Homeಮುಖಪುಟಬಿಜೆಪಿಗೆ ಬೇಕಿರುವ ಏಕರೂಪ ನಾಗರಿಕ ಸಂಹಿತೆ ನ್ಯಾಯಸಮ್ಮತವಾದದ್ದೇ?

ಬಿಜೆಪಿಗೆ ಬೇಕಿರುವ ಏಕರೂಪ ನಾಗರಿಕ ಸಂಹಿತೆ ನ್ಯಾಯಸಮ್ಮತವಾದದ್ದೇ?

- Advertisement -
- Advertisement -

ಭಾರತಕ್ಕೆ ಏಕರೂಪ ನಾಗರಿಕ ಸಂಹಿತೆ ಬೇಕೇ ಎಂಬ ಪ್ರಶ್ನೆ ಸಂವಿಧಾನ ರಚನಾ ಸಭೆಯ ಸಮಯದಿಂದಲೂ ಇರುವಂಥದ್ದು. ಮೋದಿ ಪ್ರಧಾನ ಮಂತ್ರಿಯಾದ ನಂತರ, 21ನೇ ಕಾನೂನು ಆಯೋಗವನ್ನು ನೇಮಕ ಮಾಡಲಾಯಿತು. ಈ ಆಯೋಗವು ಈ ವಿಷಯದ ಬಗ್ಗೆ ಜನಾಭಿಪ್ರಾಯವನ್ನು ಕೋರಿತು. 70 ಸಾವಿರಕ್ಕೂ ಹೆಚ್ಚಿನ ಅಭಿಪ್ರಾಯಗಳನ್ನು ಪಡೆದ ಆಯೋಗ, ಎಲ್ಲವನ್ನು ಪರಿಶೀಲಿಸಿ 2018ರಲ್ಲಿ ’ಕನ್ಸಲ್ಟೇಶನ್ ಪೇಪರ್ ಆನ್ ರಿಫಾರ್ಮ್ ಆಫ್ ಫ್ಯಾಮಿಲಿ ಲಾ’ ಎಂಬ ವರದಿಯನ್ನು ಹೊರತಂದಿತು. ಆ ವರದಿಯದ ಕಲಂ 1.5ರಲ್ಲಿ ಹೀಗೆ ಹೇಳುತ್ತದೆ:

This Commission has therefore dealt with laws that are discriminatory rather than providing a uniform civil code which is neither necessary nor desirable at this stage. (ಈ ಹಂತದಲ್ಲಿ ಅಗತ್ಯವಿಲ್ಲದ, ಅಪೇಕ್ಷಣೀಯವೂ ಅಲ್ಲದ ಏಕರೂಪ ನಾಗರಿಕ ಸಂಹಿತೆಯನ್ನು ಒದಗಿಸುವುದಕ್ಕಿಂತ ತಾರತಮ್ಯದ ಕಾನೂನುಗಳ ಬಗ್ಗೆ ಈ ಆಯೋಗವು ಅಧ್ಯಯನ ಮಾಡಿತು.)

ಈ ವರದಿಯ ನಂತರ ಈ ಸದ್ಯಕ್ಕಾದರೂ ಏಕರೂಪ ನಾಗರಿಕ ಸಂಹಿತೆಯ ಪ್ರಶ್ನೆ ಮತ್ತೆ ಉದ್ಭವಿಸುವುದಿಲ್ಲ ಎಂದು ಅನೇಕರು ಭಾವಿಸಿದರು. ಆದರೆ ಇದನ್ನ ಚುನಾವಣೆಯ ಅಸ್ತ್ರವನ್ನಾಗಿ ಉಪಯೋಗಿಸುವುದು ನಿಲ್ಲಲಿಲ್ಲ. ಹಿಮಾಚಲ ಪ್ರದೇಶ, ಕರ್ನಾಟಕ, ಗುಜರಾತ್ ರಾಜ್ಯ ಚುನಾವಣೆಗಳಲ್ಲಿ ಗೆದ್ದರೆ ಈ ಸಂಹಿತೆಯನ್ನು ಜಾರಿಗೆ ತರುವುದಾಗಿ ಭಾರತೀಯ ಜನತಾ ಪಾರ್ಟಿ ಆಶ್ವಾಸನೆ ನೀಡಿತ್ತು. ಅದರಂತೆಯೇ ಗುಜರಾತ್ ಹಾಗು ಉತ್ತರಾಖಂಡ್ ರಾಜ್ಯಗಳಲ್ಲಿ ಈ ಸಂಹಿತೆಯನ್ನು ಜಾರಿ ಮಾಡುವುದು ಹೇಗೆಂದು ಪರಿಶೀಲಿಸಲು ತಜ್ಞರ ಸಮಿತಿಯೊಂದನ್ನು ಅವರು ರಚಿಸಿದ್ದಾರೆ.

