Homeಕರ್ನಾಟಕ10% ಮೀಸಲಾತಿ: ಆರ್‌‌ಎಸ್‌ಎಸ್‌ ಮಂದಿ ಹಬ್ಬಿಸಿರುವ 100% ಸುಳ್ಳುಗಳು!

10% ಮೀಸಲಾತಿ: ಆರ್‌‌ಎಸ್‌ಎಸ್‌ ಮಂದಿ ಹಬ್ಬಿಸಿರುವ 100% ಸುಳ್ಳುಗಳು!

ಇಡಬ್ಲ್ಯೂಎಸ್‌ ಮೀಸಲಾತಿ ಕುರಿತು ಆರ್‌ಎಸ್‌ಎಸ್‌ ಕಾರ್ಯಕರ್ತ ವಾದಿರಾಜ್‌ ಎಂಬವರು ಪ್ರಜಾವಾಣಿಯಲ್ಲಿ ಬರೆದಿರುವ ಸುಳ್ಳುಗಳ ‘ಆಳ-ಅಗಲ’ವನ್ನು ಇಲ್ಲಿ ಬಯಲಿಗೆಳೆಯಲಾಗಿದೆ.

- Advertisement -
- Advertisement -

‘ಆರ್‌ಎಸ್ಎಸ್‌ ಆಳ ಮತ್ತು ಅಗಲ’ ಪುಸ್ತಕದಲ್ಲಿ ದೇವನೂರ ಮಹಾದೇವ ಅವರು ಕೇಂದ್ರ ಸರ್ಕಾರವು 2019ರಲ್ಲಿ ಜಾರಿಗೆ ತಂದ ಶೇಕಡ 10ರಷ್ಟು ಹೊಸ ಮೀಸಲಾತಿಯ ಬಗ್ಗೆ ಪ್ರಸ್ತಾಪಿಸಿರುವ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತ ‘ವಾದಿರಾಜ್‌’ ಎನ್ನುವವರು ‘ಪ್ರಜಾವಾಣಿ’ಯ ಸಂಗತ ವಿಭಾಗದಲ್ಲಿ ಬರೆದಿರುವ ಲೇಖನವು ಜನರ ದಿಕ್ಕುತಪ್ಪಿಸುವಂತಿದೆ. “ಈ ಮೀಸಲಾತಿಯು ಸಂವಿಧಾನವನ್ನು ಸಂಹಾರ ಮಾಡುತ್ತದೆ, ಮನುಧರ್ಮವನ್ನು ಪ್ರತಿಷ್ಠಾಪಿಸುತ್ತದೆ. ಇದರಿಂದಾಗಿ ಮೀಸಲಾತಿಯ ಕಲ್ಪನೆಯಲ್ಲಿ ಇದ್ದ ನ್ಯಾಯ ನೆಗೆದುಬಿದ್ದಿದೆ. ಇದು ಸಂವಿಧಾನಕ್ಕೆ ಕೊಟ್ಟ ಒಳೇಟು. ಮನುಧರ್ಮಶಾಸ್ತ್ರದ ಆಶಯದಂತೆ ಇದನ್ನು ರೂಪಿಸಲಾಗಿದೆ” ಎಂದು ದೇವನೂರರು ಹೇಳಿರುವುದಕ್ಕೆ ವಾದಿರಾಜರು ಆಕ್ಷೇಪ ವ್ಯಕ್ತಪಡಿಸಿ ಬರೆದಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ವಲಯ (ಇಡಬ್ಲ್ಯೂಎಸ್‌) ಎಂದು ಗುರುತಿಸಿ, ಅದಕ್ಕೆ ಶೇ. 10ರಷ್ಟು ಮೀಸಲಾತಿಯನ್ನು ಕೇಂದ್ರ ಸರ್ಕಾರ ಕಲ್ಪಿಸಿರುವುದನ್ನು ಸಮರ್ಥಿಸಲು ವಾದಿರಾಜ್‌ ಈ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

1. ಕರ್ನಾಟಕದಲ್ಲಿ ಇರುವಂತೆ ಒಬಿಸಿ ಪಟ್ಟಿಯಲ್ಲಿ ರೈತಾಪಿ ಸಮುದಾಯಗಳು, ಭೂಹಿಡುವಳಿ ಇರುವ ಜಾತಿಗಳು ದೇಶದ ಉಳಿದೆಡೆ ಇಲ್ಲ. ಮಂಡಲ್ ಆಯೋಗವೂ ರೈತಾಪಿ ಸಮುದಾಯಗಳನ್ನು ಒಬಿಸಿ ಪಟ್ಟಿಯಲ್ಲಿ ಸೇರಿಸಲು ಒಪ್ಪಿರಲಿಲ್ಲ.

