Homeಮುಖಪುಟಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ಪ್ರಶ್ನೆ ಮತ್ತು ಸುಪ್ರೀಂ ತೀರ್ಪು

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ಪ್ರಶ್ನೆ ಮತ್ತು ಸುಪ್ರೀಂ ತೀರ್ಪು

- Advertisement -
- Advertisement -

ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ ಕುರಿತು ಸರ್ವೋಚ್ಚ ನ್ಯಾಯಾಲಯ ನೀಡಿರುವ ಇತ್ತೀಚಿನ ತೀರ್ಪಿನ ಬಗ್ಗೆ ಕರ್ನಾಟಕ ಸೇರಿದಂತೆ ಇತರ ರಾಜ್ಯ ಸರ್ಕಾರಗಳೂ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಕೋಮು ವಿಭಜನೆಯ ರಾಜಕಾರಣದ ಭಜನೆಯಲ್ಲಿ ಮುಳುಗಿಹೋಗಿರುವ ಮೆಜಾರಿಟೇರಿಯನ್ ರಾಜ್ಯ ಸರ್ಕಾರಕ್ಕೆ ಆಲಕ್ಷಿತ ಸಮುದಾಯಗಳ ಕುರಿತು ಕಾಳಜಿ ಇರುವಂತೆ ತೋರುತ್ತಿಲ್ಲ.

1992ರಲ್ಲಿ ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿ ತಂದು ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಕ್ಕೆ ರಾಜಕೀಯ ಮೀಸಲಾತಿಯನ್ನು ಪಿ.ವಿ.ನರಸಿಂಹರಾವ್ ಸರ್ಕಾರ ನೀಡಿತು. ಕರ್ನಾಟಕ ಸರ್ಕಾರ 1993ರಲ್ಲಿ ಇದನ್ನು ಅನುಸರಿಸಿತು. 1991ರ ಜಾತಿ ಜನಗಣತಿ ಆಧರಿಸಿ ಮೀಸಲು ನಿಗದಿ ಮಾಡಲಾಗಿತ್ತು. ಶಿಕ್ಷಣ ಮತ್ತು ಉದ್ಯೋಗದ ವಿಚಾರಕ್ಕೆ ಸಂಬಂಧಿಸಿದಂತೆ ಮಾಡಲಾಗಿದ್ದ ಚಿನ್ನಪ್ಪರೆಡ್ಡಿ ವರದಿಯನ್ನು ರಾಜಕೀಯ ಮೀಸಲಾತಿಗೂ ಅನ್ವಯ ಮಾಡಲಾಯಿತು. ಕೋರ್ಟು ಕಟ್ಟಲೆ ಎಂದು ಅಲೆದಾಡಿರುವ ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ ವಿಚಾರಕ್ಕೆ ಕೊನೆಯ ಮೊಳೆಯನ್ನು ಹೊಡೆಯಲು ಇಡೀ ವ್ಯವಸ್ಥೆ ಈಗ ಹೊರಟಿದೆ.

ಪಿ.ವಿ.ನರಸಿಂಹರಾವ್

ಹಿಂದುಳಿದ ವರ್ಗಗಳು ರಾಜಕೀಯದಿಂದ ವಂಚಿತವಾಗುವ ಅಥವಾ ಆಮೂಲಾಗ್ರ ಕ್ರಾಂತಿಯನ್ನೇ ಮಾಡಬಲ್ಲ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ. ಮಹಾರಾಷ್ಟ್ರ ಸರ್ಕಾರ ಸ್ಥಳೀಯ ಸಂಸ್ಥೆಗಳಲ್ಲಿ ನೀಡಿರುವ ಮೀಸಲಾತಿ ಅವೈಜ್ಞಾನಿಕವಾಗಿರುವುದಾಗಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. 2010ರಲ್ಲಿ ನೀಡಲಾಗಿರುವ ತೀರ್ಪನ್ನು ಪುನರುಚ್ಚರಿಸಿರುವ ಕೋರ್ಟ್, “ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಕುರಿತು ಮೂರು ಹಂತದ ಸಮೀಕ್ಷೆ ಮಾಡದ ಹೊರತು ಚುನಾವಣೆ ಮಾಡುವಂತಿಲ್ಲ ಹಾಗೂ ಸದ್ಯಕ್ಕೆ ಹಿಂದುಳಿದ ವರ್ಗಗಳ ಶೇ.27ರಷ್ಟು ಮೀಸಲಾತಿಯನ್ನು ಸಾಮಾನ್ಯ ಕ್ಷೇತ್ರಗಳೆಂದು ಘೋಷಿಸಿ ಚುನಾವಣೆ ನಡೆಸಬಹುದು” ಎಂದಿದೆ. ಸುಪ್ರೀಂ ಸೂಚನೆ ಹಲವು ಆತಂಕಗಳಿಗೆ ಕಾರಣವಾಗಿದೆ.

