ಪಂಜಾಬ್‌ನ ಬಟಿಂಡಾದಲ್ಲಿ ಸಾರ್ವಜನಿಕ ಉದ್ಯಾನವನದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಅಪರಿಚಿತ ವ್ಯಕ್ತಿಗಳು ಶುಕ್ರವಾರ ಧ್ವಂಸಗೊಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಅಪರಾಧಿಗಳನ್ನು ಪತ್ತೆಹಚ್ಚಲು ಆ ಪ್ರದೇಶದಲ್ಲಿನ ಸಿ.ಸಿ. ಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ಪ್ರದೇಶದ ರಮ್ಮನ್ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ (ಸದರ್) ಹರ್ಜೋತ್ ಸಿಂಗ್ ಮಾನ್ ಹೇಳಿದ್ದಾರೆ.
ಈ ಬೆಳವಣಿಗೆಯನ್ನು ಸ್ವೀಕರಿಸಲಾಗದು ಎಂದು ಪಂಜಾಬ್ ಕಾಂಗ್ರೆಸ್ ಘಟಕದ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಹೇಳಿದ್ದಾರೆ.
“ಭಟಿಂಡಾದಲ್ಲಿ ಮಹಾತ್ಮ ಗಾಂಧೀಜಿಯವರ ಪ್ರತಿಮೆಯನ್ನು ಧ್ವಂಸ ಮಾಡಿರುವ ಅಪವಿತ್ರ ಕೃತ್ಯವನ್ನು ಖಂಡಿಸಲು ಯಾವುದೇ ಪದಗಳು ಸಾಕಾಗುವುದಿಲ್ಲ” ಎಂದು ವಾರಿಂಗ್ ಟ್ವೀಟ್ ಮಾಡಿದ್ದಾರೆ. “ಅಪರಾಧಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಕೆನಡಾದ ಒಂಟಾರಿಯೊ ನಗರದ ಹಿಂದೂ ದೇವಾಲಯವೊಂದರಲ್ಲಿ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸಿದ ಎರಡು ದಿನಗಳ ನಂತರ ಈ ಘಟನೆ ನಡೆದಿದೆ.
ಯಾರ್ಕ್ ಪ್ರಾದೇಶಿಕ ಪೊಲೀಸ್ ವಕ್ತಾರ ಆಮಿ ಬೌಡ್ರೊ, “ಅಪರಿಚಿತ ವ್ಯಕ್ತಿಗಳು ಪ್ರತಿಮೆಯ ಮೇಲೆ ‘ಅತ್ಯಾಚಾರಿ’ ಮತ್ತು ‘ಖಾಲಿಸ್ತಾನ್’ ಎಂದು ಬರೆಯುವ ಮೂಲಕ ವಿರೂಪಗೊಳಿಸಿದ್ದಾರೆ” ಎಂದು ಹೇಳಿದ್ದಾರೆ.
“ದ್ವೇಷ ಮತ್ತು ಪಕ್ಷಪಾತಿ ಧೋರಣೆಯನ್ನು ಪ್ರೇರೇಪಿಸಿರುವ ಘಟನೆ ಇದೆಂದು ಪರಿಗಣಿಸಲಾಗುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಪ್ರತಿಕ್ರಿಯೆ ನೀಡಿದ್ದು, “ರಿಚ್ಮಂಡ್ ಹಿಲ್‌ನಲ್ಲಿರುವ ವಿಷ್ಣು ದೇವಸ್ಥಾನದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ದುಷ್ಕರ್ಮಿಗಳು ಅಪವಿತ್ರಗೊಳಿಸಿದ್ದಕ್ಕಾಗಿ ನಾವು ದುಃಖಿತರಾಗಿದ್ದೇವೆ. ಈ ಕ್ರಿಮಿನಲ್, ದ್ವೇಷಪೂರಿತ ವಿಧ್ವಂಸಕ ಕೃತ್ಯವು ಕೆನಡಾದಲ್ಲಿರುವ ಭಾರತೀಯ ಸಮುದಾಯದ ಭಾವನೆಗಳನ್ನು ತೀವ್ರವಾಗಿ ಘಾಸಿಗೊಳಿಸಿದೆ. ಈ ದ್ವೇಷದ ಅಪರಾಧವನ್ನು ತನಿಖೆ ಮಾಡಲು ನಾವು ಕೆನಡಾದ ಅಧಿಕಾರಿಗಳ ಸಂಪರ್ಕದಲ್ಲಿದ್ದೇವೆ” ಎಂದಿದ್ದಾರೆ.
ಲಂಡನ್, ವಾಷಿಂಗ್ಟನ್ ಮತ್ತು ಕ್ಯಾಲಿಫೋರ್ನಿಯಾದ ಡೇವಿಸ್ ನಗರದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕನಿಷ್ಠ ಮೂರು ಭಾರಿ ಗಾಂಧಿ ಪ್ರತಿಮೆಯಲ್ಲಿ ಟಾರ್ಗೆಟ್ ಮಾಡಲಾಗಿದೆ ಎಂದು ವರದಿಯಾಗಿದೆ.


