Homeಮುಖಪುಟರಾಷ್ಟ್ರಧ್ವಜಕ್ಕೆ ಗೌರವಿಸುವುದೆಂದರೇನು? ಸಂವಿಧಾನ ರಚನಾ ಸಭೆ ಚರ್ಚೆಯ ಪಾಠಗಳು

ರಾಷ್ಟ್ರಧ್ವಜಕ್ಕೆ ಗೌರವಿಸುವುದೆಂದರೇನು? ಸಂವಿಧಾನ ರಚನಾ ಸಭೆ ಚರ್ಚೆಯ ಪಾಠಗಳು

- Advertisement -
- Advertisement -

ಭಾರತದ 75ನೇ ಸ್ವಾತಂತ್ರ್ಯೋತ್ಸವ ಆಚರಣೆಯನ್ನು ಗುರುತಿಸುವ ಸಲುವಾಗಿ ಒಕ್ಕೂಟ ಸರಕಾರವು ’ಹರ್ ಘರ್ ತಿರಂಗಾ’ (ಪ್ರತಿ ಮನೆಗೂ ತ್ರಿವರ್ಣ ಧ್ವಜ) ಎಂಬ ಅಭಿಯಾನವನ್ನು ಆರಂಭಿಸಿತು. ಇದರ ಉದ್ದೇಶ “ಜನರು ಮನೆಗೆ ಧ್ವಜ ತಂದು ಹಾರಿಸುವುದನ್ನು ಪ್ರೋತ್ಸಾಹಿಸುವುದು”. ಮನೆಗೆ ಧ್ವಜ ತಂದು ಹಾರಿಸುವ ಉದ್ದೇಶ ಏನೆಂದರೆ, “ಧ್ವಜದೊಂದಿಗೆ ವೈಯಕ್ತಿಕ ಸಂಬಂಧ ಬೆಳೆಸುವುದು”, ಮತ್ತು ಇದು “ದೇಶ ಕಟ್ಟುವ ಕಾರ್ಯದ ಜೊತೆಗೆ ನಮ್ಮ ಸಂಬಂಧದ ಪ್ರತಿಫಲನ” ಹೀಗೆಂದು ’ಆಜಾದಿ ಕಾ ಅಮೃತ್ ಮಹೋತ್ಸವ್’ ಎಂಬ ವೆಬ್‌ಸೈಟ್ ಹೇಳುತ್ತದೆ.

ಈ ವೆಬ್‌ಸೈಟ್‌ನ ಬಹುಭಾಗವು ಧ್ವಜದ ಸಾಂಕೇತಿಕತೆಯ ವಿಷಯವನ್ನು ಮುಟ್ಟಲು ಹೋಗದೆಯೇ, ಧ್ವಜದ ಬಗ್ಗೆ ತಾಂತ್ರಿಕ ಮಾಹಿತಿ ನೀಡುತ್ತದೆ. ಧ್ವಜದ ಇತಿಹಾಸದ ಕುರಿತ ಒಂದೇ ಒಂದು ಸುಳಿವು ಅಜ್ಞಾತ ಹುತಾತ್ಮರ ಕುರಿತ ಭಾಗದಲ್ಲಿದೆ (unsung flag martyrs). ಅದು ದೇಶದ ಎಲ್ಲಾ ಭಾಗಗಳಲ್ಲಿ ಬ್ರಿಟಿಷರನ್ನು ವಿರೋಧಿಸಿ ಧ್ವಜ ಹಾರಿಸಿ ಪ್ರಾಣ ತೆತ್ತ ಸಾಮಾನ್ಯ ಭಾರತೀಯರ ಚಿಕ್ಕಚಿಕ್ಕ ಜೀವನ ಚಿತ್ರಗಳು.

ಒಂದು ಉದಾಹರಣೆಯನ್ನು ಕೊಡುವುದಾದರೆ, ಮೈಸೂರು ಪ್ರಾಂತ್ಯದ, 34 ವರ್ಷ ಪ್ರಾಯದ ನಲ್ಲವೆಂಕಟರಾಯ ಎಂಬವರು ಕೋಲಾರದ ವಿದುರಾಶ್ವತ್ಥದಲ್ಲಿ ಸ್ಥಳೀಯ ಕಾಂಗ್ರೆಸಿಗರು ಆಯೋಜಿಸಿದ್ದ ದೊಡ್ಡ ಸಾರ್ವಜನಿಕ ಸಭೆಯೊಂದರಲ್ಲಿ ಭಾಗವಹಿಸಿದ್ದರು. ರಾಷ್ಟ್ರಧ್ವಜ ಹಾರಿಸುವುದು ಮತ್ತು ಸಾರ್ವಜನಿಕ ಸಭೆ ನಡೆಸುವುದರ ವಿರುದ್ಧ ಬ್ರಿಟಿಷ್ ಸರಕಾರದ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಈ ಕಾರ್ಯಕ್ರಮ ನಡೆದಿತ್ತು. ಸಭೆಯ ಮೇಲೆ ಮೊದಲಿಗೆ ಲಾಠಿಚಾರ್ಜ್ ಮಾಡಲಾಯಿತು. ಏಪ್ರಿಲ್ 25, 1938ರಂದು ನಲ್ಲವೆಂಕಟರಾಯ ಅವರು ಪೊಲೀಸ್ ಗುಂಡೇಟಿನಲ್ಲಿ ಮರಣಹೊಂದಿದರು.

