Homeಮುಖಪುಟಆಳುವವರ ತಲೆಕೆಳಗು ನೀತಿಗಳು ಹಾಗೂ ಕಂಗೆಟ್ಟ ರೈತರ ಬದುಕು

ಆಳುವವರ ತಲೆಕೆಳಗು ನೀತಿಗಳು ಹಾಗೂ ಕಂಗೆಟ್ಟ ರೈತರ ಬದುಕು

- Advertisement -
- Advertisement -

ಇಡೀ ದೇಶವನ್ನೇ ಆವರಿಸಿದ್ದ ಜಾಗತೀಕರಣದ ಪಿಡುಗು ರೈತರನ್ನು ಬಿಟ್ಟೀತೆ! ಕೃಷಿ ಮತ್ತು ರೈತರ ಬದುಕಿಗೆ ಆಘಾತ ಎಸಗಿದ ಮೂರು ಮುಖ್ಯ ಬೆಳವಣಿಗೆಗಳಲ್ಲಿ – ಮೊದಲನೆಯದು, ಜಾಗತೀಕರಣ+ಖಾಸಗೀಕರಣ+ಉದಾರೀಕರಣ; ಎರಡನೆಯದು, ವಿಶ್ವ ವಾಣಿಜ್ಯ ಸಂಸ್ಥೆಯ ಒಪ್ಪಂದ, ಅದರಲ್ಲಿ ಅಗ್ರಿಮೆಂಟ್ ಆನ್ ಅಗ್ರಿಕಲ್ಚರ್ ಎಂಬ ಕೃಷಿ ಒಪ್ಪಂದ ಹಾಗೂ ಟ್ರಿಪ್ಸ್ ಎಂಬ ಬೀಜ, ಔಷಧಿಗಳ ಮೇಲೆ ಹಾನಿಕರ ಪರಿಣಾಮ ಬೀರಿದ ಒಪ್ಪಂದ; ಮೂರನೆಯದು ಮೊದಲ ಬಾರಿಗೆ ಬಿಜೆಪಿ ಆಡಳಿತ, ವಾಜಪೇಯಿ ಸರ್ಕಾರದ ಘೋರ ನೀತಿಗಳು.

ಹಿಂದಿನ ಲೇಖನದಲ್ಲಿ ದೇಶದ ಒಟ್ಟಾರೆ ಆರ್ಥಿಕ ಹಾಗೂ ಜನರೆಲ್ಲರ ಬದುಕಿಗೆ ಹಾನಿಕರವಾದ ಜಾಗತೀಕರಣ ನೀತಿಗಳು ಮತ್ತು ಬಾಬ್ರಿ ಮಸೀದಿ ನಾಶ ಮತ್ತಿತರ ಬೆಳವಣಿಗೆಗಳ ಬಗ್ಗೆ ವಿವರಿಸಿದ್ದೇನೆ. ಆದರೆ ಕೃಷಿಯ ಹಾಗೂ ರೈತರ ಬದುಕಿನ ಮೇಲೆ ಮಾಡಿದ ದಾಳಿಯ ವಿವಿಧ ಆಯಾಮಗಳನ್ನು ಹಾಗೂ ರೈತ ಚಳವಳಿ ಎದುರಿಸಿದ ಬಗೆಗಳನ್ನು ಅಲ್ಲಿ ವಿವರಿಸಹೋಗಿಲ್ಲ.

