Homeಅಂಕಣಗಳುಮಾತು ಮರೆತ ಭಾರತ; ಚುಂಡೂರು ಫೈಲ್ಸ್: ಅಟ್ರಾಸಿಟಿ ಕಾಯ್ದೆಯ ಹೊಸ್ತಿಲಲ್ಲಿ ದಲಿತರ ನರಮೇಧ

ಮಾತು ಮರೆತ ಭಾರತ; ಚುಂಡೂರು ಫೈಲ್ಸ್: ಅಟ್ರಾಸಿಟಿ ಕಾಯ್ದೆಯ ಹೊಸ್ತಿಲಲ್ಲಿ ದಲಿತರ ನರಮೇಧ

- Advertisement -
- Advertisement -

ಅದು 1991ನೇ ಇಸವಿಯ ಆಗಸ್ಟ್ ತಿಂಗಳು. ಭಾರತ ದೇಶವು 45ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಜ್ಜಾಗುತ್ತಿತ್ತು. ಸಂಭ್ರಮಾಚರಣೆಗೆ ಇನ್ನೊಂದು ವಾರವಿತ್ತಷ್ಟೆ. ಆ ಆಗಸ್ಟ್ 6ರ ಸಂಜೆ ಆಂಧ್ರಪ್ರದೇಶದ ತೆನಾಲಿ ಬಳಿಯಿರುವ ಚುಂಡೂರು ಗ್ರಾಮದಲ್ಲಿನ ದಲಿತರು ರೌರವ ನರಕ ನೋಡಿದರು. ಈ ದೇಶದಲ್ಲಿ ಇದನ್ನು ಆಶ್ಚರ್ಯವೆನ್ನಬೇಕೋ, ಅಥವಾ ಸಾಮಾನ್ಯ ಸಂಗತಿಯೆನ್ನಬೇಕೋ ಕೊಲೆಗಾರರಿಗೆ ಪೊಲೀಸರು ನೀಡಿದ ಸಹಾಯದಿಂದಲೇ ಈ ಕೊಲೆಗಳು ನಡೆದುಹೋಗಿದ್ದವು.

ಅದು ಚುಂಡೂರು. ಗುಂಟೂರು ಜಿಲ್ಲೆಯ ಗ್ರಾಮಪಂಚಾಯಿತಿ. ವೇಮೂರು ವಿಧಾನಸಭಾ ಕ್ಷೇತ್ರದಲ್ಲಿದೆ. ಈ ಚುಂಡೂರು ಬ್ರಿಟಿಷರ ಕಾಲದಲ್ಲಿ ಹಲವು ಯೋಜನೆಗಳನ್ನು ಕಂಡ ಗ್ರಾಮವಾಗಿತ್ತು. ಮದ್ರಾಸ್-ಕಲಕತ್ತಾ ರೈಲು ಮಾರ್ಗ ಈ ಗ್ರಾಮದ ಪಕ್ಕದಲ್ಲಿಯೇ ಹಾದುಹೋಗುತ್ತಿತ್ತು. ಈ ಕಾರಣವಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನೂ ಚುಂಡೂರಿನ ಜನ ಭೇಟಿಯಾಗಿದ್ದರು. ಬ್ರಿಟಿಷರು ಇಲ್ಲೊಂದು ಪೊಲೀಸ್ ಠಾಣೆಯನ್ನೂ ಸಹ ತೆರೆದಿದ್ದರು. ಇಡೀ ಗುಂಟೂರು ಜಿಲ್ಲೆಯ ಭೂಮಿಯೆಲ್ಲಾ ಕೃಷ್ಣಾ ನದಿಯಿಂದ ಹಚ್ಚಹಸಿರಾಗಿತ್ತು. ಈ ಭೂಮಿಯೆಲ್ಲ ರೆಡ್ಡಿಗಳ ಪಾಲಾಗಿತ್ತು. ಹಾಗೆಯೇ ಚುಂಡೂರಿನ ಸುಮಾರು 3000 ಎಕರೆ ಜಮೀನಿನಲ್ಲಿ ಬರೋಬ್ಬರಿ 2500 ಎಕರೆ ಜಮೀನು ರೆಡ್ಡಿ ಭೂಮಾಲೀಕರದ್ದಾಗಿತ್ತು. ಅವರ ಜಮೀನುಗಳಲ್ಲಿನ ದಲಿತರು ಕೂಲಿಗಳಾಗಿ ಕೆಲಸ ನಿರ್ವಹಿಸುತ್ತಿದ್ದರು. ಭೂಮಾಲೀಕತೆಯ ವಿಚಾರದಲ್ಲಿ ಅಲ್ಲಿನ ಪರಿಸ್ಥಿತಿ ಇಂದಿಗೂ ಹಾಗೆಯೇ ಇದೆ. ಆದರೆ ದಲಿತರು ಗ್ರಾಮ ತೊರೆದು ಪಟ್ಟಣ ಸೇರಿಕೊಂಡಿದ್ದಾರೆ.

