Homeಚಳವಳಿಹಿಂಬಾಗಿಲಿನ ಮೂಲಕ ರೈತ ವಿರೋಧಿ ಕಾಯ್ದೆಗಳ ಜಾರಿ: ಯೋಗೇಂದ್ರ ಯಾದವ್ ಆಕ್ರೋಶ

ಹಿಂಬಾಗಿಲಿನ ಮೂಲಕ ರೈತ ವಿರೋಧಿ ಕಾಯ್ದೆಗಳ ಜಾರಿ: ಯೋಗೇಂದ್ರ ಯಾದವ್ ಆಕ್ರೋಶ

ರೈತ, ದಲಿತ, ಕಾರ್ಮಿಕ, ಯುವಜನ ಹಾಗೂ ಮಹಿಳಾ ಸಂಘಟನೆಗಳ ಸಮನ್ವಯದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ ಜನ ಪರ್ಯಾಯ ಬಜೆಟ್ ಅಧಿವೇಶನಕ್ಕೆ ಯೋಗೇಂದ್ರ ಯಾದವ್ ಚಾಲನೆ ನೀಡಿದರು.

- Advertisement -
- Advertisement -

ವಿವಾದಿತ ಕೃಷಿ ಕಾಯ್ದೆಗಳನ್ನು ಮೋದಿ ಸರ್ಕಾರ ಹಿಂಪಡೆದಿದ್ದರೂ ಹಿಂಬಾಗಿಲಿನ ಮೂಲಕ ರಾಜ್ಯಗಳಲ್ಲಿ ಜಾರಿ ಮಾಡುತ್ತಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ನಾಯಕ ಯೋಗೇಂದ್ರ ಯಾದವ್ ಆಕ್ರೋಶ ವ್ಯಕ್ತಪಡಿಸಿದರು.

ರೈತ, ದಲಿತ, ಕಾರ್ಮಿಕ, ಯುವಜನ ಹಾಗೂ ಮಹಿಳಾ ಸಂಘಟನೆಗಳ ಸಮನ್ವಯದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ ಜನ ಪರ್ಯಾಯ ಬಜೆಟ್ ಅಧಿವೇಶನಕ್ಕೆ ಯೋಗೇಂದ್ರ ಯಾದವ್ ಅವರು ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಕರ್ನಾಟಕದಲ್ಲಿ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಜಾನುವಾರು ಕಾಯ್ದೆ ಜಾರಿಯಲ್ಲಿರುವುದು ಹಿಂಬಾಗಿಲಿನ ಮೂಲಕ ಕೃಷಿ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿರುವುದಕ್ಕೆ ಸಾಕ್ಷಿ. ಪ್ರಧಾನಿಯವರು ಕನಿಷ್ಠ ಬೆಂಬಲ ಬೆಲೆ ಘೋಷಿಸುವುದಾಗಿ ಹೇಳಿದ್ದರು. ಆದರೆ, ಅದು ಭರವಸೆಯಾಗಿಯೇ ಉಳಿದಿದೆ. ಏಪ್ರಿಲ್ 11ರಂದು ಉತ್ತರ ಪ್ರದೇಶದಲ್ಲಿ ಈ ಕುರಿತು ರೈತರು ಆಂದೋಲನಕ್ಕೆ ಕರೆ ನೀಡಿದ್ದಾರೆ. ಕರ್ನಾಟಕ ಕೂಡ ಈ ಆಂದೋಲನವನ್ನು ಯಶಸ್ವಿಗೊಳಿಸಬೇಕು ಎಂದು ಅವರು ವಿನಂತಿಸಿಕೊಂಡರು.

