ್ ಮತ್ತು ಅವರ ವೆಬ್‌ಸೈಟ್ ಆಲ್ಟ್‌ನ್ಯೂಸ್ ಕಳೆದ ಕೆಲವು ವರ್ಷಗಳಿಂದ ವಸ್ತುನಿಷ್ಠ ಮತ್ತು ವಾಸ್ತವಿಕ ರೀತಿಯಲ್ಲಿ, ನಕಲಿ ಸುದ್ದಿಗಳನ್ನು ಗುರುತಿಸುವಲ್ಲಿ ಮತ್ತು ತಪ್ಪು ಮಾಹಿತಿಯ ಪ್ರಚಾರಗಳನ್ನು ಹೊರಗೆಳೆದು ಅನುಕರಣೀಯ ಕೆಲಸಗಳನ್ನು ಮಾಡಿವೆ” ಎಂದಿದೆ. ಕೂಡಲೇ ದೆಹಲಿ ಪೊಲೀಸರು ಮೊಹಮ್ಮದ್ ಜುಬೇರ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದೆ.
ಇದನ್ನೂ ಓದಿ: ಟ್ವಿಟರ್ ಟ್ರೆಂಡಿಂಗ್‌ನಲ್ಲಿ ಮೊದಲ ಸ್ಥಾನ ಕಾಯ್ದುಕೊಂಡ #IStandWithZubair ಹ್ಯಾಷ್‌ಟ್ಯಾಗ್
ಇದಕ್ಕೂ ಮೊದಲು, ಡಿಜಿಟಲ್ ಸುದ್ದಿ ಮಾಧ್ಯಮ ಸಂಸ್ಥೆಗಳ ಸಂಘಟನೆ DIGIPUB ಜುಬೇರ್ ಬಂಧನವನ್ನು ಖಂಡಿಸಿ, ಅವರ ವಿರುದ್ಧದ ಪ್ರಕರಣವನ್ನು ತಕ್ಷಣವೇ ಹಿಂಪಡೆಯುವಂತೆ ದೆಹಲಿ ಪೊಲೀಸರಿಗೆ ಒತ್ತಾಯಿಸಿದೆ.
“ಪ್ರಜಾಪ್ರಭುತ್ವದಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಚಲಾಯಿಸುವ ಹಕ್ಕನ್ನು ಹೊಂದಿರುವಾಗ, ಇಂತಹ ಕಠಿಣ ಕಾನೂನುಗಳನ್ನು ಪತ್ರಕರ್ತರ ವಿರುದ್ಧ ಸಾಧನವಾಗಿ ಬಳಸುತ್ತಿರುವುದು ಅಸಹನೀಯವಾಗಿದೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವೆಂದು ಪರಿಗಣಿಸಲ್ಪಟ್ಟಿರುವ ಪತ್ರಕರ್ತರ ವಿರುದ್ಧ ಇಂತಹ ಕಠಿಣ ಕಾನೂನುಗಳನ್ನು ಸಾಧನವಾಗಿ ಬಳಸುವುದನ್ನು ನಿಲ್ಲಿಸಬೇಕು. ನಾವು ಜುಬೇರ್ ಜೊತೆ ನಿಲ್ಲುತ್ತೇವೆ” ಎಂದು DIGIPUB ಹೇಳಿಕೆಯಲ್ಲಿ ತಿಳಿಸಿದೆ.
Digipub condemns in the strongest possible terms the arrest of Mohammed Zubair, co-founder of Alt News. pic.twitter.com/POYEaGIdAI
— DIGIPUB News India Foundation (@DigipubIndia) June 27, 2022
ಇದನ್ನೂ ಓದಿ: ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿ ಗಲಭೆಗಳಿಗೆ ಪ್ರಚೋದನೆ ಆರೋಪ: ಆಲ್ಟ್‌ನ್ಯೂಸ್ ಸಹಸಂಸ್ಥಾಪಕ ಮೊಹಮ್ಮದ್ ಜುಬೇರ್ ಬಂಧನ