ಈಗ ದಿಢೀರ್ ಎಂದು 22ನೇ ಕಾನೂನು ಆಯೋಗ ಮತ್ತೊಮ್ಮೆ ಜನಸಾಮಾನ್ಯರು ಹಾಗು ಗುರುತಿಸಲ್ಪಟ್ಟ ಧಾರ್ಮಿಕ ಸಂಸ್ಥೆಗಳನ್ನು ಕೋರಿ, ಒಂದು ತಿಂಗಳೊಳಗೆ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ತಮ್ಮ ಅಭಿಪ್ರಾಯ ಕೊಡುವಂತೆ ನೋಟಿಸ್ ಜಾರಿ ಮಾಡಿದೆ.

ಈ ಪ್ರಶ್ನೆ ಮತ್ತೆ ಏಕೆ ಹುಟ್ಟಿದೆ? ಏಕರೂಪ ನಾಗರಿಕ ಸಂಹಿತೆ ಎಂದರೇನು? ಅದನ್ನು ರೂಪಿಸಲು ಸಾಧ್ಯವೇ? ಮತ್ತು ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಇದು ಏಕೆ ಉದ್ಭವಿಸಿದೆ ಎಂದು ಇಲ್ಲಿ ಲೇಖಕರು ವಿಶ್ಲೇಷಿಸಿದ್ದಾರೆ.

ಏಕರೂಪ ನಾಗರಿಕ ಸಂಹಿತೆ ಎಂದರೇನು?

ಪ್ರಸಕ್ತ ಭಾರತದಲ್ಲಿ ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು ಮತ್ತು ನಿರ್ವಹಣೆಗೆ (ಮೆಂಟೆನೆನ್ಸ್) ಸಂಬಂಧಪಟ್ಟಂತೆ ಆಯಾ ಧರ್ಮದವರಿಗೆ, ಅವರ ನಂಬಿಕೆಗ ಧರ್ಮಗ್ರಂಥ/ಸಂಪ್ರದಾಯಗಳ ಪ್ರಕಾರ ಪ್ರತ್ಯೇಕ ಕಾನೂನುಗಳಿವೆ. ಉದಾಹರಣೆಗೆ ಹಿಂದೂ ಮ್ಯಾರೇಜ್ ಆಕ್ಟ್ಟ್, ಮುಸ್ಲಿಂ ವಿಮೆನ್ (ಪ್ರೊಟೆಕ್ಷನ್ ಆ ರೈಟ್ಸ್ ಆಫ್ ಮ್ಯಾರೇಜ್) ಆಕ್ಟ್, ಇಂಡಿಯನ್ ಕ್ರಿಶ್ಚಿಯನ್ ಮ್ಯಾರೇಜ್ ಆಕ್ಟ್- ಹೀಗೆ ಪ್ರತಿ ಧರ್ಮಕ್ಕೆ, ಮದುವೆ ನೋಂದಾಯಿಸುವ ಬಗ್ಗೆ ತನ್ನದೇ ಆದ ಕಾಯ್ದೆ ಇದೆ. ಏಕರೂಪ ನಾಗರಿಕ ಸಂಹಿತೆ ಬಂದರೆ, ಈ ಧರ್ಮಾಧಾರಿತ ಕಾನೂನುಗಳ ಬದಲು ಎಲ್ಲರಿಗೂ ಅನ್ವಯವಾಗುವ ಸಾಮಾನ್ಯ ಕಾನೂನುಗಳು ಇರುತ್ತವೆ ಎಂಬುದು ತಾತ್ವಿಕ ಕಾನ್ಸೆಪ್ಟ್ ಆಗಿದೆ. ಸ್ವಾತಂತ್ರ್ಯದ ಮೊದಲು ಈ ಆಲೋಚನೆ ಬಂದಿದ್ದು, ಧರ್ಮಾಧಾರಿತ ಕಾನೂನುಗಳಲ್ಲಿ ಮಹಿಳೆಯರಿಗೆ ಸಮಾನತೆ ಇಲ್ಲದೆ ಇದ್ದು, ಅದನ್ನು ಪರಿಹರಿಸುವ ನಿಟ್ಟಿನಲ್ಲಿ. ಇತ್ತೀಚಿನ ವರ್ಷಗಳಲ್ಲಿ, ಒಂದೊಂದು ಧರ್ಮಕ್ಕೆ ಒಂದೊಂದು ಕಾಯ್ದೆ ಇರೋದು ಸಮಾನತೆಗೆ ವಿರುದ್ಧವಾಗಿದೆ, ಇದು ತಾರತಮ್ಯದಿಂದ ಕೂಡಿದೆ ಮತ್ತು ಇದರಿಂದ ದೇಶದ ಏಕತೆಗೆ ಧಕ್ಕೆಯಾಗುತ್ತದೆ ಎಂಬಿತ್ಯಾದಿ ಕಾರಣಗಳನ್ನು, ವಿಶೇಷವಾಗಿ ಬಲಪಂಥೀಯರು ಮುಂದುಮಾಡುತ್ತಾರೆ.

