ಬೆಂಗಳೂರಿನ ಮಧ್ಯದ ಮೈಸೂರು ಬ್ಯಾಂಕ್ ವೃತ್ತದಲ್ಲಿರುವ 1942ರ ಕ್ವಿಟ್ ಇಂಡಿಯಾ ಚಳವಳಿ ಹುತಾತ್ಮ ಸ್ಮಾರಕ ಸಂರಕ್ಷಣೆಗೆ ಸ್ವಾತಂತ್ರ್ಯ ಸೇನಾನಿ ಎಚ್.ಎಸ್.ದೊರೆಸ್ವಾಮಿ ವೇದಿಕೆ ಹಾಗೂ ಇತರೆ ಎಲ್ಲ ಜನಪರ ಸಂಘಟನೆಗಳು ಸಹಿ ಸಂಗ್ರಹ ಅಭಿಯಾನ ಆರಂಭಿಸಿವೆ.
ಸಹಿ ಸಂಗ್ರಹ ಮಾಡಿ ಜುಲೈ 20ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ನೀಡಲು ನಿರ್ಧರಿಸಲಾಗಿದೆ. ಈ ಅಭಿಯಾನಕ್ಕೆ ಕೈ ಜೋಡಿಸಿ, ಮನವಿ ಪತ್ರಕ್ಕೆ ತಮ್ಮ ಹೆಸರನ್ನು ಸೇರಿಸುವ ಮೂಲಕ ಸಾಮಾಜಿಕ ಮಾಧ್ಯದಲ್ಲಿ ಬೆಂಬಲ ಸೂಚಿಸುವಂತೆ ಜನಪರ ಹೋರಾಟಗಾರರು ಕೋರಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಅಖಿಲ ಭಾರತ ಸ್ವಾತಂತ್ರ್ಯ ಯೋಧರ ಸಮಿತಿ ಪ್ರಧಾನ ಕಾರ್ಯದರ್ಶಿ ಅಪ್ಪರಾವ್ ನವಲೆ, ಸಮಿತಿ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ಜಾನ್ಸಿರಾಣಿ, ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ, ಕೆಜೆವಿಎಸ್‌ನ ಈ ಬಸವರಾಜು, ಸಮತಾ ಸಂಘಟನೆ ಪ್ರಭಾ ಬೆಳವಂಗಲ, ಕರ್ನಾಟಕ ಜನಶಕ್ತಿಯ ಸಿರಿಮನೆ ನಾಗರಾಜ, ಸಮುದಾಯ ಸಾಂಸ್ಕೃತಿಕ ಸಂಘಟನೆಯ ಗುಂಡಣ್ಣ ಚಿಕ್ಕಮಗಳೂರು, ಸಾಮಾಜಿಕ ಹೋರಾಟಗಾರ ಎಚ್.ಎಂ.ವೆಂಕಟೇಶ್, ಸಾಮಾಜಿಕ ಕಾರ್ಯಕರ್ತ ಅಲ್ದೂರ್ ಶಿವರಾಜ್, ಭೂಮಿಕ ಪತ್ರಿಕೆಯ ಸಂಪಾದಕ ಲಕ್ಷ್ಮಣ್, ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯು.ಬಸವರಾಜ್ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.
ಸಂಘಟನೆಗಳ ಮನವಿ ಪತ್ರದಲ್ಲಿ ಏನಿದೆ?
ನಮ್ಮ ದೇಶವು ‘ಆಜಾದಿ 75’ ವರ್ಷಾಚರಣೆಯನ್ನು ದೇಶದೆಲ್ಲಡೆ ಸಂಭ್ರಮದಿಂದ ಆಚರಿಸುತ್ತಿರುವುದು ತಮಗೆ ತಿಳಿದ ಸಂಗತಿಯಾಗಿದೆ.
