Homeಕರ್ನಾಟಕವಿ.ಕೆ.ಅತ್ರೆ ಸಮಿತಿ ಶಿಫಾರಸು: ವಿವಿಗಳ ಸ್ವಾಯತ್ತತೆಗೆ ವಿಪತ್ತು

ವಿ.ಕೆ.ಅತ್ರೆ ಸಮಿತಿ ಶಿಫಾರಸು: ವಿವಿಗಳ ಸ್ವಾಯತ್ತತೆಗೆ ವಿಪತ್ತು

- Advertisement -
- Advertisement -

“ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತು ದೊರಕಬೇಕಾದರೆ, ಅಧಿಕಾರ ಸ್ಥಳೀಯವಾಗುತ್ತಾ ಹೋಗಬೇಕು” ಎಂಬ ವ್ಯವಸ್ಥೆಯನ್ನು ಕಟ್ಟಿಕೊಂಡವರು ನಾವು. ಶಿಕ್ಷಣ, ಆರೋಗ್ಯ, ಪೌರಾಡಳಿತ- ಹೀಗೆ ಎಲ್ಲದರಲ್ಲೂ ವಿಕೇಂದ್ರೀಕರಣವನ್ನು ಚಿಂತಿಸಿದೆವು. ಈ ವಿಚಾರದಲ್ಲಿ ಕರ್ನಾಟಕ ಇಡೀ ದೇಶದಲ್ಲೇ ಮಾದರಿಯಾಗಿದ್ದೂ ಉಂಟು. ಆದರೆ, ಯಾವುದನ್ನು ಜತನವಾಗಿ ಉಳಿಸಿಕೊಂಡು ಬರುತ್ತಿದ್ದೆವೋ ಅದನ್ನು ಇತ್ತೀಚಿನ ವರ್ಷಗಳಲ್ಲಿ ಪ್ರಭುತ್ವ ಒಡೆದು ಹಾಕುವ ಕೆಲಸವನ್ನು ಬಹಳ ವ್ಯವಸ್ಥಿತವಾಗಿ ಮಾಡುತ್ತಿದೆ. ಕಾಂಗ್ರೆಸ್ ನಿಧಾನಗತಿಯಲ್ಲಿ ಮಾಡುತ್ತಿದ್ದ ಕೇಂದ್ರೀಕರಣ, ಈಗ ಶರವೇಗ ಪಡೆದುಕೊಳ್ಳುತ್ತಿದೆ.

ವಿಶ್ವವಿದ್ಯಾನಿಲಯಗಳು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಕಾಲೇಜು ಕ್ಯಾಂಪಸ್‌ಗಳು ಹೊಸ ಚಿಂತನೆಗಳ ಕೇಂದ್ರಗಳಾಗುತ್ತಿದ್ದ ಕಾಲವೊಂದಿತ್ತು. ಈಗಲೂ ಅದೆಲ್ಲ ಸಾಧ್ಯ. ಆದರೆ ಆಲೋಚನೆಗಳಿಗೆ ಸರಪಳಿ ಹಾಕುವ, ಎಲ್ಲವನ್ನೂ ಸರ್ಕಾರದ ಸಿಸಿ ಟಿವಿಯ ಕಾವಲಿನಲ್ಲಿಡುವ, ಭಿನ್ನ ಚಿಂತನೆಗಳಿರುವವರಿಗೆ ಕಿರುಕುಳ ಕೊಡುವ ಪ್ರವೃತ್ತಿಗಳು ಹೆಚ್ಚಾಗಿವೆ. ಹೇಗಾದರೂ ಮಾಡಿ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ತನ್ನ ಆಣತಿಯಲ್ಲಿಟ್ಟುಕೊಳ್ಳಲು ಪ್ರಭುತ್ವ ಯೋಚಿಸುತ್ತಿದೆ. ವಿವಿಗಳಿಗಿರುವ ಸ್ವಾಯತ್ತತೆಯನ್ನು ಬಲಿತೆಗೆದುಕೊಳ್ಳಲು ಹಲವು ವರ್ಷಗಳಿಂದ ಪ್ರಯತ್ನಿಸುತ್ತಲೇ ಇದೆ. ಅದರ ಮುಂದುವರಿದ ಭಾಗವಾಗಿ ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆಯನ್ನು ಮುಗಿಸಿಹಾಕುವ ಮಸೂದೆಯನ್ನು ರಾಜ್ಯ ಸರ್ಕಾರ ರೂಪಿಸುವುದನ್ನು ಕಾಣಬಹುದು.

