ದೆಹಲಿಯಲ್ಲಿ 16 ವರ್ಷದ ಬಾಲಕಿಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಲ್ಲಿ ಒಬ್ಬಾತ ಸಂತ್ರಸ್ತ ಬಾಲಕಿಯ ಸ್ನೇಹಿತ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಜುಲೈ 6ರಂದು ಬಾಲಕಿಯು ಜಾಲಿರೈಡ್‌ಗೆ ತನ್ನ ಸ್ನೇಹಿತನ ಜೊತೆ ಹೋದಾಗ, ಆತನೊಂದಿಗೆ ಇನ್ನಿಬ್ಬರು ದುಷ್ಕರ್ಮಿಗಳು ಸೇರಿಕೊಂಡು ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಎಫ್‌ಐಆರ್ ದಾಖಲಾಗಿದ್ದು, ಖಾಸಗಿ ಟ್ಯಾಕ್ಸಿ ಚಾಲಕರಾಗಿರುವ ಮೂವರೂ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ಆರೋಪಿಗಳನ್ನು ಮೊಹಮ್ಮದ್ ಆರಿಫ್ (23), ಮನೋಜ್ ಕುಮಾರ್ (25) ಮತ್ತು ರೂಪೇಶ್ ಕುಮಾರ್ (35) ಎಂದು ಗುರುತಿಸಲಾಗಿದೆ. ನಾವು ಸಿಆರ್‌ಪಿಸಿಯ ಸೆಕ್ಷನ್ 164ರ ಅಡಿಯಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಡಿಸಿಪಿ (ನೈಋತ್ಯ ಜಿಲ್ಲೆ) ಸಿ.ಮನೋಜ್ ಹೇಳಿದ್ದಾರೆ.
ಜುಲೈ 8ರಂದು ಮುಂಜಾನೆ 4 ಗಂಟೆ ಸುಮಾರಿಗೆ ಆಸ್ಪತ್ರೆಯಿಂದ ಬಾಲಕಿಯ ತಂದೆಯಿಂದ ಕರೆ ಬಂದಿತು. ತಮ್ಮ ಮಗಳಿಗೆ ಮೂವರು ಯುವಕರು ಕಿರುಕುಳ ನೀಡಿದ್ದಾರೆ ಎಂದು ಅವರು ನೋವು ತೋಡಿಕೊಂಡರು ಎಂದು ಮಾಹಿತಿ ನೀಡಿದ್ದಾರೆ.
“ಜುಲೈ 6ರಂದು ರಾತ್ರಿ 8.30ರ ಸುಮಾರಿಗೆ ಸಂತ್ರಸ್ತ ಬಾಲಕಿಯು ಕಾರಿನಲ್ಲಿ ಮೂವರು ವ್ಯಕ್ತಿಗಳೊಂದಿಗೆ ಜಾಲಿ ರೈಡ್ ಹೋಗಿದ್ದರು. ಜುಲೈ 7ರಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಬಾಲಕಿ ಹಿಂತಿರುಗಿದ್ದು ತನ್ನ ಮೇಲಾದ ದೌರ್ಜನ್ಯವನ್ನು ಪೋಷಕರಲ್ಲಿ ತಿಳಿಸಿದರು” ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿರಿ: ಹೈದ್ರಾಬಾದ್: ಮಹಿಳೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಸರ್ಕಲ್ ಇನ್‌ಸ್ಪೆಕ್ಟರ್
“ಹುಡುಗಿಯನ್ನು ತಡರಾತ್ರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಪ್ತಸಮಾಲೋಚಕರ ಮೂಲಕ ಪರೀಕ್ಷೆ ನಡೆಸಿದಾಗ ಅನೇಕ ಸಂಗತಿಗಳು ತಿಳಿದುಬಂದವು. ಜುಲೈ 6ರಂದು ಬಾಲಕಿಯನ್ನು ಭೇಟಿಯಾದ ಇಬ್ಬರು ಪರಿಚಿತ ವ್ಯಕ್ತಿಗಳು ತಮ್ಮ ವ್ಯಾಗನ್ಆರ್ ಕಾರಿನಲ್ಲಿ ಜಾಯ್‌ರೈಡ್ ಮಾಡಲು ಬಾಲಕಿಯನ್ನು ಆಹ್ವಾನಿಸಿದರು. ಆ ವ್ಯಕ್ತಿಗಳು ಮದ್ಯವನ್ನು ಖರೀದಿಸಿದರು. ನಾಲ್ವರೂ ಮದ್ಯ ಸೇವಿಸಿದರು. ನಂತರ ಆ ಬಾಲಕಿಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದರು. ಅಲ್ಲಿ ಇಬ್ಬರು ಪುರುಷರು ಕಾರಿನೊಳಗೆ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದರು. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಪೋಕ್ಸೊ ಕಾಯ್ದೆ ಮತ್ತು ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.