ಇದರ ಬಗ್ಗೆ ಸಂವಿಧಾನ ರಚನಾ ಸಭೆಗಳಲ್ಲಿ ಚರ್ಚೆಯಾಗಿದೆ. ಆದರೆ ಸಂವಿಧಾನ ರಚನಾಕಾರರ ಮಧ್ಯೆ ಇದರ ಬಗ್ಗೆ ಒಮ್ಮತವಿಲ್ಲದ ಕಾರಣ ಅದನ್ನು ಕಾನೂನಾಗಿ ಮಾಡದೆ ಸಂವಿಧಾನದ “ರಾಜ್ಯ ನಿರ್ದೇಶನ ತತ್ವ”ಗಳ ಭಾಗಕ್ಕೆ ಸೇರಿಸಲಾಯಿತು.

ಏಕರೂಪತೆ ಯಾವುದಕ್ಕೆ ಪರಿಹಾರ? ಏಕರೂಪ ನಾಗರಿಕ ಸಂಹಿತೆ ಸಾಧ್ಯವೇ?

ಮೊದಲನೆಯದಾಗಿ ಏಕರೂಪ ನಾಗರಿಕ ಸಂಹಿತೆ ಎಂದರೇನು ಎಂದು ಖಚಿತವಾಗಿ ಯಾರು ಸಹ ಇಲ್ಲಿಯತನಕ ವ್ಯಾಖ್ಯಾನ ಮಾಡಿಲ್ಲ. ಇದರ ಸ್ವರೂಪ ಏನು, ಯಾವ ಸಮಸ್ಯೆಗಳಿಗೆ ಇದು ಪರಿಹಾರ ಎಂದು ಎಂಬುದರ ಬಗ್ಗೆ ಸರಿಯಾದ ಗ್ರಹಿಕೆಯೇ ಇಲ್ಲದೆ ಇದನ್ನು ಚರ್ಚಿಸುವುದು ಎಷ್ಟು ಸಮಂಜಸ? ಉದಾಹರಣೆಗೆ ಹಿಂದೂ ಮದುವೆ ನೋಂದಣಿ ಕಾಯ್ದೆಯಲ್ಲಿ ’ಮದುವೆ’ ಎಂದು ಪರಿಗಣಿಸಲು ಸಪ್ತಪದಿ ಬೇಕಾಗುತ್ತದೆ; ಮುಸ್ಲಿಂ ಮದುವೆ ಕಾಯ್ದೆಯಲ್ಲಿ ಮದುವೆ ಎನ್ನುವುದು ಒಂದು ಕಾಂಟ್ರಾಕ್ಟ್. ಏಕರೂಪ ಸಂಹಿತೆಯನ್ನು ತಂದರೆ ಯಾವ ಸಂಪ್ರದಾಯವನ್ನು ಮದುವೆ ಶಾಸ್ತ್ರ ಎಂದು ಪರಿಗಣಿಸಲಾಗುವುದು? ಮದುವೆಯನ್ನು ಕಾಂಟ್ರಾಕ್ಟ್ ಎಂದು ಹೇಳಿದರೆ ಅದು ಎಲ್ಲರಿಗೂ ಅನ್ವಯವಾಗುತ್ತದೆಯೇ? ಅಥವಾ ಅದು ಮುಸ್ಸಲ್ಮಾನರಿಗೂ ಅನ್ವಯವಾಗದಂತೆ ಮಾಡಲಾಗುತ್ತದೆಯೇ?

ಮುಸ್ಲಿಂ ಸಂಪ್ರದಾಯದಲ್ಲಿ ಗಂಡಿನ ಕಡೆಯವರು ಹೆಣ್ಣಿನ ಕಡೆಯವರಿಗೆ ’ಮೆಹೆರ್’ ಎಂದು ಕೊಡುತ್ತಾರೆ. ಕ್ರೈಸ್ತ ಧರ್ಮದಲ್ಲಿ ಅಥವಾ ಹಿಂದೂ ಧರ್ಮದಲ್ಲಿ ಅದಿಲ್ಲ. ಏಕರೂಪ ಸಂಹಿತೆ ಮಾಡಿದರೆ ಈ ಮೆಹೆರ್ ಎಲ್ಲರಿಗೂ ಜಾರಿಯಾಗುತ್ತದೆಯೇ ಅಥವಾ ಯಾರಿಗೂ ಆಗುವುದಿಲ್ಲವೇ? ಈ ತರಹದ ಹಲವು ಗೊಂದಲಗಳು ಇವೆ. ಹಾಗಾಗಿ ಅಲ್ಪಸಂಖ್ಯಾತ ಸಮುದಾಯಕ್ಕೆ ಆತಂಕ ಹೆಚ್ಚಿದೆ: ಹಿಂದೂ ಸಂಪ್ರದಾಯವನ್ನೇ ದೇಶದ ಕಾನೂನು ಎಂದು ಎಲ್ಲರಿಗೂ ಅನ್ವಯವಾಗುವಂತೆ ಮಾಡಲಾಗುತ್ತದೆಯೇ ಎಂದು.