“ನಮ್ಮ ಹೋರಾಟದ ಹಾದಿಗೆ ಪ್ರೇರಣೆ ನೀಡಿದ ಕರ್ನಾಟಕದ ರೈತ ನಾಯಕ ಪ್ರೊ. ಎಂಡಿ ನಂಜುಂಡಸ್ವಾಮಿ ಹಾಗೂ ಶಾಂತವೇರಿ ಗೋಪಾಲಗೌಡರ ನೆಲದಲ್ಲಿ ಇಂಥ ಐತಿಹಾಸಿಕ ಸಂಘಟನೆ ರೂಪುಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ” ಎಂದರು.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆರಂಭವಾಗಿರುವ ಜನ ಪರ್ಯಾಯ ಬಜೆಟ್‌ನಲ್ಲಿ ಸೇರಿದ್ದ ಜನಸ್ತೋಮ…

ಇದನ್ನೂ ಓದಿರಿ: ಲಖಿಂಪುರ್‌ ಖೇರಿ ರೈತರ ಹತ್ಯಾಕಾಂಡ: ಆರೋಪಿ ಆಶಿಶ್‌ ಮಿಶ್ರಾ ಜಾಮೀನು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ ಸಲ್ಲಿಕೆ

ಜನ ಪರ್ಯಾಯ ಅಧಿವೇಶನಕ್ಕೆ ದಲಿತ ಹಾಗೂ ಕಾರ್ಮಿಕ ಸಂಘಟನೆಗಳು ಒಂದಾಗಿರುವುದು ಹೆಮ್ಮೆಯ ಸಂಗತಿ. ದೇಶಕ್ಕೆ ಕರ್ನಾಟಕ ನಡೆ ಮಾದರಿಯಾಗಲಿ. ನಂಜುಂಡಸ್ವಾಮಿ ಕಾಲದಲ್ಲೂ ಈ ಒಗ್ಗಟ್ಟೂ ಇರಲಿಲ್ಲ. ಇದು ಹೀಗೆ ಮುಂದುವರಿದಲ್ಲಿ ನಮ್ಮನ್ನು ಯಾರು ಸೋಲಿಸಲಾರರು ಎಂದು ಅಭಿಪ್ರಾಯಪಟ್ಟರು.

ದೆಹಲಿಯ ಹೊರವಲಯದಲ್ಲಿ ವರ್ಷಗಳ ಕಾಲ ನಡೆದ ರೈತ ಪ್ರತಿಭಟನೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಮಂಡಿಯೂರುವಂತೆ ಮಾಡಿರುವುದು ರೈತ ಹೋರಾಟದ ಶಕ್ತಿಯ ದ್ಯೋತಕ ಎಂದು ಅವರು ಬಣ್ಣಿಸಿದರು.

ಎಸ್‌ಕೆಎಂ ನಾಯಕಿ ಕವಿತಾ ಕುರುಗಂಟಿ ಮಾತನಾಡಿ, “ದೆಹಲಿಯ ಚಾರಿತ್ರಿಕ ಹೋರಾಟವನ್ನು ಯಾರು ಮರೆತಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದನ್ನು ನಿರ್ಲಕ್ಷಿಸಿದರೆ ಅವರಿಗೂ ತಕ್ಕ ಪಾಠ ಕಲಿಸಬೇಕಾಗುತ್ತದೆ. ಕೂಡಲೇ ಸಿಎಂ ಅವರು ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು” ಎಂದು ಆಗ್ರಹಿಸಿದರು.

ಕೆಆರ್‌ಎಸ್‌ಎಸ್‌ ಕಾರ್ಯಾಧ್ಯಕ್ಷ ಜೆಎಂ ವೀರಸಂಗಯ್ಯ ಮಾತನಾಡಿ, “ಕಾರ್ಪೋರೆಟ್ ಕಂಪನಿಗಳಿಗೆ ಸರ್ಕಾರ ಅನುಕೂಲ ಮಾಡಿಕೊಡಲು ಶ್ರಮಿಸುತ್ತಿದೆ. ಈಗಾಗಲೇ ಕೊಡಗು ಜಿಲ್ಲೆಯಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಮೀಟರ್ ಅಳವಡಿಸಲಾಗಿದೆ. ರೈತ ಸಂಘಟನೆಗಳ ಕಾರ್ಯಕರ್ತರು ಕೊಡಗಿಗೆ ನುಗ್ಗಿ ಎಲ್ಲ ಮೀಟರ್‌ಗಳನ್ನು ಕಿತ್ತೊಗೆಯುತ್ತೇವೆ” ಎಂದು ಎಚ್ಚರಿಸಿದರು.