ಏನಿದು ಮಸೂದೆ? ಆತಂಕ ಏಕೆ?

ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ವಿಧೇಯಕ 2017ನ್ನು ಪುನರ್ ಪರಿಷ್ಕರಿಸಿ, ಸದರಿ ವಿಧೇಯಕದಲ್ಲಿ ಸೇರಿಸಬೇಕಾದ ಹಾಗೂ ಬದಲಾವಣೆ ಮಾಡಬೇಕಾದ ಅಂಶಗಳ ಬಗ್ಗೆ ಪರಿಶೀಲಿಸಿ ವರದಿ ನೀಡಲು ವಿಜ್ಞಾನಿ ಡಾ.ವಾಸುದೇವ ಕೆ. ಅತ್ರೆ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಸರ್ಕಾರ ರಚಿಸಿತು. ಆ ಸಮಿತಿ ನೀಡಿರುವ ವರದಿಯನ್ನು ಉನ್ನತ ಶಿಕ್ಷಣ ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.

ಡಾ.ವಾಸುದೇವ ಕೆ. ಅತ್ರೆ

’ಕರ್ನಾಟಕ ಸ್ಟೇಟ್ ಪಬ್ಲಿಕ್ ಹೈಯರ್ ಎಜುಕೇಷನ್ ಇನ್‌ಸ್ಟಿಟ್ಯೂಷನ್ಸ್ ಬಿಲ್- 2022’ ರೂಪಿಸಲಾಗಿದೆ. ಜನರು ತಮ್ಮ ಅಭಿಪ್ರಾಯವನ್ನು ಕಳುಹಿಸಲು ಹದಿನೈದು ದಿನಗಳ ಗಡುವು ಕೂಡ ನೀಡಿ, ಉನ್ನತ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಮಸೂದೆಯನ್ನು ಅಪ್‌ಲೋಡ್ ಮಾಡಲಾಗಿದೆ. ಈ ಮಸೂದೆಯು ವಿವಿಗಳ ಸಾಂಸ್ಥಿಕ ರಚನೆಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರಲು ಮುಂದಾಗಿದೆ.

ವರದಿಯ ಪ್ರಕಾರ

ವಿಶ್ವವಿದ್ಯಾನಿಲಯ ಅಥವಾ ಕಾಲೇಜನ್ನು ’ಉನ್ನತ ಶಿಕ್ಷಣ ಸಂಸ್ಥೆ’ ಎಂದು ಕರೆಯಲಾಗುತ್ತದೆ. ಉನ್ನತ ಶಿಕ್ಷಣ ಸಂಸ್ಥೆಯಡಿ ಅಂತರ್ ಶಿಸ್ತೀಯ ವಿಶ್ವವಿದ್ಯಾಲಯಗಳು, ಕಾಲೇಜುಗಳು, ಉನ್ನತ ಶಿಕ್ಷಣ ಸಂಸ್ಥೆಯ ಕ್ಲಸ್ಟರ್‌ಗಳು, ಜ್ಞಾನ ಕೇಂದ್ರಗಳು ಬರುತ್ತವೆ.

ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮೂರು ವಿಧವಾಗಿ ವಿಂಗಡಿಸಲಾಗಿದೆ. 1. ಗಂಭೀರ ಸಂಶೋಧನೆಗಳಿಗೆ ಆದ್ಯತೆ ನೀಡುವ ’ರಿಸರ್ಚ್ ಇಂಟೆನ್ಸಿವ್ ಯುನಿವರ್ಸಿಟೀಸ್. 2. ಬೋಧನೆಗೆ ಆದ್ಯತೆ ನೀಡುವ ಟೀಚಿಂಗ್ ಇಂಟೆನ್ಸಿವ್ ಯುನಿವರ್ಸಿಟೀಸ್. 3. ಪದವಿಗಳನ್ನು ನೀಡುವ, ಬೋಧನೆಗೆ ಆದ್ಯತೆ ನೀಡುವ ಸ್ವಾಯತ್ತ ಪದವಿ ಕಾಲೇಜುಗಳು.