2. ಕರ್ನಾಟಕದಲ್ಲಿ ರೈತಾಪಿ ಸಮುದಾಯಗಳು ಒಬಿಸಿ ಪಟ್ಟಿಯಲ್ಲಿ ಸೇರಿರುವುದು ರಾಜಕೀಯ ಒತ್ತಡದಿಂದ. ವೆಂಕಟಸ್ವಾಮಿ ಆಯೋಗವಾಗಲೀ ಚಿನ್ನಪ್ಪ ರೆಡ್ಡಿ ಆಯೋಗವಾಗಲೀ ಇದಕ್ಕೆ ಸಮ್ಮತಿಸಿರಲಿಲ್ಲ. ಹೀಗಾಗಿ ಹೊಸ ಮೀಸಲಾತಿಗೆ ಕರ್ನಾಟಕದಲ್ಲಿ ಸಣ್ಣ ಜಾತಿಗಳೆನಿಸಿದ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ ಬಿಟ್ಟರೆ ಬೇರೆ ಯಾರೂ ಇಲ್ಲದಂತಾಗಿದೆ. ಆದರೆ ಇದೇ ಪರಿಸ್ಥಿತಿ ದೇಶದ ಉಳಿದೆಡೆ ಇಲ್ಲ.

3. ಈ ಎರಡು ದಶಕಗಳಲ್ಲಿ ಗುಜರಾತ್, ಮಹಾರಾಷ್ಟ್ರ ಸೇರಿದಂತೆ ದೇಶದ ಹಲವೆಡೆ ಅಲ್ಲಲ್ಲಿನ ರೈತಾಪಿ ಸಮುದಾಯಗಳು ಒಬಿಸಿ ಮೀಸಲಾತಿಗಾಗಿ ದೊಡ್ಡ ಹೋರಾಟವನ್ನು ಮಾಡುತ್ತಿದ್ದವು. 2019ರಲ್ಲಿ ಕೇಂದ್ರ ಸರ್ಕಾರವು ಶೇ 10ರ ಮೀಸಲಾತಿ ಜಾರಿಗೆ ತಂದ ತರುವಾಯ ಈ ಹೋರಾಟಗಳು ತಣ್ಣಗಾಗಿವೆ.

4. ಆರ್ಥಿಕವಾಗಿ ಹಿಂದುಳಿದವರಿಗೆ ಪ್ರತ್ಯೇಕ ಮೀಸಲಾತಿ ಕೊಡುವುದು ಕಾಂಗ್ರೆಸ್‌ನ ಕಾರ್ಯಸೂಚಿ. 1991ರಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಪ್ರಧಾನಿಯಾಗಿದ್ದ ನರಸಿಂಹ ರಾವ್, ಆರ್ಥಿಕವಾಗಿ ಹಿಂದುಳಿದವರಿಗೆ ಪ್ರತ್ಯೇಕ ಮೀಸಲಾತಿ ಕೊಡುವ ಕಾಯ್ದೆಯನ್ನು ಜಾರಿಗೆ ತಂದರು. ಆದರೆ ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತಾರದೆ ಕಾಯ್ದೆ ಜಾರಿ ಮಾಡಿದ್ದರಿಂದ ನ್ಯಾಯಾಲಯದಲ್ಲಿ ಬಿದ್ದು ಹೋಯಿತು.

5. 2006ರಲ್ಲಿ ಯುಪಿಎ ಸರ್ಕಾರದ ಪ್ರಧಾನಿ ಮನಮೋಹನ್ ಸಿಂಗ್ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ರೂಪಿಸಲು ಮೇಜರ್ ಜನರಲ್ ಎಸ್.ಆರ್.ಸಿನ್ಹೊ ನೇತೃತ್ವದಲ್ಲಿ ತ್ರಿಸದಸ್ಯ ಆಯೋಗ ರಚಿಸಿದರು. ಈ ಆಯೋಗ ದೇಶದಾದ್ಯಂತ ಅಧ್ಯಯನ ನಡೆಸಿ 2010ರಲ್ಲಿ ಸಲ್ಲಿಸಿದ ವರದಿಯಲ್ಲಿ, ಆರ್ಥಿಕವಾಗಿ ಹಿಂದುಳಿದವರಿಗೆ ಶೇ 15ರಷ್ಟು ಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿತ್ತು. 2014ರ ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ, ಅಧಿಕಾರಕ್ಕೆ ಬಂದರೆ ಸಿನ್ಹೊ ಶಿಫಾರಸನ್ನು ಜಾರಿಗೊಳಿಸುವ ಭರವಸೆ ಕೊಟ್ಟಿತ್ತು. ಈ ಪ್ರಣಾಳಿಕಾ ಸಮಿತಿಯ ನೇತೃತ್ವ ವಹಿಸಿದ್ದವರು ಕರ್ನಾಟಕದವರೇ ಆದ ವೀರಪ್ಪ ಮೊಯಿಲಿ.