ಇಂದಿಗೂ ಚುಂಡೂರಿನ ದಲಿತರು ಹಾಗೂ ದಲಿತೇತರ ವಸತಿಗಳು ಪ್ರತ್ಯೇಕವಾಗಿಯೇ ಉಳಿದಿವೆ. ಚುಂಡೂರಿನ ಮಧ್ಯಭಾಗದಲ್ಲಿ ಹಾದುಹೋಗಿರುವ ರಸ್ತೆಯ ಎರಡೂ ಬದಿಗಳಲ್ಲಿ ಈ ಎರಡು ಸಮುದಾಯಗಳು ಪ್ರತ್ಯೇಕವಾಗಿ ಜೀವಿಸುತ್ತಿವೆ.

ಆಗಸ್ಟ್ 6 ರಂದು ಆಗಿದ್ದೇನು?

1991 ಜುಲೈ 7ರಂದು ಚುಂಡೂರಿನ ದಲಿತ ಯುವಕರು ಸಿನೆಮಾ ನೋಡಲು ಥಿಯೇಟರಿಗೆ
ಹೋಗಿರುತ್ತಾರೆ. ಅಂದು ದಲಿತ ಯುವಕ ತನ್ನ ಕಾಲುಗಳನ್ನು ಚಾಚಿಕೊಂಡಾಗ ಅಕಸ್ಮಿಕವಾಗಿ ರೆಡ್ಡಿ ಭೂಮಾಲೀಕನ ಮಗ ಶ್ರೀನಿವಾಸರೆಡ್ಡಿಗೆ ತಗಲುತ್ತದೆ. ಇದೇ ವಿಚಾರಕ್ಕೆ ಆ ಎರಡು ಗುಂಪುಗಳ ನಡುವೆಯೂ ಗಲಾಟೆಗಳಾಗುತ್ತವೆ. ದಲಿತ ಯುವಕರು ರೆಡ್ಡಿ ಯುವತಿಯರೊಂದಿಗೆ ಅಸಭ್ಯವಾಗಿ ನಡೆದುಕೊಂಡರೆಂಬ ಸುಳ್ಳನ್ನು ಸಹ ಹರಿಯಬಿಡಲಾಗುತ್ತದೆ.