ಚಿಂತಕರಾದ ಪ್ಲಾವಿಯಾ ಆಗ್ನೆಸ್ ಹಾಗು ಕಲ್ಪನಾ ಕಣ್ಣಬೀರನ್ ಹೇಳುವುದೇನೆಂದರೆ ನಮಗೆ ಮೊದಲು ಬೇಕಾಗಿರುವುದು ಹಕ್ಕುಗಳ ಏಕರೂಪತೆ. ಎಲ್ಲ ಧರ್ಮದ ಮಹಿಳೆಯರಿಗೆ, ಎಲ್ಲ ಲಿಂಗತ್ವ ಹಾಗು ಲೈಂಗಿಕ ಅಲ್ಪಸಂಖ್ಯಾತರಿಗೆ ಸಂವಿಧಾನ ನೀಡಿರುವ ಸಮಾನತೆ ಹಾಗು ಘನತೆಯ ಹಕ್ಕು ದೊರೆಯಬೇಕು. ಭಾರತ ದೇಶದ ಕಾನೂನುಗಳಲ್ಲಿ ಸಮಸ್ಯೆ ಇರುವುದು ಏಕರೂಪತೆಯ ಕೊರತೆಯಲ್ಲ, ಬದಲಿಗೆ ಕಾನೂನಿನಲ್ಲಿ ಹಾಗು ಕಾನೂನಿನ ವ್ಯವಸ್ಥೆಯಲ್ಲಿ ಮಹಿಳಾ ವಿರೋಧಿ ಅಂಶಗಳು ಸೇರಿಕೊಂಡಿರುವುದು. ಈ ಸಮಸ್ಯೆಗಳನ್ನು ಪರಿಗಣಿಸದೆ ಏಕರೂಪ ಸಂಹಿತೆ ತಂದರೆ ಮಹಿಳೆಯರಿಗೆ ಏಕರೂಪದ ತಾರತಮ್ಯವಾಗುತ್ತದೆ, ಮತ್ತೇನು ಇಲ್ಲ.

ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ- ದೇಶದ ಹಲವು ರಾಜ್ಯಗಳಲ್ಲಿ ಪ್ರತ್ಯೇಕ ಸಂಸ್ಕೃತಿ ಮತ್ತು ಆಚರಣೆಗಳು ಹಾಸುಹೊಕ್ಕಾಗಿವೆ. ಒಂದೇ ರಾಜ್ಯದಲ್ಲಿ ಕೂಡ ಇದು ಭಿನ್ನವಾಗುತ್ತದೆ ಕೂಡ. ಹಾಗಾಗಿ ಸಂವಿಧಾನದ ಅನುಚ್ಚೇದ 371 (ಎ) ಹಾಗು (ಜಿ) ನಾಗಾಲ್ಯಾಂಡ್, ಮಿಜೋರಾಂ ರಾಜ್ಯಗಳಿಗೆ ತಮ್ಮ ನಾಡಿನ ಸಂಸ್ಕೃತಿಗಳನ್ನು ಉಳಿಸಿಕೊಳ್ಳಲು ವಿಶೇಷ ಅವಕಾಶಗಳನ್ನು ನೀಡಿವೆ.

ಸಂವಿಧಾನದ ಆರನೇ ಶೆಡ್ಯೂಲ್‌ನಲ್ಲಿ, ಅಸ್ಸಾಂ, ಮೇಘಾಲಯ, ತ್ರಿಪುರ ಹಾಗು ಮಿಜೋರಾಂ ರಾಜ್ಯಗಳಲ್ಲಿ ಸಾಂಪ್ರದಾಯಿಕ ಕಾನೂನು ಹಾಗು ಕೌಟುಂಬಿಕ ಕಾನೂನು ಸಂಬಂಧಿಸಿದಂತೆ ವಿಭಿನ್ನ ಕಾನೂನುಗಳನ್ನು ರೂಪಿಸುವ ಅಧಿಕಾರವನ್ನು ಪ್ರತ್ಯೇಕವಾಗಿ ಅಲ್ಲಿನ ಜಿಲ್ಲಾ ಕೌನ್ಸಿಲ್‌ಗಳಿಗೆ ಹಾಗು ಪ್ರಾದೇಶಿಕ ಕೌನ್ಸಿಲ್‌ಗಳಿಗೆ ನೀಡಲಾಗಿದೆ.

ಇದನ್ನೂ ಓದಿ: ನಿರಂತರ ರಾಜಕೀಯ ದಾಳವಾಗಿರುವ ’ಏಕರೂಪ ನಾಗರಿಕ ಸಂಹಿತೆ’

ಕೆಲವರು ಗೋವಾ ರಾಜ್ಯದಲ್ಲಿ ಏಕರೂಪ ಸಂಹಿತೆ ಜಾರಿಯಲ್ಲಿರುವಂತೆ ದೇಶಾದ್ಯಂತ ಮಾಡಬಹುದು ಎನ್ನುತ್ತಾರೆ. ಆದರೆ ಅಲ್ಲಿರುವ ಏಕರೂಪ ಸಂಹಿತೆಯಲ್ಲೂ ಮದುವೆ ಹಾಗು ವಿಚ್ಛೇದನಕ್ಕೆ ಸಂಬಂಧಪಟ್ಟಂತೆ ಕ್ಯಾಥಲಿಕ್ ಸಮುದಾಯಕ್ಕೆ ಪ್ರತ್ಯೇಕ ನಿಯಮಗಳಿವೆ.

ಕೊನೆಯ ಒಂದು ಅಂಶವೆಂದರೆ, ಹಿಂದೂ ಧಾರ್ಮಿಕ ಕಾನೂನಿನಲ್ಲೇ ಏಕರೂಪತೆಯಿಲ್ಲ. ಉದಾಹರಣೆಗೆ, ಹಿಂದೂ ಮದುವೆ ನೋಂದಣಿ ಕಾಯ್ದೆ ಪರಿಶಿಷ್ಟ ಪಂಗಡಗಳಿಗೆ ಅನ್ವಯವಾಗುವುದಿಲ್ಲ ಎಂದು ಹೇಳುತ್ತದೆ. ಹಲವು ಪರಿಶಿಷ್ಟ ಪಂಗಡ ಸಮುದಾಯಗಳು (ಉದಾಹರಣೆಗೆ ವಾಲ್ಮೀಕಿ ಸಮುದಾಯ) ಹಿಂದೂ ಎಂದು ಗುರುತಿಸಿಕೊಳ್ಳುತ್ತಾರೆ. ಆದರೆ, ಆ ಸಮುದಾಯಗಳಿಗೆ ಆ ಕಾಯ್ದೆ ಅನ್ವಯವಾಗುವುದಿಲ್ಲ. ಅದೇ ರೀತಿ ಹಿಂದೂ ವೈಯಕ್ತಿಕ ಕಾನೂನುಗಳ ಕೆಲ ಅಂಶಗಳು ಎಲ್ಲಾ ಹಿಂದೂಗಳಿಗೂ ಅನ್ವಯವಾಗುವದಿಲ್ಲ. ಇನ್ನು ಏಕರೂಪ ಸಂಹಿತೆ ಇಡೀ ದೇಶದ ಎಲ್ಲರಿಗು ಅನ್ವಯವಾಗಲು ಹೇಗೆ ಸಾಧ್ಯ?

ಮತ್ತೆ ಜನಾಭಿಪ್ರಾಯ ಏತಕ್ಕೆ?

ಈ ವಿಷಯದ ಬಗ್ಗೆ 21ನೇ ಕಾನೂನು ಆಯೋಗ ಈಗಾಗಲೇ ಜನಾಭಿಪ್ರಾಯ ಸಂಗ್ರಹಿಸಿ, ಇದರ ಅಗತ್ಯ ಇಲ್ಲವೆಂದು ವಿಶ್ಲೇಷಿಸಿ ವರದಿ ನೀಡಿದೆ. ಇದಾದ ಮೇಲೂ ಪ್ರಸ್ತುತ ಆಯೋಗ ಏಕೆ ಜನಾಭಿಪ್ರಾಯಕ್ಕೆ ಕರೆ ನೀಡಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ನೋಟಿಸ್‌ನಲ್ಲಿ “Since more than three years have been lapsed from the date of issuance of the said Consultation Paper, bearing in mind the relevance and importance of the subject and also the various Court orders on the subject, the 22nd Law Commission of India considered it expedient to deliberate afresh over the subject.” ಎಂದು ಹೇಳಲಾಗಿದೆ. ಮೂರೂ ವರ್ಷದಲ್ಲಿ ಏನು ಬದಲಾಗಿದೆ ಗೊತ್ತಿಲ್ಲ; ಯಾವ ನ್ಯಾಯಾಲಯದ ಯಾವ ತೀರ್ಪಿನಿಂದ ಪರಿಸ್ಥಿತಿ ಬದಲಾಗಿದೆ ಎಂಬುದೂ ತಿಳಿದಿಲ್ಲ.

ಇದಕ್ಕೆ ಕಾನೂನಾತ್ಮಕ ಕಾರಣ ಇಲ್ಲದಂತೆ ತೋರುತ್ತಿದೆ. ಇದು ಏಕೆ ನಡೆಯುತ್ತಿದೆ ಎಂದು ಅರ್ಥಮಾಡಿಕೊಳ್ಳಲು, ಸಾಮಾಜಿಕ ಜಾಲತಾಣಗಳನ್ನು ಜಾಲಾಡಿದರೆ ಅರ್ಥವಾಗುತ್ತದೆ.

