ರಾಜ್ಯ ಸರ್ಕಾರದ ಒಡೆತನದ ದೇಶದ ಮೊದಲ ಆನ್‌ಲೈನ್ ಟ್ಯಾಕ್ಸಿ ಸೇವೆ ‘ಕೇರಳ ಸವಾರಿ’ಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಉದ್ಘಾಟಿಸಿದ್ದಾರೆ. ‘ಕೇರಳ ಸವಾರಿ’ ಪ್ರಯಾಣಿಕರಿಗೆ ನ್ಯಾಯಯುತ ಮತ್ತು ಯೋಗ್ಯ ಸೇವೆಯನ್ನು ಮತ್ತು ಆಟೋ ಟ್ಯಾಕ್ಸಿ ಕಾರ್ಮಿಕರಿಗೆ ನ್ಯಾಯಯುತ ಸಂಭಾವನೆಯನ್ನು ಖಾತ್ರಿಗೊಳಿಸುತ್ತದೆ ಎಂದು ಸರ್ಕಾರ ಹೇಳಿದೆ. ರಾಜ್ಯದ ಕಾರ್ಮಿಕ ಇಲಾಖೆಯ ನೇತೃತ್ವದಲ್ಲಿ ಮೋಟಾರು ಕಾರ್ಮಿಕರ ಕಲ್ಯಾಣ ಮಂಡಳಿಯು ಈ ಸೇವೆಯನ್ನು ಪ್ರಾರಂಭಿಸಿದೆ. ಕೇರಳ ಸವಾರಿ ಸಾರ್ವಜನಿಕರಿಗೆ ಸರ್ಕಾರಿ ಅನುಮೋದಿತ ದರದಲ್ಲಿ ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸುತ್ತದೆ ಸರ್ಕಾರ ಹೇಳಿದೆ.
ಇತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಂತೆ ಕೇರಳ ಸವಾರಿ ದರಗಳಲ್ಲಿ ಯಾವುದೇ ಏರಿಳಿತ ಇರುವುದಿಲ್ಲ. ಇತರ ಆನ್‌ಲೈನ್ ಟ್ಯಾಕ್ಸಿ ಕಂಪೆನಿಗಳು ಜನರು ಹೆಚ್ಚಾಗಿ ಓಡಾಡುವ (ಪೀಕ್ ಅವರ್‌ನಲ್ಲಿ) ಸಮಯದಲ್ಲಿ ಸೇವೆಗಳ ಶುಲ್ಕವನ್ನು ಒಂದೂವರೆ ಪಟ್ಟು ಹೆಚ್ಚಿಸುತ್ತವೆ. ಆದರೆ ಇದರಿಂದ ಪ್ರಯಾಣಿಕರಿಗಾಗಲಿ, ಡ್ರೈವರ್‌ಗಳಿಗೆ ಯಾವುದೆ ಪ್ರಯೋಜನವಾಗುವುದಿಲ್ಲ. ಕೇರಳ ಸವಾರಿಯು ಸರ್ಕಾರ ನಿಗದಿಪಡಿಸಿದ ದರಕ್ಕಿಂತ 8% ಸೇವಾ ಶುಲ್ಕವನ್ನು ಮಾತ್ರ ವಿಧಿಸುತ್ತದೆ. ಇತರೆ ಆನ್‌ಲೈನ್ ಟ್ಯಾಕ್ಸಿ ಕಂಪೆನಿಗಳ ಸೇವೆಗಳಲ್ಲಿ ಇದು 20%ದಿಂದ 30ರಷ್ಟಿರುತ್ತದೆ. ಈ ಯೋಜನೆಯ ಅನುಷ್ಠಾನಕ್ಕೆ ಮತ್ತು ಪ್ರಯಾಣಿಕರಿಗೆ ಮತ್ತು ಚಾಲಕರಿಗೆ ಪ್ರಚಾರದ ಪ್ರೋತ್ಸಾಹಕ್ಕಾಗಿ ಸೇವಾ ಶುಲ್ಕವಾಗಿ ಸ್ವೀಕರಿಸಿದ ಮೊತ್ತವನ್ನು ಬಳಸಲು ನಿರ್ಧರಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕೇರಳ ಸವಾರಿಯು ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಆನ್‌ಲೈನ್ ಸೇವೆಯಾಗಲಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಅಪ್ಲಿಕೇಶನ್ ವಿನ್ಯಾಸ ಮತ್ತು ಚಾಲಕ ನೋಂದಣಿಯಲ್ಲಿ ಈ ಪರಿಗಣನೆಗೆ ಪ್ರಾಮುಖ್ಯತೆ ನೀಡಲಾಗಿದೆ. ಯೋಜನೆಗೆ ಸೇರುವ ಚಾಲಕರಿಗೆ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ ಕಡ್ಡಾಯವಾಗಿದ್ದು, ಸೂಕ್ತ ತರಬೇತಿಯನ್ನೂ ನೀಡಲಾಗುತ್ತದೆ.