ರೆಡ್ಡಿಗಳು ಈ ರೀತಿಯ ಊಹಾಪೋಹವನ್ನು ಹರಡಿ ದಲಿತರ ಮೇಲೆ ಮುಗಿ ಬೀಳಬೇಕೆಂದುಕೊಂಡದ್ದರ ಹಿಂದೆ ದಲಿತರು ಪಡೆದ ಸಾಮಾಜಿಕ-ಆರ್ಥಿಕ-ಧಾರ್ಮಿಕ ಮೇಲ್ಚನೆಯೇ ಮುಖ್ಯ ಕಾರಣವಾಗಿದೆ. ಸುಮಾರು 500 ಕುಟುಂಬಗಳಿದ್ದ ದಲಿತರಲ್ಲಿ ಬಾಬಾಸಾಹೇಬ್ ಅಂಬೇಡ್ಕರ್‌ರವರ ಪ್ರಭಾವ 80ರ ದಶಕದಲ್ಲಿ ಹೆಚ್ಚಾಯಿತು. ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳು ಸ್ವಾಭಿಮಾನ ತುಂಬಿದವು. ಕೇವಲ 10 ವರ್ಷಗಳ ಹಿಂದೆ ರೆಡ್ಡಿ ಭೂಮಾಲೀಕರ ಹೊಲಗಳಲ್ಲಿ ಜೀತಗಾರಿಕೆ ಮಾಡುತ್ತಿದ್ದ ದಲಿತರ ಮಕ್ಕಳು ಅಂದು ವಿದ್ಯಾವಂತರಾಗಿ ಸರ್ಕಾರಿ ಉದ್ಯೋಗ ಪಡೆದುಕೊಂಡಿದ್ದು ಕಡಿಮೆ ಅಕ್ಷರಸ್ಥರಾಗಿದ್ದ ರೆಡ್ಡಿ ಮತ್ತು ಕಾಪುಗಳಲ್ಲಿ ಅಸೂಯೆ ಮೂಡಿಸಿತು. ದಲಿತರು ಕ್ರೈಸ್ತ ಧರ್ಮ ಸ್ವೀಕರಿಸುತ್ತಿದ್ದದ್ದನ್ನು ಸಹಿಸದಾದರು. ಆ ಕಾಲಕ್ಕೆ ರೈಲ್ವೇ ಇಲಾಖೆಯಲ್ಲಿ ಚುಂಡೂರಿನ 300ಕ್ಕೂ ಹೆಚ್ಚು ಯುವಕರು ಕೆಲಸಕ್ಕೆ ಸೇರಿಕೊಂಡಿದ್ದರು. ಬ್ಯಾಂಕು ಹಾಗೂ ಕಂದಾಯ ಇಲಾಖೆಯಲ್ಲಿಯೂ ಕೆಲಸ ಗಿಟ್ಟಿಸಿಕೊಂಡರು. ಇದರಿಂದಾಗಿ ದಲಿತ ಯುವಕರು ಪಾರಂಪರಿಕ ಚಾಕರಿಗಳನ್ನು ಕೈಬಿಟ್ಟರು. ತಮ್ಮ ತಂದೆತಾಯಂದಿರು ಬಳಲಿದ್ದ ಜೀತಗಾರಿಕೆಯಿಂದ ದೂರವೇ ಉಳಿದರು. ದಲಿತರಲ್ಲಿ ಈ ಸ್ವಾಭಿಮಾನವನ್ನು ಬಗ್ಗುಬಡಿಯಲು ಹಾಗೂ ಬುದ್ಧಿ ಕಲಿಸಲು ಹೊಂಚುಹಾಕುತ್ತಿದ್ದ ಮೇಲ್ಜಾತಿ ಭೂಮಾಲೀಕರಿಗೆ ಸಿನೆಮಾ
ಥಿಯೇಟರಿನ ಪ್ರಸಂಗ ಒಂದು ಕಾರಣವಾಗಿತ್ತು.

