ಮಾಜಿ ಪ್ರಧಾನಿ, ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರ ಬಗ್ಗೆ ಕಾಂಗ್ರೆಸ್‌ನ ಮಾಜಿ ಶಾಸಕ ಕೆ.ಎನ್. ರಾಜಣ್ಣ ನೀಡಿರುವ ಹೇಳಿಕೆ ಇಡೀ ಕಾಂಗ್ರೆಸ್ ಪಕ್ಷವೂ ಖಂಡಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶುಕ್ರವಾರ ಹೇಳಿದ್ದಾರೆ. ಅವರ ಹೇಳಿಕೆ ಅಮಾನವೀಯವಾಗಿದ್ದು, ಕೂಡಲೇ ಅವರು ದೇವೇಗೌಡರ ಕ್ಷಮೆ ಕೇಳುವಂತೆ ಸೂಚನೆ ನೀಡುತ್ತೇನೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
ತುಮಕೂರಿನ ಮಧುಗಿರಿ ತಾಲ್ಲೂಕಿನ ಕಾವಣದಾಲ ಗ್ರಾಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ್ದ ರಾಜಣ್ಣ ಅವರು, “ದೇವೇಗೌಡರು ಇಬ್ಬರ ಮೇಲೆ ಕೈ ಹಾಕ್ಕೊಂಡು ಹೋಗ್ತಾವ್ರೇ.. ಅವರು ನಾಲ್ವರ ಮೇಲೆ ಹೋಗೋದು ಹತ್ತಿರದಲ್ಲೇ ಇದೆ” ಎಂದು ಹೇಳಿದ್ದರು. ಅವರ ಈ ಹೇಳಿಕೆ ವಿರುದ್ಧ ರಾಜ್ಯ ರಾಜಕೀಯ ವಲಯದಲ್ಲಿ ವ್ಯಾಪಕ ಆಕ್ರೋಶ ಉಂಟಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಶಿವಕುಮಾರ್ ಅವರು, “ನಮ್ಮ ಪಕ್ಷದ ನಾಯಕರೊಬ್ಬರು ರಾಜ್ಯದ ಹಿರಿಯ ರಾಜಕಾರಣಿಯ ಪರಿಸ್ಥಿತಿಯ ಬಗ್ಗೆ ಆಡಿರುವ ಮಾತು ಇಡೀ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಪಕ್ಷದ ನಾಯಕನಾಗಿ ಹಾಗೂ ವ್ಯಯಕ್ತಿಕವಾಗಿಯೂ ಇದನ್ನು ನಾನು ಖಂಡಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ, ಡಿ.ಕೆ.ಶಿ.ಗೆ ಗುಂಡಿಕ್ಕಿ ಕೊಲ್ಲುವ ಬೆದರಿಕೆ: ಪಬ್ಲಿಕ್ ಟಿವಿ ವಿರುದ್ಧ ಕಾಂಗ್ರೆಸ್ ದೂರು
“ಪಕ್ಷದ ನಾಯಕರು ಮೊದಲಿಗೆ ಮಾನವೀಯತೆಯನ್ನು ಮೆರೆಯಬೇಕು. ಅವರು ಸಮಾಜಕ್ಕೆ, ರಾಷ್ಟ್ರಕ್ಕೆ ಸೇವೆ ಮಾಡಿದಂತಹ ಒಬ್ಬ ನಾಯಕರಾಗಿದ್ದಾರೆ. ದೇವೇಗೌಡರು ಪ್ರಧಾನಿಯಾಗಲು ಪಕ್ಷ ಬೆಂಬಲ ನೀಡಿತ್ತು. ಇಡೀ ರಾಷ್ಟ್ರ ಅವರನ್ನು ಗೌರವದಿಂದ ಕಾಣುತ್ತಿದೆ. ಅಂತಹ ವ್ಯಕ್ತಿಯ ಆರೋಗ್ಯದ ಬಗ್ಗೆ ಮಾತನಾಡುವುದು ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನಾನು ಕೂಡಲೇ ರಾಜಣ್ಣ ಅವರಿಗೆ ಕರೆ ಮಾಡಿ, ಅವರು ಕೂಡಲೇ ಕ್ಷಮಾಪಣೆ ಕೇಳಬೇಕು ಎಂದು ಸೂಚಿಸುತ್ತೇನೆ. ನಾನು ಕೂಡಾ ಈ ಸಂದಂರ್ಭದಲ್ಲಿ ಇದನ್ನು ಖಂಡಿಸುತ್ತೇನೆ. ಪಕ್ಷದಲ್ಲಿ ಇದರ ಬಗ್ಗೆ ಆಂತರಿಕವಾಗಿ ಚರ್ಚೆ ಮಾಡುತ್ತೇನೆ. ಸಮಾಜ ಕೂಡಾ ಈ ವಿವಾದದ ಬಗ್ಗೆ ತಾಳ್ಮೆಯಿಂದ ಇರಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ. ಈ ರೀತಿಯ ಹೇಳಿಕೆಗಳಿಗೆ ನಾವು ಅವಕಾಶ ನೀಡುವುದಿಲ್ಲ. ಪೂಜ್ಯರಾದ ದೇವೇಗೌಡರಿಗೆ ಉತ್ತಮ ಆರೋಗ್ಯ ಮತ್ತು ಇನ್ನಷ್ಟು ಸೇವೆ ಮಾಡುವ ಅವಕಾಶವನ್ನು ದೇವರು ಕರುಣಿಸಲಿ. ಅವರು ನಮ್ಮ ರಾಜ್ಯಕ್ಕೆ ಆಸ್ತಿ ಎನ್ನುವುದನ್ನು ಮರೆಯಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
ಮಾಜಿ ಶಾಸಕ ಕೆ.ಎನ್. ರಾಜಣ್ಣ ಹೇಳಿದ್ದೇನು?