ಜಾಗತೀಕರಣ, ಖಾಸಗೀಕರಣ, ಉದಾರೀಕರಣ ಭೂ ಸುಧಾರಣೆಯ ತಿರುವು ಮುರುವು

ಭಾರತದ ಕೃಷಿಯ ಮುಖ್ಯ ಸಮಸ್ಯೆಯೇ ರಾಜಪ್ರಭುತ್ವ ಕಾಲದ ಪಾಳೆಯಗಾರಿ ಭೂಮಾಲೀಕತ್ವ. ರಾಜರು ಭೂಪತಿಗಳಾಗಿ ಮನಸ್ಸಿಗೆ ಬಂದಂತೆ ತಮ್ಮ ಆಡಳಿತದ ಜೊತೆಗಾರ ಪುರೋಹಿತರು, ದೇವಾಲಯಗಳು, ಸಾಮಂತರು ಮತ್ತಿತರರಿಗೆ ದಾನ ಮಾಡಿದ್ದು ಇತಿಹಾಸ. ಸಾವಿರಾರು ಎಕರೆಗಳು, ಕೆಲವೊಮ್ಮೆ ಲಕ್ಷಾಂತರ ಎಕರೆಗಳು ಒಂದು ಕುಟುಂಬದ ಒಡೆತನ ಮತ್ತು ಹಿಡಿತದಲ್ಲಿದ್ದವು. ಭೂಸುಧಾರಣೆ 70ರ ದಶಕದಲ್ಲಿ ಅರೆಬರೆಯಾಗಿ ನಡೆಯಿತು. ಕೇವಲ ನೇರ ಕೃಷಿಯಲ್ಲಿ ತೊಡಗದ ಭೂಮಾಲೀಕರ ಭೂಮಿ ಅದರ ಗೇಣೀದಾರರ ಕೈಗೆ ಸೇರಿತ್ತು. ಹಳೇ ಮೈಸೂರು ಸಂಸ್ಥಾನದ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿದರೆ ಬೇರೆಲ್ಲ ಜಿಲ್ಲೆಗಳಲ್ಲಿ ಇನ್ನೂ ನೂರಾರು ಎಕರೆ ಭೂಮಿ ಇಂತಹ ಪಾಳೆಯಗಾರಿ ಭೂಮಾಲಿಕರ ಬಳಿ ಉಳಿದಿತ್ತು. ಭೂಮಿತಿ ಕಾಯ್ದೆ ಜಾರಿಗೆ ಬಂದು ಭೂಹೀನ ದಲಿತರಿಗೆ ಮತ್ತಿತರ ಹಿಂದುಳಿದ ಜಾತಿಗಳಿಗೆ ಭೂಮಿ ದೊರೆಯುವುದು ಮರೀಚಿಕೆಯಾಗಿಯೇ ಉಳಿಯಿತು. ಕರ್ನಾಟಕದ ಮೂರು ಕರಾವಳಿ ಜಿಲ್ಲೆಗಳು ಮತ್ತು ಶಿವಮೊಗ್ಗ ಹೊರತುಪಡಿಸಿದರೆ ಬೇರಾವ ಜಿಲ್ಲೆಗಳಲ್ಲಿಯೂ ಗೇಣಿದಾರರು ಭೂಮಿ ಪಡೆಯಲಿಲ್ಲ. ಬದಲಾಗಿ ಗೇಣಿ, ಪಾಲುಗಳಿಗೆ ತಲೆತಲಾಂತರದಿಂದ ಪಡೆದ ಭೂಮಿಯಿಂದ ಅವರನ್ನು ಹೊರಕ್ಕೆಸೆಯಲಾಗಿತ್ತು.

ಹೈದರಾಬಾದ್ ಕರ್ನಾಟಕ, ಮುಂಬಯಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಲಕ್ಷಾಂತರ ಕುಟುಂಬಗಳು ಕೂಲಿಕಾರರಾದರು. ಆದರೂ 70ರ ದಶಕದ ನಂತರ ಈ ಸುಧಾರಣೆ ಮುಂದುವರೆಯಲೇ ಇಲ್ಲ. ಮುಂದಿನ ಎಲ್ಲ ಯೋಜನೆಗಳಲ್ಲಿ ಕೇವಲ ಭೂಸುಧಾರಣೆಯ ಪ್ರಸ್ತಾಪ ಮಾತ್ರ ಇತ್ತು. ಜಾಗತೀಕರಣದ ನಂತರ ಈ ಭೂಸುಧಾರಣೆಯ ಮಾತೇ ನಿಂತುಹೋಯಿತು ಮಾತ್ರವಲ್ಲ, ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ರಿವರ್ಸ್ ಭೂಸುಧಾರಣೆಗಳು ಆರಂಭವಾದವು. ಅಂದರೆ ಭೂಸುಧಾರಣಾ ಕಾನೂನುಗಳ ಮುಖ್ಯ ಅಂಶಗಳನ್ನು ಸಡಿಲಿಸಿ ಅಥವಾ ಕಿತ್ತುಹಾಕಿ ಒಬ್ಬರೇ ಹೆಚ್ಚುಹೆಚ್ಚು ಭೂಮಿಯ ಒಡೆತನ ಹೊಂದಲು ಅವಕಾಶ ಮಾಡಿಕೊಡಲಾಯಿತು.

