Homeಕರ್ನಾಟಕಖಾಯಮಾತಿಗೆ ಇನ್ನೆಷ್ಟು ವರ್ಷ ಕಾಯಬೇಕು?: ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಬೃಹತ್‌ ಪ್ರತಿಭಟನೆ ಆರಂಭ

ಖಾಯಮಾತಿಗೆ ಇನ್ನೆಷ್ಟು ವರ್ಷ ಕಾಯಬೇಕು?: ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಬೃಹತ್‌ ಪ್ರತಿಭಟನೆ ಆರಂಭ

- Advertisement -
- Advertisement -

ಕೆಲಸದ ಖಾಯಮಾತಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರವನ್ನು ರಾಜ್ಯದ ಸ್ವಚ್ಛತಾ ಕಾರ್ಮಿಕರ ಆರಂಭಿಸಿದ್ದಾರೆ. ಸಾವಿರಾರು ಪೌರಕಾರ್ಮಿಕರು ಬೆಂಗಳೂರಿನ ಫ್ರೀಡಂಪಾರ್ಕ್‌‌ನಲ್ಲಿ ಸೇರಿದ್ದು, ಸುರಿಯುತ್ತಿರುವ ಜಟಿ ಮಳೆಯನ್ನು ಲೆಕ್ಕಿಸದೆ ಹೋರಾಟಕ್ಕೆ ಕುಳಿತ್ತಿದ್ದಾರೆ.

ಬಿಬಿಎಂಪಿ ಪೌರಕಾರ್ಮಿಕರ ಸಂಘ, ಕರ್ನಾಟಕ ಪ್ರಗತಿಪರ ಪೌರ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಮುಷ್ಕರ ಶುರುವಾಗಿದ್ದು, ಸರ್ಕಾರ ನೀಡಿದ ಭರವಸೆಗಳು ಈಡೇರಬೇಕೆಂದು ಬಿಗಿಪಟ್ಟು ಹಿಡಿಯಲಾಗಿದೆ.

ರಾಜ್ಯದ ಎಲ್ಲಾ ನೇರ ಪಾವತಿ ಪೌರಕಾರ್ಮಿಕರು, ನೆಪಮಾತ್ರ ಗುತ್ತಿಗೆ ಪದ್ಧತಿಯಲ್ಲಿ ಶೋಷಣೆ ಅನುಭವಿಸುತ್ತಿರುವ ಘನತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ವಾಹನ ಚಾಲಕರು ಮತ್ತು ಸಹಾಯಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರನ್ನು ಒಂದೇ ಬಾರಿಗೆ ಖಾಯಂಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.

ರಾಜ್ಯದಲ್ಲಿ ನಗರಸ್ಥಳೀಯ ಸಂಸ್ಥೆಗಳಾದ ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಸ್ವಚ್ಛತಾ ಕೆಲಸವನ್ನು ಹೊರ ಗುತ್ತಿಗೆಗೆ ನೀಡಲಾಗಿದೆ. ಕಾರ್ಮಿಕರನ್ನು ಅಪಾರವಾಗಿ ಶೋಷಿಸುವ ಗುತ್ತಿಗೆ ಪದ್ಧತಿಯು ಸರ್ಕಾರವೇ ನಡೆಸುತ್ತಿರುವ ಗುಲಾಮಿ ಪದ್ಧತಿಯಾಗಿದೆ ಎಂದು ಸ್ವಚ್ಛತಾ ಕರ್ಮಿಗಳು ಪುನರುಚ್ಚರಿಸಿದ್ದಾರೆ.

ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ಎಲ್ಲಾ ಕಾರ್ಮಿಕರನ್ನು ಖಾಯಂ ಮಾಡಬೇಕು ಎಂದು ಬಿಬಿಎಂಪಿ ಪೌರಕಾರ್ಮಿಕರ ಸಂಘ, ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘ ಹಾಗೂ ರಾಜ್ಯದ ವಿವಿಧ ಸಫಾಯಿಕರ್ಮಚಾರಿ ಸಂಘಟನೆಗಳು ನಿರಂತರವಾಗಿ ಹೋರಾಟ ನಡೆಸಿದ ಫಲವಾಗಿ 2016-17ರಲ್ಲಿ ಅಂದಿನ ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಗುತ್ತಿಗೆ ಪದ್ಧತಿ ರದ್ದುಪಡಿಸಿ ಎಲ್ಲಾ ಸ್ವಚ್ಛತಾ ಕಾರ್ಮಿಕರನ್ನು ಖಾಯಂ ಮಾಡುವ ನಿರ್ಣಯ ತೆಗೆದುಕೊಂಡಿತು. ಈ ನಿಯಮಾನುಸಾರ ಗುತ್ತಿಗೆ ಪದ್ಧತಿ ರದ್ದಾದ ಕೂಡಲೇ ಎಲ್ಲ ಕಾರ್ಮಿಕರನ್ನು ವಿಲೀನಗೊಳಿಸಿ ಖಾಯಂಗೊಳಿಸಬೇಕಾಗಿತ್ತು. ಆದರೆ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಪೌರಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕರ ಮಧ್ಯೆ ಭೇದ-ಭಾವ ಉಂಟು ಮಾಡುವ ಉದ್ದೇಶದಿಂದ ಸರ್ಕಾರವು ದಲಿತ ಕಾರ್ಮಿಕರ ವಿರುದ್ಧವಾಗಿ ಕಸ ಗುಡಿಸುವವರು, ಕಸವನ್ನು ಮನೆಗಳಿಂದ ಸಂಗ್ರಹಿಸುವವರು, ಟ್ರಾಕ್ಟರ್ ಲಾರಿ ಅಥವಾ ಆಟೋಗಳಿಗೆ ತುಂಬುವವರನ್ನು ಲೋಡರ್ಸ್, ಕ‌ಸ ಸಾಗಿಸುವವರನ್ನು ಚಾಲಕರು, ಒಳಚರಂಡಿಗಳಲ್ಲಿ ಕಟ್ಟಿಕೊಂಡ ಮಲ ಮೂತ್ರಗಳನ್ನು ತೆರವುಗೊಳಿಸಿ ಸ್ವಚ್ಛ ಮಾಡುವವರು- ಹೀಗೆ ವರ್ಗೀಕರಿಸಿ ವಿಂಗಡಿಸಲಾಗಿದೆ. ಈ ವಿಂಗಡಣೆಯ ಅನುಸಾರ ಸರ್ಕಾರವು ಪೊರಕೆ ಹಿಡಿದು ಕಸ ಗುಡಿಸುವವರನ್ನು ಮಾತ್ರ ಪೌರಕಾರ್ಮಿಕರೆಂದು ಪರಿಗಣಿಸಿ ಬೇರೆ ಕಾರ್ಮಿಕರನ್ನು ಪ್ರತ್ಯೇಕಗೊಳಿಸಿದ್ದಾರೆ. ಗುತ್ತಿಗೆ ಪದ್ಧತಿಯನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂಬುದು ಈ ವಿಂಗಡಣೆಯ ಹಿಂದಿನ ದುರುದ್ದೇಶವಾಗಿದೆ ಎಂದು ಕಾರ್ಮಿಕರು ಎಚ್ಚರಿಸಿದ್ದಾರೆ.

ಗುತ್ತಿಗೆ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಪಡಿಸಲು ಇಷ್ಟವಿಲ್ಲದ ಅಧಿಕಾರಿಗಳು, ಗುತ್ತಿಗೆದಾರರು ನೀಡುವ ಕಮಿಷನ್‌ಗೆ ಆಸೆಯಿಂದ ಅವರೊಂದಿಗೆ ಶಾಮೀಲಾಗಿದ್ದಾರೆ. ಪೌರಕಾರ್ಮಿಕರೆಲ್ಲರನ್ನೂ ನೇರಪಾವತಿ, ನೇರ ನೇಮಕಾತಿ, ಹೊರಗುತ್ತಿಗೆ ಕ್ಷೇಮಾಭಿವೃದ್ಧಿ ಟೈಮ್‌ಸ್ಟೇಲ್‌ ಎಂಬಂತಹ ಅಸಂಬದ್ಧ ಗುಂಪುಗಳಾಗಿ ವಿಂಗಡಿಸಿದ್ದಾರೆ. ಅವರ ಕಪಿಮುಷ್ಟಿಯಲ್ಲಿರುವ ಅಧಿಕಾರಿಗಳು ತಮಗೆ ಹತ್ತಿರವಾಗಿರುವ, ಲಂಚ ನೀಡಿದ ಬೆರಳೆಣಿಕೆಯಷ್ಟು ನೌಕರರನ್ನು ನೆಪ ಮಾತ್ರಕ್ಕೆ ಖಾಯಂ ಮಾಡಿರುತ್ತಾರೆ ಎಂದು ಸಂಘಟನೆಗಳು ತಿಳಿಸಿವೆ.

ಪ್ರತಿಭಟನೆ ವೇಳೆ ಮಾತನಾಡಿರುವ ಪೌರಕಾರ್ಮಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

“18 ಸಾವಿರ ಸಂಬಳ ಕೊಡುತ್ತಿದ್ದೇವೆ ಎನ್ನುತ್ತಾರೆ. ಎಲ್ಲಿ ಬರುತ್ತಿದೆ ಅಷ್ಟು ಸಂಬಳ. 13 ಸಾವಿರ ರೂಪಾಯಿ ಕೈ ಸೇರುತ್ತಿದೆ. ಮನೆ ಬಾಡಿಗೆ ಕಟ್ಟಲು, ಮಕ್ಕಳ ಶಾಲಾ ಶುಲ್ಕ ಪಾವತಿಸಲು ಆಗುತ್ತಿಲ್ಲ. ಅವರ ಮಕ್ಕಳ ಮಾತ್ರ ಕಾರಲ್ಲೇ ಓಡಾಡಬೇಕು, ನಮ್ಮ ಮಕ್ಕಳು ನಡೆದುಕೊಂಡೇ ತಿರುಗಾಡಬೇಕಾ? ಸರ್ಕಾರ ನಮ್ಮನ್ನು ಖಾಯಂ ಮಾಡಲೇಬೇಕು” ಎಂದು ತಾಯಿಯೊಬ್ಬರು ಆಗ್ರಹಿಸಿದರು.

“ಪರ್ಮನೆಂಟ್ ಆಗುತ್ತೆ ಅಂತ ಇಪತ್ತು ವರ್ಷಗಳಿಂದ ಹೇಳುತ್ತಲೇ ಇದ್ದಾರೆ. ನಮ್ಮನ್ನು ಖಾಯಂ ಮಾಡಲಿಲ್ಲ. ನಮ್ಮ ಹುಡುಗರಿಗೆ ಯಾವುದೇ ಸಹಾಯವಾಗಲಿಲ್ಲ. ಪರ್ಮನೆಂಟ್ ಆಗುತ್ತೇವೆ ಎಂದು ಕಾಯುತ್ತಲೇ ಅರ್ಧದಷ್ಟು ಕಾರ್ಮಿಕರು ತೀರಿಹೋದರು. 14 ಸಾವಿರ ಸಂಬಳ ಅನ್ನುತ್ತಾರೆ. ಆದರೆ 11,500 ಅಥವಾ 12,000 ಇಷ್ಟೇ ನಮ್ಮ ಖಾತೆಗೆ ಬೀಳುತ್ತಿದೆ. ಹುಷಾರಿಲ್ಲ ಅಂದರೆ ಸಂಬಳ ಕಟ್ ಆಗುತ್ತದೆ” ಎಂದು ಮತ್ತೊಬ್ಬ ಪೌರಕಾರ್ಮಿಕ ಮಹಿಳೆ ನೊಂದು ಹೇಳಿದರು.

ಪೌರಕಾರ್ಮಿಕರ ಬೇಡಿಕೆಗಳು

  • ನೇರಪಾವತಿ ಪೌರಕಾರ್ಮಿಕರು, ಹೊರಗುತ್ತಿಗೆ, ಕ್ಷೇಮಾಭಿವೃದ್ಧಿ, ಮನೆ-ಮನೆ ಕಸ ಸಂಗ್ರಹಿಸುವ ಪೌರಕಾರ್ಮಿಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಲೋಡರ್ಸ್, ಕಸದ ವಾಹನ ಚಾಲಕರು, ಸಹಾಯಕರು, ಹಾಗೂ ಪೌರಕಾರ್ಮಿಕರ ಮೇಲ್ವಿಚಾರಕರು ಎಂಬ ಅಸಂಬದ್ಧ ವಿಗಂಡಣೆಯನ್ನು ಕೈಬಿಟ್ಟು ಎಲ್ಲಾ ಸ್ವಚ್ಛತಾ ಕಾರ್ಮಿಕರನ್ನು ಏಕ ಕಾಲಕ್ಕೆ ಖಾಯಂ ಮಾಡಲೇಬೇಕು.
  • ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಹಿಳಾ ಪೌರಕಾರ್ಮಿಕರಿಗೆ ಶೌಚಾಲಯ, ಕುಡಿಯುವ ನೀರು, ಹೆರಿಗೆ ಭತ್ಯೆ, ಹೆರಿಗೆ ರಜೆ, ಬಾಲವಾಡಿ, ವಿಶ್ರಾಂತಿ ಗೃಹದಂತಹ ಅತ್ಯವಶ್ಯಕ ಮೂಲಭೂತ ಸೌಲಭ್ಯಗಳನ್ನು ಎಲ್ಲಿಯೂ ನೀಡಿಲ್ಲ. ಈ ಸೌಲಭ್ಯಗಳನ್ನು ರಾಜ್ಯದ ಎಲ್ಲಾ ಕಡೆ ನೀಡಲೇಬೇಕು ಎಂಬ ಸರ್ಕಾರಿ ಆದೇಶವನ್ನು ಕೂಡಲೇ ಹೊರಡಿಸಬೇಕು.
  • ಪೌರಕಾರ್ಮಿಕರಿಗಾಗಿ ಜಾರಿ ಮಾಡಿರುವ ಗೃಹ ಭಾಗ್ಯ ಯೋಜನೆಯನ್ನು ಕೇವಲ ಖಾಯಂ ಪೌರಕಾರ್ಮಿಕರಿಗೆ ಸೀಮಿತ ಮಾಡಿ ಶೇ.85 ರಷ್ಟು ಸ್ವಚ್ಛತಾ ಕಾರ್ಮಿಕರಿಗೆ ತಾರತಮ್ಯ ಮಾಡಲಾಗಿದೆ. ಆದ್ದರಿಂದ ಎಲ್ಲಾ ನೇರಪಾವತಿ, ಹೊರಗುತ್ತಿಗೆ, ಕ್ಷೇಮಾಭಿವೃದ್ಧಿ, ಮನೆ-ಮನೆ ಕಸ ಸಂಗ್ರಹಿಸುವ ಪೌರಕಾರ್ಮಿಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಲೋಡರ್ಸ್, ಕಸದ ವಾಹನಚಾಲಕರು, ಸಹಾಯಕರನ್ನು ಗೃಹ ಭಾಗ್ಯ ಯೋಜನೆಗೆ ಸೇರಿಸುವ ಸರ್ಕಾರಿ ಆದೇಶವನ್ನು ಕೂಡಲೇ ಹೊರಡಿಸಬೇಕು.