ಧ್ವಜದ ಇತಿಹಾಸದ ಭಾಗವಾಗಿರುವ ರಕ್ತ ಮತ್ತು ಕಣ್ಣೀರಿನ ಕಥಾನಕಗಳ ಕುರಿತ ಇಂತಹ ನೋಟಗಳ ಹೊರತಾಗಿ, ಈ ರಕ್ತ ಹರಿಯಲು ಕಾರಣವಾದ ಭಾರತದ ಪರಿಕಲ್ಪನೆ’ಯ ಬಗ್ಗೆ ಈ ವೆಬ್‌ಸೈಟ್ ಅಚ್ಚರಿ ಹುಟ್ಟಿಸುವಂತೆ ಮೌನವಾಗಿದೆ. ಸರಳವಾಗಿ ಹೇಳುವುದಾದರೆ, ಈ ರಾಷ್ಟ್ರಧ್ವಜ ಏನನ್ನು ಸಂಕೇತಿಸುತ್ತದೆ ಎಂಬುದರ ಕುರಿತು ಏನನ್ನೂ ಹೇಳುವುದಿಲ್ಲ.

ಜುಲೈ 22, 1947ರಂದು ಸಂವಿಧಾನ ರಚನಾ ಸಭೆಯಲ್ಲಿ ಜವಾಹರಲಾಲ್ ನೆಹರೂ ಅವರು ಮಂಡಿಸಿದ ಧ್ವಜದ ಕುರಿತ ಗೊತ್ತುವಳಿಯ ಮೇಲೆ ಮಾತನಾಡಿದ ಹಿಂದೂ, ಮುಸ್ಲಿಂ, ಕ್ರೈಸ್ತ, ದಲಿತ ಮತ್ತು ಆದಿವಾಸಿ ಹಿನ್ನೆಲೆಯ 24 ಮಂದಿ ಸದಸ್ಯರು ನಡೆಸಿದ ಚರ್ಚೆಯು ಎಲ್ಲಾ ಭಾರತೀಯರಿಗೆ ಈ ಧ್ವಜದ ಅರ್ಥವೇನು ಎಂಬುದನ್ನು ಸ್ಪಟಿಕದಷ್ಟು ಸ್ಪಷ್ಟವಾಗಿ ತಿಳಿಸುತ್ತದೆ. ಗೊತ್ತುವಳಿಯು ನೆಹರೂ ಅವರ ಶಬ್ದಗಳಲ್ಲಿ ಹೇಳುವುದಾದರೆ, “ಶಬ್ದಗಳಲ್ಲಿ ಹೊಳಪು ಅಥವಾ ಬಿಸುಪು” ಇಲ್ಲದ, ಕೇವಲ “ತಾಂತ್ರಿಕ ಗೊತ್ತುವಳಿ”ಯಾಗಿತ್ತು.

ನೆಹರೂ ಅವರ ಪ್ರಕಾರ, “ಈ ಧ್ವಜವು ಬ್ರಿಟಿಷ್ ಆಡಳಿತದ ವಿರುದ್ಧ ಭಾರತೀಯರು ನಡೆಸಿದ ಸ್ವಾತಂತ್ರ್ಯ ಹೋರಾಟದ ಸಂಕೇತವಾಗಿದೆ. ಈ ಹೋರಾಟವೇ ಒಂದು ದೇಶದ ಅಸ್ತಿತ್ವದ ಅಲ್ಪಾವಧಿಯ ಗಾಢ ಇತಿಹಾಸವಾಗಿದೆ. ಶತಮಾನಗಳ ಹಾದಿಯಲ್ಲಿ ನಾವು ಹಾದು ಬಂದ ಕಿರು ಅವಧಿಯ ಇತಿಹಾಸವಾಗಿದೆ.”

ಈ ಧ್ವಜವು ಭಾರತದ ಸ್ವಾತಂತ್ರ್ಯದ ಮೂಲೋದ್ದೇಶವನ್ನು ಸಂಕೇತಿಸುತ್ತದೆ. “ನಮಗೆ ಬೇಕಾಗಿರುವ ರೀತಿಯಲ್ಲಿಯೇ ನಾವು ನಮ್ಮ ಉದ್ದೇಶಗಳನ್ನು ಸಾಧಿಸಿಲ್ಲ ಎಂದು ಹೇಳುವ ಮೂಲಕ ಅವರು, ಅತಿಯಾದ ಸಂಭ್ರಮಾಚರಣೆಯ ವಿರುದ್ಧ ಎಚ್ಚರಿಕೆಯನ್ನೂ ನೀಡುತ್ತಾರೆ. ಅವರು ಮುಂದುವರಿದು, “ನಾವು ಆರಂಭಿಸಿರುವಂಥ ಧ್ಯೇಯೋದ್ದೇಶಗಳನ್ನು ಒಬ್ಬ ವ್ಯಕ್ತಿಯ ಅಥವಾ ಒಂದು ದೇಶದ ಜೀವಿತ ಕಾಲದಲ್ಲಿ ಸಾಧಿಸಲಾಗುವುದು ತೀರಾ ಅಪರೂಪ” ಎಂದೂ ಹೇಳುತ್ತಾರೆ.

ಧ್ವಜವು “ಸ್ವಾತಂತ್ರ್ಯದ ಸಂಕೇತವಾಗಿರುವಂತೆಯೇ ಒಬ್ಬನೇ ಒಬ್ಬ ವ್ಯಕ್ತಿ ಸ್ವತಂತ್ರನಾಗಿರದ ಹೊರತು ಈ ದೇಶಕ್ಕೆ ಅಥವಾ ಇಡೀ ಪ್ರಪಂಚಕ್ಕೆ ಪೂರ್ಣ ಸ್ವಾತಂತ್ರ್ಯ ಇರುವುದಿಲ್ಲ. ಉಪವಾಸ, ಹಸಿವು, ಬಟ್ಟೆಬರೆಗಳ ಕೊರತೆ, ಜೀವನಾವಶ್ಯಕ ವಸ್ತುಗಳ ಕೊರತೆ, ಪುರುಷ, ಮಹಿಳೆ ಮತ್ತು ಮಗು ಸೇರಿದಂತೆ ಈ ದೇಶದ ಪ್ರತಿಯೊಬ್ಬ ವ್ಯಕ್ತಿಯ ಬೆಳವಣಿಗೆಗೆ ಅವಕಾಶಗಳ ಕೊರತೆ ಇರುವವರೆಗೆ ಸಂಪೂರ್ಣ ಸ್ವಾತಂತ್ರ್ಯ ಇರುವುದಿಲ್ಲ” ಎನ್ನುತ್ತಾರೆ.