ಭಾರತೀಯ ಜನ ಯುವ ಮೋರ್ಚಾ ಇದರ ಬಗ್ಗೆ ರಾಷ್ಟ್ರೀಯ ಮಟ್ಟದ ಆನ್‌ಲೈನ್ ಸಭೆಗಳನ್ನು ನಡೆಸಿ ಜನಾಭಿಪ್ರಾಯ ಸಂಗ್ರಹಿಸಲು ಅಭಿಯಾನಗಳನ್ನು ತಯಾರು ಮಾಡಿದೆ. ತಜ್ಞರನ್ನು, ಯುವಕರನ್ನು ಅಭಿಪ್ರಾಯ ಕೇಳಿ ಆಯೋಗಕ್ಕೆ ವರದಿ ನೀಡುತ್ತದೆಯಂತೆ. ಸದರಿ ಲೇಖಕರ ಕುಟುಂಬ ಸೇರಿ, ಹಿಂದೂ ಕುಟುಂಬಗಳ ಕುಟುಂಬ ವಾಟ್ಸಾಪ್ ಗುಂಪುಗಳಲ್ಲಿ “ಯುಸಿಸಿ ಬೇಕೆಂದು ಬರೆಯಿರಿ” ಎಂದು ಮೆಸೇಜ್‌ಗಳು ಬರುತ್ತಿವೆ. (ಸರ್ಕಾರಕ್ಕೆ ಸಲಹೆಗಳು ಪಡೆಯಲು ಇರುವ ಈ ಉತ್ಸಾಹ ಬೇರ್‍ಯಾವ ಕಾನೂನಿಗೂ ಕಂಡಿಲ್ಲ!) ಗೌಡ ಸಾರಸ್ವತ್ ಬ್ರಾಹ್ಮಣ ಸಮುದಾಯದ ಯುವಕರು ಇದರ ಮಹತ್ವದ ಬಗ್ಗೆ ಮಾತಾಡಲು, ಜನರು ಹೇಗೆ ಅಭಿಪ್ರಾಯ ನೀಡಬೇಕೆಂದು ಚರ್ಚೆಗಳನ್ನು ಆಯೋಜಿಸುತ್ತಿದ್ದಾರೆ. ಏಕರೂಪ ನಾಗರಿಕ ಸಂಹಿತೆ ಬರುತ್ತೋ ಬಿಡುತ್ತೋ, ಜನಸಾಮಾನ್ಯರ ಅಭಿಪ್ರಾಯದ ಹೆಸರಿನಲ್ಲಿ ಮೋದಿ ಸರ್ಕಾರಕ್ಕೆ 2024ರ ಲೋಕಸಭಾ ಚುನಾವಣೆಗೆ ಇದೊಂದು ಮತ ಸಂಗ್ರಹಣೆಯ ಅಸ್ತ್ರವಾಗಿದೆ. ಪಕ್ಷದ ಕೋರ್ ವೋಟ್ ಬ್ಯಾಂಕ್ ಬಹಳಷ್ಟು ಉತ್ಸಾಹಗೊಂಡಿದೆ.

ಗುಜರಾತ್, ಉತ್ತರಾಖಂಡ್, ಹಿಮಾಚಲ ಪ್ರದೇಶ ಹಾಗು ಕರ್ನಾಟಕ ರಾಜ್ಯದ ಚುನಾವಣೆಗಳಲ್ಲಿ ಬಿಜೆಪಿ ಪಕ್ಷ ರಾಜ್ಯಗಳಲ್ಲಿ ಈ ಸಂಹಿತೆ ತರುವುದಾಗಿ ಆಶ್ವಾಸನೆ ನೀಡಿತ್ತು. ಆದರೆ, ಈ ಸಂಹಿತೆ ಜಾರಿ ಮಾಡಲು ರಾಜ್ಯಗಳಿಗೆ ಅಧಿಕಾರವಿಲ್ಲ, ಅಕಸ್ಮಾತ್ ಬಿಜೆಪಿಗೆ ಇದು ಸಾಧ್ಯವಾದರೂ ಇದು ರಾಷ್ಟ್ರಮಟ್ಟದಲ್ಲಿ ಜಾರಿಯಾಗಬೇಕಿರುವ ಕಾನೂನು. ಇದನ್ನು ರಾಜ್ಯಮಟ್ಟದಲ್ಲಿಯೇ ತನ್ನ ಚುನಾವಣಾ ಅಸ್ತ್ರವನ್ನಾಗಿ ಉಪಯೋಗಿಸಿದ ಪಕ್ಷ ಈಗ ರಾಷ್ಟ್ರೀಯ ಮಟ್ಟದ ಸಮರದಲ್ಲಿ ಕೂಡ ಉಪಯೋಗಿಸಲು ಹೊರಟಿದೆ. ರಾಷ್ಟ್ರಮಟ್ಟದಲ್ಲಿ ಇದನ್ನು ತರಲು ಹೊರಟಿದ್ದರೆ, ಮತ್ತೆ ರಾಜ್ಯಮಟ್ಟದಲ್ಲೂ ಏಕೆ ಇದನ್ನು ಜಾರಿ ಮಾಡುವ ಭರವಸೆಯನ್ನು ಬಿಜೆಪಿ ಪಕ್ಷ ನೀಡಿತ್ತು? ಇದು ಕೇವಲ ಚುನಾವಣಾ ಗಿಮಿಕ್ ಎಂದಾಯಿತಲ್ಲವೇ?