ಇದನ್ನೂ ಓದಿರಿ: ಸಂಪತ್ತು ಅನುಭವಸಿದವರೇ ಮೀಸಲಾತಿ ವಿರೋಧಿಸುತ್ತಿದ್ದಾರೆ: ಸಿದ್ದರಾಮಯ್ಯ ವಿಷಾದ

ಹೀಗೆ ವಾದಿರಾಜ್ ಅವರು ತಮ್ಮ ವಾದವನ್ನು ಮಂಡಿಸಿದ್ದಾರೆ. ಮೇಲು ನೋಟಕ್ಕೆ ನೋಡಿದರೆ ‘ನಿಜವಲ್ಲವೇ?’ ಅನಿಸುವಂತೆಯೇ ಇಲ್ಲಿಯ ವಿಚಾರಗಳಿವೆ. ಆದರೆ ವಾದಿರಾಜರ ಲೇಖನದ ಉದ್ದೇಶದ ‘ಆಳ ಮತ್ತು ಅಗಲ’ ಕೆದಕಿ ನೋಡಿದರೆ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ಚಿಂತಕ ಸಾಕ್ಯ ಸಮಗಾರ ಅವರು ವಾದಿರಾಜ್‌ ಅವರ ಲೇಖನದಲ್ಲಿ ಪ್ರಸ್ತಾಪವಾಗದೆ ಇರುವ, ಇಡಬ್ಲ್ಯೂಎಸ್‌‌ ಕುರಿತು ಕೇಳಲೇಬೇಕಾದ ಕೆಲವು ಅಂಶಗಳನ್ನು ‘ನಾನುಗೌರಿ.ಕಾಂ’ ಜೊತೆಗೆ ಹಂಚಿಕೊಂಡರು.

1. ಕಾಂಗ್ರೆಸ್‌ ಪಕ್ಷ ಮಾಡಿದ್ದನ್ನೇ ಇವರು (ವಾದಿರಾಜ್‌ ಬೆಂಬಲಿಸುವ ಬಿಜೆಪಿಯವರು) ಮಾಡುತ್ತಿದ್ದಾರಾ? ಹೊಸದೇನೂ ಮಾಡುವುದಿಲ್ಲವೇ? ಆಧಾರ್‌, ಜಿಎಸ್‌ಟಿ ಎಲ್ಲವೂ ಕಾಂಗ್ರೆಸ್ ಮಾಡಿದ್ದು ಎನ್ನತ್ತಲೇ ಜಾರಿಗೊಳಿಸಿದರು. ಅಂದರೆ ಕಾಂಗ್ರೆಸ್ ಮಾಡಿದ ತಪ್ಪುಗಳನ್ನು ಬಿಜೆಪಿಯವರು ಮುಂದುವರಿಸುತ್ತಾರಾ?

2. ಎಸ್.ಆರ್.ಸಿನ್ಹೊ ಸಮಿತಿಯ ವರದಿಯನ್ನು ಬಿಡುಗಡೆ ಮಾಡಿದ್ದಾರಾ? ಸಿನ್ಹೊ ಸಮಿತಿಯು ಯಾವ ರೀತಿ ಸಮೀಕ್ಷೆ ನಡೆಸಿತ್ತು? ಸಿನ್ಹೊ ಸಮಿತಿಯ ಪ್ರಕಾರ ಆರ್ಥಿಕವಾಗಿ ಹಿಂದುಳಿದ ಜಾತಿಗಳು ಯಾವುವು? ಸಮಿತಿಯ ವರದಿಯನ್ನು ಪುರಸ್ಕರಿಸಿ ಸಂಸತ್‌ನಲ್ಲಿ ಚರ್ಚೆ ಮಾಡಬಹುದಿತ್ತಲ್ಲ? ರಾತ್ರೋ ರಾತ್ರಿ ಇಡಬ್ಲ್ಯೂಎಸ್‌ ಮೀಸಲಾತಿಯನ್ನು ಜಾರಿ ಮಾಡಿದ್ದೇಕೆ?

3. ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಬರೆದಿರುವ ಸಂವಿಧಾನದಲ್ಲಿ, ಕೇವಲ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿಯನ್ನು ಕೊಡಬೇಕು ಎಂಬ ವಿಷಯ ಇರಲಿಲ್ಲ. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಈ ಮೂರು ಅಂಶಗಳನ್ನು ಪರಿಗಣಿಸಿ ಮೀಸಲಾತಿ ನೀಡಲಾಗಿತ್ತು. ಈಗ ಸಂವಿಧಾನಕ್ಕೆ ತಂದಿರುವ ತಿದ್ದುಪಡಿ ಕೂಡ ಅಂಬೇಡ್ಕರ್‌‌ ವಿಚಾರಗಳಿಗೆ ವಿರುದ್ಧವಿದೆ. ಮೀಸಲಾತಿ ಬಡತನ ನಿರ್ಮೂಲನಾ ಕಾರ್ಯಕ್ರಮವಲ್ಲ, ಅದು ಪ್ರಾತಿನಿಧ್ಯದ ಪ್ರಶ್ನೆ. ಪ್ರಾತಿನಿಧ್ಯ ಇದ್ದರಿಗೆ ಮೀಸಲಾತಿ ಕೊಟ್ಟಿದ್ದು ಏಕೆ?

4. ಇಡಬ್ಲ್ಯೂಎಸ್‌ ಪ್ರಸ್ತಾಪಿಸುವ ಆರ್ಥಿಕವಾಗಿ ಹಿಂದುಳಿದಿರುವಿಕೆಯ ಮಾನದಂಡವೇ ಸರಿ ಇಲ್ಲ. 8 ಲಕ್ಷ ರೂ. ಆದಾಯ ಮಿತಿಯನ್ನು ಆರ್ಥಿಕವಾಗಿ ಹಿಂದುಳಿದಿರುವಿಕೆ ಎಂದು ಹೇಗೆ ಕರೆಯುತ್ತೀರಿ? 8 ಲಕ್ಷ ರೂ. ಆದಾಯ ಇರುವವರಿಗೂ ಬಿಪಿಎಲ್‌ ಕಾರ್ಡ್ ಕೊಡುತ್ತಾರಾ?

5. ಒಳಮೀಸಲಾತಿ ಜಾರಿಗೆ ತರಬೇಕು, ಅದಕ್ಕಾಗಿ ಸಂವಿಧಾನ ತಿದ್ದುಪಡಿ ಮಾಡಬೇಕು ಎಂದು ಉಷಾ ಮೆಹ್ರಾ ಸಮಿತಿ ಹೇಳಿ ದಶಕವೇ ಆಗಿಹೋಯ್ತು. ಈ ಕೆಲಸ ಮಾಡಲು ಸರ್ಕಾರ ಮುಂದಾಗಲಿಲ್ಲ. ಒಳಮೀಸಲಾತಿ ಜಾರಿ ಹೋರಾಟಕ್ಕೆ ಸುಮಾರು 40 ವರ್ಷಗಳ ಹೋರಾಟವಿದೆ. ಆದರೆ ಯಾವುದೇ ಹೋರಾಟ ಇಲ್ಲದೆ ಇರುವ ಇಡಬ್ಲೂಎಸ್‌ಗಾಗಿ ಸಂವಿಧಾನ ತಿದ್ದುಪಡಿ ಮಾಡಲಾಯಿತು. ದಲಿತರ ವಿಚಾರದಲ್ಲಿ ಯಾಕಿಷ್ಟು ಅಸಡ್ಡೆ?

6. ಕರ್ನಾಟಕದಲ್ಲಿ ರೈತಾಪಿ ವರ್ಗವನ್ನು ಒಬಿಸಿಗೆ ಸೇರಿಸಿದ್ದಾರೆ. ಹೀಗಾಗಿ ಬ್ರಾಹ್ಮಣ, ವೈಶ್ಯ, ಕ್ಷತ್ರೀಯ ಬಿಟ್ಟರೆ ಬೇರೆ ಯಾರಿಗೂ ಇಡಬ್ಲ್ಯೂಎಸ್‌ ಅನ್ವಯಿಸಲ್ಲ ಎನ್ನುತ್ತಾರೆ ವಾದಿರಾಜ್‌. ಹಾಗಾದರೆ ಕರ್ನಾಟಕದಲ್ಲಿ ಇಡಬ್ಲ್ಯೂಎಸ್‌ ಮೀಸಲಾತಿ ತೆಗೆದು ಹಾಕುತ್ತಾರಾ? ವಾದಿರಾಜರ ವಾದದ ಪ್ರಕಾರ, ಕರ್ನಾಟಕದಲ್ಲಿ ಇಡಬ್ಲ್ಯೂಎಸ್‌ ಶೇ. 10 ಮೀಸಲಾತಿ ಅಗತ್ಯವಿಲ್ಲ!