ನೆಹರೂ ಅವರು ತಮ್ಮದೇ ಆದ ಶೈಲಿಯಲ್ಲಿ “ನಾವು ಸಂಪೂರ್ಣ ಸ್ವಾತಂತ್ರ್ಯವನ್ನು ಸಾಧಿಸದೇ ಇರಬಹುದು. ಆದರೆ, ನಮ್ಮ ನಂತರ ಬರುವವರಿಗೆ, ಅವರು ಕ್ರಮಿಸಬೇಕಾದ ದಾರಿ ಸುಲಭವಾಗಬಹುದು ಎಂದು ಆಶಿಸೋಣ” ಎಂದು ಹೇಳುವುದರ ಮೂಲಕ ಭವಿಷ್ಯದತ್ತ ಬೆಟ್ಟುಮಾಡಿ ತೋರಿಸುತ್ತಾರೆ.

ಧ್ವಜಕ್ಕೆ ಯಾವುದೇ ಕೋಮು ಮಹತ್ವ ಇರುವುದನ್ನು ಅವರು ತಳ್ಳಿಹಾಕುತ್ತಾರೆ. “ಕೆಲವರು ಅದರ ಮಹತ್ವವನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ ಮತ್ತು ಕೋಮು ಅರ್ಥದಲ್ಲಿ ಯೋಚಿಸಿದ್ದಾರೆ. ಅದರ ಕೆಲವು ಭಾಗಗಳು ಆ ಸಮುದಾಯವನ್ನು ಪ್ರತಿನಿಧಿಸುತ್ತದೆ, ಈ ಸಮುದಾಯವನ್ನು ಪ್ರತಿನಿಧಿಸುತ್ತದೆ ಎಂದು ನಂಬುತ್ತಾರೆ, ಆದರೆ ಗಾಢ ಹಸಿರು, ಆಳವಾದ ಕೇಸರಿಯ ನಡುವೆ ಬಿಳಿಯ ಪಟ್ಟೆಯನ್ನು ಸೌಂದರ್ಯದ ದೃಷ್ಟಿಯಿಂದ ನೋಡಲು ಇಷ್ಟಪಡುತ್ತಾರೆ” ನೆಹರು.

ಧ್ವಜವು ಇತಿಹಾಸದಿಂದ, ಸ್ವಾತಂತ್ರ್ಯಪೂರ್ವದಿಂದ ’ಲೆಕ್ಕವೇ ಇಲ್ಲದಿರುವ ಶತಮಾನಗಳಿಂದ’ ಸ್ಫೂರ್ತಿ ಪಡೆಯುತ್ತದೆ. ಚಕ್ರವು ಅಶೋಕನ ಜೊತೆಗೆ ಸಂಬಂಧ ಹೊಂದಿದೆ. ಆತ ’ಭಾರತದ ಇತಿಹಾಸದಲ್ಲಿ ಮಾತ್ರವಲ್ಲದೇ ಇಡೀ ಜಗತ್ತಿನ ಇತಿಹಾಸದಲ್ಲಿಯೂ ಗಮನಾರ್ಹ ವ್ಯಕ್ತಿಗಳಲ್ಲಿ ಒಬ್ಬ.’ ಅಶೋಕನವರೆಗೆ ಮರಳಿ ಹೋಗುವುದೆಂದರೆ, ಈ ಅಶಾಂತಿಯ, ಸಂಘರ್ಷದ ಮತ್ತು ಅಸಹಿಷ್ಣುತೆಯ ಈ ಕಾಲದಲ್ಲಿ ಪುರಾತನ ಕಾಲದಲ್ಲಿ ಭಾರತವು ಪ್ರತಿನಿಧಿಸಿದ್ದ ಮೌಲ್ಯಗಳಿಗೆ ಮರಳಿ ಹೋಗುವುದಾಗಿದೆ.

ಅಶೋಕ ಶಾಂತಿಯ ಜೊತೆಗೆ ಮಾತ್ರ ಸಂಬಂಧ ಹೊಂದಿರುವವನಲ್ಲ; ಅವನು ’ಅಂತಾರಾಷ್ಟ್ರೀಯತೆ’ಯ ಜೊತೆಗೂ ಸಂಬಂಧ ಹೊಂದಿದ್ದಾನೆ. ನೆಹರೂ ಹೇಳುವಂತೆ, “ಭಾರತವು ಹಿಂದೆ ಇತರ ದೇಶಗಳಿಗೆ ಅಗೌರವ ತೋರುವ, ಬಿಗಿಯಾದ ಸಣ್ಣ ಸಂಕುಚಿತ ದೇಶವಾಗಿರಲಿಲ್ಲ.” “ಸ್ವೀಕರಿಸುವ, ಮತ್ತು ಅಪ್ಪಿಕೊಳ್ಳುವ” ಅಶೋಕನ ಪರಂಪರೆಯನ್ನು ನೆನಪಿಸುತ್ತಾ, “ಯಾವುದೇ ದೇಶವು ತಾನು ಕೊಡುವುದು ಮಾತ್ರ, ಪ್ರಪಂಚದ ಬೇರೆ ದೇಶಗಳಿಂದ ಅಥವ ಜನಾಂಗಗಳಿಂದ ಪಡೆಯುವುದಿಲ್ಲ ಎಂದು ಯೋಚಿಸುವುದು ದೊಡ್ಡ ತಪ್ಪಾಗುತ್ತದೆ. ಒಂದು ಸಲ ಯಾವುದೇ ದೇಶ ಅಥವಾ ಜನಾಂಗ ಆ ರೀತಿಯಲ್ಲಿ ಯೋಚಿಸಲು ಆರಂಭಿಸಿದಾಗ, ಅದು ಜಡವಾಗಿ ಬೆಳೆಯುವುದನ್ನು ನಿಲ್ಲಿಸಿ, ಹಿಮ್ಮುಖವಾಗಿ ಬೆಳೆದು ಕೊಳೆಯುತ್ತದೆ” ಎಂದು ಹೇಳುತ್ತಾರೆ.