ಸೆನೆಟ್, ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಬದಲು ’ಅಕಾಡೆಮಿಕ್ ಸೆನೆಟ್’, ’ಬೋರ್ಡ್ ಆಫ್ ಗವರ್ನರ್ಸ್’ ಎಂದು ಕರೆಯುವುದು. ’ಫ್ಯಾಕಲ್ಟಿ’ಗಳನ್ನು ’ಸ್ಕೂಲ್ಸ್’ ಎಂದು ಕರೆಯುವುದು.

ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು ಅಂತರ್‌ಶಿಸ್ತೀಯ ಸಂಸ್ಥೆಗಳಾಗಿ ರೂಪುಗೊಳ್ಳಬೇಕು. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತದ ಜೊತೆಗೆ ಮಾನವಿಕ ವಿಷಯಗಳನ್ನು ಅಳವಡಿಸಿಕೊಳ್ಳಬೇಕು.

ವಿಶ್ವವಿದ್ಯಾನಿಲಯದ ಕುಲಪತಿಗಳನ್ನು ’ಮುಖ್ಯ ಕಾರ್ಯ ನಿರ್ವಾಹಕ ಮತ್ತು ಅಕಾಡೆಮಿಕ್ ಅಧಿಕಾರಿ’ಯಾಗಿ ಪರಿಗಣಿಸಲಾಗುತ್ತದೆ.

ಇದೆಲ್ಲಕ್ಕಿಂತ ಹೆಚ್ಚಾಗಿ ಆತಂಕಪಡಬೇಕಾದ ಒಂದು ಸಂಗತಿ ಇದೆ. ಅದೇನೆಂದರೆ ಒಂದು ವೇಳೆ ಈ ಮಸೂದೆ ಕಾಯ್ದೆಯಾಗಿ ಬದಲಾದರೆ ವಿಶ್ವವಿದ್ಯಾನಿಲಯಗಳಿಗೆ ಸಂಬಂಧಿಸಿದ ಅನೇಕ ಕಾಯ್ದೆಗಳು ನಿಷ್ಕ್ರಿಯಗೊಳ್ಳಲಿವೆ. ಕರ್ನಾಟಕ ವಿಶ್ವವಿದ್ಯಾನಿಲಯಗಳ ಕಾಯ್ದೆ 2000, ಕನ್ನಡ ವಿಶ್ವವಿದ್ಯಾನಿಲಯ ಕಾಯ್ದೆ 1991, ವಿಟಿಯು ಕಾಯ್ದೆ 1994, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಕಾಯ್ದೆ 1992, ಡಾ.ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯ ಕಾಯ್ದೆ 2009, ಸಂಸ್ಕೃತ ವಿಶ್ವವಿದ್ಯಾನಿಲಯ ಕಾಯ್ದೆ 2009, ಜಾನಪದ ವಿಶ್ವವಿದ್ಯಾನಿಲಯ ಕಾಯ್ದೆ 2011, ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಕಾಯ್ದೆ 2018 ಸೇರಿದಂತೆ ಹಲವು ವಿವಿಗಳಿಗೆ ಸೇರಿದ ಕಾಯ್ದೆಗಳು ಲೆಕ್ಕಕ್ಕಿಲ್ಲದಂತಾಗುತ್ತವೆ.

ವಿ.ಕೆ.ಅತ್ರೆ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೊಳಿಸಿದರೆ ಇಡೀ ಉನ್ನತ ಶಿಕ್ಷಣ ವ್ಯವಸ್ಥೆ ತನ್ನ ಅರ್ಥವ್ಯಾಪ್ತಿಯನ್ನು ಕಳೆದುಕೊಳ್ಳುತ್ತದೆ ಮತ್ತು ವಿಶ್ವವಿದ್ಯಾನಿಲಯಗಳು ಬಹುಮುಖಿ ಜ್ಞಾನ ಕೇಂದ್ರಗಳಾಗಿ ಉಳಿಯುವುದಿಲ್ಲ; ಏಕಮುಖ ಆಡಳಿತ ವ್ಯವಸ್ಥೆ, ಏಕಮುಖ ಪಠ್ಯಕ್ರಮವನ್ನು ಹೊಂದಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಶಿಕ್ಷಣ ತಜ್ಞರು.