7. ‘ರೈತಾಪಿ’ ಎಂಬ ಪದವನ್ನು ವಾದಿರಾಜ್ ಬಳಸುತ್ತಾರೆ. ಆದರೆ ಮೇಜ್ಜಾತಿಯಲ್ಲಿ ರೈತಾಪಿ ವರ್ಗ ಎಲ್ಲಿದೆ? ಆ ರೈತಾಪಿ ಜಾತಿಗಳು ಯಾವುವು ಎಂದು ಪಟ್ಟಿಯನ್ನು ವಾದಿರಾಜ್ ಕೊಡಬೇಕು. ಭೂ ಮಾಲೀಕರನ್ನು ರೈತಾಪಿ ಎನ್ನಲು ಸಾಧ್ಯವಿಲ್ಲ. ಭೂ ಮಾಲೀಕರು ಎಂದಿಗೂ ಭೂ ಮಾಲೀಕರೇ. ಭೂ ಮಾಲೀಕರು, ಬ್ರಾಹ್ಮಣ, ಮೊದಲಿಯಾರ್‌, ವೈಶ್ಯ, ಕ್ಷತ್ರೀಯರಿಗೆ ಶೇ. 10 ಮೀಸಲಾತಿಯನ್ನು ಕೊಡಲಾಗಿದೆ. ಇವರೆಲ್ಲರೂ ಸಂವಿಧಾನ ಬರುವುದಕ್ಕಿಂತ ಮುಂಚೆ, ಬ್ರಿಟಿಷರ ಕಾಲದಲ್ಲೂ ಅತಿ ಹೆಚ್ಚು ಮೀಸಲಾತಿಯನ್ನು ಪಡೆದುಕೊಂಡವರಾಗಿದ್ದಾರೆ. ಇಡೀ ದೇಶದ ಸಂಪತ್ತಿನಲ್ಲಿ ಅತಿ ಹೆಚ್ಚು ಸಂಪತ್ತು ಈ ಸಮುದಾಯಗಳ ಬಳಿ ಇರುವಾಗ ಶೇ. 10ರಷ್ಟು ಮೀಸಲಾತಿ ಏಕೆ?

ಕರ್ನಾಟಕದಲ್ಲಿ ಸವರ್ಣೀಯರಿಗೆ ಹೆಚ್ಚುವರಿಯಾಗಿ ಶೇ. 8.5. ಮೀಸಲಾತಿ: ಶ್ರೀಪಾದ್‌ ಭಟ್‌

“ಇಡಬ್ಲ್ಯೂಎಸ್‌ ಪ್ರಕಾರ ಕರ್ನಾಟಕದಲ್ಲಿ ಸವರ್ಣೀಯರಿಗೆ ಶೇ. 8.5 ಹೆಚ್ಚುವರಿ ಮೀಸಲಾತಿ ನೀಡಲಾಗಿದೆ” ಎನ್ನುತ್ತಾರೆ ಚಿಂತಕ ಶ್ರೀಪಾದ್‌ ಭಟ್‌.

“ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ-ಉಪಜಾತಿಗಳಿಗೆ ಶೇ. 15 ಪ್ರಮಾಣದಲ್ಲಿ ಮೀಸಲಾತಿಯಿದೆ. ಪರಿಶಿಷ್ಟ ಪಂಗಡ ಜಾತಿ-ಉಪಜಾತಿಗಳಿಗೆ ಶೇ.3 ಮೀಸಲಾತಿಯಿದೆ. ಹಿಂದುಳಿದ ವರ್ಗಗಳ ಪ್ರವರ್ಗ 1 : 4%, ಪ್ರವರ್ಗ 2ಎ : 15%, ಪ್ರವರ್ಗ 2ಬಿ (ಮುಸ್ಲಿಂ): 4%, ಪ್ರವರ್ಗ 3ಎ: 4%, ಪ್ರವರ್ಗ 3ಬಿ : 5%, ಒಟ್ಟು ಶೇ. 32% ಮೀಸಲಾತಿಯಿದೆ. ಕರ್ನಾಟಕ ಜನಸಂಖ್ಯೆಯ ಶೇ.21ರಷ್ಟಿರುವ ಪ.ಜಾತಿ/ಪ.ಪಂಗಡಗಳಿಗೆ ಶೇ.18 ಪ್ರಮಾಣದ ಮೀಸಲಾತಿಯಿದೆ. ಶೇ.75ರಷ್ಟಿರುವ ಹಿಂದುಳಿದ ವರ್ಗಗಳಿಗೆ ಶೇ.32 ಪ್ರಮಾಣದ ಮೀಸಲಾತಿಯಿದೆ. ಇದೇ ಮಾನದಂಡವನ್ನು ಬಳಸುವುದಾದರೆ ಶೇ.7 ಪ್ರಮಾಣಕ್ಕಿಂತ ಕಡಿಮೆ ಇರುವ ಬ್ರಾಹ್ಮಣ, ವೈಶ್ಯ, ಜೈನ, ಮೊದಲಿಯಾರ್, ನಾಯರ್ ಸಮುದಾಯದ ಮೇಲ್ಜಾತಿಗಳಿಗೆ ಇಡಬ್ಲ್ಯೂಎಸ್‌ 10% ಅಡಿಯಲ್ಲಿ ಶೇ. 1.5 ಪ್ರಮಾಣದ ಮೀಸಲಾತಿ ದೊರಕಬೇಕಿತ್ತು. ಆದರೆ ಹೆಚ್ಚುವರಿಯಾಗಿ 8.5 % ಮತ್ತು ಒಟ್ಟಾರೆಯಾಗಿ 10%ರಷ್ಟು ಮೀಸಲಾತಿ ದೊರಕುತ್ತದೆ. ಈ ಅನುಪಾತವನ್ನು ನಿರ್ದರಿಸಲು ಯಾವ ಅಳತೆಗೋಲು ಬಳಸಿದ್ದಾರೆ ಎನ್ನುವುದು ನಿಗೂಢವಾಗಿದೆ” ಎನ್ನುತ್ತಾರೆ ಶ್ರೀಪಾದ್ ಭಟ್.

“ಸಾರ್ವಜನಿಕ ವಲಯ, ಇಲಾಖೆಗಳಲ್ಲಿ ಯಾವ ರೀತಿಯಲ್ಲಿ ಲೆಕ್ಕಾಚಾರ ಮಾಡಿದರೂ ಮೇಲ್ಜಾತಿಗಳ ಪ್ರಾತಿನಿಧ್ಯವು ಗರಿಷ್ಟ ಮಟ್ಟದಲ್ಲಿದೆ. ಉದಾಹರಣೆಗೆ ಈಗಾಗಲೆ ಭಾರತೀಯ ಮಾಧ್ಯಮ ರಂಗದಲ್ಲಿ 97% ಪ್ರಮಾಣದಲ್ಲಿ ಮೇಲ್ಜಾತಿಗಳಿದ್ದಾರೆ. ಇದರಲ್ಲಿ ಬ್ರಾಹ್ಮಣರು 85% ಪ್ರಮಾಣದಲ್ಲಿದ್ದಾರೆ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳಿಂದ 3% ಪ್ರಮಾಣದಲ್ಲಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮತ್ತು ಸಾರ್ವಜನಿಕ ಉದ್ದಿಮೆಗಳಲ್ಲಿ ಪರಿಶಿಷ್ಟ ಜಾತಿ 18% ಪ್ರಮಾಣದಲ್ಲಿ, ಪರಿಶಿಷ್ಟ ಪಂಗಡ 8% ಪ್ರಮಾಣದಲ್ಲಿ ಹಿಂದುಳಿದ ವರ್ಗ 25% ಪ್ರಮಾಣದಲ್ಲಿ ಮತ್ತು ಮೇಲ್ಜಾತಿಗಳು 55% ಪ್ರಮಾಣದಲ್ಲಿದ್ದಾರೆ. ಆರ್‌ಬಿಐನಲ್ಲಿ ಪರಿಶಿಷ್ಟ ಜಾತಿ 16% ಪ್ರಮಾಣದಲ್ಲಿ, ಪರಿಶಿಷ್ಟ ಪಂಗಡ 6.5% ಪ್ರಮಾಣದಲ್ಲಿ ಹಿಂದುಳಿದ ವರ್ಗ 11.5% ಪ್ರಮಾಣದಲ್ಲಿ ಮತ್ತು ಮೇಲ್ಜಾತಿಗಳು 65% ಪ್ರಮಾಣದಲ್ಲಿದ್ದಾರೆ. ಈ ಅಂಕಿಅಂಶಗಳ ಪ್ರಕಾರ ಪ್ರಸ್ತುತ ಎಲ್ಲಾ ವಲಯಗಳಲ್ಲಿ ಮೇಲ್ಜಾತಿಯವರ ಪ್ರಾತಿನಿಧ್ಯವು 70% ಪ್ರಮಾಣವನ್ನು ಮೀರುತ್ತದೆ. ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಮುಂದುವರೆದವರಿಗೆ, ಅತಿ ಹೆಚ್ಚು ಪ್ರಾತಿನಿಧ್ಯ ಪಡೆದುಕೊಂಡವರಿಗೆ, ಎಲ್ಲಾ ರೀತಿಯಲ್ಲಿ ಸಬಲೀಕರಣಗೊಂಡವರಿಗೆ ಆರ್ಥಿಕ ಮೀಸಲಾತಿಯ ಮೂಲಕ ಮತ್ತಷ್ಟು ಬಲಾಢ್ಯಗೊಳಿಸುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ನಾಶವೆಂದೇ ಹೇಳಬೇಕಾಗುತ್ತದೆ” ಎಂದು ಎಚ್ಚರಿಸಿದರು.