“ನಿಮ್ಮ ಮುಂದೆ ಪ್ರಸ್ತುತಪಡಿಸುವ ಅವಕಾಶದ ಗೌರವವನ್ನು ನನಗೆ ದೊರಕಿಸಿ ಕೊಟ್ಟ ಈ ಧ್ವಜವು ಒಂದು ಸಾಮ್ರಾಜ್ಯದ ಧ್ವಜವಾಗುವುದಿಲ್ಲ, ಸಾಮ್ರಾಜ್ಯವಾದದ ಧ್ವಜವಾಗುವುದಿಲ್ಲ, ಯಾರ ಮೇಲೂ ಆಧಿಪತ್ಯ ತೋರುವ ಧ್ವಜವಾಗುವುದಿಲ್ಲ; ಬದಲಾಗಿ ನಮಗೆ ಮಾತ್ರವೇ ಸ್ವಾತಂತ್ರ್ಯದ ಧ್ವಜವಾಗದೆ, ಅದನ್ನು ನೋಡುವ ಎಲ್ಲಾ ಜನರಿಗೂ ಸ್ವಾತಂತ್ರ್ಯದ ಪ್ರತೀಕವಾಗುತ್ತದೆ ಎಂದು ಆಶಿಸುತ್ತೇನೆ ಮತ್ತು ನಂಬುತ್ತೇನೆ” ಎಂದು ಅವರು ಮಾತು ಮುಗಿಸುತ್ತಾರೆ.

ಈ ಭಾಷಣವು ಸಂವಿಧಾನ ರಚನಾ ಸಭೆಯ ಸದಸ್ಯರಿಗೆ, ಅದರಲ್ಲೂ ಧಾರ್ಮಿಕ ಅಲ್ಪಸಂಖ್ಯಾತರು, ದಲಿತರು ಮತ್ತು ಆದಿವಾಸಿಗಳ ಪ್ರತಿನಿಧಿಗಳಿಗೆ ತಟ್ಟುತ್ತದೆ.

ಸಾರಾನಾಥದ ಅಶೋಕನ ಸಿಂಹ ಪೀಠವನ್ನು ಪರಿಚಯಿಸಿದ್ದನ್ನು ಸ್ವಾಗತಿಸುತ್ತಾ, ವಿ. ಐ. ಮುನಿಸ್ವಾಮಿ ಪಿಳ್ಳೈ ಅವರು, “ಹರಿಜನ ವರ್ಗಗಳು ಮತ್ತು ಸಮಾಜ ಏಣಿಯಲ್ಲಿ ಅತ್ಯಂತ ಕೆಳಗಿನ ಹಂತದಲ್ಲಿ ಇರುವವರು, ಈ ಘನಸಭೆಯಲ್ಲಿ ಅನಾವರಣಗೊಳ್ಳಲಿರುವ ಸಂವಿಧಾನವು, ಮುಳುಗಿಹೋಗಿರುವ ಲಕ್ಷಾಂತರ ಜನರಿಗೆ ಸಮಾಧಾನವನ್ನು ತಂದುಕೊಡುತ್ತದೆ ಎಂದು ಭಾವಿಸಿದ್ದಾರೆ” ಎಂದು ಹೇಳುತ್ತಾರೆ. ಅಖಿಲ ಭಾರತ ದಮನಿತ ವರ್ಗಗಳ ಸಂಘದ ಅಧ್ಯಕ್ಷರಾಗಿ ಎಚ್. ಜೆ. ಖಾಂಡೇಕರ್ ಅವರು, ಗೊತ್ತುವಳಿಯನ್ನು ಬೆಂಬಲಿಸುತ್ತಾ, “ಈ ದಿನದವರೆಗೆ ನಾವು ಉಳಿಸಿಕೊಂಡು ಬಂದಿರುವ ಧ್ವಜದ ಗೌರವಕ್ಕೆ ಧಕ್ಕೆ ಉಂಟಾದರೆ, ನಮ್ಮ ಸಮುದಾಯದ ಜನರು ಮತ್ತು ದೇಶದ ಇತರ ಜನರು ಧ್ವಜದ ಗೌರವವನ್ನು ರಕ್ಷಿಸಲು ತಮ್ಮನ್ನು ಬಲಿಕೊಡುತ್ತಾರೆ” ಎಂದು ಹೇಳುತ್ತಾರೆ. ಯುನೈಟೆಡ್ ಪ್ರಾವಿನ್ಸಸ್‌ನ ಮುಸ್ಲಿಂ ಸದಸ್ಯ ಚೌಧ್ರಿ ಖಾಲಿಕ್ ಉಝ್ಮಾನ್, ನೆಹರೂ ಮಂಡಿಸಿದ ಗೊತ್ತುವಳಿಯನ್ನು ಬೆಂಬಲಿಸುತ್ತಾ, “ಇಂದಿನಿಂದ ತಾನು ಭಾರತದ ಪ್ರಜೆ ಎಂದು ಭಾವಿಸುವ- ಅವರು, ಹಿಂದೂ, ಮುಸ್ಲಿಂ, ಕ್ರೈಸ್ತ- ಯಾರೇ ಆಗಿರಲಿ, ಒಬ್ಬ ನಾಗರಿಕನಾಗಿ, ಭಾರತದ ಧ್ವಜವಾಗಿ ಅಂಗೀಕರಿಸಲಾಗುತ್ತಿರುವ ಈ ಧ್ವಜದ ಗೌರವವನ್ನು ಎತ್ತಿಹಿಡಿದು ರಕ್ಷಿಸುತ್ತಾರೆ” ಎಂದು ಹೇಳುತ್ತಾರೆ.

