Homeಮುಖಪುಟಈಗ ಅಗತ್ಯ ಇರುವುದು ಲಿಂಗ ನ್ಯಾಯ ಸಂಹಿತೆ, ಏಕರೂಪ ನಾಗರಿಕ ಸಂಹಿತೆಯಲ್ಲ

ಈಗ ಅಗತ್ಯ ಇರುವುದು ಲಿಂಗ ನ್ಯಾಯ ಸಂಹಿತೆ, ಏಕರೂಪ ನಾಗರಿಕ ಸಂಹಿತೆಯಲ್ಲ

- Advertisement -
- Advertisement -

“ಪ್ರತ್ಯೇಕ ಸಮುದಾಯಗಳಿಗೆ ಪ್ರತ್ಯೇಕ ಕಾನೂನು” ಎಂಬ ದ್ವಿ-ವ್ಯವಸ್ಥೆಯೊಂದಿಗೆ ದೇಶವು ನಡೆಯಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ಭಾರತಕ್ಕೆ ಏಕರೂಪ ನಾಗರಿಕ ಸಂಹಿತೆ (ಯೂನಿಫಾರ್ಮ್ ಸಿವಿಲ್ ಕೋಡ್-ಯುಸಿಸಿ) ಅಗತ್ಯವಿದೆ ಎಂದು ಪ್ರಧಾನಿ ಹೇಳುವುದರೊಂದಿಗೆ ಅದು ಈಗ ಚುನಾವಣಾ ವಿಷಯವಾಗಿದೆ ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಿದೆ. ಸದರಿ ಭಾರತೀಯ ಕಾನೂನು ಆಯೋಗ ಈಗ ಯುಸಿಸಿ ಮೇಲೆ ಸಾರ್ವಜನಿಕ ಅಭಿಪ್ರಾಯಗಳನ್ನು ಸಂಗ್ರಹಿಸಿದೆ. 2018ರಲ್ಲಿ ಕಾನೂನು ಆಯೋಗದ ವರದಿಯು “ಈ ಹಂತದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ರೂಪಿಸುವ ಅಗತ್ಯವಾಗಲೀ, ಅಪೇಕ್ಷೆಯಾಗಲೀ ಇಲ್ಲ” ಎಂದು ತೀರ್ಮಾನಿಸಿತ್ತು. ಅದಕ್ಕೆ ಕಾರಣವಾಗಿ ’ಅಸಮಾನತೆಯ ಮೂಲ ಇರುವುದು ತಾರತಮ್ಯದಲ್ಲಿಯೇ ಹೊರತು ವ್ಯತ್ಯಾಸದಲ್ಲಲ್ಲ’ ಎಂಬುದನ್ನು ಗುರುತಿಸಿತ್ತು.

ವಿವಿಧ ಸಮುದಾಯಗಳ ಮನಗೆದ್ದು ಎಲ್ಲರನ್ನು ಜತೆಗೆ ಕರೆದುಕೊಂಡು ಹೋಗುವುದಕ್ಕೆ ಸರ್ಕಾರಕ್ಕೆ ಸಾಧ್ಯವಾಗದ ಕಾರಣ ಈ ಪ್ರಕ್ರಿಯೆಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಆದ್ದರಿಂದ, ಏಕರೂಪ ನಾಗರಿಕ ಸಂಹಿತೆಯು ಏನನ್ನು ಒಳಗೊಂಡಿರುತ್ತದೆ ಎಂಬುದರ ಬಗ್ಗೆ ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಅನುಮಾನಗಳಿವೆ. ಸಾಂವಿಧಾನಿಕ ಹಕ್ಕುಗಳ ಬಗ್ಗೆ ಕಾಳಜಿ ವಹಿಸುವ ಎಲ್ಲರನ್ನೂ ಚಿಂತೆಗೆ ದೂಡುವ ಸಂಗತಿಯೆಂದರೆ, ಕಾನೂನು ಆಯೋಗವು ಹೊರಡಿಸಿರುವ ನೋಟಿಸ್‌ನಲ್ಲಿ ನಿರ್ದಿಷ್ಟವಾಗಿ “ಮಾನ್ಯತೆ ಪಡೆದ ಧಾರ್ಮಿಕ ಸಂಸ್ಥೆಗಳು” ತಮ್ಮ ಅಭಿಪ್ರಾಯಗಳನ್ನು ಸೂಚಿಸಲು ಆಹ್ವಾನಿಸುತ್ತದೆ. ಆ ಮೂಲಕ ಏಕರೂಪ ನಾಗರಿಕ ಸಂಹಿತೆ ಬಗೆಗಿನ ಯಾವುದೇ ಚರ್ಚೆಯಲ್ಲಿ ಮುಖ್ಯವಾಗಿ ಭಾಗಿದಾರರಾಗಬೇಕಿರುವ ಸಮುದಾಯಗಳೆಂದರೆ ಮಹಿಳೆಯರು, ಲೈಂಗಿಕ ಅಲ್ಪಸಂಖ್ಯಾತರು, ದಲಿತರು ಮತ್ತು ಆದಿವಾಸಿಗಳು ಎಂಬ ಅಂಶವನ್ನೇ ನಿರಾಕರಿಸುತ್ತದೆ.