ಏಕಮುಖ ವ್ಯವಸ್ಥೆ: ಪ್ರೊ.ಎಸ್.ಚಂದ್ರಶೇಖರ್

’ನ್ಯಾಯಪಥ’ದ ಜೊತೆ ಮಾತನಾಡಿದ ಗುಲ್ಬರ್ಗಾ ಕೇಂದ್ರೀಯ ವಿಶ್ವವಿದ್ಯಾಲಯ ವಿಶ್ರಾಂತ ಸಮ-ಕುಲಪತಿ ಪ್ರೊ. ಎಸ್.ಚಂದ್ರಶೇಖರ್, “ಸಾಮಾನ್ಯ ವಿಶ್ವವಿದ್ಯಾನಿಲಯ ಕಾಯ್ದೆ ತರಬೇಕೆಂಬ ಪ್ರಸ್ತಾವನೆ ಬಹಳ ಹಿಂದಿನಿಂದಲೂ ಇದೆ. ಈ ರೀತಿಯ ಕಾಯ್ದೆ ಬಂದರೆ ನಾವು ಯಾವುದನ್ನು ವೈಶಿಷ್ಟ್ಯ ಎನ್ನುತ್ತೇವೋ ಅದು ಇಲ್ಲವಾಗಿ ಮುಖರಹಿತರಾಗುತ್ತೇವೆ ಅಥವಾ ಎಲ್ಲರಿಗೂ ಒಂದೇ ಮುಖ ಎಂಬಂತಾಗುತ್ತದೆ. ಎಲ್ಲರಿಗೂ ಒಂದೇ ಮುಖವೆಂದಾದರೆ- ಅಪರಾಧಿ ಯಾರು? ಆಪಾದಿತ ಯಾರು? ಕೊಲೆಯಾದವನು ಯಾರು? ಇದ್ಯಾವುದೂ ಗೊತ್ತಾಗುವುದಿಲ್ಲ ಅಲ್ಲವೇ? ಕನ್ನಡ ವಿವಿ ಆಕ್ಟ್, ಕೃಷಿ ವಿವಿ ಆಕ್ಟ್, ಪಶುವೈದ್ಯ ವಿವಿ ಆಕ್ಟ್, ತೋಟಗಾರಿಕಾ ವಿವಿ ಆಕ್ಟ್- ಎಲ್ಲವೋ ಒಂದೇ ಎಂದು ಪರಿಗಣಿಸಲು ಹೊರಟಿದ್ದಾರೆ” ಎಂದು ವಿಷಾದಿಸಿದರು.

ಪ್ರೊ.ಎಸ್.ಚಂದ್ರಶೇಖರ್

“ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದಾಗಲೂ ಇದೇ ರೀತಿ ಯೋಚನೆ ಮಾಡುತ್ತವೆ. ನಾವು ಈವರೆಗೆ ರೂಪಿಸಿಕೊಂಡಿರುವ ವ್ಯವಸ್ಥೆಗಳೆಲ್ಲ ಸರಿಯಾಗಿದ್ದವು ಎಂದು ನಾನು ಹೇಳುವುದಿಲ್ಲ. ಆದರೆ ಇಂದಿನ ತಪ್ಪುಗಳನ್ನು ಸರಿ ಮಾಡುತ್ತೇವೆ ಎಂದು ಹೊರಟು ಇಡೀ ವ್ಯವಸ್ಥೆಯ ಮುಖವನ್ನೇ ಇಲ್ಲವಾಗಿಸುತ್ತಿದ್ದಾರೆ” ಎಂದು ಎಚ್ಚರಿಸಿದರು.