ದಾವಾಸ್ ಗೌಡರಾದ ದೇವೇಗೌಡರು

ಕರ್ನಾಟಕದಲ್ಲಿ ಕೆಲಕಾಲ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ದೇವೇಗೌಡರ ಕಾಲದಲ್ಲಿಯೇ ಭೂಸುಧಾರಣೆಯ ರಿವರ್ಸ್ ತಿದ್ದುಪಡಿ ಆರಂಭವಾಯಿತು. ಅವರು 94ರಲ್ಲಿ ಮುಖ್ಯಮಂತ್ರಿಯಾದ ಕೆಲವೇ ದಿನಗಳಲ್ಲಿ ಅಂದಿನ ಪ್ರಧಾನಿ ನರಸಿಂಹರಾವ್‌ರವರು ದಾವಾಸ್‌ನಲ್ಲಿ ನಡೆಯಲಿದ್ದ ವಿಶ್ವ ಆರ್ಥಿಕ ಸಮ್ಮೇಳನಕ್ಕೆ ದೇವೇಗೌಡರನ್ನು ಆಹ್ವಾನಿಸಿದರು. ತಮ್ಮ ಜಾಗತೀಕರಣ ನೀತಿಗಳಿಗೆ ವಿರೋಧಪಕ್ಷಗಳ ಒಪ್ಪಿಗೆ ಸೃಷ್ಟಿಸುವುದು ಅವರ ತುರ್ತು. ದೇವೇಗೌಡರು ಅಲ್ಲಿ ವಿಶ್ವ ಬ್ಯಾಂಕ್‌ನ ’ಹೊಸ ಹೊಸ’ ವಿಚಾರ ಸರಣಿಯ ಪರಿಚಯ ಮಾತ್ರವಲ್ಲದೆ ಭಾರತದ ಬೃಹತ್ ಬಂಡವಾಳಗಾರರ ಜೊತೆಗೂ ಕೈ ಮಿಲಾಯಿಸಿದರು. ಅಲ್ಲಿ ರಿಲಯನ್ಸ್ ಮಾಲೀಕ ಕರ್ನಾಟಕದ ಪ್ರತಿ ತಾಲ್ಲೂಕಿನಲ್ಲಿ ರಫ್ತು ಮಾಡುವ ಬೆಳೆಗಳನ್ನು ಬೆಳೆಯುವ, ವಾರವೊಂದರಲ್ಲಿ ಹತ್ತು ವಿಮಾನಗಳ ಮೂಲಕ ಭಾರತದ ಇತರ ನಗರಗಳಿಗೂ ಕೇವಲ 24 ಗಂಟೆಯಲ್ಲಿ ತರಕಾರಿ, ಹಣ್ಣುಗಳನ್ನು ಒಯ್ಯುವ ಮಹಾ ಕನಸನ್ನು ಬಿತ್ತಿದರು. ಇಂತಹ ಯೋಜನೆಗೆ ಬೇಕಾದ ಭೂಮಿ ಪಡೆಯಲು ಕರ್ನಾಟಕದ ಭೂಸುಧಾರಣಾ ಕಾನೂನು ದೊಡ್ಡ ಅಡ್ಡಿಯಾಗಿದೆಯೆಂದೂ ಅದನ್ನು ಕೂಡಲೇ ತಿದ್ದುಪಡಿ ಮಾಡಬೇಕೆಂದೂ ಪ್ರಸ್ತಾಪಿಸಿದರು. ಭೂಸುಧಾರಣೆಯ ಕಾಲದಲ್ಲೂ ಅರಸುರವರಿಗೆ ವಿರೋಧ ಪಕ್ಷದಲ್ಲಿದ್ದ ದೇವೇಗೌಡರಿಗೆ ಭೂಸುಧಾರಣೆಯ ಬಗ್ಗೆ ಯಾವ ಪ್ರೀತಿಯೂ ಇರಲಿಲ್ಲ.