’ನ್ಯಾಯಪಥ’ ಪತ್ರಿಕೆಯೊಂದಿಗೆ ಮಾತನಾಡಿದ ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಎಚ್.ಎನ್. ನಾಗಮೋಹನ ದಾಸ್, “ಕೋರ್ಟ್ ಆದೇಶದ ಅನ್ವಯ ಮಾಹಿತಿ ಸಂಗ್ರಹ ಮಾಡಬೇಕು. ಅದರ ಆಧಾರದಲ್ಲಿ ಯಾರ್‍ಯಾರು, ಯಾವ್ಯಾವ ವರ್ಗಕ್ಕೆ ಸೇರಿದವರೆಂದು ಮೀಸಲು ವಿಂಗಡಣೆ ಮಾಡಬೇಕು. ಯಾವ ವರ್ಗಕ್ಕೆ ಎಷ್ಟು ಮೀಸಲು ಕೊಡಬೇಕೆಂದು ನಿರ್ಧರಿಸಬೇಕು. ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಆದರೆ ಈ ದತ್ತಾಂಶ ಸಂಗ್ರಹಣೆ ಜಾತಿ ಗಣತಿಯಿಂದ ಮಾತ್ರ ಸಾಧ್ಯ. ಜಾತಿಗಣತಿಯನ್ನು ಕೇಂದ್ರ ಸರ್ಕಾರ ಮಾಡಬಹುದೇ ಹೊರತು ರಾಜ್ಯ ಸರ್ಕಾರವಲ್ಲ. 1951ರಿಂದ ಇಲ್ಲಿಯವರೆಗೂ ಕೇಂದ್ರ ಸರ್ಕಾರ ಜನಗಣತಿ ಮಾಡಿದೆ. ಆದರೆ ಹಿಂದುಳಿದ ವರ್ಗಗಳ ಜಾತಿಗಣತಿ ನಡೆದಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜಾತಿಗಣತಿ ನಡೆದಿದೆ. ಈಗಲೂ ಕೂಡ ಕೇಂದ್ರ ಸರ್ಕಾರ ನಾವು ಜಾತಿಗಣತಿ ಮಾಡಲ್ಲ ಎನ್ನುತ್ತಿದೆ. ಆದರೆ ಜಾತಿಗಣತಿಯನ್ನು ರಾಜ್ಯ ಸರ್ಕಾರ ಮಾಡುವಂತಿಲ್ಲ. ಇವತ್ತು ನಮ್ಮ ಮುಂದೆ ದತ್ತಾಂಶಗಳಿಲ್ಲ. ಇಡೀ ದೇಶದ ಜಾತಿಗಣತಿ ಒಂದೆರಡು ತಿಂಗಳಲ್ಲಿ ಆಗುವಂತಹ ಕೆಲಸ ಅಲ್ಲ. ಇದಕ್ಕೆ ಸಮಯ ಹಿಡಿಯುತ್ತದೆ. ಹೀಗಾಗಿ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಮರುಪರಿಶೀಲಿಸಬೇಕು” ಎಂದರು.

