ಕೇರಳದ ಕೊಲ್ಲಂನಲ್ಲಿ ನೀಟ್ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಯರನ್ನು ಬ್ರಾ ತೆಗೆಯುವಂತೆ ಕೇಳಿದ ಮೂವರು ಸೇರಿದಂತೆ ಒಟ್ಟು ಐವರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಕೇರಳ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದೆ. ಪರೀಕ್ಷೆಗೂ ಮುನ್ನ ಅವಮಾನಕರವಾಗಿ ತಪಾಸಣೆಗೆ ಒಳಗಾದ ಮೂವರು ವಿದ್ಯಾರ್ಥಿನಿಯರು ಪೊಲೀಸರಿಗೆ ಮೂರು ನೀಡಿದ್ದಾರೆ.
ಈ ಬಗ್ಗೆ ಮೊದಲು ದೂರು ನೀಡಿದ್ದ ವಿದ್ಯಾರ್ಥಿನಿಯ ಆರೋಪಗಳನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ನಿರಾಕರಿಸಿದೆ. ದೂರನ್ನು ‘ಕಾಲ್ಪನಿಕ ಮತ್ತು ತಪ್ಪು ಉದ್ದೇಶದಿಂದ ದಾಖಲಿಸಲಾಗಿದೆ’ ಎಂದು ಕೊಲ್ಲಂನಲ್ಲಿರುವ ನೀಟ್ ಪರೀಕ್ಷಾ ಕೇಂದ್ರದ ಅಧೀಕ್ಷಕರು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸೋಮವಾರದಂದು 17 ವರ್ಷದ ಬಾಲಕಿಯ ತಂದೆಯೊಬ್ಬರು ಮಾಧ್ಯಮಗಳ ಮುಂದೆ ಬಂದು ಈ ಬಗ್ಗೆ ಹೇಳಿಕೆ ನೀಡಿದಾಗ ವಿವಾದವು ಬೆಳಕಿಗೆ ಬಂದಿತ್ತು. ಅವರು, “ನನ್ನ ಮಗಳು ಮೊದಲ ಬಾರಿಗೆ ನೀಟ್ ಪರೀಕ್ಷೆಯನ್ನು ಬರೆದಿದ್ದಾರೆ. ಅವರು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮೊದಲು ಒಳವಸ್ತ್ರಗಳನ್ನು ತೆಗೆಯುವಂತೆ ಕೇಳಲಾಯಿತು. ಪರೀಕ್ಷೆಯ ಮೂರು ಗಂಟೆಗಳ ಕಾಲ ಒಳ ಉಡುಪು ಧರಿಸದೇ ಕುಳಿತಿದ್ದರು. ಪರೀಕ್ಷೆಗೆ ಕುಳಿತ ‘ಆಘಾತಕಾರಿ ಅನುಭವ’ದಿಂದ ಇನ್ನೂ ಚೇತರಿಸಿಕೊಂಡಿಲ್ಲ” ಎಂದು ಹೇಳಿದ್ದಾರೆ.