ದೇವೇಗೌಡರು ಅಲ್ಲಿಂದ ಬಂದಕೂಡಲೇ ಅತ್ಯಂತ ವೇಗವಾಗಿ ಬೆಳೆಯತೊಡಗಿದ ಭಾರತದ ಕಾರ್ಪೊರೇಟ್ ಧಣಿಯ ಇಚ್ಛೆಯನ್ನು ಪೂರೈಸಲು ತಕ್ಷಣವೇ ಭೂಸುಧಾರಣೆ ತಿದ್ದುಪಡಿ ಕೈಗೊಂಡರು. ಭೂಮಿತಿಯ ಕಾನೂನನ್ನು ಬದಲಾಯಿಸಿದರು. ಅಷ್ಟೇ ಅಲ್ಲದೆ ಹೊಸ ಕೃಷಿ ನೀತಿಯ ಹೆಸರಿನಲ್ಲಿ 1994-96ರ ಸಮಯದಲ್ಲೇ ಕಾಂಟ್ರಾಕ್ಟ್ ಫಾರ್ಮಿಂಗ್, ಎಪಿಎಂಸಿ ಕಾನೂನು ತಿದ್ದುಪಡಿ, ರಫ್ತು ಕೃಷಿಗೆ ಉತ್ತೇಜನ ಮುಂತಾದ ಅಂಶಗಳನ್ನು ಮೊದಲ ಬಾರಿಗೆ ಜಾರಿಗೆ ತರಲೆನಿಸಿದರು. ನಂತರದ ಎಲ್ಲ ಸರ್ಕಾರಗಳೂ ಎಪಿಎಂಸಿ ತಿದ್ದುಪಡಿ ಮಾಡಲು ಪ್ರಯತ್ನ ನಡೆಸಿವೆ.

ನಂತರದಲ್ಲಿ ಕಾಂಗ್ರೆಸ್ ಸೇರಿದ ಸಿದ್ಧರಾಮಯ್ಯನವರೂ ಕೂಡಾ ಭೂಮಿತಿಯನ್ನು ಮತ್ತೆ ದುಪ್ಪಟ್ಟು ಮಾಡುವ ತಿದ್ದುಪಡಿ ತಂದರು. ಮುಂದೆ ಯಡ್ಡಿಯೂರಪ್ಪನವರ ಸರದಿ. ಮೋದಿ ಸರ್ಕಾರದ ರೈತ ನಾಶಕ ಕಾನೂನುಗಳ ಜೊತೆಜೊತೆಗೇ ಕೇಂದ್ರ ಸರ್ಕಾರದ ಒಬ್ಬ ಅಧಿಕಾರಿಯ ಪತ್ರ ಬಂದಕೂಡಲೇ ಯಡಿಯೂರಪ್ಪನವರು ಜೀ ಹುಕುಂ ಎಂದು ಶಿರಸಾವಹಿಸಿ ಭೂಸುಧಾರಣೆಯ ಎಲ್ಲ ಮುಖ್ಯ ಅಂಶಗಳನ್ನು ಕಿತ್ತೆಸೆದರು. ಕೃಷಿಯೇತರರು ಕೃಷಿ ಭೂಮಿ ಕೊಳ್ಳುವಂತಿಲ್ಲ ಎಂಬ ನಿಷೇಧದ 79ಎ, 79ಬಿ ಕಲಂಗಳನ್ನು ಕೈಬಿಟ್ಟರು.

ಗೇಣಿ ಪದ್ಧತಿ ನಿಷೇಧದ ಕಲಂಗಳನ್ನೂ ತಿದ್ದುಪಡಿ ಮಾಡಿ ಕಾಂಟ್ರಾಕ್ಟ್ ಫಾರ್ಮಿಂಗ್
ಅಥವಾ ದೊಡ್ಡ ಕಂಪನಿಗಳ ಗುತ್ತಿಗೆ ಕೃಷಿಗೆ ಅವಕಾಶ ನೀಡಿದರು. ಭೂಮಿತಿಯನ್ನು ಊಹಿಸಲೂ ಆಗದ 216 ಎಕರೆಗಳಿಗೆ ಹಿಗ್ಗಿಸಿದರು. ಒಟ್ಟಿನಲ್ಲಿ ಭೂಸುಧಾರಣಾ ಕಾನೂನಿನ ಸಮಾಧಿಯಾಯಿತು. ಒಂದು ಮಾರ್ಪಾಡಿನ ಬೇಡಿಕೆಯೊಂದಿಗೆ ಜನತಾದಳ ನೀಡಿದ ಬೆಂಬಲವೇ ಈ ತಿದ್ದುಪಡಿಗಳು ಕಾನೂನಾಗಲು ಮುಖ್ಯ ಆಧಾರವಾಯಿತು.

ಹೀಗೆ ಜನತಾದಳ, ಕಾಂಗ್ರೆಸ್ ಮತ್ತು ಬಿಜೆಪಿ ಮೂರೂ ಪಕ್ಷಗಳು ಭೂಸುಧಾರಣಾ ಕಾನೂನನ್ನು ರಿವರ್ಸ್ ಮಾಡಿದರು. ಈ ಪರಸ್ಪರ ವಿರೋಧದ ತೋರಿಕೆಯ ನಡುವೆಯೂ ಇದ್ದ ಒಳ ಸಹಕಾರ, ಪಕ್ಷಗಳು ಬೇರೆಯಾದರೂ ಭೂಮಾಲಕ ಆಳುವ ವರ್ಗವೆಲ್ಲ ಒಂದೇ ಎಂಬುದನ್ನು ಸಾಬೀತುಪಡಿಸಿತು.