ಭಾರತೀಯ ಜನತಾ ಪಕ್ಷದ ನಿಲುವುಗಳು ಮತ್ತು ಅವರು ತಂದಿರುವ ಕಾನೂನುಗಳನ್ನು ನೋಡಿದರೆ, ಅವರು ಮಹಿಳೆಯರಿಗೆ ನ್ಯಾಯ ಒದಗಿಸುವ ಮನೋಭಾವ ಇರುವ ಪಕ್ಷ ಅಂತ ಹೇಳಲು ಸಾಧ್ಯವಿಲ್ಲ. ಮದುವೆಯಲ್ಲಿ ಲೈಂಗಿಕ ಅತ್ಯಾಚಾರವನ್ನು (ಮ್ಯಾರಿಟಲ್ ರೇಪ್) ಅಪರಾಧ ಎಂದು ಪರಿಗಣಿಸಲು ಹಿಂಜರಿಯುವ ಸರ್ಕಾರ ಮಹಿಳೆಯರಿಗೆ ಕೌಟುಂಬಿಕ ವ್ಯವಸ್ಥೆಯಲ್ಲಿ ನ್ಯಾಯ ಒದಗಿಸುವ ಬಗ್ಗೆ ಮಾತನಾಡುತ್ತಿದೆ. ಲವ್ ಜಿಹಾದ್ ಹೆಸರಿನಲ್ಲಿ, ಮತಾಂತರ ನಿಷೇಧ ಕಾಯ್ದೆಗಳ ಹೆಸರಿನಲ್ಲಿ ಮಹಿಳೆಯರ ಆಯ್ಕೆಯ ಹಕ್ಕನ್ನು ಹತ್ತಿಕ್ಕುವ ಪಕ್ಷ, ಏಕರೂಪ ನಾಗರಿಕ ಸಂಹಿತೆ ಬಗ್ಗೆ ಮಾತನಾಡುವುದು ವಿಪರ್ಯಾಸವೇ ಸರಿ. ಮುಸ್ಲಿಂ ಮಹಿಳೆಯರಿಗೆ ಸಂಬಂಧಿಸಿದಂತೆ, ಸರ್ವೋಚ್ಚ ನ್ಯಾಯಾಲಯ ತ್ರಿವಳಿ ತಲಾಕ್‌ಅನ್ನು ನಿರ್ಬಂಧಿಸಿದ ಮೇಲೂ, ಅದನ್ನು ಒಂದು ಶಿಕ್ಷಾರ್ಹ ಅಪರಾಧವನ್ನಾಗಿಸಿ, ವಿಚ್ಛೇದನವನ್ನು ಕ್ರಿಮಿನಲ್ ವ್ಯವಸ್ಥೆಗೆ ತಂದು ಮುಸ್ಲಿಂ ಮಹಿಳೆಯರಿಗೆ ಹಾಗು ಗಂಡಸರಿಗೆ ಈ ಸರ್ಕಾರದವರು ಅನ್ಯಾಯವೆಸಗಿದ್ದಾರೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು ಮದುವೆ ವಿಷಯಲ್ಲಿ ಸಮಾನತೆಯನ್ನು ಕೇಳಿದಾಗ ಅದನ್ನು ವಿರೋಧ ಮಾಡಿದ್ದಾರೆ. ಇಂತಹ ಪಕ್ಷ, ಸರ್ಕಾರ ಏಕರೂಪ ನಾಗರಿಕ ಸಂಹಿತೆ ಮೂಲಕ ಯಾರಿಗಾದರೂ ನ್ಯಾಯ ಒದಗಿಸುತ್ತದೆ ಎಂದರೆ ನಂಬುವುದಾದರೂ ಹೇಗೆ?