ಕ್ರೈಸ್ತ ಸಮುದಾಯವನ್ನು ಪ್ರತಿನಿಧಿಸಿದ ಡಾ. ಎಚ್.ಸಿ. ಮುಖರ್ಜಿ ಅವರು, “ನಾವು ಕ್ರೈಸ್ತ ಧರ್ಮವನ್ನು ಬೋಧಿಸುವುದರಿಂದ ಮತ್ತು ಕೆಲವು ವಿದೇಶಿ ಮಿಷನ್‌ಗಳ ಜೊತೆ ಸಂಪರ್ಕ ಹೊಂದಿರುವುದರಿಂದ ಭಾರತದ ಕ್ರೈಸರಿಗೆ ಕ್ರೈಸ್ತ ಮನಸ್ಥಿತಿ ಎಂದು ಕರೆಯಲಾಗುವ ಮನೋಭಾವ ಇದೆಯೆಂದು ಹೇಳಲಾಗುತ್ತದೆ. ಹಾಗಿಲ್ಲ ಮತ್ತು ಅದು ತಪ್ಪು ಕಲ್ಪನೆ ಎಂದು ಹೇಳಲು ಭಾರತೀಯ ಕ್ರೈಸ್ತ ಸಮುದಾಯದ ಪರವಾಗಿ ಹೇಳಲು ನಾನಿಲ್ಲಿ ನಿಂತಿದ್ದೇನೆ. ನನ್ನ ಸಮುದಾಯವು ಇನ್ನೊಮ್ಮೆ ಈ ಧ್ವಜಕ್ಕೆ ತಮ್ಮ ನಿಷ್ಟೆಯನ್ನು ಸಲ್ಲಿಸುತ್ತದೆ ಎಂದು ಎಲ್ಲರೂ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು ಎಂದು ಬಯಸುತ್ತೇನೆ” ಎಂದು ಹೇಳುತ್ತಾರೆ.

’ಮೂರು ಕೋಟಿ ಆದಿವಾಸಿಗಳ’ ಪರವಾಗಿ ಮಾತನಾಡಿದ ಜೈಪಾಲ್ ಸಿಂಗ್ ಅವರು, “ಈ ಧ್ವಜವನ್ನು ಇನ್ನು ಮುಂದೆ ನಮ್ಮ ರಾಷ್ಟ್ರಧ್ವಜವಾಗಿ ಅಂಗೀಕರಿಸಲು ನನಗೆ ಭಾರೀ ಸಂತೋಷವಾಗುತ್ತಿದೆ. ಸಭೆಯ ಕೆಲವು ಸದಸ್ಯರು ಧ್ವಜಾರೋಹಣವು ಆರ್ಯನ್ ನಾಗರಿಕರ ಹಕ್ಕು ಎಂದು ಯೋಚಿಸುತ್ತಿದ್ದಾರೆ. ಆದರೆ, ಆದಿವಾಸಿಗಳು ಧ್ವಜವನ್ನು ಹಾರಿಸಿದವರಲ್ಲಿ ಮತ್ತು ತಮ್ಮ ಧ್ವಜಕ್ಕಾಗಿ ಹೋರಾಡಿದವರಲ್ಲಿ ಮೊದಲಿಗರು” ಎಂದು ಹೇಳುತ್ತಾರೆ.

ಆಂಗ್ಲೋ ಇಂಡಿಯನ್ ಸಮುದಾಯದ ಪರವಾಗಿ ಮಾತನಾಡಿದ ಫ್ರಾಂಕ್ ಆಂಟೋನಿ ಅವರು, “ಇವತ್ತು ಈ ಧ್ವಜವು ರಾಷ್ಟ್ರದ ಧ್ವಜವಾಗಿದೆ. ಇದು ಯಾವುದೇ ನಿರ್ದಿಷ್ಟ ಸಮುದಾಯದ ಧ್ವಜವಲ್ಲ. ಇದು ಎಲ್ಲಾ ಭಾರತೀಯರ ಧ್ವಜ. ಇದು ನಮ್ಮ ಇತಿಹಾಸದ ಸಂಕೇತವಾಗಿರುವಂತೆಯೇ ಅದು ನಮ್ಮ ಭವಿಷ್ಯಕ್ಕೂ ಸ್ಪೂರ್ತಿ ನೀಡುತ್ತದೆ ಎಂದು ನಾನು ನಂಬುತ್ತೇನೆ” ಎಂದು ಹೇಳುತ್ತಾರೆ.