ಪರೀಕ್ಷಾ ಕೇಂದ್ರವಾದ ಮಾರ್ ಥೋಮಾ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿಯಲ್ಲಿ ಭದ್ರತಾ ತಪಾಸಣೆ ನಡೆಸುತ್ತಿದ್ದಾಗ ಒಳವಸ್ತ್ರಕ್ಕೆ ಲೋಹಗಳ ಕೊಕ್ಕೆಗಳು ಇದ್ದುದರಿಂದ ಬಾಲಕಿಯ ಬ್ರಾ ತೆಗೆಯುವಂತೆ ಹೇಳಲಾಗಿತ್ತು ಎಂದು ತಂದೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಕೇರಳ-ನೀಟ್ ಕೇಂದ್ರದಲ್ಲಿ ವಿದ್ಯಾರ್ಥಿನಿಯರಿಗೆ ಒಳವಸ್ತ್ರ ತೆಗೆಯುವಂತೆ ಒತ್ತಾಯ; ಪ್ರಕರಣ ದಾಖಲು
“ಒಳಉಡುಪು ನಿಮ್ಮ ಭವಿಷ್ಯಕ್ಕಿಂತ ದೊಡ್ಡದೆ? ಅದನ್ನು ತೆಗೆದುಹಾಕಿ, ನಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. 90% ವಿದ್ಯಾರ್ಥಿನಿಯರು ತಮ್ಮ ಒಳ ವಸ್ತ್ರಗಳನ್ನು ತೆಗೆದು ಸ್ಟೋರ್ ರೂಂನಲ್ಲಿ ಇಡಬೇಕಾಯಿತು” ಎಂದು ಭದ್ರತಾ ಸಿಬ್ಬಂದಿ ಹೇಳಿದ್ದಾರೆ ಎಂದು ಬಾಲಕಿಯ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆದರೆ ಪರೀಕ್ಷಾ ಕೇಂದ್ರವು ಬಾಲಕಿಯ ತಂದೆಯ ಆರೋಪವನ್ನು ನಿರಾಕರಿಸಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ, “NEET ಡ್ರೆಸ್ ಕೋಡ್ ಅಭ್ಯರ್ಥಿಯ ಪೋಷಕರು ಆಪಾದಿಸುವ ಯಾವುದೇ ಚಟುವಟಿಕೆಯನ್ನು ಅನುಮತಿಸುವುದಿಲ್ಲ” ಎಂದು ಇಂದು ಹೇಳಿದೆ.
ಘಟನೆಯ ಕುರಿತು ಕೇರಳದ ಉನ್ನತ ಶಿಕ್ಷಣ ಸಚಿವೆ ಆರ್. ಬಿಂದು ಅವರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದಿದ್ದು, ಪರೀಕ್ಷಾ ಹಾಲ್‌ಗೆ ಪ್ರವೇಶಿಸುವ ಮೊದಲು ಹುಡುಗಿಯರನ್ನು ಅವರ ಬ್ರಾ ತೆಗೆಯುವಂತೆ ಒತ್ತಾಯಿಸಿದ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ನೀಟ್ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಯರ ಘನತೆ ಮತ್ತು ಗೌರವದ ಮೇಲೆ ದಾಳಿ ನಡೆಸಿದ್ದಕ್ಕೆ ಅವರು ನಿರಾಶೆ ಮತ್ತು ಆಘಾತ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಲವಂತವಾಗಿ 68 ಹುಡುಗಿಯರ ಒಳವಸ್ತ್ರ ತೆಗೆಸಿ ಅವಮಾನ ಮಾಡಿದ ಪ್ರಾಂಶುಪಾಲೆ: ಗುಜರಾತಿನ ಕಾಲೇಜಿನಲ್ಲೊಂದು ಆಘಾತಕಾರಿ ಘಟನೆ
“ಈ ಅನಿರೀಕ್ಷಿತ ಘಟನೆಯ ಅವಮಾನ ಮತ್ತು ಆಘಾತವು ವಿದ್ಯಾರ್ಥಿಗಳ ನೈತಿಕತೆ ಮತ್ತು ಸ್ಥೈರ್ಯದ ಮೇಲೆ ಪರಿಣಾಮ ಬೀರಿದೆ. ಅದರ ಪರಿಣಾಮವಾಗಿ ಪರೀಕ್ಷೆಯಲ್ಲಿನ ಕಾರ್ಯಕ್ಷಮತೆಯು ಪರಿಣಾಮ ಬೀರುತ್ತದೆ. ದುಷ್ಕೃತ್ಯ ಎಸಗಿದವರ ವಿರುದ್ದ ತೀವ್ರ ಕ್ರಮ ಜರುಗಿಸಿ” ಎಂದು ಸಚಿವೆ ಪತ್ರದಲ್ಲಿ ಹೇಳಿದ್ದಾರೆ.
ಭದ್ರತಾ ತಪಾಸಣೆ ನಡೆಸಿ ಒಳ ಉಡುಪನ್ನು ತೆಗೆಯುವಂತೆ ಹೇಳಿದವರ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