“ಕೋರ್ಟ್ ಆದೇಶದಂತೆ ಹಿಂದುಳಿದ ವರ್ಗಕ್ಕೆ ಮೀಸಲಿಟ್ಟ ಸ್ಥಾನಗಳನ್ನು ಸಾಮಾನ್ಯ ವರ್ಗ ಎಂದು ಪರಿಗಣಿಸಿ ಚುನಾವಣೆ ನಡೆಸಿದರೆ, ಹಿಂದುಳಿದ ವರ್ಗಗಳು ಈಗ ಅನುಭವಿಸುತ್ತಿರುವ ಮೀಸಲಾತಿಯನ್ನೂ ಕಳೆದುಕೊಂಡುಬಿಡುತ್ತವೆ. ಹೀಗಾಗಿ ತೀರ್ಪನ್ನು ಪುನರ್ ಪರಿಶೀಲಿಸಬೇಕು. ಜಾತಿಗಣತಿ ಮಾಡಿ ಮೀಸಲಾತಿ ನಿಗದಿ ಮಾಡುವವರೆಗೂ ಯಥಾಸ್ಥಿತಿ ಕಾಪಾಡಿಕೊಂಡು ಹೋಗುವುದು ಸೂಕ್ತ. ದತ್ತಾಂಶ ಸಿಕ್ಕಿದ ಬಳಿಕ ಮರುವರ್ಗೀಕರಣ ಆಗಲಿ” ಎಂದು ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು.

“ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನೇಮಿಸಲಾದ ಕಾಂತರಾಜ್ ಆಯೋಗ ಎಲ್ಲ ಜಾತಿಗಳ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯ ವರದಿಯನ್ನು ಸರ್ಕಾರ ಕೂಡಲೇ ಸ್ವೀಕಾರ ಮಾಡಿ ಅದನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡಬೇಕು. ಸುಪ್ರೀಂ ಕೋರ್ಟ್‌ನ ಸೂಕ್ತ ಆದೇಶಗಳನ್ನು ಪಡೆದು ಕಾಂತರಾಜ್ ಆಯೋಗದ ವರದಿಯ ಆಧಾರದ ಮೇಲೆ ಮೀಸಲಾತಿ ಮರುವರ್ಗೀಕರಣ ಮಾಡಲಿ. ಇದಾಗದಿದ್ದರೆ ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದರು.