ಜೋಧ್‌ಪುರ ರಾಜ್ಯದ ಪ್ರತಿನಿಧಿಯಾದ ಜೈ ನಾರಾಯಣ್ ವ್ಯಾಸ್ ಅವರು ಮಾತನಾಡುತ್ತಾ, “ಇದು ನಮ್ಮ ರಾಷ್ಟ್ರಧ್ವಜ. ಇದು ಹಿಂದೂಗಳು, ಮುಸ್ಲಿಮರು, ಸಿಕ್ಖರು ಮತ್ತು ಪಾರ್ಸಿಗಳು ಸೇರಿದಂತೆ ಭಾರತದ ಎಲ್ಲಾ ಸಮುದಾಯಗಳಿಗೆ ಸೇರಿದ್ದಾಗಿದೆ. ಇದು ಭಾರತದ ಎಲ್ಲೆಡೆ ಮತ್ತು ವೈಸರಾಯ್ ನಿವಾಸದಲ್ಲಿಯೂ, ರೈತರ ವಸತಿಗಳಿಂದ ಹಿಡಿದು, ರಾಜಕುಮಾರರ ಅರಮನೆಯ ತನಕ ಹಾರಾಡಲಿ” ಎನ್ನುತ್ತಾರೆ.

ಮದ್ರಾಸಿನ ರೆವರೆಂಡ್ ಜೆರೋಮ್ ಡಿ’ಸೋಜಾ ಅವರು, “ಎಲ್ಲಕ್ಕಿಂತ ಹೆಚ್ಚಾಗಿ ಅನ್ಯಾಯ ನಡೆದಾಗ, ಕೋಪವು ಹೆಚ್ಚಿದಾಗ, ಗುಂಪು ಕದನಗಳು ನಡೆದು ನಮ್ಮ ನಡುವೆ ಅಶಾಂತಿ ಉಂಟಾದಾಗ, ಕೋಮು ಶಾಂತಿ ಮುರಿದಾಗ, ನಮ್ಮ ಧ್ವಜವನ್ನು ಗೌರವಿಸಲು ಒಮ್ಮತದಿಂದ, ಭ್ರಾತೃತ್ವದಿಂದ ಸಂತೋಷವಾಗಿ ಸೇರಿರುವಂತೆ ಜತೆಯಾಗಿ ನಿಲ್ಲಲು ನೆರವಾಗಲಿ ಮತ್ತು ಈ ಧ್ವಜದ ನೋಟವು ಕಠೋರ ಮತ್ತು ಅಸಮಾಧಾನದ ಧ್ವನಿಗಳನ್ನು ಮೃದುಗೊಳಿಸಲಿ” ಎಂದು ಆಶಿಸುತ್ತಾರೆ.

ಕೊನೆಯ ಮಾತುಗಳನ್ನು ಆಡುತ್ತಾ ಸರೋಜಿನಿ ನಾಯ್ಡು ಅವರು. “ಈ ಸದನವು ರಚಿಸಲ್ಪಟ್ಟಿರುವ ವಿವಿಧ ಸಮುದಾಯದ ಪ್ರತಿನಿಧಿಗಳು ಈ ಧ್ವಜಕ್ಕೆ ತಮ್ಮ ನಿಷ್ಟೆಯನ್ನು ವ್ಯಕ್ತಪಡಿಸಿರುವುದಕ್ಕೆ” ಸಂತಸವನ್ನು ತೋಡಿಕೊಳ್ಳುತ್ತಾರೆ.

ನಾವಿಂದು ಇತಿಹಾಸಕ್ಕೆ ಏಕಾಗಿ ಮರಳಿ ಹೋಗಬೇಕು? ಈ ಇತಿಹಾಸಕ್ಕೆ ಮರಳಿ ಹೋಗುವುದರಿಂದ ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುತ್ತಿರುವ ನಮಗೆ ಈ ಆಚರಣೆಗೆ ತಾತ್ವಿಕ ವಸ್ತು ಮತ್ತು ಐತಿಹಾಸಿಕ ಆಳವನ್ನು ದೊರಕಿಸಿಕೊಡಲು ನೆರವಾಗಬಹುದು.

ಮೊದಲನೆಯದಾಗಿ, ಧಾರ್ಮಿಕ, ಜಾತಿ, ಆದಿವಾಸಿ, ಲಿಂಗ ವೈವಿಧ್ಯವನ್ನು ಮೀರಿ ಸಂವಿಧಾನ ರಚನಾ ಸಭೆಯಲ್ಲಿ ಮಾತನಾಡಿದವರ ಸಮಾನ ಭಾವನೆ ಏನಾಗಿತ್ತೆಂದರೆ, ಧ್ವಜವು ಎಲ್ಲರಿಗೂ ಸೇರಿದ್ದೆಂದು ಮತ್ತು ನಾವೆಲ್ಲರೂ ಜೊತೆಗಿದ್ದೇವೆಂಬುದು. ಇಂದು ಈ ಕಲ್ಪನೆಯನ್ನೇ ಪ್ರಶ್ನಿಸಲಾಗುತ್ತಿದೆ. ಸಿಎಎ ವಿರೋಧಿ ಪ್ರತಿಭಟನಕಾರರನ್ನು ನಡೆಸಿಕೊಂಡ ರೀತಿ ಇದನ್ನು ಬಹುಶಃ ಸಂಕೇತಿಸುತ್ತದೆ.