“ಮೂಲಭೂತವಾದ ವಿರೋಧಾಭಾಸವನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಕಾಣುತ್ತಿದ್ದೇವೆ. ದೇಶದಲ್ಲಿ ಸುಮಾರು 800 ವಿಶ್ವವಿದ್ಯಾನಿಲಯಗಳಿವೆ. ಅದರಲ್ಲಿ 420 ಖಾಸಗಿ ಹಾಗೂ ಡೀಮ್ಡ್ ವಿವಿಗಳು. ಅವುಗಳ ಮೇಲೆ ಸರ್ಕಾರಕ್ಕೆ ಹಿಡಿತವಿಲ್ಲ. ಕೆಲವು ಖಾಸಗಿ ವಿವಿಗಳಿಗೆ ಸರ್ಕಾರ ಅನುದಾನವನ್ನು ಕೊಡುತ್ತದೆ, ಮತ್ತೆ ಕೆಲವಕ್ಕೆ ಒಂದು ಬಿಡಿಗಾಸೂ ನೀಡಲ್ಲ. ಇನ್ನುಳಿದಂತೆ ಸರ್ಕಾರದ ಅಧೀನದಲ್ಲಿರುವ ವಿವಿಗಳಿಗೆ ಅನುದಾನವನ್ನು ನೀಡಲಾಗುತ್ತದೆ. ದುರದೃಷ್ಟವಶಾತ್ ಇತ್ತೀಚಿನ ವರದಿಯ ಪ್ರಕಾರ 175 ಕೋಟಿ ರೂ. ಅನುದಾನವನ್ನು ಬಾಕಿ ಉಳಿಸಿಕೊಂಡು ಧಾರವಾಡ ವಿವಿಗೆ ಸರ್ಕಾರ ಅಲ್ಪಸ್ವಲ್ಪ ಅನುದಾನ ನೀಡಿದೆ. ಕನ್ನಡ ವಿವಿಯಲ್ಲಿ ಸಂಬಳಕ್ಕೂ ದುಡ್ಡಿಲ್ಲ. ಒಂದು ಕಡೆ ಖಾಸಗಿ ವಿಶ್ವವಿದ್ಯಾನಿಲಯಗಳನ್ನು ತೆರೆಯುವುದು, ಮತ್ತೊಂದೆಡೆ ಈ ರೀತಿಯ ಸಾಮಾನ್ಯ ವಿವಿ ಕಾಯ್ದೆಗಳನ್ನು ತರಲು ಮುಂದಾಗುವುದು- ಇದು ಮೂಲಭೂತವಾದ ವಿರೋಧಾಭಾಸ” ಎಂದು ವಿಶ್ಲೇಷಿಸಿದರು.

“ಸಮಗ್ರವಾಗಿ ಅವಲೋಕಿಸಿದರೆ, ದೀರ್ಘಕಾಲೀನವಾದ ದೃಷ್ಟಿಕೋನ ಸರ್ಕಾರಕ್ಕೆ ಇಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ಬೇರೆ ರಾಜ್ಯಗಳಲ್ಲೂ ಇದೇ ಘಟಿಸುತ್ತಿದೆ. ಇದಕ್ಕೆ ಸರ್ಕಾರವಷ್ಟೇ ಅಲ್ಲ, ಸರ್ಕಾರದ ಮನಸ್ಥಿತಿಗೆ ತಕ್ಕಂತೆ ವರದಿ ಕೊಡುವ ಸೋ ಕಾಲ್ಡ್ ಬುದ್ಧಿಜೀವಿಗಳು ಕೂಡ ಕಾರಣ” ಎಂದು ಟೀಕಿಸಿದರು.

’ಏಕಮುಖ ಪಠ್ಯಕ್ರಮ ಜಾರಿಗೆ ಬರಲಿದೆ’