ಎಚ್.ಎನ್. ನಾಗಮೋಹನ ದಾಸ್

“ಹಿಂದುಳಿದ ವರ್ಗದಲ್ಲಿ ಸಮುದಾಯಗಳು ಅಸಂಘಟಿತ ಅನ್ನೋದು ನಿಜ. ಆದರೆ ರಾಜ್ಯ ಸರ್ಕಾರ ಈ ಮೀಸಲಾತಿಯನ್ನು ಕೊಟ್ಟಿತ್ತು. ಆದರೆ ಇಂದು ಸುಪ್ರೀಂ ಕೋರ್ಟ್ ಅದನ್ನು ರಿವರ್ಸ್ ಮಾಡಿದೆ. ಆದರೆ ರಾಜ್ಯ ಸರ್ಕಾರಗಳು ಧ್ವನಿ ಎತ್ತಬೇಕಲ್ಲ? ಒಬ್ಬರೂ ಇದರ ಬಗ್ಗೆ ಧ್ವನಿ ಎತ್ತುತ್ತಲೇ ಇಲ್ಲ ಎಂದು ವಿಷಾದಿಸಿದರು.
ಮೀಸಲಾತಿ ಹಾಗೂ ಜಾತಿಗಣತಿ ವಿಚಾರ ಬಂದಾಗ ಒಂದು ವರ್ಗದ ಜನ, ’ಈ ರೀತಿಯ ಕ್ರಮಗಳಿಂದ ಜಾತಿ ಪದ್ಧತಿ ಗಟ್ಟಿಯಾಗಿಬಿಡುತ್ತದೆ’ ಎಂಬ ಆಕ್ಷೇಪಗಳನ್ನು ಎತ್ತುವುದು ಸಾಮಾನ್ಯ. ಇದಕ್ಕೆ ಉತ್ತರಿಸಿದ ಜಸ್ಟೀಸ್ ದಾಸ್ ಅವರು, “’ಮೀಸಲಾತಿ-ಸತ್ಯ ಮತ್ತು ಭ್ರಮೆ’ ಎಂಬ ಕೃತಿ ಬರೆಯುತ್ತಿದ್ದೇನೆ. ಈ ಪ್ರಶ್ನೆಗೆ ಅಲ್ಲಿಯೂ ಉತ್ತರಿಸುವ ಪ್ರಯತ್ನ ಮಾಡಿದ್ದೇನೆ. 1881ರಿಂದ 1931ರ ನಡುವೆ ಜನಗಣತಿ, ಜಾತಿಗಣತಿಯೂ ನಡೆದಿದೆ. 1941ರಲ್ಲಿ ಜಾತಿಜನಗಣತಿ ಮಾಡಬೇಕಿತ್ತು. ಆದರೆ ಎರಡನೇ ಮಹಾಯುದ್ಧ ಅಡ್ಡಬಂತು. ಆದರೆ ಸ್ವಾತಂತ್ರ್ಯ ಬಂದು ಇಲ್ಲಿಯವರೆಗೂ ಜಾತಿಗಣತಿ ನಡೆದಿಲ್ಲ. ಜಾತಿಗಣತಿ ನಡೆಸುವುದನ್ನು ನಿಲ್ಲಿಸಿ 90 ವರ್ಷಗಳಾದರೂ ಜಾತಿಪದ್ಧತಿ ಕಡಿಮೆಯಾಗಿದೆಯಾ? ನಡೆಸದೆ ಇದ್ದರೆ ಜಾತಿ ಕಡಿಮೆಯಾಗುತ್ತದೆಯಾ? ದೇಶದ ಎಲ್ಲಾ ರಾಜಕೀಯ ಪಕ್ಷಗಳು ಅಭ್ಯರ್ಥಿಗಳಿಗೆ ಟಿಕೆಟ್ ಕೊಡೋದು ಜಾತಿ ಲೆಕ್ಕಾಚಾರದ ಮೇಲೆ. ಚುನಾವಣೆಗಳಲ್ಲಿ ಜಾತಿ, ಧರ್ಮ ತರುತ್ತಾರೆ. ಇದು ಜಾತಿ ವ್ಯವಸ್ಥೆಯನ್ನು ಗಟ್ಟಿ ಮಾಡಿದೆ. ರಾಜಕಾರಣ ಹಾಗೂ ರಾಜಕಾರಣಿಗಳ ಸ್ವಾರ್ಥದಿಂದ ಜಾತಿ ವ್ಯವಸ್ಥೆ ಬಲಿಷ್ಠವಾಗಿದೆ. ಎಷ್ಟು ಬಡವರು ಇದ್ದಾರೆ, ಸಾಕ್ಷರತೆ, ನಿರುದ್ಯೋಗ, ಆರೋಗ್ಯ ಸ್ಥಿತಿ ಹೇಗಿದೆ, ಇತ್ಯಾದಿ ವಿಷಯಗಳನ್ನು ತಿಳಿಯಲೆಂದೇ ಸಮೀಕ್ಷೆ ಮಾಡಲಾಗುತ್ತದೆ. ಅದರ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಲಾಗುತ್ತದೆ. ದತ್ತಾಂಶಗಳೇ ಇಲ್ಲವಾದರೆ ಯೋಜನೆಗಳೇ ಇಲ್ಲವಾಗುತ್ತವೆ” ಎಂದು ಎಚ್ಚರಿಸಿದರು.

ಹಿಂದುತ್ವಕ್ಕಾಗಿ ಮಾತ್ರ ಹಿಂದುಳಿದ ಜಾತಿಗಳು ಬಿಜೆಪಿಗೆ ಬೇಕಾಗಿದೆ: ದ್ವಾರಕನಾಥ್

’ನ್ಯಾಯಪಥ’ದೊಂದಿಗೆ ಮಾತನಾಡಿದ ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷರಾದ ಸಿ.ಎಸ್.ದ್ವಾರಕನಾಥ್ “ನಿಮ್ಮ ಬಳಿ ಅಂಕಿ-ಅಂಶ ಇದೆಯಾ ಅಂತ ಸುಪ್ರೀಂ ಕೋರ್ಟ್ ಕೇಳುತ್ತಿದೆ. ಭಾರತದ ಯಾವುದೇ ರಾಜ್ಯಗಳು ಹೊಂದಿಲ್ಲದೆ ಇರದಷ್ಟು ಅಂಕಿ-ಅಂಶಗಳನ್ನು ಕರ್ನಾಟಕ ಹೊಂದಿದೆ. ಜಾತಿವಾರು ಸಮೀಕ್ಷೆಯಾಗಿದೆ. ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಕುರಿತು ಕನಿಷ್ಠ ಕಾಳಜಿ ಇದ್ದರೆ ಕಾಂತರಾಜ್ ಆಯೋಗದ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕು. ಈ ಪ್ರಯತ್ನವನ್ನು ಸರ್ಕಾರ ಮಾಡುತ್ತಿಲ್ಲ. ಇವರಿಗೆ ಇಚ್ಛಾ ಶಕ್ತಿ ಇಲ್ಲದಿರುವುದರಿಂದ ಈ ಸಮಸ್ಯೆಯಾಗುತ್ತಿದೆ. ಹಿಂದುಳಿದ ಸಮುದಾಯಗಳ ಕುರಿತು ಕಾಳಜಿ ಇದ್ದರೆ ತನ್ನ ಬಳಿ ಇರುವ ದತ್ತಾಂಶಗಳನ್ನು ಸರ್ಕಾರ ಬಿಡುಗಡೆ ಮಾಡುತ್ತಿತ್ತು. ಹಿಂದುತ್ವ ಎಂದು ಹೋರಾಡಿ ಹುತಾತ್ಮರಾಗಲು ಹಿಂದುಳಿದ ವರ್ಗಗಳ ಹುಡುಗರು ಬೇಕು. ಹಿಂದುಳಿದ ವರ್ಗಗಳಿಗೆ ಏನನ್ನೂ ಕೊಡುವುದಿಲ್ಲ” ಎಂದರು.