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದ ಜನಸಾಮಾನ್ಯರು ಕೂಡ ಸ್ವಾತಂತ್ರ್ಯಕ್ಕಾಗಿ ಅಂದಿನ ವಿವಿಧ ಪ್ರದೇಶಗಳಲ್ಲಿ ಹಲವು ರೀತಿಯ ತ್ಯಾಗ ಬಲಿದಾನದ ಹೋರಾಟಗಳನ್ನು ನಡೆಸಿದ್ದಾರೆ. ಅದರಲ್ಲಿ 1942 ರಲ್ಲಿ ಮಹಾತ್ಮಾ ಗಾಂಧಿಜೀಯವರು ಕರೆ ನೀಡಿದ ‘ಕ್ವಿಟ್ ಇಂಡಿಯಾ’ ಚಳವಳಿ ಕರೆಗೆ ಓಗೊಟ್ಟು ಬೆಂಗಳೂರಿನ ‘ಸೆಂಟ್ರಲ್ ಕಾಲೇಜ್’ನ ವಿದ್ಯಾರ್ಥಿಗಳು ನಡೆಸಿದ ನಡೆಸಿದ ಹೋರಾಟ ಸ್ಪೂರ್ತಿದಾಯಕವಾದುದ್ದು.
ವಿದ್ಯಾರ್ಥಿಗಳು ಅಂದು ನಡೆಸಿದ ಹೋರಾಟದ ಮೇಲೆ ಅಂದಿನ ಬ್ರಿಟಿಷ್ ಪೊಲೀಸರು ಗುಂಡಿನದಾಳಿ ನಡೆಸಿದ ಪರಿಣಾಮ ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಗಳಾದ ಶಾಮಣ್ಣ ಬೇಟೆ ರಂಗಪ್ಪ, ಜಿ.ವಿ.ತಿರುಮಲಯ್ಯ, ಪ್ರಲ್ಹಾದ ಶೆಟ್ಟಿ ಹಾಗೂ ಗುಂಡಪ್ಪ ಎನ್ನುವ ನಾಲ್ಕು ವಿದ್ಯಾರ್ಥಿಗಳು ಹುತಾತ್ಮರಾದರು.
ಈ ಹುತಾತ್ಮರ ನೆನಪಿನಲ್ಲಿ ಬೆಂಗಳೂರು ನಗರ ಪಾಲಿಕೆ 1972ರಲ್ಲಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ‘ಹುತಾತ್ಮರ ನೆನಪಿನಲ್ಲಿ ಸ್ಮಾರಕ’ ಸ್ಥಾಪಿಸಿ ಅವರಿಗೆ ಗೌರವ ಸಲ್ಲಿಸಿದೆ. ಆದರೆ ಬೆಂಗಳೂರಿನ ಕೇಂದ್ರಸ್ಥಾನದಲ್ಲಿರುವ ಆ ಹುತಾತ್ಮ ಸ್ಮಾರಕದ ಸುತ್ತ ಇತ್ತೀಚಿನ ವರ್ಷಗಳಲ್ಲಿ ಎದ್ದಿರುವ ಅನಧಿಕೃತ ಕಟ್ಟಡದ ಪರಿಣಾಮ ಅಲ್ಲಿರುವ ‘ಹುತಾತ್ಮ ಸ್ಮಾರಕ’ವೇ ಸಾರ್ವಜನಿಕವಾಗಿ ಮರೆಯಾಗಿ ಹೋಗಿದೆ.
ಮೈಸೂರು ಬ್ಯಾಂಕ್ ವೃತ್ತದಲ್ಲಿ ಇರುವ ಈ ಹುತಾತ್ಮ ಸ್ಮಾರಕವನ್ನು ಸಂರಕ್ಷಿಸಬೇಕು ಮತ್ತು ಮೈಸೂರು ಬ್ಯಾಂಕ್ ವೃತ್ತವನ್ನು ‘ಹುತಾತ್ಮ ವೃತ್ತ’ವೆಂದು ಘೋಷಿಸಬೇಕೆಂದು ಈ ಹಿಂದೆಯೇ ಹಲವು ಬಾರಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಶತಾಯುಷಿ ಎಚ್.ಎಸ್.ದೊರೆಸ್ವಾಮಿಯವರ ನೇತೃತ್ವದಲ್ಲಿ ಹಲವು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹಲವು ಸಂಘಟನೆಗಳು ಚಳವಳಿ ನಡೆಸಿ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದ್ದರು. ಆದರೆ ಆ ಬಗ್ಗೆ ಇದುವರೆಗೂ ಯಾವುದೇ ಸೂಕ್ತ ಕ್ರಮವಹಿಸದಿರುವುದು ನೋವಿನ ಸಂಗತಿ.