ಈ ಘಟನೆಯ ನಂತರ ಪದೇಪದೇ ದಲಿತರ ಮೇಲೆ ಮೇಲ್ಜಾತಿ ರೆಡ್ಡಿ ಭೂಮಾಲೀಕರು ಜಗಳಕ್ಕೆ ಇಳಿದರು. ಇಡೀ ಸಮುದಾಯವನ್ನೇ ಬಹಿಷ್ಕರಿಸಿದರು. ಆದರೆ ಅಷ್ಟಕ್ಕೂ ತಲೆಬಾಗದ ದಲಿತರಿಗೆ ಮೇಲ್ಜಾತಿ ಪರಂಪರೆಯಲ್ಲಿಯೇ ಹಾಸು ಹೊಕ್ಕಾಗಿರುವ ’ಬುದ್ಧಿ ಕಲಿಸೋಣ’ ಎಂಬ ಅಹಂಕಾರ ಬಹಿರಂಗವಾಯಿತು. ಆಗಸ್ಟ್ 6ರಂದು ಸಂಜೆ ದಲಿತರ ಕೇರಿಗೆ ಬಂದ ಪೊಲೀಸರು, ’ರೆಡ್ಡಿ’ ಭೂಮಾಲೀಕರು ’ನಿಮ್ಮ ಮೇಲೆ ಮುಗಿಬೀಳುವವರಿದ್ದಾರೆ, ಕೂಡಲೇ ಊರು ಬಿಟ್ಟು ಹೊರಡಿ’ ಎಂದು ಹೇಳಿದರು. ಆದರೆ ದಲಿತ ಯುವಕರು ಬೆದರಿಕೆಗೆ ಜಗ್ಗಲಿಲ್ಲ. ಪೊಲೀಸರು ಸುಮ್ಮನಿರಲಿಲ್ಲ. ಮನೆಮನೆಗೆ ನುಗ್ಗಿ ದಲಿತರನ್ನು ಲಾಟಿಯಿಂದ ಥಳಿಸುತ್ತಾ ಹೊರ ಓಡಿಸಿದರು. ಇದು ಯಾಕೆ ಹೀಗೆ ಎಂದು ಅರ್ಥವಾಗುವಷ್ಟರಲ್ಲಿ ದಲಿತ ಯುವಕರನ್ನು ರೆಡ್ಡಿ ಭೂಮಾಲೀಕರು ಶಸ್ತ್ರಾಸ್ತ್ರಗಳನ್ನು ಹಿಡಿದು ಸುತ್ತುವರಿದರು. ಸಿಕ್ಕಸಿಕ್ಕ ದಲಿತ ಯುವಕರನ್ನು ಕೊಚ್ಚುತ್ತಾ ಹೋದರು. ಕೆಲವರ ದೇಹವನ್ನು ಅಕ್ಷರಶಃ ಸೀಳಿ ದಿಕ್ಕುದಿಕ್ಕುಗಳಿಗೆ ಎಸೆದರೆಂದು ಕಣ್ಣಾರೆ ಕಂಡ ದಯಾರಿ ಧನರಾಜ್ ಹೇಳುತ್ತಾರೆ. ತನ್ನ ಕುಟುಂಬದ ಮೂವರನ್ನು ಕಳೆದುಕೊಂಡ ಜಲಾಡಿ ಮೋಸಸ್ ಕಣ್ಣೀರಾಕುತ್ತಾರೆ. ಕೃಷ್ಣ ನದಿಯ ಕಾಲುವೆಗಳಲ್ಲಿ ಅಂದು ತುಂಡುತುಂಡಾಗಿ ಎಸೆಯಲ್ಪಟ್ಟಿದ್ದ ದಲಿತ ಯುವಕರ ಹೆಣಗಳು ಮೂರು ದಿನದ ನಂತರ ಗುರುತು ಪತ್ತೆಹಚ್ಚಲಾಗದ ಸ್ಥಿತಿಯಲ್ಲಿ ದೊರಕುತ್ತವೆ. ಈ ನರಮೇಧದ ನಡುವೆ ಕೊಲೆಗಾರರ ಕೈಗೆ ಸಿಕ್ಕಿದರೂ ಸಾವಿನಿಂದ ತಪ್ಪಿಸಿಕೊಂಡ ಧನರಾಜ್ ಕತೆ ಈ ಜಾತಿವ್ಯಾಧಿಗಳ ಮನಸ್ಥಿತಿಯನ್ನು ಹಾಗೂ ಅವರ ಕ್ರೌರ್ಯವನ್ನು ಜಗಜ್ಜಾಹೀರುಗೊಳಿಸುತ್ತದೆ. ಧನರಾಜನನ್ನು ಹಿಡಿದ ರೆಡ್ಡಿಗಳು ಸರಳಿನಿಂದ ಹೊಡೆದು ಗಾಯಗೊಳಿಸುತ್ತಾರೆ. ಆದರೆ ಸಾಯಿಸುವುದಿಲ್ಲ. ಕೇವಲ ಕಾಲು ತಿರುಚಿ ಮುರಿದು ಅವನನ್ನು ಓಡದಂತೆ ಮಾಡುತ್ತಾರೆ. ಇದಕ್ಕೆ ಕಾರಣ ಅದೇ ಊರಿನ ಮಲ್ಲಿಕಾರ್ಜುನ ರೆಡ್ಡಿಗೆ ಒಂದು ಆಸೆ ಇರುತ್ತದೆ. ಅದೇನೆಂದರೆ ಜೀವಮಾನದಲ್ಲಿ ಒಬ್ಬ ದಲಿತನನ್ನಾದರೂ ಕೊಲೆ ಮಾಡಬೇಕೆಂಬುದು. ಆದರೆ ಅವನು ಕಾಲಿಲ್ಲದವನಾಗಿರುತ್ತಾನೆ. ಹಾಗಾಗಿ ಅವನ ಆಸೆ ತೀರಿಸಲು ಧನರಾಜನ ಕಾಲು ಮುರಿದು ಮಲ್ಲಿಕಾರ್ಜುನ ರೆಡ್ಡಿಯನ್ನು ಕರೆದುಕೊಂಡು ಬರಲು ಗುಂಪು ಹೋಗಿರುತ್ತದೆ. ಆದರೆ ಅದೃಷ್ಟವಶಾತ್ ಕೆಲವು ಮಹಿಳೆಯರು ಶ್ರಮವಹಿಸಿ ಧನರಾಜ್‌ನನ್ನು ಉಳಿಸಿಕೊಳ್ಳುತ್ತಾರೆ.

