ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ವಿರುದ್ಧ ಅವಹೇಳನಕಾರಿಯಾಗಿ ದಾಸ್ನಾ ದೇವಿ ದೇವಸ್ಥಾನದ ಅರ್ಚಕ, ದ್ವೇಷ ಭಾಷಣಗಳಿಗೆ ಹೆಸರಾದ ಮಹಂತ ಯತಿ ನರಸಿಂಗಾನಂದ ಸರಸ್ವತಿ ಮಾತನಾಡಿರುವ ವಿಡಿಯೊ ಟ್ವಿಟರ್‌ನಲ್ಲಿ ವೈರಲ್ ಆಗಿದ್ದು, ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬುಧವಾರ ರಾತ್ರಿ ವೈರಲ್ ಆಗಿರುವ 2.20 ನಿಮಿಷಗಳ ವೀಡಿಯೊದಲ್ಲಿ, ಯತಿ ನರಸಿಂಗಾನಂದ ಸರಸ್ವತಿ ಅವರು, “ಮಹಾತ್ಮ ಗಾಂಧಿ ಭಾರತೀಯ ಮುಸ್ಲಿಮರಿಗೆ ಹಕ್ಕುಗಳನ್ನು ನೀಡಿದರು. ಗಾಂಧಿ ಕಾರಣದಿಂದಾಗಿ 100 ಕೋಟಿ ಹಿಂದೂ ಸಮುದಾಯಕ್ಕೆ ತಮ್ಮದೇ ಆದ ಒಂದು ಇಂಚು ಭೂಮಿ ಇಲ್ಲ” ಎಂದು ಆರೋಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮಹಾತ್ಮ ಗಾಂಧಿಯವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಪೊಲೀಸರು ಗುರುತಿಸಿದ್ದಾರೆ. ಯತಿ ನರಸಿಂಗಾನಂದರ ಹೇಳಿಕೆಗಳು ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಪಡಿಸುವ ಪರಿಸ್ಥಿತಿಗೆ ಕಾರಣವಾಗಬಹುದು ಎಂದು ಮುಸ್ಸೂರಿ ಪೊಲೀಸ್ ಠಾಣೆಯ ಠಾಣಾಧಿಕಾರಿ ತಿಳಿಸಿದ್ದಾರೆ.
ಮುಸ್ಸೂರಿ ಪೊಲೀಸ್ ಠಾಣೆಯಲ್ಲಿ ನರಸಿಂಗಾನಂದ ಸರಸ್ವತಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505(2) (ವರ್ಗಗಳ ನಡುವೆ ದ್ವೇಷ ಉತ್ತೇಜಿಸುವ ಹೇಳಿಕೆಗಳು), 153ಬಿ (ರಾಷ್ಟ್ರೀಯ ಏಕೀಕರಣಕ್ಕೆ ಹಾನಿಯುಂಟುಮಾಡುವ ಆರೋಪ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
“ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯತಿ ನರಸಿಂಗಾನಂದ ದ್ವೇಷ ಭಾಷಣ ಮಾಡುವುದು ಇದೇ ಮೊದಲೇನಲ್ಲ. ಮುಸ್ಲಿಮರ ನರಮೇಧಕ್ಕೆ ಕರೆ ನೀಡಿರುವ ಕುಖ್ಯಾತ ಇವರ ಮೇಲಿದೆ.
“ಭಾರತಕ್ಕೆ ಮುಸ್ಲಿಂ ವ್ಯಕ್ತಿ ಪ್ರಧಾನಿಯಾದರೆ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಬೇಕು. ಭಾರತಕ್ಕೆ ಮುಸ್ಲಿಂ ಪ್ರಧಾನಿ ಸಿಕ್ಕರೆ ಶೇಕಡಾ 40ರಷ್ಟು ಹಿಂದೂಗಳು ಸಾಯುತ್ತಾರೆ” ಎಂದು ನರಸಿಂಗಾನಂದ ಪ್ರಚೋದಿಸಿದ್ದರು.