ಆದುದರಿಂದ ಈಗ ದೇಶ ‘ಆಜಾದಿ 75’ರ ಆಚರಣೆಯಲ್ಲಿದೆ. ಇಂತಹ ಸನ್ನಿವೇಶದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರಿಗೆ ಹೆಚ್ಚಿನ ಗೌರವ ನೀಡಬೇಕಿರುವುದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಅಲ್ಲದೆ ಆಧುನಿಕತೆಯ ಭರಾಟೆಯಲ್ಲಿ ಸಿಲುಕಿರುವ ವಿದ್ಯಾರ್ಥಿ ಯುವಜನರಿಗೆ ಹಾಗೂ ಸಾರ್ವಜನಿಕರಿಗೆ ಇಂತಹ ಹುತಾತ್ಮರ ಬಗ್ಗೆ ತಿಳಿಯಪಡಿಸುವುದು ತೀರ ಅವಶ್ಯವಿದೆ.
ಇದನ್ನೂ ಓದಿರಿ: ದೇಶ ಒಗ್ಗೂಡಿಸುವವರು ದೇಶಪ್ರೇಮಿಗಳು, ದೇಶ ಒಡೆಯುವವರು ದೇಶದ್ರೋಹಿಗಳು: ಯೋಗೇಂದ್ರ ಯಾದವ್
ಈ ಹಿನ್ನಲೆಯಲ್ಲಿ ತಾವು ಬೆಂಗಳೂರಿನ ಕೇಂದ್ರಭಾಗದಲ್ಲಿರುವ ಆ ಹುತಾತ್ಮ ಸ್ಮಾರಕವನ್ನು ಸಾರ್ವಜನಿಕರ ಕಾಣುವಂತೆ ಮಾಡುವುದು ಹಾಗೂ ಅದರ ದರ್ಶನಕ್ಕೆ ಮುಕ್ತ ಲಭ್ಯವಾಗುವಾಗುವಂತೆ ಕೂಡಲೇ ಕ್ರಮವಹಿಸಬೇಕು ಎಂದು ಕೋರುತ್ತವೆ.
ನಮ್ಮ ಸಂಘಟನೆ ಹಾಗೂ ಸ್ವಾತಂತ್ರ್ಯ ಸೇನಾನಿ ಎಚ್.ಎಸ್.ದೊರೆಸ್ವಾಮಿ ವೇದಿಕೆ ಹಾಗೂ ಇತರೆ ಎಲ್ಲ ಜನಪರ ಸಂಘಟನೆಗಳೊಂದಿಗೆ ಸೇರಿ ಇದೇ ಆಗಸ್ಟ್ 9ರ ಕ್ವಿಟ್ ಇಂಡಿಯಾ ನೆನಪಿನಲ್ಲಿ ಒಂದು ಕಿರು ಕಾರ್ಯಕ್ರಮವನ್ನು ಹುತಾತ್ಮ ಸ್ಮಾರಕದ ಬಳಿ ಆಯೋಜಿಸಲು ನಿರ್ಧರಿಸಿದ್ದೇವೆ. ಅದಕ್ಕೆ ಅಲ್ಲಿ ಸೂಕ್ತ ಸ್ಥಳಾವಕಾಶ ಮಾಡಿಕೊಡಲು ಕೋರುತ್ತೇವೆ ಮತ್ತು ಮುಂದಿನ ತಮ್ಮಸಚಿವ ಸಂಪುಟದ ಸಭೆಯಲ್ಲಿ ಮೈಸೂರು ಬ್ಯಾಂಕ್ ವೃತ್ತವನ್ನು ‘ಹುತಾತ್ಮರ ವೃತ್ತ’ ಎಂದು ಅಧಿಕೃತವಾಗಿ ಘೋಷಿಸಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಅಮೂಲ್ಯ ಜೀವಗಳನ್ನು ತೆತ್ತ ಆ ಹುತಾತ್ಮರಿಗೆ ಸೂಕ್ತ ಗೌರವವನ್ನು ತಮ್ಮ ಸರ್ಕಾರ ಸಲ್ಲಿಸಲು ಕೋರುತ್ತಿದ್ದೇವೆ. ಈ ಬಗ್ಗೆ ತಮ್ಮಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದೆ ಎಂದು ಭಾವಿಸುತ್ತೇವೆ.