ಕೃಷಿಯಲ್ಲಿ ಸರ್ಕಾರದ ಹೂಡಿಕೆ ಕಡಿತ

ಭಾರತದ ಕೃಷಿಯಲ್ಲಿ ಬಹು ದೊಡ್ಡ ಸಂಖ್ಯೆಯ ಸಣ್ಣ, ಅತಿಸಣ್ಣ ರೈತರೇ ಇರುವುದರಿಂದ ಮತ್ತು ಮುಂಗಾರು ಹಿಂಗಾರು ಮಳೆಗಳ ಅನಿಶ್ಚಿತತೆಯಿಂದ ಕೃಷಿಯಲ್ಲಿ ಸರ್ಕಾರದ ಹೂಡಿಕೆ ಬಹಳ ಮುಖ್ಯ. ಹೂಡಿಕೆ ಎಂದರೆ ದೊಡ್ಡ ಮತ್ತು ಸಣ್ಣ ನೀರಾವರಿ, ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣಾ ಕೇಂದ್ರಗಳು, ಭೂ ಸವಕಳಿ ತಪ್ಪಿಸುವ ಭೂ ಮತ್ತು ಜಲ ಸಂರಕ್ಷಣೆ, ಕೃಷಿ ಸಂಶೋಧನಾ ಕ್ಷೇತ್ರಗಳು ಮತ್ತು ಯೋಜನೆಗಳು, ಕೃಷಿಕರಿಗೆ ಹೊಸ ವೈಜ್ಞಾನಿಕ ವಿಧಾನಗಳ ಅರಿವು ಮೂಡಿಸುವ ವಿಸ್ತರಣಾ ಕಾರ್ಯ, ಬೀಜ ತಯಾರಿಕೆ, ಇತರ ಲಾಗುವಾಡುಗಳ ಉತ್ಪಾದನೆಯಲ್ಲಿ ಸಾರ್ವಜನಿಕ ಕ್ಷೇತ್ರದ ಕಂಪನಿಗಳ ಪ್ರಧಾನ ಪಾತ್ರ ಇತ್ಯಾದಿಗಳಲ್ಲಿ ಸರ್ಕಾರದ ಬಜೆಟ್ ವಿನಿಯೋಗ – ಇವುಗಳು.

ಸರ್ಕಾರದ ಇಂತಹ ಯೋಜನೆಗಳು ರೈತರು ತಮ್ಮದೇ ಬಂಡವಾಳ ಹೂಡಲು, ಕೃಷಿ ಯಂತ್ರೋಪಕರಣಗಳನ್ನು ಕೊಳ್ಳಲು ಸಹಾಯಕವಾಗುತ್ತದೆ. ಸರ್ಕಾರದ ಹೂಡಿಕೆ ತಗ್ಗಿದರೆ ಈ ಖಾಸಗೀ ಹೂಡಿಕೆಯೂ ತಗ್ಗುತ್ತದೆ.

ಈ ಎಲ್ಲ ಹೂಡಿಕೆಗಳೂ ಜಾಗತೀಕರಣದ ನಂತರ ಕುಗ್ಗಿ ಹೋದವು. ಎಲ್ಲ ಕ್ಷೇತ್ರಗಳ ಬಂಡವಾಳ ಹೂಡಿಕೆಯ ಶೇ.15ರಷ್ಟು ಪ್ರಮಾಣವನ್ನು 80-81ರಲ್ಲಿ ಮುಟ್ಟಿದ್ದ ಕೃಷಿ ಹೂಡಿಕೆ 2000ದ ವೇಳೆಗೆ ಶೇ.6ಕ್ಕೆ ಕುಸಿಯಿತು. ಇದು ಬಂಡವಾಳ ಹೂಡಲು ಸಾಧ್ಯವಿರುವ ಕೆಲ ಶ್ರೀಮಂತ ರೈತರನ್ನು ಬಲಪಡಿಸಿತು.