ಮುಂದುವರಿದು, “ರೈತರಿಗೆ ಕೇವಲ ಸಾವಿರ ಅಂಕಿಯಲ್ಲಿ ಅನುದಾನ ನೀಡಲಾಗುತ್ತಿದೆ. ಕರ್ನಾಟಕದಲ್ಲೇ ಶೇ. 65 ರಷ್ಟು ರೈತರು ಇದ್ದಾರೆ. ವಾಸ್ತವ ಹೀಗಿರುವಾಗ 1.35 ಲಕ್ಷ ಕೋಟಿ ರೈತರಿಗೆ ಅನುದಾನ ಮೀಸಲಿಡಬೇಕು” ಎಂದು ಒತ್ತಾಯಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಆರ್‌ಎಸ್‌ಎಸ್‌ ರಾಜ್ಯಾಧ್ಯಕ್ಷ ಬಡಗಲಪುರದ ನಾಗೇಂದ್ರ ಮಾತನಾಡಿ, “ಬರುವ ದಿನಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ. ಪಕ್ಷಾತೀತವಾಗಿ ಎಲ್ಲರೂ ಒಂದುಗೂಡಿ ರಾಜಕೀಯ ನಾಯಕರಿಗೆ ತಕ್ಕ ಉತ್ತರ ನೀಡುತ್ತೇವೆ” ಎಂದು ಎಚ್ಚರಿಸಿದರು.

ಇದನ್ನೂ ಓದಿರಿ: ಕರ್ನಾಟಕ ರಾಜ್ಯ ರೈತಸಂಘ ಮತ್ತು ನಂಜುಂಡಸ್ವಾಮಿ ಎಂಬ ಫೆನಾಮೆನನ್

ಸ್ವಾತಂತ್ರ್ಯ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ: ಎಸ್.ಆರ್‌.ಹಿರೇಮಠ

ಜನಾಂದೋಲನ ಮಹಾಮೈತ್ರಿ (ಜೆಎಂಎಂ) ರಾಜ್ಯಾಧ್ಯಕ್ಷರಾದ ಎಸ್‌ಆರ್ ಹಿರೇಮಠ ಮಾತನಾಡಿ, “ಪ್ರಜಾಪ್ರಭುತ್ವದ ನೈಜ ಮಾಲೀಕರು ನಾವು. ಶ್ರಮಜೀವಿಗಳನ್ನು ಸರ್ಕಾರ ಗೌರವಯುತವಾಗಿ ನಡೆಸಿಕೊಳ್ಳಬೇಕು. ಮೂರು ವಿವಾದಿತ ಕಾಯ್ದೆಗಳನ್ನು ರಾಜ್ಯ ಸರ್ಕಾರ ಹಿಂಪಡೆಯದೇ ಇದ್ದಲ್ಲಿ ಎರಡನೇ ಸ್ವಾತಂತ್ರ್ಯ ಹೋರಾಟಕ್ಕೆ ನಾವು ಮುಂದಾಗಬೇಕಾಗುತ್ತದೆ” ಎಂದು ಎಚ್ಚರಿಸಿದರು.

ಕನಿಷ್ಠ ಬೆಂಬಲ ಬೆಲೆ ಜಾರಿಯಾಗಬೇಕಿದೆ. ನಾವು ಮುಂಬರುವ ಚುನಾವಣೆಗಳಿಗೆ ಕಾಯದೆ ನಾವು ಹಾರಿಸಿ ಕಳಿಸಿರುವ ನಮ್ಮ ಶಾಸಕರ ವಿರುದ್ಧ ಹೋರಾಟ ಮಾಡಬೇಕಿದೆ. ಜನ ವಿರೋಧಿ ಕಾಯಿದೆಗಳನ್ನು ವಾಪಸ್ ತೆಗೆದುಕೊಳ್ಳುವಂತೆ ಒತ್ತಡ ಹಾಕಿ ಸದನದಲ್ಲಿ ಹೋರಾಡುವಂತೆ ಪ್ರೇರೇಪಿಸಬೇಕು. ಗ್ರಾಮ ಪಂಚಾಯತಿ ಮಟ್ಟದಲ್ಲೂ ಈ ಕಾಯಿದೆಗಳ ಕುರಿತು ಜನಜಾಗೃತಿ ಆಗಬೇಕಿದೆ ಎಂದರು.