ಏಕರೂಪ ನಾಗರಿಕ ಸಂಹಿತೆಯು ಅಲ್ಪಸಂಖ್ಯಾತರ ಮೇಲೆ ಗದಾ ಪ್ರಹಾರ ಮಾಡುವ ಸಾಧನವಾಗುವುದು ಬೇಕಿಲ್ಲವಾದರೂ, ಮಹಿಳಾ ಚಳವಳಿಗಳು ಹಾಗೂ LGBTQI ಚಳವಳಿಯು ಬಹಳ ಹಿಂದಿನಿಂದಲೂ ಪ್ರತಿಪಾದಿಸುತ್ತಿರುವಂತೆ, ವೈಯಕ್ತಿಕ ಕಾನೂನುಗಳಲ್ಲಿ ಸುಧಾರಣೆ ಅತ್ಯಗತ್ಯ. ಹಾಗಿದ್ದರೆ, ಯಾವ ಆಧಾರದಲ್ಲಿ ಈ ಸುಧಾರಣೆಗಳನ್ನು ಆಗುಮಾಡಬಹುದು?

ಭಾರತದ ಸಂವಿಧಾನದ ರಾಜ್ಯನೀತಿಯ ನಿರ್ದೇಶಕ ತತ್ವಗಳ (Directive Principles of State Policy) ಅಡಿಯಲ್ಲಿ ಕಂಡುಬರುವ 44ನೇ ವಿಧಿಯಲ್ಲಿ ರಾಜ್ಯವು ’ಭಾರತದ ಭೂಪ್ರದೇಶದಾದ್ಯಂತ ಏಕರೂಪದ ನಾಗರಿಕ ಸಂಹಿತೆಯನ್ನು ರೂಪಿಸಲು ಪ್ರಯತ್ನಿಸಬೇಕು’ ಎಂದು ಉಲ್ಲೇಖಿಸಲಾಗಿದೆ. ಇದುವೇ ಏಕರೂಪ ನಾಗರಿಕ ಸಂಹಿತೆಯ ಬಗೆಗಿನ ಕಾನೂನಾತ್ಮಕ ಚರ್ಚೆಗಳಿಗೆ ಮೂಲ. ಆದರೆ, 44ನೇ ವಿಧಿಯನ್ನು ಭಾರತದ ಸಂವಿಧಾನದ ಪೀಠಿಕೆ ಮತ್ತು ಮೂಲಭೂತ ಹಕ್ಕುಗಳ ಅಧ್ಯಾಯಗಳ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕು. ’ಏಕರೂಪ ನಾಗರಿಕ ಸಂಹಿತೆ’ಯು ಸಂವಿಧಾನದ 14, 15, 19 ಮತ್ತು 21ನೇ ವಿಧಿಗಳಲ್ಲಿ ಅಡಕವಾಗಿರುವ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ, ಘನತೆ ಮತ್ತು ಗೌಪ್ಯತೆಯ ಸಾಂವಿಧಾನಿಕ ಖಾತರಿಗಳಿಗೆ ಹಾಗೂ ಇವುಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ವ್ಯಾಖ್ಯಾನಗಳಿಗೆ ಅನುಗುಣವಾಗಿರಬೇಕು.

