Homeಆರೋಗ್ಯಏಡ್ಸ್ ರೋಗಕ್ಕೆ ಪತ್ತೆಯಾಯ್ತಾ ‘ಕಂಪ್ಲೀಟ್ ಕ್ಯೂರ್’ ಚಿಕಿತ್ಸೆ?

ಏಡ್ಸ್ ರೋಗಕ್ಕೆ ಪತ್ತೆಯಾಯ್ತಾ ‘ಕಂಪ್ಲೀಟ್ ಕ್ಯೂರ್’ ಚಿಕಿತ್ಸೆ?

- Advertisement -
- Advertisement -

ವಿಶ್ವದಾದ್ಯಂತ ಮೂರೂವರೆ ಕೋಟಿಗು ಹೆಚ್ಚು ಜನರ ಬದುಕನ್ನು ಯಾತನಮಯವಾಗಿಸಿರುವ ಏಡ್ಸ್ ಮಹಾಮಾರಿಗೆ ಕೊನೆಗೂ ಸಂಪೂರ್ಣ ಗುಣ ಮಾಡುವ ಚಿಕಿತ್ಸೆ ಲಭ್ಯವಾಯಿತೇ? ಟೆಂಪಲ್ ಯೂನಿವರ್ಸಿಟಿ ಮತ್ತು ನೆಬ್ರಾಸ್ಕಾ ಮೆಡಿಕಲ್ ಸೆಂಟರ್ ಯೂನಿವರ್ಸಿಟಿಯ ವಿಜ್ಞಾನಿಗಳು ಜಂಟಿಯಾಗಿ ನಡೆಸಿದ ಸಂಶೋಧನೆ ಮತ್ತು ಅದಕ್ಕೆ ಸಿಕ್ಕಿರುವ ಫಲಿತಾಂಶ ಇಂತದ್ದೊಂದು ಚರ್ಚೆಯನ್ನು ಹುಟ್ಟುಹಾಕಿದೆ.

ಜುಲೈ 2ರಂದು Nature Communications ವೈದ್ಯಕೀಯ ಜರ್ನಲ್‍ನಲ್ಲಿ ಪ್ರಕಟಿಸಿರುವಂತೆ ಏಡ್ಸ್ ತಂದೊಡ್ಡುವ ಎಚ್.ಐ.ವಿ ವೈರಸ್ ಅನ್ನು ಜೀವಿಯ ದೇಹದಿಂದ ಸಂಪೂರ್ಣವಾಗಿ ನಿವಾರಿಸುವ ಚಿಕಿತ್ಸಾ ವಿಧಾನವನ್ನು ಕಂಡುಹಿಡಿದಿರುವುದಾಗಿ’ ವಿಜ್ಞಾನಿಗಳು ಘೋಷಿಸಿದ್ದಾರೆ. ಟೆಂಪಲ್ ಯೂನಿವರ್ಸಿಟಿಯ ನ್ಯೂರೋವೈರಾಲಜಿ ಸೆಂಟರ್‍ನ ನಿರ್ದೇಶಕ ಡಾ. ಕಮೆಲ್ ಖಲೀಲಿ ಮತ್ತು ನೆಬ್ರಾಸ್ಕಾ ಮೆಡಿಕಲ್ ಸೆಂಟರ್‍ನ ನ್ಯೂರೋ ಡೀಜನೆರೇಟಿವ್ ಡಿಸೀಸ್ ವಿಭಾಗದ ನಿರ್ದೇಶಕ ಹೊವಾರ್ಡ್ ಜೆಂಡಲ್‍ಮನ್ ನೇತೃತ್ವದಲ್ಲಿ ಈ ಸಂಶೋಧನೆ ನಡೆದಿದೆ.

ಎಚ್.ಐ.ವಿ ವೈರಸ್‍ನ ವರ್ಣತಂತುಗಳನ್ನೇ ಮಾರ್ಪಾಡು ಮಾಡುವ ಜೀನ್ ಎಡಿಟಿಂಗ್ ಥೆರಪಿ ಮೂಲಕ ವೈರಸ್‍ನ ಸಂತಾನಾಭಿವೃದ್ಧಿಯನ್ನು ನಿರ್ಬಂಧಿಸಿ ಅದು ಕ್ರಮೇಣ ದೇಹದ ಕೋಶಗಳು ಮತ್ತು ಸೋಂಕಿತ ಪ್ರಾಣಿಯ ಅಂಗಾಂಗಳಿಂದಲೇ ನಶಿಸಿಹೋಗುವಂತೆ ಈ ಚಿಕಿತ್ಸೆ ಮಾಡಲಿದೆ ಎನ್ನಲಾಗಿದೆ.

