ಅತಿವೃಷ್ಟಿಯಿಂದ ಹಾನಿಗೊಳಗಾದ ಕೊಡಗು ಜಿಲ್ಲೆಯ ಪ್ರದೇಶಗಳ ವೀಕ್ಷಣೆಗೆ ತೆರಳಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕಾರಿಗೆ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದಿರುವ ಘಟನೆ ಜರುಗಿದೆ.
ಕೊಡಗಿನ ಮೊದನಾಡು, ಕೊಯಿನಾಡು ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತಕ್ಕೆ ಆಗಮಿಸಿದ ವೇಳೆ ಸಿದ್ದರಾಮಯ್ಯ ಗೋ ಬ್ಯಾಕ್ ಎಂದು ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದ್ದರು. ಆನಂತರ ಅವರ ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿತ್ತು.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, “ಇದು ಸರಿಯಿಲ್ಲ. ಯಾವುದೇ ಕಾರಣಕ್ಕೆ ಈ ರೀತಿಯ ಘಟನೆಗಳು ನಡೆಯಬಾರದು. ಸಿದ್ದರಾಮಯ್ಯ ಇರಬಹುದು, ಯಡಿಯೂರಪ್ಪ ಇರಬಹುದು ಅಥವಾ ಮತ್ತೊಬ್ಬರೂ ಇರಬಹುದು. ಯಾರಿಗೂ ಹೀಗೆ ಮಾಡಬಾರದು” ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, “ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಇಂದು ನಡೆದಂತಹ ನಡವಳಿಕೆಗಳನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ” ಎಂದು ಹೇಳಿದ್ದಾರೆ. ಅಲ್ಲದೆ ಮುಂದೆ ಇಂತಹ ಘಟನೆಗಳು ನಡೆಯಬಾರದೆಂದು ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
ಇನ್ನು ತಮ್ಮ ಮೇಲಿನ ಪ್ರತಿಭಟನೆಯನ್ನು ಹೇಡಿಗಳು ಮಾಡಿರುವ ಕೆಲಸ. ಒಂದು ವೇಳೆ ನಮ್ಮ ಕಾರ್ಯಕರ್ತರು ಮೊಟ್ಟೆ ಹೊಡೆಯಲು ನಿಂತರೆ ಸಿಎಂ ಬೊಮ್ಮಾಯಿಯವರು ರಾಜ್ಯದಲ್ಲಿ ಒಡಾಡಲು ಸಾಧ್ಯವಾಗುವುದಿಲ್ಲ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಕೊಡಗಿನಲ್ಲಿ ಡಿ.ಸಿ ಕಚೇರಿಯ ಕಂಪೌಂಡ್ ಕಳಪೆಯಾಗಿ ನಿರ್ಮಿಸಲಾಗಿದೆ. ಅತಿವೃಷ್ಟಿಯಿಂದ ಮನೆ- ಬೆಳೆ ಕಳೆದುಕೊಂಡವರಿಗೆ ಸಮರ್ಪಕ ಪರಿಹಾರ ನೀಡಿಲ್ಲ. ಈ ವಿಚಾರಗಳನ್ನು ಮರೆಮಾಚಲು ನನ್ನ ವಿರುದ್ಧ ಪ್ರತಿಭಟನೆ ಮಾಡಿಸಲಾಗಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರ ಜೀವಂತವಾಗಿಲ್ಲ. ಅದು ಸತ್ತು ಹೋಗಿದೆ. ಅದು ಗೊತ್ತಾಗಬಾರದೆಂದು ಹಣ ಕೊಟ್ಟು ಜನರನ್ನು ಕರೆಸಿ ಪ್ರತಿಭಟನೆ ನಡೆಸುತ್ತಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯನವರ ಕೊಡಗು ಭೇಟಿಯ ವೇಳೆ ಹಲವಾರು ಸಂತ್ರಸ್ತರು ತಮ್ಮ ಗೋಳು ಹೇಳಿಕೊಂಡಿದ್ದಾರೆ. ಸರ್ಕಾರ ನೀಡುತ್ತಿರುವ ಪರಿಹಾರ ಯಾವುದಕ್ಕೂ ಸಾಲದು ಎಂದು ಸಮಸ್ಯೆಗಳನ್ನು ಮುಂದಿಟ್ಟಿದ್ದಾರೆ.
ಇದನ್ನೂ ಓದಿ: ರಾಯಚೂರು ಜಿಲ್ಲೆಯನ್ನು ತೆಲಂಗಾಣಕ್ಕೆ ಸೇರಿಸಬೇಕು: ಕೆಸಿಆರ್ ಹೇಳಿಕೆಗೆ ಕಾಂಗ್ರೆಸ್ ತೀವ್ರ ವಿರೋಧ



ಬಿ.ಜೆ.ಪಿ. ಕಾರ್ಯಕರ್ತರ ಈ ಗೂಂಡಾಗಿರಿ ಕಂಡನಾರ್ಹ.