ತ್ರಿವರ್ಣ ಧ್ವಜದ ಕುರಿತು ಪ್ರಧಾನಿ ಮೋದಿ ಟ್ವೀಟ್; ‘ಬೂಟಾಟಿಕೆ ಜಿಂದಾಬಾದ್!’ ಎಂದ ಕಾಂಗ್ರೆಸ್ | Naanu Gauriಸಿಎಎ ವಿರೋಧಿ ಪ್ರತಿಭಟನಾಕಾರರ ಬಹಳ ದೊಡ್ಡ ಪಾಪವೆಂದರೆ, ಅವರು ಹೆಚ್ಚಾಗಿ ಮುಸ್ಲಿಮರಾಗಿದ್ದರೂ, ರಾಷ್ಟ್ರಧ್ವಜದ ಸಾಂಕೇತಿಕತೆಯ ಅಡಿಯಲ್ಲಿ ತಮ್ಮ ವಿರೋಧದ ಧ್ವನಿಯನ್ನು ಎತ್ತುವ ಧೈರ್ಯ ಮಾಡಿದರು ಎಂಬುದು. ಇವತ್ತು ಸಿಎಎ ಮಸೂದೆಯನ್ನು ಪ್ರತಿಭಟಿಸಿದ ಹಲವರು- ಅದು ಉಮ್ಮರ್ ಖಾಲಿದ್, ಖಾಲಿದ್ ಸೈಫಿ ಅಥವಾ ಗುಲ್ಫಿಶಾ ಫಾತಿಮ ಆಗಿರಲಿ- ಇನ್ನೂ ಜೈಲಿನಲ್ಲಿದ್ದಾರೆ. ದಿಲ್ಲಿ ದಮನ ಕಾರ್ಯಾಚರಣೆಯ ವೇಳೆ ಪೊಲೀಸರು ತೀವ್ರವಾಗಿ ಗಾಯಗೊಂಡ ಐವರು ಮುಸ್ಲಿಂ ವ್ಯಕ್ತಿಗಳಿಗೆ ಥಳಿಸುವ, ರಾಷ್ಟ್ರಗೀತೆಯನ್ನು ಹಾಡುವಂತೆ ಒತ್ತಾಯಿಸುವ ವೈರಲ್ ಆದ ವಿಡಿಯೋ ಈ ಕತೆಯನ್ನು ಹೇಳುತ್ತದೆ. ಆಜಾದಿ ಎಂದು ಕೂಗುವಂತೆ ಪೊಲೀಸರು ಅವರಿಗೆ ಸವಾಲು ಹಾಕುತ್ತಿದ್ದರು ಮತ್ತು ರಾಷ್ಟ್ರಗೀತೆಯನ್ನು ಹಾಡುವಂತೆ ಒತ್ತಾಯಿಸುತ್ತಿದ್ದರು. ಇದರ ಸಾಂಕೇತಿಕತೆ ಸ್ಪಷ್ಟವಾಗಿದೆ. ರಾಷ್ಟ್ರಗೀತೆ ನಿಮಗೆ ಸೇರಿದ್ದಲ್ಲ ಮತ್ತು ನೀವದನ್ನು ಹಾಡಿದರೆ ಮುಂದೊಂದು ದಿನ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆಂದು! ರಾಷ್ಟ್ರಧ್ವಜಕ್ಕೆ ಗೌರವ ನೀಡುವುದೆಂದರೆ, ಮೂಲಭೂತವಾಗಿ ಭಾರತೀಯ ಸಂವಿಧಾನದ ಅಡಿಯಲ್ಲಿ ಎಲ್ಲರಿಗೂ ಸಮಾನ ಹಕ್ಕಿದೆ ಎಂಬುದಕ್ಕೆ ಮಾನ್ಯತೆ ನೀಡುವುದು.

ಎರಡನೆಯದಾಗಿ 75ನೇ ಸ್ವಾತಂತ್ರ್ಯದ ಆಚರಣೆಯು ಕೇವಲ ರಾಷ್ಟ್ರೀಯತೆಯ ಭಾವನೆಯನ್ನು ಪ್ರೇರೇಪಿಸುವುದಕ್ಕಿಂತಲೂ ಹೆಚ್ಚಾಗಿ ಭಾರತವೆಂದರೆ ಏನು ಮತ್ತು ದೇಶವನ್ನು ಈ ಹೊತ್ತು ಬಾಧಿಸುತ್ತಿರುವ ವಿವಿಧ ಆಯಾಮಗಳ ಪ್ರಶ್ನೆಗಳನ್ನು ಚರ್ಚಿಸಿ, ನೆಹರೂ ಅವರು ಮಾಡಿದ್ದಂತೆ ಸ್ವಾತಂತ್ರ್ಯಕ್ಕೆ ನಿರ್ಣಾಯಕವಾದ ಒಂದು ಆಯಾಮ ನೀಡಲು ನಮಗೆ ಸಾಧ್ಯವಾಗಬೇಕು.

’ಹರ್ ಘರ್ ತಿರಂಗ’ ಎಂಬ ಚಾತುರ್ಯದ ಘೋಷಣೆಯಲ್ಲಿ ಈ ಅಂಶ ಮತ್ತೆ ಮಾಯವಾಗಿದೆ. ರಾಷ್ಟ್ರೀಯತೆಯ ಭಾವನೆಗಳು ಧಾರಾಳವಾಗಿ ತುಂಬಿದ್ದರೂ, ಯಾವುದೇ ಗಟ್ಟಿ ಹೂರಣವಿರುವ ವಿಷಯ ಅದರಲ್ಲಿಲ್ಲ. ಭಾರತವು ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಅಸಮಾನತೆ ಇರುವ ದೇಶಗಳಲ್ಲಿ ಒಂದಾಗಿರುವಾಗ, ಸ್ವಾತಂತ್ರ್ಯದ ಆಚರಣೆಯು ಆರ್ಥಿಕ ಸ್ವಾತಂತ್ರ್ಯ ಸಾಧಿಸಲಾಗದ ಕುರಿತು ಮತ್ತು ಅದಕ್ಕೆ ಪರಿಹಾರದ ಕುರಿತು ತಿಳಿವಳಿಕೆ ನೀಡುವಂತಿರಬೇಕಿತ್ತು.