ಹೆಸರು ಹೇಳಲಿಚ್ಛಿಸದ ಪ್ರಾಧ್ಯಾಪಕರೊಬ್ಬರು ಮಾತನಾಡಿ, “ಈ ಮಸೂದೆಯಿಂದಾಗಿ ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆ ಇಲ್ಲವಾಗುತ್ತದೆ. ಕನ್ನಡ ವಿವಿ, ತೋಟಗಾರಿಕಾ ವಿವಿ, ಮಹಿಳಾ ವಿವಿ, ರಾಜೀವ್ ಗಾಂಧಿ ಮೆಡಿಕಲ್ ಯೂನಿವರ್ಸಿಟಿ- ಇಂಥವುಗಳಿಗೆಲ್ಲ ತನ್ನದೇ ಆದ ವೈವಿಧ್ಯತೆಗಳಿವೆ, ಬೈಲಾಗಳಿವೆ. ತನ್ನದೇ ಆದ ಬೈಲಾ ಮೇಲೆ ಈ ವಿವಿಗಳು ನಡೆಯುತ್ತದೆ. ಏಕರೂಪತೆ ಬಂದಾಗ ಪಶುವೈದ್ಯ ವಿವಿಗೂ, ಕನ್ನಡ ವಿವಿಗೂ ಒಂದೇ ಸಿಲಬಸ್ ಎಂದಾಗುತ್ತದೆ. ಏಕರೂಪ ವ್ಯವಸ್ಥೆಯಿಂದಾಗಿ ವಿಶ್ವವಿದ್ಯಾನಿಲಯಗಳ ವೈವಿಧ್ಯತೆ ಹಾಳಾಗುತ್ತದೆ. ಪ್ರಾದೇಶಿಕ ಜ್ಞಾನ ಕಾಣೆಯಾಗುತ್ತದೆ. ಸ್ಥಳೀಯ ಸಾಂಸ್ಕೃತಿಕ ಪರಿಸರವನ್ನೊಳಗೊಂಡ ಪಠ್ಯಕ್ರಮ ಇಲ್ಲವಾಗುತ್ತದೆ. ಜನತಾಂತ್ರಿಕ ಶಿಕ್ಷಣ ವ್ಯವಸ್ಥೆ ಹಾಳಾಗುತ್ತದೆ. ಏಕಮುಖ ಬೋಧನ ವ್ಯವಸ್ಥೆ ಜಾರಿಯಾಗುತ್ತದೆ” ಎಂದು ವಿವರಿಸಿದರು.

“ಯುಜಿಸಿಯ ನಿರ್ದೇಶನದ ಮೇಲೆ ರಾಜ್ಯ ಸರ್ಕಾರಗಳು ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಹಾಳುಗೆಡುವಲು ಹೊರಟಿವೆ. ನಾಳೆ ಯುಜಿಸಿ ಇಲ್ಲವಾಗಿ ಉನ್ನತ ಶಿಕ್ಷಣ ನಿಯಂತ್ರಣಾ ಆಯೋಗ ಬರುತ್ತದೆ. ವಿಷಯಾಧಾರಿತವಾಗಿ ಸ್ಥಾಪನೆಯಾಗಿರುವ ವಿಶ್ವವಿದ್ಯಾನಿಲಯಗಳಿಗೆ ಭವಿಷ್ಯವೇ ಇಲ್ಲವಾಗುತ್ತದೆ. ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮೂರು ವಿಧವಾಗಿ ವಿಂಗಡಿಸುವುದಾಗಿ ಹೇಳುತ್ತಿದ್ದಾರೆ. ಆದರೆ ಅದು ಕಾಗದದಲ್ಲಿ ಉಳಿಯುತ್ತದೆ ಅಷ್ಟೇ. ಯಾಕೆಂದರೆ ಕುಲಪತಿಗಳು ರಾಜ್ಯಪಾಲರ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮುಂದೆ ಮುಖ್ಯಮಂತ್ರಿಯ ಹಿಡಿತಕ್ಕೆ ಸಿಲುಕುತ್ತಾರೆ” ಎಂದು ತಿಳಿಸಿದರು.

“ಕುಲಪತಿಯವರನ್ನು ಸಿಇಒ ಎಂದು ಕರೆಯಲಾಗುತ್ತಿದೆ. ಆಗ ನೇರವಾಗಿ ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಡುತ್ತಾರೆ. ರಾಜ್ಯ ಸರ್ಕಾರ ಹೇಳಿದಂತೆ ಕುಲಪತಿ ಕೇಳಬೇಕಾಗುತ್ತದೆ. ಈಗಿನ ವ್ಯವಸ್ಥೆಯ ಪ್ರಕಾರ ರಾಜ್ಯ ಸರ್ಕಾರ ಹೇಳಿದ್ದನ್ನು ಕೇಳಬೇಕಿಲ್ಲ. ವಿವಿಗಳಿಗೆ ಸ್ವಾಯತ್ತತೆ ಇದ್ದೇಇತ್ತು. ಇನ್ನು ಮುಂದೆ ಇಲ್ಲವಾಗುತ್ತದೆ. ಸರ್ಕಾರ ಪ್ರತಿಯೊಂದಕ್ಕೂ ಮೂಗು ತೂರಿಸುತ್ತದೆ” ಎಂದು ಎಚ್ಚರಿಸಿದರು.

