ಪಂಜಾಬ್ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ತೊರೆದಿದ್ದ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಶೀಘ್ರದಲ್ಲೇ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಎನ್‌ಡಿಟಿವಿ ಮೂಲಗಳನ್ನು ಉಲ್ಲೇಖಿಸಿ ಶುಕ್ರವಾರ ವರದಿ ಮಾಡಿದೆ.
89 ವರ್ಷದ ಅಮರಿಂದರ್ ಸಿಂಗ್ ಅವರು ಸಧ್ಯಕ್ಕೆ ಬೆನ್ನು ಶಸ್ತ್ರಚಿಕಿತ್ಸೆಗಾಗಿ ಲಂಡನ್‌ನಲ್ಲಿದ್ದಾರೆ. ಮುಂದಿನ ವಾರ ಅವರು ಭಾರತಕ್ಕೆ ಹಿಂದಿರುಗಲಿದ್ದು, ನಂತರ ತಮ್ಮ ‘ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷ’ವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವ ಸಾಧ್ಯತೆಯಿದೆ ಎಂದು ಎನ್‌ಡಿಟಿವಿ ವರದಿ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಬೆನ್ನು ಶಸ್ತ್ರಚಿಕಿತ್ಸೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಅಮರಿಂದರ್ ಸಿಂಗ್ ಅವರೊಂದಿಗೆ ಭಾನುವಾರ ಮಾತನಾಡಲಿದ್ದಾರೆ ಎಂದು ವರದಿ ಹೇಳಿದೆ.
ಇದನ್ನೂ ಓದಿ: ಹೆಚ್ಚುತ್ತಿರುವ ಅತ್ಯಾಚಾರ: ಪಾಕಿಸ್ತಾನದ ಪಂಜಾಬ್‌ನಲ್ಲಿ ‘ತುರ್ತು ಪರಿಸ್ಥಿತಿ’ ಘೋಷಣೆ
ಅಮರಿಂದರ್ ಸಿಂಗ್ ಅವರು ಕಳೆದ ವರ್ಷ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದರ ಜೊತೆಗೆ ಐದು ದಶಕ ಕೆಲಸ ಮಾಡಿದ್ದ ಕಾಂಗ್ರೆಸ್ ಪಕ್ಷಕ್ಕೂ ರಾಜೀನಾಮೆ ನೀಡಿದ್ದರು. ಇದಾದ ನಂತರ ಪಂಜಾಬ್ ಚುನಾವಣೆ ವೇಳೆಗೆ ‘ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷ’ ಎಂಬ ಪಕ್ಷವನ್ನು ಕಟ್ಟಿ ಚುನಾವಣೆ ಎದುರಿಸಿದ್ದರು.
ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಅವರು ಕಾಂಗ್ರೆಸ್ ತೊರೆದ ನಂತರ ತಾನು ಬಿಜೆಪಿಗೆ ಸೇರುವುದನ್ನು ನಿರಾಕರಿಸಿದ್ದರು. ಆದರೆ ಪಂಜಾಬ್ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದರು. ಪಟಿಯಾಲಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಠೇವಣಿಯನ್ನೂ ಕಳೆದುಕೊಂಡು ಹೀನಾಯವಾಗಿ ಸೋತಿದ್ದರು.
ಕಾಂಗ್ರೆಸ್ ತೊರೆಯುವ ವೇಳೆಗೆ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ, ತಾನು ಪಕ್ಷದ ನಾಯಕತ್ವದಿಂದ ಮೂರು ಬಾರಿ ಅವಮಾನಕ್ಕೊಳಗಾಗಿದ್ದೇನೆ, ಇನ್ನು ಮುಂದೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: ಪಂಜಾಬ್ ಉಪಚುನಾವಣೆ: ಸಿಎಂ ಭಗವಂತ್ ಮಾನ್ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಕಳೆದುಕೊಂಡ ಆಪ್
ಈ ಎಲ್ಲದರ ನಡುವೆ ಅಮರಿಂದರ್ ಸಿಂಗ್ ಅವರ ಪತ್ನಿ ಪ್ರಣೀತ್ ಕೌರ್ ಪಟಿಯಾಲದಿಂದ ಇನ್ನೂ ಕಾಂಗ್ರೆಸ್ ಸಂಸದರಾಗಿ ಉಳಿದಿದ್ದಾರೆ. ಮಾಜಿ ಕೇಂದ್ರ ಸಚಿವೆ ಆಗಿರುವ ಪ್ರಣೀತ್ ಕೌರ್ ಅವರು ತಮ್ಮ ಮಗಳು ಜೈ ಇಂದರ್ ಕೌರ್ ಅವರನ್ನು ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಸುವಂತೆ ಬಿಜೆಪಿಯನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.