ರಫ್ತಿಗಾಗಿ ಕೃಷಿ

ಉದಾರ ರಫ್ತು ನೀತಿಗಳು, ರಫ್ತು ಪ್ರೋತ್ಸಾಹ, ಹಣ್ಣು, ತರಕಾರಿ ಸಂಸ್ಕರಣೆಗೆ ಹಾಗೂ ಕೋಲ್ಡ್ ಚೈನ್ ಎಂಬ ತಂಪಾಗಿಡುವ ಮತ್ತು ತಂಪಾಗಿ ಸಾಗಿಸುವ ವ್ಯವಸ್ಥೆಗೆ ಉದಾರ ಬ್ಯಾಂಕ್ ಸಾಲ ಇತ್ಯಾದಿಗಳು ವಿದೇಶಕ್ಕೆ ಹಣ್ಣು, ತರಕಾರಿ ರಫ್ತು ಮಾಡಿ ದಿಢೀರ್ ಶ್ರೀಮಂತರಾಗುವ ಕೆಲ ದೊಡ್ಡ ರೈತರ ಕನಸುಗಳಿಗೆ ನೀರೆರೆಯಿತು. ಸುಮಾರು ಒಂದು ಕೋಟಿ ಎಕರೆ ಭೂಮಿ, ಆಹಾರ ಉತ್ಪಾದನೆಯಿಂದ ಹೊರಗೆ ಹೋಗಿ ಇಂತಹ ರಫ್ತು ಕೃಷಿಗೆ ದಕ್ಕಿತು. ಎಕರೆಗೆ ಕೋಟಿಗಟ್ಟಲೆ ಹಣ ಹೂಡುವ ಗ್ರೀನ್ ಹೌಸ್‌ಗಳು ಇತ್ಯಾದಿಗಳು ಕಾಣತೊಡಗಿದವು.

ಬ್ಯಾಂಕ್ ಸಾಲ ನೀತಿ

ಬ್ಯಾಂಕ್‌ಗಳನ್ನು ವಿಶ್ವ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸಬೇಕೆಂಬ ಸುಧಾರಣೆಗಳ ಹೆಸರಿನಲ್ಲಿ ಬ್ಯಾಂಕ್ ಶಾಖೆಗಳನ್ನು ತೆರೆಯುವುದಕ್ಕೆ ಕಡಿತ, ಅನೇಕ ಗ್ರಾಮೀಣ ಬ್ಯಾಂಕ್ ಶಾಖೆಗಳ ಮುಚ್ಚುವಿಕೆ, ಬ್ಯಾಂಕುಗಳ ವಿಲೀನ, ದೊಡ್ಡ ಬ್ಯಾಂಕುಗಳ ರಚನೆ. ಇವು 90ರ ದಶಕದಿಂದಲೇ ಆರಂಭವಾಗಿ ಇಂದು ಮೋದಿ ಆಡಳಿತದಲ್ಲಿ ಬಹಳ ವೇಗವಾಗಿ ಸಾಗಿವೆ. ಇಡೀ ದೇಶಕ್ಕೆ ಮುಖ್ಯವಾಗಿ ಕರ್ನಾಟಕದ ಜನತೆಗೆ ಹಣಕಾಸು ಸೇವೆ ಸಲ್ಲಿಸಿದ ಮೈಸೂರು ಬ್ಯಾಂಕ್, ಸಿಂಡಿಕೇಟ್, ವಿಜಯಾ, ಕಾರ್ಪೊರೇಷನ್ ಮೊದಲಾದ ಕರ್ನಾಟಕ ಮೂಲದ ಹಲವು ಬ್ಯಾಂಕುಗಳು ಇಂದು ಹೇಳಹೆಸರಿಲ್ಲದಂತಾಗಿವೆ.

ಮುಖ್ಯವಾಗಿ ಬ್ಯಾಂಕುಗಳ ಸಾಮಾಜಿಕ ಸಾಲ ನೀತಿಯನ್ನು ಕಿತ್ತೆಸೆಯಲಾಗಿದೆ. ಆದ್ಯತೆಯ ಕ್ಷೇತ್ರಗಳಿಗೆ ಶೇ.40ರಷ್ಟು ಹಾಗೂ ಕೃಷಿಗೆ ಶೇ.16ರಷ್ಟು ಮೀಸಲಿದ್ದ ಸಾಲದ ಪ್ರಮಾಣ 1988ರ ವೇಳೆಗೆ ಶೇ.44 ಹಾಗೂ ಶೇ.17 ರ ಪ್ರಮಾಣಕ್ಕೆ ಏರಿತ್ತು. 2001ರ ವೇಳೆಗೆ ಶೇ.33ಕ್ಕೆ ಹಾಗೂ ಶೇ.10ಕ್ಕೆ ಕುಗ್ಗಿತು.