“ಸಿಎಮ್‌ಐಇ ಸಂಸ್ಥೆಯ ವರದಿಯ ಅನುಸಾರ ಮೇ 2021ರಲ್ಲಿ ನಿರುದ್ಯೋಗದ ಪ್ರಮಾಣ 11.9 ಪ್ರಮಾಣಕ್ಕೆ ತಲುಪಿದೆ. ಜನವರಿ ತಿಂಗಳಲ್ಲಿ ನಿರುದ್ಯೋಗದ ಪ್ರಮಾಣ 14.5ರಷ್ಟಿತ್ತು. ಕಾರ್ಮಿಕರ ಪಾಲ್ಗೊಳ್ಳುವಿಕೆಯ ಪ್ರಮಾಣ ಮೇ ತಿಂಗಳಲ್ಲಿ 40.5%ರಷ್ಟಿದ್ದರೆ ಜೂನ್‌ಗೆ 34.6%ಗೆ ಕುಸಿದಿದೆ. 2014-17ರ ಅವಧಿಯಲ್ಲಿ 3.35 ಲಕ್ಷ ಉದ್ಯೋಗ ನಷ್ಟವಾಗಿದೆ. 2021ರ ಎಪ್ರಿಲ್-ಮೇ ನಡುವೆ ಅಂದಾಜು 1.53 ಕೋಟಿ ಉದ್ಯೋಗ ನಷ್ಟವಾಗಿದೆ. 2021ರ ಜನವರಿ-ಮೇ ನಡುವೆ 2.53 ಕೋಟಿ ಉದ್ಯೋಗ ನಷ್ಟವಾಗಿದೆ. 2016ರ ಮೇ-ಎಪ್ರಿಲ್ ತಿಂಗಳಲ್ಲಿ ಸರಾಸರಿ 40.3 ಕೋಟಿ ಉದ್ಯೋಗಿಗಳಿದ್ದರೆ 2018-19ಲ್ಲಿ ಸರಾಸರಿ 40.2 ಕೋಟಿಗೆ ಇಳಿದಿದೆ. 2021ರ ಜನವರಿಯಲ್ಲಿ 40 ಕೋಟಿ ಉದ್ಯೋಗಿಗಳಿದ್ದರೆ, 2021ರ ಫೆಬ್ರವರಿಯಲ್ಲಿ 39.8 ಕೋಟಿಗೆ, ಎಪ್ರಿಲ್‌ನಲ್ಲಿ 39 ಕೋಟಿಗೆ, ಮೇ ತಿಂಗಳಲ್ಲಿ 37.5 ಕೋಟಿಗೆ ಕುಸಿದಿದೆ” ಎಂದು ವಿವರಿಸಿದರು.