2021ರಲ್ಲಿ ಹರಿದ್ವಾರದ ಸಮಾವೇಶದಲ್ಲಿ ಮುಸ್ಲಿಮರ ನರಮೇಧಕ್ಕೆ ಪ್ರಚೋದಿಸಿದ್ದ ನರಸಿಂಗಾನಂದ ವಿರುದ್ಧ ಪ್ರಕರಣ ದಾಖಲಾಗಿತ್ತು. ಫೆಬ್ರವರಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಇದೇ ರೀತಿಯ ಹೇಳಿಕೆ ನೀಡಿದ್ದರು.
ದ್ವೇಷ ಭಾಷಣ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡುತ್ತಾ ನರಸಿಂಗಾನಂದ, “ನಮಗೆ ಭಾರತದ ಸುಪ್ರೀಂ ಕೋರ್ಟ್ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಈ ದೇಶದ 100 ಕೋಟಿ ಹಿಂದೂಗಳನ್ನು ಸಂವಿಧಾನ ಕೊಲ್ಲುತ್ತಿದೆ. ಈ ಸಂವಿಧಾನವನ್ನು ನಂಬಿದವರನ್ನು ಕೊಲ್ಲಲಾಗುತ್ತದೆ. ಈ ವ್ಯವಸ್ಥೆಯನ್ನು ನಂಬುವವರು, ಈ ರಾಜಕಾರಣಿಗಳು, ಸುಪ್ರೀಂ ಕೋರ್ಟ್ ಮತ್ತು ಸೈನ್ಯದಲ್ಲಿರುವವರು ಎಲ್ಲರೂ ನಾಯಿಯಂತೆ ಸಾಯುತ್ತಾರೆ” ಎಂದು ಮತ್ತೊಮ್ಮೆ ಪ್ರಚೋದನೆ ನೀಡಿದ್ದರು. ಸಂವಿಧಾನ ಮತ್ತು ಸುಪ್ರೀಂ ಕೋರ್ಟ್ ವಿರುದ್ಧ ನಾಲಗೆ ಹರಿಬಿಟ್ಟಿದ್ದರು.
ಇದನ್ನೂ ಓದಿರಿ: ಪಂಜಾಬ್: ಉದ್ಯಾನದಲ್ಲಿದ್ದ ಗಾಂಧಿ ಪ್ರತಿಮೆ ಧ್ವಂಸ
ಯತಿ ನರಸಿಂಗಾನಂದರ ದ್ವೇಷ ಭಾಷಣಗಳನ್ನು ಹೊರಗೆ ತಂದು ಸರ್ಕಾರದ ಮೇಲೆ ಒತ್ತಡ ಸೃಷ್ಟಿ ಮಾಡುವಲ್ಲಿ ಆಲ್ಟ್ ನ್ಯೂಸ್‌ನ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಹೀಗಾಗಿ ಯತಿ ನರಸಿಂಗಾನಂದ ಅವರು ಜುಬೇರ್ ವಿರುದ್ಧ ಮೊದಲಿನಿಂದಲೂ ದ್ವೇಷ ಕಾರುತ್ತಲೇ ಬಂದಿದ್ದಾರೆ.
ಜುಬೇರ್ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿರುವ ಪೊಲೀಸರು, ತನಿಖೆ ನಡೆಸುತ್ತಲೇ ಇದ್ದಾರೆ. ದ್ವೇಷ ಭಾಷಣಗಳನ್ನು ಹೊರಗೆ ಎಳೆಯುತ್ತಿದ್ದ ಜುಬೇರ್ ಅವರನ್ನೇ ಈಗ ವ್ಯವಸ್ಥೆ ಇಕ್ಕಟ್ಟಿಗೆ ಸಿಲುಕಿಸಿದೆ.