ಬೆನ್ನುಮೂಳೆ ಕಳೆದುಕೊಂಡ ಮೇಷ್ಟ್ರುಗಳು: ಚಂದ್ರಪೂಜಾರಿ

ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಎಂ.ಚಂದ್ರ ಪೂಜಾರಿ ಮಾತನಾಡಿ, “ಸ್ವಾಯತ್ತತೆಯನ್ನು ಹಾಳುಮಾಡುವ ಕೆಲಸಗಳಾದಾಗ ಈ ಹಿಂದೆ ಹಲವು ಹೋರಾಟಗಳನ್ನು ಮಾಡಿದ್ದೇವೆ. ಸ್ವಾಯತ್ತತೆ ಕೇವಲ ಕಾನೂನಿನಲ್ಲಿ ಇದ್ದರೆ ಸಾಲದು, ವಿಶ್ವವಿದ್ಯಾನಿಲಯದ ಅಧಿಕಾರಿಗಳಲ್ಲಿ, ಪ್ರಾಧ್ಯಾಪಕರಲ್ಲಿ ಒಳಮೂಡಬೇಕು. ಮೇಷ್ಟ್ರುಗಳು ಬೆನ್ನುಮೂಳೆ ಇಲ್ಲದವರಾದರೆ ರಾಜಮಾರ್ಗವೂ ಕೂಡ ಕಾಲುದಾರಿಯಂತೆ ಕಾಣುತ್ತದೆ. ಮುನ್ನುಗ್ಗುವ ಛಾತಿ, ಧೈರ್ಯ ಇದ್ದರೆ ಕಾಲುವೆಯನ್ನೇ ರಾಜಮಾರ್ಗ ಮಾಡಬಹುದು. ಇಷ್ಟೆಲ್ಲ ನಡೆಯುತ್ತಿದೆ. ಆದರೆ ಇಷ್ಟು ಮೇಷ್ಟ್ರುಗಳು, ಇಷ್ಟು ವಿಶ್ವವಿದ್ಯಾನಿಲಯಗಳಿದ್ದರೂ ಯಾರೂ ಮಾತನಾಡುತ್ತಿಲ್ಲ. ಈ ಮೇಷ್ಟ್ರುಗಳು ಮೋದಿ, ಅಮಿತ್ ಷಾ ಅಂತ ವಿಮರ್ಶೆ ಮಾಡೋದೇನೂ ಬೇಕಿಲ್ಲ. ಕನಿಷ್ಠ ಶಿಕ್ಷಣ ವ್ಯವಸ್ಥೆ ಬಗ್ಗೆಯಾದರೂ ಮಾತನಾಡಬಹುದಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಚಂದ್ರಪೂಜಾರಿ

ಹೇಗೆ ಸದ್ದಿಲ್ಲದೇ ಎನ್‌ಇಪಿ ಜಾರಿಯಾಗುತ್ತಿದೆಯೋ ಹಾಗೆಯೇ ’ಕರ್ನಾಟಕ ಸ್ಟೇಟ್ ಪಬ್ಲಿಕ್ ಹೈಯರ್ ಎಜುಕೇಷನ್ ಇನ್‌ಸ್ಟಿಟ್ಯೂಷನ್ಸ್ ಬಿಲ್- 2022’ ಕೂಡ ಜಾರಿಯಾಗುವ ಭಯ ಆವರಿಸಿದೆ. ಶಿಕ್ಷಣ ತಜ್ಞರು, ಪ್ರಾಧ್ಯಾಪಕರು, ವಿಶ್ವವಿದ್ಯಾ ನಿಲಯಗಳು ಗಂಭೀರ ಚರ್ಚೆ ಮಾಡಬೇಕಾದ ಅಗತ್ಯ ಎದುರಾಗಿದೆ.


ಇದನ್ನೂ ಓದಿ: ರಾಜಕೀಯ ವಿರೋಧ ಹಗೆತನವಾಗಿ ಪರಿವರ್ತನೆ; ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣವಲ್ಲ: ಮುಖ್ಯ ನ್ಯಾಯಮೂರ್ತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...