“ಶಿಕ್ಷಣ ಹಾಗೂ ಉದ್ಯೋಗ ನೇಮಕಾತಿ ಮೀಸಲು ಮಾಹಿತಿಯು ದ್ವಿತೀಯ ಮೂಲದ ಆಧಾರದಲ್ಲಿರುತ್ತದೆ. ಮೀಸಲಾತಿ ಪಡೆದ ವರ್ಗದಲ್ಲೇ ಬಲಿಷ್ಟ ಜಾತಿಗಳ ಮೂಲದ್ದಾಗಿರುತ್ತದೆ. ಜಾತಿ ಸಮೀಕ್ಷೆ, ಜಾತಿ ಜನಗಣತಿ ಮಾಡಿದರೆ ಈ ಸತ್ಯಗಳೆಲ್ಲ ಹೊರಗೆ ಬರುತ್ತವೆ ಎಂಬ ಕಾರಣಕ್ಕೆ ಫಲಾನುಭವಿ ಜಾತಿಗಳು, ಬಲಾಢ್ಯ ಜಾತಿಗಳು ಮೌನವಾಗಿರುತ್ತವೆ. ಹಿಂದುಳಿದ ವರ್ಗಗಳ ಪಟ್ಟಿಯೇ ಇಲ್ಲಿ ಅವೈಜ್ಞಾನಿಕವಾಗಿದೆ. ಇಲ್ಲಿ ಹುಲಿಗಳನ್ನು, ಸಿಂಹಗಳನ್ನು, ಚಿರತೆಗಳನ್ನು, ಕುರಿ, ಮೊಲಗಳನ್ನೂ ಒಂದೇ ಕಡೆ ಹಾಕಿದ್ದಾರೆ. ಮೈಸೂರು ಮೃಗಾಲಯದಲ್ಲಾದರೂ ಒಂದೊಂದು ಪ್ರಾಣಿಗೆ ಒಂದೊಂದು ಪ್ರತ್ಯೇಕ ಬೋನು ಇರಿಸಿದ್ದಾರೆ. ಅವುಗಳಿಗೆ ಸಿಗಬೇಕಾದ ಆಹಾರ ಸಿಗುತ್ತಿದೆ. ಆದರೆ ಹಿಂದುಳಿದ ವರ್ಗದಲ್ಲಿನ ಸಹಾಯಕ ಸಮುದಾಯಗಳಿಗೆ ಮೈಸೂರು ಮೃಗಾಲಯದಲ್ಲಿ ಪ್ರಾಣಿಗಳಿಗೆ ದೊರೆತಿರುವ ಆದ್ಯತೆಯೂ ಸಿಕ್ಕಿಲ್ಲ” ಎಂದು ವಿಷಾದಿಸಿದರು.

“ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮಾತ್ರ ಮೀಸಲಾತಿ ದೊರಕುತ್ತಿತ್ತು. ಶಾಸನಸಭೆಗಳಲ್ಲಿಯೂ ಮೀಸಲಾತಿಯನ್ನು ಪರಿಶಿಷ್ಟ ಜಾತಿ ಸಮುದಾಯಕ್ಕೆ ನೀಡಿದಂತೆ ನೀಡಬೇಕು ಎಂದು ಕೇಳಲಾಗುತ್ತಿತ್ತು. ಈಗ ಇರುವುದನ್ನೂ ಕಳೆದುಕೊಳ್ಳುವಂತಾಗಿದೆ. ಭಾರತದ ಇತಿಹಾಸದಲ್ಲಿ ತನಗಿದ್ದ ಸವಲತ್ತನ್ನು ಕಳೆದುಕೊಳ್ಳುತ್ತಿರುವುದು ಹಿಂದುಳಿದ ವರ್ಗಗಳು ಮಾತ್ರವೇ. ಎಸ್.ಸಿ., ಎಸ್.ಟಿ. ಸಮುದಾಯಗಳು ತಮಗೆ ಅನ್ಯಾಯವಾದರೆ ಕನಿಷ್ಠ ಪಕ್ಷ ಪ್ರತಿಭಟಿಸುತ್ತವೆ. ಆದರೆ ಹಿಂದುಳಿದ ವರ್ಗಗಳು ಅಸಂಘಟಿತ ಸಮುದಾಯಗಳು. ಪ್ರತಿಭಟನೆ ದಾಖಲಿಸುವುದೇ ಇಲ್ಲ” ಎಂದು ಹೇಳಿದರು.

ಸಿ.ಎಸ್.ದ್ವಾರಕನಾಥ್

“ನಾನು ಆಯೋಗದಲ್ಲಿದ್ದಾಗ ತರಿಸಿಕೊಂಡ ಮಾಹಿತಿಯು ಹೇಗಿತ್ತೆಂದರೆ, ಪ್ರವರ್ಗ ಒಂದರಲ್ಲಿ 95 ಜಾತಿಗಳಿವೆ. ಇಲ್ಲಿಯವರೆಗೆ ಮೀಸಲಾತಿಯನ್ನು ತೆಗೆದುಕೊಂಡಿರುವುದು ಕೇವಲ 23 ಜಾತಿಗಳು ಮಾತ್ರ. ಕ್ಯಾಟಗರಿ 2ಎನಲ್ಲಿ 102 ಜಾತಿಗಳಿವೆ. ಆದರೆ ಅಲ್ಲಿ ಮೀಸಲಾತಿ ಅನುಭವಿಸಿದ್ದು 27 ಜಾತಿಗಳು ಮಾತ್ರ. ಇದು ಹತ್ತು ವರ್ಷದ ಹಿಂದಿನ ಪರಿಸ್ಥಿತಿ. ಆದರೆ ಈಗಲೂ ಬದಲಾಗಿಲ್ಲ. ಈ ಪಟ್ಟಿಯಲ್ಲಿರುವ ಅಲೆಮಾರಿಗಳು, ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಜಾತಿಗಳಿಗೆ ಯಾವುದೇ ಪ್ರಾತಿನಿಧ್ಯ ಸಿಗುತ್ತಲೇ ಇಲ್ಲ. ಈ ಅಸಮಾನತೆಯನ್ನು ಸಿದ್ದರಾಮಯ್ಯನವರ ಸರ್ಕಾರದಲ್ಲೇ ನಿವಾರಿಸಬೇಕಿತ್ತು. ಆದರೆ ಆಗಲಿಲ್ಲ. ಈ ಸರ್ಕಾರದಲ್ಲಿ ಪರಿಹಾರ ದೊರೆಯುವ ಸೂಚನೆಯೂ ಇಲ್ಲ. ಈ ಸಮುದಾಯಗಳಲ್ಲಿ ಧ್ವನಿ ಎತ್ತುವವರೂ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ಜಾತಿ ಗಣತಿ 1931ರಲ್ಲಿ ನಡೆದ ಬಳಿಕ ಇಲ್ಲಿಯವರೆಗೂ ಹಲವು ಬದಲಾವಣೆಗಳಾಗಿವೆ. ಇದನ್ನೇ ಸುಪ್ರೀಂ ಕೋರ್ಟ್ ಕೇಳುತ್ತಿದೆ. ಪ್ರೊಜೆಕ್ಟೆಡ್ ಪಾಪ್ಯುಲೇಷನ್ ಬಗ್ಗೆ ಹೇಳುತ್ತಿದ್ದಾರೆ, ಅಂದರೆ 1931ನಲ್ಲಿ ಇಷ್ಟು ಜನರಿದ್ದರೆ, 2021ರಲ್ಲಿ ಇಷ್ಟು ಜನರಿರುತ್ತಾರೆ ಎಂದು ಅಂದಾಜು ಮಾಡಲಾಗುತ್ತದೆ. ಯಾವುದಾದರೂ ಒಂದು ಸಮುದಾಯ ಅಂದು ನೂರಿದ್ದರೆ, ಇಂದು ಸಾವಿರ ಇದ್ದಾರೆ ಎಂದು ಹೇಳುವುದೂ ಅವೈಜ್ಞಾನಿಕ. ಯಾಕೆಂದರೆ ಅನೇಕ ಸಮುದಾಯಗಳು ನಶಿಸಿಹೋಗಿವೆ. ಉದಾಹರಣೆಗೆ ಅಂಡಮಾನ್‌ನಲ್ಲಿರುವ ಜರೋವಾ ಎಂಬ ಸಮುದಾಯ 1931ರಲ್ಲಿ ಸಾವಿರ ಇತ್ತು. ಇಂದು ನೂರಾಗಿದೆ. ಕರ್ನಾಟಕದ ಕೊರಗರು ಅಂದು 15,000 ಇದ್ದರೆ, ಇಂದು 1,500 ಆಗಿದ್ದಾರೆ. ಕಡಿಮೆಯಾಗುತ್ತಿದ್ದಾರೆ. ಹೀಗಾಗಿ ಸರ್ಕಾರದ ಮಾನದಂಡವೂ ತಪ್ಪಾಗಿದೆ. ಹೀಗಿರುವ ಕೋರ್ಟ್ ಹೇಗೆ ಈ ಅಂಕಿ-ಅಂಶಗಳನ್ನು ಒಪ್ಪಿಕೊಳ್ಳುತ್ತದೆ?” ಎಂದು ಪ್ರಶ್ನಿಸಿದರು.