  • ನೇರಪಾವತಿ, ಹೊರಗುತ್ತಿಗೆ, ಕ್ಷೇಮಾಭಿವೃದ್ಧಿ, ಮನೆ-ಮನೆ ಕಸ ಸಂಗ್ರಹಿಸುವ ಪೌರಕಾರ್ಮಿಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಲೋಡರ್ಸ್, ಕಸದ ವಾಹನ ಚಾಲಕರು, ಸಹಾಯಕರ ಮಕ್ಕಳು ಖಾಸಗಿ ಶಾಲೆ-ಕಾಲೇಜುಗಳಲ್ಲಿಯೂ ವ್ಯಾಸಂಗ ಮಾಡಲು ಅನುಕೂಲವಾಗುವಂತೆ ಅದಕ್ಕೆ ಅಗತ್ಯವಿರುವ ಹಣಕಾಸಿನ ನೆರವು ನೀಡಲು ಸೂಕ್ತ ಆದೇಶ ಹೊರಡಿಸಬೇಕು.
  • ನೇರ ಪಾವತಿಯಡಿ 60 ವರ್ಷದವರೆಗೂ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗುತ್ತಿರುವ ಸ್ವಚ್ಛತಾ ಕಾರ್ಮಿಕರು ಯಾವ ನಿವೃತ್ತಿ ಸೌಕರ್ಯಗಳಿಲ್ಲದೆ ಬರಿಗೈಲಿ ಹೋಗುತ್ತಿದ್ದಾರೆ. ಈ ಕಾರ್ಮಿಕರಿಗೆ ತಲಾ ರೂ.10 ಲಕ್ಷ ಪರಿಹಾರ ನೀಡಬೇಕು, ಮಾಸಿಕ ರೂ. 10,000 ಪಿಂಚಣಿ ಹಾಗೂ ಅವರ ಅವಲಂಬಿತರಿಗೆ ಉದ್ಯೋಗ ನೀಡಬೇಕು, ಮತ್ತು ಅವರ ಆರೋಗ್ಯ ಭದ್ರತೆಗಾಗಿ ಆರೋಗ್ಯ ಕಾರ್ಡ್ ನೀಡಬೇಕು.
  • ರಾಜ್ಯಾದ್ಯಂತ ನಗರ ಪ್ರದೇಶಗಳು (ನಗರ ಸ್ಥಳೀಯ ಸಂಸ್ಥೆಗಳು), ಗ್ರಾಮೀಣ ಭಾಗಗಳಲ್ಲಿ (ಗ್ರಾಮ ಪಂಚಾಯಿತಿಗಳು), ಖಾಸಗಿವಲಯಗಳಲ್ಲಿ (ಬಸ್‌ನಿಲ್ದಾಣ, ವಿಶ್ವವಿದ್ಯಾಲಯಗಳು, ಆಸ್ಪತ್ರೆಗಳು, ಕಂಪನಿಗಳು, ದೊಡ್ಡ ಕಚೇರಿಗಳು, ಲಾರ್ಡ್‌ಗಳು, ಹೋಟೆಲ್ ಇತ್ಯಾದಿ) ಸ್ವಚ್ಛತಾ ಕೆಲಸಗಳನ್ನು ಮಾಡುತ್ತಿರುವ ಸಾವಿರಾರು ಸ್ವಚ್ಛತಾ ಕಾರ್ಮಿಕರ ನೇಮಕಾತಿ, ವೇತನ ಮತ್ತು ಇತರ ಸಾಮಾಜಿಕ ಭದ್ರತೆಗಾಗಿ ಬೇಕಾದ ಸೂಕ್ತ ಕಾಯ್ದೆ ನಮ್ಮ ರಾಜ್ಯದಲ್ಲಿಲ್ಲ. ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯ, ಬೆಂಗಳೂರು ಇವರು ನಡೆಸಿರುವ ಅಧ್ಯಯನದ ಶಿಫಾರಸ್ಸಿನಂತೆ ಸ್ವಚ್ಛತಾ ಕಾರ್ಮಿಕರ ಭದ್ರತೆ, ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ ಭದ್ರತೆ ನ್ಯಾಯಕ್ಕಾಗಿ ಸೂಕ್ತ ಕಾನೂನು ಜಾರಿಮಾಡಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...