ಮೂರನೆಯದಾಗಿ, ಸ್ವಾತಂತ್ರ್ಯದ ಸಂಕೇತವೆಂದರೆ, ಅದು ’ದಣಿವಿಲ್ಲದ ಶ್ರಮ’ದ ಮತ್ತು ’ಮಲಗುವ ಮೊದಲು ಸಾಕಷ್ಟು ದೂರ ಕ್ರಮಿಸುವುದಿದೆ’ ಎಂಬುದನ್ನು ನೆನಪಿಸುವ ಸಂಕೇತವೂ ಆಗಿರಬೇಕಿತ್ತು. ನಾವು ’ರಾಜಕೀಯ ಸಮಾನತೆ’ಯ ವಿರೋಧಾಭಾಸದ ಕಾಲಘಟ್ಟದಲ್ಲಿ ಇದ್ದೇವೆ. ಆದರೆ ’ಸಾಮಾಜಿಕ ಸಮಾನತೆ’ ಅಥವಾ ’ಆರ್ಥಿಕ ಸಮಾನತೆ’ ಸಾಧ್ಯವಾಗಿಲ್ಲ ಎಂಬ ಅಂಬೇಡ್ಕರ್‌ವಾದಿ ತಿಳಿವಳಿಕೆಯ ಅಗತ್ಯ ಇರಬೇಕಾಗಿದೆ. ನಾವು ಒಬ್ಬ ವ್ಯಕ್ತಿ, ಒಂದು ಮತವನ್ನೇನೋ ಹೊಂದಿದ್ದೇವೆ. ಆದರೆ, ನಾವು ಒಬ್ಬ ವ್ಯಕ್ತಿ, ಒಂದೇ ಮೌಲ್ಯ ಎಂಬುದನ್ನು ಇನ್ನೂ ಹೊಂದಿಲ್ಲ. 1947ರ ಸ್ವಾತಂತ್ರ್ಯ ದಿನಾಚರಣೆಯನ್ನು ನಾವು ಮುಂದೆ ಕ್ರಮಿಸಬೇಕಾದ ದಾರಿಯನ್ನು ತೋರಿಸುತ್ತಾ ಆಚರಿಸಲಾಗಿದೆ. ಹೀಗಿದ್ದಾಗ, ಖಂಡಿತವಾಗಿಯೂ ಈಗ ಅಸಭ್ಯವಾಗಿ ತುತ್ತೂರಿ ಊದುವುದಕ್ಕೆ ಅವಕಾಶವಿದೆಯೇ?

ಅಂತಿಮವಾಗಿ, ಧ್ವಜವು ಸ್ವಾತಂತ್ರ್ಯದ ಸಂಕೇತವಾಗಿರಬೇಕು. ಅತ್ಯಂತ ಮುಖ್ಯವಾಗಿ ಭಯದಿಂದ ಮುಕ್ತಿನೀಡುವ ಸ್ವಾತಂತ್ರ್ಯ ಬೇಕು. ಗಾಂಧೀಜಿಯವರು ಹಿಂದ್ ಸ್ವರಾಜ್‌ನಲ್ಲಿ ಹೇಳಿರುವಂತೆ, “ತಮ್ಮ ಆಸ್ತಿ, ಹುಸಿ ಗೌರವ, ತಮ್ಮ ಸಂಬಂಧಿಗಳು, ಸರಕಾರ, ದೈಹಿಕ ಹಾನಿ, ಸಾವು ಇತ್ಯಾದಿಗಳ ಕುರಿತು ಭಯ ಇಲ್ಲದವರು ಮಾತ್ರವೇ ಅಸಹಕಾರದ ಪ್ರತಿರೋಧದ ಹಾದಿಯಲ್ಲಿ ಸಾಗಲು ಸಾಧ್ಯ.” ಇಂದು ಜನರು ಭಯದಲ್ಲಿ ಇದ್ದಾರೆ; ಮನಸ್ಸಿನಲ್ಲಿ ಇರುವುದನ್ನು ಹೇಳಲು ಭಯ, ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯುವುದಕ್ಕೆ ಭಯ. ನಿರ್ಭಯವನ್ನು ಬೆಳೆಸಿಕೊಳ್ಳುವುದೆಂದರೆ ಸರಕಾರ, ನಿಮ್ಮ ಕುಟುಂಬ ನಿಮ್ಮ ಸಮಾಜವು ಎನು ಹೇಳಬಹುದು ಎಂಬ ಭಯವಿಲ್ಲದೆ ಮಾತನಾಡಲು ಮತ್ತು ಮಾಡಲು ಕಲಿಯುವುದು. ನಾವು ಸ್ವಾತಂತ್ರ್ಯದ ಒಂದು ರೂಪವಾಗಿ ನಿರ್ಭಯತೆಯನ್ನು ಕಲಿಯಬೇಕಾಗಿದೆ.

ನಾವು ನಮ್ಮ ದೇಶದ ನಿರ್ಮಾತೃಗಳಿಂದ ರಾಷ್ಟ್ರೀಯ ಧ್ವಜವನ್ನು ಗೌರವಿಸುವುದೆಂದರೆ ಏನೆಂಬುದನ್ನು ಕಲಿಯುವ ಅಗತ್ಯವಿದೆ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಪಿಯುಸಿಎಲ್-ಕೆನ ರಾಜ್ಯಾಧ್ಯಕ್ಷರು


ಇದನ್ನೂ ಓದಿ: ತ್ರಿವರ್ಣಕಾರಣ: ರಾಷ್ಟ್ರಧ್ವಜದ ನಿಯಮಾವಳಿ ಸುತ್ತಮುತ್ತಲ ರಾಜಕೀಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...