ವಿಭಜನೆಯ ರಾಜಕೀಯ: ಮಾವಳ್ಳಿ ಶಂಕರ್‌ ಆತಂಕ

ಹಿರಿಯ ದಲಿತ ನಾಯಕ ಮಾವಳ್ಳಿ ಶಂಕರ್ ಮಾತನಾಡಿ, “ಇವತ್ತಿನ ರಾಜಕಾರಣಿಗಳು ಹಳ್ಳಿಗಳನ್ನು ಮತ್ತು ರೈತರನ್ನು ಜಾತಿ ಧರ್ಮದ ಮೇಲೆ ವಿಭಜನೆ ಮಾಡಿದ್ದಾರೆ. ಸರ್ಕಾರಕ್ಕೆ ರೈತರ ಮೇಲೆ ಯಾವುದೇ ರೀತಿಯ ಕನಿಕರವಿಲ್ಲ. ಇದ್ದರೆ ಈ ಕೂಡಲೇ ಎಂಎಸ್‌ಪಿ ಜಾರಿಗೊಳಿಸಬೇಕು” ಎಂದು ಆಗ್ರಹಿಸಿದರು.

ದಸಂಸ ನಾಯಕ ಗುರುಪ್ರಸಾದ್ ಕೆರಗೋಡು ಮಾತನಾಡಿ, ಸರ್ವಾಧಿಕಾರವನ್ನು ಸ್ಥಾಪಿಸುವ ಸಲುವಾಗಿ ರೈತರ, ಶೋಷಿತರ ಹಾಗೂ ಕಾರ್ಮಿಕರ ವಿರುದ್ಧ ಇಂತಹ ಕಾಯಿದೆಗಳನ್ನು ಜಾರಿಗೊಳಿಸಲಾಗುತ್ತಿದೆ. ಇಡೀ ಸಮಾಜದಲ್ಲಿ ಎಲ್ಲರೂ ಘನತೆಯಿಂದ ಬದುಕುವುದಕ್ಕೆ ಅವಕಾಶ ನೀಡಿರುವ ಭೂಮಿಯನ್ನು ಕಿತ್ತುಕೊಂಡು ಗುಲಾಮರನ್ನಾಗಿ ಮಾಡಲು ಸರ್ಕಾರ ಹೊರಟಿದೆ” ಎಂದು ಟೀಕಿಸಿದರು.

ಕಾರ್ಯಕ್ರಮದಲ್ಲಿ ಬಿಕೆಎಸ್ ರಾಜ್ಯಾಧ್ಯಕ್ಷ ಸಿದ್ದನಗೌಡ ಮೋದಗಿ, ಕೆಪಿಆರ್‌ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯು ಬಸವರಾಜು, ಜೆಎಂಎಸ್ ರಾಜ್ಯ ಅಧ್ಯಕ್ಷೆ ದೇವಿ ಇದ್ದರು. ಕರ್ನಾಟಕ ಹಲವಾರು ಜಿಲ್ಲೆಗಳಿಂದ ಸಾವಿರಾರು ರೈತರು, ಕಾರ್ಮಿಕರು, ಮಹಿಳೆಯರು ‌ಆಗಮಿಸಿದ್ದರು.


ಇದನ್ನೂ ಓದಿರಿ: ಆಳುವವರ ತಲೆಕೆಳಗು ನೀತಿಗಳು ಹಾಗೂ ಕಂಗೆಟ್ಟ ರೈತರ ಬದುಕು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...