ಝೀ ನ್ಯೂಸ್‌ನ ನಿರೂಪಕ ರೋಹಿತ್ ರಂಜನ್ ಅವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿ ಅನೇಕ ಪೊಲೀಸ್ ಪ್ರಕರಣಗಳನ್ನು ದಾಖಲಿಸಿರುವ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಆದರೆ, ರಂಜನ್ ಅವರ ಅರ್ಜಿಯನ್ನು ನ್ಯಾಯಾಲಯದ ದಾಖಲೆಗಳಲ್ಲಿ ಪಟ್ಟಿ ಮಾಡದ ಕಾರಣ ಪ್ರೋಟೋಕಾಲ್ ಉಲ್ಲಂಘನೆಯಾಗಿದ್ದಕ್ಕೆ ನ್ಯಾಯಾಲಯದಲ್ಲಿ ಅವರ ಪರವಾಗಿ ಹಾಜರಾಗಿರುವ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಕ್ಷಮೆಯಾಚಿಸಿದ್ದಾರೆ.
“ಇದು ದಾಖಲೆಯಲ್ಲಿಯೂ ಇಲ್ಲ ಮತ್ತು ಇನ್ನೂ ಅರ್ಜಿ ಸಲ್ಲಿಸಲಾಗಿಲ್ಲ. ಪ್ರಕರಣದ ಅರ್ಜಿ ಸಲ್ಲಿಸಲಾಗಿಲ್ಲ ಎಂದು ನಮಗೆ ಹೇಳಬೇಕಾಗಿತ್ತು. ಇದು ಸರಿಯಾದ ರೀತಿಯಲ್ಲ” ಎಂದು ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ರಂಜಿತ್ ರಂಜನ್ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪ್ರಕರಣವನ್ನು ನಾಳೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿತ್ತಾದರೂ, ಅದರ ನಂತರ ಅಧಿಕೃತವಾಗಿ ನ್ಯಾಯಾಲಯದ ಮುಂದೆ ಅರ್ಜಿ ಪತ್ರಗಳನ್ನು ಸಲ್ಲಿಸಲಾಗಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿದುಬಂದಿದೆ. ನಿಯಮದಂತೆ ದಾಖಲೆಗಳ ಮೂಲಕ ಅರ್ಜಿಯನ್ನು ದಾಖಲಿಸಿದ ನಂತರವೇ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವನ್ನು ಉಲ್ಲೇಖಿಸಬಹುದು.
“ರಂಜನ್ ಅವರನ್ನು ನಿನ್ನೆ ನೋಯ್ಡಾ ಪೊಲೀಸರು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು. ಅವರು ತಮ್ಮ ಕಾರ್ಯಕ್ರಮವೊಂದರಲ್ಲಿ ತಪ್ಪು ಮಾಡಿದ್ದಾರೆ. ಈಗ ಛತ್ತೀಸ್‌ಗಢ ಪೊಲೀಸರು ಅವರನ್ನು ಬಂಧಿಸಲು ಬಯಸಿದ್ದಾರೆ. ದಯವಿಟ್ಟು ಅರ್ಜಿಯನ್ನು ತುರ್ತಾಗಿ ಪಟ್ಟಿ ಮಾಡಿ, ಇಲ್ಲದಿದ್ದರೆ ಅವರು ಪುನರಾವರ್ತಿತ ಬಂಧನದಲ್ಲಿ ಇರಬೇಕಾಗುತ್ತದೆ” ಎಂದು ರಂಜನ್ ಪರ ವಕೀಲರು ತಿಳಿಸಿದ್ದಾರೆ.
ಝೀ ಟಿವಿಯು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಬಗ್ಗೆ ತಪ್ಪು ಸುದ್ದಿಯನ್ನು ಪ್ರಸಾರ ಮಾಡಿದ ಕೆಲವು ದಿನಗಳ ನಂತರ ಅದರ ನಿರೂಪಕ ರಂಜನ್ ಅವರನ್ನು ಬಂಧಿಸಲಾಗಿದ್ದು, ತಪ್ಪಿನ ಬಗ್ಗೆ ಚಾನೆಲ್ ಕ್ಷಮೆಯಾಚಿಸಿತ್ತು.
ರಂಜನ್ ಅವರು ತಮ್ಮ ಶೋನಲ್ಲಿ, ಕೇರಳದ ವಯನಾಡ್‌ನಲ್ಲಿರುವ ತಮ್ಮ ಕಚೇರಿಯ ಮೇಲೆ ನಡೆದ ದಾಳಿಯ ಕುರಿತ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು, ರಾಜಸ್ಥಾನದಲ್ಲಿ ಕೊಲೆಯಾದ ಟೈಲರ್ ಹಂತಕರ ಕುರಿತ ಹೇಳಿಕೆ ಎಂಬಂತೆ ನಿರೂಪಿಸಿದ್ದರು. ಇದರ ನಂತರ ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಈ ಬಗ್ಗೆ ನಿನ್ನೆ ನೋಯ್ಡಾದಲ್ಲಿ ರಂಜನ್ ಅವರನ್ನು ಬಂಧಿಸಲು ಛತ್ತೀಸ್‌ಗಢ ಪೊಲೀಸರು ಆಗಮಿಸಿದಾಗ, ಅವರು ಉತ್ತರ ಪ್ರದೇಶ ಪೊಲೀಸರ ಸಹಾಯವನ್ನು ಕೇಳಲು ಟ್ವೀಟ್ ಮಾಡಿದ್ದರು. “ಛತ್ತೀಸ್‌ಗಢ ಪೊಲೀಸರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿಲ್ಲ” ಎಂದು ಅವರು ಹೇಳಿಕೊಂಡಿದ್ದು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ತಮ್ಮ ಟ್ವೀಟ್‌ನಲ್ಲಿ ಟ್ಯಾಗ್ ಮಾಡಿದ್ದರು.
“ಮಾಹಿತಿ ನೀಡಬೇಕು ಎಂಬ ಯಾವುದೇ ನಿಯಮವಿಲ್ಲ. ಆದರೂ, ಈಗ ಅವರಿಗೆ ತಿಳಿಸಲಾಗಿದೆ. ಪೊಲೀಸ್ ತಂಡವು ನಿಮಗೆ ನ್ಯಾಯಾಲಯದ ಬಂಧನದ ವಾರಂಟ್ ಅನ್ನು ತೋರಿಸಿದೆ. ವಾಸ್ತವವಾಗಿ ನೀವೇ ಸಹಕರಿಸಿ, ತನಿಖೆಯಲ್ಲಿ ಭಾಗವಹಿಸಬೇಕು. ನ್ಯಾಯಾಲಯದಲ್ಲಿ ನಿಮ್ಮ ಪ್ರತಿವಾದವನ್ನು ಮಂಡಿಸಬೇಕು” ಎಂದು ಛತ್ತೀಸ್‌ಗಢ ಪೊಲೀಸರು ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ ಪ್ರಸಾರ; ಕ್ಷಮೆಯಾಚಿಸಿ, ಇಬ್ಬರು ಸಿಬ್ಬಂದಿಗಳನ್ನು ವಜಾ ಮಾಡಿದ್ದೇವೆಂದ ‘ಝೀ ನ್ಯೂಸ್’
ಇದರ ನಂತರ ಎರಡು ರಾಜ್ಯಗಳ ಪೊಲೀಸರು ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲು ವಾಗ್ವಾದ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹೊರಹೊಮ್ಮಿತ್ತು. ಅಂತಿಮವಾಗಿ ಯುಪಿ ಪೊಲೀಸರು ಅವರನ್ನು ಕರೆದುಕೊಂಡು ಹೋಗುವುದರೊಂದಿಗೆ ನಾಟಕೀಯ ದೃಶ್ಯ ಕೊನೆಗೊಂಡಿತ್ತು.