ಈಗ ಕರ್ನಾಟಕದಲ್ಲಿ ಆಗಿರುವ ಜಾತಿಗಣತಿಯ ಬಗ್ಗೆ ಪ್ರಸಕ್ತ ಸರ್ಕಾರದ ವಕ್ತಾರರು ಕೆಲವು ಬಾರಿ ಪ್ರಸ್ತಾಪಿಸಿದ್ದರೂ, ಮುಂದೆ ತೆಗೆದುಕೊಳ್ಳಲಿರುವ ನಿರ್ದಿಷ್ಟ ಕ್ರಮಗಳ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲದೆ ಮಾತನಾಡುತ್ತಿದ್ದಾರೆ. ಇದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿದ್ದ ಹಿಂದುಳಿದ ವರ್ಗಗಳ ಮೀಸಲಾತಿಯ ಮೇಲೆ ತೂಗುಗತ್ತಿ ನೇತಾಡುತ್ತಿದೆ.


ಇದನ್ನೂ ಓದಿ: 10 ವರ್ಷಗಳ ಸತತ ಹೋರಾಟ!; 2011ರ ದೇಶದ್ರೋಹ ಪ್ರಕರಣದಲ್ಲಿ ಹೋರಾಟಗಾರ್ತಿ ಸೋನಿ ಸೋರಿ ಖುಲಾಸೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿಯಲ್ಲಿ ‘ಅಬ್ ಕಿ ಬಾರ್ ರಾಬರ್ಟ್ ವಾದ್ರಾ’ ಪೋಸ್ಟರ್; ಪ್ರಿಯಾಂಕಾ ಪತಿ ಸ್ಪರ್ಧೆಗೆ ಹೆಚ್ಚಿದ...

0
2019ರ ಲೋಕಸಭಾ ಚುನಾವಣೆ ಸೋಲಿನ ನಂತರ ರಾಹುಲ್ ಗಾಂಧಿ ತಮ್ಮ ಕ್ಷೇತ್ರವನ್ನು ಅಮೇಥಿಯಿಂದ ಕೇರಳದ ವಯನಾಡಿಗೆ ಸ್ಥಳಾಂತರಿಸಿದ್ದಾರೆ. ಆದರೆ, ಬಿಜೆಪಿ ಹಾಲಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿ ಯಾರು...