ಮಹಾರಾಷ್ಟ್ರ ಶಿವಸೇನೆಯ ಮುಖಂಡ ಏಕನಾಥ್ ಶಿಂಧೆ 40 ಶಿವಸೇನಾ ಪಕ್ಷದ ಶಾಸಕರ ಬೆಂಬಲದೊಂದಿಗೆ ಬಂಡಾಯವೆದ್ದು, ಬಿಜೆಪಿ ಬೆಂಬಲದೊಂದಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರು ಸೋಮವಾರ ಬಹುಮತ ಸಾಬೀತುಪಡಿಸಬೇಕೆಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಮಾಜಿ ಸಿಎಂ ಉದ್ಧವ್ ಠಾಕ್ರೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ, ಸಭೆಗೆ ಹಾಜರಾಗದ ಆರೋಪದ ಮೇಲೆ ಸಿಎಂ ಶಿಂಧೆ ಸೇರಿದಂತೆ 15 ಜನ ಶಾಸಕರ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ಅರ್ಜಿ ಸಲ್ಲಿಸಿದೆ. ಅದರ ಸಿಂಧುತ್ವವನ್ನು ಪ್ರಶ್ನಿಸಿ ಸಿಎಂ ಶಿಂಧೆ ಸಹ ಅರ್ಜಿ ಸಲ್ಲಿಸಿದ್ದಾರೆ.
55 ಶಿವಸೇನೆ ಶಾಸಕರ ಪೈಕಿ 39 ಜನ ತನ್ನ ಜೊತೆಗಿದ್ದಾರೆ ಎಂದು ವಾದಿಸುತ್ತಿರುವ ಸಿಎಂ ಶಿಂಧೆ ತನ್ನದೇ ಅಧಿಕೃತ ಶಿವಸೇನೆ ಎಂದಿದ್ದಾರೆ. ಅವರು ತಮ್ಮೊಡನೆ 37ಕ್ಕಿಂತ ಹೆಚ್ಚು ಶಿವಸೇನೆ ಶಾಸಕರನ್ನು (ಮೂರನೇ ಎರಡು ಬಹುಮತ) ಹೊಂದಿದ್ದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯಿಂದ ಬಚಾವ್ ಆಗಬಹುದು. ಹಾಗಾಗಿ ಮಾಜಿ ಸಿಎಂ ಉದ್ಧವ್ ಠಾಕ್ರೆಯ ನಿರ್ದೇಶನಗಳನ್ನು ಪಾಲಿಸುವ ಅಗತ್ಯವಿಲ್ಲ ಎಂದಿದ್ದಾರೆ. ಅಲ್ಲದೆ ಅವರು ಶಿವಸೇನೆಯ ಅಧಿಕೃತ ಚಿಹ್ನೆ ಪಡೆಯಲು ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಬಹುದು. ಈ ಹಿಂದೆ ಈ ರೀತಿಯ ಪ್ರಕರಣಗಳು ಎದುರಾದಾಗ ಮೂರನೇ ಎರಡು ಬಹುಮತ ಹೊಂದಿದವರಿಗೆ ಪಕ್ಷದ ಚಿಹ್ನೆ ನೀಡಿದ ಉದಾಹರಣೆಗಳಿವೆ.
ಸೋಮವಾರದ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಸಿಎಂ ಶಿಂಧೆ ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ ಸೇರಿದಂತೆ ಅವರ ಜೊತೆಗಿರುವ 15 ಶಾಸಕರಿಗೆ ತನ್ನ ಪರ ಮತ ಚಲಾಯಿಸುವಂತೆ ವಿಪ್ ಜಾರಿಗೊಳಿಸಲಿದ್ದು, ವಿಪ್ ಉಲ್ಲಂಘಿಸಿದರೆ ಅವರನ್ನು ಉಚ್ಛಾಟಿಸುವ ಸಾಧ್ಯತೆಯಿದೆ. ಅಂತ ಸಂದರ್ಭದಲ್ಲಿ ಅವರ ತಂದೆ ಬಾಳಾ ಸಾಹೇಬ್ ಠಾಕ್ರೆ ಸ್ಥಾಪಿಸಿದ್ದ ಶಿವಸೇನೆಯನ್ನು ಅವರು ಕಳೆದುಕೊಳ್ಳಲಿದ್ದಾರೆ.
ಒಂದು ವೇಳೆ ಸುಪ್ರೀಂ ಕೋರ್ಟ್ ಮಾಜಿ ಸಿಎಂ ಉದ್ಧವ್ ಠಾಕ್ರೆಯವರ ಮನವಿ ಪುರಸ್ಕರಿಸಿ 15 ಬಂಡಾಯ ಶಾಸಕರನ್ನು ಅನರ್ಹಗೊಳಿಸಿದರೆ ಮಾತ್ರ ಶಿವಸೇನೆ ಉದ್ಧವ್ ಠಾಕ್ರೆ ಕೈಯಲ್ಲಿ ಉಳಿಯಲಿದೆ. ಆದರೆ ಆ ಸಾಧ್ಯತೆ ಕಡಿಮೆಯಿದೆ.
ಮಹಾರಾಷ್ಟ್ರ ವಿಧಾನಸಭೆಯು 288 ಸದಸ್ಯರನ್ನು ಹೊಂದಿದೆ. ಒಬ್ಬ ಸದಸ್ಯ ಸಾವನಪ್ಪಿದ್ದು, ಇಬ್ಬರು ಜೈಲಿನಲ್ಲಿದ್ದಾರೆ. ಹಾಗಾಗಿ ಸದಸ್ಯಬಲ 285ಕ್ಕೆ ಕುಸಿದಿದೆ. ಅಲ್ಲಿಗೆ ಯಾವುದೇ ಸರ್ಕಾರಕ್ಕೆ ಬಹುಮತ ತೋರಿಸಲು 143 ಸದಸ್ಯರ ಬೆಂಬಲ ಬೇಕಿದೆ. ಸದ್ಯ ಏಕನಾಥ್ ಶಿಂಧೆ ತನಗೆ 175ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ; ಫಡ್ನವೀಸ್‌ಗೆ ದಕ್ಕದ ಸಿಎಂ ಪಟ್ಟ: ಬಿಜೆಪಿ ಹೈಕಮಾಂಡ್ ಎದುರು ಮಂಡಿಯೂರಿದ್ದೇಕೆ?
ಇತ್ತೀಚಿಗೆ ಬಿಹಾರದಲ್ಲಿ ಲೋಕಜನಶಕ್ತಿ ಪಕ್ಷದ ಐವರು ಸಂಸದರಲ್ಲಿ ನಾಲ್ವರು ಸಾಮೂಹಿಕವಾಗಿ ಬಿಜೆಪಿ ಸೇರಿದರು. ಅದನ್ನು ಚಿರಾಗ್ ಪಾಸ್ವಾನ್ ಪ್ರಶ್ನಿಸಿದ್ದರು. ಆದರೆ ಪಕ್ಷಾಂತಗೊಂಡವರು ಮೂರನೇ ಎರಡು ಬಹುಮತ ಹೊಂದಿದ್ದ ಕಾರಣ ಇಡೀ ಪಕ್ಷವೇ ಅವರದ್ದಾಗಿ ಅವರು ಬಿಜೆಪಿಯೊಡನೆ ವಿಲೀನಗೊಳಿಸಿದರು.