ಈ ಒಂದೊಂದೂ ಶೇಕಡಾ ಪ್ರಮಾಣವೂ ಹತ್ತಾರು ಸಾವಿರ ಕೋಟಿಗಟ್ಟಲೆ ಹಣದ ಕುಗ್ಗುವಿಕೆಯನ್ನು ಸೂಚಿಸುತ್ತದೆ. 2004ರ ನಂತರ ಬಂದ ಯುಪಿಎ ಸರ್ಕಾರ ಕೃಷಿ ಸಾಲದ ಪ್ರಮಾಣವನ್ನು ಬಹಳ ಹೆಚ್ಚಿಸಿತು ಎಂದು ಕೊಚ್ಚಿಕೊಳ್ಳಲಾಗುತ್ತಿದೆ. ಆದರೆ ಈ ಹೆಚ್ಚಳವೆಲ್ಲಾ ಹೆಚ್ಚು ಬಂಡವಾಳ ಬೇಡುವ ರಫ್ತು ಮತ್ತಿತರ ಆಧುನಿಕ ಕೃಷಿಯ ಕಂಪನಿಗಳು ಮತ್ತು ಶ್ರೀಮಂತ ರೈತರ ಪಾಲಾಗಿದೆ.

ಬ್ಯಾಂಕುಗಳು ಒಟ್ಟು ನೀಡುವ 70 ಲಕ್ಷ ಕೋಟಿಗಳಿಗೂ ಹೆಚ್ಚಿನ ಸಾಲದಲ್ಲಿ, 1100 ಕಂಪನಿಗಳಿಗೆ 22 ಲಕ್ಷ ಕೋಟಿಗಳಷ್ಟು (ಒಂದೊಂದಕ್ಕೂ ನೂರು ಕೋಟಿಗಳಿಗಿಂತ ಹೆಚ್ಚಿನ ಸಾಲ), ಅಂದರೆ ಮೂರನೇ ಒಂದು ಭಾಗದಷ್ಟು ನೀಡಲಾಗಿದೆ. ಹತ್ತು ಕೋಟಿಗಿಂತ ಹೆಚ್ಚು ನೀಡಲಾಗಿರುವ ಸಾಲದ ಪ್ರಮಾಣ ಅರ್ಧಕ್ಕಿಂತ ಎಂದರೆ 35 ಲಕ್ಷ ಕೋಟಿಗಳಿಗಿಂತ ಹೆಚ್ಚು. ಕೃಷಿಗೆ ಹತ್ತಾರು ಲಕ್ಷ ಕೋಟಿ ಸಾಲ ನೀಡುತ್ತೇವೆಂದು ಹೇಳಲಾಗುತ್ತಿದ್ದರೂ ಅದರಲ್ಲಿ ಒಂದು ಕೋಟಿಗಿಂತ ಹೆಚ್ಚಿನ ಪ್ರಮಾಣದ ಸಾಲ ಮೂರನೇ ಒಂದು ಭಾಗದಷ್ಟು. ನಿಜವಾದ ಸಣ್ಣ ರೈತರಾದವರಿಗೆ ಎರಡು ಲಕ್ಷಕ್ಕಿಂತ ಕಡಿಮೆ ನೀಡಲಾದ ಸಾಲ ಕೇವಲ ಶೇ.40ರಷ್ಟು. ಕೃಷಿ, ಕೃಷಿಯೇತರ ಸಾಲಗಳೆಲ್ಲವೂ ಸೇರಿದರೆ ಎರಡು ಲಕ್ಷಕ್ಕಿಂತ ಕಡಿಮೆ ಸಾಲ ಶೇ.10 ಕ್ಕಿಂತ ಕಡಿಮೆ. 25,000ರೂಗಿಂತ ಕಡಿಮೆ ಸಾಲ ಕೇವಲ ಶೇ.0.5ಕ್ಕಿಂತ ಕಡಿಮೆ.