ಸದ್ಯದ ಅಗತ್ಯವಿರುವುದು ಎಲ್ಲಾ ಧರ್ಮದ  ಮಹಿಳೆಯರಿಗೂ, ಲಿಂಗತ್ವ ಹಾಗು ಲೈಂಗಿಕ ಅಲ್ಪಸಂಖ್ಯಾತರಿಗೆ ನ್ಯಾಯ ದೊರೆಯುವಂತೆ ಮಾಡುವುದು. ಏಕರೂಪ ನಾಗರಿಕ ಸಂಹಿತೆ ಕಾನೂನು ಅದನ್ನು ಮಾಡುವಂತೆ ಕಾಣಿಸುತ್ತಿಲ್ಲ. ಪರಿಹಾರದ ಬಗ್ಗೆ ಯೋಚಿಸುವುದಾದರೆ 21ನೇ ಕಾನೂನು ಆಯೋಗದ ವರದಿ ಕೆಲವು ದಾರಿಗಳನ್ನು ಸೂಚಿಸುತ್ತದೆ .
ಉದಾಹರಣೆಗೆ, ವಿಚ್ಛೇದನ ಬಗ್ಗೆ 21ನೇ ಕಾನೂನು ಆಯೋಗವು ಹೀಗೆ ಹೇಳಿತು:
2.4. Through codification of different personal laws, one can arrive at certain universal principles that prioritise equity rather than imposition of a uniform code in procedure which can also discourage many from using the law altogether given that matters of marriage and divorce can also be settled extra judicially. Thus, there are certain universal principles with regard to adultery, age of consent, grounds for divorce et al that can be integrated into all existing statutory provision on marriage and divorce under personal and civil laws, while the procedure for divorce, and grounds for divorce may vary between communities the Commission will address the difference in grounds of divorce available to men and women within the same community.
ಅಂದರೆ, ಕೋಡಿಫಿಕೇಷನ್ ಮೂಲಕ, ಸಮತೆಯನ್ನು ಒದಗಿಸುವ ಕೆಲವು ಸಾರ್ವತ್ರಿಕ ತತ್ವಗಳನ್ನು ಗುರುತಿಸಬಹುದು. (ಕೆಲವು ಧರ್ಮಗಳ ವೈಯಕ್ತಿಕ  ಕಾನೂನುಗಳು, ಭಾರತ ದೇಶದ ಕಾನೂನಾಗಿ ಲಿಖಿತಗೊಂಡಿಲ್ಲ, ಆ ಧರ್ಮದ ಗ್ರಂಥಗಳಲ್ಲಿ ಮಾತ್ರವಿದೆ – ಇದನ್ನು ಈ ದೇಶದ ಸಂವಿಧಾನಾತ್ಮಕ ನಿಯಮಗಳ ಕಾನೂನಾಗಿ ತರುವುದನ್ನು ಕೊಡಿಫಿಕೇಷನ್ ಎನ್ನುತ್ತಾರೆ.) ಏಕರೂಪ ಸಂಹಿತೆಯನ್ನು ಹೇರುವ  ಬದಲು ಇದನ್ನು ಮಾಡಿದರೆ ಒಳ್ಳೆಯದು ಎಂಬುದು ಆಯೋಗದ ಅಭಿಪ್ರಾಯ.
ಒಟ್ಟಾರೆಯಾಗಿ ನೋಡುವುದಾದರೆ 21ನೇ ಕಾನೂನು ಆಯೋಗ  ತನ್ನ ವರದಿಯಲ್ಲಿ ಹೇಳುವಂತೆ, ಕೌಟುಂಬಿಕ ಕಾನೂನು ಸುಧಾರಣೆಯ ವಿಷಯವನ್ನು ವ್ಯಕ್ತಿಗಳ ಧಾರ್ಮಿಕ ಸಂವೇದನೆಗೆ ವಿರುದ್ಧವಾದ ನೀತಿಯಾಗಿ ನೋಡುವ  ಅಗತ್ಯವಿಲ್ಲ. ಕೌಟುಂಬಿಕ ಕಾನೂನು ಸುಧಾರಣೆಯನ್ನು ಧರ್ಮ ಮತ್ತು ಸಾಂವಿಧಾನಿಕತೆಯ ನಡುವೆ ಸಾಮರಸ್ಯವನ್ನು ಉತ್ತೇಜಿಸುವ ಸಾಧನವಾಗಿ ನೋಡಬಹುದು. ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಯಾವುದೇ ನಾಗರಿಕರು ತಮ್ಮ ಧರ್ಮದ ಕಾರಣದಿಂದ ಅನಾನುಕೂಲಕ್ಕೆ ಒಳಗಾಗದಂತೆ ಮತ್ತು ಅದೇ ಸಮಯದಲ್ಲಿ ಪ್ರತಿಯೊಬ್ಬ ನಾಗರಿಕರ  ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ರಕ್ಷಿಸುವಂತೆ ನೋಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತದೆ. ಪ್ರತ್ಯೇಕ ಧರ್ಮಗಳಿಗೆ ಪ್ರತ್ಯೇಕ ಕಾನೂನುಗಳಿದ್ದ ಮಾತ್ರಕ್ಕೆ ಅದು ತಾರತಮ್ಯವನ್ನು ಸೂಚಿಸುವುದಿಲ್ಲ, ಆದರೆ ಅದು ಸದೃಢವಾದ ಪ್ರಜಾಪ್ರಭುತ್ವವನ್ನು ಸೂಚಿಸುತ್ತದೆ ಎಂದು ಸಹ ಅಭಿಪ್ರಾಯಪಟ್ಟಿದೆ.
ಏಕರೂಪ ನಾಗರಿಕ ಸಂಹಿತೆ ಹಳೇ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು ಹೊಸ ಸಮಸ್ಯೆಗಳು ಸೃಷ್ಟಿಸುತ್ತದೆ. ನಮಗೆ ಬೇಕಾಗಿರುವುದು ಪರಿಹಾರ, ಏಕರೂಪದ ಹೆಸರಿನಲ್ಲಿ ಒದಗುವ ಹೊಸ ತೊಡಕುಗಳಲ್ಲ.

ವಿನಯ್ ಕೂರಗಾಯಲ ಶ್ರೀನಿವಾಸ & ಪೂರ್ಣ ಆರ್
(ಇಬ್ಬರೂ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...