ಅಪ್ಲಿಕೇಶನ್‌ನಲ್ಲಿ ‘ಪ್ಯಾನಿಕ್ ಬಟನ್’ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಕಾರು ಅಪಘಾತದ ಸಂದರ್ಭದಲ್ಲಿ ಅಥವಾ ಯಾವುದೇ ಅಪಾಯದ ಸಂದರ್ಭದಲ್ಲಿ ಈ ಗುಂಡಿಯನ್ನು ಒತ್ತಬಹುದು. ಇದು ಸಂಪೂರ್ಣವಾಗಿ ಖಾಸಗಿಯಾಗಿ ಇರಲಿದ್ದು, ಚಾಲಕ ಪ್ಯಾನಿಕ್ ಬಟನ್ ಒತ್ತಿದರೆ ಪ್ರಯಾಣಿಕರಿಗೆ ತಿಳಿಯುವುದಿಲ್ಲ ಅಥವಾ ಪ್ರಯಾಣಿಕರು ಪ್ಯಾನಿಕ್ ಬಟನ್ ಒತ್ತಿದರೆ ಚಾಲಕನಿಗೆ ತಿಳಿಯುವುದಿಲ್ಲ. ಈ ಗುಂಡಿಯನ್ನು ಒತ್ತಿದಾಗ, ಪೊಲೀಸ್, ಅಗ್ನಿಶಾಮಕ ದಳ ಮತ್ತು ಮೋಟಾರು ವಾಹನ ಇಲಾಖೆಗಳನ್ನು ಆಯ್ಕೆ ಮಾಡಬಹುದಾಗಿದೆ. ಒಂದು ವೇಳೆ ಯಾವುದನ್ನೂ ಆಯ್ಕೆ ಮಾಡಲು ಸಾಧ್ಯವಾಗದಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿದ್ದರೆ, ಬಟನ್ ಒತ್ತಿದರೆ ನೇರವಾಗಿ ಪೊಲೀಸ್ ನಿಯಂತ್ರಣ ಕೊಠಡಿಗೆ ಸಂಪರ್ಕ ಪಡೆಯುವಂತೆ ಅಪ್ಲಿಕೇಷನ್ ಅನ್ನು ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ಕೇರಳದ ಎಡರಂಗ ಸರ್ಕಾರ ಉರುಳಿಸಲು ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಬಳಸುತ್ತಿದೆ: ಕೊಡಿಯೇರಿ ಬಾಲಕೃಷ್ಣನ್ ಆರೋಪ
ಸಬ್ಸಿಡಿ ದರದಲ್ಲಿ ವಾಹನಗಳಿಗೂ ಜಿಪಿಎಸ್ ಅಳವಡಿಸಲು ನಿರ್ಧರಿಸಲಾಗಿದೆ. ಇದನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುವುದು ಎಂದು ಸರ್ಕಾರ ಹೇಳಿದೆ. ಸೇವೆಗಾಗಿ 24 ಗಂಟೆಗಳ ಕಾಲ್ ಸೆಂಟರ್ ಸಿದ್ಧಪಡಿಸಲಾಗಿದ್ದು, ಮೋಟಾರು ಕಾರ್ಮಿಕರ ಕಲ್ಯಾಣ ಮಂಡಳಿಯ ಜಿಲ್ಲಾ ಕಚೇರಿಯಲ್ಲಿ ಅತ್ಯಾಧುನಿಕ ಕಾಲ್ ಸೆಂಟರ್ ಕಾರ್ಯನಿರ್ವಹಿಸುತ್ತಿದೆ.
ಕಾಲ್ ಸೆಂಟರ್ ಸೇವೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಮೊದಲ ಹಂತದ ಯೋಜನೆಯನ್ನು ತಿರುವನಂತಪುರಂ ನಗರದಲ್ಲಿ ಜಾರಿಗೊಳಿಸಲಾಗಿದೆ. ಮೊದಲ ಹಂತದ ಮೌಲ್ಯಮಾಪನದ ನಂತರ ಯೋಜನೆಯನ್ನು ಸಂಪೂರ್ಣ ರಾಜ್ಯದಲ್ಲಿ ದೋಷರಹಿತ ರೀತಿಯಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಸರ್ಕಾರ ಹೇಳಿದೆ. ಮುಂದಿನ ಒಂದು ತಿಂಗಳೊಳಗೆ ಕೊಲ್ಲಂ, ಎರ್ನಾಕುಲಂ, ತ್ರಿಶೂರ್, ಕೋಝಿಕ್ಕೋಡ್ ಮತ್ತು ಕಣ್ಣೂರು ಪುರಸಭೆಯ ವ್ಯಾಪ್ತಿಯನ್ನು ತಲುಪಲಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.