ಈ ಅವಧಿಯಲ್ಲಿ ಸಹಕಾರಿ ಬ್ಯಾಂಕ್‌ಗಳನ್ನು, ಸಹಕಾರಿ ಸಂಘಗಳನ್ನು ಅವ್ಯವಸ್ಥಿತಗೊಳಿಸಲು ಅನೇಕ ನೀತಿ ನಿರೂಪಣೆ ಮಾಡಲಾಗಿದೆ. ಅವುಗಳಿಂದ ಹೊಸ ಕೃಷಿ ಸಾಲ ಸಿಗುವುದೇ ಇಲ್ಲ. ಏನಿದ್ದರೂ ಹಳೇ ಸಾಲದ ರಿನ್ಯೂವಲ್ ಅಷ್ಟೇ ಎಂಬಂತಾಗಿದೆ.

ಇಂತಹ ಸಾಲ ನೀತಿಯಲ್ಲಿ ಮಧ್ಯಮ ಹಾಗೂ ಸಣ್ಣ ರೈತರು ಖಾಸಗಿ ಸಾಲಗಳಿಗೆ ಮೊರೆ ಹೋಗುವುದು ಬಹಳ ಸಾಮಾನ್ಯವಾಗಿದೆ. ಭಾರತದ ವಿವಿಧ ರಾಜ್ಯಗಳಲ್ಲಿ ನಡೆದ ಗ್ರಾಮೀಣ ಸಮೀಕ್ಷೆಗಳಲ್ಲಿ ಖಾಸಗಿ ಸಾಲದ ಪ್ರಮಾಣ ಶೇ.60ರಿಂದ ಶೇ.90ರವರೆಗೆ ಇದೆ. ಕೆಲವೇ ಕೆಲವು ಹಳ್ಳಿಗಳಲ್ಲಿ ಇದು ಶೇ.50ಕ್ಕಿಂತ ಕಡಿಮೆ ಇದೆ.

ಜೊತೆಗೆ ಸ್ತ್ರೀಶಕ್ತಿ ಮತ್ತಿತರ ಗುಂಪುಗಳ ಮೂಲಕ ನೀಡಲಾಗುವ ಕಿರು ಸಾಲ ಹೆಚ್ಚಾಗಿದೆ. ಇದನ್ನೂ ಖಾಸಗಿ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ವಹಿಸಲಾಗಿದೆ. ಅವರು ಕೂಡಾ ಸಾಲದ ಬಡ್ಡಿ ದರ ಮತ್ತು ವಸೂಲಾತಿಯಲ್ಲಿ ಖಾಸಗಿ ಲೇವಾದೇವಿಗಾರರನ್ನು ಮೀರಿಸುತ್ತಾರೆ.

ಈ ಎರಡೂ ಖಾಸಗಿ ಸಾಲಗಳ ನೀಡಿಕೆಗೆ ಬ್ಯಾಂಕ್‌ಗಳೇ ಹಣ ಒದಗಿಸುವುದಾದರೂ ರೈತರನ್ನು ಲೂಟಿ ಮಾಡಲು, ಅವರ ಬೆವರ ಬೆಲೆಯನ್ನು ಗ್ರಾಮೀಣ ಖಾಸಗಿ ಬಡ್ಡಿ ಸಾಹುಕಾರ ಶೋಷಕರು ಹೆಚ್ಚುಹೆಚ್ಚು ಕಿತ್ತುಕೊಳ್ಳಲು ಅವಕಾಶವಾಗಿದೆ. ಇಂತಹ ಸಾಲ ನೀಡಿಕೆ ನೀತಿ, ಜಾಗತೀಕರಣ, ಖಾಸಗೀಕರಣ ನೀತಿಗಳೊಂದಿಗೆ ಕೂಡಿ ರೈತರು ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು.

ಜಿ. ಎನ್. ನಾಗರಾಜ್

ಜಿ. ಎನ್. ನಾಗರಾಜ್
ಸರ್ಕಾರಿ ಅಧಿಕಾರಿಯಾಗಿದ್ದ ಜಿ. ಎನ್. ನಾಗರಾಜ್ 80ರ ದಶಕದ ಕರ್ನಾಟಕದ ರೈತ ಬಂಡಾಯದ ಹೊತ್ತಿನಲ್ಲಿ ನೌಕರಿ ಬಿಟ್ಟು ಪೂರ್ಣಾವಧಿ ಸಂಘಟಕರಾದವರು. ಸಿಪಿಎಂ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯಿಂದ ವಿಚಾರ ಮಂಡಿಸುವವರು.


ಇದನ್ನೂ ಓದಿ: ಹಳತು-ವಿವೇಕ; ನಮ್ಮ ಸರ್ಕಾರಗಳು ಮಾಡುತ್ತಿರುವ ಸಾಂಸ್ಥಿಕ ಬದಲಾವಣೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...