ಈಗ ಅಗತ್ಯವಿರುವುದು ಸಾಂವಿಧಾನಿಕ ತತ್ವಗಳನ್ನು ಒಳಗೊಂಡಿರುವ ಲಿಂಗ ಸಮಾನತೆಯ ಸಂಹಿತೆಯೇ ಹೊರತು ’ಏಕರೂಪ ನಾಗರಿಕ ಸಂಹಿತೆ’ಯಲ್ಲ.

ಸಮಾನತೆಯು ಸಾಂವಿಧಾನಿಕ ಭರವಸೆಯ ಹೃದಯವೇ ಆಗಿದೆ. ಆದ್ದರಿಂದ, LBGTQI ಸಮುದಾಯದವರನ್ನೂ ಒಳಗೊಂಡಂತೆ ಎಲ್ಲರಿಗೂ ಮದುವೆಯ ಹಕ್ಕನ್ನು ನೀಡಬೇಕು ಹಾಗೂ ಮಹಿಳೆಯರ ಮೇಲೆ ತಾರತಮ್ಯವೆಸಗುವ ನಿಬಂಧನೆಗಳನ್ನು ’ಲಿಂಗ ನ್ಯಾಯ ಸಂಹಿತೆ’ಯು ರದ್ದುಪಡಿಸಬೇಕಾಗುತ್ತದೆ. ಹೀಗಾಗಿ, ಯಾವುದೇ ತಾರತಮ್ಯಕ್ಕೆ ಒಳಗಾಗದೆ ವಿಚ್ಛೇದನ ಪಡೆಯುವ ಹಕ್ಕನ್ನು ಹಾಗೂ ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಸಮಾನತೆಯ ಹಕ್ಕನ್ನು ನೀಡಬೇಕು. ಪ್ರಸ್ತುತ, ಜೀವನಾಂಶವೊಂದೇ ಮದುವೆ ವಿಸರ್ಜನೆಯ ಸಂದರ್ಭದಲ್ಲಿ ಮಹಿಳೆಯರು ಪಡೆಯಬಹುದಾದ ಪರಿಹಾರವಾಗಿದೆ. ಇದರಿಂದಾಗಿ, ಮಕ್ಕಳು/ಗಂಡಂದಿರು ಮತ್ತು ವಯಸ್ಸಾದ ವ್ಯಕ್ತಿಗಳ ಆರೈಕೆಯ ರೂಪದಲ್ಲಿಯಾಗಲೀ, ಮನೆ-ಸಂಸಾರದ ನಿರ್ವಹಣೆಯಲ್ಲಾಗಲೀ ಮನೆಯ ಹೊರಗೆ ದುಡಿಯದ ಮಹಿಳೆಯರು ನಿರ್ವಹಿಸುವ ಕೆಲಸಗಳನ್ನು/ದುಡಿಮೆಯನ್ನು ಅದು ಪರಿಗಣಿಸಿ ಅದನ್ನು ಮಾನ್ಯಗೊಳಿಸುವುದಿಲ್ಲ. ಸಮಾನತೆಯ ಆಧಾರದ ಮೇಲೆ ರಚಿತವಾಗಬೇಕಾದ ಸಂಹಿತೆಗಳು ಅಥವಾ ಕಾನೂನುಗಳು ಈ ಅಂಶವನ್ನು ಗುರುತಿಸಿ ಇದಕ್ಕೆ ಸೂಕ್ತ ಪರಿಹಾರ ಒದಗಿಸಬೇಕಿದೆ. ವಿಚ್ಛೇದನದ ಸಂದರ್ಭದಲ್ಲಿ, ಮದುವೆಯಾದ ನಂತರದಲ್ಲಿ ಗಳಿಸಲಾದ ಆಸ್ತಿಯಲ್ಲಿಯೂ ಮಹಿಳೆಯರು ಸಮಾನ ಹಕ್ಕು ಹೊಂದಿದ್ದಾರೆ ಎಂಬುದನ್ನು ಗುರುತಿಸಿ ಮಾನ್ಯಮಾಡಬೇಕಿದೆ.

ಇದನ್ನೂ ಓದಿ: ಬಿಜೆಪಿಗೆ ಬೇಕಿರುವ ಏಕರೂಪ ನಾಗರಿಕ ಸಂಹಿತೆ ನ್ಯಾಯಸಮ್ಮತವಾದದ್ದೇ?

ಸ್ವಾತಂತ್ರ್ಯವೆಂದರೆ ಜನರು ತಮ್ಮಿಷ್ಟದ ಆಯ್ಕೆಗಳನ್ನು ಮಾಡಿಕೊಳ್ಳುವುದೇ ಆಗಿದೆ. ವೈಯಕ್ತಿಕ ಕಾನೂನು(Personal Laws)ಗಳಿಗೆ ಸಂಬಂಧಿಸಿದಂತೆ ಸ್ವಾತಂತ್ರ್ಯವೆಂದರೆ ಗೌಪ್ಯ ಮತ್ತು ಆಪ್ತ ಎನಿಸಬಹುದಾದ ವಿಷಯಗಳಲ್ಲಿಯೂ, ಅದರಲ್ಲೂ ವಿಶೇಷವಾಗಿ, ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಾಗಿದೆ. ಬಿಜೆಪಿಯ ಆಡಳಿತದಲ್ಲಿ ಉತ್ತರ ಪ್ರದೇಶ, ಗುಜರಾತ್ ಮತ್ತು ಕರ್ನಾಟಕದಲ್ಲಿ ಸರ್ಕಾರಗಳು ಜಾರಿಗೆ ತಂದ ’ಲವ್ ಜಿಹಾದ್’ ಕಾನೂನುಗಳು ಈ ತತ್ವದ ಮೇಲೆ ದಾಳಿ ನಡೆಸಿವೆ. ದೇಶದೆಲ್ಲೆಡೆ ಎಗ್ಗಿಲ್ಲದೆ ನಡೆಯುತ್ತಿರುವ ’ಮರ್ಯಾದಾ ಹತ್ಯೆಗಳು’ ವೈಯಕ್ತಿಕ ಆಯ್ಕೆಯನ್ನೂ ತನ್ನ ಹಿಡಿತದಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸುವ ನೈತಿಕ ಸಂಹಿತೆಗೆ ಸಾಕ್ಷಿಯನ್ನು ಒದಗಿಸುತ್ತಿವೆ. ’ಲಿಂಗ ನ್ಯಾಯ ಸಂಹಿತೆ’ಯು ಲವ್ ಜಿಹಾದ್ ಎಂದು ಕರೆಯಲ್ಪಡುವ ಕಾನೂನುಗಳನ್ನು ರದ್ದುಗೊಳಿಸಬೇಕು ಮತ್ತು ಅಂತರ-ಜಾತಿ ಮತ್ತು ಅಂತರ-ಧರ್ಮೀಯ ಸಂಬಂಧದಲ್ಲಿರುವ ವ್ಯಕ್ತಿಗಳಿಗೆ ರಕ್ಷಣೆಯನ್ನು ಒದಗಿಸಬೇಕು.

ಭಾರತ ಸಂವಿಧಾನದ ಪೀಠಿಕೆಯಲ್ಲಿ ಭ್ರಾತೃತ್ವದ ಮೌಲ್ಯವು ಅಡಕವಾಗುವುದಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಏಕಮಾತ್ರ ಕಾರಣರಾಗಿದ್ದರು. ಜಾತಿ ಮತ್ತು ಧರ್ಮದ ರೇಖೆಗಳನ್ನು ಮೀರಿದ ಪ್ರೇಮ-ವಿವಾಹಗಳನ್ನು ಪ್ರೋತ್ಸಾಹಿಸುವ ಮೂಲಕ ಸಮಾಜದ ವಿವಿಧ ಸಮುದಾಯಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವುದೇ ಭ್ರಾತೃತ್ವವೆಂದು ಬಾಬಾಸಾಹೇಬರು ಅರ್ಥೈಸಿದ್ದರು. ’ಸ್ಪೃಶ್ಯರು ಮತ್ತು ಅಸ್ಪೃಶ್ಯರನ್ನು ಕಾನೂನಿನ ಮೂಲಕ ಒಟ್ಟುಮಾಡಲು ಸಾಧ್ಯವಿಲ್ಲ… ಅವರನ್ನು ಒಟ್ಟುಮಾಡಬಲ್ಲ ಏಕೈಕ ಮಾರ್ಗವೆಂದರೆ ಪ್ರೀತಿ’ ಎಂದು ಅವರು ಹೇಳಿದ್ದರು. ನಮ್ಮ ಸಮಾಜದಲ್ಲಿ ಭ್ರಾತೃತ್ವವನ್ನು ಉತ್ತೇಜಿಸುವಂತಹ ’ಲಿಂಗ ನ್ಯಾಯ ಸಂಹಿತೆ’ಯೊಂದು ರೂಪುಗೊಂಡರೆ, ಅದುವೇ ಬಾಬಾಸಹೇಬರಿಗೆ ಸಲ್ಲಿಸಬಹುದಾದ ಗೌರವವಾಗಿದೆ.

’ಲಿಂಗ ನ್ಯಾಯ ಸಂಹಿತೆ’ಯು ಘನತೆಯನ್ನು ತನ್ನ ದಾರಿದೀಪವನ್ನಾಗಿಸಿಕೊಳ್ಳಬೇಕಿದೆ. ಘನತೆಯ ರಕ್ಷಣೆಯಾಗಬೇಕಾದರೆ, ವ್ಯಕ್ತಿಯ ಘನತೆಗೆ ಧಕ್ಕೆ ತರುವ ವೈಯಕ್ತಿಕ ಕಾನೂನಿನಲ್ಲಿರುವ ಹಲವು ನಿಬಂಧನೆಗಳು ರದ್ದಾಗಬೇಕಿವೆ. ವಿಚ್ಛೇದನದ ಕಾನೂನನ್ನು ಸರಳಗೊಳಿಸಬೇಕಿದೆ, ಆದರೆ ಅದಕ್ಕೆ ಆಧಾರ ಘನತೆಗೆ ಕುಂದು ತರುವಂತದ್ದಾಗಿರಬಾರದು. ಅಲ್ಲದೇ, ವಿಚ್ಛೇದನ ಪಡೆಯಲು ನಿಮ್ಮ ಸಂಗಾತಿಯ ವಿರುದ್ಧ ವ್ಯಭಿಚಾರದಂತಹ ಆರೋಪಗಳನ್ನು ಹೊರಿಸಿ ಅವರನ್ನು ಅವಮಾನಿಸುವಂತಿರಬಾರದು. ಬದಲಾಗಿ, ಸಂಗಾತಿಯೊಂದಿಗೆ ನಿಕಟ ಸಂಬಂಧವೊಂದನ್ನು ಹೊಂದಲು ಸಾಧ್ಯವಾಗದಿರುವುದು ವಿಚ್ಛೇದನ ಪಡೆಯಲು ಸಕಾರಣ ಎಂಬುದನ್ನು ಕಾನೂನು ಗುರುತಿಸಿ, ಅದನ್ನು ಆಗುಮಾಡಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ, ’ಯಾವುದೇ ತಪ್ಪಿಲ್ಲದ’ (No-fault) ವಿಚ್ಛೇದನವನ್ನು ಕಾನೂನು ಮಾನ್ಯ ಮಾಡಬೇಕು ಮತ್ತು ಪ್ರಸ್ತುತ ಜಾರಿಯಲ್ಲಿರುವ ’ತಪ್ಪು ಆಧಾರಿತ’ ವಿಚ್ಛೇದನ (Fault based divorce) ಕಾನೂನಿನಿಂದ ದೂರ ಸರಿಯಬೇಕು.

ಪುಟ್ಟಸ್ವಾಮಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಗೌಪ್ಯತೆಯ ಹಕ್ಕು ಸಾಂವಿಧಾನಿಕ ಹಕ್ಕಾಗಿದ್ದು ಸಂವಿಧಾನದ ಪರಿಚ್ಛೇದ 21 ಹಾಗೂ ಇತರ ಮೂಲಭೂತ ಹಕ್ಕುಗಳ ಅಡಿಯಲ್ಲಿ ರಕ್ಷಿಸಲಾಗಿದೆ ಎಂದು ತನ್ನ ತೀರ್ಪಿನಲ್ಲಿ ಎತ್ತಿಹಿಡಿದಿದೆ. ನಾಗರಿಕರು ಸಾರ್ವಜನಿಕರ ಲಕ್ಷ್ಯಕ್ಕೆ ಬೀಳದೆಯೇ ತಮ್ಮ ಆಯ್ಕೆಯನ್ನು ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಹೊಂದುವುದು ಕೂಡ ಗೌಪ್ಯತೆಯ ಹಕ್ಕಿನ ಭಾಗವಾಗಿದೆ.

ವಿಶೇಷ ವಿವಾಹ ಕಾಯ್ದೆಯಡಿ ವಿವಾಹವಾಗಲು ಯಾರಾದರೂ ತೀರ್ಮಾನಿಸಿದರೆ ಅವರು ವಿವಾಹ ನೋಂದಣಾಧಿಕಾರಿಗಳಿಗೆ ನೋಟಿಸೊಂದನ್ನು ನೀಡಬೇಕು ಮತ್ತಿದು ಸಾರ್ವಜನಿಕವಾಗಿರುತ್ತದೆ. ಇದು ಗೌಪ್ಯತೆಯ ಹಕ್ಕಿನ ಉಲ್ಲಂಘನೆಯಾಗಿದೆ ಮತ್ತಿದನ್ನು ’ಲಿಂಗ ನ್ಯಾಯ ಸಂಹಿತೆ’ಯಲ್ಲಿ ರದ್ದುಪಡಿಸಬೇಕಾಗಿದೆ. ’ಲಿಂಗ ನ್ಯಾಯ ಸಂಹಿತೆ’ಯು ಒಳಗೊಳ್ಳುವಿಕೆಯ ಆಧಾರದ ಮೇಲೆ ರೂಪಿತವಾಗಬೇಕಿದೆ. ಅಂದರೆ, ಯಾರನ್ನೂ ಹೊರಗುಳಿಸಬಾರದು. ಉದಾಹರಣೆಗೆ, ವಿವಾಹಗಳಿಂದ ಹಿಡಿದು ನಾಗರಿಕ ಸಹಭಾಗಿತ್ವ (Civil Partnership) ಕಾನೂನಿನವರೆಗೆ ಎಲ್ಲಾ ರೀತಿಯ ಬಹುತ್ವದ ಸಂಬಂಧಗಳನ್ನು ಗುರುತಿಸಿ, ಅದನ್ನು ಮಾನ್ಯಗೊಳಿಸಿಬೇಕು. ನಾಗರಿಕ ಸಹಭಾಗಿತ್ವ (Civil Partnership) ಕಾನೂನು ವಿವಾಹದ ಹೊರೆಯಿಲ್ಲದೆಯೇ ಇಬ್ಬರು ವ್ಯಕ್ತಿಗಳು ತಮ್ಮ ನಡುವಿನ ಸಂಬಂಧವನ್ನು ನೋಂದಾಯಿಸುವ ಮತ್ತು ಆ ಮೂಲಕ ಹಲವು ಹಕ್ಕುಗಳನ್ನು ಪಡೆದುಕೊಳ್ಳುವ ಅವಕಾಶವನ್ನು ಕಲ್ಪಿಸುತ್ತದೆ.