ಹೀಗೆ ಅಂದು ರೆಡ್ಡಿಗಳು ಹಾಗೂ ಕಾಪುಗಳು ನಡೆಸಿದ ದಲಿತರ ನರಮೇಧದಲ್ಲಿ ಎಂಟು ಜನ ದಲಿತರನ್ನು ಕೊಲೆ ಮಾಡಲಾಗುತ್ತದೆ. ಅದೆಷ್ಟು ಕ್ರೂರವಾಗಿ ಕೊಂದಿರುತ್ತಾರೆಂದರೆ ಆ ದೇಹಗಳನ್ನು ಶವಪರೀಕ್ಷೆ ಮಾಡಿದ ವೈದ್ಯ ಮನನೊಂದು ಆತ್ಮಹತ್ಯೆ ಮಾಡಿಕೊಂಡನಂತೆ! ಒಂದು ಶವವೂ ಸಹ ಪೂರ್ಣಪ್ರಮಾಣದಲ್ಲಿ ದೊರೆತಿರಲಿಲ್ಲ!

ಸೆಷನ್ ಕೋರ್ಟ್ 21 ರೆಡ್ಡಿಗಳಿಗೆ ಜೀವಾವಧಿ ಶಿಕ್ಷೆಯನ್ನೂ 35 ಮಂದಿಗೆ ಒಂದು ವರ್ಷ ಜೈಲು ಶಿಕ್ಷೆಯನ್ನೂ ವಿಧಿಸಿತ್ತು. ಆದರೆ 2014ರಲ್ಲಿ ಆಂಧ್ರಪ್ರದೇಶದ ಹೈಕೋರ್ಟ್ ಈ ಮೇಲಿನ ತೀರ್ಪನ್ನು ಅನೂರ್ಜಿತಗೊಳಿಸಿ ಎಲ್ಲರನ್ನೂ ಬಿಡುಗಡೆಗೊಳಿಸಿತು. ನಂತರ ಈ ಪ್ರಕರಣ ಸುಪ್ರೀಂ ಕೋರ್ಟ್‌ಗೆ ತೆರಳಿತಾದರೂ, ಅಲ್ಲಿಯೂ ದಲಿತರಿಗೆ ನ್ಯಾಯ ಸಿಗದೇ ಏದುಸಿರುಬಿಟ್ಟಿತು.


ಇದನ್ನೂ ಓದಿ: ಮಾತು ಮರೆತ ಭಾರತ; ಕಾರಂಚೇಡು ಫೈಲ್ : ದಲಿತರ ಮೇಲೆ ಶೂದ್ರರ ಅಟ್ಟಹಾಸ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಬಿಜೆಪಿ ಅಭ್ಯರ್ಥಿಯ ಬೆಂಗಾವಲು ವಾಹನ ಢಿಕ್ಕಿ: ಇಬ್ಬರು ಮೃತ್ಯು

0
ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರ ಪುತ್ರ ಕೈಸರ್‌ಗಂಜ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕರಣ್‌ ಭೂಷಣ್‌ ಸಿಂಗ್‌ ಅವರ ಬೆಂಗಾವಲು ವಾಹನ ಡಿಕ್ಕಿ ಹೊಡೆದ ಪರಿಣಾಮ...