ಪ್ರಸ್ತುತ ಏಡ್ಸ್ ರೋಗಕ್ಕೆ `ಆ್ಯಂಟಿ-ರಿಟ್ರೋವೈರಲ್ ಥೆರಪಿ’ (ಎ.ಆರ್.ಟಿ) ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ, ಮಾನವನ ರಕ್ತದಲ್ಲಿ ಎಚ್.ಐ.ವಿ.ಯನ್ನು ಪತ್ತೆಹಚ್ಚಲಾಗದಷ್ಟು ಕನಿಷ್ಠ ಮಟ್ಟಕ್ಕೆ ಅದರ ಬೆಳವಣಿಗೆಯನ್ನು ಹತ್ತಿಕ್ಕಲಾಗುತ್ತಿದೆ. ಆದರೆ ಇದು ವೈರಸನ್ನು ಶಾಶ್ವತವಾಗಿ ದೇಹದಿಂದ ನಿರ್ಮೂಲನೆ ಮಾಡುವುದಿಲ್ಲ. ಅಂದರೆ, ಇದು ಶಾಶ್ವತ ಚಿಕಿತ್ಸೆಯಲ್ಲ, ರೋಗಿಯ ಜೀವಿತಾವಧಿಯನ್ನು ಸ್ವಲ್ಪವಷ್ಟೇ ಹಿಗ್ಗಿಸುವ ಪ್ರಯತ್ನ. ಎ.ಆರ್.ಟಿ ಚಿಕಿತ್ಸೆ ನೀಡುತ್ತಿರುವ ಸಮಯದಲ್ಲಿ ವೈರಸ್ ತಮ್ಮ ಆಕ್ರಮಣಕಾರಿ ಸಂತಾನಾಭಿವೃದ್ಧಿ ತಟಸ್ಥಗೊಳಿಸಿ ಅವಿತಿಟ್ಟುಕೊಂಡಿರುತ್ತದೆ. ಚಿಕಿತ್ಸೆ ನಿಲ್ಲುತ್ತಿದ್ದಂತೆಯೇ ವೈರಸ್ ಸಂಖ್ಯೆ ಉಲ್ಬಣಿಸಲು ಶುರುವಾಗುತ್ತಿತ್ತು.

ಎ.ಆರ್.ಟಿ ಚಿಕಿತ್ಸೆಯಿಂದಾಗಿ ರೋಗ ತಾತ್ಕಾಲಿಕವಾಗಿ ಉಪಶಮನಗೊಂಡ ತರುವಾಯ ಎಚ್.ಐ.ವಿ ವೈರಸ್ ಮತ್ತೆ ಉಲ್ಬಣಿಸಬೇಕೆಂದರೆ ದೇಹದ ರೋಗನಿರೋಧಕ ವ್ಯವಸ್ಥೆಯಲ್ಲಿ ಶೇಖರವಾಗಿರುತ್ತಿದ್ದ ವರ್ಣತಂತು ಘಟಕಗಳ ಜೊತೆಗೆ ಅದು ಸಂಯೋಜನೆಗೊಳ್ಳಬೇಕಿರುತ್ತದೆ. ಇಲ್ಲಿಯೇ, ವರ್ಷಗಟ್ಟಲೆ ಎ.ಆರ್.ಟಿ ಚಿಕಿತ್ಸೆಗೆ ಸ್ಪಂದಿಸದೆ ಎಚ್‍ಐವಿ ತನ್ನ ಸುಪ್ತ ಸ್ಥಿತಿಯಲ್ಲಿ ಅಡಗಿಕೊಳ್ಳಲು ಸಾಧ್ಯವಿರುವುದು.

ಡಾ. ಖಲೀಲಿಯವರ ತಂಡ CRISPR-Cas9 ತಂತ್ರಜ್ಞಾನದ ಮೂಲಕ ಇಂಥಾ ಸುಪ್ತ ಸ್ಥಿತಿಯಲ್ಲಿರುವ ಎಚ್.ಐ.ವಿ ವೈರಸ್‍ನ ವರ್ಣತಂತುಗಳನ್ನೇ ಮಾರ್ಪಾಡು ಮಾಡುವ ಪ್ರಯೋಗ ನಡೆಸಿದ್ದು ಅದೀಗ ಯಶಸ್ವಿಯಾಗಿದೆ. ಇಲಿಗಳನ್ನು ತಮ್ಮ ಪ್ರಯೋಗಕ್ಕೆ ಬಳಸಿಕೊಂಡಿರುವ ವಿಜ್ಞಾನಿಗಳು ಶೇ.33ರಷ್ಟು ಎಚ್.ಐ.ವಿ ಸೋಂಕಿತ ಇಲಿಗಳ ದೇಹದಿಂದ ಎಚ್.ಐ.ವಿ. ಡಿ.ಎನ್.ಎ ಅನ್ನೇ ಸಂಪೂರ್ಣವಾಗಿ ನಿವಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಚಿಕಿತ್ಸೆ ಏಕಾಂಗಿಯಾಗಿ ಏಡ್ಸ್ ವೈರಸ್ ಅನ್ನು ನಿರ್ಮೂಲನೆ ಮಾಡದು, ಎ.ಆರ್.ಟಿ ಚಿಕಿತ್ಸೆಯ ಜೊತೆಗೆ ಇದನ್ನು ಪ್ರಯೋಗಿಸಿದರೆ ಯಶಸ್ಸು ಕಾಣಬಹುದು ಎಂದಿದ್ದಾರೆ ವಿಜ್ಞಾನಿಗಳು.