ಮಧುಗಿರಿ ತಾಲ್ಲೂಕಿನ ಕಾವಣದಾಲ ಗ್ರಾಮದಲ್ಲಿ ಮಾತನಾಡುತ್ತಿದ್ದ ಅವರು, “ಇದು ನನ್ನ ಕೊನೇ ಚುನಾವಣೆ. ಶೋಕಿಗೆ, ಮುಖಸ್ತುತಿಗೆ ರಾಜಕಾರಣ ಮಾಡೋದು ಬೇಡ. ನಾನು ಶಾಸಕನಾದರೆ ನೀವೆಲ್ಲರೂ ಆದಂತೆ. ನೀವು ಹೋರಾಟ ಮಾಡಿ, ನಾನು ಶಾಸಕನಾದರೆ ನಾಮಕಾವಸ್ಥೆಗೆ ಇರ್ತೀನಿ. ಏನಾದರೂ ಕೆಲಸ ಆಗಬೇಕಾದ್ರೆ ನೀವೇ ಅಧಿಕಾರಿಗಳನ್ನ ಕೇಳೋ ಶಕ್ತಿ ಬರುತ್ತೆ” ಎಂದು ಹೇಳಿದ್ದರು.
ಇದನ್ನೂ ಓದಿ: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರನ್ನು ಗುಂಡಿಕ್ಕಿ ಕೊಲ್ಲಿ: ಪಬ್ಲಿಕ್ ಟಿವಿಯಲ್ಲಿ ಮಾಡಲಾದ ಪ್ರಚೋದನೆಗೆ ಖಂಡನೆ
“ಮುಂದಿನ ದಿನಗಳಲ್ಲಿ ಪ್ರತಿ ಮನೆ ಬಾಗಿಲಿಗೂ ಬಂದು ಓಟ್ ಕೇಳ್ತೀನಿ. ಮುಂದೆ ನೀವು ನಿಂತ್ಕೋ ಅಂದ್ರೂ ನಿಲ್ಲಲ್ಲಾ… ನನಗೆ ಆಗಲೇ 72 ವರ್ಷ, 77 ಆದ್ರೆ ಕೈಕಾಲು ಅಲಾಡ್ತಿರುತ್ತೆ. ನಮ್ಮ ಸರ್ಕಾರ ಬಂದ್ರೆ ನೂರಕ್ಕೆ ನೂರರಷ್ಟು ಮಂತ್ರಿ ಆಗ್ತೀನಿ. ದೇವೇಗೌಡರು ಇಬ್ಬರು ಮೇಲೆ ಹಾಕ್ಕೊಂಡು ಹೋಗ್ತಾವ್ರೇ.. ಹತ್ತಿರದಲ್ಲೇ ಇದೇ ನಾಲ್ಕರ ಮೇಲೆ ಹೋಗೋದು” ಎಂದು ರಾಜಣ್ಣ ಹೇಳಿದ್ದರು.



ಪಕ್ಷ ಸಿದ್ದಾಂತಗಳೇನಾದರು ಇರಲಿ ಈ ಅಯ್ಯೊಗ್ಯ ರಾಜಕಾರಣಿಗಳಲ್ಲಿ ನಿಜವಾಗಿಯೂ ಮಾನವೀಯ ಮೌಲ್ಯ ಸೌಜನ್ಯ ಇದೆಯೇ?