’ಲಿಂಗ ನ್ಯಾಯ ಸಂಹಿತೆ’ಯು ನವತೇಜ್ ಸಿಂಗ್ ಜೋಹರ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ಗುರುತಿಸಲ್ಪಟ್ಟ ಸಾಂವಿಧಾನಿಕ ನೈತಿಕತೆಯ ತತ್ವವನ್ನು ಆಧರಿಸಬೇಕು. ವೈವಾಹಿಕ ಹಕ್ಕುಗಳ ಮರುಸ್ಥಾಪನೆ (Restitution of Conjugal Rights)ಗೆ ಕಲ್ಪಿಸಲಾಗಿರುವ ಅವಕಾಶಗಳು ಹಾಗೂ ಸಂಗಾತಿಯು ವ್ಯಭಿಚಾರದಲ್ಲಿ ತೊಡಗಿದ್ದಾರೆ ಎಂಬ ಆಧಾರದ ಮೇಲೆ ವಿಚ್ಚೇದನ ಪಡೆಯಲು ಇರುವ ಅವಕಾಶಗಳು ಸಾಮಾಜಿಕ ನೈತಿಕತೆಯ (social morality) ಪುರಾತನ ಕಲ್ಪನೆಗಳನ್ನು ಪುನರುಚ್ಚರಿಸುತ್ತವೆ, ಇದು ವ್ಯಕ್ತಿಗಳ ವೈಯಕ್ತಿಕ ಮತ್ತು ನಿಕಟ ಜೀವನದಲ್ಲಿ ಮಧ್ಯಪ್ರವೇಶಿಸಲು ಪ್ರಭುತ್ವಕ್ಕೆ ಹೆಚ್ಚಿನ ಅಧಿಕಾರವನ್ನು ನೀಡುತ್ತದೆ. ಸಾಂವಿಧಾನಿಕ ನೈತಿಕತೆಯು ಈ ನಿಬಂಧನೆಗಳು ರದ್ದಾಗಬೇಕೆಂದು ಒತ್ತಾಯಿಸುತ್ತದೆ.

ಭಾರತದ ಕಾನೂನು ಆಯೋಗವು ಏಕರೂಪ ನಾಗರಿಕ ಸಂಹಿತೆಯನ್ನು ಅಂಗೀಕರಿಸುವ ಸಂಕುಚಿತ ಪರಿಕಲ್ಪನೆಯನ್ನು ಕೈಬಿಟ್ಟು ಈ ದೇಶದ ವೈವಿಧ್ಯಮಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಗತಿಗಳನ್ನು ಪರಿಗಣಿಸಿ ಸಮಗ್ರವಾದ ಲಿಂಗ ಸಮಾನತೆಯ ಸಂಹಿತೆಯ ಕಲ್ಪನೆಯನ್ನು ಮುಂದಿಡಬೇಕು. ಇಂತಹ ಸಂಹಿತೆಯನ್ನು ರೂಪಿಸಲು ಕಾನೂನು ಆಯೋಗವು ಎಲ್ಲಾ ಜಾತಿ, ಧಾರ್ಮಿಕ, ಜನಾಂಗೀಯ, ಆದಿವಾಸಿ ಸಮುದಾಯಗಳನ್ನು ಒಳಗೊಂಡ ನಾಗರಿಕ ಸಮಾಜದಿಂದ, ಅದರಲ್ಲೂ ವಿಶೇಷವಾಗಿ ಮಹಿಳೆಯರು ಮತ್ತು LGBTQI ವ್ಯಕ್ತಿಗಳನ್ನು ಒಳಗೊಂಡಂತೆ ಎಲ್ಲರೊಂದಿಗೆ ವ್ಯಾಪಕವಾದ ಮತ್ತು ವಿವರವಾದ ಸಮಾಲೋಚನೆಗಳನ್ನು ಪ್ರಾರಂಭಿಸಬೇಕು.

ಕನ್ನಡಕ್ಕೆ: ಶಶಾಂಕ್ ಎಸ್ ಆರ್

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಪಿಯುಸಿಎಲ್-ಕೆನ ರಾಜ್ಯಾಧ್ಯಕ್ಷರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...