ಇದಕ್ಕೂ ಮೊದಲು ಇದೇ ನೆಬ್ರಾಸ್ಕಾ ಮೆಡಿಕಲ್ ಸೆಂಟರ್‍ನ ಸಂಶೋಧಕರುಗಳಾದ ಡಾ.ಜೆಂಡಲ್‍ಮನ್ ಮತ್ತು ಡಾ.ಬೆನ್ಸನ್ ಎಡಾಗ್ವಾ ಅವರು `ಲಾಂಗ್ ಆಕ್ಟಿಂಗ್ ಸ್ಲೋ-ಎಫೆಕ್ಟಿವ್ ರಿಲೀಸ್ (LASER) ಎ.ಆರ್.ಟಿ’ ಚಿಕಿತ್ಸೆಯನ್ನು ಶೋಧಿಸಿದ್ದರು. ಇದು ಸಹಾ ಎ.ಆರ್.ಟಿ.ಯಂತೆ ಏಡ್ಸ್ ರೋಗವನ್ನು ಸಂಪೂರ್ಣ ಗುಣಪಡಿಸದಿದ್ದರು ಮೇಲಿಂದ ಮೇಲೆ ಎಆರ್‍ಟಿ ಚಿಕಿತ್ಸೆ ಪಡೆಯುವ ಹೊರೆಯನ್ನು ತಪ್ಪಿಸಿತ್ತು. ಇದೀಗ ಈ LASER ಎ.ಆರ್.ಟಿ ಮತ್ತು CRISPR-Cas9 ತಂತ್ರಜ್ಞಾನಗಳ ಜಂಟಿ ಬಳಕೆಯ ಮೂಲಕ ಎಚ್.ಐ.ವಿ ರೋಗಾಣುವನ್ನು ಸಂಪೂರ್ಣವಾಗಿ ದೇಹದಿಂದ ನಾಶ ಪಡಿಸಲು ಸಾಧ್ಯ ಎನ್ನುವುದನ್ನು ಹೊಸ ಸಂಶೋಧನೆ ತೋರಿಸಿಕೊಟ್ಟಿದೆ.

ಇಲಿಗಳಲ್ಲಿ ಯಶಸ್ವಿಯಾಗಿರುವ ಈ ಪ್ರಯೋಗ ಮನುಷ್ಯನ ದೇಹದಲ್ಲಿ ಯಾವ ಪರಿಣಾಮ ಬೀರುತ್ತದೆ, ವರ್ಣತಂತುಗಳನ್ನೇ ಮಾರ್ಪಾಟು ಮಾಡುವ ಚಿಕಿತ್ಸೆಯಿಂದ ಏನಾದರು ಗಂಭೀರ ಅಡ್ಡಪರಿಣಾಮಗಳು ಉಂಟಾಗುತ್ತವೆಯೇ ಎಂಬುದನ್ನು ಪರೀಕ್ಷೆಗೊಳಪಡಿಸುವುದಷ್ಟೇ ಈಗ ಬಾಕಿ ಉಳಿದಿರುವುದು. ಒಟ್ಟಿನಲ್ಲಿ ಏಡ್ಸ್ ರೋಗದ ವಿರುದ್ಧದ ವೈದ್ಯಕೀಯ ಹೋರಾಟದಲ್ಲಿ ಇದೊಂದು ಮಹತ್ವದ ಬೆಳವಣಿಗೆಯಾಗಿದ್ದು, ಶಾಶ್ವತ ಸಂಪೂರ್ಣ ಚಿಕಿತ್ಸೆ ಪತ್ತೆ ಮಾಡುವ ಗುರಿಗೆ ಸನಿಹವಾದಂತಾಗಿದೆ.

ಆಧಾರ: ಫಸ್ಟ್ ಪೋಸ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...