ಇದನ್ನೂ ಓದಿರಿ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ಪ್ರಶ್ನೆ ಮತ್ತು ಸುಪ್ರೀಂ ತೀರ್ಪು

“ಉದ್ಯೋಗ ಸೃಷ್ಟಿಯ ಕುರಿತು ನೋಡೋಣ. ಇಂದು ದೇಶದ್ಯಾಂತ ಸುಮಾರು 24 ಲಕ್ಷ ಸರಕಾರಿ ಉದ್ಯೋಗಗಳು ಖಾಲಿ ಇದೆ. ಈ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿಲ್ಲ. ಈಗಿನ ನವ ಉದಾರೀಕರಣದ ಸಂದರ್ಭದಲ್ಲಿ ಪ್ರತಿ ವರ್ಷ 80 ಲಕ್ಷದಿಂದ 1.1 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಡುತ್ತಾರೆ. ಆದರೆ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಇದರ ಬದಲಿಗೆ 2018ರ ವರ್ಷವೊಂದರಲ್ಲಿಯೇ 1 ಕೋಟಿ ಜನಸಂಖ್ಯೆ ಉದ್ಯೋಗ ಕಳೆದುಕೊಂಡಿದ್ದಾರೆ. ಇದರಲ್ಲಿ 84% ಪ್ರಮಾಣದಲ್ಲಿ ಗ್ರಾಮೀಣ ಭಾಗದಲ್ಲಿ ಉದ್ಯೋಗ ನಷ್ಟವಾಗಿದೆ. ಕೇಂದ್ರ ಸಾರ್ವಜನಿಕ ಉದ್ಯಮಗಳಲ್ಲಿ 2014ರಲ್ಲಿ 1,13,524 ಉದ್ಯೋಗಿಗಳಿದ್ದರೆ 2917ರಲ್ಲಿ ಅದು 1,00,933ಗಳಿಗೆ ಕುಸಿದಿದೆ. ಇನ್ನು ಸಾರ್ವಜನಿಕ ವಲಯಗಳಲ್ಲಿ ಉದ್ಯೋಗವಕಾಶಗಳು 1.5% ಪ್ರಮಾಣಕ್ಕಿಂತಲೂ ಕಡಿಮೆ ಇದೆ. ಖಾಸಗಿ ಕ್ಷೇತ್ರಗಳಲ್ಲಿ ಮೀಸಲಾತಿ ಸೌಲಭ್ಯವಿಲ್ಲ” ಎಂದು ತಿಳಿಸಿದರು.

“ಈ ಅಂಕಿಅಂಶಗಳಿಂದ ಕಂಡುಬರುವುದೇನೆಂದರೆ 2014ರಲ್ಲಿ ಪ್ರತಿ ವರ್ಷ 2 ಕೋಟಿ ಉದ್ಯೋಗ ಕಲ್ಪಿಸುವ ಚುನಾವಣಾ ಭರವಸೆ ನೀಡಿದ್ದ ಮೋದಿಯವರು ಆರು ವರ್ಷಗಳಲ್ಲಿ (2014-2020) ತಮ್ಮ ಮಾತನ್ನು ಉಳಿಸಿಕೊಳ್ಳಲು ದಯನೀಯವಾಗಿ ಸೋತಿರುವುದು ಸ್ಪಷ್ಟವಾಗಿದೆ. ತಮ್ಮನ್ನು ಪ್ರಶ್ನಿಸಬಹುದಾದ, ತಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಬಹುದಾದ ಜನತೆಯ ಗಮನವನ್ನು ಬೇರೆಡೆ ಸೆಳೆಯಲು ಇಡಬ್ಲ್ಯೂಎಸ್‌ 10% ತಂತ್ರವನ್ನು ಹೆಣೆದಿದ್ದಾರೆ. ಆದರೆ ಸರಾಸರಿ 12% ಪ್ರಮಾದಲ್ಲಿರುವ ನಿರುದ್ಯೋಗದ ಸಮಸ್ಯೆಯನ್ನು ಪರಿಹರಿಸಲು ಯಾವುದೇ ಪ್ರಯತ್ನ ಮಾಡದೆ 10% ಮೀಸಲಾತಿಯ ಮೂಲಕ ಮತ್ತೆ ಹೆಚ್ಚುವರಿಯಾಗಿ ಉದ್ಯೋಗ ಕಲ್ಪಿಸುವ ಭ್ರಮೆ ಸೃಷ್ಟಿಸಿದ್ದಾರೆ. ಆದರೆ ಇದು ಯುವಜನತೆಗೆ ಸಂಪೂರ್ಣವಾಗಿ ದಿಕ್ಕು ತಪ್ಪಿಸುವ ಕಾರ್ಯಕ್ರಮ ಎಂದು ಸಂಬಂಧಿಸದವರಿಗೆ ಅರ್ಥವಾಗಿದೆಯೇ ಎನ್ನುವುದು ಯಕ್ಷಪ್ರಶ್ನೆ” ಎಂದು ಅಭಿಪ್ರಾಯಪಟ್ಟರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...